ನನ್ನ ಕಥೆ

Author : ಪೂರ್ಣಿಮಾ ಭಟ್

Pages 160

₹ 100.00

Synopsys

ಆತ್ಮಕಥೆಗಳನ್ನು ಸಾಧಾರಣವಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಮಾತ್ರ ಬರೆಯುತ್ತಾರೆ ಎನ್ನುವುದು ನಿಜ. ಇದಕ್ಕೆ ಕಾರಣವೂ ಇದೆ . ಸಾಮಾನ್ಯರು ಬರೆದರೆ ಬರೆದವರ ನೆಂಟರಿಷ್ಟರು ಓದಬಹುದು, ಮುಚ್ಚುಮರೆಯಿಲ್ಲದೆ ಅಂತರಂಗವನ್ನು ತೆರೆದಿಟ್ಟಾಗ ಒಂದಿಷ್ಟು ನೆಂಟರಿಷ್ಟರು ದೂರವಾಗಬಹುದು, ಮತ್ತೆ ಮುಂದಕ್ಕದು ಕಸದ ಬುಟ್ಟಿ ಸೇರುವ ಉಪೇಕ್ಷೆಗೆ ಒಳಗಾಗಬೇಕು. ಸಾಧಕರು ಆತ್ಮಚರಿತ್ರೆ ಬರೆಯುವುದರಿಂದ ಮೇಲಿನ ತೊಂದರೆಗೆ ಅವರೂ ಒಳಗಾಗುವುದರಲ್ಲಿ ಸಂಶಯವಿಲ್ಲ. ಆದರೆ ಹೇಳಿಕೇಳಿ ಅವರು ಸಾಧಕರು, ಸಾಮಾನ್ಯರಂತೆ ಸಮಾಜದಲ್ಲಿ ಬರುವ ಕಟು ಟೀಕೆಗಳಿಗೆ ಬೆದರದಂತ ಮನೋಸ್ಥಿತಿಯನ್ನು ಬೆಳೆಸಿಕೊಂಡಿರುತ್ತಾರೆ. ಮತ್ತೆ, ಓದುಗರ ಮನೋದೃಷ್ಟಿಯಲ್ಲಿ ಅವರ ಸಾಧನೆ ಹಿರಿದಾಗಿ ಆವರಿಸಿಕೊಂಡುಬಿಟ್ಟಾಗ, ಅವರ ಬದುಕಿನ ಏನೇ ಹಳೆಯ ತಪ್ಪುಗಳು, ಕೆಡುಕನ್ನು ಪ್ರಾಜ್ಞತೆಯಿಂದ ಅವರೇ ಹೇಳಿಕೊಂಡಿದ್ದರೂ ಓದುಗರು ಅವುಗಳನ್ನು ಒಂದೋ ಕಡೆಗಣಿಸುತ್ತಾರೆ ಅಥವಾ ಪ್ರಾಂಜಲ ಮನಸ್ಸಿನಿಂದ ಕ್ಷಮಿಸಿಬಿಡುತ್ತಾರೆ. ಹಾಗಾಗಿ ಪುಸ್ತಕಗಳಿಗೆ ಅಪಾರ ಬೇಡಿಕೆ ಖಂಡಿತ ದೊರಕುತ್ತದೆ. ಇದೇ ಸಾಮಾನ್ಯರಿಗೆ ದಕ್ಕದ ದುರ್ದೈವ. ಹಾಗಾಗಿ ಒಬ್ಬ ಸಾಧಾರಣ ಗೃಹಣಿ ಅಥವಾ ಹೊರಗಿನ ಕೆಲಸ ಮನೆಯ ಕೆಲಸ ಎರಡನ್ನೂ ನೋಡಿಕೊಂಡ ಒಬ್ಬ ಹೆಣ್ಣೂ ಕೂಡ ಅದೆಷ್ಟೇ ಬದುಕಿಗಾಗಿ ಹೋರಾಟ ಮಾಡಿರಲಿ, ತ್ಯಾಗ ಮಾಡಿರಲಿ, ಸುತ್ತಲಿಗೊಂದು ಸಣ್ಣ ಕೊಡುಗೆ ಕೊಟ್ಟಿರಲಿ ಅದನ್ನು ಅವರು ಆತ್ಮಕಥೆಯಾಗಿ ದಾಖಲಾಗಿಸುವುದೇ ಇಲ್ಲ, ದಾಖಲಾಗಿಸಿದರೂ ಓದುವವರಂತೂ ದಕ್ಕುವುದಿಲ್ಲ 😀 ಹಾಗಾಗಿ ಆತ್ಮಕಥೆ ಎಂದರೆ ಮನೆಯಾಚೆಯ ಒಂದು ದೊಡ್ಡಮಟ್ಟದ ಸಾಧಕರೇ ಆಗಿರಬೇಕು ಎನ್ನುವುದು ರೂಪಿತ ಸಿದ್ಧಾಂತ. ಅಂತಹ ದೊಡ್ಡಮಟ್ಟದ ಸಾಧನೆಯ ಸಾಧಕಿಯೊಬ್ಬರ ಆತ್ಮಕಥೆ ಇಂದು ಇಲ್ಲಿ ಪರಿಚಯಿಸುತ್ತಿದ್ದೇನೆ.. . ಈ ದಿನಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು , ಅದರಲ್ಲೂ ಹೆಣ್ಣಿನ ಮನದಾಳವನ್ನು, ವಿವಾಹಿತ ಹೆಣ್ಣಿನ ಲೈಂಗಿಕ ಅತೃಪ್ತಿಯನ್ನು ಹೇಗೆಂದರೆ ಹಾಗೆ, ಯಾವುದೇ ಮುಜುಗರವಿಲ್ಲದೆ, ಯಾರದೇ ಭಯವಿಲ್ಲದೆ ,ಅಳುಕು ಸಂಕೋಚಗಳ ತೊರೆದು ತನಗೆ ಏನನ್ನಿಸಿತು, ತಾನು ಏನು ಮಾಡಿದೆನೋ ಅದನ್ನು ನಿರ್ಭಿಡೆಯಾಗಿ ಜಗತ್ತಿಗೆ ತೆರೆದಿಟ್ಟ ದಿಟ್ಟ ಮಹಿಳೆ ಕಮಲಾದಾಸ್, ಮಾಧವಿಕುಟ್ಟಿ, ಕಮಲ ಸುರಯ್ಯ ಹೀಗೆ ಅನೇಕ ಹೆಸರುಗಳಲ್ಲಿ ಹೆಸರುವಾಸಿಯಾದ ಹೆಸರಾಂತ ಬರಹಗಾರ್ತಿ. . ಮೇಲೆ ಹೇಳಿದಂತೆ ಹೀಗೆ ಬದುಕುವುದು ಅದನ್ನು ಬೆತ್ತಲಾಗಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ತನ್ನವರನ್ನು, ಸುತ್ತಲನ್ನು, ಸಮಾಜವನ್ನು, ಟೀಕಿಸುವವರನ್ನು ಎದುರು ಹಾಕಿಕೊಳ್ಳಬೇಕು. ತಾನು ಬದುಕಿದ್ದನ್ನು , ತಾನು ಬರೆದದ್ದನ್ನು ಎಂತಹುದೇ ಸಂದರ್ಭದಲ್ಲಿ ಎದುರಿಸಿ ನಿಲ್ಲುವ ತಾಕತ್ತನ್ನು ಹೊಂದಿರಬೇಕು. ಕಮಲಾದಾಸ್ ಈ ಗಟ್ಟಿತನವನ್ನು ಮೈಗೂಡಿಸಿಕೊಂಡ ಮಹಿಳೆ. ಹಾಗಾಗಿ ಒಂದಷ್ಟು ಮಡಿವಂತರು ಮುಜುಗರಪಟ್ಟು ಇವರ ಬಗ್ಗೆ ಒಂದು ರೀತಿಯ ಜಿಗುಪ್ಸೆ ತಳೆದರೂ, ವಿರೋಧಿಸಿದರೂ ಇನ್ನೊಂದು ವರ್ಗ ಇವರನ್ನು ಅದ್ಭುತ ಹೆಣ್ಣು, ದಿಟ್ಟ ಮಹಿಳೆ, ಬದುಕಿದರೆ ಹೀಗೆ ಬದುಕಬೇಕು ಎನ್ನುವಂತಹ ಆರಾಧನೆಯಲ್ಲಿ ಅಭಿನಂದಿಸಿದರು. ಈ ಮಾರ್ಗವನ್ನು ಆದರ್ಶ ಮಾರ್ಗ ಎಂದೂ ಬಿಂಬಿಸಿದರು. ಇಂದು ಕೇಳಿಬರುತ್ತಿರುವ ಮಾತುಗಳು, "ನನ್ನ ದೇಹ, ನನ್ನ ಮನಸ್ಸು ನನ್ನ ಬದುಕು" ಇಂತಹ ಘೋಷಣೆಗಳು ಆಧುನಿಕ ಮಹಿಳೆಯ ಪಾಲಿನ ಮಂತ್ರವಾಗಿವೆ. ಇದು ಕೆಲವೊಮ್ಮೆ ಸ್ವೇಚ್ಛೆಯ ಕಡೆಗೆ ಕರೆದೊಯ್ಯುತ್ತದೆ ಎನ್ನುವುದೂ ಸುಳ್ಳಲ್ಲವಾದರೂ, ಇಂದು ಯಾರು ಯಾರಿಗೂ ಕಡಿವಾಣ ಹಾಕುವುದು ಸಾಧ್ಯವಿಲ್ಲ. ಯಾರೂ ಯಾರ ಸಲಹೆಯನ್ನು ಪರಿಗಣಿಸುವುದೂ ಇಲ್ಲ. ಅದು ಅವರವರ ವೈಯಕ್ತಿಕ ವಿಚಾರ. ಈ ಆಲೋಚನೆಗಳಿಗೆ ಒಂದಿಷ್ಟು ಹತ್ತಿರವಾಗಿ ಬದುಕಿದರೇ ಈ ಲೇಖಕಿ ಎನ್ನುವ ಶಂಕೆಯಂತೂ ಈ ಪುಸ್ತಕ ಓದುತ್ತಾ ನಮ್ಮನ್ನು ಕಾಡುತ್ತದೆ. ಅತ್ಯಂತ ವಿವಾದಾತ್ಮಕ ಲೇಖಕಿ ಕಮಲಾದಾಸ್ ಎನ್ನುವುದು ನಿರ್ವಿವಾದದ ಸಂಗತಿಯೇ ಹೌದು. ನಾವೀಗ ಕಮಲಾದಾಸ್ ಅವರ ಪುಸ್ತಕದ ಕಡೆ ಹೊರಳೋಣ. ಕೇರಳದ ಸಂಪ್ರದಾಯಸ್ಥ ನಾಯರ್ ಕುಟುಂಬದಲ್ಲಿ ಜನಿಸಿದ ಕಮಲಾದಾಸ್ ಅಲ್ಲಿಯ ಗ್ರಾಮೀಣ ಬದುಕಿನ ಮಹಿಳೆಯ ಬದುಕಿನ ತೊಳಲಾಟಗಳನ್ನು ತಿಳಿಸುತ್ತಲೇ ಆಧುನಿಕ ಜಗತ್ತಿನ ಬಿಡಿಸಲಾಗದ ಸಿಕ್ಕುಗಳ ಬಗ್ಗೆಯೂ ದನಿಯೆತ್ತಿದ್ದಾರೆ ತಮ್ಮ ಸಮರ್ಥ ಲೇಖನಿಯಿಂದ ಎನ್ನುವುದು ಈ ಪುಸ್ತಕದುದ್ದಕ್ಕೂ ನವಿರಾಗಿ, ಸೂಕ್ಷ್ಮವಾಗಿ ಹರಡಿದೆ. ಕವಯಿತ್ರಿಯಾಗಿ, ಕಥೆಗಾರ್ತಿಯಾಗಿ , ಕಾದಂಬರಿಗಾರ್ತಿಯಾಗಿ ಬಹಳಷ್ಟು ಹೆಸರು ಮಾಡಿರುವ ಕಮಲಾದಾಸ್ ಅವರ ಬದುಕು ಉದ್ದಕ್ಕೂ ಒಂದು ರೀತಿಯ ಸಂಘರ್ಷದ, ತೊಳಲಾಟದ ಬದುಕೇ ಆಗಿದೆ. ಈ ಆತ್ಮಕಥೆಯಲ್ಲಿ ಒಂದು ಕಡೆ ಹೀಗೆ ಹೇಳಿದ್ದಾರೆ "ನಾನು ಬಾಲ್ಯದಲ್ಲಿ ಸಮಾಧಿಯ ಬಳಿಗೆ ಅಂಜಿಕೆ ಇಲ್ಲದೆ ಹೋಗುತ್ತಿದ್ದೆ. ಜೀವವಿದ್ದವರನ್ನು ಪ್ರೀತಿಸುವಷ್ಟೇ ಸುಲಭವಾಗಿ ಸತ್ತವರನ್ನೂ ಪ್ರೀತಿಸುತ್ತಿದ್ದೆ. ಅವರ ಸಮಾಧಿಗಳ ಬಳಿ ನನ್ನ ಮನಸ್ಸಿನ ಒಳತೋಟಿಗಳನ್ನು ಹೇಳಿಕೊಳ್ಳುತ್ತಿದ್ದೆ. ***ಸತ್ತವರಿಂದ ಯಾವ ರೀತಿಯ ಕ್ರೌರ್ಯವೂ, ಒರಟುತನವೂ ಹೊರಡದು ಅಲ್ಲವೇ...*** ಎನ್ನುವ ಮಾತುಗಳ ಓದಿದ ನನಗೆ ಅವರು ಉದ್ದಕ್ಕೂ ನಡೆಸಿಕೊಂಡು ಬಂದ ಅಂತರಂಗದ ಹೋರಾಟಕ್ಕೆ ಇದು ಸಾಕ್ಷಿಯೆನ್ನಿಸಿತು. ಪ್ರೀತಿಯ ಬಾಲ್ಯ ಒಂದು ರೀತಿಯಲ್ಲಿ ಇವರ ಪಾಲಿಗೆ ಮರೀಚಿಕೆಯಾಗಿದೆ. ತಾಯಿ ಕವಯಿತ್ರಿ, ತಂದೆ ಆಟೋಮೊಬೈಲ್ ಶಾಪ್ ನಡೆಸಿದ್ದವರು, ಸಾಕಷ್ಟು ಉಳ್ಳವರೇ ಆಗಿ ಅಂದಿನ ಬ್ರಿಟಿಷ್ ಸರ್ಕಾರದ ಕೆಲವು ಉನ್ನತಾಧಿಕಾರಿಗಳ ಒಡನಾಟವೂ ಈ ಕುಟುಂಬಕ್ಕಿದ್ದೂ, ಹೆತ್ತವರಲ್ಲಿ ಸಾಮರಸ್ಯ ಇಲ್ಲದೆ ತಾಯಿಯ ತೋರಿಕೆಯ ತೃಪ್ತ ದಾಂಪತ್ಯದಲ್ಲಿ ಮಕ್ಕಳಿಗೆ ಹೆಚ್ಚಿಗೆ ದಕ್ಕಿದ್ದು ಅನಾದರ. ಅಡಿಗೆಯವನು, ಮಾಲಿ, ತೋಟಿಗ ಹೀಗೆ ಇವರ ಸುತ್ತಲೇ ಮಕ್ಕಳ ಬಾಲ್ಯ ಸುತ್ತುವಾಗ ಒಂಟಿತನ ಅನುಭವಿಸಿದ ಲೇಖಕಿಯ ಆ ಬಾಲ್ಯದ ಮುಗ್ಧ ಮನಸ್ಸಿನ ಒಳತೋಟಿಯೇ ಮೇಲೆ ಹೇಳಿದ ಮಾತಿಗೆ ಕಾರಣವಿರಬಹುದು ಎನ್ನುವಾಗ ಮನಸ್ಸು ಮರುಗುತ್ತದೆ. ಮಕ್ಕಳ ಮನಸ್ಸಿನಲ್ಲಿ ಏನು ನಡೆಯುತ್ತಿದೆ, ಅವರ ಅಂತರಂಗದ ಬಯಕೆ, ಒಳತೋಟಿಗಳೇನು ಎಂದು ಒಂದು ದಿನಕ್ಕೂ ಪ್ರಶ್ನಿಸದೇ ತಮ್ಮದೇ ಗೋಡೆಯೊಳಗೆ ಬದುಕುತ್ತಾ, 'ಶಾಲೆಗೆ ಹೋಗ್ತಾರೆ ಹೋಗ್ಬೇಕು' ಎನ್ನುವ ಕೇವಲ ಕರ್ತವ್ಯದಡಿಯಲ್ಲಿ ಬೆಳೆಸಿದ ಹೆತ್ತವರ ಉಪೇಕ್ಷೆ ಲೇಖಕಿಯ ಬದುಕಿನ ಉಪದ್ವ್ಯಾಪಗಳಿಗೆ ಒಂದು ಮುನ್ನುಡಿ ಹಾಕಿರಬಹುದು ಎನ್ನುವುದು ನನ್ನ ಅನಿಸಿಕೆ. ಕೆಲವು ಪುಟಗಳನ್ನು ಓದುತ್ತಾ ನನ್ನ ನಿರಾಳ, ಖುಶಿಯಲ್ಲಿ ಅರಳಿದ ಬಾಲ್ಯ ಕಣ್ಕಟ್ಟಿತು. ಅಂಥ ಒಂದು ವಿಷಾದದ ಛಾಯೆ ಪುಸ್ತಕದಲ್ಲಿದೆ. ಕೇರಳದ ನಾಲಪ್ಪಾಟ್ ಅಜ್ಜನ ಮನೆಯಲ್ಲಿ ಕೆಲಕಾಲ ಲೇಖಕಿ ತಮ್ಮ ಬಾಲ್ಯ ಕಳೆಯುತ್ತಾರೆ. ಈ ಮನೆ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿದೆ. ಈ ಮನೆಯಲ್ಲಿ ಇವರೊಂದಿಗೆ ಮಹಾತ್ಮ ಗಾಂಧೀಜಿಯವರು ಇದ್ದರಂತೆ. ಇಲ್ಲಿಯ ಪರಿಸರದ ವರ್ಣನೆ ತುಂಬಾ ಆಕರ್ಷಕವಾಗಿದೆ. ಜೊತೆಗೇ, ಈ ಮನೆಯಲ್ಲಿದ್ದರು ಇಬ್ಬರು ಹೆಸರಾಂತ ಮಲೆಯಾಳೀ ಕವಿಗಳು. . ಇಲ್ಲಿ ಕೂಡ ಪ್ರಾಥಮಿಕ, ಮಾಧ್ಯಮಿಕ ಶಾಲಾಘಟ್ಟದಲ್ಲೇ ಹತ್ತಿಸಿಕೊಳ್ಳುವ ಸಹಜವಾದರೂ ಅಸಹಜವೇನೋ ಎಂದು ನನಗನ್ನಿಸುವಂಥ ಕಾಮದ ಸೆಳಕು, ಅಪ್ರಬುದ್ಧ ಯೋಚನೆಗಳನ್ನು ಓದುತ್ತಾ, ಇನ್ನಷ್ಟು ಅಂದರೆ ಪ್ರೌಢಶಾಲೆಗೆ ಬಂದಾಗ, ಒಮ್ಮೊಮ್ಮೆ ತಮ್ಮ ಶಿಕ್ಷಕಿ ಮತ್ತು ಪರಿಚಿತರಾಗಿ ಎದುರಾಗುವ ಕೆಲವು ಹೆಣ್ಣು ಗಳಲ್ಲಿ ದೈಹಿಕ ಆಕರ್ಷಣೆ, ಪ್ರೀತಿ ಕಂಡುಕೊಳ್ಳುವುದನ್ನು ಓದುವಾಗ ಒಂದು ರೀತಿಯ ಗೊಂದಲದಂತೆ ನನಗೆ ಕಂಡಿತು. ಬಹುಶಃ, ಅತೃಪ್ತ ಬಾಲ್ಯ ಹೀಗೆಲ್ಲಾ ಮಾನಸಿಕ ಒತ್ತಡದೆಡೆಗೆ, ಅಂಕೆಯಿಲ್ಲದ ಅಡ್ಡಾದಿಡ್ಡಿ ಹಾದಿ, ಯೋಚನೆಗಳಿಗೆ ದೂಡಿರಬಹುದೇನೋ... . ಮುಂದೆ ತಂದೆ-ತಾಯಿ ಆಗಾಗ ಬೇರಾಗಿ ವಾಸಿಸುವುದು ನಡೆಯುತ್ತಲೇ ಹೋದಾಗ ಲೇಖಕಿ ಇನ್ನಷ್ಟು ಅಂತರ್ಮುಖಿಯಾಗುತ್ತಾ ಹೋಗುತ್ತಾರೆ. ಕಾಲೇಜಿಗೆ ಹೋಗುವ ಮೊದಲೇ ಅಂದರೆ 15 ನೇ ವಯಸ್ಸಿಗೇ ಕಮಲಾರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಹೆತ್ತವರು ಬ್ಯಾಂಕ್ ಅಧಿಕಾರಿಯಾಗಿದ್ದ ಮಾಧವದಾಸ್ ಎನ್ನುವವರೊಡನೆ ವಿವಾಹ ಬಂಧನಕ್ಕೆ ಒಪ್ಪಿಸುತ್ತಾರೆ. ಇದಂತೂ ಖೇದಕರ. ಆದರೆ ಪ್ರಥಮ ಭೇಟಿಯಲ್ಲಿಯೇ ಲೇಖಕಿಯ ಕೋಮಲ ಮನಸ್ಸು ಒಡೆದುಹೋಗುತ್ತದೆ. ಆತನಿಗೆ ಕೇವಲ ಲೈಂಗಿಕ ಆಸಕ್ತಿಯೇ ವಿನಾ ಹೆಣ್ಣನ್ನು ಪ್ರೀತಿಯ ಮಾತುಗಳಿಂದ ಒಲಿಸಿಕೊಳ್ಳಬೇಕೆನ್ನುವ ಹೃದಯವಂತಿಕೆ, ಸಂಯಮಪ್ರೇಮ ಇರಲಿಲ್ಲ . ಹುಲ್ಲೆಯ ಮೇಲೆ ಎರಗುವ ಹುಲಿಯಂಥ ಲೈಂಗಿಕ ಒರಟು ಸ್ವಭಾವದವನು. ಲೇಖಕಿ ಈ ಸ್ವಭಾವವನ್ನು ತಿರಸ್ಕಾರದಿಂದ ಕಾಣುತ್ತಾರೆ. ಮನಸ್ಸು ಮುದುಡಿ ಹೋಗುತ್ತದೆ. ಪತಿಯ ಮೇಲೆ ಪ್ರೇಮವಿದೆ, ಆದರೆ ಆತ ತನ್ನನ್ನು ಮಗುವಿನಂತೆ, ಹೃದಯಕ್ಕಿಳಿದು, ಸುಕುಮಾರವಾಗಿ ಪ್ರೀತಿಸಲಿ ಎಂದು ಹೃದಯ ಇನ್ನಿಲ್ಲದಷ್ಟು ಬಯಸುತ್ತದೆ. ಆದರೆ ಇದು ಕೈಗೂಡುವುದಿಲ್ಲ. ಮದುವೆಯಾದರೂ ಆತ ತನ್ನ ಕೆಲಸಗಳಲ್ಲಿ ಮುಳುಗಿ ಇವರ ಕೋಮಲ ಭಾವನೆಗೆ ವ್ಯತಿರಿಕ್ತವಾಗಿ ನಡೆಯುತ್ತಾ ಹೋದಾಗ ಲೇಖಕಿ "ಪ್ರೇಮತೃಷಿತೆ" ಆಗುತ್ತಾರೆ. ಪ್ರೇಮಪೂರಿತ ಮಾತುಗಳಿಗಾಗಿ ತಹತಹಿಸುತ್ತಾ, ಲೈಂಗಿಕ ಸಂಬಂಧಕ್ಕೆ ಇನ್ನೂ ತಯಾರಿಲ್ಲದ ಅಪ್ರಬುದ್ಧ ದೇಹ ಮತ್ತು ಮನಸ್ಸು, ಈಗಾಗಲೇ ಹಲವು ಹೆಣ್ಣುಗಳನ್ನು ಸ್ವೇಚ್ಛೆಯಿಂದ ಬೆರೆತು ನುರಿತಿದ್ದ ಗಂಡನ ಎದುರು ( ಹೀಗೆಂದಿದ್ದಾರೆ ಲೇಖಕಿ)ನಿರ್ಭಾವುಕವಾಗಿ, ಮಂಜಿನಂತೆ ಕೊರಡಾಗುವಾಗ ಸಿಡಿಯುವ ಪತಿಯ ಅಸಹನೆ, ಇನ್ನಷ್ಟು ಲೇಖಕಿಯ ಮನಸ್ಸನ್ನು ಪತಿಯ ಕಡೆಗೆ ವಿಮುಖವಾಗಿಸುತ್ತಾ ಹೋಗುತ್ತದೆ. ಹೆಣ್ಣಿನ ಈ ತಳಮಳ, ಯಾತನೆ ಓದುವವರಿಗೆ ಮನಸ್ಸು ಮುದುಡುವಂತೆ ಆಗುತ್ತದೆ . ತಾಯಿಯಂತೆ ಇವರದು ಕೂಡ ವಿಷಮ ದಾಂಪತ್ಯ ವಾಗುತ್ತಾ ಆಗಾಗ ಬೇರೆಯಾಗಿ ಬದುಕುವ ಸಂದರ್ಭಗಳನ್ನು ಸೃಷ್ಟಿಮಾಡುತ್ತದೆ. ಗಂಡ ತನ್ನನ್ನು ಮಗುವಿನಂತೆ ಪ್ರೀತಿಯಿಂದ ದೇಹ ಕ್ಕೊತ್ತಿಕೊಂಡು ಮಲಗಿ ರಮಿಸಲಿ ಎನ್ನುವುದೊಂದೇ ತೊಳಲಿಕೆಯಾಗುವ ಲೇಖಕಿ ಒಂದು ಕಡೆ ಹೇಳುತ್ತಾರೆ, "ಉದ್ಯೋಗಸ್ಥೆಯಾಗಲು ವಿದ್ಯಾಭ್ಯಾಸದ ಅರ್ಹತೆಯೂ ಇರಲಿಲ್ಲ. ವೇಶ್ಯಾವೃತ್ತಿಯನ್ನು ನಾನು ನಡೆಸುವಂತೆ ಇರಲಿಲ್ಲ, ಏಕೆಂದರೆ ನಾನು "ಫ್ರಿಜಿಡ್" ಆಗಿದ್ದೆ. ನಾನು "ಎಲ್ಲೂ" ಹೊಂದುವಂತಿರಲಿಲ್ಲ. ಮನೆಯ ನಾಲ್ಕು ಕೋಣೆಯ ಒಳಗಡೆ ಗಂಡ, ಮಗು, ಆಯಾ, ಅಡಿಗೆಯವರು ನಿದ್ರಿಸುತ್ತಿದ್ದಾಗ ನಾನು ಬಿಕ್ಕುತ್ತಾ, ದುಃಖಿಸುತ್ತಾ ಕುಳಿತಿರುತ್ತಿದ್ದೆ..." ಹೆಣ್ಣಿನ ಅಂತರಂಗ ಹೀಗೆ ಉಸುರಬೇಕಾದರೆ ಅದು ಎಂಥ ಯಾತನೆಗೆ ಒಳಗಾಗಿರಬೇಕು ಎನ್ನುವುದನ್ನು ನೆನೆದರೆ ತೆಳ್ಳನೆಯ ಕಂಪನ ನಮಗೇ ಅನುಭವ ವೇದ್ಯವಾಗುತ್ತದೆ. ಕಮಲಾ ಅವರು ಅತ್ಯಂತ ಭಾವನಾತ್ಮಕ ಗುಣದ ಮೃದು ಮನಸ್ಸಿನವರು ಇರಬಹುದು ಎನ್ನುವುದು ಇಂತಹ ಅನೇಕ ಪ್ರಸಂಗಗಳನ್ನು ಓದುವಾಗ ಅನ್ನಿಸತ್ತೆ. ಆದರೂ, ಒಂದು ನನಗರ್ಥವಾಗದ್ದು ಲೇಖಕಿಯ ಕೈಹಿಡಿದ ಪತಿ ನಿಷ್ಕರುಣಿಯಲ್ಲ, ಪತ್ನಿಯನ್ನು ಪ್ರೀತಿಸುತ್ತಾರೆ, ಅವರಿಗೆ ಇನ್ನಿಲ್ಲದಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರುತ್ತಾರೆ. ಮುಂದೆ ಯಾವ ಕಡೆಯಲ್ಲೂ ಅವರ ವಿವಾಹಬಾಹಿರ ಸಂಬಂಧಗಳು ಇವೆಯೆಂದು ದಾಖಲಾಗಿಲ್ಲ. ಪತ್ನಿಯ 'ಫ್ರಿಜಿಡಿಟಿ'ಯಿಂದ ರೋಸಿಹೋಗಿ ಒಂದೇ ಒಂದು ಕಡೆ ಪುರುಷನೊಬ್ಬನೊಡನೆ ಬಾಗಿಲು ಹಾಕಿಕೊಂಡ ಎನ್ನುತ್ತಾರೆ. ಇದು ಪತ್ನಿಯನ್ನು ತೀವ್ರವಾಗಿ ಆತಂಕಕ್ಕೆ ತಳ್ಳುವ ಘಟನೆಯೇ ನಿಜ. ಇದರ ಹೊರತಾಗಿ ಲೇಖಕಿ ಪತಿಯ ಜೊತೆಯಲ್ಲೇ ಇರಬೇಕೆಂದು ಬಯಸುತ್ತಾ, ಇನ್ನೊಂದೆಡೆ ಆಕರ್ಷಕ ಪುರುಷರೊಡನೆ ಮೋಹಗೊಂಡು ಮನಸ್ಸು ಚೆಲ್ಲುತ್ತಾ ಹೋಗುತ್ತ ದ್ವಂದ್ವ ವ್ಯಕ್ತಿತ್ವ ಕಟ್ಟಿಕೊಳ್ಳುವುದು ಅರ್ಥವಾಗದ ಸಂಗತಿ. ರೀತಿ ರಿವಾಜುಗಳ ಕಟ್ಟಿಗೆ ಜೋತು ಹಾಕಿಕೊಳ್ಳದೆ ತನಗೆ ಇಷ್ಟ ಬಂದ ರೀತಿಯಲ್ಲಿ ಬದುಕಬೇಕೆನ್ನುವ, ಬದುಕಿದ್ದೇ ಸರಿ ಎನ್ನುವ ಸ್ವಾತಂತ್ರ ಮನೋಭಾವ ಒಂದು ರೀತಿ ಸ್ವೇಚ್ಛೆಯೂ ಅನ್ನಿಸಿಕೊಳ್ಳುತ್ತದೆ. 'ನಾನು ವರ್ಣರಂಜಿತ ಯೌವನವನ್ನು ಕಳೆದಿದ್ದೇನೆ ' ಎನ್ನುವ ಅವರ ಈ ಮಾತುಗಳು ಅವರ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಬಹುಶಃ ಇಂಥ ಹಾದಿಯನ್ನು ಎಲ್ಲರೂ ಆರಿಸಿಕೊಳ್ಳಲು ಸಾಧ್ಯವಿಲ್ಲ. ಆರಿಸಿಕೊಂಡರೆ ಸಮಾಜದ ದಿಕ್ಕು ಹದಗೆಟ್ಟು ಯಾವ ಹಾದಿಗೆ ಹೊರಳುತ್ತದೆ ಕಡೆಗೆ ಎಂದು ಹೇಳಲೂ ಸಾಧ್ಯವಿಲ್ಲ. ಹಾಗಾಗಿಯೇ ಎಲ್ಲರೂ ಕಮಲಾದಾಸ್ ಆಗಲೂ ಸಾಧ್ಯವಿಲ್ಲ. ಹಾಗಂತ ನಾನು ಲೇಖಕಿಯನ್ನು ದೂರುವುದಿಲ್ಲ. ಅವರ ಹಾದಿಯನ್ನು ಅವರು ಬದುಕಿದರು, ಸಮರ್ಥಿಸಿದರು. ಅವರ ಸಾಧನೆಯಲ್ಲಿ ಬಂದ ವೈಯಕ್ತಿಕ ಬದುಕಿನ ಟೀಕೆಗಳನ್ನು ಕಡೆಗಣಿಸಿದರು ಕೂಡ. ಅಷ್ಟರಮಟ್ಟಿಗಿನ ಛಾತಿಗೆ ಅವರ ಬರಹ ಪ್ರತಿಭೆ ಜೊತೆ ಕೊಟ್ಟಿತು ಎನ್ನುವುದು ಸತ್ಯ. ಕಾಮ-ಪ್ರೇಮದ ಮುಕ್ತ ಬರಹಗಳನ್ನು ಬರೆಯುತ್ತಲೇ ಒಂದು ದೊಡ್ಡ ಓದುಗ ವಲಯವನ್ನು ಸೃಷ್ಟಿಸಿಕೊಂಡ ಲೇಖಕಿ ತಾನು ಕಾಮೋದ್ರೇಕಿಯಾಗಿರಲಿಲ್ಲ ಎನ್ನುತ್ತಾರೆ . ಆದರೆ , ಕಾಮವೇ ಪ್ರಧಾನವಾದ ತಮ್ಮ ಬರಹಗಳನ್ನು ಓದಿದ ಗಂಡಸರು ತಮ್ಮೊಡನೆ ದೈಹಿಕ ಸಂಪರ್ಕಕ್ಕಾಗಿ ಹಾತೊರೆಯುತ್ತಿದ್ದರು, ನಾನು ಕೆಲಕಾಲ ವ್ಯಭಿಚಾರ ಮಾಡಿದೆ ಎನ್ನುತ್ತಾರೆ. ಇದನ್ನೆಲ್ಲ ಪತಿ ದಾಸ್ ಅವರು ತಿಳಿದುಕೊಂಡಿರುತ್ತಾರೆ. ಹಾಗಿದ್ದೂ ಪತ್ನಿಗೆ ಕಟುಮಾತು ಆಡದೆ, ನಿಂದಿಸದೆ ಮಗುವಿನಂತೆ ತಿಳಿ ಹೇಳುತ್ತಾ, ಈ ಸ್ನೇಹ ಈ ಸಂಬಂಧ ನಿನಗೆ ಒಳಿತಲ್ಲ ಎಂದು ಹೇಳುತ್ತಾ ಹೋಗುವುದನ್ನು ಓದುವಾಗ ದಾಸ್ ರಲ್ಲಿ ನನಗಂತೂ ತಪ್ಪೆಣಿಸಲೇ ಆಗಲಿಲ್ಲ. . ಸಂಪ್ರದಾಯ ಕುಟುಂಬದ ರೀತಿ-ರಿವಾಜುಗಳನ್ನು ಮೀರಿ ವಿರೋಧಿಸುತ್ತಾ, ಮುಕ್ತ ಕಾಮವನ್ನು ಪ್ರತಿಪಾದಿಸುತ್ತಾ, ಮಗನೂ ಈ ಹಾದಿಯಲ್ಲಿ ಪ್ರಥಮ ಹೆಜ್ಜೆ ಇಟ್ಟಾಗ ಅದಕ್ಕೂ ಸಮ್ಮತಿಸುತ್ತಾ, ತಮ್ಮದೇ ಹಾದಿಯಲ್ಲಿ ನಡೆಯುತ್ತಾ, ಬಂಧುಗಳನ್ನು ಎದುರು ಹಾಕಿಕೊಂಡರೂ ತಮಗೆ ಎದುರಾದ ಅನೇಕ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಪತಿ ದಾಸರು ಎಷ್ಟು ಮುತುವರ್ಜಿಯಿಂದ ನೋಡಿಕೊಂಡರು ಎನ್ನುವುದನ್ನು ಓದುವಾಗ, "ಸದಾ ನೀನು ಅತೃಪ್ತಳು " ಎಂದು ಪತಿ ದಾಸ್ ರು ಒಂದು ಬಾರಿ ನೊಂದು ಹೇಳುವಾಗ, ಎಲ್ಲೋ ಒಂದು ಕಡೆ ಲೇಖಕಿ ತಮ್ಮ ಆತ್ಮ ಸಾಂಗತ್ಯದ ಹುಡುಕಾಟದ ಭರದಲ್ಲಿ ತಪ್ಪುಗಳನ್ನು ಮಾಡುತ್ತಲೇ ಹೋದರು, ಪತಿಗೆ ಕೊಡಬೇಕಾದ ಪ್ರೀತಿಯ ಸಾಂಗತ್ಯದಿಂದ ಅವರನ್ನು ವಂಚಿಸಿಬಿಟ್ಟರು ಎಂಬ ಅಭಿಪ್ರಾಯ ಕ್ಷಣಕ್ಕಾದರೂ ಕಾಡುತ್ತದೆ. ಈ ಪುಸ್ತಕದಲ್ಲಿ 50 ಅಧ್ಯಾಯಗಳಿವೆ. ಬಹಳಷ್ಟು ವಿಚಾರಗಳು ಮೂಡಿಬಂದಿದ್ದರೂ ಕೆಲವೊಂದು ಕಡೆ ಅಸ್ಪಷ್ಟವಾಗಿ ಗೊಂದಲಮಯವಾದ ಬರಹ ಕಾಣಿಸಿಕೊಳ್ಳುತ್ತದೆ. ಬಹಳಷ್ಟು ಭಾಗ ಅವರ ಅತೃಪ್ತ ದಾಂಪತ್ಯ, ಬೇರೆಯವರೊಂದಿಗೆ ಬೆಸೆದ ಸಂಬಂಧಗಳು, ಅಲ್ಲಿಂದಿಲ್ಲಿ ಕರೆದೊಯ್ದ ಬದುಕಿನ ಮಗ್ಗಲುಗಳು , ಮಕ್ಕಳ ಜವಾಬ್ದಾರಿ, ನಂತರದ ಬರವಣಿಗೆ ಇವುಗಳ ಸುತ್ತ ಹೆಣೆದಿದೆ. ಅನಾರೋಗ್ಯದ ಸಮಯದಲ್ಲಿ ತಮ್ಮ ಹಣದ ಅವಶ್ಯಕತೆಗಾಗಿ ಈ ಆತ್ಮಕಥೆಯನ್ನು ಒಂದು ಪತ್ರಿಕೆಗಾಗಿ ಬರೆದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇದನ್ನು ಬರೆಯುತ್ತಿದ್ದಂತೆ ಅವರು ಮತ್ತಷ್ಟು ಪ್ರಸಿದ್ಧರಾಗುತ್ತಾರೆ. ಪತ್ರಿಕೆ ಅಪಾರ ಜನಪ್ರಿಯತೆಯನ್ನು ಗಳಿಸುತ್ತದೆ . ಕಮಲಾ ದಾಸರ ವರ್ಣರಂಜಿತ ಬದುಕಿನ ಗಾಥೆ ಚಪ್ಪರಿಸುವ ನಾಲಿಗೆಗಳಿಗೆ ಬಹಳ ರುಚಿಕರವಾಗಿ ಕಂಡುಬರುತ್ತದೆ. ಸ್ವಪ್ರಣಯದ, ಕಾಮದ ಬಗೆಗಿನ ಬಿಚ್ಚು ನುಡಿಗಳು ವಾಸ್ತವವಾಗಿ ಜನರ ರಸೇಂದ್ರಿಯಗಳಿಗೆ ಔತಣವಾಗುತ್ತದೆ. ಆದರೆ, ಬಂಧುಗಳ, ಸಂಪ್ರದಾಯಸ್ಥ ಮನೆತನವನ್ನು ಕೆರಳಿಸುತ್ತದೆ. "ಇದು ನನ್ನ ವಾಸ್ತವ ಆತ್ಮಕಥೆ" ಎಂದವರು ಇಲ್ಲಿ ಹೇಳಿಕೊಂಡರೂ ಮುಂದೆ, ಇನ್ನೊಂದು ಸಂದರ್ಭದಲ್ಲಿ "ಇದು ಕಲ್ಪನೆಯ ಕಥೆ. ನಾನು ನನ್ನ ಹಣದ ಅವಶ್ಯಕತೆಗೆ ಹೀಗೆ ಬರೆದೆ " ಎಂದು ಕೂಡ ಒಂದೆಡೆ ಬರೆದು ವಿವಾದಕ್ಕೆ ಸಿಲುಕಿಕೊಂಡರಂತೆ ಎಂದು ಎಲ್ಲೋ ಓದಿದ ನೆನಪು, ಸತ್ಯ ಗೊತ್ತಿಲ್ಲ. ಬದುಕನ್ನು, ಬರಹವನ್ನು ತೀವ್ರತಮ ವೇಗದಲ್ಲಿ ಅಪ್ಪಿಕೊಂಡ ಕಮಲಾದಾಸರು ಪತಿಯನ್ನು, ಮಕ್ಕಳನ್ನು, ಕುಟುಂಬವನ್ನು ಅತಿಯಾಗಿ ಪ್ರೀತಿಸುತ್ತಾ, ಹಾಗೂ ಕೆಲವೊಮ್ಮೆ ದೂರಾಗಿ ಬದುಕುತ್ತಾ, ಬೇರೆ ಬೇರೆ ಆಯಾಮಗಳಲ್ಲಿ ತಮ್ಮ ಕನಸುಗಳನ್ನು ಹುಡುಕುತ್ತಾ, ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಾ, ತಮ್ಮ ಕೊನೆಯ ದಿನಗಳಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಕೇರಳದಲ್ಲಿ ಸಾಕಷ್ಟು ವಿರೋಧ ಕಂಡರು. ಕಡೆಗೆ ಪುಣೆಯಲ್ಲಿ ತಮ್ಮ ಕಡೆಯ ದಿನಗಳನ್ನು ಕಳೆದರು. ಅದ್ಭುತ ಲೇಖಕಿಯಾಗಿ ಇವರ ಬರಹಗಳು ಸಾಕಷ್ಟು ಪುರಸ್ಕಾರಗಳಿಗೆ ಪಾತ್ರರಾಗಿರುವುದು ಇವರ ಗರಿಮೆಯಾಗಿದೆ... ಇವರ ಕೃತಿಗಳಲ್ಲಿ ಹೆಣ್ಣಿನ ನಾನಾ ಘಟ್ಟದ ಲೈಂಗಿಕ ಬಯಕೆ, ಹತ್ತಿಕ್ಕುವ ಸಮಾಜದ ಸ್ವಾಸ್ಥ್ಯ ನಿಯಂತ್ರಣ, , ಅದನ್ನು ಮೆಟ್ಟಿ ನಿರ್ಭಿಡೆಯಾಗಿ ಪೂರೈಸಿಕೊಳ್ಳುವ ವಾಂಛೆಗಳು , ಎದುರಿಸುವ ಅನೇಕ ಸಮಸ್ಯೆಗಳ ಸಿಕ್ಕು ಎಲ್ಲವೂ ವಾಸ್ತವ ಎನ್ನುವುದನ್ನು, "ನನ್ನ ಬದುಕಿನ ರಹಸ್ಯಗಳನ್ನು ಬಯಲಾಗಿಸಿ ನನ್ನನ್ನು ನಾನು ಖಾಲಿ ಮಾಡಿಕೊಂಡು, ಕಾಲ ಬಂದಾಗ ಪರಿಶುದ್ಧ ಅಂತರಂಗ ಹೊತ್ತು ಹೋಗಬೇಕಿತ್ತು " ಎನ್ನುವ ಈ ಪುಸ್ತಕದ ಮುನ್ನುಡಿಯ ಲೇಖಕಿಯ ಮಾತುಗಳು ರುಜು ಮಾಡುತ್ತವೆ. ಓದಿಸಿಕೊಂಡು ಹೋಗುವ ಈ ಪುಸ್ತಕದಲ್ಲಿ ಕೆಲವೊಮ್ಮೆ ಅವರ ಅಂತರಂಗದ ತುಮುಲಗಳನ್ನು ಓದುವಾಗ ಹೃದಯ ಭಾರವಾಗಿ ಅವರೆಡೆಗೆ ಒಂದು ಅನುಕಂಪ ನನ್ನಲ್ಲಿ ಹೊತ್ತಿದ್ದು ನಿಜ. ಇದರಾಚೆ, ಯಾರದೇ ಬದುಕಿನ ಗತಿಗಳನ್ನು ನಾವು ನಮ್ಮ ದೃಷ್ಟಿಕೋನದಿಂದ ಸರಿ-ತಪ್ಪು ಎಂದು ವಿವೇಚಿಸಲು ಸಾಧ್ಯವಿಲ್ಲ. ಅವರವರ ಬದುಕು ಅವರವರು ಕನಸಿದಂತೆ , ತಮ್ಮ ಮನಃಸಾಕ್ಷಿಯಾಗಿ ಬದುಕಿ ಬಾಳಿ ಕುರುಹುಗಳನ್ನು ಉಳಿಸಿ ಹೋದಂತೆ...!!!

About the Author

ಪೂರ್ಣಿಮಾ ಭಟ್
(15 February 1963)

ವೈದ್ಯ ಸಾಹಿತಿ, ಕವಯತ್ರಿ ಪೂರ್ಣಿಮಾ ಭಟ್ ಅವರು  ಮೂಲತಃ ಮಂಗಳೂರಿನವರು. ಭ್ರಮೆ (ಕವನ ಸಂಕಲನ), ಹಾಳೆಯಲ್ಲಿ ಜನ್ನ (ವೈದ್ಯಕೀಯ ಕೃತಿ) ಜನ್ಮಾಂತರ (ಅನುವಾದ), ನನ್ನ ಕಥೆ (ಕಮಲಾದಾಸ್ My story ಅನುವಾದ), ಸಾವು ಹೊಸದಲ್ಲ’ ಅವರು ಪ್ರಮುಖ ಕೃತಿಗಳು. ’'ಭ್ರಮೆ' ಕೃತಿಗೆ ಕ.ಸಾ.ಪ. ಬಹುಮಾನ, ಹಾಳೆಯಲ್ಲಿ ಜನ್ಮ ಕೃತಿಗೆ ಮೈ.ವಿ.ವಿ. ಆರ್‌.ಎಲ್. ನರಸಿಂಹಯ್ಯ ಸ್ಮಾರಕ ಬಹುಮಾನ ಪಡೆದಿದ್ದಾರೆ.  ...

READ MORE

Related Books