ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ

Date: 13-09-2023

Location: ಬೆಂಗಳೂರು


''ಬಕ್ತ ಎಂಬುದು ಸಂಸ್ಕ್ರುತದ ಪದ, ಕನ್ನಡಕ್ಕೆ ಬಂದಿದೆ. ಹೀಗೆ ಸಂಸ್ಕ್ರುತದಿಂದ ಬಂದ ಪದಗಳನ್ನೆಲ್ಲ ಎರಡು ಅಂತಸ್ತುಗಳಲ್ಲಿ ನೋಡುವುದು ಕಂಡುಬರುತ್ತವೆ. ಒಂದು ತತ್ಸಮ, ಅಂದರೆ ಸಂಸ್ಕ್ರುತದ ಬರವಣಿಗೆಯ ಸಮಸಮನಾದ ರೂಪವನ್ನು ಕನ್ನಡ ಬರಹದಲ್ಲಿ ಉಳಿಸಿಕೊಂಡಿರುವುದು. ಇನ್ನೊಂದು ತದ್ಬವ, ಸಂಸ್ಕ್ರುತ ಉಚ್ಚರಣೆ ವ್ಯತ್ಯಯಗೊಂಡು ಬಿನ್ನ ಉಚ್ಚರಣೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು, ಆ ಬಿನ್ನ ರೂಪವು ಕನ್ನಡದ ಬರಹದಲ್ಲಿ ಬೆಳೆದಿರುವುದು,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ’ ಕುರಿತು ಬರೆದಿದ್ದಾರೆ.

ಬಕ್ತ (ಭಕ್ತ) ಎಂಬುದು ಸಂಸ್ಕ್ರುತದ ಒಂದು ಶಬ್ದ. ದೇವರನ್ನು ಪ್ರೀತಿಸುವವರನ್ನು ಬಕ್ತ ಎಂದು ಕರೆಯುತ್ತಾರೆ. ಹೀಗೆ ಈ ಪದದ ಅರ‍್ತವನ್ನ ಸರಳವಾಗಿ ಅಂದುಕೊಂಡು ಮುಂದಕ್ಕೆ ಹೋಗೋಣ. ಯಾಕೆಂದರೆ ಈ ಪದದ ಅರ‍್ತವನ್ನು ಹತ್ತಿರದಿಂದ ನೋಡಿದಾಗ ಬಹುವ್ಯಾಪಕವಾದ ಅರ‍್ತ ಹೊಂದಿರುವುದು ಕಾಣಿಸುತ್ತದೆ. ನಮಗಿಲ್ಲಿ ಪದದ ರೂಪದ ಮೇಲೆ ಮಾತನಾಡಬೇಕಿದೆ. ಈ ಪದ ಕನ್ನಡ ಮತ್ತು ಸಂಸ್ಕ್ರುತ ಬಾಶೆಗಳ ನಡುವೆ ನಡೆದ ನೂರಾರು ವರುಶಗಳ ಸರಸ-ವಿರಸದ ಕತೆಯನ್ನು ಹೇಳಬಲ್ಲದು. ಕನ್ನಡದೊಳಗೆ ಯಾರು ಈ ಸರಸದಲ್ಲಿದ್ದರು, ವಿರಸ ಕಟ್ಟಿಕೊಂಡಿದ್ದರು ಎಂಬುದನ್ನೂ ಇದು ಹೇಳಬಲ್ಲದು. ಬನ್ನಿ, ಇದೊಂದು ಪದವನ್ನು ಅದರ ರೂಪವನ್ನು ಇಟ್ಟುಕೊಂಡು ಚರಿತ್ರೆಯ ರಾಜಕೀಯ ಹೇಗೆಲ್ಲ ಇದೆ ಎಂಬುದನ್ನು ತುಸು ಇಣುಕುನೋಟದಿ ನೋಡುವ ಪ್ರಯತ್ನ ಮಾಡೋಣ.

ಕನ್ನಡ ಮತ್ತು ಸಂಸ್ಕ್ರುತಗಳ ನಡುವೆ ನೂರಾರು ವರುಶಗಳ ಕಾಲದ ಸಂಬಂದ ಇದೆ. ಅದು ಕೊಡುತೆಗೆದುಕೊಳ್ಳುವ ಸಹಜ ಸಂಬಂದವೂ, ಹೇರುವ-ಹೋರುವ ಕಾದಾಟದ ಸಂಬಂದವೂ ಆಗಿತ್ತು. ಸಂಸ್ಕ್ರುತ ಕನ್ನಡಕ್ಕೆ ಸಾವಿರಾರು ಪದಗಳನ್ನು ಕೊಟ್ಟಿದೆ. ಕನ್ನಡದಿಂದಲೂ ಸಂಸ್ಕ್ರುತ ತೆಗೆದುಕೊಂಡಿದೆ. ದ್ರಾವಿಡದಿಂದ ದೊಡ್ಡ ಪ್ರಮಾಣದ ರಾಚನಿಕ ಅಂಶಗಳನ್ನು ಸಂಸ್ಕ್ರುತ ಪಡೆದುಕೊಂಡಿದೆ. ಹಾಗೆನೆ ಕನ್ನಡವೂ ಕೆಲವು ರಾಚನಿಕ ಅಂಶಗಳನ್ನು ಸಂಸ್ಕ್ರುತದಿಂದ ತೆಗೆದುಕೊಂಡಿದೆ. ಇವೆರಡ ನಡುವಿನ ಸಂಬಂದಕ್ಕೆ ಹಲವಾರು ಆಯಾಮಗಳು. ಕನ್ನಡ ನಿರಂತರ ಸಂಸ್ಕ್ರುತವನ್ನು ಪ್ರೀತಿಸಿದೆ, ಹಾಗೆ ದ್ವೇಶಿಸಿದೆ. ಇವೆರಡರ ನಡುವಿನ ಜಗಳ ದೊಡ್ಡಮಟ್ಟದ್ದು. ಇರಲಿ. ಇಲ್ಲಿ ಬಕ್ತ ಪದದ ಕತೆಯನ್ನು ನೋಡೋಣ. ಆ ಮೂಲಕ ಕನ್ನಡ ಮತ್ತು ಸಂಸ್ಕ್ರುತ ಬಾಶೆಗಳ ನಡುವಿನ ನಂಟು ಮತ್ತು ಅಲ್ಲಿ ಕಾಣಿಸುವ ರಾಜಕೀಯ, ಸಾಮಾಜಿಕ, ಸಾಂಸ್ಕ್ರುತಿಕ ಮೊದಲಾದ ಅಂಶಗಳನ್ನು ತಿಳಿದುಕೊಳ್ಳಬಹುದು.

ಬಕ್ತ ಎಂಬುದು ಸಂಸ್ಕ್ರುತದ ಪದ, ಕನ್ನಡಕ್ಕೆ ಬಂದಿದೆ. ಹೀಗೆ ಸಂಸ್ಕ್ರುತದಿಂದ ಬಂದ ಪದಗಳನ್ನೆಲ್ಲ ಎರಡು ಅಂತಸ್ತುಗಳಲ್ಲಿ ನೋಡುವುದು ಕಂಡುಬರುತ್ತವೆ. ಒಂದು ತತ್ಸಮ, ಅಂದರೆ ಸಂಸ್ಕ್ರುತದ ಬರವಣಿಗೆಯ ಸಮಸಮನಾದ ರೂಪವನ್ನು ಕನ್ನಡ ಬರಹದಲ್ಲಿ ಉಳಿಸಿಕೊಂಡಿರುವುದು. ಇನ್ನೊಂದು ತದ್ಬವ, ಸಂಸ್ಕ್ರುತ ಉಚ್ಚರಣೆ ವ್ಯತ್ಯಯಗೊಂಡು ಬಿನ್ನ ಉಚ್ಚರಣೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು, ಆ ಬಿನ್ನ ರೂಪವು ಕನ್ನಡದ ಬರಹದಲ್ಲಿ ಬೆಳೆದಿರುವುದು. ಇದಕ್ಕೆ ಹಲವು ನಿದರ‍್ಶನಗಳನ್ನು ಕೊಡುತ್ತಾರೆ. ನಮ್ಮ ಮಕ್ಕಳಿಗೆ ಪರೀಕ್ಶೆಗಳಲ್ಲಿ ತತ್ಸಮ-ತದ್ಬವ ರೂಪಗಳನ್ನು ಗುರುತಿಸಿದರೆ ಅಂಕಗಳನ್ನು ಕೊಡುತ್ತಾರೆ. ಆದರೆ, ಈ ರೀತಿಯ ಗುಂಪಿಕೆ ಅಸಂಬದ್ದವೆ ಸರಿ. ಅದಿರಲಿ.

ಈಗ ಬಕ್ತ ಪದದ ಮಾತುಕತೆಗೆ ಬರೋಣ. ಕನ್ನಡದಲ್ಲಿ ಬಕ್ತ ಎಂಬ ರೂಪ ಬಳಕೆಯಲ್ಲಿದೆ ಮತ್ತು ಬರಹದಲ್ಲೂ ಹಳಗನ್ನಡದ ಕಾಲದಲ್ಲಿ ಕಂಡುಬರುತ್ತದೆ. ಇದರ ಇನ್ನೊಂದು ರೂಪ ಬಕುತ ಎಂಬುದಾಗಿದೆ. ಈ ಎರಡರಲ್ಲಿ ‘ಬಕ್ತ’ ಇದು ತತ್ಸಮ ಆದರೆ, ‘ಬಕುತ’ ಇದು ತದ್ಬವ ಆಯಿತು.

ಬಕ್ತ ಪದ ಸಂಸ್ಕ್ರುತ ಉಚ್ಚರಣೆಯ ಸಮಸಮದಲ್ಲಿ ಇರುವಂತದ್ದು. ಬಕುತ ಇದು ಕನ್ನಡದ ಉಚ್ಚರಣೆಯ ಜಾಯಮಾನವನ್ನು ತೊಟ್ಟುಕೊಂಡದ್ದು. ಹಾಗಾಗಿ ಬಕ್ತ ರೂಪದ ಬಳಕೆ ಸಂಸ್ಕ್ರುತ ವ್ಯಾಮೋಹವನ್ನು ತೋರಿಸಿದರೆ ಬಕುತ ರೂಪ ಕನ್ನಡದ ಒಲವನ್ನು ತೋರುತ್ತದೆ. ಹಾಗೆ ಅಂದುಕೊಳ್ಳಬಹುದು ತಾನೆ? ಸರಿ, ಯಾಕೆ ಹಾಗೆ ಅಂದುಕೊಳ್ಳಬೇಕು ಎಂದು ತುಸು ನೋಡೋಣ.

‘ಬಕ್ತ’ ಈ ಪದದಲ್ಲಿ ವಿಜಾತಿ ಒತ್ತಕ್ಕರ ಇದೆ. ಹೀಗೆ ವಿಜಾತಿ ಒತ್ತಕ್ಕರ ಇರುವ ಸಂಸ್ಕ್ರುತದ ಇಲ್ಲವೆ ಯಾವುದೆ ಬಾಶೆಯ ಒಂದು ಶಬ್ದ ಕನ್ನಡಕ್ಕೆ ಬಂದಾಗ ತನ್ನ ವಿಜಾತಿ ಒತ್ತಕ್ಕರವನ್ನು ಕಳೆದುಕೊಳ್ಳುತ್ತದೆ. ಹೆಚ್ಚಾಗಿ ಪದದ ನಡುವೆ ಒಂದು ಸ್ವರ ಸೇರಿಕೊಳ್ಳುತ್ತದೆ ಇಲ್ಲವೆ ವಿಜಾತಿ ಒತ್ತಕ್ಕರ ಸಜಾತಿ ಒತ್ತಕ್ಕರವಾಗಿ ಬದಲಾಗುತ್ತದೆ. ‘ಬಕ್ತ’ ಪದವು ನಡುವೆ ಸ್ವರವೊಂದನ್ನು ಸೇರಿಸಿಕೊಂಡು ‘ಬಕುತ’ ಎಂದಾಗುತ್ತದೆ. ಇಲ್ಲಿ ಕೆಲವು ಅಂತ ಪದಗಳನ್ನು ನೋಡೋಣ. ಲಕ್ಶ್ಮಿ>ಲಕುಮಿ, ಕರ‍್ಮ>ಕರುಮ, ದರ‍್ಶನ>ದರುಶನ, ಹೀಗೆ. ಬೇರೆ ಬಾಶೆಯಿಂದ ಕನ್ನಡಕ್ಕೆ ಪದಗಳು ಬರುವಾಗ ಇದರಂತದೆ ಇನ್ನೂ ಹಲವು ಬಗೆಯ ಬದಲಾವಣೆಗಳು ನಡೆಯುತ್ತವೆ. ಯಾಕೆಂದರೆ, ಕನ್ನಡದ ಜಾಯಮಾನ ಸಹಜವಾಗಿ ಕಡಿಮೆ ಒತ್ತಕ್ಕರಗಳು ಇರುವುದು. ಇರುವುದು ಹೆಚ್ಚಾಗಿ ಸಜಾತಿ ಒತ್ತಕ್ಕರಗಳು ಮಾತ್ರ. ನೋಡಿ, ಕನ್ನಡದ ಪದಗಳಲ್ಲಿ ವಿಜಾತಿ ಒತ್ತಕ್ಕರಗಳು ಇರುವುದು ಕೇವಲ ಸಮಾಸಪದಗಳಲ್ಲಿ ಮಾತ್ರ, ಅಂದರೆ ಎರಡು ಪದಗಳು ಸೇರಿ ಆದ ಪದದಲ್ಲಿ ಮಾತ್ರ. ಹಾಗಾಗಿ ‘ಬಕ್ತ’ ಎಂಬ ವಿಜಾತಿ ಒತ್ತಕ್ಕರ ಇರುವ/ಇದ್ದ ಪದವನ್ನು ‘ಬಕುತ’ ಎಂದು ಬಳಸುವುದು ಕನ್ನಡದ ಜಾಯಮಾನ ಎಂದಾಗುತ್ತದೆ.

ಸಂಸ್ಕ್ರುತವನ್ನು ವಿರೋದಿಸಿ ಪ್ರಾಕ್ರುತವನ್ನು ಬರೆದ, ಕನ್ನಡದಲ್ಲಿ ಬರೆದ ಜಯ್ನರು ಎಶ್ಟು ಮಟ್ಟಿಗೆ ಈ ಬಾಶಾ ರಾಜಕೀಯ ಮಾಡಿದರು ಎಂಬುದನ್ನು ಸರಿಯಾಗಿ ಇನ್ನೂ ಅದ್ಯಯನ ಮಾಡಬೇಕಿದೆ. ಆದರೆ, ಮೊದಮೊದಲಲ್ಲಿ ಅವರು ಹೆಚ್ಚು ಕನ್ನಡದ ಜಾಯಮಾನವನ್ನೆ ಅಪ್ಪಿಕೊಂಡಿದ್ದು ನಂತರ ಸಂಸ್ಕ್ರುತದ ಕಡೆಗೆ ತಿರುಗಿರುವುದನ್ನು ನೋಡಬಹುದು. ಜಯ್ನರಲ್ಲಿ ಕಬ್ಬ, ಅಜ್ಜ ಮೊದಲಾದ ಕನ್ನಡ ಜಾಯಮಾನಕ್ಕೆ ಹೊಂದಿಕೊಂಡ ರೂಪಗಳ ಬಳಕೆ ಹೆಚ್ಚು. ಜಯ್ನರು ಬಕ್ತ ಮತ್ತು ಬಕುತ ಎಂಬ ಎರಡೂ ರೂಪಗಳನ್ನು ಬಳಸುತ್ತಾರೆ. ಮುಂದೆಯೂ ಹಲವು ಬಗೆಯ ಸಾಹಿತ್ಯ ಪ್ರಕಾರಗಳಲ್ಲಿ ಇಂತ ರೂಪಗಳು ಕಂಡುಬರುತ್ತವೆ ಎಂಬುದು ನಿಜ. ಆದರೆ, ಈ ಪದದ ಬಳಕೆಯ ಸಾಂಕಿಕ ಅದ್ಯಯನವೊಂದನ್ನು ಮಾಡಬೇಕಿದೆ. ಅದರಿಂದ ಯಾರು ಹೆಚ್ಚು ಕನ್ನಡ ಜಾಯಮಾನದ ರೂಪವನ್ನು/ಪದಗಳನ್ನು/ಬಾಶೆಯನ್ನು ಬಳಸುತ್ತಿದ್ದರು, ಕನ್ನಡದ ಜಾಯಮಾನವನ್ನು ಯಾರು ಹೆಚ್ಚು ಅಪ್ಪಿಕೊಂಡಿದ್ದರು ಎಂಬ ಮೊದಲಾದ ವಿಶಯಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲ ಆಗಬಹುದು.

ಜನಪ್ರಿಯ ಪ್ರಕಟಣೆಗಳಲ್ಲಿ ದಾಕಲಾಗಿ ವ್ಯಾಪಕತೆಯನ್ನು ಪಡೆದುಕೊಂಡಿರುವ ವಚನ ಮತ್ತು ಕೀರ‍್ತನಗಳ ಪಟ್ಯವನ್ನು ಇಲ್ಲಿ ಹೀಗೆ ನೋಡುವ ಪ್ರಯತ್ನ ಮಾಡಿದೆ. ಇಲ್ಲಿ ಅತ್ಯಂತ ಕುತೂಹಲದಾಯಕವೆನ್ನಬಹುದಾದ ಚಿತ್ರ ಕಂಡುಬಂದಿತು. ಜನಪರ ಎಂಬ ಹಣೆಪಟ್ಟಿ ಹೊತ್ತ ವಚನಗಳಲ್ಲಿ ‘ಬಕ್ತ’ ರೂಪದ ಬಳಕೆ ಹೆಚ್ಚು ಮತ್ತು ‘ಬಕುತ’ ರೂಪದ ಬಳಕೆ ಕಡಿಮೆ, ಇಲ್ಲವೆನ್ನುವಶ್ಟು ಕಡಿಮೆ. ಆದರೆ, ಕೀರ‍್ತನೆಗಳಲ್ಲಿ ‘ಬಕುತ’ ರೂಪದ ಬಳಕೆ ಹೆಚ್ಚಾಗಿ ಕಾಣಿಸುತ್ತದೆ.

ಬಕುತ ಎಂಬ ರೂಪ ನಡುಗಾಲದಲ್ಲಿ ವ್ಯಾಪಕವಾಗಿಯೆ ಬಳಕೆಯಲ್ಲಿದ್ದಿತು. ಕೀರ‍್ತನಕಾರರು ತಮ್ಮ ಪರಮ ದೇವತೆಯಾದ ವಿಶ್ಣುವಿನ ಹೆಂಡತಿಯ ಹೆಸರಾದ ಲಕ್ಶ್ಮಿಯನ್ನು ಲಕುಮಿ ಎಂದು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಒಡೆದುಕೊಂಡು ಬದಲಿಸಿಕೊಳ್ಳುತ್ತಾರೆ. ಕುತೂಹಲವೆಂದರೆ ಜನಪರ, ಜನಬಾಶೆ ಎಂದು ಮಾತಾಡುವ ವಚನಗಳಲ್ಲಿ ಇದು ಉಲ್ಟಾ, ಅಂದರೆ, ವಚನಗಳಲ್ಲಿ ಇಡಿಯಾಗಿ ಕಂಡುಬರುವ ಪದರೂಪ ‘ಬಕ್ತ’ ಎಂಬುದಾಗಿದೆ.

ಆದುನಿಕ ಕಾಲದಲ್ಲಿ ಕೇವಲ ಬಕ್ತ ಎಂಬ ಪದ ಚಲಾವಣೆಯಲ್ಲಿದೆ. ಕಾವ್ಯಬಾಶೆಯಿಂದಲೂ ಬಕುತ ಕಾಲು ಕಿತ್ತಿರುವಂತಿದೆ. ಶಿಶ್ಟಕನ್ನಡದಲ್ಲಿ ಇದು ಸಂಪೂರ‍್ಣವಾಗಿ ಬಳಕೆಯಲ್ಲಿ ಇಲ್ಲ. ಯಾಕೆ ಈ ಪಲ್ಲಟ ಎನ್ನುವುದನ್ನು ಗಮನಿಸಬೇಕಿದೆ. ಇದೊಂದು ದೊಡ್ಡ ರಾಜಕೀಯ. ಬಾಶೆಯಲ್ಲಿ ಆಗಿರುವ ದೊಡ್ಡ ಪಲ್ಲಟ, ಆದರೆ ಇದು ಬಾಶಾವಿಗ್ನಾನ ಅಲ್ಲ. ‘ಬಕ್ತ’ ಇದು ‘ಬಕುತ’ ಆಗುವುದು ಬಾಶಾವಿಗ್ನಾನ. ಯಾಕೆಂದರೆ, ಈ ಮೇಲೆ ಹೇಳಿದಂತೆ ಸಂಸ್ಕ್ರುತದ ಪದಗಳನ್ನು ಕನ್ನಡದ ಬಾಶಿಕ ರಚನೆಗೆ ತಕ್ಕಂತೆ ಬದಲಿಸಿಕೊಳ್ಳುವುದು ರಾಚನಿಕವಾಗಿ ಸಹಜ ನಡೆ. ಆದರೆ ಅದಕ್ಕೆದುರಾಗಿ ನಡೆಯುವುದು ಬಾಶಾವಿಗ್ನಾನ ಅಲ್ಲ. ಸಂಸ್ಕ್ರುತದ ಪದವೊಂದು ಕನ್ನಡ ಜಾಯಮಾನವಾಗಿ ಕನ್ನಡದಲ್ಲಿ ಬಳಕೆಗೆ ಬಂದ ನಂತರ ಮತ್ತೆ ಸಂಸ್ಕ್ರುತ ರಚನೆಗೆ ತಿರುಗಿ ಕನ್ನಡದಲ್ಲಿ ಬಳಕೆ ಆಗುವುದು ಸಾಮಾಜಿಕ ಮತ್ತು ರಾಜಕೀಯವೆ ಹೊರತು ಬಾಶಾವಿಗ್ನಾನ ಅಲ್ಲ. ಸಂಸ್ಕ್ರುತವನ್ನು ಪ್ರತಿಶ್ಟೆ ಎಂದು ಬಾವಿಸಿಕೊಂಡದ್ದರ ಪಲವಿದು. ಹಾಗಾದರೆ, ಮೊದಲೊಮ್ಮೆ ಈ ರೂಪಗಳು ಬಳಕೆಯಲ್ಲಿ ಆನಂತರ ಇಂದಿನ ಕಾಲದಲ್ಲಿ ಇಲ್ಲವಾಗುವುದು ಒಂದು ಬೆಳವಣಿಗೆಯನ್ನು ತೋರಿಸುತ್ತದೆ. ಸಂಸ್ಕ್ರುತ ಕನ್ನಡಕ್ಕೆ ಈ ಮಟ್ಟಿಗೆ ಪ್ರತಿಶ್ಟೆ ಆದದ್ದು ಇತ್ತೀಚೆಗೆ ಮಾತ್ರ ಎಂದೆನಿಸುತ್ತದೆ.

ಸರಿ, ಇನ್ನು ಇಂದಿನ ದಿನಜೀವನದಾಗ ಯಾವ ರೂಪ ಬಳಕೆಯಲ್ಲಿ ಇದೆ ಎಂಬುದನ್ನು ತುಸು ಅವಲೋಕಿಸೋಣ. ದಿನಜೀವನದಲ್ಲಿ ಹಲವು ಒಳನುಡಿಗಳಲ್ಲಿ ‘ಬಕುತ’ ಪದ ಬಳಕೆಯಲ್ಲಿದೆ. ಇನ್ನೂ ಮುಂದುವರೆದು ಕೆಲವು ಒಳನುಡಿಗಳಲ್ಲಿ ‘ಬಗುತ’ ಎಂಬ ರೂಪ ಬಳಕೆಯಲ್ಲಿ ಇದೆ. ಆದರೆ, ಇದು ಹಳ್ಳಿಯ, ಅಗ್ನಾನಿಗಳ, ಅನಕ್ಶರಸ್ತರ, ಕೇಶಿರಾಜ ಹೇಳುವಂತೆ ಅರಿಯದೆ ಉಚ್ಚರಿಸುವ ಗ್ರಾಮ್ಯರ ಪದರೂಪ. ಕನ್ನಡ ಸಮಾಜದಲ್ಲಿ ಜಗತ್ತಿನ ಹೆಚ್ಚಿನ ಸಮುದಾಯಗಳಲ್ಲಿ ಕಂಡುಬರುವಂತೆ ಶಿಶ್ಟಬಗೆಗೆ ಹೆಚ್ಚಿನದಾದ ಆದ್ಯತೆ ಕೊಟ್ಟಿದೆ. ಶಿಶ್ಟಕನ್ನಡಕ್ಕೆ ಅತಿ ಎನಿಸುವಶ್ಟು, ತುಸು ಅನವಶ್ಯಕ ಎನಿಸುವಶ್ಟು ಮರಿಯಾದೆಯನ್ನು, ಮಡಿವಂತಿಕೆಯನ್ನು ಕಟ್ಟಿಬಿಟ್ಟಿದೆ. ಶಿಶ್ಟಕನ್ನಡವನ್ನ ಪ್ರಮಾಣ ಎಂದು ಬಹುತೇಕರು ಬಗೆದಿದ್ದಾರೆ. ಈ ತಪ್ಪು-ಕಲ್ಪನೆ ಅಕ್ಶರ ಕಲಿಯುವವರ ಮೇಲೆ, ಶಾಲೆಗೆ ಬರುವವರ ಮೇಲೆ ವಿಪರೀತ ಪ್ರಬಾವ ಬೀರಿ, ಇಡಿಯಾಗಿ ಮುಸುಕಿಕೊಳ್ಳುತ್ತಿದೆ. ಹೀಗಾಗಿ ‘ಬಕುತ’, ‘ಬಗುತ’ ಇಂತ ಸಹಜವಾದ ಪದರೂಪಗಳು ಬಳಕೆಯಿಂದ ಕೂಡ ನಿದಾನವಾಗಿ ಇಳಿಗೊಳ್ಳುತ್ತಿವೆ.

ಶಿಶ್ಟಕನ್ನಡದ ಹೇರಿಕೆಯಿಂದಾಗಿ ಈ ರೀತಿಯ ಸಹಸ್ರ ಸಹಸ್ರ ವಿವಿದತೆಗಳು ಇಲ್ಲವಾಗುತ್ತಿರುವ ಪ್ರವಾಹದಲ್ಲಿ ಬಕುತ ಕೂಡ ಕೊಚ್ಚಿ ಹೋಗುತ್ತಿದೆ. ಇಲ್ಲಿ ಒಂದು ಸರಳ ಸೂತ್ರ. ಬಕುತ ಎಂಬ ಪದವನ್ನು ಒಪ್ಪಿಕೊಳ್ಳಬೇಕು. ಅದನ್ನು ತಿರಸ್ಕರಿಸುವುದು ಬೇಡ. ಇದರಂತೆಯೆ ಇಂದಿಗೂ ನಮ್ಮ ನಾಡಿನಲ್ಲಿ ಬರುಮಣ್ಣ, ಲಕುಮಿ, ಕಿಟ್ಟಪ್ಪ ಮೊದಲಾದವರು ಇದ್ದಾರೆ. ಇವರೆಲ್ಲರನ್ನೂ ಬ್ರಹ್ಮ, ಲಕ್ಶ್ಮಿ, ಕ್ರಿಶ್ಣ ಎಂದು ಬದಲಿಸಲಾಗುತ್ತಿದೆ. ಅದಕ್ಕಿಂತ ಮೊದಲು ಅವರನ್ನು ಕೀಳಾಗಿ

ಕಾಣಲಾಗುತ್ತಿದೆ. ವಾಸ್ತವದ ಕನ್ನಡ ಜಾಯಮಾನವನ್ನು ಉಳಿಸಿಕೊಂಡಿರುವ ಪದರೂಪಗಳನ್ನು ಸಮನಾಗಿ ಕಾಣಬೇಕಿದೆ. ಇಲ್ಲಿ ಕನ್ನಡದ ಜಾಯಮಾನ ಅವಮಾನಕ್ಕೆ ಮತ್ತು ಕನ್ನಡದ್ದಲ್ಲದ ಜಾಯಮಾನ ಮಾನಕ್ಕೆ ಎಡೆಯಾಗುತ್ತಿವೆ. ಯಾವುದನ್ನೂ ಅವಮಾನಕ್ಕೆ ಈಡು ಮಾಡುವುಡು ಬೇಡ. ನೆಲದ ಸೊಗಡೂ ಹೊರಗಿನ ಸೊಗಸೂ ಕೂಡಿ ಬದುಕಬಹುದಲ್ಲವೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...

ಕನ್ನಡಮುಂ ಪಾಗದಮುಂ

04-05-2024 ಬೆಂಗಳೂರು

"ಅಸೋಕನ ಶಾಸನಗಳನ್ನು ಓದುವ ವಿದ್ವಾಂಸರು ಇದನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಅದರೊಟ್ಟಿಗೆ ಆ ಕಾಲರ‍್ಯ...