ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

Date: 10-02-2024

Location: ಬೆಂಗಳೂರು


"ಏನಿದು? ಕಲ್ಲು ಕಲ್ಲಾಯಿತೆ ಅಂದರೆ? ಇದೇನು ಕವನವೆ? ಬಾಶೆಯ ಬಗೆಗೆ ಬರೆಯುವ ಅಂಕಣದಾಗ ಕವನ ಯಾಕೆ? ಒಹ್ ಹಲವು ಪ್ರಶ್ನೆಗಳೆ.. ಬನ್ನಿ, ಕಲ್ಲು ಬಾಶೆಯಲ್ಲಿ ಕಲ್ಲಾದುದಾದರೂ ಹೇಗೆ? ಕಲ್ಲು ಕಲ್ಲಾಗಿರುವುದರಿಂದ ಇನ್ನೇನಾದರೂ ಆಯಿತೆ? ಹೀಗೆಲ್ಲ ಇವತ್ತು ತುಸು ಸುಮ್ಮನೆ ಹರಟೆ ಹೊಡೆಯೋಣ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?’ ಕುರಿತು ವಿಶ್ಲೇಷಿಸಿದ್ದಾರೆ.

ಕಲ್ಲು ಎನ್ನುವುದು ಒಂದು ಕನ್ನಡದ ಶಬ್ದ. ಕನ್ನಡದಲ್ಲಿ ಕಲ್ಲು ಎಂಬ ಒಂದು ಬವುತಿಕ ವಸ್ತುವನ್ನು ಸೂಚಿಸುವ ಕಸುವು ಇದೆ. ಈ ಶಬ್ದಕ್ಕೆ ಯಾಕೆ ಕಲ್ಲು ಎಂಬ ಅರ‍್ತ ಬಂದಿತು? ಇದಕ್ಕೆ ಉತ್ತರ ಇಲ್ಲ. ಅಂದ ಹಾಗೆ ಕಲ್ಲು ಎನ್ನುವುದಕ್ಕೆ ತೆಲುಗಿನಲ್ಲಿ ರಾಯಿ ಎಂದರೆ, ಹಿಂದಿಯಲ್ಲಿ ಪತ್ತರ್ ಎಂದರೆ ಸಂಸ್ಕ್ರುತದಾಗ ಶಿಲಾ ಎಂದರೆ ಇಂಗ್ಲೀಶಿನಲ್ಲಿ ಸ್ಟೋನ್ ಎಂದರೆ, ಹೀಗೆ ಜಗದೆಲ್ಲ ಬಾಶೆಗಳಲ್ಲಿ ಕಲ್ಲು ಎಂಬುದನ್ನು ಹೇಳುವುದಕ್ಕೆ ಬೇರೆ ಬೇರೆ ಪದಗಳು ಬಳಕೆಯಲ್ಲಿವೆ.

ಬೇರೆ ಬೇರೆ ಬಾಶೆಗಳ ಕಡೆಗೇಕೆ ನಾವು. ನಾವು ಕನ್ನಡದ ಕಲ್ಲು ಕುರಿತೆ ಮಾತಾಡೋಣ. ಆದರೆ, ಬೇರೆ ಬೇರೆ ಬಾಶೆಗಳಲ್ಲಿ ಕಲ್ಲು ಎಂಬುದನ್ನು ಹೇಳುವುದಕ್ಕೆ ಬೇರೆ ಬೇರೆ ಶಬ್ದಗಳು ಇವೆ ಎನ್ನುವುದು ಒಂದು ವಾಸ್ತವವನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದೆಂದರೆ, ಕಲ್ಲು ಎಂಬ ಶಬ್ದಕ್ಕೂ ಆ ಶಬ್ದ ಸೂಚಿಸುವ ವಸ್ತುವಿಗೂ ಯಾವುದೆ ನೇರ ಇಲ್ಲವೆ ಸಾವಯವ ಸಂಬಂದ ಇಲ್ಲ. ಅದು ಹೇಗೆ? ಎಂಬ ಪ್ರಶ್ನೆ ಬರಬಹುದು. ಈಗ ಕಲ್ಲು ಎಂಬ ಶಬ್ದವನ್ನು ಒಡೆದು ಅದರೊಳಗೆ ಆ ಅರ‍್ತ ಏನಾದರೂ ಇದೆಯೆ ಎಂದು ನೋಡೋಣ. ಕಲ್ಲು ಎಂಬ ಶಬ್ದದ ರಚನೆ ಹೀಗಿದೆ, ಕ್+ಅ+ಲ್+ಲ್+ಉ. ಈ ಯಾವ ದ್ವನಿಗೆ ಆಗಲಿ ಇಲ್ಲವೆ ಯಾವುದೆ ಬಗೆಯ ದ್ವನಿಗುಂಪಿಗಾಗಲಿ ಯಾವುದೆ ಅರ‍್ತ ಇಲ್ಲ. ಹಾಗಾದರೆ, ಈಗ ಮೂಲಬೂತವಾದ ಒಂದು ಪ್ರಶ್ನೆ ಬರುತ್ತದೆ. ಕ್+ಅ+ಲ್+ಲ್+ಉ ಎಂಬ ಈ ರಚನೆಗೆ ಕಲ್ಲು ಎಂಬ ವಸ್ತುವನ್ನು ಸೂಚಿಸುವ ಕಸುವು ಅಂದರೆ ಅರ‍್ತ ಎಲ್ಲಿಂದ ಬಂತು? ಇದು ಬಹು ಮಜವಾದ ಪ್ರಶ್ನೆ. ಈ ಶಬ್ದಾರ‍್ತ ಸಂಬಂದದ ನಡುವಿನ ಸಂಬಂದದ ಕುರಿತು ಬಾರತೀಯ ತಾತ್ವಿಕತೆ ಸಾಕಶ್ಟು ಚಿಂತನೆ ನಡೆಸಿದೆ. ಇದರ ಕುರಿತು ಮಾತಾಡಲು ಇನ್ನೊಂದು ಸಾರಿ ಎಡೆಮಾಡಿಕೊಳ್ಳಬಹುದು. ಹಾಗಾದರೆ, ಕ್+ಅ+ಲ್+ಲ್+ಉ ರಚನೆಯ ಕಡೆ ಬರೋಣ. ವಾಸ್ತವದಲ್ಲಿ ದ್ವನಿಗಳಿಗೆ ಯಾವುದೆ ಅರ‍್ತಹೊರುವ ಕಸುವು ಇರುವುದಿಲ್ಲ. ಹಾಗಾಗಿ, ನಾವು ಮಾತುಕತೆಯನ್ನು ಕಲ್ಲು ಎಂಬ ರೂಪಕ್ಕೆ ತರೋಣ. ಕಲ್ಲು ಎಂಬ ಶಬ್ದ ಮತ್ತು ಅದು ಸೂಚಿಸುವ ಬವುತಿಕ ವಸ್ತುವಿನ‌ ನಡುವೆ ಯಾವುದೆ ಸಾವಯವ ಸಂಬಂದ ಇಲ್ಲ, ಬದಲಿಗೆ ಅವುಗಳ ನಡುವೆ ಇರುವ ಸಂಬಂದ‌ ನಿರವಯವ. ಅಂದರೆ, ಅದು ಸಾಪೇಕ್ಶ ಸಂಬಂದ. ಈ ಸಂಬಂದ ಹೇಗೆ ಉಂಟಾಯಿತು ಎಂಬುದಕ್ಕೆ ವಿವರಣೆ ಇಲ್ಲ. ಇದು ಜಗದ ಎಲ್ಲ ಬಾಶೆಗಳ ಎಲ್ಲ ಶಬ್ದಗಳಿಗೂ ಅನ್ವಯಿಸುತ್ತದೆ. ಮೂಲ ಪದಗಳಿಂದ ಸಾದಿಸಿದ ಪದಗಳಿಗೆ ಅರ‍್ತದ ಸಂಬಂದವನ್ನು ಮೂಲಪದಗಳಲ್ಲಿ ಹುಡುಕಬಹುದು. ಆದರೆ, ಮೂಲಪದಗಳಿಗೆ ಇದು ಸಾದ್ಯವಿಲ್ಲ. ಹೀಗೆ ಒಂದು ಪದಕ್ಕೆ ಅರ‍್ತ ಒದಗುವುದು ಒಂದು ಸಾಮಾಜಿಕ ಒಪ್ಪಂದ ಅಶ್ಟೆ. ಹೀಗೆ ಕಲ್ಲು ಎಂಬ ಶಬ್ದಕ್ಕೆ ಕಲ್ಲು ಎಂಬ ವಸ್ತುವನ್ನು ಸೂಚಿಸುವ ಕಸುವು ಒದಗಿದ್ದು ಆಕಸ್ಮಿಕ. ಇದು ಎಶ್ಟು ಆಕಸ್ಮಿಕ ಎಂದರೆ ಪದಗಳು ಕಾಲಾಂತರದಲ್ಲಿ ತಮ್ಮ ಆರೋಪಿತ ಅರ‍್ತವನ್ನು ಬದಲಿಸಿಕೊಳ್ಳಬಹುದು, ಬೆಳೆಸಿಕೊಳ್ಳಬಹುದು, ಸೇರಿಸಿಕೊಳ್ಳಬಹುದು, ಕಳೆದುಕೊಳ್ಳಬಹುದು.

ಸರಿ, ಕಲ್ಲು ಪದಕ್ಕೆ ಕಲ್ಲು ಎಂಬ ವಸ್ತುವನ್ನು ಹೇಳುವ ಕಸುವು ಬೆಳೆದ ಬಗೆಯನ್ನು ತಿಳಿದುಕೊಂಡೆವು.

ಇನ್ನು ಮುಂದೆ, ಕಲ್ಲು ಎಂಬುದು ಬೇರೆ ಏನೆಲ್ಲವನ್ನು ಹೇಳುವುದಕ್ಕೆ ಬಳಕೆಯಾಗುತ್ತದೆ ಎಂಬುದನ್ನು ತುಸು ಗಮನಿಸಬಹುದು. ತುಂಬಾ ಗಟ್ಟಿಯಾದ, ಒರಟಾದ ಎಂಬ ಅರ‍್ತಗಳನ್ನು ಕೊಡುವುದಕ್ಕೆ ಈ ಪದ ಬಳಕೆಯಾಗುತ್ತದೆ, ಗಮನಿಸಿ, ಅದು

ಕಲ್ಲಾಗಿದೆ ‘ಅದು ಗಟ್ಟಿಯಾಗಿದೆ’, ‘ಅದು ಒರಟಾಗಿದೆ’. ಅಂದರೆ ಕಲ್ಲು ಎಂಬ ಶಬ್ದ ತಾನು ಸೂಚಿಸುವ ವಸ್ತುವಿನ ಗುಣವನ್ನು ತಾನು ಆರೋಪಿಸಿಕೊಂಡು ಆ ಅರ‍್ತವನ್ನು ಇತರ ಕಡೆ ಆರೋಪಿಸುತ್ತದೆ.

ಇನ್ನೊಂದೆಡೆ ಈ ಶಬ್ದಗಳು ಬೇರೆ ಪದಗಳೊಂದಿಗೆ ಸಮಾಸವಾಗುವ ಮೂಲಕ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಬಳಕೆಯಾಗುತ್ತದೆ ಮತ್ತು ತನ್ನ ಅರ‍್ತಗಳನ್ನು ವಿಬಿನ್ನವಾಗಿ ಬೆಳೆಸಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುತ್ತದೆ.

ಈ ಪದಗುಚ್ಚಗಳನ್ನು ಗಮನಿಸಿ, ಕಲ್ಲಾಸರೆ, ಕಲ್ಗುಡಿ, ಕಲ್ಮನೆ, ಕಲ್ಲೆದೆ, ಕಲ್ಲುಮನಸು ಮೊದಲಾದವು. ಈ ಸಮಾಸ ಪದಗಲ್ಲಿ ‘ಕಲ್ಲು’ ಪದದ ಬಳಕೆಯ ವಿನ್ಯಾಸದ ಆದಾರದ ಮೇಲೆ ಇವುಗಳನ್ನು ಮೂರು ಗುಂಪುಗಳಾಗಿ ನೋಡಬಹುದು. ಮೊದಲ ಪದ ಒಂದು ಗುಂಪು: ಕಲ್ಲಾಸರೆ. ಎರಡನೆ ಗುಂಪು: ಕಲ್ಗುಡಿ, ಕಲ್ಮನೆ. ಮೂರನೆ ಗುಂಪು: ಕಲ್ಲೆದೆ, ಕಲ್ಲುಮನಸು. ಈ ಪದಗಳನ್ನು ಕುರಿತು ತುಸು ಮಾತಾಡೋಣ. ಇಲ್ಲಿ ಒಂದು ಪದವು ಹೇಗೆ ತನ್ನ ಅರ‍್ತವನ್ನು ವಿಸ್ತರಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು. ಇಲ್ಲಿ ಕಲ್ಲು ಎಂಬ ಶಬ್ದ ಹೇಗೆ ಬೆಳೆದು ಚಾಚಿಕೊಂಡ ಅರ‍್ತವನ್ನು ಪಡೆದುಕೊಂಡು ಬೆಳೆಯುತ್ತವೆ ಎಂಬುದನ್ನು ಗಮನಿಸೋಣ.

ಮೊದಲ ಗುಂಪು: ಕಲ್ಲಾಸರೆ: ಇದರಲ್ಲಿ ಕಲ್ಲು ಎಂಬ ಪದವು ಆಸರೆ ಎಂಬ ಬವುತಿಕವಲ್ಲದ ಪದವೊಂದರ ಜೊತೆ ಸೇರಿ ಸಮಾಸವಾಗಿದೆ. ಇದರ ಅರ‍್ತ ಕಲ್ಲಿನಿಂದ ಆದ ಆಸರೆ ಎಂದಾಗುತ್ತದೆ. ಶಿಲಾಯುಗದ ಮನುಶ್ಯರ ನೆಲೆಗಳಿಗೆ ಈ ಪದವನ್ನು ಬಳಸಲಾಗುತ್ತದೆ. ಈ ಪದದಲ್ಲಿ ‘ಆಗಿರುವ’, ‘ಆದ’ ಎಂಬ ಅರ‍್ತ ಬರುತ್ತಿರುವುದನ್ನು ಗಮನಿಸಿ.

ಎರಡನೆ ಗುಂಪು: ಕಲ್ಗುಡಿ, ಕಲ್ಮನೆ: ಎರಡನೆ ಗುಂಪಿನ ಎರಡು ಪದಗಳಲ್ಲಿ ಕಲ್ಗುಡಿ ಮತ್ತು ಕಲ್ಮನೆ ಇವುಗಳಲ್ಲಿ ಕಲ್ಲು ಎಂಬ ಪದವು ಬಿನ್ನ ಬವುತಿಕ ವಸ್ತುಗಳನ್ನು ಹೇಳುವ ಪದಗಳೊಡನೆ ಸಮಾಸವಾಗಿದೆ. ಇಲ್ಲಿ ಕಲ್ಲಿನಿಂದ ಮಾಡಿದ ಗುಡಿ, ಕಲ್ಲಿನಿಂದ ಮಾಡಿದ ಮನೆ ಎಂಬ ಅರ‍್ತ ಬರುತ್ತಿದೆ. ಕಲ್ಲಿನಿಂದ ಆದ ಎಂಬ ಅರ‍್ತದ ಸಾದ್ಯತೆಯೂ ಇದೆಯಾದರೂ ಸಾಮಾನ್ಯ ಬಳಕೆಯಲ್ಲಿ ಕಲ್ಲಿನಿಂದ ಮಾಡಿದ ಎಂಬ ಅರ‍್ತವನ್ನೆ ಕೊಡುತ್ತದೆ. ಇದಕ್ಕೆ ಮುಕ್ಯವಾಗಿ ಗುಡಿ ಮತ್ತು ಮನೆ ಇವು ಮಾಡುವಂತವು ಎಂಬ ಮೂಲ ತಿರುಳೆ ಕಾರಣ.

ಮೂರನೆ ಗುಂಪು: ಕಲ್ಲೆದೆ, ಕಲ್ಲುಮನಸು: ಈ ಎರಡು ಸಮಾಸಗಳಲ್ಲಿ ಕಲ್ಲು ಪದವು ಬವುತಿಕವಲ್ಲದ ಎರಡು ವಸ್ತುಗಳನ್ನು ಹೇಳುವ ಪದಗಳೊಂದಿಗೆ ಸಮಾಸವಾಗಿದೆ. ಈ ಪದಗಳು ಕಲ್ಲಿನ ಹಾಗೆ ಇರುವ ಎಂಬ ಅರ‍್ತವನ್ನು ಕೊಡುತ್ತವೆ. ಇನ್ನು, ಮುಂದುವರೆದು ಈ ಎರಡು ಪದಗಳು ಸಕಾರಾತ್ಮಕ ಅರ‍್ತವನ್ನು ಕೊಡುತ್ತವೆಯೊ ನಕಾರಾತ್ಮಕ ಅರ‍್ತವನ್ನು ಕೊಡುತ್ತವೆಯೊ ಎಂಬುದನ್ನು ಗಮನಿಸಬೇಕು. ಯಾವುದೆ ಪರಿಸ್ತಿತಿಗೆ ಕುಗ್ಗದೆ ನಿಲ್ಲುವ ಮನಸು ಕಲ್ಲುಮನಸು ಆಗಬಹುದು, ಪ್ರೀತಿ, ಸ್ನೇಹಗಳಿಗೆ ಕರಗದ ಮನಸೂ ಕಲ್ಲುಮನಸು ಆಗಬಹುದು. ಅಂದರೆ ಈ ಸಮಾಸಗಳಲ್ಲಿ ಕಲ್ಲು ಎಂಬ ಪದ ಈ ಸಕಾರಾತ್ಮಕ ಮತ್ತು ನಕಾರಾತ್ಮಾಕ ಈ ಎರಡೂ ಆಯಾಮಗಳಲ್ಲಿ ಚಾಚಿಕೊಳ್ಳುತ್ತಿದೆ.

ಈ ಸಮಾಸ ಪದಗಳಲ್ಲಿ ಮೊದಲೆರಡು ಸಮಾಸಗಳಲ್ಲಿ ಕಲ್ಲು ಪದ ಸೂಚಿಸುವ ಕಲ್ಲು ಎಂಬ ಬವುತಿಕ ವಸ್ತು ನೇರವಾಗಿ ವ್ಯಕ್ತವಾಗುತ್ತಿದೆ. ಕಲ್ಲಿನಿಂದ ಆದ ಆಸರೆ, ಕಲ್ಲಿನಿಂದ ಮಾಡಿದ ಮನೆ ಎಂದು. ಆದರೆ, ಕೊನೆಯ ಗುಂಪಿನ ಪದಗಳಲ್ಲಿ ಇದು ಬಿನ್ನವಾಗಿದೆ. ಕಲ್ಲು ಶಬ್ದವು ಸೂಚಿಸುವ ಬವುತಿಕ ವಸ್ತುವಿನ ಗುಣ ಗಟ್ಟಿಯಾಗಿರುವುದು ಮತ್ತು ಒರಟಾಗಿರುವುದು. ಈ ಸಮಾಸ ಪದಗಳಲ್ಲಿ ಕಲ್ಲಿನ ಗುಣ ಅಂದರೆ, ಕಲ್ಲಾಗಿರುವ, ಒರಟಾಗಿರುವ ಎಂಬ ಅರ‍್ತ ವ್ಯಕ್ತಗೊಳ್ಳುತ್ತಿದೆ. ಅಂದರೆ ಗಟ್ಟಿಯಾಗಿರುವುದು ಕಲ್ಲಿನ ಗುಣ. ಇಲ್ಲಿ ಎದೆ ಮತ್ತು ಮನಸು ಇವು ಗಟ್ಟಿಯಾಗಿವೆ ಎಂದು ಅರ‍್ತ. ಈ ಮೇಲೆ ಹೇಳಿದಂತೆ ಈ ಪದಗಳು ಮುಂದುವರೆದು ಸಕಾರಾತ್ಮಕ ಮತ್ತು ನಕಾರಾತ್ಮಕ ಮುಕದಲ್ಲಿ ಚಾಚಿಕೊಳ್ಳುತ್ತವೆ ಕೂಡ.

ಹೀಗೆ, ಯಾವುದೆ ಪದ ಅದು ಸೂಚಿಸುವ ವಸ್ತು, ಆ ವಸ್ತುವಿನ ಗುಣ, ಕೆಲಸ, ಆಕಾರ ಹೀಗೆ ವಿವಿದ ಆಯಾಮಗಳನ್ನು ಇಟ್ಟುಕೊಂಡು ತನ್ನ ಅರ‍್ತವನ್ನು ವಿಸ್ತರಿಸಿಕೊಂಡು ಬೆಳೆಯಬಹುದು. ಬೆಳವಣಿಗೆಯಲ್ಲಿಯೂ ಹಲವು ಆಯಾಮಗಳು ಇರುತ್ತವೆ. ಅಂದರೆ ಅರ‍್ತವನ್ನು ನೇರವಾಗಿ ಹೇಳುವುದು, ಅನೇರವಾಗಿ ಹೇಳುವುದು, ವಿರುದ್ದವಾಗಿ ಹೇಳುವುದು, ಅರ‍್ತವು ಚಾಚಿಕೊಂಡಂತೆ ಹೇಳುವುದು, ತುಸು ಚಾಚಿಕೊಂಡಂತೆ ಬರುವುದು, ವಿಪರೀತ ಚಾಚಿಕೊಳ್ಳುವುದು, ಅರ‍್ತವನ್ನು ವಿಸ್ತರಿಸಿಕೊಳ್ಳುವುದು, ಕುಗ್ಗಿಸಿಕೊಳ್ಳುವುದು, ವಿರುದ್ದಾರ‍್ತ ಪಡೆದುಕೊಳ್ಳುವುದು ಹೀಗೆ ಹಲವಾರು ಆಯಾಮಗಳಲ್ಲಿ ಪದವೊಂದು ಬೆಳೆಯುತ್ತದೆ. ಆದ್ದರಿಂದಲೆ ಒಂದು ಪದ ಹತ್ತು-ಹಲವಾಗಿ, ನೂರಾಗಿ ಬೆಳೆಯಬಹುದು. ಕುಲ ನೂರಾಗಲಿ ಎಂಬ ಮಾತಿನಂತೆ. ಕನ್ನಡ ಪದಗಳ ಕುಲವೂ ನೂರುಸಾವಿರವಾಗಲಿ. ಈ ಆಶಯ ಇಲ್ಲಿ ಏನನ್ನು ಹೇಳುತ್ತದೆ ಎಂದರೆ ಕನ್ನಡ ಮಾತುಗ ಸಮುದಾಯ ಸಮ್ರುದ್ದವಾಗಿ ಬಾಳಿ ಬದುಕಲಿ ಎಂದು.

ಈ ಅಂಕಣದ ಹಿಂದಿನ ಬರೆಹಗಳು:
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ವಿಶ್ವ ತಾಯ್ಮಾತಿನ ದಿವಸ

21-02-2024 ಬೆಂಗಳೂರು

"ತಾಯ್ಮಾತು ಎಂದರೇನು ಎನ್ನುವುದಕ್ಕೆ ವಿಶ್ವಸಂಸ್ತೆ ಹಲವು ಅಂಶಗಳನ್ನು ಹೇಳುತ್ತದೆ. ವ್ಯಕ್ತಿಯೊಬ್ಬರು ಮಗುವಾಗಿದ್ದಾ...

ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು

21-02-2024 ಬೆಂಗಳೂರು

"ಮುಟ್ಟು ಎಂಬ ಪದ ಹೀಗೆ ಜೀವವಿರೋಧಿ ನೆಲೆಯ ಭಿನ್ನ ರೂಪಕಗಳಲ್ಲಿ ಬಳಕೆ ಆಗುತ್ತದೆ. ತನ್ಮೂಲಕ ಮನುಷ್ಯ ಸಮಾಜದ ಮನೋದೈಹ...

ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ

18-02-2024 ಬೆಂಗಳೂರು

"ಘಾಂದ್ರುಕ್ ಕಾದಂಬರಿ ಇದಕ್ಕಿಂತಲೂ ಭಿನ್ನವಾಗಿ ಬದುಕಿನ ಸತ್ಯವನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತದೆ. ಪಲ್ಲಟಗ...