About the Author

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ಅವರು ಸ್ವಂತಹ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆ ಕಲಿತರು. ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಅ.ನ.ಕೃಷ್ಣರಾಯರು ಮತ್ತು ತ.ರಾ.ಸುಬ್ಬರಾವ್‌ ಅvರ ಕಾದಂಬರಿಗಳ ಓದು ಬರವಣಿಗೆಗೆ ಪ್ರೇರಣೆ ನೀಡಿತು.

ಬಹುತೇಕ ಲೇಖಕರ ಹಾಗೆ ಕಾವ್ಯಕಟ್ಟುವ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದರು. ಆ ಮೇಲೆ ಕಾದಂಬರಿಗಳತ್ತ ತಿರುಗಿದರು.  'ಮಿಂಚು' (1960) ಮೊದಲ ಕಾದಂಬರಿ. ಆಕರ್ಷಕ ಶೈಲಿಯ ಕಥನಕಟ್ಟುವಿಕೆ, ಸರಳ ನಿರೂಪಣೆ, ಆರ್ದ್ರ ಬರವಣಿಗೆ ಮತ್ತು ಸಮರ್ಪಕ ಪಾತ್ರ ಪೋಷಣೆಯಿಂದ ಜನಜನಿತರಾದರು. ಸತತ ನಾಲ್ಕು ದಶಕಗಳ ಕಾಲ ನಿರಂತರ ಸಾಹಿತ್ಯ ಕೃಷಿ ಮಾಡಿರುವ ಸಾಯಿಸುತೆ ಅವರು 140 ಕಾದಂಬರಿ ಪ್ರಕಟಿಸಿದ್ದಾರೆ.

ಸಪ್ತಪದಿ, ಬಾಡದ ಹೂವು, ಕಲ್ಯಾಣರೇಖೆ, ಇಬ್ಬನಿ ಕರಗಿತು, ಗಂಧರ್ವಗಿರಿ, ಶ್ವೇತಗುಲಾಬಿ, ಚಿರಬಾಂಧವ್ಯ, ಮಿಡಿದ ಶೃತಿ ಮುಂತಾದ ಹತ್ತಾರು ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ.

'ಪಾಪಚ್ಚಿ' ಮುಂತಾದ ಪತ್ರಿಕೆಗಳಿಗೆ ಶಿಶುಸಾಹಿತ್ಯ ಹಾಗೂ ಬಾನುಲಿ ಕೇಂದ್ರಕ್ಕಾಗಿ ಹಲವಾರು ನಾಟಕ ರಚಿಸಿದ್ದಾರೆ.  ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯ ಸಂಪನ್ನೆ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಮಹಿಳಾ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ದೊರೆತಿವೆ.

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

(20 Aug 1942)

Books by Author