ಪಂಪನಿಂದ ಇಲ್ಲಿಯವರೆಗೂ ಅನೇಕ ಕಾವ್ಯದ ತಲೆಮಾರುಗಳು ಈ ನೆಲವನ್ನು ತಬ್ಬಿ ನಿಂತಿವೆ. ಬಹುಶಃ ಕಾವ್ಯದ ಈ ಅನನ್ಯತೆಯು ಆಧುನಿಕತೆ ಬೆಳೆದಷ್ಟೂ ಅವೂ ಬೆಳೆಯುತ್ತಿವೆ. ಇದರಲ್ಲಿ ಗೊತ್ತಾಗುತ್ತದೆ ಸಾಹಿತ್ಯದ ಸದಾ ಕಾಲದ ವಸ್ತು ಮನುಷ್ಯನೆಂದು. ಸಾಹಿತ್ಯ ಮನುಷ್ಯನ ಬಗ್ಗೆ ಇದೆ. ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಆಸ್ಥೆಯಲ್ಲಿ ಸಾಹಿತ್ಯವೆಂಬುದು ಅರಳುತ್ತದೆ. ಈ ಚಟುವಟಿಕೆಯಲ್ಲಿ ಆ ಹುಟ್ಟಿಗೆ ಕಾರಣವಾದ ಆಸ್ಥೆಯ ಸಾರ್ಥಕತೆಯಿದೆ. ‘ಉರಿವ ಏಕಾಂತ ದೀಪ’ದಲ್ಲಿ ಇಂತಹ ಆಸ್ಥೆಯಿದೆ. ಹೆಸರೇ ಹೇಳುವ ಹಾಗೆ ಈ ದೀಪದಲ್ಲಿ ಬೆಳಕು, ಬೆಂಕಿ ಮತ್ತು ಮನುಷ್ಯನನ್ನು ಸದಾ ಕಾಡುವ ಏಕಾಂತವಿದೆ. ನಮ್ಮೊಳಗಿನ ಈ ದೌರ್ಬಲ್ಯಗಳು ಒಳಗನ್ನು ಅರ್ಥಮಾಡಿಕೊಳ್ಳುವ ಹೊರಗಿನದನ್ನು ಒಳಗು ಮಾಡಿಕೊಳ್ಳುವ ಕ್ರಿಯೆಯನ್ನು ಈ ಪದ್ಯಗಳು ಸಾಬೀತು ಮಾಡುತ್ತಾ ಹೋಗುತ್ತವೆ. ನಮ್ಮ ಅನುಭವಗಳು ಕಾವ್ಯವೆಂದಾದರೆ ಅದಕ್ಕೂ ಒಂದು ಅನುಭವವಿರಬೇಕು. ಇದು ತತ್ವಶಾಸ್ತ್ರದ ಉಲ್ಲೇಖವೆನಿಸಿದರೂ ಕೂಡ ಇಲ್ಲಿ ಕವಿ ಮತ್ತು ಓದುಗ ಮುಖ್ಯವೆನಿಸುತ್ತಾ ಹೋಗುತ್ತಾನೆ. ಕವಿಯೇ ಕಾವ್ಯದ ಮಾಧ್ಯಮವಾದ್ದರಿಂದ ಅವನು ಹೇಗೆ ಕಾವ್ಯವನ್ನು ಓದುಗನಿಗೆ ತಲುಪಿಸುತ್ತಾನೆಂಬ ಅರಿವಿರಬೇಕು. ಅಂತಹ ಅರಿವು ಈ ಸಂಕಲನದ ಪದ್ಯಗಳಲ್ಲಿದೆ.
©2025 Book Brahma Private Limited.