ಹಾಲಿನ ಬಟ್ಟಲುಗಳಲ್ಲ; ಮಾಂಸದ ಒಟ್ಟಿಲುಗಳಲ್ಲ

Date: 06-09-2022

Location: ಬೆಂಗಳೂರು


ದೇಹದ ಅನುಭವಗಳ ಮೂಲಕವೇ ಅನುಭಾವದ ಸುಳಿಯೊಂದು ಆಳಕ್ಕೆಳೆಯುತ್ತದೆ. ಇಂಥ ಅಲೌಕಿಕ ಅನುಭವಗಳ ಎದೆಯಲ್ಲೇ ನಮ್ಮ ಧರ್ಮ, ಆರಾಧನೆಗಳ ಒಳಜಗತ್ತು ಅರಳಿದೆ ಎನ್ನುತ್ತಾರೆ ಲೇಖಕಿ ಗೀತಾ ವಸಂತ. ಅವರು ತಮ್ಮ ತೆರೆದಷ್ಟೂ ಅರಿವು ಅಂಕಣದಲ್ಲಿ ಬೇಂದ್ರೆಯವರ ಕಾವ್ಯವು ’ಮಾತೃದರ್ಶನದ ಅಖಂಡ ಹಸಿವಿನ ಕಾವ್ಯ’ವಾಗುವ ಬಗೆಯನ್ನು ವಿಶ್ಲೇಷಿಸಿದ್ದಾರೆ.

ಜಗತ್ತಿನ ಸೃಷ್ಟಿಯ ಹಿಂದೆ ಕಾಮವಿದೆ. ಆದರೆ ನಮ್ಮ ದಾರ್ಶನಿಕ ಪರಂಪರೆಗಳು ಅದನ್ನು ದೇಹಕಾಮವಾಗಿ ನೋಡದೇ ಜೀವಕಾಮವಾಗಿ ಗ್ರಹಿಸಿವೆ. ಜೀವಿಗಳಲ್ಲಿ ಸೃಷ್ಟಿಯ ಹಸಿವನ್ನು ಪ್ರಕೃತಿಯೇ ತುಂಬಿರುತ್ತದೆ. ‘ದೇವ ಕಾಮವೇ ದೇಹ ಕಾಮವಾಗಿ’ ರೂಪಾಂತರಗೊಳ್ಳುವ ಪರಿಕಲ್ಪನೆಯನ್ನು ಬೇಂದ್ರೆಯವರ ಮೇಘದೂತವು ಅನನ್ಯವಾಗಿ ಚಿತ್ರಿಸಿದೆ. ದೇಹವನ್ನು ದೈವಿಕ ಅಭಿವ್ಯಕ್ತಿಯ ಮಾಧ್ಯಮವಾಗಿ ಕಾಣುವುದು ಭಾರತೀಯ ಭಕ್ತಿ ಹಾಗೂ ಯೋಗ-ತಂತ್ರ ಪರಂಪರೆಗಳ ದೃಷ್ಟಿ. ಈ ದೃಷ್ಟಿಯ ಉನ್ಮೀಲನವು ಕಾವ್ಯಗಳಲ್ಲಿ ಸಶರೀರವಾಗಿ ಮೈದಾಳಿದೆ. ಮಿಲನದ ಉತ್ಕಟ ಪರಿಭಾಷೆಯು ಭಕ್ತಿಯ ರೂಪ ತಾಳುವುದು, ವಿರಹದ ಭಾವತೀವ್ರತೆಯು ಯೌಗಿಕ ಐಕ್ಯದ ಸಂಕೇತವಾಗಿ ರೂಪುಗೊಳ್ಳುವುದು ನಮ್ಮಲ್ಲಿ ಸಾಮಾನ್ಯ. ಸೌಂದರ್ಯ ಲಹರಿಯಂತಹ ಸ್ತೋತ್ರಕಾವ್ಯಗಳಲ್ಲೂ ವಿಶ್ವದ ಅಗಾಧ ಸೌಂದರ್ಯವು ಸ್ತ್ರೀ ಸೌಂದರ್ಯದ ಪರಿಭಾಷೆಯಲ್ಲಿ ಅರಳಿರುವುದು ಕುತೂಹಲಕರ. ಸೌಂದರ್ಯವು ಕೆಣಕುವ, ಕೆರಳಿಸುವ ಪ್ರಾಣ ವ್ಯಾಪಾರದಿಂದಾಚೆ ಬೆಳೆದು ಚಿತ್ತವನ್ನು ಅರಳಿಸುವ ದರ್ಶನವಾಗುವುದು ಘನವಾದ ಆಯಾಮ. ವಿಶ್ವಕ್ಕೊಂದು ಭೌತಿಕ ಸ್ವರೂಪವಿದೆ. ಹಾಗೆಯೇ ಆಂತರಿಕ ಚೈತನ್ಯವಿದೆ. ಆ ಚೈತನ್ಯವು ಸಲಹುವ ಮಾತೃಭಾವವೂ ಹೌದು, ಲಯಕಾರಕವಾದ ಸ್ಫೋಟಕ ಶಕ್ತಿಯೂ ಹೌದು. ಆದ್ದರಿಂದಲೇ ಮಾತೃದೇವತೆಗಳ ಸ್ವರೂಪವು ಲಲಿತೆ, ಮಹಾತ್ರಿಪುರಸುಂದರಿಯಾಗಿ ಮೂಡುವಂತೆ, ದುರ್ಗೆ, ಕಾಳಿಯರ ರೂಪವೂ ಜನಾಂಗದ ಚಿತ್ತಭಿತ್ತಿಯಲ್ಲಿ ಮೂಡಿದೆ. ಶಕ್ತಿಯನ್ನು ಜಗದ ಮಾತೆಯಾಗಿ ಕಾಣುವಾಗ ಸೃಷ್ಟಿಯ ಎಲ್ಲ ವಿಲಾಸಗಳೂ ವಾತ್ಸಲ್ಯದ ಅಭಿವ್ಯಕ್ತಿಯಾಗಿ ತೋರುತ್ತದೆ. ತಾಯಿಯೊಡನೆ ಅವಿನಾಭಾವದಿಂದ ಬೆಸೆದ ಬೇಂದ್ರೆಯವರ ಪ್ರಜ್ಞೆಯು ತಾಯಿಯ ಮೊಲೆಗಳನ್ನು ವರ್ಣಿಸುವಾಗ ನಮ್ಮ ನೋಟದ ಮಿತಿಗಳು ಅರಿವಿಲ್ಲದಂತೆ ಹಿಗ್ಗುತ್ತವೆ.

ಕನ್ನಡದ ಅನನ್ಯಕವಿ ಬೇಂದ್ರೆಯವರ ಕಾವ್ಯವು ಮಾತೃದರ್ಶನದ ಅಖಂಡ ಹಸಿವಿನ ಕಾವ್ಯವಾಗಿ ತೋರುತ್ತದೆ. ಸೃಷ್ಟಿಮೂಲದ ಅಗಾಧ ಶಕ್ತಿಯನ್ನು ಸ್ತ್ರೀತ್ವದ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಬೇಂದ್ರೆ ಭಾರತದ ತಾಯಿಪಂಥಗಳ ದಾರ್ಶನಿಕ ಅಭಿವ್ಯಕ್ತಿಯ ಸೊಲ್ಲಾಗಿ ನಮ್ಮೊಳಗೆ ಇಳಿಯುತ್ತಾರೆ. ಆದ್ದರಿಂದಲೇ ಅವರ ಕಾವ್ಯವು ಕಟ್ಟಿದ ಕಾವ್ಯವಾಗಿ ತೋರದೇ ಅನುಭಾವಿಕ ಸ್ಪಂದನವಾಗಿ ತಾಕುತ್ತದೆ. ಸಾಂಖ್ಯದರ್ಶನ ಹಾಗೂ ಶಾಕ್ತ ಪರಂಪರೆಯ ಅನನ್ಯ ಸಾಮರಸ್ಯದಲ್ಲಿ ಅವರ ಕಾವ್ಯವು ಕುಡಿಯೊಡೆದಿದೆ. ಸಾಂಖ್ಯದರ್ಶನವು ಭಾರತೀಯ ದರ್ಶನಗಳಲ್ಲಿ ಅತ್ಯಂತ ಪ್ರಾಚೀನವೂ ಮಹತ್ವಪೂರ್ಣವೂ ಆಗಿದೆ. ವಿಶ್ವದುತ್ಪತ್ತಿ ಹಾಗೂ ವಿಕಾಸ ಕ್ರಮವನ್ನು ಸಾಂಖ್ಯರು ವಿವರಿಸುವುದು ಪ್ರಕೃತಿ ಹಾಗೂ ಪುರುಷ ತತ್ವಗಳ ಮೂಲಕ. ಪ್ರಕೃತಿ ತತ್ವವು ಸದಾ ಕ್ರಿಯಾಶೀಲವಾಗಿದ್ದು, ಅಪಾರ ಶಕ್ತಿಯ ಭಂಡಾರವಾದ್ದರಿಂದ ‘ಶಕ್ತಿ’ ಎನಿಸಿಕೊಂಡಿದೆ. ಪ್ರಕೃತಿಯು ಅಕಾರಣ, ಸ್ವತಂತ್ರ, ಏಕ, ಶಾಶ್ವತ. ಅದಕ್ಕೆ ಉತ್ಪತ್ತಿ ಹಾಗೂ ನಾಶಗಳಿಲ್ಲ. ಪುರುಷ ತತ್ವದ ಸಂಯೋಗವು ಸೃಷ್ಟಿಯ ಪ್ರಕಟೀಕರಣಕ್ಕೆ ಕಾರಣವಾಗುತ್ತದೆಂಬುದು ಸಾಂಖ್ಯರ ನಿಲುವು. ಮೈವೆತ್ತ ವ್ಯಕ್ತ ಸೃಷ್ಟಿಯ ಅಗಾಧ ಚೆಲುವನ್ನು ಆರಾಧಿಸುವ ಶಾಕ್ತ ಪರಂಪರೆಯೂ ಸ್ತ್ರೀತ್ವದ ಅಂತಃಸತ್ವವನ್ನೇ ಪ್ರಧಾನವಾಗಿಸಿಕೊಂಡಿದೆ. ಯಾವ ಜೀವಮೂಲದಿಂದ ನಾವು ಆಗಿದ್ದೇವೆಯೋ ಆ ಸೃಷ್ಟಿಜಾಲಕ್ಕೆ ತಾಯ್ತನದ ಸಂಜ್ಞೆಯನ್ನು ಈ ಪರಂಪರೆಗಳು ನಿರ್ಮಿಸಿಕೊಂಡಿವೆ. ಈ ಮೂಲದಿಂದ ವ್ಯಕ್ತಿ ಪ್ರಜ್ಞೆಯು ಬೇರೆಯೆಂಬುದನ್ನು ಸ್ಥಾಪಿಸಲು ಹೊರಟಾಗ ಅಸ್ತಿತ್ವವಾದವು ಮೈದಳೆಯುತ್ತದೆ. ಆದರೆ ಭಾರತೀಯ ಚಿಂತನಾಧಾರೆಗಳು ಮೂಲದೊಂದಿಗೆ ಅಭೇದಗೊಳ್ಳುವ, ತಾದಾತ್ಮ್ಯಹೊಂದುವ ಆದಿಮ ಚಿಂತನೆಗೆ ಹತ್ತಿರವಾಗಿವೆ. ತಾಯಿ ಮಗುವಿನ ಸಂಬಂಧದ ಮೂಲಕ ಈ ಚಿಂತನೆಯನ್ನು ಮೂರ್ತೀಕರಿಸುವುದು ನಮ್ಮ ಪರಂಪರೆಯ ಚೆಲುವು.

ಅಂಬಿಕಾತನಯದತ್ತನೆಂದು ಬೇಂದ್ರೆ ತಮ್ಮನ್ನು ಗುರುತಿಸಿಕೊಂಡಿರುವುದರ ಹಿಂದೆ ಇಂಥ ತಾತ್ವಿಕ ಗಹನತೆಯಿದೆ. ತಾನು ‘ಅಂಬಿಕಾತನಯ’ನೆಂಬುದೇ ಅವರಿಗಾದ ಸಾಕ್ಷಾತ್ಕಾರ. ತನ್ನ ಜನ್ಮವೇ ಮಾತೃವಾತ್ಸಲ್ಯದ ಧಾರೆಯ ಹುಡುಕಾಟ ಎಂಬ ಭಾವ ಅವರದು. ತಾಯಿಯ ಗರ್ಭದಲ್ಲಿ ಕರುಳಬಳ್ಳಿಗಂಟಿಕೊಂಡು ರಕ್ತಮಾಂಸಗಳನ್ನುಳ್ಳ ಜೀವ ಅರಳುತ್ತದೆ. ಆ ಮೂಲಸ್ಥಿತಿಯಲ್ಲಿ ಎರಡೂ ಜೀವಗಳು ಅಭೇದವಾಗಿರುತ್ತವೆ. ಮುಂದೆ ಕರುಳಬಳ್ಳಿಕಳಚಿ ಸ್ವತಂತ್ರಗೊಂಡ ಜೀವ ತಾಯಿಯ ಸಂಬಂಧದ ಭಾವವಲಯದಿಂದ ಮುಕ್ತಗೊಳ್ಳುವದಿಲ್ಲ. ಮುಂದೆ ಮೊಲೆಹಾಲಿನ ಜೀವಪೋಷಣೆಯಲ್ಲಿ ವಿಕಸಿಸುವ ದೇಹವು ತಾಯಿಯ ಸ್ಮೃತಿಗಳಿಗೆ ಅಂಟಿಕೊಂಡೇ ಬೆಳೆಯುತ್ತದೆ. ನಂತರ ಸಾವಿನಲ್ಲೂ ಮತ್ತೆ ಮೂಲಕ್ಕೇ ಮರಳುತ್ತದೆ. ಹೀಗೆ ನೋಡಿದರೆ ಸಾವೆಂದರೆ ತಾಯಗರ್ಭದಲ್ಲಿ ಮತ್ತೆ ಹುದುಗುವುದು!. ಈ ಮಾತೃಶಕ್ತಿಯ ಮಿಥ್ ಬೇಂದ್ರೆಯವರ ವೈಚಾರಿಕ ಆಕೃತಿಯ ರೂಪಣೆಗೆ ಪ್ರೇರಣೆಯಾಗಿದೆ. ತನ್ನ ಜನ್ಮವೇ ಮಾತೃವಾತ್ಸಲ್ಯಧಾರೆಯ ಹುಡುಕಾಟ ಎಂಬ ಭಾವಬಿಂಬ ‘ಅಂಬಿಕಾತನಯದತ್ತ’ ಕವಿತೆಯಲ್ಲಿದೆ.

ಯಾವ ಯೋಗನಿದ್ರೆಯಲ್ಲಿ ಏನು ಕನಸ ಕಂಡೆನೋ
ಯಾವ ಹಾಲನುಂಡೆನೋ
ಈ ವಿಶ್ವಜಾಲದಲ್ಲಿ ಬಂದೆ ಅದಕೆ ಮಿಡುಕುತ
ಅದರ ಧಾರೆ ಹುಡುಕುತ

ಈ ಜೀವ ದೇಹಗಳ ನೆರಳು ಬೆಳಕಿನ ಆಟ ಬೇಂದ್ರೆಯವರ ಜಾಗೃತ, ಸ್ವಪ್ನ, ಸುಷುಪ್ತಿ ಹಾಗೂ ತುರೀಯ ಅವಸ್ಥೆಗಳನ್ನೆಲ್ಲ ಬೆಸೆದು ಮಾತಾಗಿದೆ. ಅದಕ್ಕೇ ಅವರಿಗೆ ಮಾತು ಬೇರೆಯಲ್ಲ, ‘ಮಾತೆ’ ಬೇರೆಯಲ್ಲ. ಮಾತೃಧಾರೆಯೆಡೆಗಿನ ಪ್ರೇಮ ಹಾಗೂ ಭಕ್ತಿಗಳ ಅಭಿನ್ನ ನೆಲೆಯೊಂದು ಅವರ ನುಡಿಯ ಹಿಂದಿದ್ದು ಸದಾ ನಮ್ಮನ್ನು ಚಕಿತಗೊಳಿಸುತ್ತದೆ.

ಲಲನಾ ಚಕ್ರದಾಚಿ ತೊರಿತಿತ್ತು ಲಲಿತೆಯ ಮೊಲೀ
ಶ್ರೀಕೃಷ್ಣನ ಗ್ವಾದಲಿ, ಹತ್ತದಣ್ಣಾ ಅದರಾ ನೆಲೀ

ಶಂಕರಾಚಾರ್ಯರ ‘ಲಲಿತಾಸಹದ್ರ’ದ ಉಪಾಸನೆ ಮಾಡುತ್ತಿದ್ದ ಬೇಂದ್ರೆಯವರಿಗೆ ದೇವಿ ಲಲಿತೆಯು ಒಳಗನ್ನು ಉದ್ದೀಪಿಸುವ ಶ್ರುತಿಯಾಗಿ ತೋರುತ್ತಾಳೆ. ಕರುವಿಗೆ ಮೊಲೆಯಿಂದ ಹಾಲು ಸೃವಿಸುವ ಹಸುವಿನಂತೆ ಅರಿವಿನ ಧಾರೆಯನ್ನು ಅಂತರಂಗಕ್ಕೆ ಊಡುವ ಪ್ರತಿಮೆಯಿದು. ಲಲಿತೆಯನ್ನು ಮೊಲೆಯ ಆಕೃತಿಯ ಮೂಲಕ ಆರಾಧಿಸುವ ಕ್ರಮ ಬೇಂದ್ರೆ ಪರಂಪರೆಯಲ್ಲಿದೆ. ಯಾವುದೇ ಸಿದ್ದಗ್ರಹಿಕೆಗಳಿಗೂ, ಜ್ಞಾನದ ಅಧಿಕಾರಕ್ಕೂ ನಿಲುಕದ ಸ್ವಾಯತ್ತ ನೆಲೆಯೊಂದನ್ನು ಈ ಮೊಲೆಹಾಲು ಪ್ರತಿನಿಧಿಸುತ್ತದೆ.

ಇಂಥ ತಾತ್ವಿಕ ಗ್ರಹಿಕೆಗಳಿಗೂ ನಮ್ಮ ವಾಸ್ತವದ ಬದುಕಿಗೂ ಸಂಬಂಧವೇನೆಂಬ ಪ್ರಶ್ನೆಗಳನ್ನು ನಾವು ಸದಾ ಕೇಳಿಕೊಳ್ಳುತ್ತೇವೆ. ಲೌಕಿಕ ನೆಲೆಯಲ್ಲಿ ಹೆಣ್ಣು ದೇಹವು ಭೋಗಸಾಮಗ್ರಿಯೆಂಬಂತೆ ಗ್ರಹಿಸಲ್ಪಡುತ್ತಿದೆ. ಜೀವಪೋಷಣೆಗಾಗಿಯೇ ವಿಕಾಸಗೊಂಡಿರುವ ಮೊಲೆಗಳು ದೇಹವಾಂಛೆಯ ನೆಲೆಯಲ್ಲಿ ಅಶ್ಲೀಲವೆಂಬಂತೆ ಕಾಣಿಸುತ್ತವೆ. ಹಾಲುಣಿಸುವ ಕ್ರಿಯೆಯಲ್ಲಿರುವ ಪರವಶತೆಯಲ್ಲಿ ಧ್ಯಾನದ ಪರಾಕಾಷ್ಠೆಗೇನೂ ಕಡಿಮೆಯಲ್ಲ. ದೇಹವನ್ನು ಸದಾ ಮುಚ್ಚಿಡಬೇಕಾದ, ಆ ಕಾರಣಕ್ಕಾಗಿ ಕಸಿವಿಸಿ ಅನುಭವಿಸಬೇಕಾದ ವಾಸ್ತವಕ್ಕೆ ಎದುರಾಗಿ ಸ್ತ್ರೀದೇಹ ಸೌಷ್ಠವವನ್ನು ಇಡೀ ಸೃಷ್ಟಿಯ ಸ್ವರೂಪದ ಅಭಿವ್ಯಕ್ತಿಯಾಗಿ ಕಾಣುವ ಕಣ್ಣು ನಮಗಿಲ್ಲಿ ತೆರೆಯುತ್ತದೆ. ನಮ್ಮ ಲೌಕಿಕ ದೃಷ್ಟಿಯ ವಿಭಜನೆಗಳಾದ ಗರತಿ, ಸೂಳೆ ಎಂಬೆಲ್ಲ ಭೇದಗಳೂ ಆ ತಾಯಿಯೆಂಬ ಬಿಂಬದಲ್ಲಿಯೇ ಒಂದಾಗುವಂತೆ ಮಾಡುವ ದಾರ್ಶನಿಕ ಎತ್ತರಕ್ಕೆ ನಮ್ಮನ್ನು ಅವರ ಕಾವ್ಯವು ಜೀಕುತ್ತದೆ. ದೇಹದ ಮೂಲಕವೇ ಪ್ರಕಟಗೊಳ್ಳುವ ಹಾಗೂ ಪೋಷಿಸಲ್ಪಡುವ ವ್ಯಕ್ತ ಜಗತ್ತು ಆ ತಾಯಿಯದೇ ಕೊಡುಗೆ ಎಂಬ ಭಾವವು ಹೆಣ್ಣು ದೇಹಕ್ಕೆ ಘನತೆಯನ್ನು ತಂದುಕೊಡುತ್ತದೆ. ಕಾಮದ ಕಣ್ಣಿನಿಂದ ಕಂಡಾಗ ಮಾಂಸದ ಮುದ್ದೆಗಳಂತೆ ತೋರುವ ಅದೇ ಮೊಲೆಗಳು ತಮ್ಮ ಜೈವಿಕ ಪರಿವೇಷವನ್ನು ದಾಟಿ ಅಗಾಧವಾಗಿ ಬೆಳೆಯುವ ವಿಸ್ಮಯ ಅವರ ‘ಮೊಲೆ’ ಎಂಬ ಕವಿತೆಯಲ್ಲಿದೆ.

ಗೋಪಿಕೆಯರ ನಡುವೆಯೇ ಬೆಳೆದ ಬಾಲಗೋಪಾಲ ಗೋದಲೆಗೆ( ಆಕಳು ಕಟ್ಟುವ ಸ್ಥಳ) ಹತ್ತಿರಾದವನು. ಈ ಗೋದಲೆ ಏಕಕಾಲಕ್ಕೆ ಕಪಿಲೆ ಕಾಮಧೇನುಗಳು ಕರೆವ ಕೊಟ್ಟಿಗೆಯೂ ಹೌದು, ವಿಶ್ವವನ್ನೇ ಪೊರೆಯುವ ವಾತ್ಸಲ್ಯಶಕ್ತಿಯ ಕೇಂದ್ರವೂ ಹೌದು. ಮೊಲೆಯನ್ನು ಇಂಥ ಜೀವಕೇಂದ್ರವಾಗಿ ಕಾಣುವ ದೃಷ್ಟಿಯನ್ನು ಕವಿತೆ ಹಿಗ್ಗಿಸುತ್ತಾ ಹೋಗುತ್ತದೆ. ಗಂಗೆಗೆ ಉಣಿಸುವ ಹಿಮಾಲಯದ ಉನ್ನತ ಶಿಖರಗಳ ದಿವ್ಯತೆಗೂ ಇದೇ ಮೊಲೆಗಳು ಸಂಕೇತವಾಗುತ್ತವೆ. ಪರ್ವತಗಳನ್ನು ಸ್ತನಮಂಡಲಗಳಾಗಿಯೂ ಅಲ್ಲಿ ಜಿನುಗುವ ನದಿಗಳನ್ನು ಸ್ತನ್ಯವಾಗಿಯೂ ಕಾಣುವ ದೃಷ್ಟಿಯು ಇಡೀ ಭೂಮಂಡಲದ ಪರಿಸರವನ್ನೇ ಪೊರೆಯುವ ಸ್ತ್ರೀಭಾವವಾಗಿ ಕಾಣುತ್ತದೆ.

ವಾತ್ಸಲ್ಯದ ವಿಜಯಯಾತ್ರೆಯಲ್ಲಿ
ನನ್ನ ಕಂದನೂದುವ ಅವಳಿ ಶಂಖಗಳಿವು
ಅವನಿಗೇನು ಕಡಿಮೆ?

ಕಯ್ಯಲ್ಲಿ ಮೊಲೆಗಳನ್ನು ಹಿಡಿದು ಕಣ್ಣುಮುಚ್ಚಿ ಹೀರುವ ಮಗುವಿನ ಚಿತ್ರವು ಬೇಂದ್ರೆಯವರಿಗೆ ಜೋಡು ಶಂಖಗಳನ್ನೂದುವ ವೀರಸಾಹಸಿಯ ಚಿತ್ರವನ್ನು ನೆನಪಿಸುತ್ತವೆ. ಈತ ಯುದ್ದವೀರನಲ್ಲ, ವಾತ್ಸಲ್ಯಯಾತ್ರೆಯ ಗೆಲುವುಂಡವನು!. ತಾಯಿಮಗುವಿನ ಸಂಬಂಧದ ಹಸಿಹಸಿತನವನ್ನೂ, ಅಲೌಕಿಕ ಚೆಲುವನ್ನೂ ಕವಿತೆಯು ಒಟ್ಟೊಟ್ಟಿಗೆ ಹೊಮ್ಮಿಸುತ್ತದೆ. ಮೊಲೆಯುಣಿಸುವ ತಾಯಿಯ ಭಾವ ಹಾಗೂ ಮೊಲೆಯುಣ್ಣುವ ಮಗುವಿನ ಭಾವ ಇವೆರಡೂ ಬೆರೆಯುವ ವಿಶಿಷ್ಟ ಅನುಭೂತಿಯೊಂದು ನಮ್ಮನ್ನು ಚಕಿತಗೊಳಿಸುತ್ತದೆ. ದೇಹದ ಅನುಭವಗಳ ಮೂಲಕವೇ ಅನುಭಾವದ ಸುಳಿಯೊಂದು ಆಳಕ್ಕೆಳೆಯುತ್ತದೆ. ಇಂಥ ಅಲೌಕಿಕ ಅನುಭವಗಳ ಎದೆಯಲ್ಲೇ ನಮ್ಮ ಧರ್ಮ, ಆರಾಧನೆಗಳ ಒಳಜಗತ್ತು ಅರಳಿದೆ. ಕವಿತೆಯಲ್ಲಿ ಅವೇ ಮಾಂಸಲ ಮೊಲೆಗಳು ಎಲ್ಲರ ತಾಯಿಯಾದ ನಲ್ಲಮ್ಮನ ಗುಡಿಯ ಜೋಡುಕಳಸಗಳಾಗಿಯೂ ಕಾಣಿಸುತ್ತವೆ.

ಹಾಲಿನ ಬಟ್ಟಲುಗಳಲ್ಲ ಮಾಂಸದ ಒಟ್ಟಲುಗಳಲ್ಲ
ಜಗದಂಬೆ ಜೀವಶಿಶುವನ್ನು ಮಲಗಿಸಿ ತೂಗುವ
ತೊಟ್ಟಿಲ ಕಾಲುಗಳಿವು ಅವನಿಗೇನು ಕಡಿಮೆ?

ಮೊಲೆತೊಟ್ಟಿನಾಕಾರದ ತೊಟ್ಟಿಲ ಕಾಲುಗಳನ್ನು ನೆನಪಿಸಿ ಆ ಸ್ಮೃತಿಯಲ್ಲಿ ಇಡೀ ಜಗತ್ತನ್ನು ಇಟ್ಟು ತೂಗುವ ಬೆರಗಿಗೆ ಕವಿತೆಯು ನಮ್ಮನ್ನು ದೂಡುತ್ತದೆ. ಶಿಶುವಿಗೆ ತೊಟ್ಟಿಲೇ ಬ್ರಹ್ಮಾಂಡ. ಆ ಸ್ಮೃತಿಗಳು ನಮ್ಮ ಅಪ್ರಜ್ಞಾಸ್ಥಿತಿಯಲ್ಲಿ ದಾಖಲಾಗಿರುತ್ತವೆ. ಅದು ನಾವಿನ್ನೂ ಸಮಾಜದ ರಚನೆಗಳಿಗೆ ಒಡ್ಡಿಕೊಂಡಿರದ ಮೂಲಸ್ಥಿತಿ. ಜಗದಂಬೆ ಹಾಗೂ ಜೀವಶಿಶುವಿನ ಸಂಬಂಧದ ಮಹಾಗಾಥೆಯನ್ನು ‘ಮೊಲೆ’ ಕವಿತೆಯು ಅಣುರೂಪದಲ್ಲಿಟ್ಟುಬಿಡುತ್ತದೆ. ದೇಹಕ್ಕಂಟಿದ ಕಾಮವನ್ನು ಕಳಚಿ ದೇಹವನ್ನು ಅದರ ಘನತೆಯಲ್ಲಿ ಕಾಣುವ ದೃಷ್ಟಿಯ ಉನ್ಮೀಲನಕ್ಕೆ ಕಾರಣವಾಗುತ್ತದೆ.

-ಗೀತಾ ವಸಂತ

ಈ ಅಂಕಣದ ಹಿಂದಿನ ಬರೆಹಗಳು:
ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ’
ಜಗದ ಜ್ವರಕ್ಕೆ ಎದೆಹಾಲ ಔಷಧ: ‘ಸಮಗಾರ ಭೀಮವ್ವ’

ಆಳವಾಗಿ ಕದಲಿಸುವ ‘ಬೀಜ’ಪ್ರಶ್ನೆಗಳು
ಸ್ತ್ರೀಲೋಕ
ಮಹಿಳಾ ಆತ್ಮಕಥೆಗಳೆಂಬ ಅಂತರಂಗದ ಪುಟಗಳು
ನಾದದ ನದಿಯೊಂದು ನಡೆದ್ಹಾಂಗ
ನದಿಗೆ ನೆನಪಿನ ಹಂಗಿಲ್ಲ
ಶಬ್ದದೊಳಗಿನ ನಿಶ್ಯಬ್ದವನ್ನು ಸ್ಫೋಟಿಸುವ ಕಥನ
ಮೊಲೆ ಮುಡಿಗಳ ಹಂಗು
ನೆಲದಕಣ್ಣಿನ ಕಾರುಣ್ಯ: ನೋವೂ ಒಂದು ಹೃದ್ಯ ಕಾವ್ಯ
ಫಣಿಯಮ್ಮ ಎಂಬ ಹೊಸ ಪುರಾಣ:
‘ಹಾರುವ ಹಕ್ಕಿ ಮತ್ತು ಇರುವೆ...’ ಅನನ್ಯ ನೋಟ
ಹೊತ್ತು ಗೊತ್ತಿಲ್ಲದ ಕಥೆಗಳು
ಹೊಳೆಮಕ್ಕಳು : ಅರಿವಿನ ಅಖಂಡತೆಗೆ ತೆಕ್ಕೆಹಾಯುವ ಕಥನ
ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು
ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...
ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ
ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ
ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ
ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ
ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ
ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ
ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...