ಜೈ ಭೀಮ್ ಅರುಣ್ ಜೋಳದಕೂಡ್ಲಿಗಿ ಅವರ ಕೃತಿಯಾಗಿದೆ . ನಮ್ಮನ್ನು ಆವರಿಸಿಕೊಂಡ ಅಂಬೇಡ್ಕರ್ ನಮ್ಮನ್ನು ಸಮಾಜವಾದದಿಂದ ಅಂಬೇಡ್ಕರ್‌ವಾದಕ್ಕೆ ತಂದು ನಿಲ್ಲಿಸಿದರು. ವೈಚಾರಿಕ ಚಿಂತನೆ ಮತ್ತು ಹೋರಾಟದ ವೇದಿಕೆಯಾಗಿದ್ದ ಮೈಸೂರಿನಲ್ಲಿ ಆಗ ನಡೆದ ಜಾತಿವಿನಾಶ ಸಮ್ಮೇಳನ, ಬರಹಗಾರರ ಒಕ್ಕೂಟದ ಸಭೆ, ಬೂಸಾ ಚಳವಳಿ ಎಲ್ಲವೂ ನಮ್ಮನ್ನು ಸೈದ್ಧಾಂತಿಕವಾಗಿ ಗಟ್ಟಿಗೊಳಿಸುವುದರೊಂದಿಗೆ ಅಂಬೇಡ್ಕರ್ ಸಿದ್ಧಾಂತದತ್ತ ನಮ್ಮನ್ನು ಸೆಳೆದವು. ಬ್ರಾಹ್ಮಣ-ಶೂದ್ರ ಚಳವಳಿಯ ನೆಲೆಯಾಗಿದ್ದ ನಮ್ಮ ಚಿಂತನಾ ಲಹರಿ ವಿಸ್ತರಿಸುತ್ತಾ ದಲಿತ-ಶೂದ್ರ-ಬ್ರಾಹ್ಮಣ ಸಂಬಂಧಗಳು, ಭೂಮಾಲೀಕರು ಮತ್ತು ದುಡಿಯುವ ವರ್ಗದ ನಡುವಿನ ಸಂಘರ್ಷ ಮುಂತಾಗಿ ಹೊಸ ಹೊಸ ಚಿಂತನೆಗಳತ್ತ ಹೊರಳತೊಡಗಿತು. ಆಗಾಗಲೇ ಮಹಾರಾಷ್ಟ್ರದಲ್ಲಿ ಆರಂಭವಾಗಿದ್ದ ದಲಿತ ಪ್ಯಾಂಥರ್‍ಸ್ ಚಳವಳಿ ನಮ್ಮನ್ನು ತೀವ್ರವಾಗಿ ಆಕರ್ಷಿಸಿತು. ದೇವನೂರ ಮಹಾದೇವ ಅವರು ಅನುವಾದಿಸಿ ಪ್ರಕಟಿಸಿದ ‘ಪ್ಯಾಂಥರ್‍ಸ್ ಪ್ರಣಾಳಿಕೆ’ ನಮಗೆ ಕೈದೀವಿಗೆಯಾಯಿತು. ಎರಡನೆಯವರಾಗಿ ಮನಸ್ಸಿಗಿಳಿದಿದ್ದ ಅಂಬೇಡ್ಕರ್ ಆನಂತರ ನಮ್ಮೆಲ್ಲರ ಆದರ್ಶವಾಗಿ ಮುನ್ನಡೆಸತೊಡಗಿದರು. ನಂತರ ನಾವೆಲ್ಲ ಕೂಡಿ ಆರಂಭಿಸಿದ ‘ಶೋಷಿತ’ ಪತ್ರಿಕೆ, ನಂತರದ ‘ಪಂಚಮ’ ದಲಿತ ಚಳವಳಿಯ ರೂಪ ಪಡೆದು ಮುನ್ನಡೆದದ್ದು ಈಗ ಕಣ್ಣೆದುರಿನ ಇತಿಹಾಸ. ಬೀಜ ರೂಪದಲ್ಲಿ ಅದು ನಮ್ಮ ಮನಸ್ಸಿನಲ್ಲಿ ಮೊಳಕೆ ಒಡೆದ ಅಂಬೇಡ್ಕರ್ ಇಂದು ಜಗದಗಲ ಮುಗಿಲಗಲ ಬೆಳೆದು ನಿಂತಿದ್ದಾರೆ.
©2023 Book Brahma Private Limited.