ಎಲ್ಲವೂ ಇದೆ ಆದರೆ...

Author : ಸುಧಾಶರ್ಮಾ ಚವತ್ತಿ

Pages 236

₹ 230.00




Year of Publication: 2023
Published by: ಬೆನಕ ಬುಕ್ಸ್‌ ಬ್ಯಾಂಕ್‌
Address: ಯಳಗಲ್ಲು, ಕೋಡೂರು - ಅಂಚೆ, 577 418 ಹೊಸನಗರ - ತಾಲ್ಲೂಕು, ಶಿವಮೊಗ್ಗ - ಜಿಲ್ಲೆ
Phone: 7338437666

Synopsys

ಕನ್ನಡದಲ್ಲಿ ’ಪಾಸಿಟಿವ್‌ ಸೈಕಾಲಜಿ’ಯ ಬಗ್ಗೆ ಪ್ರಕಟವಾದ ಮೊದಲ ಪುಸ್ತಕ ’ಎಲ್ಲವೂ ಇದೆ ಆದರೆ...’. ನ್ಯೂರೋ ಸೈಂಟಿಸ್ಟ್‌ ಹಾಗೂ ಯೋಗಕ್ಷೇಮದ ಸಂಸ್ಥಾಪಕರಾದ ಡಾ.ಉಷಾ ವಸ್ತಾರೆ ಅವರೊಂದಿಗೆ ನಡೆಸಿದ ಮಾತುಕತೆಯನ್ನೇ ’ಪ್ರಾಫಿಟ್ ಪ್ಲಸ್‌’ ಪತ್ರಿಕೆಯ ಸಂಪಾದಕರಾದ ಸುಧಾ ಶರ್ಮಾ ಚವತ್ತಿ ಅವರು ಬರಹರೂಪಕ್ಕಿಳಿಸಿ, ಆ ಎಲ್ಲ ಬರಹಗಳನ್ನು ಒಟ್ಟುಗೂಡಿಸಿ ತಂದಿರುವ ಪುಸ್ತಕವೇ ’ಎಲ್ಲವೂ ಇದೆ ಆದರೆ...’ ಇಲ್ಲಿರುವ ಎಲ್ಲಾ ಬರಹಗಳೂ ನಮ್ಮ ಬದುಕಿನ ಸಂಕಷ್ಟಗಳನ್ನು ದೂರ ಮಾಡಿ ಸಂತೋಷದೆಡೆಗೆ ಮುಖ ಮಾಡಿಸುವಂತಿವೆ. ಬದುಕಿನ ಆರ್ಥಿಕ ಸಂಕಷ್ಟ, ಆರೋಗ್ಯದ ಏರುಪೇರು ಮತ್ತು ಪರಸ್ಪರ ಸಂಬಂಧಗಳಲ್ಲಿ ತೊಂದರೆ ಇರುವಂತಹ ಸಂದರ್ಭದಲ್ಲಿ ಈ ಪುಸ್ತಕ ನಿಮ್ಮ ಕೈಗೆ ಸಿಕ್ಕರೆ, ಪುಸ್ತಕವನ್ನು ಓದುತ್ತಾ ಹೋದಂತೆ ನೀವು ಎದುರಿಸುತ್ತಿರುವ ಸಮಸ್ಯೆಗಳಿಂದ ಮೆಲ್ಲಗೆ ಹೊರಬರಲಾರಂಭಿಸುತ್ತೀರಿ. ಹಾಗೆಂದು ಸಮಸ್ಯೆಗಳಿರುವವರು ಮಾತ್ರವಲ್ಲ, ಸಂತೋಷ - ಸಂತೃಪ್ತಿಯ ಬದುಕು ಬದುಕಲು ಯೋಚಿಸುತ್ತಿರುವವರು, ಗುಣಮಟ್ಟದ ಬದುಕಿನ ಕಡೆಗೆ ಕಣ್ಣಿಟ್ಟವರು ಕೂಡಾ ಈ ಪುಸ್ತಕವನ್ನು ಓದಿದರೆ ಬದುಕಿನ ಹೊಸ ದಿಕ್ಕೊಂದು ತೆರೆದುಕೊಳ್ಳುವಂತೆ ಇಲ್ಲಿನ ಬರಹಗಳಿವೆ. ಪುಸ್ತಕವು ಲೇಖನಗಳು, ಭರವಸೆ ಮತ್ತು ಪ್ರತಿಸ್ಪಂದನ ಎನ್ನುವ ಮೂರು ವಿಭಾಗಗಳಲ್ಲಿ ಇಲ್ಲಿನ ಬರಹಗಳನ್ನು ವಿಂಗಡಿಸಲಾಗಿದೆ. ಖ್ಯಾತ ಮನೋವೈದ್ಯರಾದ ಡಾ. ಸಿ.ಆರ್‌. ಚಂದ್ರಶೇಖರ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.

About the Author

ಸುಧಾಶರ್ಮಾ ಚವತ್ತಿ

ದೃಶ್ಯ, ಮುದ್ರಣ, ಈಗ ಭರವಸೆ ಯೂಟ್ಯೂಬ್ ವಾಹಿನಿಗಳ ಮೂಲಕ ಆಪ್ತವಾಗುವವರು ಸುಧಾ ಶರ್ಮಾ, ಚವತ್ತಿ. ಕನ್ನಡದ ಮೊಟ್ಟ ಮೊದಲ ಪಾಸಿಟೀವ್ ಸೈಕಾಲಜಿಯ, ಸಕಾರಾತ್ಮಕ ಚಿಂತನೆಯ, ಭರವಸೆಯ ಬದುಕಿಗಾಗಿಯೇ ರೂಪತಳೆದ "ಪ್ರಾಫಿಟ್ ಪ್ಲಸ್" ಪತ್ರಿಕೆಯ ಸಂಪಾದಕಿ. ಇವರು ಉತ್ತಮ ಕವಯತ್ರಿಯೂ ಹೌದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳೆಡರಲ್ಲೂ ಸಮೃದ್ಧ ಅನುಭವ ಉಳ್ಳವರು ವಿರಳ. ಇಂತಹ ವಿರಳರಲ್ಲಿ ಇವರೂ ಒಬ್ಬರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ಕೆಲಸ. "ವ್ಯಾಪಾರ" ಎನ್ನುವ ವಾಣಿಜ್ಯ ಪುರವಣಿಯ ನಿರ್ವಹಣೆ. ಉದಯ ಟಿ.ವಿಯಲ್ಲಿ ವರದಿಗಾರ್ತಿಯಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ. ಮುಂದೆ ಕಾವೇರಿ, ಈ ...

READ MORE

Excerpt / E-Books

ಮುನ್ನುಡಿ ನಮ್ಮ ಬದುಕಿಗೆ ದಾರಿದೀಪ ಒಂದು ಬೀಜದೊಳಗೆ ಒಂದು ವೃಕ್ಷವಿರುತ್ತದೆ, ದೊರೆತ ನೀರು, ಭೂಮಿಸಾರ ಮತ್ತು ವಾತಾವರಣದ ಮೇಲೆ ಅದು ಕುಬ್ಜ ವೃಕ್ಷವಾಗುತ್ತದೆಯೇ ಅಥವಾ ಬೃಹತ್ ವೃಕ್ಷವಾಗುತ್ತದೆಯೇ ಎಂಬುದು ನಿರ್ಧಾರವಾಗುತ್ತದೆ. ಹಾಗೆಯೇ ಹುಟ್ಟಿದ ಮಗುವಿನ ಮಿದುಳಿನಲ್ಲಿ ಮನಸ್ಸೆಂಬುದಿರುತ್ತದೆ, ದೊರೆತ ಆಹಾರ ತಂದೆ-ತಾಯಿ, ಮನೆಯವರು, ಶಾಲಾ ಕಾಲೇಜು ಮತ್ತು ಸಾಮಾಜಿಕ ಪರಿಸರದ ಮೇಲೆ ಆ ಮಗುವಿನ ಮನೋವಿಕಾಸವಾಗಿ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇಂದು ವ್ಯಕ್ತಿಯ ಸಾಮರ್ಥ್ಯವನ್ನು ಅವನು/ಅವಳು ಪರೀಕ್ಷೆಗಳಲ್ಲಿ ತೆಗೆಯುವ ಅಂಕಗಳ ಮೇಲೆ ಪಡೆಯುವ ಉದ್ಯೋಗ, ಗಳಿಸುವ ಹಣದ ಪ್ರಮಾಣದ ಮೇಲೆ, ಆಸ್ತಿ, ಅಂತಸ್ತು, ಸಂಪತ್ತಿನ ಮೇಲೆ ನಿರ್ಧರಿಸಲಾಗುತ್ತದೆ. ಆದರೆ ಪರೀಕ್ಷೆಗಳಲ್ಲಿ ಟಾಪರ್ ಆದವರು, ದೊಡ್ಡ ಹುದ್ದೆಯನ್ನು ಅಲಂಕರಿಸಿದವರು, ಅಪಾರ ಸಂಪತ್ತಿನ ಒಡೆಯರಾದವರು, ಸಂತೋಳವಾಗಿದ್ದಾರಾ, ಆನಂದವಾಗಿದ್ದಾರಾ ಎಂದರೆ ಇಲ್ಲ ಎಂಬುದೇ ವಾಸ್ತವಿಕ ಸತ್ಯ, ಏಕೆಂದರೆ ಆನಂದದ ಮೂಲ ಹೊರಗಿಲ್ಲ ನಮ್ಮೊಳಗೆ ಇರುತ್ತದೆ. ಗಳಿಸಿದ್ದರಲ್ಲಿ ತೃಪ್ತಿ ಇದ್ದರೆ ಆನಂದ. ಅತೃಪ್ತಿ ಇದ್ದರೆ ಇಡೀ ಪ್ರಪಂಚದ ಒಡೆತನವು ಬಂದರೂ ಆನಂದ ಮರೀಚಿಕೆಯಾಗುತ್ತದೆ. ಗಳಿಸು ಮತ್ತಳ್ಟು ಗಳಿಸು. ಏರು ಮತ್ತಳ್ಟು ಎತ್ತರಕ್ಕೆ ಏರು’ ಎಂಬುದೇ ನಾವಿಟ್ಟುಕೊಳ್ಳುವ ಗುರಿ, ಇದು ಸಾಧ್ಯವೇ? ಇತರರಿಗಿಂತ ಬೇಗ ಮತ್ತು ಹೆಚ್ಚು ಗಳಿಸುವೆನೇ ಎಂಬ ಅನುಮಾನದ ಬೇತಾಳ ನಮ್ಮ ಬೆನ್ನ ಮೇಲೇರಿ ಕುಳಿತುಕೊಳ್ಳುತ್ತದೆ. ಕಳ್ಟ, ನಳ್ಟ, ಸೋಲು, ನಿರಾಶೆ, ಅವಮಾನ, ಅನಾರೋಗ್ಯಗಳೆಂಬ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಮ್ಮ ಪಯಣ ಸಾಗಬೇಕು. ಇದು ಅನಿವಾರ್ಯ. ಗೆಲ್ಲುವುದು ಹೇಗೆ’ ಸಂಪತ್ತನ್ನು ಗಳಿಸುವುದು ಹೇಗೆ?’ ಯಶಸ್ಸಿನ ಶಿಖರವನ್ನೇರುವುದು ಹೇಗೆ?’ ಎಂಬ ಪುಸ್ತಕಗಳನ್ನು ಬರೆದಿರುವವರ ಸಂಖ್ಯೆ ಹೆಚ್ಚೇ! ಆದರೆ ಸಂತೋಳವಾಗಿರುವುದು ಹೇಗೆ, ಆನಂದವಾಗಿರುವುದು ಹೇಗೆ, ಎಂಬುದರ ಬಗ್ಗೆ ಈಗ ಹೇಳುವವರು, ಬರೆಯುವವರು ಅಪರೂಪ. ನರವಿಜ್ಞಾನ, ಮಾನಸಿಕ ಅರಿವಿನ ಚಂದ್ರ ಡಾ ಉಳಾ ವಸ್ತಾರೆ ಅವರು ಇಂತಹ ಅಪರೂಪದ ಪುಸ್ತಕವನ್ನು ಬರೆದು ನಾಡಿಗೆ ದೊಡ್ಡ ಕೊಡುಗೆಯನ್ನಿತ್ತಿದ್ದಾರೆ, ಇಂಥವರ ಸಂತತಿ ಸಾವಿರವಾಗಲಿ. ಪ್ರಸಕ್ತ ಕಾಲದಲ್ಲಿ 75ರಳ್ಟು ಜನರಿಗೆ ಎಲ್ಲವೂ ಇದೆ, ಸಮೃದ್ಧಿಯಾದ ಆಹಾರ- ವಸ್ತ್ರ-ವಸತಿ-ಹಣ-ಆಸ್ತಿ-ಸ್ಥಾನಮಾನಗಳಿವೆ, ಆದರೆ ಮನಸ್ಸಿಗೆ ನೆಮ್ಮದಿ ಇಲ್ಲ, ಸಮಾಧಾನವಿಲ್ಲ, ಇತರರೊಡನೆ ಹೋಲಿಸಿಕೊಂಡು ನನಗಿರುವುದು ಸಾಲದು ಎಂಬ ಹಪಾಹಪಿತನ. ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ನೆನೆದು ವಿಳಾದ, ದುಃಖ, ಕೀಳರಿಮೆ ಮಡುಗಟ್ಟಿದೆ. 2600 ವರ್ಳಗಳ ಹಿಂದೆಯೇ ಗೌತಮ ಬುದ್ಧ ಹೇಳಿದ ಮಾತು ಸಾರ್ವಕಾಲಿಕ ಸತ್ಯ. ನಿನ್ನ ಆಲೋಚನೆಗಳೇ ನಿನ್ನ ಸೋಲು ಗೆಲುವನ್ನು, ಸುಖ ದುಃಖಗಳನ್ನು, ನಿರ್ಧರಿಸುತ್ತದೆ. ಗುಣಾತ್ಮಕ ಚಿಂತನೆಯಿಂದ ನಿನ್ನ ಶಕ್ತಿ ಸಾಮರ್ಥ್ಯ ಅರಳಿದರೆ, ಋಣಾತ್ಮಕ ಚಿಂತನೆಯಿಂದ ಅವು ಬಾಡಿ ಹೋಗುತ್ತದೆ ಎಂದಿದ್ದಾನೆ. ಪಂಚೇಂದ್ರಿಯಗಳೆಂಬ ಕುದುರೆಗಳಿಗೆ ಸಂಯಮ ವಿವೇಚನೆಯ ಲಗಾಮು ಹಾಕಬೇಕು. ಗುರಿ ಮತ್ತು ಮಾರ್ಗದ ಮೇಲೆ ಏಕಾಗ್ರತೆಯನ್ನು ಮನಸ್ಸು ಸಾಧಿಸಬೇಕು. ಅತಿಯಾಸೆ ಬಿಟ್ಟು ಸರಳ ಜೀವನವೇ ಆನಂದ ಮಾರ್ಗ ಎಂದಿದ್ದಾನೆ. ಡಾ ಉಳಾ ಅವರ ಒಂದೊಂದು ಅಧ್ಯಾಯವೂ ಓದುಗರಿಗೆ ಮೌಲಿಕವಾದ ಮಾಹಿತಿ ಕೊಡುತ್ತದೆ. ಬೆಳೆಯುವ ಮಕ್ಕಳಿಗೆ, ತಂದೆ ತಾಯಿಗಳೇ ಮಾದರಿ, ಗುರಿಗಿಂತ ಮಾರ್ಗವೇ ಮುಖ್ಯ, ಭಯ - ದುಃಖವನ್ನು ಜಯಿಸುವುದು ಹೇಗೆ, ನಮ್ಮ ಮೈಂಡ್ ಸೆಟ್ (ಮನೋಭಾವ) ಹೇಗಿರಬೇಕು, ಪ್ರತಿವರ್ಳ ವಸಂತದಲ್ಲಿ ಹೊಸತಾಗುವ ಪ್ರಕೃತಿಯಂತೆ, ನಾವು ಹೊಸತನವನ್ನು ಕೂಡಿಸಿಕೊಳ್ಳುವುದು, ನಮಗೆ ನಾವು ದಾಸರಾಗಬೇಕೆ? ಅಥವಾ ಒಡೆಯರಾಗಬೇಕೆ, ಬಂಧುತ್ವದ ಮಹತ್ವ, ಜೀವನದಲ್ಲಿ ಕ್ಷಮೆ, ಕೃತಜ್ಞತೆಗಳ ಮಹತ್ವ, ನೋವಿದ್ದರೆ ನರಳಬೇಕಂತೇನೂ ಇಲ್ಲ, ನಗಲು ಕಲಿಯಿರಿ, ಮನಸ್ಸು ನಿಂತ ನೀರಾಗದೆ ಸದಾ ಹರಿಯುತ್ತಿರಬೇಕು, ಜ್ಞಾನವೇ ನಮ್ಮ ಅಮೂಲ್ಯ ಆಸ್ತಿ, ಸಿನಿಕತನ ಬಿಡಿ, ಸದಾ ಉಲ್ಲಾಸದಿಂದಿರಿ, ವಾಸ್ತವಿಕತೆಯನ್ನು ಒಪ್ಪಿಕೊಳ್ಳಿ, ಹೊಂದಿಕೊಳ್ಳಿ, ಸುಖ ನಮ್ಮನ್ನು ಸೋಮಾರಿಯನ್ನಾಗಿಸಿದರೆ, ಕಳ್ಟ-ನಳ್ಟಗಳು ನಮ್ಮ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಸುತ್ತದೆ, ನೋವನ್ನು ನಿರ್ಲಕ್ಷಿಸುವುದೇ ಸರಿಯಾದ ಮದ್ದು, ದೂಷಿಸುವುದನ್ನು ಬಿಟ್ಟು ಪ್ರೀತಿಸಿ, ಅಬ್ಬಾ! ಈ ಮಾಹಿತಿ ಸಲಹೆಗಳು ಅರ್ಥಗರ್ಭಿತವಾಗಿವೆ, ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಡಾ ಉಳಾ ಅವರಿಗೂ, ಈ ಪುಸ್ತಕವನ್ನು ನಿರೂಪಿಸಿರುವ ಶ್ರೀಮತಿ ಸುಧಾ ಶರ್ಮ ಅವರಿಗೂ ಎಲ್ಲಾ ಓದುಗರ ಪರವಾಗಿ ನೂರೊಂದು ನಮನಗಳು. -ಡಾ ಸಿ.ಆರ್.ಚಂದ್ರಶೇಖರ್ ಲೇಖಕರು, ಮನೋವೈದ್ಯರು * ಒಂದು ಅಧ್ಯಾಯ ಕಣ್ಣು ತೆರೆಸುವ ಕಷ್ಟಕಾಲ ಎಲ್ಲೆಡೆಗೂ ಈಗ ಕೊರೊನಾ ವೈರಸ್ ಬಗೆಗೆ ಎಚ್ಚರಿಕೆಯ ಮಾತುಗಳು. ಸಾಧ್ಯವಾದಷ್ಟು ಇದು ಹರಡದ ಹಾಗೆ ನೋಡಿಕೊಳ್ಳುವುದಕ್ಕೆ ಜನರಲ್ಲಿ ತಿಳಿವಳಿಕೆ ನೀಡುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಮ್ಮ ಸರ್ಕಾರ ವಹಿಸುತ್ತಿರುವ ಮುನ್ನೆಚ್ಚರಿಕೆ ಮೆಚ್ಚಲೇಬೇಕು. ಇವೆಲ್ಲವೂ ನಮಗೆ ನಿತ್ಯವೂ ಗೊತ್ತಾಗುವ ಸಂಗತಿಗಳು. ಹಾಗಾದರೆ ನಾವು ಸಾಮಾನ್ಯ ನಾಗರಿಕರು ಇಂತಹ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು? ನಮ್ಮ ಹೊಣೆಗಾರಿಕೆ ಏನು? ಅದೇ ವೇಳೆ ನಾವು ಹೇಗಿರಬೇಕು? ಎಲ್ಲಕ್ಕಿಂತ ಹೆಚ್ಚಾಗಿ ಈಗ ಒದಗಿ ಬಂದ ಕಷ್ಟಕಾಲ ಹೇಗೆ ನಮ್ಮ ಕಣ್ಣು ತೆರೆಸಬಲ್ಲದು. ನಮ್ಮ ಬದುಕಿನಲ್ಲಿಯೇ ಬಹುದೊಡ್ಡ ಬದಲಾವಣೆಗೆ ನಾಂದಿ ಆಗಬಲ್ಲದು ಅದನ್ನು ನೋಡೋಣ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯೂ ಒಳಗೊಂಡು ಎಲ್ಲೆಡೆಗಳಿಂದಲೂ ಬರುತ್ತಿರುವ ಎಚ್ಚರಿಕೆಗೆ ನಾವೂ ಸಹಕರಿಸಬೇಕು. ಸಾರ್ವಜನಿಕ ಸ್ಥಳಗಳಿಗೆ, ಜನಸಂದಣಿ ಇರುವಲ್ಲಿ ಹೋಗದಿರುವುದು, ಸೋಂಕುಪೀಡಿತರಿಂದ ದೂರ ಇರುವುದು, ಕೈ ತೊಳೆದುಕೊಳ್ಳುವುದು ಇತ್ಯಾದಿ. ಇದೆಲ್ಲವನ್ನೂ ಮಾಡುತ್ತಿದ್ದಾಗಲೂ, ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ನಮಗೆ ಬಂದರೂ ಆತಂಕ ಪಡುವ ಅಗತ್ಯವಿಲ್ಲ. ಇದು ನಮಗೆ ಸ್ಪಷ್ಟವಾಗಬೇಕು. ಸಮೂಹ ಸನ್ನಿ ಎನ್ನುವ ಪದ ಬಳಸುತ್ತೇವೆ. ಇದ್ದಕ್ಕಿದ್ದ ಹಾಗೆ ಒಂದು ಸಮೂಹ ಏಕರೀತಿಯಿಂದ ಪ್ರತಿಕ್ರಿಯಿಸುವುದು. ಎಲ್ಲೋ ಒಂದೆಡೆ ಹುಟ್ಟಿಕೊಂಡ ಆತಂಕ ಎಲ್ಲೆಡೆಗೂ ವ್ಯಾಪಿಸುವುದು. ಈಗ ಆಗುತ್ತಿರುವುದು ಇದು. ಭಯ ಆವರಿಸಿದಾಗ ಸಹಜವಾಗಿಯೇ ವಿಚಾರಶಕ್ತಿ ಕುಂಠಿತಗೊಳ್ಳುತ್ತದೆ. ಭಯ ಇದ್ದಾಗ ಸಹಜವಾಗಿಯೇ ದೇಹದ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಒಂದು ವೇಳೆ ಸೋಂಕು ತಾಗಿ ನಮಗೆ ಕಾಯಿಲೆ ಬಂದರೂ ಭಯಪಡುವ ಅಗತ್ಯವಿಲ್ಲ. ಇದು ನಮಗೆ ಭರವಸೆ ಆಗಬೇಕು. ನಮ್ಮ ದೇಹ ನಾವು ಕೊಡುವ ಸೂಚನೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಗೊತ್ತು. placebo effect ಅಂದರೆ ಯಾವುದೇ ಕಾಯಿಲೆಗೆ ರೋಗಿ ತೆಗೆದುಕೊಳ್ಳುವ ಔಷಧಿಯಷ್ಟೇ ಅವನಿಗೆ ಅದರ ಮೇಲಿರುವ ನಂಬಿಕೆಯೇ ಕೆಲಸ ಮಾಡುತ್ತದೆ. ನಮ್ಮ ನಂಬಿಕೆ ಬಹಳ ಮುಖ್ಯ. ಹೌದು ನನಗೆ ಕಾಯಿಲೆ ಬಂದಿದೆ, ಅದಿನ್ನೂ ದೃಢಪಟ್ಟಿಲ್ಲ. ಕೇವಲ ಕಾಯಿಲೆಯ ಲಕ್ಷಣ ನೋಡಿಯೇ ಹೆದರಬೇಕಾಗಿಲ್ಲ. ಒಂದು ವೇಳೆ ಕಾಯಿಲೆ ಇದೆ ಎಂದು ದೃಢಪಟ್ಟರೂ ನಮಗೆ ನಮ್ಮ ದೇಹದ ರೋಗನಿರೋಧಕ ಶಕ್ತಿಯ ಮೇಲಿನ ನಂಬಿಕೆ ಕೆಲಸ ಮಾಡುತ್ತದೆ. ಇದು ಹೇಗೆಂದರೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಹಾಗೆ. ನಮಗೆ ನಮ್ಮ ಮೇಲೆ ಅಪನಂಬಿಕೆ ಬರಬಾರದು. placebo effect ಇದಕ್ಕೆ ವಿರುದ್ಧವಾದದ್ದು Nocebo. ಒಮ್ಮೆ ನಮಗೆ ನಾವು ತೆಗೆದುಕೊಳ್ಳುವ ಔಷಧಿಯ ಬಗೆಗೆ, ನಮಗೆ ನಮ್ಮ ಬಗೆಗೆ ಅಪನಂಬಿಕೆ ಇದ್ದರೆ ಇದರ ಪರಿಣಾಮ ದೇಹದ ಮೇಲೆ ಆಗುತ್ತದೆ. ನಮಗೇನೋ ಗುಣವಾಗದ ಕಾಯಿಲೆ ಬಂದಿದೆ, ಏನು ಮಾಡಲಿ ಎನ್ನುವ ಆತಂಕದಿಂದ ಇದ್ದರೆ ಈ ಆತಂಕ ನಾವು ಗುಣಮುಖರಾಗಲು ಸಹಕರಿಸುವುದಿಲ್ಲ. ಹಾಗಾಗಿ ಭಯವಿಲ್ಲದೇ ಇರಬೇಕಾದದ್ದು ಅತ್ಯಗತ್ಯ. ಒಳ್ಳೆಯ ಆಹಾರ, ಜೀವನ ಶೈಲಿ ಜೊತೆಗೆ ಈಗ ಸಾಕಷ್ಟು ಶುಚಿತ್ವ, ಮುನ್ನೆಚ್ಚರಿಕೆ ಎಲ್ಲ ವಹಿಸಿರುವಾಗ ಭಯಕ್ಕೆ ಆಸ್ಪದವೇ ಇರುವುದಿಲ್ಲ. ನಮ್ಮೆಲ್ಲರ ಬದುಕಿನಲ್ಲೂ ಮಾಧ್ಯಮಗಳು ಮಹತ್ವದ ಪ್ರಭಾವ ಬೀರುತ್ತಿವೆ. ಈಗ ಹೊಸ ರೀತಿಯ ತಾಪತ್ರಯ ಶುರುವಾಗಿದೆ. ಅದೇನೆಂದರೆ Infodemic ಅಂದರೆ ಸಿಕ್ಕ ಸಿಕ್ಕ ಮಾಹಿತಿಗಳು ಹೊರಬರುತ್ತಿರುವುದು. ಇದೇ ಈಗ ದೊಡ್ಡ ಸಮಸ್ಯೆಯಾಗಿದೆ. ಎಲ್ಲೆಡೆಗೂ ಕೇವಲ ಮಾಹಿತಿಗಳು. ಈ ಮಾಹಿತಿಗಳು ನಮಗೆ ಬೇಕೋ ಬೇಡವೋ, ಸರಿಯೋ ತಪ್ಪೋ, ಇತ್ಯಾದಿ ವಿಷಯಗಳ ಬಗೆಗೆ ನಾವೇ ನಮ್ಮನ್ನು ಇನ್ನಷ್ಟು ಪ್ರಜ್ಞಾಪೂರ್ವಕವಾಗಿ ಬದಲಾಯಿಸಿಕೊಳ್ಳುವುದಕ್ಕೆ ಒಂದು ವಿಧಾನವಿದೆ. ಅದೇ SIFT methodology ಹಾಗಂದರೇನು? ಈ ವಿಧಾನವನ್ನು ಸಂಕ್ಷಿಪ್ತವಾಗಿ ಅರ್ಥ ಮಾಡಿಸುವೆ. ನಾವು ಬೆಳಿಗ್ಗೆ ಪತ್ರಿಕೆ ಓದುತ್ತೇವೆ, ಅಥವಾ ಯಾವುದೋ ಮಾಧ್ಯಮದಲ್ಲಿ ಈ ವಿಷಯದ ಬಗೆಗೆ ಒಂದು ವರದಿ ನೋಡುತ್ತೇವೆ. ನಿಜ ಇಂತಹ ಸುದ್ದಿಗಳನ್ನು ಕೇಳಿದಾಗ, ನೋಡಿದಾಗ ಮನಸ್ಸು ಒಂದು ಕ್ಷಣ ತಲ್ಲಣಿಸಿಬಿಡುತ್ತದೆ. ಆತಂಕಕ್ಕೊಳಗಾಗುತ್ತದೆ. ಉದಾಹರಣೆಗೆ ನಿನ್ನೆ ಇಷ್ಟು ಜನರ ಸಾವು ಸಂಭವಿಸಿತ್ತು, ಇವತ್ತು ಇದು ಇಷ್ಟಾಗಿದೆ, ನಾಳೆ ಇನ್ನೆಷ್ಟಾಗತ್ತೋ ಮನಸ್ಸು ಭಯದಿಂದ ಯೋಚಿಸುತ್ತದೆ. ಯಾವಾಗ ಹೀಗೆ ಸುದ್ದಿ ಓದುವುದು, ನೋಡುವುದು ಕಷ್ಟವಾಗುತ್ತಿದೆಯೋ ಆಗ ಅದನ್ನು ಅಲ್ಲಿಗೆ ನಿಲ್ಲಿಸಿ. ಇದು ಮೊದಲ ಹಂತ. ದೀರ್ಘವಾಗಿ ಉಸಿರೆಳೆದುಕೊಂಡು ಈ ಸುದ್ದಿಯ ಮೂಲ ಯಾವುದು? ಯಾರು ಬರೆದದ್ದು? ವರ್ಣರಂಜಿತ ವಿವರ ಕೊಟ್ಟಿದ್ದಾರೆಯೇ? ಒಮ್ಮೆ ಈ ಮೂಲ ನೋಡಿದಾಗ ನಮಗೆ ವಿಷಯದ ಬಗೆಗೆ ಸ್ಪಷ್ಟ ಚಿತ್ರ ಸಿಗುತ್ತದೆ. ಇದೇ ವಿಷಯದ ಇನ್ನಷ್ಟು ಮಾಹಿತಿ ಬೇರೆಡೆಗೂ ಇದೆಯಾ ನೋಡುವುದು. ಬೇರೆ ಬೇರೆ ಮಾಧ್ಯಮಗಳಲ್ಲೂ ಇವುಗಳ ಬಗೆಗೆ ವಿವರಗಳು, ವರದಿಗಳು, ಹೇಳಿಕೆಗಳನ್ನು ನೋಡುವುದು. ಈಖಿ SIFT (STOP, INVESTIGATE THE SOURCE. FIND BETTER COVERAGE. TRACE CLAIMS, QUOTES, MEDIA TO THE ORIGINAL CONTEXT) methodology ಇದೊಂದು ವಿಧಾನ. ಯಾವಾಗ ಮಾಧ್ಯಮಗಳಿಂದ ಮಾಹಿತಿಗಳ ಮಹಾಪೂರವೇ ಹರಿದುಬರಲು ಆರಂಭವಾಯಿತೋ ನಾವು ಭಾವನಾತ್ಮಕವಾಗಿ ಯೋಚಿಸದೇ ವೈಚಾರಿಕ ದೃಷ್ಟಿಯಿಂದ ವಿಷಯವನ್ನು ಅರಿಯುವುದಕ್ಕೆ ಮುಂದಾಗುವುದು. ಇದು ಕೇವಲ ಕೊರೊನಾ ವೈರಸ್ ವಿಷಯದಲ್ಲಿ ಮಾತ್ರವಲ್ಲ. ರಾಜಕೀಯ, ಆರ್ಥಿಕ, ಯಾವ ವಿಷಯವೂ ಇರಬಹುದು ನಾವು ಮಾಧ್ಯಮಗಳನ್ನು ನೋಡುವ ರೀತಿಯನ್ನೇ ಬದಲಿಸಿಕೊಳ್ಳಬೇಕಾಗಿದೆ. ನಾವೀಗ ಬದುಕುತ್ತಿರುವ ಸಾಮಾಜಿಕ ಜಾಲತಾಣಗಳ, ಮಾಧ್ಯಮಗಳ ಇಷ್ಟೊಂದು ಪ್ರಭಾವದ ಕಾಲದಲ್ಲಿ ನಾವು ಭಾವನಾತ್ಮಕವಾಗಿ ಯೋಚಿಸುವ ಬದಲು ವೈಚಾರಿಕವಾಗಿ, ಅರ್ಥ ಮಾಡಿಕೊಳ್ಳುವುದನ್ನು ಕಲಿಯಬೇಕಾಗಿದೆ. ಹೀಗೆ ಮಾಡಿದಾಗಲೇ ನಾವು ನಮ್ಮ ಇಡೀ ಬದುಕನ್ನೇ ಈಗಿನ ಮಾಧ್ಯಮಗಳ ಹಾವಳಿಯ, ಅಬ್ಬರದ ಸಾಮಾಜಿಕ ಜಾಲತಾಣಗಳಿಂದ ಹೊರಗೆ ನಿಂತು ಯೋಚಿಸಲು ಸಾಧ್ಯವಾಗಲಿದೆ. ಅಂದರೆ ಮಾಧ್ಯಮದ ಪ್ರಭಾವ ನಮ್ಮ ಮೇಲೆ ಹೇಗಿರಬೇಕು ಎಂದು ನಿರ್ಧರಿಸುವವರು ನಾವೇ ಆಗಿರುತ್ತೇವೆ.

Related Books