ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ

Date: 26-09-2022

Location: ಬೆಂಗಳೂರು


ಶತಮಾನಗಳಿಂದ ಅಸ್ಪೃಶ್ಯಳಾದ, ಅದೃಶ್ಯಳಾದ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಸರಿಸಮಾನವಾದ ಸ್ಥಾನ-ಮಾನಗಳನ್ನು ನೀಡಿದ್ದಾರೆ. 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ವಚನಚಳವಳಿ ಮಹಿಳಾ ವಿಮೋಚನೆಯ ದೃಷ್ಟಿಯಿಂದ ಇಡೀ ಜಗತ್ತಿಗೆ ಮಾದರಿಯಾಗಿದೆಯೆಂಬುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಲಿಂಗಸಮಾನತೆ ವಚನಕಾಲದಲ್ಲಿ ಸಾಧ್ಯವಾದ ಬಗೆಯನ್ನು ಚರ್ಚಿಸಿದ್ದಾರೆ.

ಈ ಸಮಾಜವ್ಯವಸ್ಥೆಯಲ್ಲಿ ವರ್ಣ-ವರ್ಗಗಳ ಅಸಮಾನತೆಯಿಂದ ಅಸ್ಪøಶ್ಯರು-ಬಡವರು ಶೋಷಣೆಗೊಳಗಾಗಿದ್ದರೆ ಲಿಂಗರಾಜಕಾರಣದಿಂದ ಮಹಿಳೆಯರು ಶೋಷಣೆಗೊಳಗಾಗಿದ್ದರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಂತಹ ತಾರತಮ್ಯವನ್ನು ಸಹಿಸದೆ ಬಂಡಾಯವೆದ್ದರು, ಚಳವಳಿ ಮಾಡಿದರು. ಭೋಗದ ವಸ್ತುವಾಗಿದ್ದ, ಸರಕಾಗಿ ಉಪಯೋಗಿಸಲ್ಪಡುತ್ತಿದ್ದ, ಸ್ತ್ರೀಯನ್ನು ಶೋಷಣೆಯಿಂದ ತಪ್ಪಿಸಲು ಚಳವಳಿ ಮಾಡಿದರು. ಹೆಣ್ಣನ್ನು ರಕ್ಕಸಿಯೆಂದು ಹೀಗಳೆಯುತ್ತಿದ್ದಂತೆ; ಆಕೆ ಅಪಶಕುನವಾಗಿದ್ದಾಳೆಂದು ಅವಮಾನಿಸುತ್ತಿದ್ದರು.

12ನೇ ಶತಮಾನದಲ್ಲಿ ಸ್ತ್ರೀಸಮಾನತೆಗಾಗಿ ಮೊಟ್ಟಮೊದಲು ಹೋರಾಟ, ನಡೆಸಿದವರು ಶರಣರು. ವರ್ಣವ್ಯವಸ್ಥೆಯಲ್ಲಿ ಅಸ್ಪೃಶ್ಯರಿಗೆ ಅನ್ಯಾಯವಾದರೆ, ವರ್ಗವ್ಯವಸ್ಥೆಯಲ್ಲಿ ಬಡವರಿಗೆ ಶೋಷಣೆಯಾಗಿದೆ, ಆದರೆ ಲಿಂಗರಾಜಕೀಯದ ವ್ಯವಸ್ಥೆಯಲ್ಲಿ ಎಲ್ಲ ಜಾತಿ-ವರ್ಗಗಳಲ್ಲಿ ಬರುವ ಮಹಿಳೆಯರ ಶೋಷಣೆಯಾಗಿದೆ. ಅಸ್ಪೃಶ್ಯ ಮಹಿಳೆಯ ಶೋಷಣೆ ಒಂದು ರೀತಿಯದಾದರೆ, ಬ್ರಾಹ್ಮಣ ಮಹಿಳೆಯರ ಶೋಷಣೆ ಮತ್ತೊಂದು ರೀತಿಯದು. ಅರಸನಾದವನು ಶೋಷಣೆಯ ಕೇಂದ್ರವಾಗಿದ್ದರೆ, ಅರಸಿಯಾದವಳು ಸ್ವತಃ ಶೋಷಣೆಗೊಳಗಾಗಿದ್ದಳು. ಅಂತೆಯೇ ಶರಣರು “ಅರಸನ ಮನೆಯಲ್ಲಿ ಅರಸಿಯಾಗಿರುವುದಕ್ಕಿಂತ ಭಕ್ತರ ಮನೆಯಲ್ಲಿ ತೊತ್ತಾಗಿರುವುದು ಲೇಸೆಂದು” ಹೇಳಿದ್ದಾರೆ. ಅರಮನೆಯಲ್ಲಿದ್ದ ಅರಸಿಗೂ ಗುಡಿಸಲದಲ್ಲಿದ್ದ ಬಡವಿಗೂ ಶೋಷಣೆಯೆಂಬುದು ತಪ್ಪಿರಲಿಲ್ಲ. ಶೋಷಣೆಯ ಸ್ವರೂಪ ಬೇರೆಯಾಗಿತ್ತೇ ಹೊರತು, ಯಾವ ಮಹಿಳೆಯೂ ಶೋಷಣೆಯಿಂದ ಮುಕ್ತಳಾಗಿರಲಿಲ್ಲ.

ವರ್ಣಹೋರಾಟ, ವರ್ಗಹೋರಾಟದಿಂದ ಸಮಾಜವ್ಯವಸ್ಥೆಯ ಕೆಲವು ಜನರಿಗೆ ಸಮಾನತೆ ದೊರೆತರೆ, ಸ್ತ್ರೀ ಹೋರಾಟದಿಂದ ಸಕಲರಿಗೂ ಸಮಾನತೆ ಸಿಕ್ಕಂತಾಗುತ್ತದೆ. ಈ ದೇಶದ ಅರ್ಧದಷ್ಟು ಜನಸಂಖ್ಯೆಯಲ್ಲಿರುವ ಮಹಿಳೆಯರಿಗೆ ಸಮಾನತೆ ಸಿಕ್ಕರೆ, ಅದು ಇಡೀ ದೇಶಕ್ಕೆ ಸಮಾನತೆ ಸಿಕ್ಕಂತಾಗುತ್ತದೆ. ಶರಣರ ಈ ಹೋರಾಟದ ಫಲವಾಗಿ ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಮ್ಮ, ಕಾಳವ್ವೆ, ಸತ್ಯಕ್ಕ, ಆಯ್ದಕ್ಕಿಲಕ್ಕಮ್ಮರಂತಹ ಎತ್ತರದ ವ್ಯಕ್ತಿತ್ವದ ಮಹತ್ವದ ಶರಣೆಯರು ಬೆಳೆದು ನಿಂತರು.

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ನೀಡಿರುವ ಸ್ಥಾನಮಾನಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿವೆ. ವೇದಕಾಲದಿಂದ ಹಿಡಿದು 12ನೇ ಶತಮಾನದ ವಚನಚಳವಳಿಯ ಅವಧಿಯವರೆಗೆ ಮಹಿಳೆಯ ಬದುಕಿನಲ್ಲಿ ರೀತಿ-ನೀತಿಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದಾಗಿದೆ. ಅನೇಕ ಸಂದರ್ಭಗಳಲ್ಲಿ ಮಹಿಳೆ ಯಜಮಾನಸಂಸ್ಕøತಿಯ ಪ್ರಭುತ್ವದಲ್ಲಿ ಸಿಕ್ಕು ಶೋಷಣೆಗೊಳಗಾಗಿದ್ದಾಳೆ. ಪಶು-ಪ್ರಾಣಿಗಳಿಗಂತಲೂ ಕೀಳಾಗಿ ಕಾಣಲ್ಪಟ್ಟಿದ್ದಾಳೆ. ಮಾತೃಪ್ರಧಾನ ಸಂಸ್ಕøತಿಯಲ್ಲಿ ಮಾತೆಯೆಂದು ಗೌರವ ಹೊಂದಿದ್ದಾಳೆ. ಆದಿಶಕ್ತಿಯೆಂದು ವರ್ಣಿತಳಾಗಿದ್ದಾಳೆ. ದೇವತೆಯೆಂದು ಪೂಜಿಸಲ್ಪಟ್ಟಿದ್ದಾಳೆ.

`ಸ್ತ್ರಿ’ ಎಂಬ ಪದ `ಸೂತ್ರಿ’ `ಸೋತೃ’ ಎಂಬ ಧಾತುವಿನಿಂದ ಬಂದಿದೆ. `ಸೂತ್ರಿ’ ಎಂದರೆ ಹೆರುವ ಪ್ರಾಣಿಯಾಗುತ್ತದೆ. ಹೆಣ್ಣುಪ್ರಾಣಿಗಳಿಗೂ `ಸ್ತ್ರೀ’ ಎಂಬ ಹೆಸರಿದೆ. ಹೀಗೆ ಗರ್ಭದ ಅಸ್ತಿತ್ವದಿಂದಲೇ ವ್ಯಕ್ತಿತ್ವವನ್ನು ಪಡೆದುಕೊಂಡ ಹೆಣ್ಣಿಗೆ ಒಂದು ಸ್ವತಂತ್ರ ಹೆಸರೂ ಕೂಡ ಇಲ್ಲದ್ದನ್ನು ಗಮನಿಸಬಹುದಾಗಿದೆ. ಆದರೆ ಅದೇ `ಪುರುಷ’ ಪದ `ಪುರ’ ಧಾತುವಿನಿಂದ ಕೂಡಿದ್ದು, `ಪುರ’ ಎಂದರೆ ಶ್ರೇಷ್ಠ, ಸ್ವಯಂಪೂರ್ಣ ಎಂಬರ್ಥಗಳಿವೆ. ಹೀಗೆ ಸನಾತನ ಧರ್ಮದಲ್ಲಿ ಮಹಿಳೆಗೆ ಅವಳ ಹೆಸರಿನಿಂದಲೇ ಅಂದರೆ `ಸ್ತ್ರೀ’ ಎಂದು ಕರೆಯುವ ಸಂಬೋಧನೆಯಿಂದಲೇ ಮೋಸ ನಡೆದಿರುವುದು ಗೊತ್ತಾಗುತ್ತದೆ. `ಅಂಗನೆ’ ಎಂಬ ಹೆಸರು ಸನಾತನ ಸಂಸ್ಕೃತಿಯಲ್ಲಿ ಹೆಣ್ಣಿಗೆ ಅನ್ವರ್ಥವಾದ ಹೆಸರಾಗಿದೆ. `ಅಂಗನೆ’ ಎಂದರೆ ದೇಹದವಳು. ದೇಹದವಳೆಂದರೆ ಭೋಗದವಳು. ಹೀಗೆ ಸ್ತ್ರೀ ಪದದಲ್ಲಿ `ಹೆರುವುದರ’ ಮೂಲಕ; `ಅಂಗನೆ’ ಪದದಲ್ಲಿ `ಅಂಗ’ ಅಥವಾ `ಭೋಗ’ದ ಮೂಲಕ ಕರೆಯಿಸಿಕೊಳ್ಳುವ ಮಹಿಳೆಗೆ ಒಂದು ಸ್ವತಂತ್ರ ಹೆಸರು ಕೂಡಾ ಇರದಷ್ಟು ಹೇಯ ಸ್ಥಿತಿಯಿತ್ತೆಂದು ಅನೇಕ ಆಧಾರಗಳಿಂದ ತಿಳಿದುಬರುತ್ತದೆ. ಈ ದೇಶದ ದಲಿತರಂತೆ ಮಹಿಳೆಯನ್ನೂ ಕೂಡ ಅಸ್ಪೃಶ್ಯಳನ್ನಾಗಿ, ಅದೃಶ್ಯಳನ್ನಾಗಿ ಕಾಣಲಾಗಿದೆ. ಅವಳು ಮೈನೆರೆತಾಗ, ಮುಟ್ಟಾದಾಗ, ಹೆತ್ತಾಗ ಅವಳನ್ನು ಅಸ್ಪೃಶ್ಯಳನ್ನಾಗಿ ಮಾಡಿದರೆ, ಅವಳು ವಿಧವೆಯಾದಾಗ `ಅಮಂಗಲೆ’, `ಅಪಶಕುನ’ ಎಂದು ಕರೆದು `ಅದೃಶ್ಯ’ಳನ್ನಾಗಿ ಮಾಡಲಾಗಿದೆ.

ಆದರೆ ಪ್ರಾಚೀನಕಾಲದ ಮಹಿಳೆಯರ ಸ್ಥಾನ-ಮಾನಗಳು ಉನ್ನತ ಮಟ್ಟದವುಗಳಾಗಿದ್ದವೆಂದು ತಿಳಿದುಬರುತ್ತದೆ. ಪ್ರಾರಂಭದಲ್ಲಿ ಮಾತೃಪ್ರಧಾನ ಸಂಸ್ಕೃತಿ ಜಾರಿಯಲ್ಲಿದ್ದಾಗ ಮಹಿಳೆ ಅತ್ಯುನ್ನತವಾದ ಸ್ಥಾನವನ್ನು ಹೊಂದಿದ್ದಳೆಂದು ರಾಹುಲ ಸಾಂಕೃತ್ಯಾಯನನ `ವೋಲ್ಗಾ-ಗಂಗಾ’ ಕೃತಿಯಿಂದ ತಿಳಿದುಬರುತ್ತದೆ. ಯಾವಾಗ ಕೃಷಿಕೆಲಸವನ್ನು ಪುರುಷನು ಮಹಿಳೆಯಿಂದ ಪಡೆದುಕೊಂಡನೋ ಮಾತೃಪ್ರಧಾನ ಸಂಸ್ಕೃತಿ ಹೋಗಿ ಪಿತೃಪ್ರಧಾನ ಸಂಸ್ಕೃತಿ ಜಾರಿಗೆ ಬಂದಿತೋ ಅಂದಿನಿಂದಲೇ ಮಹಿಳಾ ಶೋಷಣೆ ಪ್ರಾರಂಭವಾದುದನ್ನು ಕಾಣಬಹುದಾಗಿದೆ.

ವೇದಕಾಲದ ಸಮಾಜದಲ್ಲಿ ಮಹಿಳೆಯರಿಗೆ ಪುರುಷನ ಸರಿಸಮಾನವಾದ ಸ್ಥಾನಮಾನವಿದ್ದಿತೆಂದು ತಿಳಿದುಬರುತ್ತದೆ. ವೇದಕಾಲದ ಋಷಿಗಳಲ್ಲಿ ಮಹಿಳೆಯರೂ ಇದ್ದುದು ಕಂಡುಬರುತ್ತದೆ. ಯುದ್ಧದಲ್ಲಿ ಕಾದಾಡಿದ ಮಹಿಳೆಯರ ಉದಾಹರಣೆಗಳೂ ದೊರೆಯುತ್ತವೆ. “ವೇದಕಾಲದಲ್ಲಿ ಸ್ತ್ರೀಯರು ಪುರುಷರಂತೆ ಸಾಹಿತ್ಯವನ್ನು ಅಭ್ಯಸಿಸುತ್ತಿದ್ದರು. ಮತ್ತು ಅವರಲ್ಲಿ ಲೋಪಮುದ್ರಾ, ಘೋಷಾ ಮತ್ತು ಸಿಕತಾ ನಿವಾವರಿ ಇವರು ವೈದಿಕ ಸೂಕ್ತ ಕರ್ತೃಗಳ ಮಧ್ಯೆ ಕಾಣಿಸಿಕೊಳ್ಳುತ್ತಾರೆ” ಎಂದು ಶತಪಥ ಬ್ರಾಹ್ಮಣದಲ್ಲಿ ಹೇಳಲಾಗಿದೆ. “ವೇದಕಾಲದ ಸಮಾಜದಲ್ಲಿ ಸ್ತ್ರೀಯರು ತಮ್ಮ ಗಂಡಂದಿರ ಅಥವಾ ಪ್ರೇಮಿಗಳ ಜೊತೆಯಲ್ಲಿ ನಿರಾತಂಕವಾಗಿ ವಿಹರಿಸಬಹುದಾಗಿತ್ತು. ಋಗ್ವೇದದಲ್ಲಿ ಗಾರ್ಗಿ ವಾಚಕ್ನವೀ. ವಡಭಾ ಹಾಗೂ ಸುಲಭಾ ಮೈತ್ರೇಯಿ ಈ ಮೂರು ಬ್ರಹ್ಮಾವಾದಿನಿಯರ ಹೆಸರು ಉಲ್ಲೇಖವಾಗಿದೆ” ಎಂದು ಋಗ್ವೇದದಲ್ಲಿ ಹೇಳಲಾಗಿದೆ.

ಪುರಾಣಕಾಲದ ಸಮಾಜದಲ್ಲಿಯೂ ಮಹಿಳೆಗೆ ಪ್ರಾಮುಖ್ಯತೆ ಇದ್ದುದು ಕಂಡುಬರುತ್ತದೆ. ಋತುಧ್ವಜನ ಪತ್ನಿಯಾದ ಮದಾಲಸಾ ಪುರಾಣಕಾಲದ ಸ್ತ್ರೀಯರಲ್ಲಿ ಅತ್ಯಂತ ಪ್ರಸಿದ್ಧಳೂ, ಪಂಡಿತೆಯೂ ಆಗಿದ್ದಳೆಂದು ಮಾರ್ಕಂಡೇಯ ಪುರಾಣದಲ್ಲಿ ಹೇಳಲಾಗಿದೆ. ಮಹಾಮುನಿವರ್ಯ ಕಪಿಲನ ತಾಯಿ ದೇವಹೂತಿ ಅಸಾಧಾರಣ ಆಧ್ಯಾತ್ಮಿಕ ಸಿದ್ದಿಪಡೆದವಳಾಗಿದ್ದಳೆಂದು ತಿಳಿದುಬರುತ್ತದೆ. ಇನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ ಭವಿಷ್ಯದಲ್ಲಿ ಒಂದು ಹೆಣ್ಣುಮಗುವನ್ನು ಪಡೆಯಬೇಕೆಂಬ ಉತ್ಕಟೇಚ್ಛೆಯಿಂದ ಆಚರಿಸುವ ಒಂದು ಆಚರಣೆಯ ಉಲ್ಲೇಖವಿದೆ.

ಪ್ರಾಚೀನ ಕಾಲದಲ್ಲಿ ಮಹಿಳೆಯರು ಆಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡಿದ್ದರೆಂದು ತಿಳಿದುಬರುತ್ತದೆ. ಮದುವೆಯಾಗದೆ ಆಧ್ಯಾತ್ಮಿಕ ಜೀವನವನ್ನು ಅನುಸರಿಸುವ ಮಹಿಳೆಯರಿಗೆ `ಬ್ರಹ್ಮವಾದಿನಿ’ ಯರೆಂದು ಕರೆಯಲಾಗುತ್ತಿತ್ತೆಂದೂ, ಗೃಹಜೀವನವನ್ನು ಸ್ವೀಕರಿಸಿದ ಮಹಿಳೆಯರಿಗೆ ‘ಸದ್ಯೋವಧು’ಗಳೆಂದು ಕರೆಯುತ್ತಿದ್ದರೆಂದು ಹೇಳಲಾಗಿದೆ. ಅವಿವಾಹಿತ ಹೆಣ್ಣುಮಕ್ಕಳು ಜನ್ಮನೀಡಬಹುದಾಗಿತ್ತೆಂದೂ ಅಂತಹ ಮಕ್ಕಳನ್ನು ಸಮಾಜ ತಿರಸ್ಕರಿಸುತ್ತಿರಲಿಲ್ಲವೆಂದು ತಿಳಿದು ಬರುತ್ತದೆ.

ವಿಧವಾ ವಿವಾಹವು ಪ್ರಾಚೀನ ಭಾರತದಲ್ಲಿ ಪ್ರಚಲಿತವಾಗಿತ್ತೆಂದು ಬೃಹತ್ಸಂಹಿತಾದಲ್ಲಿ ಹೇಳಲಾಗಿದೆ. ಉಪನಿಷತ್‍ಕಾಲದಲ್ಲಿ ಗಾರ್ಗಿ, ಮೈತ್ರೇಯಿ, ಕಾತ್ಯಾಯಿನಿ, ಸುಲಭಾ, ವಡಬಾ, ಪ್ರಾಚಿದೇಯಾ ಈ ಮುಂತಾದ ಮಹಿಳೆಯರು ಸಮಾಜದಲ್ಲಿ ಆಧ್ಯಾತ್ಮದಲ್ಲಿ ಉನ್ನತಸ್ಥಾನ ಹೊಂದಿದ್ದುದು ತಿಳಿದುಬರುತ್ತದೆ.

ಉಪನಿಷತ್ತುಗಳ ಕೊನೆಯ ಭಾಗಗಳಾದ `ಬ್ರಾಹ್ಮಣ’ಗಳಲ್ಲಿ ಮಹಿಳೆಯರ ಸ್ಥಾನಮಾನಗಳು ಕಡೆಗಣಿಸಲ್ಪಟ್ಟ ವಿಷಯ ತಿಳಿದುಬರುತ್ತದೆ. ಈ ಬ್ರಾಹ್ಮಣಗಳಲ್ಲಿ ವ್ಯಕ್ತವಾಗಿರುವ ವಿಚಾರಗಳನ್ನು ಎ.ಬಿ.ಕೇಯಿತ್ ಅವರು ಹೀಗೆ ಹೇಳಿದ್ದಾರೆ. “ಭಾರತದಲ್ಲಿ ಎಂದಿಗೂ ನಾರಿ ಧರ್ಮಗಳಿಂದ ತುಳಿತಕ್ಕೀಡಾಗಿದ್ದಾಳೆ... ಆದರೆ ಬ್ರಾಹ್ಮಣಗಳ ಕಾಲದ ಬ್ರಾಹ್ಮಣರಿಂದ ತಿರಸ್ಕೃತರಾದಷ್ಟು ಬೇರೆ ಯಾರಿಂದಲೂ ಅಲ್ಲ” ಎಂದಿದ್ದಾರೆ. ಸ್ಮೃತಿಕಾಲದಲ್ಲಿ ಮಹಿಳೆಯ ಜೀವನದಲ್ಲಿ ತೀವ್ರ ಬದಲಾವಣೆಗಳಾದುದು ಕಾಣಿಸುತ್ತದೆ. “ನ ಸ್ತ್ರೀ ಸ್ವಾತಂತ್ರಮರ್ಹತೀ” ಎಂದು ಹೇಳಿದ ಸ್ಮೃತಿಕಾರ ಮನು, ಮಹಿಳೆಯರ ಸಾಧನೆ-ಸ್ವಾತಂತ್ರ್ಯಗಳು ಧರ್ಮ ವಿರೋಧವೆಂದು ಸ್ಪಷ್ಟಪಡಿಸಿದ್ದಾನೆ. ಬಾಲ್ಯದಲ್ಲಿ ತಂದೆಯಿಂದ, ಯೌವ್ವನದಲ್ಲಿ ಪತಿಯಿಂದ, ವೃದ್ಧಾಪ್ಯದಲ್ಲಿ ಗಂಡುಮಕ್ಕಳಿಂದ ಸ್ತ್ರೀ ಪೋಷಿಸಲ್ಪಡುತ್ತಾಳೆ. ಹೀಗಾಗಿ ಅವಳಿಗೆ ಸ್ವತಂತ್ರವಾದ ವ್ಯಕ್ತಿತ್ವವೆಂಬುದಿಲ್ಲವೆಂದು ಮನು ವಿವರಿಸಿದ್ದಾನೆ.

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮೂಲಭಯಳಾಗಿದ್ದಳೆಂದು ವಿವರಿಸುವ ಪೋಲಂಕಿ ರಾಮಮೂರ್ತಿಯವರು, ಋಗ್ವೇದದಲ್ಲಿ ಹೆಣ್ಣನ್ನು ಕಿರುಬನ ಹೃದಯದವಳೆಂದು ಕರೆಯಲಾಗಿದೆ. ಐತರೇಯ ಬ್ರಾಹ್ಮಣರಲ್ಲಿ ಹೆಣ್ಣನ್ನು ಹೃದಯ ಭೇದಿಸುವವಳು ಎಂದು ಹೇಳಲಾಗಿದೆ ಎಂದು ವಿಶ್ಲೇಷಿಸಿದ್ದಾರೆ. `ಒಳ್ಳೆಯ ಹೆಂಗಸು ಕೆಟ್ಟ ಗಂಡಿಸಿಗಿಂತ ಕಡೆ’ ಎಂದು ತೈತ್ತರೀಯ ಸಂಹಿತೆ ಹೇಳಿದರೆ, `ಹೆಣ್ಣು ಅಸತ್ಯ’ವೆಂದು ಮೈತ್ರೇಯ ಸಂಹಿತೆ ಸಾರುತ್ತದೆ. `ಹೆಣ್ಣು ಖಡ್ಗದ ಅಲಗಿಗಿಂತ ಹರಿತವಾದವಳು, ಚಂಚಲೆ’ ಎಂದು ವಾಲ್ಮೀಕಿ ಹೇಳಿದರೆ, `ಹೆಣ್ಣು ಎಲ್ಲಾ ಕೆಡುಕಿನ ಮೂಲ’ವೆಂದು ಮಹಾಭಾರತ ವಿವರಿಸುತ್ತದೆ. ಭಗವದ್ಗೀತೆಯಲ್ಲಿ ಹೆಣ್ಣನ್ನು ಪಾಪಿಗಳ, ಗುಲಾಮರ ಸಾಲಿಗೆ ಸೇರಿಸಲಾಗಿದೆಯೆಂದು ಪೋಲಂಕಿಯವರು ಆಧಾರಸಹಿತ ವಿವರಿಸಿದ್ದಾರೆ.

ಹೀಗೆ ವೇದ-ಉಪನಿಷತ್ತು-ಪುರಾಣ-ಬ್ರಾಹ್ಮಣಕ-ಸ್ಮೃತಿಗಳಲ್ಲಿ ಉಲ್ಲೇಖವಾಗಿರುವ ಮಹಿಳೆಯ ಸ್ಥಾನ-ಮಾನಗಳು ನಿರಾಶಾದಾಯಕವಾಗಿವೆ. ಮುಂದೆ ಬಂದ ಜೈನ-ಬೌದ್ಧ ಧರ್ಮಗಳಲ್ಲಿ ಮಹಿಳೆಯ ಸ್ಥಾನಮಾನಗಳು ಸುಧಾರಿಸಿದರೂ ಕೂಡ ಅಷ್ಟೊಂದು ತೃಪ್ತಿಕರವಾಗಿ ಕಾಣುವುದಿಲ್ಲ. ಬೌದ್ಧಧರ್ಮಕ್ಕಿಂತ ತುಸು ಪ್ರಾಚೀನವಾದ ಜೈನಧರ್ಮದಲ್ಲಿ ಶ್ವೇತಾಂಬರರು ಮಹಿಳೆಗೆ ಧರ್ಮದಲ್ಲಿ ಅವಕಾಶ ನೀಡಿದರೆ, ದಿಗಂಬರರು ಅದನ್ನು ನಿರಾಕರಿಸುತ್ತಾರೆ. ಸ್ತ್ರೀ, ಪುರುಷಜನ್ಮ ಪಡೆದು ಬಂದಾಗಲೇ ಆಕೆಗೆ ಮುಕ್ತಿಸಾಧ್ಯವೆಂದು ದಿಗಂಬರರು ಸಾರಿದ್ದಾರೆ. ಸ್ತ್ರೀಗೆ ಈ ಜನ್ಮದಲ್ಲಿ ಮುಕ್ತಿ ಸಾಧ್ಯವಿಲ್ಲವೆಂಬುದಕ್ಕೆ ಅವರು ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ. ಬೌದ್ಧಧರ್ಮ ಮಹಿಳಾ ವಿಮೋಚನೆ ದೃಷ್ಟಿಯಿಂದ ಜೈನಧರ್ಮಕ್ಕಿಂತ ಪ್ರಗತಿಪರವೆನಿಸುತ್ತದೆ. ನಿರ್ವಾಣಸಾಧನೆ ಸ್ತ್ರೀ-ಪುರುಷರಿಬ್ಬರಿಗೂ ಸಾಧ್ಯವೆಂದು ಬುದ್ಧ ಹೇಳಿದ. ಆದರೆ ಪ್ರಾರಂಭದಲ್ಲಿ ತನ್ನ ಸಂಘದಲ್ಲಿ ಸ್ತ್ರೀಯರನ್ನು ಬುದ್ಧ ಸೇರಿಸಿಕೊಳ್ಳಲಿಲ್ಲವೆಂದೂ, ಸ್ತ್ರೀ ಚೇತನದ ಬಗೆಗೆ ಆತನಿಗೆ ಶಂಕೆಯಿದ್ದಿತೆಂದೂ ತಿಳಿದುಬರುತ್ತದೆ. ಬೌದ್ಧಧರ್ಮ ಸ್ತ್ರೀಯರಿಗೆ ಧರ್ಮದೀಕ್ಷೆ-ಸಂಸ್ಕಾರಗಳಂತಹ ಅವಕಾಶಗಳನ್ನು ನೀಡಿದ್ದರೂ ಕೂಡ ಅವರಿಗಾಗಿ ಕೆಲವು ಪ್ರತ್ಯೇಕ ಕಟ್ಟಳೆಗಳನ್ನು ವಿಧಿಸಿದೆ.

ವೇದಕಾಲದಿಂದ ಹಿಡಿದು ವಚನಕಾಲದವರೆಗೆ ಮಹಿಳೆಯರ ಸ್ಥಾನಮಾನಗಳಲ್ಲಿ ಏರಿಳಿತಳಾಗಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಕೇವಲ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಮಹಿಳೆ ಕಡೆಗಣಿಸಲ್ಪಟ್ಟಿದ್ದಾಳೆಂದಲ್ಲ, ಪಾಶ್ಯಾತ್ಯ ಸಂಸ್ಕೃತಿಯ ಅನೇಕ ಸಂದರ್ಭಗಳಲ್ಲಿ ಆಕೆಯನ್ನು ಕಡೆಗಣಿಸಲಾಗಿದೆ. “ಜ್ಞಾನವು ಪುರುಷನ ಗೌರವವನ್ನು ಹೆಚ್ಚಿಸಿದರೆ, ಅಜ್ಞಾನವು ಸ್ತ್ರೀಯರ ಸೌಂದರ್ಯವನ್ನು ಹೆಚ್ಚಿಸುವುದೆಂದು” ಚೀನಿಗಾದೆ ಹೇಳುತ್ತದೆ. “ಸ್ತ್ರೀಯರು ತತ್ವಶಾಸ್ತ್ರವನ್ನೆಂದಿಗೂ ಅಭ್ಯಸಿಸಬಾರದು. ವೈವಾಹಿಕ ನಿಯಮಗಳನ್ನು ಪಾಲಿಸುವುದೇ ಅವರಿಗೆ ಹೆಚ್ಚಿನ ತತ್ವ”ವೆಂದು ಯುರೋಪಿನ ಧರ್ಮಬೋಧಕ ಬೋಧಿಸುತ್ತದೆ. “ಸ್ತ್ರೀಯು ಪುರುಷನಿಗೆ ಏನನ್ನೂ ಕಲಿಸಲಾರಳು. ಜಗತ್ತಿನಲ್ಲಿ ಪಾಪವನ್ನು ತಂದವಳೇ ಹೆಣ್ಣು, ಆದ್ದರಿಂದ ಸ್ತ್ರೀಯರು ಕಠೋರ ನರಕಕ್ಕೆ ಹೋಗುತ್ತಾರೆ. ಅವರ ಮುಕ್ತಿಗೆ ಉಪಾಯವೇ ಇಲ್ಲ” ಎಂದು ಸೇಂಟ್‍ಪಾಲ್ ಹೇಳಿದರೆ “ಸ್ತ್ರೀ ಬುದ್ಧಿವಂತಳಾಗುವುದಕ್ಕೆ ಬಯಸುವುದೇ ಮಹಾಪರಾಧ”ವೆಂದು ಮಾರ್ಟಿನ್ ಲೂಥರ್ ತಿಳಿಸಿದ್ದಾರೆ. ಇಂದಿಗೂ ಕೂಡ ಅನೇಕ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೂಡಾ ಇಲ್ಲದಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ಹೀಗೆ ಶತಮಾನಗಳಿಂದ ಅಸ್ಪೃಶ್ಯಳಾದ, ಅದೃಶ್ಯಳಾದ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಸರಿಸಮಾನವಾದ ಸ್ಥಾನ-ಮಾನಗಳನ್ನು ನೀಡಿದ್ದಾರೆ. 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ವಚನಚಳವಳಿ ಮಹಿಳಾ ವಿಮೋಚನೆಯ ದೃಷ್ಟಿಯಿಂದ ಇಡೀ ಜಗತ್ತಿಗೆ ಮಾದರಿಯಾಗಿದೆಯೆಂಬುದಕ್ಕೆ ಅನೇಕ ಆಧಾರಗಳು ದೊರೆಯುತ್ತವೆ. ಪುರುಷ ವಚನಕಾರರಿಗೆ ಸರಿಸಮವಾಗಿ ವಚನಗಳನ್ನು ರಚಿಸಿದ ಮಹಿಳಾ ವಚನಕಾರರನ್ನು ಗಮನಿಸಿದರೇನೇ ಈ ಮಾತು ಸ್ಪಷ್ಟವಾಗುತ್ತದೆ. ಸಮಾನ ಸಂಸ್ಕೃತಿಗೆ ಮಹತ್ವ ನೀಡಿದ ವಚನಕಾರರು ಮಹಿಳೆಯರಿಗೆ ಅತ್ಯುನ್ನತ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...