ನುಡಿಗಳ ಅಳಿವು

Author : ಕೆ.ವಿ. ನಾರಾಯಣ

Pages 88

₹ 100.00




Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ, ಕಂಟ್ರಿಕ್ಲಬ್ ಹತಿ್ತರ, ವಿದ್ಯಾನಗರ, ಶಿವಮೊಗ್ಗ-577203
Phone: 94491 74662

Synopsys

ಕನ್ನಡ ಅರಿವಿನ ಲೋಕದಲ್ಲಿ ಕವಿಎನ್ ಎಂದೇ ಪ್ರಸಿದ್ದಿಯಾಗಿರುವ ಪ್ರೊ. ಕೆ. ವಿ. ನಾರಾಯಣ ಅವರು ಕನ್ನಡದ ಪ್ರಮುಖ ಚಿಂತಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಕವಿಎನ್ ಅವರು ಅನುವಾದವೆಂಬ ಕ್ರಿಯೆಯನ್ನು ಕೇವಲ ಎರಡು ನುಡಿಗಳ ನಡುವಿನ ಒಂದು ತರ್ಜುಮೆಯ ಚಟುವಟಿಕೆಯನ್ನಾಗಿ ನೋಡದೆ, ಅದನ್ನೊಂದು ಸಾಂಸ್ಕೃತಿಕ ಗ್ರಹಿಕೆಯಾಗಿ ಹಾಗೂ ಬಹುಶಿಸ್ತೀಯ ಜ್ಞಾನ ಮೀಮಾಂಸೆಯನ್ನಾಗಿ ಅರಿಯುವುದಕ್ಕೆ ಬೇಕಾಗಿರುವ ರಚನಾತ್ಮಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡವರು. ನುಡಿಯ ಕುರಿತ ಅವರ ಸುದೀರ್ಘ ಕುತೂಹಲದ ಭಾಗವಾಗಿದೆ ಈ  ಕೃತಿ. ಈ ಕೃತಿ ವಾಗ್ವಾದವನ್ನು ಗುರಿಯಾಗಿರಿಸಿಕೊಂಡು ಬರೆಯಲ್ಪಟ್ಟಿದೆ. ಕನ್ನಡ ಭಾಷೆಯೂ ಸೇರಿದಂತೆ ಪ್ರಾದೇಶಿಕ ನುಡಿಗಳ ಅಳಿವು ಚರ್ಚೆಗೊಳಗಾಗುತ್ತಿರುವ ದಿನಗಳಲ್ಲಿ, ಈ ಪುಟ್ಟ ಕೃತಿ ಅದನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುತ್ತದೆ. ನುಡಿ ಎಂದರೆ ಏನು ಎನ್ನುವುದರಿಂದ ಹಿಡಿದು, ಅದರ ಉಳಿವಿನ ಅಗತ್ಯ ಮತ್ತು ಉಳಿವಿನ ದಾರಿಯ ಕುರಿತಂತೆಯೂ ಚಿಂತಿಸುತ್ತದೆ.  ನುಡಿಗಳು ಅಳಿಯುವ ಪ್ರಕ್ರಿಯೆಯನ್ನು ಈ ಬರಹ ಅಲ್ಲಗಳೆಯುವುದಿಲ್ಲ. ಆದರೆ ನುಡಿಗಳ ಅಳಿವನ್ನು ಒಟ್ಟು ಮಾನವ ವ್ಯಾಪಾರದಿಂದ ಬೇರೆಯಾಗಿಸಿ ನೋಡುವುದನ್ನು ಕೂಡ ಒಪ್ಪುವುದಿಲ್ಲ. ನುಡಿಗಳನ್ನು ಆಡುವವರನ್ನು ಮತ್ತು ನುಡಿಗಳನ್ನು ಬೇರೆ ಬೇರೆಯಾಗಿರಿಸಿ ಕೇವಲ ನುಡಿಗಳನ್ನು ಕಾಪಿಡುವ ಯೋಜನೆಗಳನ್ನು ರೂಪಿಸುವ ಯೋಜನೆಗಳ ಕೊರತೆಗಳನ್ನು ಗುರುತಿಸುವುದು ಅಗತ್ಯ ಎಂದು ಕೃತಿ ಅಭಿಪ್ರಾಯಪಡುತ್ತದೆ.

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Reviews

ಭಾಷೆಯೊಂದರ ಅಳಿವು ಎಂದರೆ ಏನು?

ಭಾಷೆಗೆ ಸಂಬಂಧ ಪಟ್ಟಂತೆ ವ್ಯಾಕರಣ, ಭಾಷಣ ಕಲೆ, ಛಂದಸ್ಸು, ಅಲಂಕಾರ ಶಾಸ್ತ್ರ ಮುಂತಾದ ಅಧ್ಯಯನಗಳಿಗೆ ದೊಡ್ಡ ಇತಿಹಾಸವೆ ಇದೆ. ಆದರೆ ಭಾಷೆಗಳ ತೌಲನಿಕ ಅಧಾಯನಗಳು ವಿಶೇಷವಾಗಿ ಪಶ್ಚಿಮದಲ್ಲಿ ೧೯ನೆಯ ಶತಮಾನದಲ್ಲಿ ಬೆಳೆದು ಬಂದಿವೆ. ಭಾಷಾ ಅಧ್ಯಯನದ ಮೂಲಕ ಮನುಷ್ಯ ಸ್ವಭಾವ, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವ ಈ ಪ್ರಯತ್ನಗಳು ಮುಗ್ಧತೆಯಿಂದ ಕೂಡಿರಲಿಲ್ಲ ಎಂಬುದು ಗೊತ್ತಿದ್ದ ಸಂಗತಿ. ನುಡಿಗಳ ಅಳಿವು ಅಂದರೆ ಅವು ಸಾಮ್ರಾಜ್ಯಶಾಹಿಯ ರಾಜಕೀಯದ ಭಾಗವಾಗಿಯೇ ಬಂದಿವೆ.

ಭಾಷೆ ಮತ್ತು ಭಾಷಾ ಅಧ್ಯಯನಗಳು ೨೦ನೆಯ ಶತಮಾನದಲ್ಲಿ ಹೊಸ ಕ್ರಾಂತಿಯನ್ನೇ ಉಂಟುಮಾಡಿದ್ದು ಇನ್ನೊಂದು ವಿಶೇಷ. ಆ ಶತಮಾನದ ದೊಡ್ಡ ಕಥಾನಕವೆ ಆದ ರಾಷ್ಟ್ರೀಯತೆಯ ಮುಖ್ಯ ಪಾತಳಿಯಾಗಿದ್ದು ಭಾಷೆಯೇ. ಆಧುನಿಕ ಭಾರತದ ನಿರ್ಮಾಣದಲ್ಲಿ ರಾಜ್ಯಗಳನ್ನು ರಚಿಸಿದ್ದು ಭಾಷಾವಾರು ಪ್ರಾಂತದ ತರ್ಕದ ಮೂಲಕವೆ, ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಅಧ್ಯಯನಗಳು ನಡೆದಿವೆ. ಇನ್ನು ಸ್ವಿಟ್ಟರ್‌ಲ್ಯಾಂಡ್‌ನ ಸಂಸ್ಕೃತ ಭಾಷಾ ತಜ್ಞನಾದ ಫರ್ಡಿನಾಂಡ್ ದ ಸಸ್ಯೂ (೧೮೫೭-೧೯೧೩) ಪರಿಚಯಿಸಿದ ವಿವರಣಾತ್ಮಕ ಹಾಗೂ ಸಂರಚನಾ ಭಾಷಾ ಅಧ್ಯಯನವು ಮಾನವಿಕ ಹಾಗೂ ಸಮಾಜ ಅಧ್ಯಯನಗಳ ದಿಕ್ಕನ್ನೇ ಬದಲಿಸಿತು. ಸಾಹಿತ್ಯ, ಸಾಂಸ್ಕೃತಿಕ ಅಧ್ಯಯನಗಳಲ್ಲಿ ಇದನ್ನು 'ಭಾಷಿಕ ತಿರುವು' ಎಂದು ಕರೆಯುವುದುಂಟು. ಇದರ ಜೊತೆಗೆ ಭಾಷೆಯನ್ನು ಸಾಮಾಜಿಕ ಸಂಗತಿಯಾಗಿ ಅಧ್ಯಯನ ಮಾಡುವ ಸಾಮಾಜಿಕ-ಭಾಷಾ ವಿಜ್ಞಾನ, ದಿನನಿತ್ಯ ಜೀವನದಲ್ಲಿ ಭಾಷೆಯ ಬಳಕೆಯನ್ನು ಅಧ್ಯಯನ ಮಾಡುವ ಪ್ರಾಯೋಜಿಕ ಭಾಷಾ ವಿಜ್ಞಾನ' (ಪ್ಯ್ರಾಗ್ಯ್ಮಾಟಿಕ್ಸ್) ಹಾಗೂ ನೋಮ್ ಚಾಮ, ಹ್ಯಾಲಿಡೆ ಮುಂತಾದವರ ಭಾಷಾ ವಿಜ್ಞಾನ ಮಾದರಿಗಳು ೨೦ನೆಯ ಶತಮಾನದ ಮಹತ್ವದ ಹೆಜ್ಜೆಗಳಾಗಿವೆ.

ಹೀಗೆ ೨೦ನೆಯ ಶತಮಾದ ಉತ್ತರಾರ್ಧದಲ್ಲಿ 'ಅಂಚಿಗೆ ತಳ್ಳಲ್ಪಟ್ಟ ಭಾಷೆಗಳ, ಗಂಡಾಂತರ ಎದುರಿಸುತ್ತಿರುವ ಭಾಷೆಗಳ ವಿಶ್ಲೇಷಣೆಗಳ ಜೊತೆಗೆ ಮನುಷ್ಯ ಭಾಷೆಗಳ ಸಾವಿನ ಬಗ್ಗೆಯೂ ಅಧ್ಯಯನಗಳು ಪ್ರಾರಂಭವಾದವು. ಒಂದು ಕಾಲದಲ್ಲಿ ಭಾಷೆಗಳ ಹುಟ್ಟಿಗೆ ಸಂಬಂಧಪಟ್ಟ ಪ್ರಶ್ನೆಗಳು ಕುತೂಹಲ ಕೆರಳಿಸುವ ಅಧ್ಯಯನಗಳಾಗಿ ಕಂಡರೆ, ಈಗಿನ ಭಾಷೆಯ ಸಾವನ್ನು ಕುರಿತ ಅಧ್ಯಯನಗಳು ಆತಂಕವನ್ನು ವ್ಯಕ್ತಪಡಿಸುವ ನಡೆಗಳಾಗಿ ಕಾಣುತ್ತಿವೆ.  ಭಾಷೆಗಳ ಸಾವಿನ ಕುರಿತು ಡೇವಿಡ್ ಕ್ರಿಸ್ಟಲ್‌ನ ಲ್ಯಾಂಗ್ವಿಜ್ ಡೆತ್‌(೨೦೦೦) ಎಂಬ ಪುಸ್ತಕ ಹೆಚ್ಚು ಪ್ರಚಲಿತವಾಗಿದೆ. ಭಾಷೆಗಳ ಅಳಿವನ್ನು ಕುರಿತ ಹೆಚ್ಚಿನ ಅಧ್ಯಯನಗಳು, ಭಾಷೆಗಳ ಸಾವನ್ನು ತಡೆಗಟ್ಟುವ (ಅಧಿಕಾರ ಕೇಂದ್ರಗಳಿಂದ ಪ್ರಾಯೋಜಿತವಾದ) ಯೋಜನೆಗಳು ಇತ್ತೀಚೆಗೆ ಬೆಳೆದುಬಂದ ವಿದ್ಯಮಾನಗಳಾಗಿವೆ. ಇಂತಹ ಬೆಳವಣಿಗೆಯ ರಾಜಕಾರಣವನ್ನೊಳಗೊಂಡಂತೆ, ಭಾಷಾ ಸಾವಿನ ಇತರ ಮಗ್ಗಲುಗಳನ್ನು ಸೂಕ್ಷ್ಮವಾಗಿ ಶೋಧಿಸುವ ಅಧ್ಯಯನವಾಗಿ ಕೆ.ವಿ.ನಾರಾಯಣ ಅವರ ಪುಸ್ತಿಕೆ ನುಡಿಗಳ ಅಳಿವು (೨೦೧೮) ಮೂಡಿಬಂದಿದೆ.

೭೭ ಪುಟಗಳನ್ನೊಳಗೊಂಡ ಈ ಚಿಕ್ಕ ಪುಸ್ತಿಕೆ ನಾನು ಇತ್ತೀಚೆಗೆ ಓದಿದ (ಇಂಗ್ಲಿಶ್ ಭಾಷಾ ಪುಸ್ತಕಗಳನ್ನೊಳಗೊಂಡಂತೆ) ಅತ್ಯುತ್ತಮ ಗ್ರಂಥಗಳಲ್ಲೊಂದು. ಇಂದಿನ ದಿನಗಳಲ್ಲಿ ಇಂತಹದೊಂದು ಆಲೋಚನೆ ಕನ್ನಡದಲ್ಲಿ ಹುಟ್ಟುತ್ತಿದೆ ಎಂಬುದು ಆಶಾದಾಯಕವೂ, ಹೆಮ್ಮೆ ಪಡುವ ಸಂಗತಿಯೂ ಆಗಿದೆ. ಹಾಗಾದರೆ ಅಂತಹ ವಿಶೇಷತೆ ಈ ಪುಸ್ತಿಕೆಯಲ್ಲಿ ಏನಿದೆ? 'ಭಾಷೆ' ಎನ್ನುವ ಪರಿಭಾಷೆಯನ್ನು ಬಿಟ್ಟು, 'ನುಡಿ' ಎನ್ನುವ ಪರಿಕಲ್ಪನೆ ಪುಸ್ತಿಕೆ ಉದ್ದಕ್ಕೂ ಬಳಸಲಾಗಿದೆ. ಜನ ಸಾಮಾನ್ಯರ

ನಡುವೆ ಬಳಕೆಯಲ್ಲಿರುವ ಜೀವಂತ ನುಡಿಯನ್ನು ಮನದಲ್ಲಿಟ್ಟುಕೊಂಡು ಅಳಿವಿನ ಬಗೆಗೆ ನಮಗಿರುವ ತಪ್ಪು ಕಲ್ಪನೆಗಳನ್ನು ಈ ಪುಸಿಕೆ ಸ್ಪಷ್ಟವಾಗಿ ವಿವರಿಸುತ್ತದೆ. ನುಡಿಗಳ  ಅಳಿವನ್ನು ಅಧ್ಯಯನ ಮಾಡುವ ಪ್ರಯತ್ನಗಳ ಹಿಂದೆ ಇರುವ ತಪ್ಪು ಗ್ರಹಿಕೆಗಳನ್ನು ತೆರೆದಿಡುತ್ತ, ನುಡಿಗಳನ್ನು ಕಾಪಿಡುವ ಜಾಗತಿಕ ಸಂಸ್ಥೆಗಳ ಹಾಗೂ ಇನ್ನಿತರ ಅಧಿಕಾರ ಕೇಂದ್ರಗಳ ರಾಜಕೀಯವನ್ನು ಇದು ಕಟು ವಿಮರ್ಶೆಗೆ ಒಳಪಡಿಸುತ್ತದೆ. ಹೀಗೆ ಮಾಡುವಾಗ ತಾತ್ವಿಕತೆಯನ್ನೇ ತನ್ನ ಬೌದ್ದಿಕ ಹತಾರವಾಗಿ, ವಿವೇಕ ಮತ್ತು ಆಳವಾದ ಅಲೋಚನಾ ತಂತ್ರಗಳನ್ನೇ , ತನ್ನ ತರ್ಕವಾಗಿ ಈ ಪುಸ್ತಿಕೆ ಬಳಸಿಕೊಂಡಿದೆ.

ಭಾಷೆಗಳ ಬಗ್ಗೆ ವಿವಿಧ ಪರಂಪರೆಗಳಲ್ಲಿ ಮೂಡಿಬಂದ ವಿಚಾರಗಳ ಸಾರಾಂಶಗಳನ್ನು ಮುಂದಿಡುವ ಪುಸ್ತಕಗಳ ಮಧ್ಯೆ ಈ ಪುಸ್ತಕವು ಓದುಗರನ್ನು ಹೊಸ ಆಲೋಚನೆಗೆ ಪ್ರೇರೇಪಿಸುತ್ತದೆ. ಇದು ಪ್ರಾರಂಭವಾಗುವುದೆ ಒಂದು ವಾಗ್ವಾದವನ್ನು ಬಯಸುವ' (೦೧) ಬೌದ್ದಿಕ ಮಹತ್ವಾಕಾಂಕ್ಷೆಯೊಂದಿಗೆ. ಈ ಮಹದಾಸೆ ಕೇವಲ ಪುಸ್ತಿಕೆಯಲ್ಲಿ ಮಂಡಿಸಿದ ವಿಚಾರಗಳನ್ನಷ್ಟೇ ಅಲ್ಲದೆ, ಅದರಾಚೆ ಇಲ್ಲಿಯ ವಿಚಾರಗಳು ಸೃಷ್ಟಿಸಬಹುದಾದ ವಾಗ್ವಾದಗಳ ಬಗ್ಗೆ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ಲೇಖಕರ ಈ ಹೆಬ್ಬಯಕೆಯನ್ನು ಅವರ ವಿಚಾರಗಳು ಹೆಚ್ಚು ಅರ್ಥಪೂರ್ಣಗೊಳಿಸಿವೆ; ಅವರು ಮಂಡಿಸುವ ವಾದಗಳಿಗೆ ಹೆಚ್ಚಿನ ಕಸುವೂ ಇದೆ.

ಹಾಗಾದರೆ ಅಂತಹ ವಿಚಾರಗಳು ಈ ಪುಸ್ತಿಕೆಯಲ್ಲಿ ಏನೇನಿವೆ? ಮನುಕುಲದ ನುಡಿಗಳನ್ನು ಕಾಪಿಡುವ ಕಾಳಜಿಯನ್ನು ಅಲ್ಲಗಳೆಯದೆ, ನುಡಿಗಳ - ಅಳಿವನ್ನು ಒಟ್ಟು ಮಾನವ ವ್ಯಾಪಾರದಿಂದ ಬೇರೆಯಾಗಿಸಿ ನೋಡುವುದನ್ನು - ಈ ಲೇಖಕರು ಒಪ್ಪುವುದಿಲ್ಲ. ಅಂದರೆ ಜನಪದರನ್ನು ಕಾಳಜಿ ಮಾಡದ - ಜಾನಪದವನ್ನು ಉಳಿಸಲು ಸಾಧ್ಯವಿಲ್ಲ ಎನ್ನುವುದು ಇವರ ವಾದ ಒಪ್ಪಬೇಕಾದುದೇ. ಆದರೆ ನಮ್ಮ ಹೆಚ್ಚಿನ ಅಧ್ಯಯನಗಳು ಹಾಗೂ ಯೋಜನೆಗಳು ಈ ನಿಟ್ಟಿನಲ್ಲಿ ಅಲೋಚನೆ ಮಾಡುವುದು ವಿರಳ. ಕೆವಿಎನ್ ಪ್ರಕಾರ ಮನುಷ್ಯರ ನುಡಿಗಳು ಅಳಿಯಬಹುದು, ಮಾರ್ಪಾಡುಗೊಳ್ಳಲೂಬಹುದು; ಆದರೆ ಮನುಷ್ಯರಿಗಿರುವ 'ನುಡಿ ಕಸುವು' (ಯಾವ ಭಾಷೆಯನ್ನಾದರೂ ಬಳಸುವ ಮನುಷ್ಯರ ಸಹಜ ಶಕ್ತಿ) ಅಳಿಯುವುದಿಲ್ಲ. ಈ ಒಳನೋಟದ ಭಾಗವಾಗಿ 'ಕನ್ನಡ ಅಳಿಯುತ್ತಿರುವ ನುಡಿ' ಎಂದು ದಿಗಿಲುಪಡಲು ಯಾವ ಕಾರಣವನ್ನು ಕಾಣದ ಇವರು ಪುಸ್ತಿಕೆಯ ಪ್ರಾರಂಭದಲ್ಲಿಯೇ ಇದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಚರ್ಚೆ ಬಹಳ ಕುತೂಹಲಕರವಾಗಿದೆ.

ನುಡಿಗಳ ಅಳಿವಿಗೆ ಸಂಬಂಧಪಟ್ಟಂತಹ ವಿಚಾರಗಳಾದ 'ಆತಂಕ', 'ಹಿನ್ನೆಲೆ', 'ಲೋಕ ದೃಷ್ಟಿ', 'ಬಹುತ್ವ', 'ನುಡಿ ಸಮೂದಾಯಗಳು', 'ನುಡಿ ಮೂಲಕ ಸಮೂದಾಯಗಳ ತಿಳಿವಳಿಕೆ', 'ನುಡಿ ಅಳಿವಿನ ಕಾರಣಗಳು', 'ನುಡಿ ಮತ್ತು ಸಾಂಸ್ಕತಿಕ ನೆನಪು', 'ನುಡಿಗಳ ಅಳಿವನ್ನು ತಡೆಯುವ ಕಾರ್ಯಯೋಜನೆಗಳ ತಾತ್ವಿಕತೆ', 'ಯುನೆಸ್ಕೋದ ಪ್ರಯತ್ನಗಳು' ಇತ್ಯಾದಿಗಳನ್ನು ಬಹಳ ತಾರ್ಕಿಕವಾಗಿ ಈ ಪುಸ್ತಿಕೆ ವಿವರಿಸುತ್ತದೆ. ಈ ಸಂಗತಿಗಳ ಮಧ್ಯ ನುಡಿ ಮತ್ತು ತಿಳಿವಳಿಕೆಗಳ ನಂಟನ್ನು ಕುರಿತಂತೆ ಭಾರತೀಯ ಚಿಂತನಾಕ್ರಮವನ್ನು ಎರಡು ಪುಟಗಳಲ್ಲಿ ಚರ್ಚಿಸಲಾಗಿದೆ. 'ಶಬ್ದ ಪ್ರಮಾಣ' ಎಂಬ ಪರಿಕಲ್ಪನೆ ಇಲ್ಲಿ ಉಲ್ಲೇಖಿತವಾಗಿಲ್ಲ ಎನ್ನುವುದನ್ನು ಬಿಟ್ಟರೆ, ಈ ಭಾಗವು ಭಾರತೀಯ ಚಿಂತನಾಕ್ರಮವನ್ನು ಉಪಯೋಗಿಸಿ ನುಡಿಗಳ ಅಳಿವನ್ನು ಹೇಗೆ ಶೋಧಿಸಬಹುದೆಂಬ ಸಾಧ್ಯತೆಯನ್ನು ತೋರಿಸುತ್ತದೆ. ನಂತರ ನುಡಿಯ ಹುಟ್ಟು, ಬೆಳವಣಿಗೆ ಹಾಗೂ ಭಾಷಾನಿರ್ಧಾರತೆ (ಲಿಗ್ವಿಸ್ಟಿಕ್ ಡಿಟರಿನಿಜಮ್) ಕುರಿತು ಗಹನವಾದ ಚಿಂತನೆ ಇದೆ. ಸಪೀರ್-ವೂರ್ಪ್ ಪ್ರಮೇಯವನ್ನು ಆಳವಾಗಿ ಅರ್ಥೈಸಿಕೊಂಡ ಕೆವಿಎನ್ ಒಂದು ದಿಟ್ಟ ನಿಲುವನ್ನು ತಾಳುತ್ತಾರೆ. ಅದೆಂದರೆ ಭಾಷೆ ನಮ್ಮ ಲೋಕಗ್ರಹಿಕೆಯನ್ನು ನಿರ್ಧರಿಸುವುದಿಲ್ಲ, ಮತ್ತು ಭಾಷೆ ಬದಲಾದರೆ ಲೋಕದೃಷ್ಟಿ, ತಿಳಿವಳಿಕೆಗಳು ಬದಲಾಗುವುದಿಲ್ಲ ಎನ್ನುವ ವಾದ.

ವೈಯಕ್ತಿಕವಾಗಿ ಈ ಪುಸ್ತಕ 'ಭಾಷೆ', 'ನುಡಿಗಳ ಅಳಿವು' ಕುರಿತು ನನ್ನ ಅರಿವನ್ನು ಹಿಗ್ಗಿಸಿದೆ. ಕೆವಿಎನ್ ಅವರ ಬರವಣಿಗೆ ಓದುಗರೊಂದಿಗೆ ಸಂವಾದವನ್ನು ನಡೆಸುತ್ತದೆ. ಅವರ ನಿರೂಪಣೆ, ಆಲೋಚನಾ ಕ್ರಮಗಳು ಓದುಗರಿಗೆ ಹಿಡಿಸದೆ ಇರಲಾರವು. ಹಾಗೆಯೇ ಕಲಿಸದೇ ಇರಲಾರವು. ಗಹನವಾದ ವಿಚಾರವುಳ್ಳ ಈ ಪುಸ್ತಿಕೆಯನ್ನು ಅಂದವಾಗಿ ಮುದ್ರಿಸಿದ ಅಹರ್ನಿಶಿ ಪ್ರಕಾಶನಕ್ಕೂ ಚಪ್ಪಾಳೆ!

-ಡಾ. ಎನ್.ಎಸ್. ಗುಂಡೂರ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜನವರಿ 2019)

 

Related Books