ಬಯಸಿದ ಸಿರಿ ಸಿಕ್ಕಿತು

Author : ಹೆಚ್.ಜಿ. ರಾಧಾದೇವಿ

Pages 125

₹ 80.00
Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ನ0.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -560022

Synopsys

ಖ್ಯಾತ ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ `ಬಯಸಿದ ಸಿರಿ ಸಿಕ್ಕಿತು’. ಈ ಕಥೆಯ ನಾಯಕಿ ವನಜಾ. ಹೆಣ್ಣಿಗೆ ಹೆಣ್ಣೇ ಶತೃ ಎಂಬಂತೆ ಹೆರಿಗೆಗೆಂದು ತವರುಮನೆಗೆ ಬಂದಾಗ ತನ್ನ ಹೆತ್ತ ತಾಯಿ ಹಾಗೂ ಸಹೋದರಿಯರಾದ ಗಿರಿಜಾ, ತನುಜಾರ ತಾತ್ಸಾರಕ್ಕೆ ಒಳಗಾಗುವವಳು. ಬಾಣಂತನದುದ್ದಕ್ಕೂ ಅವಳು ಪಡುವ ಯಾತನೆಗಳಿಗೆ ಮೂಲ ಕಾರಣ ಬಡತನವಾದರೂ ತಾಯಿ,ತಂಗಿಯರ ಅಸಹಕಾರ ಅವಳ ಮಾನಸಿಕ ನೆಮ್ಮದಿಯ ಬುಡಕ್ಕೆ ಕೊಳ್ಳಿ ಇಡುತ್ತದೆ. ಈ ನಡುವೆ ವರದಕ್ಷಿಣೆಯ ನೆಪದಲ್ಲಿ ಅತ್ತೆ ಕಾಟವೂ ತಾರಕಕ್ಕೇರಿ ವನಜಾ ಕಂಗಾಲಾದರೂ ಅವಳ ಗಂಡ ಎನಿಸಿಕೊಂಡ ನರಹರಿ ತಾಯಿಯ ಮಾತಿಗೆ ಓಗೊಟ್ಟು, ತಂಗಿಯ ಮೇಲಿನ ಮಮಕಾರದಿಂದ ಕಟ್ಟಿಕೊಂಡ ಹೆಂಡತಿಯ ಕೈ ಬಿಡುತ್ತಾನೆ. ಆರಂಭದಲ್ಲಿ ವನಜಾ‌ಳ ಕಷ್ಟಕ್ಕೆ ನರಹರಿಯ ಹೇಡಿತನವೇ ಕಾರಣವೆಂಬಂತೆ ಕಥೆ ಓದುಗನಿಗೆ ತಳಮಳ ಸೃಷ್ಟಿಸಿದರೆ ಅಂತ್ಯದಲ್ಲಿ ಅದೇ ಓದುಗ ನರಹರಿಯ ಪಾತ್ರವನ್ನು ಸ್ಮರಿಸುವಂತಿದೆ.ಈ ರೀತಿ ಪಾತ್ರಗಳಲ್ಲಿ ಪಲ್ಲಟನೆ ಸಹಜವಾದರೂ ರಾಧಾದೇವಿಯವರು ಓದುಗರು ಆ ಪಾತ್ರಗಳನ್ನು ಗ್ರಹಿಸಿ ಅಂತ್ಯದಲ್ಲಿ ಪ್ರೀತಿಸುವಂತೆ ಮಾಡುವುದರಲ್ಲಿ ಸಫಲತೆ ಕಂಡಿದ್ದಾರೆ.

ಹೆರಿಗೆ ಮುಗಿಸಿಕೊಂಡು ಗಂಡನ ಮನೆಗೆ ಹೋಗುವ ವನಜಾ ಅತ್ತೆಯ ಅನಾದರದಿಂದ ಹಾಗೂ ಗಂಡನ ನಡತೆಗೆ ಬೇಸತ್ತು ಮನೆಯ ಹೊಸ್ತಿಲ ಬಳಿಯೇ ಹಸುಗೂಸಿನ ಜೊತೆ ಕಾಲ ಕಳೆದು ಕೊನೆಗೂ ಈ ಘೋರವಾದ ನರಕದಿಂದ ಮುಕ್ತಿ ಪಡೆಯಲು ಗಟ್ಟಿ ಮನಸ್ಸು ಮಾಡಿ ತನ್ನ ಗೆಳತಿಯ ಬಳಿಗೆ ಹೋಗುವಳು. ಅಲ್ಲಿಂದ ಅವಳ ಶುಕ್ರದೆಸೆ ಆರಂಭವಾಗುತ್ತದೆ. ಅಪ್ಪನ ಸಹಾಯದಿಂದ ಟಿಸಿ ತರಿಸಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸಾಗುವ ವನಜ ಬಟ್ಟೆ ಉದ್ಯಮ ಆರಂಭಿಸಿ ವಾಮನನಂತೆ ಬೆಳೆಯುತ್ತಾಳೆ‌. ತನ್ನಂತೆಯೇ ಬದುಕಿನಲ್ಲಿ ನೊಂದ ಹೆಣ್ಣುಮಕ್ಕಳಿಗೆ ಪತ್ರಿಕೆಯೊಂದರಲ್ಲಿ ಅಂಕಣ ಬರಹ ಬರೆಯುತ್ತ ಸಾಂತ್ವನ ಹೇಳಿ, ತನ್ನ ನಂಬಿ ಬಂದವರಿಗೆ ಸೂರು ಕಲ್ಪಿಸಿಕೊಡುವ ವನಜಾ ಅದೆಷ್ಟೋ ಹೆಣ್ಣುಮಕ್ಕಳ ಪಾಲಿಗೆ ದೇವರಾಗುತ್ತಾಳೆ. ತನ್ನಂತೆಯೇ ಕಪ್ಪು ವರ್ಣದ, ಅಷ್ಟೇನೂ ಸುಂದರವಾಗಿರದ ಮಗಳು ಚಂಪಾ ಎದೆಯೆತ್ತರಕ್ಕೆ ಬೆಳೆದು ನಿಂತಾಗ ಅವಳ ಭವಿಷ್ಯದ ಪ್ರಶ್ನೆ ಕಾಡಿ ಕೊನೆಗೂ ಬದುಕಿನಲ್ಲಿ ಎಲ್ಲಾ ಕಳೆದುಕೊಂಡು ಕಷ್ಟದಲ್ಲಿದ್ದ ಗಂಡ ಮತ್ತು ಅತ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಾಗ ಹೆಣ್ಣು ಅದೆಷ್ಟರ ಮಟ್ಟಿಗೆ ಕ್ಷಮಯಾಧರಿತ್ರಿ ಎಂಬುದು ಮನದಟ್ಟಾಗುತ್ತದೆ. ಬದಲಾದ ಅತ್ತೆ,ಗಂಡನ ಜೊತೆ ಸಂತಸದಿಂದ ಬಾಳುತ್ತಿರುವ ವನಜಳಿಗೆ ಕಗ್ಗಂಟಾಗುವುದು ಅವಳೇ ಬೆಳೆಸಿದ ನಳಿನಾಕ್ಷಿ ಎಂಬ ನಿರ್ಗತಿಕ ಹೆಣ್ಣು. ಈ ವೇಳೆ "ನೀನೇ ಸಾಕಿದ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ" ಎಂಬ ಮಾನಸ ಸರೋವರ ಚಿತ್ರದ ಹಾಡು ನೆನಪಿಗೆ ಬರುತ್ತದೆ. ವನಜ ಮತ್ತು ಅವಳ ಗಂಡನ ನಡುವೆ ಇರುವ ಅಂತರ ಗ್ರಹಿಸುವ ನಳಿನಾಕ್ಷಿ ವನಜಳ ಗಂಡ ನರಹರಿಯನ್ನು ಬುಟ್ಟಿಗೆ ಹಾಕಿಕೊಂಡು ಹಂತಹಂತವಾಗಿ ವನಜಳನ್ನು ಇಡೀ ಸಮಾಜದ ಕಣ್ಣಿಗೆ ಕೆಟ್ಟವಳನ್ನಾಗಿ ತೋರಿಸಲು ಕಾಣದ ಕೈಗಳ ಜೊತೆಗೆ ಒಂದುಗೂಡುತ್ತಾಳೆ‌. ಅವಳ ಒಳಸಂಚು ಅರಿತ ನರಹರಿ ಕೊನೆಗೂ ವನಜ ನಿರ್ದೂಷಿಯಾಗಲು ಪರೋಕ್ಷವಾಗಿ ಸಹಕರಿಸುತ್ತಾನೆ. ಮುಂದೆ ನಡೆಯುವುದೇ ವನಜಳ ಮಗಳು ಚಂಪಾಳ ಪ್ರೇಮಕಥೆ. ಮೆಡಿಕಲ್ ಓದುತ್ತಲೇ ಒಬ್ಬ ದೊಡ್ಡ ಶ್ರೀಮಂತ ಡಾಕ್ಟರ್ ದಂಪತಿಗಳ ಏಕೈಕ ಮಗನನ್ನು ಪ್ರೀತಿಸುವ ಚಂಪಾ ಕೊನೆಗೆ ಆ ಪ್ರೀತಿಯಲ್ಲಿ ಯಶಸ್ಸು ಕಾಣುತ್ತಾಳ ವನಜಳಿಗೆ "ಬಯಸಿದ ಸಿರಿ" ಸಿಗುತ್ತದೆಯೇ ? ಈ ಕಾದಂಬರಿ ಓದಿಯೇ ತಿಳಿದುಕೊಳ್ಳಬೇಕು. ಶ್ರೀಮತಿ ರಾಧಾದೇವಿಯವರ ಈ ಕಾದಂಬರಿ ಓದುಗನಿಗೆ ಹಲವು ಅನುಭವ ನೀಡುತ್ತದೆ. ಎಷ್ಟೋ ಕುಟುಂಬಗಳಲ್ಲಿ ಇಂದಿಗೂ ಕಪ್ಪು ಬಣ್ಣದ ಹಾಗೂ ಬೆಳ್ಳನೆ ಇರುವ ಮಕ್ಕಳ ನಡುವೆ ಹೆತ್ತವರೇ ತಾರತಮ್ಯ ನೀತಿಯನ್ನು ಅನುಸರಿಸುವುದನ್ನು ಈ ಕಾದಂಬರಿ ಸೂಕ್ಷ್ಮವಾಗಿ ಓದುಗರೆದುರು ತೆರೆದಿಟ್ಟಿದೆ.

ವನಜಳ ವ್ಯಾಕುಲತೆ, ಅವಳು ಪಡುವ ಪರಿಪಾಟಲು, ಅವಳ ಅಂತರಂಗದ ವೇದನೆ, ಮನಸ್ಸಿನ ತಾಕಲಾಟ‌ದಿಂದ ಹೊರಬರಲು ಅವಳು ಕಂಡುಕೊಂಡ ಹಾದಿ ಇತ್ಯಾದಿ ವಿಚಾರಗಳ ಬಗ್ಗೆ ಆಲೋಚಿಸುವಾಗ ಅದೆಷ್ಟೋ ಭಾರತೀಯ ನಾರಿಯರ ವದನಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಈ ಕಾದಂಬರಿಯಲ್ಲಿ ಬಳಸಿರುವ ರೂಪಕಗಳು, ಸಂದರ್ಭಕ್ಕೆ ತಕ್ಕಂತೆ ಬಳಸಿರುವ ಅಮೂಲ್ಯ ಜನಪದ ಆಸ್ತಿಯಾದ ಗಾದೆ ಮಾತುಗಳು, ಭಾರತೀಯ ಸಂಸ್ಕೃತಿಯ ಆಚಾರ-ವಿಚಾರಗಳು, ಹೆಣ್ಣುಮಕ್ಕಳ ಅಂತರಂಗದ ನಿವೇದನೆಗಳನ್ನು ಮಾನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಭಿವ್ಯಕ್ತ ಪಡಿಸಿರುವ ರೀತಿಗಳು ಹೊಸಚಿಂತನೆಗಳನ್ನು ಹುಟ್ಟುಹಾಕುವ ತರಂಗಗಳಿದ್ದಂತೆ. ವರದಕ್ಷಿಣೆ ಎಂಬ ಪೆಡಂಭೂತ ಈ ದೇಶದಲ್ಲಿ ಎಷ್ಟೋ ಹೆಣ್ಣುಮಕ್ಕಳ ಭವಿಷ್ಯವನ್ನು ಚಿವುಟಿ ಹಾಕಿರುವುದು ನೆನೆದಾಗಲೆಲ್ಲಾ ಅವರೆಲ್ಲಾ ವನಜಳಂತೆ ಸೆಟೆದುನಿಲ್ಲಬೇಕಿತ್ತು ಎಂದು ಮನಸ್ಸಿಗೆ ಇರಿದಂತಾಗುತ್ತದೆ. ಈ ಕಾದಂಬರಿ ಉದ್ದಕ್ಕೂ ವನಜಳ ಕಣ್ಣೀರ ಕಥೆ ಇದ್ದರೂ ಓದುಗನೆದೆಯಲ್ಲಿ ನವಿರಾದ ಚಿಂತನೆ ಮೂಡಿಸಿ ಸುಂದರ ನಿರೂಪಣೆಯೊಂದಿಗೆ ಮುನ್ನಡೆಸುವ ಕಲೆ ರಾಧಾದೇವಿಯವರಿಗೆ ಕರಗತವಾಗಿರುವ ಕಾರಣ ಓದುಗನಿಗೆ ಎಲ್ಲೂ ಬೇಸರ ಕಾಡುವುದಿಲ್ಲ. ಋಣಾತ್ಮಕ ವಿಚಾರಗಳನ್ನು ಸಹ ಧನಾತ್ಮಕವಾಗಿ ಪರಿವರ್ತಿಸುತ್ತ ಓದುಗ ಸಹ ಆತ್ಮವಿಶ್ವಾಸದ ಅಲೆಯಲ್ಲಿ ತೇಲುವಂತೆ ಮಾಡುವಲ್ಲಿ ಈ ಕಾದಂಬರಿ ಯಶಸ್ವಿಯಾಗಿದೆ.

ವನಜಳ ಅತ್ತೆ ಲಕ್ಷ್ಮಮ್ಮ ಆರಂಭದಲ್ಲಿ ಮೃಗದಂತೆ ಕಂಡುಬಂದು ಅಂತ್ಯದಲ್ಲಿ ಮೊಮ್ಮಗಳೊಂದಿಗೆ ಆಡುತ್ತಾ ಓದುಗನ ಸಿಟ್ಟನ್ನು ಶಮನಗೊಳಿಸಿಬಿಡುತ್ತಾಳೆ‌. ಹೀಗೆಯೇ ವನಜಳ ತಾಯಿ ರಂಗಮ್ಮನ ಕಠೋರ ಮನೋಭಾವ, ತಂಗಿ ಗಿರಿಜಳ ತಾತ್ಸಾರ, ಚಂಪಳ ತುಂಟ ಸ್ವಭಾವಗಳು, ಈ ಕೃತಿಯಲ್ಲಿ ಕಂಡುಬರುವ ನಮ್ಮ ನಡುವಿನ ಹಲವು ಮುಖಗಳು.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books