ಕನ್ನಡ ಒಳನುಡಿಗಳು ಯಾವು ಮತ್ತು ಎಶ್ಟು?

Date: 21-10-2023

Location: ಬೆಂಗಳೂರು


''ನೂರಕ್ಕೂ ಹೆಚ್ಚು ಕನ್ನಡ ಒಳನುಡಿಗಳ ವ್ಯಾಕರಣಗಳು ಈಗಾಗಲೆ ಬಂದಿವೆ. ಆದರೆ, ಕನ್ನಡದ ಒಳನುಡಿಗಳು ಯಾವು, ಎಶ್ಟು ಎಂಬ ತಿಳುವಳಿಕೆ ಇಲ್ಲ. ಒಂದು ಸಮಗ್ರವಾದ ಅದ್ಯಯನವೊಂದರ ಬಲದಿಂದ ಒಳನುಡಿಗಳು ಯಾವು ಮತ್ತು ಎಶ್ಟು ಎಂದು ಹೇಳುವುದು ಅವಶ್ಯ.ಇದುವರೆಗೆ ಇರುವ ಕನ್ನಡದ ಒಳನುಡಿಗಳು ರಾಜಕೀಯ ಗಡಿ, ಆಡಳಿತ ವಿಬಾಗ, ವಿಶ್ವವಿದ್ಯಾಲಯ ಕೇಂದ್ರ, ಜಿಲ್ಲಾ ಕೇಂದ್ರಗಳ ಆದಾರದ ಮೇಲೆಯೆ ಬಂದಿವೆ. ಯಾವುದೆ ಸಾಂಸ್ಕ್ರುತಿಕ ಅದ್ಯಯನವೂ ಹೀಗಿರಬಾರದು,'' ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ 'ತೊಡೆಯಬಾರದ ಲಿಪಿ ಬರೆಯಬಾರದು' ಅಂಕಣದಲ್ಲಿ 'ಕನ್ನಡ ಒಳನುಡಿಗಳು ಯಾವು ಮತ್ತು ಎಶ್ಟು?' ಪದ ಬಳಕೆಗಳ ಕುರಿತು ವಿಶ್ಲೇಷಿಸಿದ್ದಾರೆ.

ಕನ್ನಡದಾಗ ಎಶ್ಟು ಒಳನುಡಿಗಳು ಎಂಬುದು ದೊಡ್ಡ ಪ್ರಶ್ನೆ. ಕಳೆದ ಕೆಲವು ದಶಕಗಳಿಂದ ನಾಲ್ಕು ಒಳನುಡಿಗಳನ್ನು ಕನ್ನಡದ ಪಟ್ಯಪುಸ್ತಕಗಳು ಹೇಳುತ್ತಾ ಬಂದಿವೆ. ವಾಸ್ತವದಲ್ಲಿ ಆ ನಾಲ್ಕು ಹೆಸರುಗಳು ಕರ‍್ನಾಟಕದ ನಾಲ್ಕು ಆಡಳಿತ ವಿಬಾಗಗಳು. ಗಮನಿಸಿ, ಮಯ್ಸೂರು ಕನ್ನಡ, ಮಂಗಳೂರು ಕನ್ನಡ, ದಾರವಾಡ ಕನ್ನಡ ಮತ್ತು ಕಲಬುರಗಿ ಕನ್ನಡ. ಈ ನಾಲ್ಕು ಕರ‍್ನಾಟಕದ ನಾಲ್ಕು ಒಳನುಡಿಗಳಲ್ಲ. ಒಂದು ಒಳನುಡಿ ರೂಪುಗೊಳ್ಳಲು, ಬೆಳೆಯಲು, ಸ್ವಂತ ಲಕ್ಶಣಗಳನ್ನು ಪಡೆದುಕೊಳ್ಳುವುದಕ್ಕೆ ಇತಿಹಾಸಿಕವಾದ ಕಾರಣಗಳು ಇರಬೇಕಾಗುತ್ತದೆ. ಇಲ್ಲಿ ಉಲ್ಲೇಕಿಸಿದ ನಾಲ್ಕು ವಿಬಾಗಗಳು ಹಾಗೆ ಇತಿಹಾಸಿಕವಾದ ವಿಬಾಗಗಳು ಅಲ್ಲ. ಇದು ರಾಜಕೀಯ ಹಿನ್ನೆಲೆಯಲ್ಲಿ ಗುರುತಿಸಿದ ಪ್ರದೇಶಗಳಿಗೆ ಒಂದೊಂದು ಕನ್ನಡ ಎಂದು ಕರೆಯಲಾಯಿತು. ಇದನ್ನು ಆನಂತರ ಹಾಗೆಯೆ ಮುಂದುವರೆಸಿಕೊಂಡು ಬಂದಿದೆ.

ಹಾಗಾದರೆ, ಕನ್ನಡದಾಗ ಎಶ್ಟು ಒಳನುಡಿಗಳಿವೆ? ಕನ್ನಡದಲ್ಲಿ ಎಶ್ಟು ಒಳನುಡಿಗಳು ಇವೆ ಎಂಬುದು ಗೊತ್ತಿಲ್ಲ. ಹಾಗೆ ತಿಳಿದುಕೊಳ್ಳುವ ಒಂದೂ ಪ್ರಯತ್ನ ಇದುವರೆಗೆ ಆಗಿಲ್ಲ.

ಇವತ್ತಿನ ಬರವಣಿಗೆಯಲ್ಲಿ ಕನ್ನಡದ ಒಳನುಡಿಗಳನ್ನು ಗುರುತಿಸುವ ಪ್ರಯತ್ನಗಳು ಹೇಗೆ ಬೆಳೆದವು ಎಂಬುದನ್ನು ಸ್ತೂಲವಾಗಿ ಮಾತಾಡಿದೆ. ಕವಿರಾಜಮಾರ‍್ಗದಲ್ಲಿ ‘ಕನ್ನಡಂಗಳ್’ ಎಂಬ ಪದಪ್ರಯೋಗ ಬಹು ಹೆಸರಾಗಿದೆ. ಅಲ್ಲದೆ ಕವಿರಾಜಮಾರ‍್ಗ ಸಾವಿರ ಹೆಡೆಗಳ ಹಾವಿನ ಸಾವಿರ ನಾಲಿಗೆಗಳ ಹೋಲಿಕೆಯನ್ನು ಕನ್ನಡದ ವಿವಿದತೆ ಬಗೆಗೆ ಮಾತನಾಡಿದೆ. ಪಳಗನ್ನಡ, ತಿರುಳ್ಗನ್ನಡ ಎಂಬ ಪದಗಳ ಪ್ರಯೋಗವೂ ಇದೆ. ಇದಕ್ಕೆ ಪೂರಕವಾಗಿ ಕೆಲವು ಬರುವನ್-ಬರ‍್ಪನ್ ಎಂಬ ಬಿನ್ನ ಬಾಶಾರೂಪಗಳನ್ನು ಕೂಡ ಚರ‍್ಚಿಸಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಒಂಬತ್ತನೆಯ ಶತಮಾನದ ಕಾಲಕ್ಕೆ ವಿವಿದ ಕನ್ನಡಗಳು ಇದ್ದವು ಮತ್ತು ಈ ಕನ್ನಡಗಳನ್ನು ಆ ಕಾಲದಲ್ಲಿ ವಿದ್ವಾಂಸರು ಗುರುತಿಸಿದ್ದರು ಎಂಬುದಕ್ಕೆ ಆದಾರ. ಆದರೆ, ಇದನ್ನು ಹೆಚ್ಚು ಸ್ಪಶ್ಟವಾಗಿ ಮಾತನಾಡಲು ಹೆಚ್ಚು ಆದಾರಗಳು ಇಲ್ಲ. ಆದರೆ, ಆರಂಬ ಕಾಲದಿಂದಲೂ ದೊರೆಯುವ ಶಾಸನಗಳ ಬಾಶೆಯನ್ನು ಹೋಲಿಸಿದಾಗ ಅವುಗಳಲ್ಲಿಯೆ ಬಿನ್ನತೆ ಇರುವುದು ಕಂಡುಬರುತ್ತದೆ. ಕಾಲಾಂತರದಲ್ಲಿ ಮಾತ್ರವಲ್ಲದೆ ಒಂದೆ ಕಾಲದ ವಿಬಿನ್ನ ಪ್ರದೇಶಗಳ, ವಿವಿದ ರಾಜಮನೆತನಗಳ ಶಾಸನಗಳ ಕನ್ನಡ ಬಿನ್ನತೆಯನ್ನು ತೋರಿಸುತ್ತದೆ. ವ್ಯವಸ್ತಿತವಾದ ಮತ್ತು ವಿಸ್ತಾರವಾದ ಅದ್ಯಯನವೊಂದು ಇದರ ಬಗೆಗೆ ಹೆಚ್ಚು ಬೆಳಕನ್ನು ಚೆಲ್ಲಬಹುದು.

ಇನ್ನು ಆದುನಿಕ ಕಾಲಕ್ಕೆ ಬಂದಾಗ ಬ್ರಿಟೀಶ್ ಕಾಲದಲ್ಲಿ ಬಾಶೆಯ ಅದ್ಯಯನ ಯುರೋಪಿನ ಅದ್ಯಯನ ಕ್ರಮವನ್ನು ಪಡೆದುಕೊಂಡಿತು. 1930ರ ಸಂದರ‍್ಬದಲ್ಲಿ ವರ‍್ಣನಾತ್ಮಕ ಅದ್ಯಯನ ಜಗತ್ತಿನಲ್ಲಿ ಬೆಳೆಯುತ್ತದೆ. ಒಂದು ಬಾಶೆಯ ವಿವಿದ ಬಗೆಗಳನ್ನು ಗುರುತಿಸುವುದು, ಅವುಗಳನ್ನು ಅದ್ಯಯನ ಮಾಡುವುದು ಮೊದಲಾಗುತ್ತದೆ. ಕನ್ನಡದಲ್ಲಿ ಸುಮಾರು 1960ರ ವೇಳೆಯಲ್ಲಿ ಈ ರೀತಿಯಲ್ಲಿ ಕನ್ನಡಗಳನ್ನು ಅದ್ಯಯನ ಮಾಡಿರುವುದು ಕಂಡುಬರುತ್ತದೆ. ಕನ್ನಡದ ಅದರಂತೆಯೆ ಬಾರತದ ಮೊದಮೊದಲ ವರ‍್ಣನಾತ್ಮಕ ವ್ಯಾಕರಣಗಳಲ್ಲಿ ದಾರವಾಡದ ಲಿಂಗಾಯತರ ಕನ್ನಡದ ಅದ್ಯಯನ

ಮತ್ತು ನಂಜನಗೂಡಿನ ಒಕ್ಕಲಿಗರ ಕನ್ನಡದ ಅದ್ಯಯನಗಳು ಸೇರುತ್ತವೆ. ತುಸು ನಂತರದ ಕಾಲದಲ್ಲಿ ಪುಣೆಯಲ್ಲಿ ಬಾರತೀಯ ಬಾಶೆಗಳ ಒಳನುಡಿಗಳ ಸರ‍್ವೆ ಯೋಜನೆಯೊಂದು ಶುರುವಾಗುತ್ತದೆ. ಇದರಲ್ಲಿ ವಿವಿದ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡದ ಹಲವು ವ್ಯಾಕರಣಗಳನ್ನು ಬರೆಯಲಾಗುತ್ತದೆ. ಇಲ್ಲಿ ಮೊದಲ ಬಾರಿಗೆ ಹೆಚ್ಚಿನ ಸಂಕೆಯ ಕನ್ನಡಗಳನ್ನು ಗುರುತಿಸಲಾಗುತ್ತದೆ. ಈ ಸರಣಿಯಲ್ಲಿ ಗುಲಬರ‍್ಗಾ ಕನ್ನಡ, ತಿಪಟೂರು ಕನ್ನಡ, ನಂಜನಗೂಡು ಕನ್ನಡ ಮೊದಲಾದವು ಬರುತ್ತವೆ.

ಈ ಸರಣಿಯಲ್ಲಿ ಈ ಬರಹದ ಮೊದಲಲ್ಲಿ ಹೇಳಿದಂತೆ ಕರ‍್ನಾಟಕದ ಆಡಳಿತ ವಿಬಾಗಗಳನ್ನು ಕನ್ನಡದ ಬಿನ್ನ ಒಳನುಡಿಗಳು ಎಂದು ಹೇಳುವ ವಿಚಾರ ಕಾಣಿಸುವುದಿಲ್ಲ. ಇದು ಕನ್ನಡದ ಬರಹಗಾರರು ಬರವಣಿಗೆ ಮೊದಲು ಮಾಡಿದಾಗ ಬಂದದ್ದು. ಇದನ್ನು ಇನ್ನೂ ತುಸು ನಂತರ ಮಾತಾಡೋಣ. ಪುಣೆಯ ಯೋಜನೆಯ ಒಂದು ಅಂತರ‍್ಗತ ವಿಚಾರವನ್ನು ಇಲ್ಲಿ ಉಲ್ಲೇಕಿಸಬೇಕು. ಬ್ರಿಟೀಶ್ ಬಾರತದಲ್ಲಿ ಬ್ರಾಹ್ಮಣ ಎಂಬುದು ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಬಾರತವನ್ನು ಬ್ರಾಹ್ಮಣ ಕೇಂದ್ರಿತವಾಗಿ ನೋಡುವ, ಅರಿಯುವ ಪ್ರಯತ್ನಗಳು ಮೊದಲಾಗುತ್ತದೆ. ಇದು ಇಂದಿನವರೆಗೂ ಇರುವುದನ್ನು ಕಾಣಬಹುದು. ಈ ನೋಟದಲ್ಲಿ ಬಾರತೀಯ ಬಾಶೆಗಳಲ್ಲಿ ಒಳನುಡಿ ಬಿನ್ನತೆಗಳನ್ನು ಸಾಮಾಜಿಕವಾಗಿ ನೋಡುವಾಗ ಬ್ರಾಹ್ಮಣ ಮತ್ತು ಬ್ರಾಹ್ಮಣವಲ್ಲದ ಎಂಬ ಎರಡು ಗುಂಪುಗಳಲ್ಲಿ ನೋಡುವುದನ್ನು ಕಾಣಬಹುದು. ಹೀಗಾಗಿ ಪುಣೆಯ ಯೋಜನೆಯ ಒಳನುಡಿ ವ್ಯಾಕರಣಗಳಲ್ಲಿ ಬ್ರಾಹ್ಮಣ ಕನ್ನಡ ಒಳನುಡಿ ಮತ್ತು ಬ್ರಾಹ್ಮಣವಲ್ಲದ ಕನ್ನಡ ಒಳನುಡಿ ಎಂಬ ಗುಂಪಿಕೆ ಕಂಡುಬರುತ್ತದೆ. ಇದು ನಂತರ ಕರ‍್ನಾಟಕದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಇವುಗಳಿಗೂ ವಿಸ್ತರಿಸಿಕೊಳ್ಳುತ್ತದೆ. ಆನಂತರ ಬಲವುಳ್ಳ ಸಮುದಾಯಗಳ ಕನ್ನಡಗಳ ಅದ್ಯಯನ ಮಾತ್ರ ನಡೆದಿದೆ. ಇಂದಿಗೂ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಇವುಗಳ ನಂತರ ಹೊಲೆಯರ-ಮಾದಿಗರ (ದಲಿತ ಇಲ್ಲವೆ ಹರಿಜನ ಹೆಸರಿನಲ್ಲಿ) ಕನ್ನಡಗಳನ್ನು ಅದ್ಯಯನ ಮಾಡಲಾಗಿದೆ. ಇನ್ನುಳಿದ ನೂರಾರು ಸಮುದಾಯಗಳ ಬಾಶೆಯನ್ನು ಅರಿಯುವ ಪ್ರಯತ್ನಗಳು ಅಶ್ಟಾಗಿ ಆಗಿಲ್ಲ. ಇರಲಿ, ಇನ್ನು ಕನ್ನಡದ ಪ್ರಾದೇಶಿಕ ಒಳನುಡಿಗಳ ಬಗೆಗಿನ ಮಾತುಕತೆ ಮುಂದುವರೆಸೋಣ.

ಪುಣೆಯ ಯೋಜನೆಯ ಹಾಗೆಯೆ ಅಣ್ಣಾಮಲಯ್ ವಿಶ್ವವಿದ್ಯಾಲಯ ಕೂಡ ಇಂತದೊಂದು ಯೋಜನೆಯನ್ನು ಶುರು ಮಾಡುತ್ತದೆ. ವಿವಿದ ಒಳನುಡಿಗಳನ್ನು ಪಿಎಚ್ಡಿ ಸಂಶೋದನೆಗೆ ಈ ಸಂಸ್ತೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಸರಣಿಯಲ್ಲಿಯೂ ಕೆಲವು ಕನ್ನಡದ ಒಳನುಡಿಗಳ ಅದ್ಯಯನ ಬರುತ್ತವೆ. ಇದರಲ್ಲಿ ಬಡಗ ಕನ್ನಡ, ಕುರುಂಬ ಕನ್ನಡ, ಮದುರಯ್ ಕನ್ನಡ ಮೊದಲಾದವು ಬರುತ್ತವೆ. ಕುರುಂಬ, ಬಡಗ ಇವನ್ನು ಬೇರೆ ಬಾಶೆಗಳೆಂದು ಕರೆಯುವುದೆ ಹೆಚ್ಚು. ಇರಲಿ. ಮಯ್ಸೂರಿನಲ್ಲಿ ಇರುವ ಬಾರತೀಯ ಬಾಶಾ ಸಂಸ್ತಾನ ಕೂಡ ಇದೆ ಸುಮಾರಿನಲ್ಲಿ ಆರಂಬವಾಗಿ ಇಂತದೆ ವರ‍್ಣವಾತ್ಮಕ ವ್ಯಾಕರಣ ಸರಣಿಯನ್ನು ಶುರು ಮಾಡುತ್ತದೆ. ಆದರೆ, ಇದರಲ್ಲಿ ಕನ್ನಡದ ಒಳನುಡಿಗಳ ಹೆಚ್ಚಿನ ಅದ್ಯಯನ ಬರುವುದಿಲ್ಲ. ಆನಂತರದ ಕಾಲದಲ್ಲಿ ಸೋಲಿಗ, ಜೇನುಕುರುಬ ಮೊದಲಾದ ಕೆಲವು ಒಳನುಡಿಗಳ ಅದ್ಯಯನಗಳು ಇಲ್ಲಿ ಬರುತ್ತವೆ.

ಕನ್ನಡದ ವಿದ್ವಾಂಸರು ಕನ್ನಡ ಬಾಶೆಯ ಬಗೆಗೆ ಬರೆಯುವುದಕ್ಕೆ ಮೊದಲು ಮಾಡಿದಾಗ ಹಳೆ ಮಯ್ಸೂರು ರಾಜ್ಯ ಮತ್ತು ಉತ್ತರ ಕರ‍್ನಾಟಕ, ಅಂದರೆ ಇಂದಿನ ಮುಂಬಯ್ ಕರ‍್ನಾಟಕ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಲಾಯಿತು. ಈ ಪ್ರತ್ಯೇಕತೆಯನ್ನು ಬಾಶೆಯ ನೆಲೆಯಲ್ಲಿಯೂ ಹೇಳಲಾಯಿತು. ಈ ಬಿನ್ನತೆಯ ವಿವರಣೆ ಎಶ್ಟುಮಟ್ಟಿಗೆ ಬಲವಾಗಿ ಬೇರೂರಿದೆಯೆಂದರೆ ವಾಸ್ತವದಲ್ಲಿ ಉತ್ತರ-ದಕ್ಶಿಣ ಎಂದು ಗುಂಪಿಸಲು ಬಾರದ ಹಲವಾರು ಅಂಶಗಳನ್ನೂ ಕೂಡ ಇಂದಿಗೂ ಉತ್ತರ-ದಕ್ಶಿಣ ಎಂದೆ ಹೇಳಿಕೊಂಡು ಬರುತ್ತಿರುವುದನ್ನು ಕಾಣಬಹುದು. ಈ ಎರಡು ಒಳನುಡಿಗಳ ಜೊತೆಗೆ

ಮದ್ರಾಸ್ ಪ್ರಾಂತದಿಂದ ಬಂದ ಮಂಗಳೂರನ್ನು ಬೇರೆಯಾಗಿ ಮಂಗಳೂರು ಕನ್ನಡ ಎಂದು ಗುರುತಿಸುವುದು ಶುರುವಾಯಿತು. ಇನ್ನೂ ತುಸು ಮುಂದೆ ನಿಜಾಮ ಸಂಸ್ತಾನದಿಂದ ಬಂದ ಹಯ್ದರಾಬಾದ ಕರ‍್ನಾಟಕವನ್ನು ಬೇರೆಯಾಗಿ ಗುಲಬರ‍್ಗಾ ಕನ್ನಡ ಎಂದು ಗುರುತಿಸುವುದು ಮೊದಲಾಯಿತು.

ಇದು ಇನ್ನೂ ಮುಂದುವರೆದು ವಿಶ್ವವಿದ್ಯಾಲಯಗಳು ಆರಂಬಗೊಂಡ ಜಾಗಗಳ ಜೊತೆಗೆ ಹೆಣೆದುಕೊಂಡವು. ಗಮನಿಸಿ. ಮಯ್ಸೂರು ಬಹು ಹಳೆಯ ವಿಶ್ವವಿದ್ಯಾಲಯ. ಅದಕ್ಕೆ ಮಯ್ಸೂರು ಕನ್ನಡ ಎಂಬುದು ಬೆಳೆಯಿತು. ಆನಂತರ ಉತ್ತರ ಕರ‍್ನಾಟಕದಲ್ಲಿ ಕರ‍್ನಾಟಕ ವಿಶ್ವವಿದ್ಯಾಲಯ ದಾರವಾಡದಲ್ಲಿ ಮೊದಲಾಗುತ್ತದೆ. ಹಾಗಾಗಿ ದಾರವಾಡ ಕನ್ನಡ ಎಂಬುದು ಹೆಸರಾಯಿತು. ಮಯ್ಸೂರು ವಿಶ್ವವಿದ್ಯಾಲಯದಿಂದ ಬೇರೆಯಾಗಿ ಮಂಗಳೂರು ವಿಶ್ವವಿದ್ಯಾಲಯ ಬರುತ್ತದೆ. ಆಗ ಮಂಗಳೂರು ಕನ್ನಡ ಎಂಬುದು ಬೆಳಕಿಗೆ ಬರುತ್ತದೆ. ಮುಂದೆ ಕರ‍್ನಾಟಕ ವಿಶ್ವವಿದ್ಯಾಲಯದಿಂದ ಬೇರೆ ಮಾಡಿ ಗುಲಬರ‍್ಗಾ ವಿಶ್ವವಿದ್ಯಾಲಯ ಬರುತ್ತದೆ. ಅದರೊಟ್ಟಿಗೆ ಗುಲಬರ‍್ಗಾ ಕನ್ನಡ ಕೂಡ ಹೆಸರಾಗುತ್ತದೆ. ವಿಶ್ವವಿದ್ಯಾಲಯಗಳು ಸಹಜವಾಗಿ ಮತ್ತು ಸ್ಪಶ್ಟವಾಗಿ ಆಡಳಿತ ವಿಬಾಗಗಳಿಗೊಂದರಂತೆ ಶುರುವಾದವು. ಅದರಂತೆ ಕನ್ನಡಗಳೂ ಶುರುವಾದವು. ಆನಂತರ ಈ ಆಡಳಿತ ವಿಬಾಗಗಳ ಪ್ರಬಾವ ಇನ್ನೂ ಮುಂದುವರೆಯುತ್ತದೆ. ಜಿಲ್ಲೆಗಳು, ಜಿಲ್ಲಾಕೇಂದ್ರಗಳು ಬಲವಾಗುತ್ತಿದ್ದಂತೆ ಕನ್ನಡಗಳನ್ನು ಜಿಲ್ಲೆಗೊಂದು ಗುರುತಿಸುವ ಪ್ರಯತ್ನಗಳು ಮೊದಲಾದವು. ಈ ರೀತಿಯಲ್ಲಿ ಹಲವಾರು ಅದ್ಯಯನಗಳು ಬಂದಿವೆ. ಕರ‍್ನಾಟಕ ವಿಶ್ವವಿದ್ಯಾಲಯ ಹೊರತಂದ ಸುವರ‍್ಣ ಬಾರತಿ ವಿಶೇಶ ಸಂಚಿಕೆ ಇದಕ್ಕೆ ಸ್ಪಶ್ಟ ಉದಾಹರಣೆ.

ಇವು ಕಂಡಿತವಾಗಿಯೂ ಕನ್ನಡದ ಒಳನುಡಿಗಳನ್ನು ಗುರುತಿಸುವ ಸೂಕ್ತ ಕ್ರಮ ಅಲ್ಲ. ಕನ್ನಡದ ಒಳನುಡಿಗಳನ್ನು ವ್ಯಾಪಕವಾದ ಅದ್ಯಯನಕ್ಕೆ ಒಳಪಡಿಸಬೇಕಿದೆ. ಆಗ ಮಾತ್ರ ಕನ್ನಡದ ಒಳನುಡಿಗಳ ಬಗೆಗೆ ಒಂದು ಚಿತ್ರಣ ದೊರೆಯಬಹುದು. ಅಲ್ಲಿಯವರೆಗೆ ಕನ್ನಡದ ಒಳನುಡಿಗಳು ಯಾವು ಮತ್ತು ಎಶ್ಟು ಎಂಬುದನ್ನು ಹೇಳಲು ಸಾದ್ಯವಿಲ್ಲ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ

MORE NEWS

ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

12-05-2024 ಬೆಂಗಳೂರು

"ಕನ್ನಡಕ್ಕೆ ಒದಗಿದ ಪಾಗದ ಯಾವುದು ಎಂಬುದು ಅಸ್ಪಶ್ಟ. ಅಂದರೆ, ಉತ್ತರದಲ್ಲಿ ಹಲವು ಪ್ರಾಕ್ರುತಗಳು ಇದ್ದವು. ಇವುಗಳಲ...

ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?

10-05-2024 ಬೆಂಗಳೂರು

"ವಿಷಯ ಏನೆಂದರೆ ಬಯಲಿಗೆ ಬಂದುದು ಮತ್ತು ಮೂರು ಅತ್ಯಾಚಾರದ ಎಫ್. ಐ. ಆರ್. ಪ್ರಕರಣಗಳು ದಾಖಲೆ ಆಗಿರುವುದು. ಹಾಸನ ಗ...

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ

08-05-2024 ಬೆಂಗಳೂರು

"ಪ್ರತಿಯೊಬ್ಬರು ಹುಟ್ಟಿನಿಂದ ಮನ್ನಣೆಯನ್ನು ಪಡೆಯದೆ ನಡೆ ನುಡಿಯಿಂದ ಮನ್ನಣೆ ಪಡೆಯಬೇಕೆಂಬ ನವ ನೈತಿಕತೆಯನ್ನು ಹುಟ್...