ಸ್ವಂತ ಉದ್ದಿಮೆ ಮಾಡಿಕೊಂಡಿದ್ದ ಸಂತೋಷ್ ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣದಿಂದ ಹೃದಯಾಘಾತವಾಗುತ್ತೆ.. ಇಷ್ಟವಿಲ್ಲದಿದ್ದರೂ ಕುಟುಂಬದ ಸ್ಥಿತಿಯಿಂದಾಗಿ ಉದ್ದಿಮೆಗೆ ಕಾಲಿಟ್ಟ ಸಂತೋಷ್ ಇಲ್ಲಿವರೆಗೂ ವಿಶ್ರಾಂತಿ ತಗೊಂಡಿದ್ದೇ ಇಲ್ಲ.ಆದರೆ ಈಗ ಡಾಕ್ಟರ್ ಸಲಹೆಯಂತೆ ಕೆಲವು ದಿನಗಳ ಕಾಲ ಕೆಲಸಕ್ಕೆ ವಿರಾಮ ಕೊಟ್ಟಾಗ, ತನ್ನ ಮನೆಯವರನ್ನು ಸ್ವಲ್ಪ ಸೂಕ್ಷ್ಮವಾಗಿ ಅವಲೋಕಿಸುತ್ತಾನೆ.ಅಲ್ಲಿ ಅವನಿಗೆ ಕಂಡುಬರುವ ಸತ್ಯ ತಿಳಿದು ತುಂಬಾನೇ ನೋವಾಗುತ್ತೆ.ಪ್ರೀತಿ ಉಣಬಡಿಸಿದ ಮಡದಿ ನಿಹಾರಿಕ, ಮುದ್ದು ಎರಡು ಹೆಣ್ಣು ಮಕ್ಕಳು, ಪ್ರೀತಿಯ ಅತ್ತಿಗೆ ಮಧುರ, ಅವರ ಮಗ ಅಲೋಕ್, ಹೆತ್ತಮ್ಮ ಹೀಗೆ ಇವರುಗಳ ಕಾಳಜಿಯನ್ನು ವಿಮರ್ಶಿಸುತ್ತಾನೆ.ಹೆತ್ತಮ್ಮ ಹಾಗೂ ಅಲೋಕ್ ಹೊರತುಪಡಿಸಿದರೆ, ಉಳಿದವರೆಲ್ಲ ಇಲ್ಲಿವರೆಗೆ ತೋರುತ್ತಿದ್ದ ಪ್ರೀತಿ, ಸ್ವಾರ್ಥದಿಂದ ತುಂಬಿದೆ ಎಂದು ಅರಿವಾಗಿ ಮನಸ್ಸು ಅತ್ತು ಗೋಳಾಡುತ್ತೆ.. ಓರಗಿತ್ತಿಯರು ಸಂತೋಷ್ ಬದುಕಿದ್ದರೂ ಇಲ್ಲದಂತೆ ಭಾವಿಸಿ, ಮುಂದೆ ತಮ್ಮ ತಮ್ಮ ಸಂಸಾರದ ಭದ್ರತೆಗಾಗಿ ಈಗಿನಿಂದಲೇ ಆಸ್ತಿಯ ಮೇಲೆ ಹಕ್ಕು ಸಾಧಿಸುವ ರೀತಿ ಕಂಡು ರೋಸಿ ಹೋಗುತ್ತಾನೆ.ಇಂತಹ ವಿರಾಮದ ಸಮಯದಲ್ಲಿ ಅವನಿಗೆ ತನ್ನ ಬಾಲ್ಯದ ನೆರೆಯವರ ಕುಟುಂಬದ ಹುಡುಗಿ, ಜೊತೆಗೆ ಆಡಿ ನಲಿದಿದ್ದ ಗಾಯತ್ರಿಯ ಭೇಟಿ ಮಾಡಬೇಕೆಂದಿನಿಸಿ, ಅವಳ ವಿಷಯ ಅವನ ಅಮ್ಮನ ಬಳಿ ಚರ್ಚಿಸುತ್ತಾನೆ.ಮಗ ಇಂತಹ ವಾತಾವರಣದಲ್ಲಿದ್ದರೆ ಖಂಡಿತ ಅವನು ಗುಣಮುಖನಾಗುವುದಿಲ್ಲ ಎಂದು ಯೋಚಿಸಿ, ಅವನಿಗೆ ಹೋಗಲು ಅಪ್ಪಣೆ ಕೊಡುತ್ತಾರೆ.ಗಾಯತ್ರಿಯನ್ನು ಭೇಟಿ ಮಾಡ ಹೊರಟ ಸಂತೋಷಗೆ, ಜೀವನದ ಬಹು ಮುಖ್ಯ ಸಂಗತಿಗಳು ಪರಿಚಯವಾಗುತ್ತೆ.. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇರುವ ಆಶ್ರಮದಲ್ಲಿ ಗಾಯತ್ರಿ ಮದುವೆಯಾಗದೆ, ಅವರುಗಳ ಸೇವೆ ಮಾಡುವ ವಿಷಯ ತಿಳಿದು ಆಶ್ಚರ್ಯವಾಗುತ್ತೆ.ಅವಳ ಭೇಟಿ ಮಾಡಿ ಅಲ್ಲಿಯ ವಿಚಾರಗಳನ್ನೆಲ್ಲ ತಿಳಿದುಕೊಂಡ ಮೇಲೆ, ಅವಳು ಮದುವೆಯಾಗದ್ದಕ್ಕೆ ಕಾರಣ, ಅವಳು ತನ್ನ ಹೃದಯದಲ್ಲಿಟ್ಟು ಪೂಜಿಸಿ, ಆರಾಧಿಸುವ ವ್ಯಕ್ತಿಯ ಬಗ್ಗೆ ತಿಳಿದು ಅಪಾರ ಸಂತೋಷ, ಸಂಭ್ರಮ, ಉದ್ವೇಗಗೊಳಗಾಗುತ್ತಾನೆ.ಮುಂದೆ ಗಾಯತ್ರಿ ಸಂತೋಷನ ಬಾಳಲ್ಲಿ ಅವನ ಅಮ್ಮನ ಮಾತೃತ್ವ ಪ್ರೀತಿಯಿಂದ ಹೇಗೆ ಬರುತ್ತಾಳೆ, ಸಾಂಸಾರಿಕ ಪ್ರೀತಿಯೆಂದರೆ ಬರೀ ದೈಹಿಕ ಸುಖ ಮಾತ್ರವಲ್ಲ, ಪರಿಶುದ್ಧ ನಿಷ್ಕಲ್ಮಶ ಪ್ರೀತಿ, ಕಾಳಜಿ, ನಿಸ್ವಾರ್ಥ ಪ್ರೀತಿ ಇವುಗಳೆಲ್ಲಾ ಹೇಗೆ ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದಾರೆ ನಮ್ಮ ಪ್ರೀತಿಯ ಸಾಯಿಸುತೆ ಮೇಡಂ.ಸಂತೋಷ್ ಗಾಯತ್ರಿಯ ಮೇಲೆ ಸದಾ ಪ್ರಕೃತಿಯು ಮಂತ್ರಾಕ್ಷತೆ ಹಾಕಿ ಹಾರೈಸಿ, ಮುಂದೆ ಹತ್ತು ವರ್ಷಗಳಾದರೂ ಸಂತೋಷ್ ಆರೋಗ್ಯವಾಗಿಯೇ ಇರ್ತಾನೆ.ಇದರಿಂದ ನಿಹಾರಿಕ ಅನುಭವಿಸಿದ್ದು ಭಾರಿ ನಷ್ಟ ಅಷ್ಟೇ.ಸಂತೋಷ್ ಅಮ್ಮ ಅವನ ಬಗ್ಗೆ ತೋರುವ ಪ್ರೀತಿ, ಸಂತೋಷ್ ಚಿಕ್ಕಪ್ಪನಾದರು ಗೆಳೆಯನಂತೆ, ಗುರುವಿನಂತೆ ಪ್ರೀತಿಸುವ ಅಲೋಕ್ ಹೀಗೆ ಇವರುಗಳ ಪಾತ್ರ ಚೆನ್ನಾಗಿವೆ.
©2021 Bookbrahma.com, All Rights Reserved