ರುದ್ರಾಕ್ಷಿ ಮಹತ್ವ

Date: 05-12-2022

Location: ಬೆಂಗಳೂರು


“ರುದ್ರಾಕ್ಷಿ ಧಾರಣೆಯಿಂದ ಹುಟ್ಟು-ಸಾವುಗಳನ್ನು ಗೆಲ್ಲಬಹುದೆಂದು ಕೆಲವು ವಚನಕಾರರು ಹೇಳಿದ್ದಾರೆ. ರುದ್ರಾಕ್ಷಿ ಧಾರಣೆಯಿಂದ ದೇಹದ ದುರ್ಗುಣವಳಿಯುತ್ತದೆಂದು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಹೀಗೆ ರುದ್ರಾಕ್ಷಿಯು ಲಿಂಗಾಯತ ಧರ್ಮದಲ್ಲಿ ಅರಿವಿನ ಕಣ್ಣಾಗಿ ಜ್ಞಾನಸಾಧನೆಯ ಸಂಕೇತವಾಗಿ ಕಾಣಿಸಿಕೊಂಡಿದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ರುದ್ರಾಕ್ಷಿ’ಯ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ.

ಅಷ್ಟಾವರಣಗಳಲ್ಲಿ ರುದ್ರಾಕ್ಷಿಯೂ ಒಂದು. ಅಕ್ಷಿಯೆಂದರೆ ಕಣ್ಣು, ರುದ್ರಾಕ್ಷಿ-ರುದ್ರನಕಣ್ಣು ಎಂದರೆ ಅದನ್ನಿಲ್ಲಿ ಅರಿವಿನ ಕಣ್ಣು ಎಂದರ್ಥೈಸಬೇಕಾಗುತ್ತದೆ. ರುದ್ರಾಕ್ಷಿಧಾರಣೆ ಶೈವ ಧರ್ಮಗಳಲ್ಲಿಯೇ ಕಾಣ ಸಿಕೊಂಡಿದೆ. ಶಿವನ ಮೂರನೇ ಕಣ್ಣಿನಿಂದ ಉದುರಿದ ಜಲವೇ ರುದ್ರಾಕ್ಷಿಯಾಯಿತೆಂದು. ಶೈವ ಪುರಾಣಗಳು ಹೇಳಿದರೆ, ಲಿಂಗಾಯತ ಧರ್ಮದಲ್ಲಿ ಅದು ಕೇವಲ ಹೊರಗಿನ ಧಾರಣೆಮಾತೃವಾಗಿರದೆ. ಒಳಗಿನ ಅರಿವಿನ ಧಾರಣೆಯಾಗಿದೆ. ಇದನ್ನೇ ಅನೇಕ ವಚನಗಳಲ್ಲಿ ಶರಣರು ವಿವರಿಸಿ ಹೇಳಿದ್ದಾರೆ. ಇನ್ನು ರುದ್ರಾಕ್ಷಿಯು ವನದ ಔಷಧಿಯಾಗಿದ್ದು ರುದ್ರಾಕ್ಷಿ ಧರಿಸುವದರಿಂದ ಅನೇಕ ರೋಗಗಳು ನಿವಾಹರಣೆಯಾಗುತ್ತವೆಂಬ ವೈದ್ಯಕೀಯ ನಂಬಿಕೆಯೂ ಇದೆ.

“ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾವನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಕಾರಣವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಾಧನವು
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಸಿದ್ಧಿ
ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವಪಾಪಕ್ಷಯವು....”

-ಬಸವಣ್ಣ (ಸ.ವ.ಸಂ.1, ವ:985)

ಈ ವಚನದಲ್ಲಿ ರುದ್ರಾಕ್ಷಿಯ ಮಹತ್ವವನ್ನು ಬಸವಣ್ಣ ವಿವರಿಸಿದ್ದಾರೆ. ಅಯ್ಯಾ ಎನಗೆ ರುದ್ರಾಕ್ಷಿಯೆ ಸರ್ವ...ಎಂಬ ಸಾಲು ಐದು ಸಲ ಬಂದಿದೆ. ಮುಂದಿನ ಪದಗಳಲ್ಲಿ ಪಾವನ, ಕಾರಣ, ಸಾಧನ, ಸಿದ್ಧಿ, ಪಾಪಕ್ಷಯ ಸೇರಿಕೊಂಡಿವೆ. ರುದ್ರಾಕ್ಷಿಯಿಂದ ಅನೇಕ ಪ್ರಯೋಜನಗಳಿವೆ. ಅದು ಸಾಧಕನ ದೈಹಿಕ ಶುದ್ಧತೆಯ ಜತೆಗೆ, ಅರಿವಿನ ಕಣ್ಣು ತೆರೆಯುತ್ತ ಒಳಗೆ ಜ್ಞಾನೋತ್ವವನ್ನುಂಟು ಮಾಡುತ್ತದೆ. ಅಂತೆಯೇ ರುದ್ರಾಕ್ಷಿ ಕೇವಲ ಹೊರಗೆ ಧರಿಸುವ ಸರಮಾತ್ರವಲ್ಲ, ಒಳಗಿನ ಅಜ್ಞಾನವನ್ನು ಕಳೆಯುವ ಬೆಳಕಾಗಿದೆಯೆಂದು ಶರಣರು ಹೇಳಿದ್ದಾರೆ.

ಬಸವಣ್ಣ ತಮ್ಮ ಇನ್ನೊಂದು ವಚನದಲ್ಲಿ ರುದ್ರಾಕ್ಷಿಯ ಮಹತ್ವವನ್ನು ಮನಮುಟ್ಟುವಂತೆ ಹೇಳಿದ್ದಾರೆ. ರುದ್ರಾಕ್ಷಿಯಿಂದ ಭವಪಾಶಂಗಳು ಹರಿಯುತ್ತವೆ, ರುದ್ರಾಕ್ಷಿಯಿಂದ ತನುವಿಗಂಟಿರುವ ಕಾಮ-ಕ್ರೋಧದ ಅವಗುಣಗಳು ಇಲ್ಲವಾಗುತ್ತವೆ, ರುದ್ರಾಕ್ಷಿಯಿಂದ ಪಂಚಮಹಾಪಾತಕಗಳು ದೂರವಾಗುತ್ತವೆಯೆಂದು ಹೇಳಿದ್ದಾರೆ. ಇಂತಹ ಪವಿತ್ರವಾದ ರುದ್ರಾಕ್ಷಿಯನ್ನು ಧರಿಸದವರ ಮುಖವ ನೋಡಲಾಗದೆಂದು ಖಡಾಖಂಡಿತವಾಗಿ ತಿಳಿಸಿದ್ದಾರೆ. ರುದ್ರಾಕ್ಷಿಯಿಂದ ಎಲ್ಲ ಸಮಸ್ಯೆಗಳು ದೂರವಾಗುತ್ತವೆಯೆಂದು ಹೇಳಿರುವ ನುಡಿಗಳನ್ನು ಗಮನಿಸಿದಾಗ ಇಲ್ಲಿ ರುದ್ರಾಕ್ಷಿಯೆಂದರೆ ಅರಿವಿನಕಣ್ಣು ಎಂದೇ ಅರ್ಥವಾಗುತ್ತದೆ. ಅರಿವುಳ್ಳವನಿಗೆ ಯಾವುದೇ ಸಮಸ್ಯಗಳಿರುವುದಿಲ್ಲ. ಆದುದರಿಂದ ರುದ್ರಾಕ್ಷಿಯೆಂಬ ಅರಿವಿನ ಕಣ್ಣು ಇರಬೇಕೆಂದು ತಿಳಿಸಿದ್ದಾರೆ.

“........ಇಂತಪ್ಪ ಋಷಿ ಜನಂಗಳೆಲ್ಲ ಶ್ರೀ ಗುರುವಿನ ಕಾರುಣ್ಯವಂ ಪಡೆದು
ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ
ಪಾದತೀರ್ಥ ಪ್ರಸಾದವಂ ಕೊಂಡು
ಉತ್ತಮ ವರ್ಣಶ್ರೇಷ್ಠರಾದರು ಕಾಣ ರೇ......”
-ಚೆನ್ನಬಸವಣ್ಣ (ಸ.ವ.ಸಂ.3, ವ:1706)

ಈ ವಚನದಲ್ಲಿ ಚೆನ್ನಬಸವಣ್ಣ ಋಷಿಗಳು ಶ್ರೇಷ್ಠರೆನಿಸಿಕೊಳ್ಳಲು ರುದ್ರಾಕ್ಷಿಯೇ ಕಾರಣವೆಂದು ಹೇಳಿದ್ದಾರೆ. ಋಷಿಗಳು ರುದ್ರಾಕ್ಷಿ ಧರಿಸಿಕೊಂಡು, ವಿಭೂತಿ ಹಚ್ಚಿಕೊಂಡು ತಪಸ್ಸು ಮಾಡುವದು ಅದು ಕೇವಲ ಹೊರಗೆ ಕಾಣುವ ಅರ್ಥ ಮಾತ್ರವಾಗಿರದೆ, ಅದು ನಿಜವಾಗಿ ಒಳಗಿನ ಅರ್ಥವನ್ನು ಪ್ರಕಟಿಸುತ್ತದೆ.

ಅರಿವಿನ ಕಣ್ಣು ತೆರೆದು ಸಾಧನೆ ಮಾಡಿದಾಗ ಸಾಧಕ ಜ್ಞಾನಿಯಾಗುತ್ತಾನೆ, ಆಗ ಎಲ್ಲವನ್ನೂ ಗೆಲ್ಲಬಹುದಾಗಿದೆ. ಇದನ್ನೇ ಚೆನ್ನಬಸವಣ್ಣ ತನ್ನ ವಚನಗಳಲ್ಲಿ ವಿವರಿಸಿ ಹೇಳಿದ್ದಾರೆ.

“ಅಯ್ಯಗಳು ರುದ್ರಾಕ್ಷಿಯ ಕೊಟ್ಟಲ್ಲಿ ಫಲವಲ್ಲದೆ
ಸುಮ್ಮನೆ ಧರಿಸಿದಲ್ಲಿ ಫಲವಿಲ್ಲ ನೋಡಾ
ಭಕ್ತನು ಪದಾರ್ಥ ನೀಡಿದಲ್ಲಿ ಫಲವಲ್ಲದೆ
ಬೇಡಿ ರುಚಿಸಿದಲ್ಲಿ ಫಲವಿಲ್ಲ ನೋಡಾ.....”
-ಸಿದ್ಧರಾಮ (ಸ.ವ.ಸಂ.4, ವ:1556)

ರುದ್ರಾಕ್ಷಿಗಳನ್ನು ಅನೇಕರು ಧರಿಸುತ್ತಾರೆ. ಸರಮಾಡಿ ಕೊರಳಲ್ಲಿ ಹಾಕಿಕೊಳ್ಳುತ್ತಾರೆ. ಹೀಗೆ ಸುಮ್ಮನೆ ರುದ್ರಾಕ್ಷಿ ಧರಿಸುವದರಿಂದ ಯಾವುದೇ ಫಲವಿಲ್ಲವೆಂದು ಸಿದ್ಧರಾಮ ಹೇಳಿದ್ದಾರೆ. ಸುಮ್ಮನೆ ರುದ್ರಾಕ್ಷಿಸರ ತೆಗೆದುಕೊಂಡು ಕೊರಳಲ್ಲಿ ಹಾಕಿಕೊಳ್ಳುವದಕ್ಕಿಂತ ಅದೊಂದು ಸಾಧನೆಯ ಮಾರ್ಗವೆಂದು ತಿಳಿದು ಪೂಜ್ಯರಾದವರಿಂದ ಅದನ್ನು ಪಡೆದು ಧರಿಸುವದರಿಂದ, ಒಳಗಡೆ ಅರಿವು ಜಾಗೃತವಾಗಲು ಸಾಧ್ಯವಾಗುತ್ತದೆ. ಇಲ್ಲಿ ರುದ್ರಾಕ್ಷಿ ಅರಿವಿನ ಸಂಕೇತವಾಗಿದೆ. ತನ್ನ ಅರಿವನ್ನು ತಾನು ಜಾಗೃತಗೊಳಿಸಿಕೊಳ್ಳಬೇಕಲ್ಲದೆ, ಇತರರು ಅದನ್ನು ಜಾಗೃತಿಗೊಳಿಸಲಾರರು ಎಂದು ಅನೇಕ ವಚನಕಾರರು ಹೇಳಿದ್ದಾರೆ.

ರುದ್ರಾಕ್ಷಿ ಧಾರಣೆಯಿಂದ ಹುಟ್ಟು-ಸಾವುಗಳನ್ನು ಗೆಲ್ಲಬಹುದೆಂದು ಕೆಲವು ವಚನಕಾರರು ಹೇಳಿದ್ದಾರೆ. ರುದ್ರಾಕ್ಷಿ ಧಾರಣೆಯಿಂದ ದೇಹದ ದುರ್ಗುಣವಳಿಯುತ್ತದೆಂದು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಹೀಗೆ ರುದ್ರಾಕ್ಷಿಯು ಲಿಂಗಾಯತ ಧರ್ಮದಲ್ಲಿ ಅರಿವಿನ ಕಣ್ಣಾಗಿ ಜ್ಞಾನಸಾಧನೆಯ ಸಂಕೇತವಾಗಿ ಕಾಣಿಸಿಕೊಂಡಿದೆ.

(05-12-2022)

ಈ ಅಂಕಣದ ಹಿಂದಿನ ಬರಹಗಳು:
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...