ಅಷ್ಟಾವರಣಗಳಲ್ಲಿ ಮಂತ್ರ

Date: 13-12-2022

Location: ಬೆಂಗಳೂರು


''ಬಸವಣ್ಣನಿಗೆ “ಓಂ ನಮಃ ಶಿವಾಯ” ಎಂಬುದೇ ಮಂತ್ರವಾಗಿದೆ ಮತ್ತು ತಂತ್ರವಾಗಿದೆ. ಬಸವಣ್ಣನವರ ದೃಷ್ಟಿಯಲ್ಲಿ ಮಂತ್ರವೆಂದರೆ ಅದು “ಸರ್ವಜನವಶ್ಯ” ವಾಗಿದೆ. ಸರ್ವಜನರನ್ನು ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಮನಶುದ್ಧೀಕರಣ ಬಹಳ ಮುಖ್ಯ. ಮಂತ್ರ ಇಂತಹ ಮನಶುದ್ಧೀಕರಣವನ್ನು ಮಾಡುವದರಿಂದ ಅಷ್ಟಾವರಣಗಳಲ್ಲಿ ಅದಕ್ಕೆ ಮಹತ್ವದ ಸ್ಥಾನವಿದೆ'' ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಮಂತ್ರ’ದ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ.

ಅಷ್ಟಾವರಣಗಳಲ್ಲಿ ಮಂತ್ರಕ್ಕೆ ಮಹತ್ವದ ಸ್ಥಾನವಿದೆ. ಆದರೆ ಭಾರತೀಯ ಆಧ್ಯಾತ್ಮ ಕ್ಷೇತ್ರದಲ್ಲಿ ಮತ್ತು ಶಕ್ತಿದೇವತೆಗಳ ಅನುಷ್ಠಾನ ಕಾರ್ಯದಲ್ಲಿ ಮಾಟ-ಮಂತ್ರದಂತಹ ಪದಗಳು ಹೆಚ್ಚು ಜನಪ್ರಿಯವಾಗಿವೆ. ನಾದ-ಬಿಂದು-ಕಲೆಗಳ ಸಂಕೇತವಾಗಿ ಅ,ಉ,ಮ ಅಕ್ಷರಗಳಿಂದ ಹುಟ್ಟಿದ ಓಂಕಾರವು ಪ್ರಾರಂಭದ ಬಹುಮಹತ್ವದ ಮಂತ್ರವಾಗಿದೆ. ಈ ಮಂತ್ರದ ಪ್ರಸ್ತಾಪ ಭಾರತದ ಎಲ್ಲ ಧರ್ಮಗಳಲ್ಲಿಯೂ ಇದೆ. ಹೀಗೆ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದ ಓಂಕಾರದ ಮಂತ್ರವನ್ನು ಬಸವಾದಿ ಶರಣರು “ಓಂ ನಮಃ ಶಿವಾಯ” ಎಂಬ ಷಡಕ್ಷರ ಮಂತ್ರವನ್ನಾಗಿ ಸ್ವೀಕರಿಸಿದರು. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ಮೇಲೆ ಅವರ ಅನುಯಾಯಿಗಳು, ಭಕ್ತರು “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ದ್ವಾದಶ ಅಕ್ಷರಗಳ ಮಂತ್ರವನ್ನು ಬಳಕೆಯಲ್ಲಿ ತಂದರು. “ಓಂ ಶ್ರೀ ಗುರು ಬಸವಲಿಂಗಾಯ ನಮಃ” ಎಂಬ ದ್ವಾದಶಾಕ್ಷರಗಳ ಮಂತ್ರವೇ ಲಿಂಗಾಯತ ಧರ್ಮದ ಪ್ರಮುಖ ಮಂತ್ರವಾಗಿದೆ.

ಆದರೆ ಶರಣರ ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ, ಇಂತಹ ಅಕ್ಷರಗಳ ಮಂತ್ರಗಳಿಗಿಂತ, ಅಂತರಂಗದ ಶುದ್ಧೀಕರಣವೇ ಮುಖ್ಯವೆನಿಸುತ್ತದೆ. ಮಂತ್ರದ ಮೂಲ ಉದ್ದೇಶ ಮನಶುದ್ಧಿಯಾಗಿದೆ. ಮನಸ್ಸನ್ನು ಶುದ್ಧೀಕರಿಸಿಕೊಳ್ಳದೆ, ಯಾವುದೇ ಮಂತ್ರವನ್ನು, ಎಷ್ಟೇ ಸಲ ಸ್ತುತಿಸಿದರೂ ಪ್ರಯೋಜನವಾಗಲಾರದು. ಮನಸ್ಸು ಅತ್ಯಂತ ಚಂಚಲವಾದುದಾಗಿದೆ. ಈ ಚಂಚಲ ಮನಸ್ಸನ್ನು ಕ್ಷಣಕ್ಷಣಕ್ಕೂ ಶುದ್ಧೀಕರಿಸಬೇಕಾಗುತ್ತದೆ. ಇಂತಹ ಶುದ್ಧೀಕರಣದ ಪ್ರಕ್ರಿಯೆಯೇ ಮಂತ್ರವಾಗಿದೆ. ಮಂತ್ರದ ಈ ಮಹದುದ್ದೇಶವನ್ನು ಲಿಂಗಾಯತ ಧರ್ಮದಲ್ಲಿ ಮಾತ್ರ ನೋಡಬಹುದಾಗಿದೆ. ಉಳಿದ ಧರ್ಮಗಳಲ್ಲಿ ಮಂತ್ರ ಎಂಬ ಪದ ಬೇರೆಬೇರೆ ಕಾರಣಗಳಿಗಾಗಿ ಹುಟ್ಟಿಕೊಂಡಿದೆ.

ಬಸವಣ್ಣನಿಗೆ “ಓಂ ನಮಃ ಶಿವಾಯ” ಎಂಬುದೇ ಮಂತ್ರವಾಗಿದೆ ಮತ್ತು ತಂತ್ರವಾಗಿದೆ. ಬಸವಣ್ಣನವರ ದೃಷ್ಟಿಯಲ್ಲಿ ಮಂತ್ರವೆಂದರೆ ಅದು “ಸರ್ವಜನವಶ್ಯ” ವಾಗಿದೆ. ಸರ್ವಜನರನ್ನು ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಮನಶುದ್ಧೀಕರಣ ಬಹಳ ಮುಖ್ಯ. ಮಂತ್ರ ಇಂತಹ ಮನಶುದ್ಧೀಕರಣವನ್ನು ಮಾಡುವದರಿಂದ ಅಷ್ಟಾವರಣಗಳಲ್ಲಿ ಅದಕ್ಕೆ ಮಹತ್ವದ ಸ್ಥಾನವಿದೆ.

“ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ವೇದ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ಶಾಸ್ತ್ರ,
ಓಂ ನಮಃ ಶಿವಾಯ
ಎಂಬ ಮಂತ್ರವ ಮೀರಲಮ್ಮದೆ ನಿಂದವು ತರ್ಕ,
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ,
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ,
ಕೂಡಲಸಂಗಮದೇವ ಶ್ವಪಚನ ಮರೆದಡೆ,
ಜಾತಿಭೇದವ ಮಾಡಲಮ್ಮವು”

-ಬಸವಣ್ಣ (ಸ.ವ.ಸಂ.1, ವ:81)

ಬಸವಣ್ಣನವರ ಈ ವಚನದಲ್ಲಿ “ಓಂ ನಮಃ ಶಿವಾಯ” ಎಂಬ ಷಡಕ್ಷರ ಮಂತ್ರವು ಮೂರು ಸಲ ಬಂದಿದೆ. ವೇದ-ಶಾಸ್ತ್ರ-ತರ್ಕಗಳು ಈ ಮಂತ್ರದ ಮಹಿಮೆಯನ್ನು ಅರಿಯದೇ ಹೋದವು. ಹೀಗಾಗಿ ಅವು ಅಲ್ಲಿಯೇ ತಟಸ್ಥವಾದವು ಎಂದು ಮೊದಲರ್ಧದ ವಚನದಲ್ಲಿ ಹೇಳಿದರೆ, ವಚನದ ಉತ್ತರಾರ್ಧದಲ್ಲಿ ಬಹುಮಹತ್ವದ ವಿಷಯವನ್ನು ಬಸವಣ್ಣ ಪ್ರಸ್ತಾಪಿಸಿದ್ದಾರೆ. ಶಿವನ ಮೂಲನೆಲೆಯನರಿಯದೆ ಮಂತ್ರ-ತಂತ್ರಗಳು

ವ್ಯರ್ಥವಾದಾಗ ಇಡೀ ಲೋಕವೇ ಇದಕ್ಕಾಗಿ ಚಿಂತಿಸುತ್ತಿದ್ದಾಗ, ಬಸವಣ್ಣ ಕೊನೆಯಲ್ಲಿ ಇದಕ್ಕೆ ಪರಿಹಾರ ಸೂಚಿಸಿದ್ದಾರೆ.

“ಕೂಡಲಸಂಗಮದೇವ ಶ್ವಪಚನ ಮರೆದಡೆ.....” ಎನ್ನುವ ನುಡಿ ತುಂಬ ಮುಖ್ಯವಾಗಿದೆ. ಅಂದರೆ ಇಲ್ಲಿ ಬಸವಣ್ಣ ಹೇಳುವ ಮಂತ್ರ-ತಂತ್ರಗಳೆಲ್ಲ ಶ್ವಪಚ (ಶೂದ್ರ)ನೊಂದಿಗೆ ತಳುಕು ಹಾಕಿಕೊಂಡಿವೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಕೊನೆಯ ಸ್ಥಾನದಲ್ಲಿರುವ ಶ್ವಪಚನನ್ನು ಮರೆತರೆ ನಿಮ್ಮ ಮಂತ್ರ-ತಂತ್ರಗಳಿಗೆ ಬೆಲೆಯಿಲ್ಲವೆಂದು ಬಸವಣ್ಣ ತಿಳಿಸಿದ್ದಾರೆ. ಹೀಗಾಗಿ ಇಲ್ಲಿ ಮಂತ್ರದ ವ್ಯಾಖ್ಯೆಗೂ-ಶ್ವಪಚನಿಗೂ-ಚಾತುರ್ವರ್ಣ ವ್ಯವಸ್ಥೆಗೂ ನೇರವಾದ ಸಂಬಂಧವನ್ನು ಕಲ್ಪಿಸಿದ್ದಾರೆ. ಮನಶುದ್ಧೀಕರಿಸಿಕೊಂಡು ಶ್ವಪಚÀನೊಂದಿಗೆ ಸೌಹಾರ್ದಯುತವಾಗಿ ಬಾಳುವುದೇ ಇಲ್ಲಿ ನಿಜವಾದ ಮಂತ್ರದ ವ್ಯಾಖ್ಯೆಯಾಗಿದೆ.

“ಕರಿಯಂಜೂದು ಅಂಕುಶಕ್ಕಯ್ಯಾ,
ಗಿರಿಯಂಜೂದು ಕುಲಿಶಕ್ಕಯ್ಯಾ,
ತಮಂಧವಂಜೂದು ಜ್ಯೋತಿಗಯ್ಯಾ,
ಕಾನನವಂಜೂದು ಬೇಗೆಗಯ್ಯಾ,
ಪಂಚಮಹಾಪಾತಕವಂಜೂದು
ಕೂಡಲಸಂಗನ ನಾಮಕ್ಕಯ್ಯಾ.”

-ಬಸವಣ್ಣ (ಸ.ವ.ಸಂ.1, ವ:75)

ಇದು ಬಸವಣ್ಣನವರ ಜನಪ್ರಿಯ ವಚನವಾಗಿದೆ. ಆನೆ-ಅಂಕುಶಕ್ಕಂಜುತ್ತದೆ, ಪರ್ವತ-ಸಿಡಿಲಿಗಂಜುತ್ತದೆ, ಕತ್ತಲು-ಬೆಳಕಿಗಂಜುತ್ತದೆ, ಕಾನನ-ಬೆಂಕಿಗಂಜುತ್ತದೆ. ಅದೇರೀತಿ ಪಂಚಮಹಾ ಪಾತಕಗಳು ಕೂಡಲಸಂಗನ ನಾಮಕ್ಕಂಜುತ್ತವೆಂದು ಇಲ್ಲಿ ಹೇಳಲಾಗಿದೆ. ಕೂಡಲಸಂಗನ ನಾಮವೇ ನಿಜವಾದ ಮಂತ್ರವಾಗಿದೆ. ಇಲ್ಲಿಯ ಕೂಡಲಸಂಗ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮ ಮಾತ್ರವಾಗಿರದೆ, ತನು-ಮನ ಕೂಡಿಕೊಳ್ಳುವ, ಆತ್ಮ-ಪರಮಾತ್ಮ ಒಂದಾಗುವ, ವ್ಯಕ್ತಿ-ಸಮುದಾಯ ಬೆರೆತು ಬೇರಾಗದಂತಹ ಸಂಗಮವಾಗಿದೆ. ಬಸವಣ್ಣನವರ ಪ್ರಕಾರ ಇಂತಹ ಕೂಡಲಸಂಗನ ನಾಮವೇ ನಿಜವಾದ ಮಂತ್ರವಾಗಿದೆ. ಈ ಮಂತ್ರ ಕೇವಲ ಉಚ್ಛಾರದ ಮಂತ್ರವಾಗಿರದೆ ಪರಸ್ಪರ ಕೂಡಿಕೊಳ್ಳುವ ಸಂಗಮಗೊಳ್ಳುವ ಮಂತ್ರವಾಗಿದೆ.

“ ‘ಓಂ ನಮಃ ಶಿವಾಯ’ಎಂಬ ದೇವನಿರಲು
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರೆ,
ಶರೀರ ಶರೀರ ರೂಹಿಸಿದ ರೂಹಿಂಗೆ ಮಾಯದ ಬಲೆಯಲ್ಲಿ ಶಿಲುಕಿ
ಅಂಗಸಂಗಿಗಳೆಲ್ಲರು ಮಹಾಘನವನರಿಯದೆ ಹೋದಿರೆ.....”

-ಅಲ್ಲಮಪ್ರಭು (ಸ.ವ.ಸಂ.2, ವ:1008)

ಅಲ್ಲಮಪ್ರಭು ಈ ವಚನದಲ್ಲಿ “ಓ ನಮಃ ಶಿವಾಯ” ಎಂಬ ಮಂತ್ರವನ್ನು ದೇವನೆಂದು ಕರೆದಿದ್ದಾರೆ. “ಮಾಯಾ ಬಲೆಗೆ ಸಿಕ್ಕು ಮಹಾಘನವನರಿಯದೆ ಹೋದಿರಾ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮಾಯದ ಬಲೆಯಿಂದ ಪಾರಾಗಬೆಕಾದರೆ ಮನಶುದ್ಧೀಕರಣದ ಅಗತ್ಯವಿದೆಯೆಂದು ತಿಳಿಸದ್ದಾರೆ.

“ಮಂತ್ರವೆ ಅವಯವಂಗಳಾಗುಳ್ಳ ಪರಶಿವಂಗೆನಾದವೇ ಕಿರೀಟ
‘ಅ’ಕಾರ ‘ಉ’ಕಾರವೆ ಬಿಂದುವಕ್ತ್ರ,
ಪರಶಿವ ಸ್ವರೂಪವಾದ ‘ಹ್ರ’ ಕಾರವೆ ದೇಹ
‘ಹ್ರೀಂ’ ಕಾರವೆ ಶಕ್ತಿ, ಹಂಸದ್ಬಯಾ ಶೃಂಗವೇ ಭುಜ,
‘ವ’ಕಾರವೆ-ಕಳಾಸ್ವರೂಪವಾದ ಅವನಿಯೆ ಪಾದಾದ್ಬಯ
ಇಂತೀ ಮಂತ್ರ ಮೂರ್ತಿಯಾದ ಪರಶಿವನು
ಮಂತ್ರಾರ್ಥಿಗಳಿಗೆ ಮಂತ್ರಸಿದ್ಧಿಯ ಕೂಡುವ ದೇವ
ನಮ್ಮ ಕೂಡಲಚೆನ್ನಸಂಗಯ್ಯ, ಬೇರಿಲ್ಲ”

-ಚೆನ್ನಬಸವಣ್ಣ (ಸ.ವ.ಸಂ.3, ವ:1502)

ಈ ವಚನದಲ್ಲಿ ಚೆನ್ನಬಸವಣ್ಣನವರು ಮಂತ್ರಗಳೇ ಪರಶಿವನ ಅವಯವಗಳಾಗಿವೆಯೆಂದು ಹೇಳಿದ್ದಾರೆ. ಆ ಪರಶಿವ ಬೇರಾರೂ ಆಗಿರದೆ ಕೂಡಲಚೆನ್ನಸಂಗಯ್ಯನೇ ಆಗಿದ್ದಾನೆಂದು ಹೇಳಿರುವಲ್ಲಿ ಆತ್ಮ-ಪರಮಾತ್ಮಗಳನ್ನು ಕೂಡಿಸುವ ಶಕ್ತಿ ಮಂತ್ರಕ್ಕಿದೆಯೆಂಬುದು ಸ್ಪಷ್ಟವಾಗುತ್ತದೆ.

“ಮಂತ್ರಪ ಜಪಿಸಿ ಫಲವೇನಯ್ಯಾ, ಮಂತ್ರಮೂರ್ತಿ ಕಾಣದನ್ನಕ್ಕ?
ಸುಂತ್ರ ಧರಿಸಿ ಫಲವೇನಯ್ಯಾ ಅಂತರ ರೋಗ ಪರಿಹಾರವಾಗದನ್ನಕ್ಕ?
ತಂತ್ರವನೋದಿ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ?.....”

-ಸಿದ್ಧರಾಮ (ಸ.ವ.ಸಂ4, ವ:1388)

ಈ ವಚನದಲ್ಲಿ ಸಿದ್ಧರಾಮನು ಜಪ-ತಪ ಮಾಡುವವರನ್ನು ವಿಡಂಬಿಸಿದ್ದಾರೆ. ಜಪ-ತಪ ಮಾಡಿ ಮಂತ್ರ ಪಠಣ ಮಾಡುವುದು ಬೇರೆ ಧರ್ಮಗಳಲ್ಲಿರುವ ಆಚರಣೆಯಾದರೆ, ಮಂತ್ರ ಮೂರ್ತಿಯಾದ ಪರಮಾತ್ಮನನ್ನು ಆತ್ಮನ ಮೂಲಕವೇ ಕಂಡುಕೊಳ್ಳುವುದು ಲಿಂಗಾಯತ ಧರ್ಮದ ಮೂಲ ತತ್ವವಾಗಿದೆ. ಹೀಗೆ ಆತ್ಮ ಪರಮಾತ್ಮನಾಗಲಿಕ್ಕೆ ಈ ಅಷ್ಟಾವರಣಗಳ ಅಗತ್ಯವಿದೆಯೆಂದು ಶರಣರು ಹೇಳಿದ್ದಾರೆ. ಲಿಂಗ-ಜಂಗಮಗಳನ್ನು ಸರಿಯಾಗಿ ತಿಳಿದುಕೊಳ್ಳದವ ಶರಣನಾಗಲಾರನೆಂದು ಸಿದ್ಧರಾಮ ಇದೇ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಮಂತ್ರವು ಮನಸ್ಸನ್ನು ಒಂದು ಮಾಡುವ ಶಕ್ತಿಯನ್ನು ಹೊಂದಿದೆಯೆಂದು ಅವರುಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ.

“ಅರ್ಚನೆ ಪೂಜನೆ ನೇಮವಲ್ಲ;
ಮಂತ್ರ-ತಂತ್ರ ನೇಮವಲ್ಲ;
ದೂಪ ದೀಪಾರತಿ ನೇಮವಲ್ಲ.....”

-ಸತ್ಯಕ್ಕ (ಸ.ವ.ಸಂ.5, ವ:1207)

ಮಂತ್ರ-ತಂತ್ರ ನೇಮವಲ್ಲವೆಂಬುದನ್ನು ಹೇಳಿರುವ ಸತ್ಯಕ್ಕ ಅರ್ಚನೆ-ಪೂಜೆ-ದೂಪ-ದೀಪಾರತಿಗಳಿಂದ ದೇವರು ಒಲಿಯಲಾರನೆಂದು ಸ್ಪಷ್ಟಪಡಿಸಿದ್ದಾರೆ. ಪರಧನ ಪರಸ್ತ್ರೀ ಪರದೈವ ಗಳಿಗೆರಗದಿಪ್ಪುದೇ ನೇಮವೆಂದು ತಿಳಿಸಿ ಹೇಳಿದ್ದಾರೆ. ಅನೇಕ ವಚನಕಾರರು ಮಂತ್ರದ ಒಳ ಅರ್ಥಗಳನ್ನು ತಮ್ಮ ವಚನಗಳಲ್ಲಿ ಬಿಡಿಸಿಟ್ಟಿದ್ದಾರೆ. ಹೀಗಾಗಿ ಉಳಿದ ಧರ್ಮಗಳಲ್ಲಿ ಬಳಕೆಯಾಗಿರುವ “ಮಂತ್ರ” ಪದಕ್ಕೂ, ಲಿಂಗಾಯತ ಧರ್ಮದಲ್ಲಿ ಬರುವ “ಮಂತ್ರ” ಪದಕ್ಕೂ ಬಹಳ ವ್ಯತ್ಯಾಸವಿದೆ.

- ಬಸವರಾಜ ಸಬರದ

ಈ ಅಂಕಣದ ಹಿಂದಿನ ಬರಹಗಳು:
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...