ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

Date: 03-10-2022

Location: ಬೆಂಗಳೂರು


ಹೆಣ್ಣನ್ನು ರಾಕ್ಷಸಿಯೆಂದು ಕರೆದ ಈ ದೇಶದ ಧಾರ್ಮಿಕ ಪರಂಪರೆಯಲ್ಲಿ, ಬಸವಣ್ಣ, ಕನ್ನೆಯ ಸ್ನೇಹದಲ್ಲಿ ಕೂಡಲಸಂಗಮದೇವನನ್ನು ಕಂಡದ್ದು ಅತಿ ಮಹತ್ವದ ಸಂಗತಿಯಾಗುತ್ತದೆ. ಇಲ್ಲಿ ಕೂಡಲಸಂಗಮದೇವರ ಮುಖಾಂತರ ಕನ್ನೆಯ ಸ್ನೇಹದ ಪರಿಚಯವಾಗದೆ, ಕನ್ನೆಯ ಸ್ನೇಹದ ಮೂಲಕ ಕೂಡಲಸಂಗಮ ದೇವರ ನಿಲುವು ಸ್ಪಷ್ಟವಾಗಿದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಹೆಣ್ಣನ್ನುಶರಣರು ದೇವರ ಸ್ವರೂಪದಲ್ಲಿ ಕಂಡ ಬಗೆಯನ್ನು ವಿವರಿಸಿದ್ದಾರೆ.

ವಚನಸಾಹಿತ್ಯ ಮತ್ತು ಮಹಿಳೆ ಎಂಬ ವಿಷಯದತ್ತ ಕೇಂದ್ರೀಕರಿಸಿ ನೋಡಿದಾಗ ಎರಡು ಅಂಶಗಳು ಗಮನಕ್ಕೆ ಬರುತ್ತವೆ. ವಚನಕಾರರು ಮಹಿಳೆಯರನ್ನು ನೋಡಿದ ದೃಷ್ಟಿಕೋನ, ವಚನಕಾರ್ತಿಯರು ಮಹಿಳೆಯನ್ನು ಕಂಡ ಬಗೆ ಹೀಗೆ ಎರಡುರೀತಿಯ ವಿಂಗಡಣೆ ಸಾಧ್ಯವಾಗುತ್ತದೆ. ಆದರೆ ತುಂಬ ಕುತೂಹಲದ ಸಂಗತಿಯೆಂದರೆ ವಚನಚಳುವಳಿಯಲ್ಲಿ ಮಹಿಳಾ ವಿಮೋಚನೆಯನ್ನು ಕುರಿತು, ಮಹಿಳೆಯ ಸಾಧ್ಯತೆಗಳನ್ನು ಕುರಿತು ವಚನಕಾರ್ತಿಯರಿಗಿಂತ, ವಚನಕಾರರೇ ಮಾತನಾಡಿದ್ದಾರೆ. ಹೀಗಾಗಿ `ವಚನ ಸಾಹಿತ್ಯದಲ್ಲಿ ಮಹಿಳೆ’ಯೆಂದರೆ ವಚನಕಾರರು ಕಂಡ ಮಹಿಳೆಯೇ ಆಗಿದ್ದಾಳೆ.

ವಚನಕಾರರನ್ನು ಕುರಿತು ವಚನಕಾರ್ತಿಯರು, ವಚನಕಾರ್ತಿಯರನ್ನು ಕುರಿತು ವಚನಕಾರರು ಉಲ್ಲೇಖಿಸಿದ್ದಾರೆ. ವಚನಕಾರರು ವಚನಕಾರ್ತಿಯರ ಬಗೆಗೆ ಹೇಳುವಾಗ ಆಕೆ ಕೇವಲ ಮಹಿಳೆಯೆಂಬುದನ್ನು ಮಾತ್ರ ಮುಂದೆ ಮಾಡದೆ ಆಕೆ ಒಬ್ಬ ಸಾಧಿಕೆಯೆಂಬುದನ್ನು ಮನಗಂಡಿದ್ದಾರೆ. ವಚನಕಾರ್ತಿಯರು ಕೂಡ ಇಲ್ಲಿ ಕೇವಲ ಮಹಿಳೆಯರಾಗದೆ ಮಹತ್ವದ ಸಾಧ್ಯತೆಗಳನ್ನು ಪ್ರಕಟಿಸಿದ್ದಾರೆ. ಹೀಗಾಗಿ ವಚನ ಚಳವಳಿಗೆ ಮಹಿಳೆ-ಪುರುಷ ಎಂಬುದು ಮುಖ್ಯವಾಗದೆ ಇಡೀ ಬದುಕಿನ ಹುಡುಕಾಟ ಮುಖ್ಯವಾಗುತ್ತದೆ. ಅಂತೆಯೇ ವಚನಚಳವಳಿಯಲ್ಲಿ ದಲಿತ ವಚನಕಾರರು ದಲಿತರ ಬಗೆಗೆ ಮಾತನಾಡಲಿಲ್ಲ. ವಚನಕಾರರೇ ಅವಳ ಸಾಧ್ಯತೆಗಳನ್ನು ಹೆಚ್ಚು ವಿವರಿಸಿದರು. ಇಲ್ಲಿ ತನ್ನ ನೋವು-ಸಂಕಟಗಳನ್ನು ದೊಡ್ಡದನ್ನಾಗಿ ಮಾಡಿಕೊಂಡು ಹೇಳಲಾರದೆ, ಇತರರ ನೋವು-ಸಂಕಟಗಳಿಗೆ ಸ್ಪಂದಿಸುವ ದಯಾಪ್ರಧಾನವಾದ ಸಂಸ್ಕೃತಿ ಎದ್ದುಕಾಣುತ್ತದೆ. ಒಬ್ಬರ ನೋವನ್ನು ಇನ್ನೊಬ್ಬರು ಅರ್ಥಮಾಡಿಕೊಳ್ಳುವ ಒಬ್ಬರ ಮೌನಕ್ಕೆ ಇನ್ನೊಬ್ಬರು ಮಾತಾಗುವ ಸಹೃದಯ ಸಂಸ್ಕೃತಿಯನ್ನು ವಚನಚಳುವಳಿಯಲ್ಲಿ ಕಾಣಬಹುದಾಗಿದೆ. ಅಂತೆಯೇ ಇಲ್ಲಿ ತನ್ನ ಬಗೆಗೆ ವೈಭವೀಕರಣವಿರದೆ ಇನ್ನೊಬ್ಬರ ಬಗೆಗಿನ ಅಂತಃಕರಣ ಮುಖ್ಯವಾಗುತ್ತದೆ. ಇದು ವಚನಚಳುವಳಿಯ ಉದಾತ್ತ ಧ್ಯೇಯವಾಗಿದೆ.

ಪ್ರಾರಂಭದ ವಚನಕಾರರೆಂದು ಪ್ರಸಿದ್ಧನಾಗಿರುವ ಜೇಡರ ದಾಸಿಮಯ್ಯನ ವಚನವೊಂದರ ಮೂಲಕ ಈ ವಿಶ್ಲೇಷಣೆಯನ್ನು ಪ್ರಾರಂಭಿಸಬಹುದಾಗಿದೆ.

“ಮೊಲೆ-ಮುಡಿಬಂದರೆ ಹೆಣ್ಣೆಂಬರು
ಗಡ್ಡ-ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮನು
ಗಂಡೂ ಅಲ್ಲ ಹೆಣ್ಣೂ ಅಲ್ಲ ಕಾಣಾ ರಾಮನಾಥ”
- ಜೇಡರ ದಾಸಿಮಯ್ಯ, (ವ : 111)

ವಚನಕಾರರು ಕಂಡ ಹೆಣ್ಣು ಹೇಗಿದ್ದಳೆಂಬುದನ್ನು ಈ ವಚನ ಸ್ಪಷ್ಟಗೊಳಿಸುತ್ತದೆ. ಅಂಗಾಂಗಗಳಲ್ಲಿ ಕೆಲವು ಬದಲಾವಣೆಗಳನ್ನು ಬಿಟ್ಟರೆ ಹೆಣ್ಣಿಗೂ-ಗಂಡಿಗೂ ಯಾವ ಭೇದವಿಲ್ಲವೆಂಬುದನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ದಾಸಿಮಯ್ಯನಂತಹ ಶರಣರು `ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ’ ವೆಂದು ವಿಶ್ಲೇಷಿಸಿದ್ದಾರೆ. ಆತ್ಮವೆಂಬುದು ಸನಾತನ ಧರ್ಮದಲ್ಲಿ ತಿಳಿಯಲಾರದ ನಿಗೂಢವಾಗಿದ್ದರೆ, ವಚನಕಾರರು ಅದರರ್ಥವನ್ನು ಸ್ಪಷ್ಟಪಡಿಸುತ್ತ ಸಮಾನತೆಯ ಸಂಕೇತವಾಗಿ ಬಳಸಿದ್ದಾರೆ. ಮೊಲೆ-ಮುಡಿ ಹಾಗೂ ಗಡ್ಡ-ಮೀಸೆಗಳಿಗಿರುವ ಭೇದ ಕೇವಲ ದೈಹಿಕವಾದುದು. ಮನಸ್ಸು, ಆತ್ಮ, ಜೀವಗಳಿಗೆ ಹೆಣ್ಣು-ಗಂಡುಗಳೆಂಬ ಭೇದವಿಲ್ಲ. ದೇಹಕ್ಕಿಂತ ಜೀವ ದೊಡ್ಡದು, ಜೀವವಿಲ್ಲದ ದೇಹಕ್ಕೆ ಯಾವ ಬೆಲೆಯೂ ಇಲ್ಲ. ಹೀಗಾಗಿ ಆತ್ಮದಲ್ಲಿ ಭೇದವಿಲ್ಲದಿದ್ದಾಗ ಗಂಡು-ಹೆಣ್ಣು ಬೇರೆ ಬೇರೆ ಅಲ್ಲವೇ ಅಲ್ಲ, ಅವೆರಡೂ ಒಂದೇ ಎಂಬ ಸತ್ಯವನ್ನು ವಚನಕಾರರು ಅರ್ಥಪೂರ್ಣವಾಗಿ ವಿಶ್ಲೇಷಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.

ಇದನ್ನೆ ಮುಂದುವರಿಸಿ ಹೇಳಿದ ದಾಸಿಮಯ್ಯ “ಮಡದಿಯ ಪ್ರಾಣಕ್ಕೆ ಮೊಲೆ-ಮುಡಿ ಇದ್ದಿತ್ತೆ? ಒಡೆಯರ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? (ವ-81) ಎಂದು ಪ್ರಶ್ನಿಸುತ್ತಾನೆ. ಆ ಅಸಮಾನತೆಯ ವ್ಯವಸ್ಥೆಯಲ್ಲಿ ವರ್ಣಭೇದ, ಜಾತಿಭೇದಗಳ ಜತೆಯಲ್ಲಿ ಈ ಲಿಂಗಭೇದವೂ ಪ್ರಮುಖವಾಗಿತ್ತು. ಈ ಎಲ್ಲ ಭೇದಗಳನ್ನು ಆಧಾರಸಹಿತವಾಗಿ ಅಲ್ಲಗಳೆದ ವಚನಕಾರರು, ಲಿಂಗಭೇದವನ್ನೂ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಲಿಂಗಭೇದದ ಜತೆಗೆ ಸನಾತನ ಸಂಸ್ಕೃತಿ ಹೆಣ್ಣಿಗೆ ಮಾಯೆಯೆಂದು ಕರೆದು ಮೋಸ ಮಾಡಿದೆ. ಕೆಲವು ವಚನಕಾರರು ಈ ಮಾಯೆಯನ್ನು ಪೂರ್ಣವಾಗಿ ತಿರಸ್ಕರಿಸದೆ ಅದಕ್ಕೆ ಹೊಸ ಅರ್ಥ ನೀಡಿದ್ದರೆ, ಅಲ್ಲಮಪ್ರಭು ಇದನ್ನು ನೇರವಾಗಿ ತಿರಸ್ಕರಿಸಿದ್ದಾರೆ.

“ಹೊನ್ನು ಮಾಯೆಯೆಂಬರು ಹೊನ್ನು ಮಾಯೆಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ”
- ಅಲ್ಲಮಪ್ರಭು (ವ:50)

ಶತಮಾನಗಳಿಂದ ಹೆಣ್ಣು-ಹೊನ್ನು-ಮಣ್ಣುಗಳನ್ನು ಮಾಯೆಯೆಂದು ನಂಬಿದ ಜನತೆಗೆ ಅಲ್ಲಮಪ್ರಭು ಅವು ಮಾಯೆಯಲ್ಲವೆಂಬುದನ್ನು ಬಹಳ ತಾತ್ವಿಕವಾಗಿ ಸಮರ್ಥಿಸಿದ್ದಾರೆ. ಮಾಯೆಯೆಂಬುದು ನೋಡುವ ಕಣ್ಣಿಗೆ ಹೊರತು, ಕಾಣುವ ವಸ್ತುವಿಗಲ್ಲವೆಂಬುದನ್ನು ಸ್ಪಷ್ಟಪಡಿಸಿದ ಪ್ರಭು `ಮನದ ಮುಂದಣ ಆಸೆಯೇ ಮಾಯೆ’ ಎಂಬ ನಿರ್ಣಯಕ್ಕೆ ಬಂದಿರುವುದು ಹೆಚ್ಚು ವೈಜ್ಞಾನಿಕವೆನಿಸುತ್ತದೆ. ಆಸೆಯಿಂದಲೇ ಮೋಹ ಹುಟ್ಟುತ್ತದೆ ಅದೇ ಮೋಹ ಮಾಯೆಯಾಗಿ ಕಾಡುತ್ತದೆ. ತನ್ನೊಳಗಿನ ಆಸೆಯನ್ನು ಮಿತಿಗೊಳಿಸದೆ, ತನ್ನದಲ್ಲದ ವಸ್ತುವನ್ನು ಮಾಯೆಯೆಂದು ಕರೆಯುವುದು ಸೂಕ್ತವಲ್ಲವೆಂದು ಪ್ರಭು ಸೂಚ್ಯವಾಗಿ ಹೇಳಿದ್ದಾರೆ. “ಆಸೆಯೇ ದುಃಖಕ್ಕೆ ಮೂಲ ಕಾರಣ”ವೆಂದು ಹೇಳಿದ ಬುದ್ಧನ ನಿಲುವನ್ನು ಪ್ರಭು ಸಾರ್ಥಕ ರೀತಿಯಲ್ಲಿ ವಿವರಿಸಿದ್ದಾರೆ. ಹೆಣ್ಣು ಮಾಯೆಯಲ್ಲವೆಂಬುದನ್ನು ಸ್ಪಷ್ಟಪಡಿಸಿ, ಆಸೆಯೇ ಮಾಯೆಯೆಂದು ಹೇಳಿದ ಮಾತಿನಲ್ಲಿ ಎರಡು ತತ್ವಗಳನ್ನು ಅಡಕಗೊಳಿಸಿದ್ದಾನೆ.

ಅಲ್ಲಮಪ್ರಭು ಹೆಣ್ಣನ್ನು ಮಾಯೆಯಲ್ಲವೆಂದು ಸ್ಪಷ್ಟಪಡಿಸಿದರೆ, ಬಸವಣ್ಣ ಹೆಣ್ಣನ್ನು ಮಾಯೆಯೆಂದು ಕರೆದಿದ್ದಾನೆ. ಆದರೆ ಸನಾತನರು ಹೆಣ್ಣು ಮಾಯೆಯೆಂದು ಕರೆಯುವುದಕ್ಕೂ ಬಸವಣ್ಣ ಮಾಯೆಯೆಂದು ಕರೆಯುವುದಕ್ಕೂ ತೀವ್ರತರವಾದ ವ್ಯತ್ಯಾಸವಿದೆ. ಬಸವಣ್ಣ ‘ಮಾಯೆ’ ಯೆಂಬುದನ್ನು ಶಕ್ತಿಯೆಂಬರ್ಥದಲ್ಲಿ ಬಳಸಿದ್ದಾನೆ.

`ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗುವಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ. (ಬ.ವ:15) ಎಂಬ ನುಡಿಗಳಲ್ಲಿ ಮಾಯೆಯೆಂಬುದು ಶಕ್ತಿಯ ಸಂಕೇತವಾಗಿ, ಅದು ಭಕ್ತಿಯ ಭಾವನೆಯಲ್ಲಿ ವ್ಯಕ್ತವಾಗಿದೆ. ಈ ವಚನ ಭಕ್ತಸ್ಥಲದಲ್ಲಿ ಬರುತ್ತದೆ. ಸ್ತ್ರೀ-ಪುರುಷರ ಅನಾದಿ ಸಂಬಂಧವನ್ನು ಈ ವಚನ ವ್ಯಕ್ತಪಡಿಸುತ್ತದೆ. ತಾಯಿಯಾಗಿ, ಮಡದಿಯಾಗಿ, ಮಗಳಾಗಿ ತನ್ನ ಅಸ್ತಿತ್ವಕ್ಕೆ ಕಾರಣಳಾದ ಮಹಿಳೆಯನ್ನು ಬಸವಣ್ಣ, ಮಾಯೆಯೇ ತಾಯಿಯೆಂದು, ತಾಯಿಯೇ ಶಕ್ತಿಮಾತೆಯೆಂದು ಕರೆದಿದ್ದಾನೆ. ಭಕ್ತಿಭಾವದಲ್ಲಿ ಆಕೆಯನ್ನು ಮಾಯೆಯೆಂದು ಭಾವಿಸಿಕೊಂಡು ಜಗನ್ಮಾತೆಯೆಂದು ಕರೆದಿದ್ದಾನೆ. ಹೀಗೆ ಪ್ರಭುವಿನ ‘ಮಾಯೆ’ ಬಸವಣ್ಣನ ‘ಮಾಯೆ’ ಬೇರೆ-ಬೇರೆಯಾಗಿದ್ದಾರೆ. ಪ್ರಭು ವೈಚಾರಿಕ ನೆಲೆಯಲ್ಲಿ ‘ಮಾಯೆ’ ಪದದ ಅರ್ಥವನ್ನು ಬಳಸಿದರೆ, ಬಸವಣ್ಣ ಭಕ್ತಿಯ ನೆಲೆಯಲ್ಲಿ ಅದನ್ನು ಬಳಸಿ ಆ ಪದಕ್ಕೆ ಅತ್ಯಂತ ಗೌರವದ ಸ್ಥಾನವನ್ನು ತಂದುಕೊಡುತ್ತಾನೆ. “ಈ ಮಾಯೆಯನ್ನರಿವಡೆ ನನ್ನಳವಲ್ಲ, ಅದನ್ನು ನೀವೇ ಬಲ್ಲಿರಿ ಕೂಡಲಸಂಗಮದೇವ” ಎಂಬ ವಚನದ ಮುಂದಿನ ಭಾಗ ಈ ಮಾತನ್ನು ಸ್ಪಷ್ಟಪಡಿಸುತ್ತದೆ. ಬಸವಣ್ಣನಿಗೆ ಇಲ್ಲಿ ಹೆಣ್ಣು ಕೇವಲ ಹೆಣ್ಣಾಗಿ ಮಾತ್ರಕಾಣದೆ ಆಕೆ ಅನಂತ ಸೃಷ್ಟಿಯ ಸಂಕೇತವಾಗಿದ್ದಾಳೆ. ಸೃಜನಶೀಲತೆಯ ಪ್ರತೀಕವಾಗಿದ್ದಾಳೆ. ಅಂತೆಯೇ ಆಕೆ ಸಾಮಾನ್ಯವಾದ ಪುರುಷನಿಗಿಂತ ಎತ್ತರದ ಸ್ಥಾನದಲ್ಲಿದ್ದಾಳೆ. ಅಂತೆಯೇ ಭಕ್ತಿಭಾವದಲ್ಲಿ ಬಸವಣ್ಣ ಆಕೆಯನ್ನು `ತಾಯಿ’ಯೆಂದು-`ಮಾಯೆ’ಯೆಂದು ಗೌರವದಿಂದ ಸ್ಮರಿಸಿದ್ದಾನೆಯೇ ಹೊರತು, ಮಾಯೆಯೆಂದರೆ `ಚಂಚಲ’ ಎಂಬರ್ಥದಲ್ಲಿ ಆ ಪದವನ್ನು ಬಳಸಿಲ್ಲವೆಂಬುದು ಸ್ಪಷ್ಟವಾಗುತ್ತದೆ.

ವಚನಕಾರರು ಮಹಿಳೆಗೆ ಸಮಾನ ಸ್ಥಾನ ನೀಡಿ, ಗೌರವದಿಂದ ಕಂಡಿದ್ದಾರೆನ್ನಲಿಕ್ಕೆ ಅನೇಕ ವಚನಗಳನ್ನು ಉಲ್ಲೇಖಿಸಬಹುದಾಗಿದೆ. ದಾಂಪತ್ಯ ಜೀವನದಲ್ಲಿ ಸತಿ-ಪತಿ ಒಂದಾಗಿರಬೇಕೆಂಬುದೇ ಅವರ ನಿಲುವಾಗಿದೆ. ಅಂತೆಯೇ ದಾಸಿಮಯ್ಯನಂತಹ ವಚನಕಾರರು “ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂದು ಹೇಳಿದರೆ `ದಾಸ-ದುಗ್ಗಳೆಯರಂತೆ, ಸಿರಯಾಳ-ಚಂಗಳೆಯರಂತೆ’ ನೆರೆನಂಬೊ ನೆರೆನಂಬೋ ಎಂದು ಬಸವಣ್ಣ ಹೇಳಿದ್ದಾರೆ.

ಹೆಣ್ಣನ್ನು ತಾಯಿಯೆಂದು, ಅಕ್ಕನೆಂದು ಕರೆದು ಗೌರವಿಸುವ ಅವರ ರೀತಿ ಭಾರತೀಯ ಸಂಸ್ಕೃತಿಯನ್ನು ನಿಜವಾದ ಅರ್ಥದಲ್ಲಿ ಪ್ರತಿಪಾದಿಸುತ್ತದೆ.

“ಎಮ್ಮ ತಾಯಿ ನಿಂಬವ್ವೆ ನೀರನೆರೆದುಂಬಳು...
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು”
ಎಂದು ಬಸವಣ್ಣನವರು ಮಹಿಳೆಯನ್ನು ಕುರಿತು ಹೇಳಿದರೆ, ಸಿದ್ಧರಾಮನು
“ಹೆತ್ತ ತಾಯಿ ನೀನೆ ಅವ್ವಾ; ನನ್ನ ಹತ್ತರ ಬಂದಾಕೆ ನೀನೆ ಅವ್ವಾ;
ಲಿಂಗದ ಮೊತ್ತವಾದಾಕೆ ನೀನೆ ಅವ್ವಾ;
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ರಾಣಿ ನೀನೇ ಅವ್ವಾ

-ಸಿದ್ಧರಾಮ (ವ:108)

ಎಂದು ಹೆಣ್ಣು-ತಾಯಿಯಾದ ಸಾಧ್ಯತೆಗಳನ್ನು ವಿವರಿಸಿದ್ದಾನೆ. “ಎಮ್ಮಕ್ಕ ಮಹಾದೇವಿ ಎಮ್ಮಕ್ಕ ಗಂಗಾದೇವಿ”-(ಸಿ.ರಾ.ವ: 1178) ಎಂದು ಕೊಂಡಾಡಿದ್ದಾನೆ. ತನ್ನ ಇನ್ನೊಂದು ವಚನದಲ್ಲಿ ಸಿದ್ಧರಾಮ,“ಹೆಣ್ಣಳಿದ ಬಳಿಕ ಮಣ್ಣಿನ ಹಂಗೇಕಯ್ಯ” (ಸ.ರಾ.ವ:299) ಎಂದು ಪ್ರಶ್ನಿಸಿದ್ದಾನೆ. ಹೀಗೆ ಅನೇಕ ವಚನಕಾರರು ಹೆಣ್ಣನ್ನು ತಾಯಿಯೆಂದು ಕರೆದು ಗೌರವಿಸಿದ್ದಾರೆ, ಅಕ್ಕನೆಂದು ಹೇಳಿ ವಾತ್ಸಲ್ಯ ಪ್ರಕಟಿಸಿದ್ದಾರೆ. ತಂಗಿಯೆಂದು ಅಕ್ಕರೆಯಿಂದ ಕಂಡಿದ್ದಾರೆ. ಶತಮಾನಗಳಿಂದ ಹೆಣ್ಣನ್ನು ಅಸ್ಪೃಶ್ಯಳನ್ನಾಗಿ ಕಂಡ ಸಮಾಜವ್ಯವಸ್ಥೆಯಲ್ಲಿ ಶರಣರು ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದ್ದಾರೆ.

ಶರಣರು ಹೆಣ್ಣನ್ನು ಮಾತೆಯೆಂದು ಒಪ್ಪಿಕೊಂಡು, ಸತಿಯೆಂದು ಅಪ್ಪಿಕೊಂಡ ಅವರು ಸಂಸಾರವನ್ನು ತಿರಸ್ಕರಿಸಲಿಲ್ಲ, ಆಧ್ಯಾತ್ಮವನ್ನು ಕೈಬಿಡಲಿಲ್ಲ. ಈ ದೇಶದ ಧಾರ್ಮಿಕ ಪರಂಪರೆಯಲ್ಲಿ ಮೋಕ್ಷಸಾಧನೆಗೆ ಸಂಸಾರ-ಹೆಂಡತಿ-ಮಕ್ಕಳನ್ನು ತಿರಸ್ಕರಿಸಲಾಗಿದೆ. ಸಂಸಾರದಲ್ಲಿದ್ದುಕೊಂಡು ಸಾಧಿಸುವುದಾಗುವುದಿಲ್ಲವೆಂದು ಅನೇಕ ಧಾರ್ಮಿಕ ಮುಖಂಡರು ಹೇಳಿದ್ದಾರೆ. ಇನ್ನು ಕೆಲವರು ಸಂಸಾರದಲ್ಲಿಯೇ ಮುಳುಗಿ, ಮೇಲೇಳದಂತೆ ಮರೆಯಾಗಿ ಹೋದವರಿದ್ದಾರೆ. ಇವೆರಡೂ ಅತಿಗಳನ್ನು ಕಂಡುಕೊಂಡ ಶರಣರು ಹೊಸ ಮಾರ್ಗವನ್ನು ಹುಡುಕಿದರು. ಅವರು ಇಹವನ್ನು ತಿರಸ್ಕರಿಸಲಿಲ್ಲ. ಪರವನ್ನು ನಿರಾಕರಿಸಲಿಲ್ಲ. ಇಹದ ಮೂಲಕವೇ ಪರವನ್ನು ಪರಿಚಯಿಸಿದರು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರೆಂದು ಸ್ಪಷ್ಟಪಡಿಸಿದರು. ಸ್ವರ್ಗಲೋಕ-ನರಕಲೋಕ ಬೇರಿಲ್ಲಕಾಣಿರೋ ಎಂದು ವಿವರಿಸಿ ಹೇಳಿದರು. ಇಹ-ಪರಗಳು ಒಂದಕ್ಕೊಂದು ವಿರುದ್ಧವೆಂದು ತಿಳಿದುಕೊಂಡಿದ್ದ ಸಂದರ್ಭದಲ್ಲಿ ಅವೆರಡೂ ಒಂದಕ್ಕೊಂದು ಪೂರಕವೆಂಬುದನ್ನು ತಿಳಿಸಿ ಹೇಳಿದರು. ಹೀಗಾಗಿ ಶರಣರಿಗೆ ಆಧ್ಯಾತ್ಮ-ಅನುಭಾವದ ಕಡೆಗೆ ಲಕ್ಷ್ಯವಿರುವಂತೆ, ಸತಿ-ಸಂಸಾರದ ಬಗೆಗೆ ಒಲವಿದೆ. ಈ ಒಲವಿನಿಂದಲೇ ಆ ಗೆಲವು ಸಾಧ್ಯವೆಂಬುದನ್ನವರು ನುಡಿದು ತೋರಿಸಿದ್ದಾರೆ, ನಡೆದು ಕಾಣಿಸಿದ್ದಾರೆ.

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು;
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು;
ನನೆಯೊಳಗಣ ಪರಿಮಳದಂತಿದ್ದಿತ್ತು;
ಕೂಡಲಸಂಗಮದೇವರ ನಿಲವು
ಕನ್ನೆಯ ಸ್ನೇಹದಂತಿದ್ದಿತ್ತು”

- ಬಸವಣ್ಣ (ವ:1)

ಬಸವಣ್ಣನವರ ಇದೊಂದು ವಚನ, ಶರಣರು ಹೆಣ್ಣನ್ನು ಯಾವ ರೀತಿಯಾಗಿ ಕಂಡಿದ್ದಾರೆಂಬುದಕ್ಕೆ ಸಾಕ್ಷಿಯಂತಿದೆ. ಯಾವ ಹೆಣ್ಣು ಆಧ್ಯಾತ್ಮ-ಧಾರ್ಮಿಕ ಕ್ಷೇತ್ರಕ್ಕೆ ಅಸ್ಪೃಶ್ಯಳಾಗಿದ್ದಳೋ ಅವಳನ್ನೇ ದೇವರ ಸ್ವರೂಪದಲ್ಲಿ ಕಾಣುವುದು, ಯಾವ ಹೆಣ್ಣು ಅದೃಶ್ಯಳಾಗಿದ್ದಳೋ ಅವಳನ್ನೇ ಮುಂಚೂಣಿಯಲ್ಲಿ ನಿಲ್ಲಿಸಿ ಗುರುತಿಸುವುದು ಶರಣರ ಉದಾತ್ತ ನಿಲುವನ್ನು, ಮಾನವೀಯ ಕಳಕಳಿಯನ್ನು ಸ್ಪಷ್ಟಪಡಿಸುತ್ತದೆ.

ಹೆಣ್ಣನ್ನು ರಾಕ್ಷಸಿಯೆಂದು ಕರೆದ ಈ ದೇಶದ ಧಾರ್ಮಿಕ ಪರಂಪರೆಯಲ್ಲಿ, ಬಸವಣ್ಣ, ಕನ್ನೆಯ ಸ್ನೇಹದಲ್ಲಿ ಕೂಡಲಸಂಗಮದೇವನನ್ನು ಕಂಡದ್ದು ಅತಿ ಮಹತ್ವದ ಸಂಗತಿಯಾಗುತ್ತದೆ. ಇಲ್ಲಿ ಕೂಡಲಸಂಗಮದೇವರ ಮುಖಾಂತರ ಕನ್ನೆಯ ಸ್ನೇಹದ ಪರಿಚಯವಾಗದೆ, ಕನ್ನೆಯ ಸ್ನೇಹದ ಮೂಲಕ ಕೂಡಲಸಂಗಮ ದೇವರ ನಿಲುವು ಸ್ಪಷ್ಟವಾಗಿದೆ. ಕನ್ನೆಯ ಸ್ನೇಹ ಮಾತ್ರ ಕೂಡಲಸಂಗಮದೇವರ ನಿಲುವನ್ನು ಕಾಣಿಸುವ ಸಾಧನವಾಗಿದೆ. ಹೀಗೆ ಇಹದಲ್ಲಿಯೇ ಪರವನ್ನು ಕಾಣುವ ಬಸವಣ್ಣ ಮುಂತಾದ ವಚನಕಾರರ ನಿಲುವು, ಆಧ್ಯಾತ್ಮಕ್ಷೇತ್ರಕ್ಕೆ ನೀಡಿದ ಹೊಸ ಆಯಾಮವಾಗಿದೆ. ಕನ್ನೆಯಸ್ನೇಹ ಕೇಡಿಗೆ ಕಾರಣವೆಂದು ಸನಾತನಿಗಳು ತಿಳಿದುಕೊಂಡಿದ್ದರೆ, ಆ ಕನ್ನೆಯಸ್ನೇಹದ ಮೂಲಕವೇ ಕೂಡಲಸಂಗಮದೇವರ ನಿಲುವನ್ನು ಶರಣರು ಕಂಡುಕೊಂಡಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...