ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ

Date: 23-10-2022

Location: ಬೆಂಗಳೂರು


ಇಷ್ಟಲಿಂಗಪೂಜೆ-ಧ್ಯಾನ-ಚಿಂತನೆಯ ಮೂಲಕ ಶಿಷ್ಯ ಗುರುವಾಗಿ ಬೆಳೆದುನಿಲ್ಲುತ್ತಾನೆ. ಆಗ ಆತನೊಳಗಡೆ ಇರುವ ಅರಿವೇ ಗುರುವಾಗಿ ಕಾಣಿಸಿಕೊಳ್ಳುತ್ತದೆ. ಆಗ ಗುರುವೆಂಬ ಹೊರಾವರಣ ಕಳಚಿ ಅರಿವೆಂಬ ಒಳ ಆವರಣ ಬೆಳೆದುನಿಲ್ಲುತ್ತದೆ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ಅಷ್ಟಾವರಣಗಳಲ್ಲಿನ ಗುರು ಮತ್ತು ಲಿಂಗದ ಸ್ಥಾನದ ಬಗ್ಗೆ ವಿವರಿಸಿದ್ದಾರೆ.

ಗುರು

ಅಷ್ಟಾವರಣಗಳಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ವೇದ-ಪುರಾಣ-ಆಗಮಗಳಲ್ಲಿ, ಇತರ ಧರ್ಮಗಳಲ್ಲಿ “ಗುರು ದೇವೋಭವಃ” ಎಂದು ಕರೆಯಲಾಗಿದೆ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಹಾಡಲಾಗಿದೆ. ಈ ದೇಶದಲ್ಲಿ ವೈದಿಕ ಧರ್ಮವು ಶೈವಧರ್ಮದ ಮೇಲೆ ತನ್ನ ಆಚರಣೆಗಳನ್ನು ಹೇರಿತು. ಹೀಗಾಗಿ ಶೈವರಲ್ಲಿಯೂ ಯಜ್ಞ-ಯಾಗಗಳು ಪ್ರಾರಂಭವಾದವು, ಹೋಮ-ಹವನಗಳು ನಡೆಯತೊಡಗಿದವು. ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಗುರುವಾಗುವ ಅಧಿಕಾರವಿರುವುದು ಬ್ರಾಹ್ಮಣನಿಗೆ ಮಾತ್ರ ಸಾಧ್ಯವಾಗಿತ್ತು. ಹೀಗಾಗಿ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು ಮಾತ್ರ ಗುರುಸ್ಥಾನ ಪಡೆಯುತ್ತಿದ್ದರು. ಇತರ ಜಾತಿಗಳಲ್ಲಿ ಹುಟ್ಟಿದ ಎಷ್ಟೋ ಜನ ಗುರುಸ್ಥಾನಕ್ಕೆ ಅರ್ಹವಾದರೂ ಜಾತಿಯಾಧಾರಿತ ವ್ಯವಸ್ಥೆಯಲ್ಲಿ ಗುರುವಾಗಲು ಸಾಧ್ಯವಿರಲಿಲ್ಲ. ಹೀಗಾಗಿ ಶೈವಧರ್ಮಕ್ಕೆ ಪ್ರಾರಂಭದಲ್ಲಿ ಬ್ರಾಹ್ಮಣರೇ ಗುರುಗಳಾಗಿದ್ದರು, ನಂತರದಲ್ಲಿ ಜಾತಿಜಂಗಮರು (ಸ್ವಾಮಿಗಳು) ಗುರುಗಳಾದರು. 15ನೇ ಶತಮಾನದ ನಂತರ ಹೆಚ್ಚು ವ್ಯಾಪಕವಾಗಿ ಬೆಳೆದ ವೀರಶೈವ ಧರ್ಮದಲ್ಲಿ ಇಂದಿಗೂ ಜಾತಿಜಂಗಮರೇ ಗುರುಗಳಾಗಿದ್ದಾರೆ.

12ನೇ ಶತಮಾನದ ಶರಣರಲ್ಲಿ ಶೂದ್ರನಾಗಿದ್ದ ಅಲ್ಲಮಪ್ರಭು ಗುರುಸ್ಥಾನದಲ್ಲಿದ್ದ. ಹಿರಿಯ ವಚನಕಾರ ಮಾದಾರ ಚೆನ್ನಯ್ಯ ಗೋತ್ರ ಪುರುಷನಾಗಿದ್ದ. “ಬ್ರಾಹ್ಮಣ ಮಾತ್ರ ಗುರುವಾಗಲು ಸಾಧ್ಯ” ಎಂಬ ನಿಯಮವನ್ನು ಕಿತ್ತೊಗೆದ ಶರಣರು, ಅರ್ಹರಾದವರು ಯಾರು ಬೇಕಾದರೂ ಗುರುವಾಗಬಹುದೆಂದು ಹೇಳಿದರು ಮತ್ತು ಅದನ್ನು ಆಚರಣೆಗೆ ತಂದರು. ಹೀಗಾಗಿ ಶರಣರಿಂದ ಹುಟ್ಟಿದ ಲಿಂಗಾಯತ ಧರ್ಮದ ಗುರುವಿಗೂ, ಇತರ ಧರ್ಮಗಳಲ್ಲಿ ಕಾಣ ಸಿಕೊಳ್ಳುವ ಗುರುವಿಗೂ ತುಂಬ ವ್ಯತ್ಯಾಸವಿದೆ. ಇತರ ಧರ್ಮಗಳಲ್ಲಿ ಗುರುಸ್ಥಾನ ಹುಟ್ಟಿನಿಂದ ನಿರ್ಧರಿತವಾದರೆ, ಲಿಂಗಾಯತರಲ್ಲಿ ಅದು ಅರ್ಹತೆಯಿಂದ ಪ್ರಾಸ್ತವಾಗುತ್ತದೆ. ವಚನಚಳವಳಿಯ ಸಂದರ್ಭದಲ್ಲಿ ಸಿದ್ಧರಾಮನಿಗೆ ಲಿಂಗದೀಕ್ಷೆ ನೀಡಿದವರು ಚೆನ್ನಬಸವಣ್ಣ, ಈತ ವಯಸ್ಸಿನಿಂದ ಚಿಕ್ಕವ, ಜಾತಿಯಿಂದ ಜಂಗಮನಾಗಿರಲಿಲ್ಲ. ಅರ್ಹತೆಯಿಂದಲೇ ಬೆಳೆದು ನಿಂತಿದ್ದ. ಲಿಂಗಾಯತ ಧರ್ಮದ ಗುರು ಜಾತಿ ಬ್ರಾಹ್ಮಣನಾಗಿರಲಿಲ್ಲ, ಜಾತಿ ಜಂಗಮನೂ ಆಗಿರಲಿಲ್ಲವೆಂಬುದು ಕ್ರಾಂತಿಕಾರಕ ವಿಚಾರವಾಗಿದೆ. ಹೀಗಾಗಿ ಲಿಂಗಾಯತ ಧರ್ಮದಲ್ಲಿ ಬರುವ ಗುರುವಿಗೂ, ಇತರ ಧರ್ಮಗಳಲ್ಲಿ ಕಾಣಿಸಿಕೊಳ್ಳುವ ಗುರುವಿಗೂ ತುಂಬ ವ್ಯತ್ಯಾಸವಿದೆ.

“ಮಡಿಕೆಯ ಮಾಡುವಡೆ ಮಣ್ಣೆ ಮೊದಲು
ತೊಡಿಗೆಯ ಮಾಡುವಡೆ ಹೊನ್ನೆ ಮೊದಲು
ಶಿವಪಥವನರಿವಡೆ ಗುರುಪಥವೆ ಮೊದಲು.....”

-ಬಸವಣ್ಣ (ಸ.ವ.ಸಂ.1, ವ:70)

ಬಸವಣ್ಣ ಇಲ್ಲಿ ಲೌಕಿಕ ಉದಾಹರಣೆಗಳ ಮೂಲಕ ಶಿವಪಥದ ದಾರಿಯನ್ನು ತೋರಿಸಿದ್ದಾರೆ. ಗಡಿಗೆ ಮಾಡಲು ಮಣ್ಣು ಮೊದಲುಬೇಕು, ತೊಡಿಗೆಮಾಡಲು ಹೊನ್ನು ಮೊದಲುಬೇಕು, ಅದೇರೀತಿ ಶಿವಪಥವರಿಯಲು ಗುರು ಮೊದಲು ಬೇಕು ಎಂದು ಹೇಳಿದ ಸರಳ ನುಡಿಯಲ್ಲಿ ಮಹತ್ವದ ವಿಚಾರವಡಗಿದೆ. ಇಲ್ಲಿ ಶಿವಪಥ ಅರಿಯಲು ಗುರುಪಥಬೇಕು. ಇದು ಬಹಳ ಮುಖ್ಯವಾಗಿದೆ. ಗುರುಪಥವೆಂದರೆ ಕೇವಲ ಗುರುವೊಬ್ಬ ಮಾತ್ರವಲ್ಲ. ಅಲ್ಲಿ ಒಂದು ಪಥವಿದೆ. ಪರಂಪರೆಯಿದೆ, ಪ್ರಕ್ರಿಯೆಯಿದೆ. ಇಂತಹ ಗುರುಪಥದಲ್ಲಿ ಸಾಧನೆ ಮಾಡಿದಾಗ ಹೊರಗಿನ ಗುರು ನೆಪಮಾತ್ರವಾಗಿ, ತನ್ನೊಳಗಿನ ಅರಿವೆಂಬ ಗುರು ಕಾಣ ಸಿಕೊಳ್ಳುತ್ತದೆ, ಆಗ ಗುರುಪಥದ ಅರ್ಥ ತೆರೆದುಕೊಳ್ಳುತ್ತದೆ. ಹೊರಗಿನ ಗುರು ದೀಕ್ಷೆಯ ಮೂಲಕ ಶಿಷ್ಯನಿಗೆ ಇಷ್ಟಲಿಂಗ ಕೊಡುತ್ತಾನೆ. ಇಷ್ಟಲಿಂಗಪೂಜೆ-ಧ್ಯಾನ-ಚಿಂತನೆಯ ಮೂಲಕ ಶಿಷ್ಯ ಗುರುವಾಗಿ ಬೆಳೆದುನಿಲ್ಲುತ್ತಾನೆ. ಆಗ ಆತನೊಳಗಡೆ ಇರುವ ಅರಿವೇ ಗುರುವಾಗಿ ಕಾಣಿಸಿಕೊಳ್ಳುತ್ತದೆ. ಆಗ ಗುರುವೆಂಬ ಹೊರಾವರಣ ಕಳಚಿ ಅರಿವೆಂಬ ಒಳ ಆವರಣ ಬೆಳೆದುನಿಲ್ಲುತ್ತದೆ.

“ಶಿಷ್ಯನೆಂಬ ವನಕ್ಕೆ ವಸಂತ ನೋಡಾ ಗುರು| ಶಿಷ್ಯನೆಂಬ ತಿಮಿರಕ್ಕೆ ಜ್ಯೋತಿ ನೋಡಾ ಗುರು” ಎಂದು ಸಿದ್ಧರಾಮ ಶಿವಯೋಗಿಗಳು ಗುರು ಮಹತ್ವವನ್ನು ಹೇಳಿದರೆ, “ಗುರುವೇ ಪರಶಿವನು, ಗುರುವಿನಿಂದಧಿಕ ದೈವವಿಲ್ಲ, ಗುರುವೇ ಕಲ್ಪವೃಕ್ಷ, ಕಾಮಧೇನು” ಎಂದು ಗಣದಾಸಿವೀರಣ್ಣ ಹೇಳಿದ್ದಾರೆ. “ಸತ್ಯವೇ ಗುರುವಾಗಿ ತೋರಿತು, ಚಿತ್ತವೇ ಲಿಂಗವಾಗಿ ತೋರಿತೆಂದು” ಕಡಕೋಳ ಮಡಿವಾಳಪ್ಪ ಹೇಳಿದ್ದಾರೆ. “ಗುರುವೇ ಪರಶಿವನಾಗಿದ್ದಾನೆ, ಗುರುಕೃಪೆಯಿಲ್ಲದವನ ಕರ್ಮಹರಿಯದು” ಎಂದು ಹೇಮಗಲ್ಲ ಹಂಪ ಹೇಳಿದ್ದಾರೆ.

“ಎನ್ನನರಿಯಿಸದಿರುವೆ, ಎನ್ನನರಿಯಿಸು ನಿನ್ನನರಿಯಿಸಬೇಡ
ಎನ್ನನರಿಯದವ ನಿನ್ನನರಿಯ
ಎನ್ನನರಿಯಿಸದೆ ನಿನ್ನನರಿಯಿಸಿದಡೆ
ನೀನೆನಗೆ ಗುರುವಲ್ಲ, ನಾ ನಿನಗೆ ಶಿಷ್ಯನಲ್ಲ
ಎನ್ನನರಿಯಿಸಿದಡೆ ನೀನೆನಗೆ ಗುರು, ನಾನಿನಗೆ ಶಿಷ್ಯ
ಮಸಣಪ್ರಿಯ ಗಜೇಶ್ವರಾ”

-ಗಜೇಶಮಸಣಯ್ಯಗಳ ಪುಣ್ಯ ಸ್ತ್ರೀ (ಸ.ವ.ಸಂ.5, ವ:764)

ಗಜೇಶಮಸಣ್ಣಯ್ಯನ ಪತ್ನಿ ಈ ವಚನದಲ್ಲಿ ಗುರುವಿಗೆ ಸವಾಲು ಹಾಕಿದ್ದಾಳೆ. ಗುರು ಇರುವುದು ಶಿಷ್ಯನಲ್ಲಿ ಅರಿವು ತುಂಬುವದಕ್ಕೆ, ಆದರೆ ಅನೇಕ ಗುರುಗಳು ಶಿಷ್ಯನಿಗೆ ಸರಿಯಾದ ತಿಳುವಳಿಕೆ ಕೊಡದೇ ಹೋದಾಗ ಅಂತವರು ಗುರುಗಳಲ್ಲವೆಂದು ಈ ಶರಣೆ ಹೇಳಿದ್ದಾಳೆ. ಬೇರೆ ಧರ್ಮಗಳಲ್ಲಿ ಗುರು ಬೇರೆ-ಶಿಷ್ಯ ಬೇರೆಯೆಂಬ ಭಾವನೆಯಿದೆ. ಏನಿದ್ದರೂ ಶಿಷ್ಯನಾದವ ಗುರುವಿನ ಗುಲಾಮನೇ ಆಗಿರುತ್ತಾನೆಂದು ನಂಬಿದ್ದ ವ್ಯವಸ್ಥೆಯಲ್ಲಿ ಗುರುವಿನ ಗುಲಾಮನಾಗುವ ಬದಲು, ಗುರುವಿನ ಸಮಾನನಾಗಬೇಕೆಂದು ಶರಣರು ತಿಳಿಸಿ ಹೇಳಿದ್ದಾರೆ. ಲಿಂಗಾಯತ ಧರ್ಮದಲ್ಲಿ ಶಿಷ್ಯನು, ಗುರುವಾಗಿ ಬೆಳೆಯುತ್ತಾನೆ. ಕಲಬುರಗಿ ಶ್ರೀ ಶರಣಬಸವೇಶ್ವರ ಗರ್ಭಗುಡಿಯಲ್ಲಿ ಜೋಡಿಮೂರ್ತಿಗಳಿವೆ. ಇವೇ ಕ್ಯಾಲೆಂಡರಗಳಲ್ಲಿ ಮುದ್ರಣವಾಗಿವೆ. ಈ ಜೋಡಿಮೂರ್ತಿಗಳು ಬೇರೆ ಯಾರವೂ ಆಗಿರದೆ ಗುರ-ಶಿಷ್ಯರ ಮೂರ್ತಿಗಳಾಗಿವೆ. ಗುರು ತನ್ನ ವಿನೋದಕ್ಕಾಗಿ ಅಷ್ಟಾವರಣಗಳಾಗಿ ಕಾಣ ಸಿಕೊಂಡಿದ್ದಾನೆಂದು ಹೇಳಿರುವ ಅಕ್ಕಮಹಾದೇವಿಯು ಗುರುವಿನ ಕರುಣದಿಂದ ಲಿಂಗವಕಂಡೆ, ಜಂಗಮನ ಕಂಡೆಯೆಂದು ಹೇಳಿದ್ದಾರೆ.

ಲಿಂಗ

ಅಷ್ಟಾವರಣಗಳಲ್ಲಿ ಲಿಂಗಕ್ಕೆ ಮಹತ್ವದ ಸ್ಥಾನವಿದೆ. ಶೈವರು ಸ್ಥಾವರಲಿಂಗವನ್ನು ಪೂಜಿಸುತ್ತಿದ್ದರು. ಬಸವಾದಿ ಶರಣರು ಇಷ್ಟಲಿಂಗದ ಪರಿಕಲ್ಪನೆಯನ್ನು ಮೊದಲ ಬಾರಿಗೆ ಶೋಧಿಸಿದರು. ಹಿಂದೆ ಶೈವರಲ್ಲಿ ಅದೂ ಪಾಶುಪತರು ಚರಲಿಂಗವನ್ನು ಪೂಜಿಸುತ್ತಿದ್ದರು. ಚರಲಿಂಗವನ್ನು ಕರಸ್ಥಲದಲ್ಲಿಟ್ಟು ಪೂಜಿಸುತ್ತಿರಲಿಲ್ಲ, ಅದನ್ನು ಗದ್ದುಗೆಯ ಮೇಲಿಟ್ಟು ಪೂಜಿಸುತ್ತಿದ್ದರು. ಅವರು ಅದನ್ನು ಕೊರಳಲ್ಲಿ ಧರಿಸುತ್ತಿರಲಿಲ್ಲ. ಪೂಜೆಯ ನಂತರ ಕೆಲವರು ಅದನ್ನು ಸಣ್ಣಪೆಟ್ಟಿಗೆಯೊಳಗಿಡುತ್ತಿದ್ದರು. ಹೀಗೆ ಲಿಂಗವೆಂಬುದು ಒಂದೇ ರೀತಿಯದ್ದಾಗಿರಲಿಲ್ಲ, ಅವರ ಪೂಜೆಯ ವಿಧಾನವೂ ಒಂದೇಯಾಗಿರಲಿಲ್ಲ. ಶೈವರು ಸ್ಥಾವರಲಿಂಗ, ಚರಲಿಂಗವನ್ನು ಪೂಜಿಸಿದರೆ, 15ನೇ ಶತಮಾನದಲ್ಲಿ ಬಂದ ವೀರಶೈವರು ಚರಲಿಂಗ ಮತ್ತು ಇಷ್ಟಲಿಂಗಗಳೆರಡನ್ನೂ ಪೂಜಿಸತೊಡಗಿದರು. ಆದರೆ 12ನೇ ಶತಮಾನದ ಶರಣರು ಮತ್ತು ನಂತರದ ಲಿಂಗಾಯತ ಧರ್ಮದ ಅನುಯಾಯಿಗಳು ಕೇವಲ ಇಷ್ಟಲಿಂಗವನ್ನು ಮಾತ್ರ ಪೂಜಿಸಿದರು. ಹೀಗಾಗಿ ಇತರ ಧರ್ಮದವರ ಲಿಂಗಪೂಜೆಗೂ, ಶರಣರ ಲಿಂಗಪೂಜೆಗೂ ತುಂಬ ವ್ಯತ್ಯಾಸವಿದೆ.

ಶೈವರಲ್ಲಿ ಸ್ಥಾವರಲಿಂಗಗಳ ಪೂಜೆಯಿರುವಂತೆ, ಉದ್ಭವಲಿಂಗಗಳ ಪೂಜೆಯೂ ಇದೆ. ಲಿಂಗದಾಕರದಲ್ಲಿದ್ದ ಶಿಲೆಗಳೇ ಉದ್ಭವಲಿಂಗಗಳು. ಇಂತಹ ಶಿಲೆಯ ಭಾಗಗಳನ್ನು ಲಿಂಗಗಳ ಆಕಾರ ಮಾಡಿ ಪೂಜಿಸುವ ಪರಂಪರೆಯೂ ಶೈವರಲ್ಲಿತ್ತು. ವೀರಶೈವ ಧರ್ಮವನ್ನು ಪ್ರತಿಪಾದಿಸಿದ “ಸಿದ್ಧಾಂತ ಶಿಖಾಮಣ ”ಯಲ್ಲಿ ಇಷ್ಟಲಿಂಗಕ್ಕೆ ಕರಸ್ಥಲ ಲಿಂಗವೆಂದು ಕರೆಯಲಾಗಿದೆ. ಕರಸ್ಥಲ ಲಿಂಗಪೂಜೆಯೇ ಶ್ರೇಷ್ಠವೆಂದು ಹೇಳಲಾಗಿದೆ. ಋಗ್ವೇದದಲ್ಲಿಯೇ ಇಷ್ಟಲಿಂಗದ ಬಗೆಗೆ ಹೇಳಲಾಗಿದೆಯೆಂದು ಆ ಶ್ಲೋಕವನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಆ ಶ್ಲೋಕ ಹೀಗಿದೆ:

“ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ”

-ಋಗ್ವೇದ 10-60-12,7

ಇಲ್ಲಿ ಇಷ್ಟಲಿಂಗದ ಪ್ರಸ್ತಾಪವಿಲ್ಲ. ಅಪಾರ ಶಕ್ತಿಯುಳ್ಳ ಪರಶಿವನೇ ನನ್ನ ಹಸ್ತದಲ್ಲಿ ವಿರಾಜಮಾನನಾಗಿರುವೆಯೆಂದರೆ, ಇದು ಹಸ್ತ-ಮಸ್ತಕದ ವಿಚಾರವೇ ಹೊರತು ಇಷ್ಟಲಿಂಗದ ಪ್ರಸ್ತಾಪವಲ್ಲ. ಹೀಗಾಗಿ ಬಸವಾದಿ ಶರಣರು ಬರುವದಕ್ಕಿಂತ ಮೊದಲು ಇಷ್ಟಲಿಂಗದ ಪರಿಕಲ್ಪನೆ ಎಲ್ಲಿಯೂ ಅಧಿಕೃತವಾಗಿ ದಾಖಲಾಗಿಲ್ಲ. ಆದುದರಿಂದ ಇಷ್ಟಲಿಂಗದ ವೈಜ್ಞಾನಿಕ ಪರಿಕಲ್ಪನೆಯನ್ನು ಬಸವಾದಿ ಶರಣರು ಮೊದಲ ಬಾರಿಗೆ ಕಟ್ಟಿಕೊಟ್ಟರು.

“ಇಷ್ಟಲಿಂಗ” ಪದದಲ್ಲಿ ಎರಡು ಪದಗಳು ಕೂಡಿಕೊಂಡಿವೆ. “ಇಷ್ಟ”ವೆಂದರೆ ಪ್ರಿಯವಾದದ್ದು ಎಂಬ ಒಂದು ಅರ್ಥವಿದ್ದರೆ, ಪರಮಾತ್ಮ ಎಂಬ ಇನ್ನೊಂದು ಅರ್ಥವಿದೆ. ಲಿಂಗ ಎಂದರೆ ಚಿಹ್ನೆ, ಗುರುತು ಎಂಬರ್ಥಗಳಿವೆ. ಹೀಗಾಗಿ ಇಲ್ಲಿ ಇಷ್ಟಲಿಂಗವೆಂದರೆ ಪರಮಾತ್ಮನ ಚಿಹ್ನೆಯೇ ಆಗಿದೆ. ಆ ಪರಮಾತ್ಮನು, ಶಿವ ಅಥವಾ ರುದ್ರನಾಗಿರದೆ, ಆ ಪರಮಾತ್ಮನು, ಆತ್ಮನ ಸಾಧನೆಯ ಪ್ರತೀಕವಾಗಿದ್ದಾನೆ.

ಲಿಂಗಾಯತ ಧರ್ಮದಲ್ಲಿ ಕಾಣಿಸಿಕೊಳ್ಳುವ ಇಷ್ಟಲಿಂಗವು, ದೀಕ್ಷಾ ಸಂದರ್ಭದಲ್ಲಿ ಗುರುವು ಕೊಡುವ ಕರಸ್ಥಲ ಲಿಂಗವಾಗಿದ್ದರೂ, ಸಾಧಕ ಬೆಳೆದಂತೆಲ್ಲ ಇದು ತನ್ನೊಳಗಡೆಯೇ ಇರುವ ಪ್ರಾಣಲಿಂಗವಾಗಿ ಪರಿವರ್ತನೆಯಾಗುತ್ತದೆ. ಅದೇ ಮುಂದೆ ಜ್ಞಾನಲಿಂಗವಾಗಿ ಬೆಳೆಯುತ್ತದೆ. ಹೀಗೆ ಕರಸ್ಥಲಲಿಂಗವು, ಪ್ರಾಣಲಿಂಗವಾಗಿ-ಜ್ಞಾನಲಿಂಗವಾಗಿ ಬೆಳೆದುನಿಂತಿರುವುದು ಕೇವಲ ಲಿಂಗಾಯತ ಧರ್ಮದಲ್ಲಿ ಮಾತ್ರವೆಂಬುವದನ್ನು ಗಮನಿಸಬೇಕು.

ಈ ಅಂಕಣದ ಹಿಂದಿನ ಬರಹಗಳು:
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...