ಸುಖದ ಸುತ್ತು…

Date: 13-01-2022

Location: ಬೆಂಗಳೂರು


"ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ" ಹಾಡನ್ನು ಯೌವ್ವನದಲ್ಲಿ ಹಾಡಿ ಅನುಭವಿಸುವ ಬಗೆಗೂ, ನಲ್ವತ್ತು ವಸಂತಗಳನ್ನು ದಾಟಿದ ಮೇಲೆ ಅದೇ ಹಾಡನ್ನು ಗುನುಗಿ ಅನುಭವಿಸುವ ಪರಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಮನುಷ್ಯನ ಬದುಕಿನಲ್ಲಿ ಸುಖದ ಸುತ್ತಾ ನಡೆಯುವ ವಿಚಾರಗಳ ಕುರಿತು ಚರ್ಚಿಸಿದ್ದಾರೆ. 

ಅನ್ ಕಂಪ್ಲೀಟೆಡ್ ಟಾಸ್ಕ್ ಗಳಂತೂ ಇನ್ನಿಲ್ಲದೆ ಕಾಡುತ್ತಿರುವ ಹೊತ್ತಲ್ಲಿ ಹಿಂದಿನ ಬಾಕಿಯನ್ನು ಇಂದು ಚುಕ್ತಾ ಮಾಡುತ್ತಿರುತ್ತೇವೆ. ಅಳಿದುಳಿದದ್ದು, ಉಳಿದಳಿದದ್ದೆಲ್ಲವೂ ಬಗಲಲ್ಲೇ ಕುಳಿತಿರುತ್ತವೆ. ಆದ್ದರಿಂದ ಬೆನ್ನ ಹಿಂದೆ ಬೀಳುವ ಯಾವುದರಿಂದಲೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಬೆಂಬಿಡದ ಬೇತಾಳನಾಗಿ ಕಾಡಿ, ಬೇಡಿ ಅಂತೂ ಬಂದ ಕಾರ್ಯವನ್ನು ಅವುಗಳು ಈ ಜನ್ಮದಲ್ಲಿ ಪೂರೈಸಿಕೊಂಡು ಬಿಡುತ್ತವೆ-‘ಶುಭಂ’- ಕತೆ ಮುಗಿಯಿತು ಎಂದುಕೊಂಡರೆ ತಪ್ಪಾದೀತು. ನಾವೆಣಿಸಿದಷ್ಟು ಬೇಗ ಬದುಕಿನ ಸಿನೆಮಾ ಮುಗಿಯುವುದಿಲ್ಲ. ಕಾರಣ ಪ್ರತಿಯೊಂದು ಬಾಳೂ ಅರ್ಧ ಕಥಾನಕಗಳೇ. 

ಆಯಾ ಬೆನ್ನನ್ನು ನೋಡಲು ಹೇಗೆ ಸಾಧ್ಯವಿಲ್ಲವೋ ಅಂತೇ, ಬೆನ್ನ ಹಿಂದೆ ಬಿದ್ದವುಗಳು, ಬೆನ್ನಿಗೆ ಅಂಟಿಕೊಂಡವುಗಳು ಎಂತೆಂತಹವು ಎನ್ನುವುದನ್ನೂ ನೋಡಲಾಗುವುದಿಲ್ಲ. ಕೊಂಡಿ ಕಳಚಿದ ಬಂಧಗಳು ಮತ್ತೆ ಬೆಸೆದುಕೊಂಡು ಬಿಡುತ್ತವೆ. ಹೊಸೆದು ಬೆಸೆದ ಸಂಬಂಧದ ಕೊಂಡಿಗಳು ಮುರಿದು ಬೀಳುತ್ತವೆ. ಕಟ್ಟಿಕೊಂಡ ಬಂಧಗಳು ನಿರರ್ಥಕವೆನಿಸಿಯೂ ಬಿಡುತ್ತವೆ. ಈ ಎಲ್ಲವೂ ಒಂದೇ ಕೈಯಿಂದ ಎಸೆದು ಒಡೆಯುವ ವಸ್ತು ಅಲ್ಲವೇ ಅಲ್ಲ. ಕೆಲವೊಂದು ಶಾಪಗಳು ವರಗಳಾಗಿ, ಮತ್ತೊಂದಿಷ್ಟು ವರಗಳು ಶಾಪಗಳಾಗುವ ಹೊತ್ತನ್ನು ಜನ್ಮ ಎನ್ನುತ್ತೇವೆ. ಅದನ್ನು ಅನುಭವಿಸುವುದನ್ನು ಕರ್ಮ ಎಂದೂ ಕರೆಯುತ್ತೇವೆ. ವಿಮೋಚನೆಗಾಗಿ ಬಸಿರು ಕಟ್ಟಿ, ಉಸಿರು ಬಿಟ್ಟು, ದೇಹ-ಮನಸ್ಸು ಕಲೆತು ಬೆರೆಯುವುದು ಕೂಡ ಆಯಾ ಜನ್ಮದ ಕರ್ಮಗಳನ್ನು ತೊಳೆದು ಶುಭ್ರವಾಗಿಸಲೆಂದೇ.

ಆಯಾ ವಯಸ್ಸಿನಲ್ಲಿ ಅನುಭವಿಸುವ ಸುಖಗಳಿಗೆ ಅದರದ್ದೇ ಆದ ಭಾವ-ರಾಗ-ರಸಗಳಿರುತ್ತವೆ. ಹರೆಯತನದೊಳಗಿನ ಹೂರಣಗಳು ಮೆರಗನ್ನು ನೀಡುವುದೂ ಇದೆ. ಶಿಖರವೇರುವ ಉಮೇದು, ಕಡಲನ್ನು ದಾಟುವ ಕೆಚ್ಚು ಹರೆಯದಲ್ಲಿ ತುಸು ಹೆಚ್ಚು. ಕಟ್ಟಿ-ಕೆಡವಿ ವಿಕಸಿಸುವ ಕಾರ್ಯಗಳು ನಡೆಯುವ ಶುಭ ಗಳಿಗೆಯೇ ತಾರುಣ್ಯ. ಹೀಗಿರಲು ವಯಸ್ಸು ಉರುಳಿದಂತೆ ಮಾಗುತ್ತೇವೆ ನೋಡಿ, ಆಗ ಸುಖವನ್ನು ಅನುಭವಿಸುವ ರೀತಿಯೂ ಭಿನ್ನವಾಗಿಯೇ ಇರುತ್ತದೆ. ಸುಖವನ್ನು ಅನುಭವಿಸುವುದು ಒಂದು ಕಲೆ ಎಂದೆನಿಸಿ ಬಿಡುವುದು ಕೂಡಾ ಇದೇ ಸಮಯದಲ್ಲಿ. ಆ ಹೊತ್ತಿನಲ್ಲಿ ಬಾಳಿನ ಒಂದಷ್ಟು ಜಂಜಾಟಗಳು ಮುಗಿದಿರುತ್ತವೆ. ಜೊತೆಗೆ ಪಡಕೊಂಡ ಅನುಭವಗಳು ಚಿಂತಿಸುವ ಕ್ರಮವನ್ನು, ನೋಡುವ ದೃಷ್ಟಿಯನ್ನು, ಸವಿಯುವ ರುಚಿಯನ್ನು ಪರಿಪಕ್ವವಾಗಿಸಿಯೂ ಬಿಟ್ಟಿರುತ್ತವೆ. ಸರಿ-ತಪ್ಪು, ಬೇಕು-ಬೇಡಗಳೆಲ್ಲವೂ ಜೊತೆಯಲ್ಲೇ ಇದ್ದಾಗಲೂ ಸ್ಪಷ್ಟತೆ ಹಾಗೂ ನಿಖರತೆಗಳನ್ನು ಹೊಂದಲು ಸಾಧ್ಯವಾಗುವುದು ಮಾಗಿ ಬೆಳಗುವ ಈ ಹೊತ್ತಲ್ಲಿಯೇ.

ಅಕ್ಕಪಕ್ಕ ಹೊರಳಲು, ಮುಂದಿನ ಹಾದಿಯನ್ನು ತುಳಿಯಲು ಕುತೂಹಲವು ಸಹಕಾರಿ. ಬೆರಗು ಕೌತುಕಗಳಿಲ್ಲದ ಬಾಳು ಬರೀ ಸಪ್ಪೆ. ಕುತೂಹಲಗಳು ಕೆರಳಿ ಆಸಕ್ತಿ ಹೆಚ್ಚಾದಾಗ ಕದ್ದು ಮುಚ್ಚಿ ಸಿಗರೇಟು ಸೇದಿ, ನಶೆ ಏರಿಸಿ ಪಡೆಯುವ ಸುಖದಲ್ಲಿ ಅವ್ಯಕ್ತವಾದ ಆನಂದವಿರುತ್ತದೆ. ಮುಷ್ಠಿಯೊಳಗೇನಿದೆ? ಎಂದು ನೋಡಿ ಅರಿಯುವ ಕೌತುಕದ ಕಾಯುವಿಕೆಯು ಬಹಳ ಆಸಕ್ತಿದಾಯಕವಾದದ್ದು. ಹಾಗೊಮ್ಮೆ ಮುಷ್ಠಿ ಅರಳಿದ್ದೇ "ಓಹ್! ಇಷ್ಟೇನಾ?" ಎಂಬ ಉದ್ಘಾರವು ಹುಟ್ಟಿ, ಬೇರೆ ಇನ್ನೇನಿವೆ? ಎಂದು ಹುಡುಕಾಡಲು ತೊಡಗುತ್ತೇವೆ.  ಚಂದವನ್ನು ಇಳಿಸಿಕೊಳ್ಳುವ ಕಣ್ಣು, ಇಂಪನ್ನು ಕೇಳಿಸಿಕೊಳ್ಳುವ ಕಿವಿ, ಪರಿಮಳವನ್ನು ಹೀರುವು ನಾಸಿಕ, ರುಚಿಯನ್ನು ಸವಿಯುವ ನಾಲಗೆ, ಸ್ಪರ್ಶ ಸುಖವನ್ನು ಅನುಭವಿಸುವ ಚರ್ಮ…ಹೀಗೆ ಇಂದ್ರಿಯಗಳಿರುವುದೇ ಸುಖವನ್ನು ಉಣಿಸಲು ಮತ್ತು ಬಡಿಸಲು. ಕ್ಷಣಕ್ಷಣಗಳಲ್ಲೂ ಅನುಭವಿಸುವ ಸಣ್ಣಸಣ್ಣ ಸುಖಗಳಲ್ಲಿ ವಿಶಿಷ್ಟವಾದ ಆನಂದವಿರುತ್ತದೆ. ಮನಸ್ಸು-ದೇಹವನ್ನು ಮುದಗೊಳಿಸುವ ಚಮತ್ಕಾರವಿರುತ್ತದೆ. ಆದರೆ ಅದೆಲ್ಲವನ್ನೂ ಅನುಭವಿಸಲು ಹೊತ್ತು-ಗೊತ್ತು ತಿಳಿದಿರಬೇಕಷ್ಟೆ. 

"ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ" ಹಾಡನ್ನು ಯೌವ್ವನದಲ್ಲಿ ಹಾಡಿ ಅನುಭವಿಸುವ ಬಗೆಗೂ, ನಲ್ವತ್ತು ವಸಂತಗಳನ್ನು ದಾಟಿದ ಮೇಲೆ ಅದೇ ಹಾಡನ್ನು ಗುನುಗಿ ಅನುಭವಿಸುವ ಪರಿಗೂ ಬಹಳಷ್ಟು ವ್ಯತ್ಯಾಸವಿದೆ. ಅಂತಹದ್ದೊಂದು ವಸಂತದಲ್ಲಿ ಪದರು ಪದರಾಗಿ ಮಲ್ಲಿಗೆ ಹೂವಿನ ಪರಿಮಳವನ್ನು ಆಗ್ರಾಣಿಸುವ ಪ್ರಕಾರ ಭಿನ್ನವಾಗಿರುತ್ತದೆ. ಹದಿವಯಸ್ಸಿನಲ್ಲಿ ದಂಡಾಗಿ-ದುಂಡಾಗಿ ಕಾಣುವ, ವೈವಿಧ್ಯಪೂರ್ಣ ಸುವಾಸನೆಗಳನ್ನು ಬೀರುವ ವಿವಿಧ ಬಗೆಯ ಮಲ್ಲಿಗೆಯ ದಂಡೆಗಳು ಇಂದ್ರಿಯಗಳನ್ನು ತಟ್ಟುವ ನಮೂನೆ ಭಿನ್ನವಾಗಿರುತ್ತವೆ. ಹರೆಯದ ಹಸಿವಿನ ಬೇಗೆಯದು.

ಆದರೆ ಪಕ್ವತೆ ಮೂಡಿದ್ದೇ, ಒಂದೊಮ್ಮೆ ಕಂಡ ಮಲ್ಲಿಗೆಯ ಅಂದ, ಅದು ಸೂಸಿದ ಗಂಧ, ತುರುಬಲ್ಲಿ ಸುತ್ತಿ ಕುಳಿತ ಚಂದ ಎಲ್ಲವನ್ನೂ ಇಂಚು ಇಂಚಾಗಿ ಅನುಭವಿಸುತ್ತಾ ಹೋಗುವ ದಿನಚರಿಯಲ್ಲಿ ಅಚ್ಚರಿಗಳು ಆಗಾಗ ಬಂದು ಕುಳಿತುಕೊಳ್ಳುತ್ತಿರುತ್ತವೆ. ಸುಖದ ಸಮಾಧಾನವನ್ನು ಪಡೆಯಲು ನಡೆಸುವ ತಯಾರಿಯು ನೀಡುವಷ್ಟು ಖುಷಿ ಪ್ರಾಯಶಃ ಅದರ ನಂತರದ ಕ್ರಿಯೆಯು ಕೊಡಲಾರದು. ಪ್ರಕ್ರಿಯೆಯಲ್ಲಿ ದೊರಕುವಷ್ಟು ಸೌಖ್ಯ, ಉದ್ದೇಶ ಈಡೇರಿದಾಗ ಸಿಗುವುದಿಲ್ಲ.

ಏನನ್ನೇ ಅನುಭವಿಸ ಬೇಕಾದರೂ ತೆರೆದುಕೊಳ್ಳುವುದು ಮುಖ್ಯವಾಗುತ್ತದೆ. ತೆರೆಯದಿದ್ದರೆ ಯಾವುದೂ ಒಳಕ್ಕೆ ಪ್ರವೇಶಿಸಲಾರದು. ಹಾಗಂತ ಗೊತ್ತಿದ್ದೂ ನಾವು ತೆರೆದುಕೊಳ್ಳುವುದಿಲ್ಲ! ಅರಳಬೇಕಿದ್ದರೆ ಯಾವುದನ್ನೂ ಕಟ್ಟಿಕೊಳ್ಳದೆ ಮುಕ್ತವಾಗಿರಬೇಕು. ಆಯಾ ಯೋಚನೆ, ಚಿಂತನೆಗಳೇ ಶ್ರೇಷ್ಠವೆಂಬ ಹಮ್ಮು ಸುಖದ ತಂಗಾಳಿಗೆ ಮುಖವೊಡ್ಡದಂತೆ ಮಾಡಿ ಬಿಡುತ್ತವೆ. ಮನಃಪೂರ್ವಕವಾಗಿ ಒಳಗನ್ನು ಬಂಧಿಸಿಡುವುದು-ಅನನ್ಯ ಸುಖಗಳಿಂದ ನಮ್ಮನ್ನು ವಿಮುಖರನ್ನಾಗಿಸಿ ಬಿಡುತ್ತದೆ. ಅದೊಂದು ಬಗೆಯ ಆತ್ಮ ವಂಚನೆ. ಹೃದಯದ ಮಾತನ್ನು ಕೇಳದ ಮನಸ್ಸಿನ ಹಠಮಾರಿತನದಂತೆ. ಸುಖವನ್ನು ಅನುಭವಿಸಲು, ಸುಖದ ಎತ್ತರವನ್ನೇರಲು ತೆರಳುವ ಹಾದಿಯಲ್ಲಿ ಮುಗ್ಗರಿಸಿದರೆ ಎಂಬ ಅಕಾಲಿಕ ಭಯವು ಹೊಕ್ಕಿದ್ದೇ ಸುಖಕ್ಕಾಗಿ ತೆರೆದುಕೊಳ್ಳುವುದಕ್ಕೆ ಮನವು ಅಡ್ಡಿಪಡಿಸುತ್ತದೆ. ಸುಖಗಳಿಂದ ವಂಚಿತರನ್ನಾಗಿಸುವ ನಮ್ಮದೇ ಒಳಮನಸ್ಸಿನ ತಂತ್ರಕ್ಕೆ ಹೃದಯವು ಧಸಕ್ಕನೆಂದು ಕುಸಿದು ಬೀಳುವುದಿದೆ.  

ಅಷ್ಟಾದರೂ ಮನಸ್ಸು ಕರಗುವುದಿಲ್ಲ. ಅತಿಯಾದ ಬುದ್ಧಿ ಪ್ರಯೋಗವು ಜೀವನದ ಹಲವು ಸೊಬಗುಗಳನ್ನು ಕಳೆದುಕೊಳ್ಳುವಂತೆ  ಮಾಡುವುದುಂಟು. ಆಯಾ ಜೀವಗಳ ಕೊರತೆಗಳನ್ನು ಮರೆಮಾಚಲು ಇತರ ಜೀವಗಳನ್ನು ಗುರಾಣಿಗಳನ್ನಾಗಿಯೂ ಬಳಸುವುದುಂಟು. ಅಂತಹ ಜೀವ ಗುರಾಣಿಗಳು ಕ್ರಮೇಣ ಮುರಿದು ಬೀಳುವುದೂ ಉಂಟು. ಅಸ್ತಿತ್ವವನ್ನು ಸ್ಥಾಪಿಸಲು, ಕೊರತೆಗಳನ್ನು ಮುಚ್ಚಿಕೊಳ್ಳಲು ಬಳಸುವ ಈ ತರದ ಆಯ್ಕೆಗಳು ಎಷ್ಟು ದಿನಾ ಅಂತ ಕಾವಲಾಗಿರುತ್ತವೆ? ಅಭಾವಗಳಲ್ಲೂ ಜೀವರಸ ಹನಿಸುವುದನ್ನು ಕರಗತವಾಗಿಸಿಕೊಳ್ಳಬೇಕು. ಮನಸ್ಸಿನ ಹಠ ಬಹಳಷ್ಟನ್ನು ಕಳಕೊಳ್ಳುವಂತೆ ಮಾಡುತ್ತದೆ ಎನ್ನುವುದು ಮಾತ್ರ ದಿಟ. 

ಬುದ್ದಿ ಇಲ್ಲದವರು ಯಾರೂ ಈ ಭೂಮಿಯಲ್ಲಿಲ್ಲ. ಬದುಕಲು ಬೇಕಾಗುವಷ್ಟು ಬುದ್ದಿವಂತಿಕೆ, ಬೌದ್ಧಿಕತನ ಪ್ರತಿಯೊಬ್ಬರಲ್ಲೂ ಇರುತ್ತದೆ. ಬಹಳಷ್ಟು ಮಂದಿಗೆ ಜೀವವನ್ನು ಬುದ್ದಿಯಲ್ಲಿ, ಯೋಚನೆಗಳನ್ನು ಬೌದ್ಧಿಕತೆಯಲ್ಲಿ ಅದ್ದಿಸಿ ಮೆರೆಯುವ ಚಪಲ. ಲಿಮಿಟೆಡ್ ಎಡಿಷನ್ನಿನ ಈ ಸರಕನ್ನು ಸೇವಿಸಿ ಉನ್ಮಾದಗೊಂಡು ನಡೆಸುವ ಆಟೋಪಗಳು ಹೆಚ್ಚು ಹೊತ್ತು ಸಾಗುವಂತದ್ದಲ್ಲ. ದಿನಪೂರ್ತಿ ದುಡಿದು ನಿಶೆ ಏಳುತ್ತಲೇ ನಶೆ ಏರಿಸಲು ಹೆಜ್ಜೆ ಹಾಕುವ ಜೀವವು ಸೆರೆ ಕುಡಿದು ಬಂದು- "ಸುಂದರಿ ಒನ್ನೆರಂಗಿ ವಾ.. ನಾಳಯಾಣ್ ತಾಳಿ ಮಂಗಲಂ" ಎಂದು ಹಾಡಿ ನಲಿದು ಕುಣಿದು ದಣಿವನ್ನು ನಿವಾರಿಸಿಕೊಳ್ಳುವ ಶ್ರಮಿಕನೂ ತನ್ನ ಜೀವವನ್ನು ಬುದ್ದಿಯಲ್ಲಿ ಅದ್ದಿಸಿಕೊಂಡವನೇ. ತಾನು ಕಂಡುಕೊಳ್ಳುವ ಬದುಕಿಗೆ ಮತ್ತದರ ಸುಖಕ್ಕೆ ಬೇಕಾಗುವಷ್ಟು ಬೌದ್ಧಿಕತೆ ಆಯಾ ಜೀವದಲ್ಲಿರುತ್ತದೆ. ಹಾಗಾಗಿ ಈ ಲೋಕದಲ್ಲಿ ಬುದ್ದಿ ಇಲ್ಲದ ಜೀವಿಗಳು ಅಂತ ಯಾರೂ ಇಲ್ಲ. ಬುದ್ದಿ ಹೆಚ್ಚಾದವರು ಅಂತ ಕೆಲವೊಂದಿಷ್ಟು ಮಂದಿ ಇರುತ್ತಾರೆ.

ಆಯಾ ಪಾತ್ರಗಳು ತಂತಮ್ಮ ನಟನೆಯನ್ನು ಪೂರ್ತಿಯಾಗಿಯೋ ಅಥವಾ ಅರೆಬರೆಯಾಗಿಯೋ ಪೂರೈಸಿ ಕಾಲದ ಹರಿವಿನಲ್ಲಿ ಒರಗಿ ಬಿಟ್ಟಿರುತ್ತವೆ. ಹಾಗೆ ಅಳಿದು ಉಳಿದು ಹೋದ ಪಾತ್ರ ಪರಿಚಯವನ್ನು ಪೂರ್ಣಗೊಳಿಸಲು ಜೀವವು ಕೈಗೊಳ್ಳುವ ಯಾತ್ರೆಯಲ್ಲಿ ಜನ್ಮಗಳೆತ್ತುತ್ತಲೇ ಇರಬೇಕಾಗುತ್ತದೆ. ಹಾಗಿರಬಾರದು ಎಂದರೆ; ಸಮ ಪ್ರಮಾಣದ, ಬೆರಕೆ ಇಲ್ಲದ ಪರಿಜ್ಞಾನವನ್ನು ಹೊಂದಿರಬೇಕಷ್ಟೇ. ಅದು ಬಿಟ್ಟು ಲೌಕಿಕ ಅಲೌಕಿಕಗಳನ್ನು ಮಿಶ್ರ ಮಾಡಿ, ಆಯಾ ಕಾಲಕ್ಕೆ ಬೇಕಾಗುವಂತಹ ವಿಚಾರವನ್ನು ಹರಡಿ, ಮನಸ್ಸಿನ ಸರಾಗ ಹರಿವಿಗೆ, ನಿಷ್ಕಲ್ಮಶ ಚಿಂತನೆಗೆ ಅಡ್ಡಿಯಾಗುವ ಬುದ್ದಿ ಹೆಚ್ಚಿರುವ ಜೀವಿಗಳ ಆಟ-ನೋಟಗಳು ಬದಲಾಗಬೇಕು.

ಸಾಯಂ ಸಂಧ್ಯೆಯ ಸೊಬಗನ್ನು ಕಂತಿಸುವ ಮುತ್ತಿಕೊಂಡ ಧೂಳಿನ ಕಣಗಳಂತೆ ಕರ್ಮಗಳೂ ಜೊತೆಯಲ್ಲೇ  ಅಂಟಿಕೊಂಡಿರಲು-ಪ್ರೀತಿಯು ಬೆಚ್ಚಗಾಗಿರುವುದಿಲ್ಲ..ಮಾರ್ದವ ಮಾತುಗಳು ಆರ್ದ್ರ ಗಝಲ್ ಗಳಾಗಿಯೂ ಹೊಮ್ಮುವುದಿಲ್ಲ. ಭಾವಗುಂಫನಗಳನ್ನು ಉದ್ದೀಪಿಸುವ ಬಂದಿಶ್ ಗಳಂತೂ ಹುಟ್ಟುವುದೇ ಇಲ್ಲ. ಏನಿದ್ದರೂ ಅತಿರೇಖಗಳದ್ದೇ ಕಾರುಬಾರು. ಭಾವ ಕೋಶಗಳನ್ನು ಉದ್ದೀಪಿಸುವ ಮಾತು, ಸ್ಪರ್ಶ, ಕ್ರಿಯೆಗಳಿಗೆಲ್ಲ ಅಕಾಲ ಮರಣ ಪ್ರಾಪ್ತಿ. ಉದ್ದೀಪಿಸಬೇಕು…ಉದ್ದೀಪನಗೊಳ್ಳಬೇಕು. ಆಗಲೇ ಸೌಖ್ಯ ಏನೆಂಬುದರ ಅನುಭವವಾಗುವುದು. ಅಷ್ಟಕ್ಕೂ ನೆನಹುಗಳ ನೆನಪು ಅದೆಂತಹದ್ದು!  

ಈ ಅಂಕಣದ ಹಿಂದಿನ ಬರೆಹಗಳು:
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...