ಷಟ್‍ಸ್ಥಲಗಳ ರೂಪ-ಸ್ವರೂಪ

Date: 29-05-2023

Location: ಬೆಂಗಳೂರು


'ಷಟ್‍ಸ್ಥಲಗಳನ್ನು ಕುರಿತು ಬಿಡಿಬಿಡಿಯಾಗಿ ವಿಶ್ಲೇಷಿಸಿರುವ ಶರಣರು, ಷಟ್‍ಸ್ಥಲದ ಪರಿಣಾಮವನ್ನು ಇಡಿಯಾಗಿಯೂ ಕಟ್ಟಿಕೊಟ್ಟಿದ್ದಾರೆ. ಭಕ್ತಸ್ಥಲದಿಂದ ಹಿಡಿದು ಐಕ್ಯಸ್ಥಲದವರೆಗೆ ಸಾಧಕನ ಸಾಧನೆ ಎಂತಹದೆಂಬುದನ್ನು ಹೇಳುತ್ತಲೇ, ಷಟ್‍ಸ್ಥಲದ ಮಹತ್ವವನ್ನು ತಿಳಿಸಿದ್ದಾರೆ' ಎನ್ನುತ್ತಾರೆ ಹಿರಿಯ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಷಟ್‍ಸ್ಥಲಗಳ ರೂಪ-ಸ್ವರೂಪಗಳ ಕುರಿತು ವಿಶ್ಲೇಷಿಸಿದ್ದಾರೆ.

ಷಟ್‍ಸ್ಥಲಗಳು ವಿಶ್ವಾಸದಿಂದ ಮಾತ್ರ ಸಾಧ್ಯವಾಗಿವೆಯೆಂಬುದನ್ನರಿತ ಬಾಹೂರ ಬೊಮ್ಮಣ್ಣನವರು, ವಿಶ್ವಾಸವಿಲ್ಲದವರಿಗೆ ಯಾವಸ್ಥಲವೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕಣ್ಣುಗಳ ಸೂತಕ ಹಿಂಗದೆ ಭಕ್ತನಾಗಲಾರ, ಕಾಯದ ಸೂತಕ ಹಿಂಗದೆ ಮಾಹೇಶ್ವರನಾಗಲಾರ, ಮನದ ಸೂತಕ ಹಿಂಗದೆ ಪ್ರಸಾದಿಯಾಗಲಾರ ಜ್ಞಾನದ ಸೂತಕ ಹಿಂಗದೆ ಪ್ರಾಣಲಿಂಗಿಯಾಗಲಾರ, ಭ್ರಾಂತು ಹಿಂಗದೆ ಶರಣನಾಗಲಾರ-ಐಕ್ಯನಾಗಲಾರನೆಂದು ಮನುಮುನಿ ಗುಮ್ಮಟದೇವರು ಹೇಳಿದ್ದಾರೆ. ಸಮರಸ ಸಂಗದಲ್ಲಿ ಲೀಯವಾದ ಸುಖವು, ಐಕ್ಯಸ್ಥಲದಲ್ಲಿ ಲೀಯವಾಗಿದೆಯೆಂದು ಮರುಳಶಂಕರ ದೇವರು ತಿಳಿಸಿದ್ದಾರೆ.

ಭಕ್ತ-ಮಹೇಶ್ವರ-ಪ್ರಸಾದಿ ಈ ಮೂರು ಭಕ್ತ ನಂಗವಾದರೆ, ಪ್ರಾಣಲಿಂಗಿ-ಶರಣ-ಐಕ್ಯ ಈ ಮೂರು ಜಂಗಮದಂಗವೆಂದು ಹೇಳಿರುವ ಮೋಳಿಗೆ ಮಾರಯ್ಯನವರು, ಐಕ್ಯನಾದಲ್ಲಿ ಪರಶಿವನೆಂಬ ಪ್ರಮಾಣು ನಷ್ಟವಾಗಿರಬೇಕೆಂದು ತಿಳಿಸಿದ್ದಾರೆ.

“ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು
ಆ ಅರಿವು ಐಕ್ಯವಾದಲ್ಲಿಯೆ ಗುರುವ ಭಾವಿಸಲಿಲ್ಲ
ಆ ಗುರು ಐಕ್ಯವಾದಲ್ಲಿಯೆ ಲಿಂಗವನರಿದುದು
ಆ ಲಿಂಗ ಐಕ್ಯವಾದಲ್ಲಿಯೆ ಜಂಗಮವ ಮರೆದುದು
ಆ ಜಂಗಮ ಐಕ್ಯವಾದಲ್ಲಿಯೆ ತ್ರಿವಿಧವ ಮರೆದುದು....”
-ಮೋಳಿಗೆ ಮಾರಯ್ಯ(ಸ.ವ.ಸಂ.8,ವ:1854)

ಈ ವಚನದಲ್ಲಿ ಮೋಳಿಗೆಮಾರಯ್ಯನವರು, ಗುರು-ಲಿಂಗ, ಜಂಗಮರು ಐಕ್ಯರಾದಾಗ ಏನೇನಾಗುತ್ತದೆಂಬುದನ್ನು ವಿವಿರಿಸಿದ್ದಾರೆ. ಅರಿವು-ಮರೆವುಗಳು ಹೇಗೆ ತದ್ವಿರುದ್ಧವೊ ಹಾಗೆ ಭಕ್ತ-ಭವ ತದ್ವಿರುದ್ಧವಾಗಿವೆ. ಆದರೆ ಭವಿ ತನ್ನರಿವನ್ನು ಜಾಗೃತಗೊಳಿಸಿಕೊಂಡು ಭಕ್ತನಾಗಲು ಸಾಧ್ಯವಿದೆ, ಆ ಭಕ್ತ ಐಕ್ಯಸ್ಥಲ ತಲುಪಬಹುದೆಂಬುದನ್ನು ಇಲ್ಲಿ ಹೇಳಲಾಗಿದೆ.

ಭಕ್ತ-ಮಾಹೇಶ್ವರ-ಪ್ರಸಾದಿ ಇವು ಮೂರು ಭೃತ್ಯಭಾವ, ಪ್ರಾಣಲಿಂಗಿ-ಶರಣ-ಐಕ್ಯ ಇವು ಮೂರು ಕರ್ತಭಾವವೆಂದು ವಚನಭಂಡಾರಿ ಶಾಂತರಸರು ಹೇಳಿದರೆ, ಬಯಕೆವಂತರೆಲ್ಲ ಐಕ್ಯವಂತರಹರೆ? ಎಂದು ಸಕಲೇಶ ಮಾದರಸರು ಪ್ರಶ್ನಿಸಿದ್ದಾರೆ ಅಂಗ ಲಿಂಗವೆಂದರಿತಂಗೆ ಅಂಗದಲೆಐಕ್ಯ, ಕಂಗಳು ಲಿಂಗವೆಂದರಿದಾತಂಗೆ ಕಂಗಳಲೆ ಐಕ್ಯವೆಂದು ಸಂಗಮೇಶ್ವರ ಅಪ್ಪಣ್ಣನವರು ಹೇಳಿದರೆ, ಐಕ್ಯಸ್ಥಲವೆಲ್ಲರಿಗೂ ಇಲ್ಲವೆಂದು ಹಡಪದಪ್ಪಣ್ಣನವರು ತಿಳಿಸಿದ್ದಾರೆ.

‘ಎಲೆದೇವಾ ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ’ಎಂದು ಕೇಳಿಕೊಂಡಿರುವ ಅಕ್ಕಮಹಾದೇವಿ, ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ ಎಂದು ತಿಳಿಸಿದ್ದಾರೆ. ‘ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ’ ಎಂದು ತಿಳಿಸಿದ ನೀಲಮ್ಮನವರು, ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ ಎಂದು ಹೇಳಿದ್ದಾರೆ. ಐಕ್ಯಕ್ಕೆ ಮುಕ್ತಿ ಕ್ರೀಗೆ ಬಾಹ್ಯವೆಂದು ತಿಳಿಸಿದ ಮೋಳಿಗೆ ಮಹಾದೇವಿ ‘ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳವೆಂದು ತಿಳಿಸಿದ್ದಾರೆ.

ಅಂಗವ ಮರೆದವರಿಗೆ ಲಿಂಗದ ಹಂಗೇಕೊ? ಅರಿವ ಕಂಡವಂಗೆ ಕುರುಹಿನ ಹಂಗೇಕೊ?ತಾನು ತಾನಾದವಂಗೆ ಧ್ಯಾನದ ಹಂಗೇಕೊ?ಎಂದು ಪ್ರಶ್ನಿಸಿರುವ ಹಡಪದ ಲಿಂಗಮ್ಮನವರು; ‘ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೇ ಐಕ್ಯ ನೋಡಾ’ ಎಂದು ಹೇಳಿದ್ದಾರೆ. ಹೀಗೆ ಅನೇಕ ವಚನಕಾರರು ಐಕ್ಯಸ್ಥಲದ ಬಗೆಗೆ ವಿವರಿಸಿದ್ದಾರೆ. ಷಟ್‍ಸ್ಥಲದಲ್ಲಿಯೇ ಕೊನೆಯದಾದ ಈ ಸ್ಥಲವು ಸಾಧಕನ ಕೊನೆಯ ಹಂತವಾಗಿದೆ. ಹೀಗಾಗಿ ಅನೇಕ ಶರಣರು ಈ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತೌಲನಿಕ ವಿವೇಚನೆ

ಷಟ್‍ಸ್ಥಲಗಳನ್ನು ಕುರಿತು ಬಿಡಿಬಿಡಿಯಾಗಿ ವಿಶ್ಲೇಷಿಸಿರುವ ಶರಣರು, ಷಟ್‍ಸ್ಥಲದ ಪರಿಣಾಮವನ್ನು ಇಡಿಯಾಗಿಯೂ ಕಟ್ಟಿಕೊಟ್ಟಿದ್ದಾರೆ. ಭಕ್ತಸ್ಥಲದಿಂದ ಹಿಡಿದು ಐಕ್ಯಸ್ಥಲದವರೆಗೆ ಸಾಧಕನ ಸಾಧನೆ ಎಂತಹದೆಂಬುದನ್ನು ಹೇಳುತ್ತಲೇ, ಷಟ್‍ಸ್ಥಲದ ಮಹತ್ವವನ್ನು ತಿಳಿಸಿದ್ದಾರೆ.

ಮೆಲ್ಲಮೆಲ್ಲನೆ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯನೆನಸಿಕೊಂಡು, ಷಟ್‍ಸ್ಥಲವನ್ನು ದಾಟಿ ನಿರವಯಸ್ಥಲವನೆಯ್ದವೆನಯ್ಯಾ ಎಂದು ಬಸವಣ್ಣನವರು ಹೇಳಿದ್ದಾರೆ. ನಿರವಯಸ್ಥಲವೆಂಬ ಏಳನೇ ಸ್ಥಲವನ್ನು ಇದುವರೆಗೆ ಯಾರೂ ಹೇಳಿರಲಿಲ್ಲ. ಇಂತಹ ನಿರವಲಯ ಸ್ಥಲದ ಬಗೆಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. 16ನೇ ಶತಮಾನದಲ್ಲಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನದಲ್ಲಿಯೂ ಈ ಏಳನೇ ಸ್ಥಲದ ಬಗೆಗೆ ಪ್ರಸ್ತಾಪವಾಗಿದೆ. ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬಸವಣ್ಣನವರಿಂದ ಪ್ರಭಾವಿತಗೊಂಡಿರುವ ವಚನಕಾರರಾಗಿದ್ದಾರೆ.

“ಭಕ್ತನೆಂತೆಂಬೆನಯ್ಯಾ? ಭವಿಯ ಸಂಗ ಬಿಡದನ್ನಕ್ಕ
ಮಾಹೇಶ್ವರನೆಂತೆಂಬೆನಯ್ಯಾ?ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ
ಪ್ರಸಾದಿಯಂತೆಂಬೆನಯ್ಯಾ? ಆದಿವ್ಯಾಧಿ ನಷ್ಟ್ಟವಾಗದನ್ನಕ್ಕ
ಪ್ರಾಣಲಿಂಗಿಯೆಂತೆಂಬೆನಯ್ಯ? ಪ್ರಾಣ ಸ್ವಸ್ಥಿರವಾಗದನ್ನಕ್ಕ
ಶರಣನೆಂತೆಂಬೆನಯ್ಯಾ? ಪಂಚೇಂದ್ರಿಯ ನಾಶವಾಗದನ್ನಕ್ಕ
ಐಕ್ಯನೆಂತೆಂಬೆನಯ್ಯಾ?ಜನನ ಮರಣ ವಿರಹಿತವಾಗದನ್ನಕ್ಕ”
-ಬಸವಣ್ಣ(ಸ.ವ.ಸಂ.1,ವ:510)

ಈ ವಚನದಲ್ಲಿ ಬಸವಣ್ಣನವರು, ಆರೂಸ್ಥಲಗಳಲ್ಲಿ ಸಾಧಕ ಪ್ರವೇಶಿಸಬೇಕಾದರೆ ಏನನ್ನು ಬಿಡಬೇಕು, ಹೇಗೆ ಸಾಧನೆ ಮಾಡಬೇಕೆಂಬುದನ್ನು ವಿವರಿಸಿದ್ದಾರೆ. ಭವಿಯ ಸಂಗಬಿಡದೆ, ಪರಸ್ತ್ರೀ-ಪರಧನದಾಸೆಯ ತೊರೆಯದೆ ಭಕ್ತಸ್ಥಲ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಭಕ್ತಸ್ಥಲದಲ್ಲಿ-ವಿಶ್ವಾಸ,ಮಾಹೇಶ್ವರಸ್ಥಲದಲ್ಲಿ-ನಿಷ್ಟೆ, ಪ್ರಸಾದಿಸ್ಥಲದಲ್ಲಿ-ಸಾವಧಾನ, ಪ್ರಾಣಲಿಂಗಿಸ್ಥಲದಲ್ಲಿ-ಸ್ವಾನುಭಾವ, ಶರಣಸ್ಥಲದಲ್ಲಿ-ಅರಿವು, ಐಕ್ಯಸ್ಥಲದಲ್ಲಿ-ನಿರ್ಭಾವ ಗುಣಗಳಿರುತ್ತವೆಂದು ಅಲ್ಲಮಪ್ರಭು ಹೇಳಿದ್ದಾರೆ. ‘ಕಾಗೆಯ ತಿಂದವನಲ್ಲದೆ ಭಕ್ತನಲ್ಲ, ಕೋಣನ ತಿಂದವನಲ್ಲದೆ ಭಕ್ತನಲ್ಲ’ ಎಂಬ ಅವರ ಇನ್ನೊಂದು ವಚನದಲ್ಲಿ ಷಟ್‍ಸ್ಥಲಗಳನ್ನು ಕುರಿತಾದ ಬೆಡಗಿನ ಭಾಷೆಯಿದೆ. ಕಾಗೆ-ಕೋಣ-ಕೋಡಗ-ನಾಯಿ ಈ ಮೊದಲಾದ ಪ್ರಾಣಿಗಳಲ್ಲಿ ಒಂದೊಂದು ರೀತಿಯ ಗುಣಸ್ವಭಾವಗಳಿವೆ. ಇದನ್ನು ತಿಳಿದುಕೊಂಡು ಪ್ರಾಣ ಗುಣವನ್ನೆಲ್ಲ ತೊರೆದು ಬಂದವನೇ ಷಟ್‍ಸ್ಥಲ ಸಾಧಕನಾಗುತ್ತಾನೆಂದು ಪ್ರಭು ತಿಳಿಸಿದ್ದಾರೆ. ‘ಅನುಭಾವವಿಲ್ಲದ ಷಟ್‍ಸ್ಥಲವು ಕಣ್ಣಿಲ್ಲದ ಕುರುಡನಂತೆ’ ಎಂದು ಹೇಳಿರುವ ಪ್ರಭು, ಷಟ್‍ಸ್ಥಲ ಸಾಧಕ ಅನುಭಾವಿಯಾಗಿರಬೇಕೆಂದು ತಿಳಿಸಿದ್ದಾರೆ.

“ಸರ್ವಶೂನ್ಯ ಆದಿಅನಾದಿ ಭಕ್ತಸ್ಥಲ
ನಾದ ಬಿಂದು ಮಹೇಶ್ವರಸ್ಥಲ
ಕಳೆ ಬೆಳಗು ಪ್ರಸಾದಿಸ್ಥಲ
ಅರಿವುನಿರವಯವು ಪ್ರಾಣಲಿಂಗಿಸ್ಥಲ
ಜ್ಞಾನ ಸುಜ್ಞಾನ ಶರಣಸ್ಥಲ
ಭಾವವಿಲ್ಲದ ಬಯಲು ಅಗಮ್ಯದ ಐಕ್ಯಸ್ಥಲ....”
-ಅಲ್ಲಮಪ್ರಭು(ಸ.ವ.ಸಂ.2,ವ:1582)

ಅಲ್ಲಮಪ್ರಭುಗಳು ಈ ವಚನದಲ್ಲಿ ಷಟ್‍ಸ್ಥಲಗಳ ವಿಶಿಷ್ಟತೆಯನ್ನು ಹೇಳಿದ್ದಾರೆ. ಬಯಲು ತತ್ವದಿಂದ ಪ್ರಾರಂಭವಾಗುವ ಇಲ್ಲಿಯ ಹೋಲಿಕೆಗಳು, ಮತ್ತೆ ಬಯಲು ತತ್ವದ ಮೂಲಕ ಮುಕ್ತಾಯಗೊಳ್ಳುತ್ತವೆ. ಒಂದೊಂದು ಸ್ಥಲವನ್ನು ದಾಟುತ್ತ ಒಂದೊಂದು ಮೆಟ್ಟಿಲನ್ನು ಏರುತ್ತ ಬೆಳೆದು ನಿಲ್ಲುವ ಇಲ್ಲಿಯ ಸಾಧಕನ ಪರಿ ಕುತೂಹಲಕಾರಿಯಾಗಿದೆ. ಪೃಥ್ವಿಯಂತಹ ಭಕ್ತ, ಉದಕದಂತಹ ಮಾಹೇಶ್ವರ, ಅಗ್ನಿಯಂತಹ ಪ್ರಸಾದಿ, ವಾಯಿವಿನಂತಹ ಪ್ರಾಣಲಿಂಗಿ, ಆಕಾಶದಂತಹ ಶರಣ, ಎಂದು ಹೇಳಿರುವ ಚೆನ್ನಬಸವಣ್ಣನವರು ಪಂಚತತ್ವಗಳನ್ನು ಪಂಚಸ್ಥಲಗಳಲ್ಲಿ ಸಮನ್ವಯಗೊಳಿಸಿ ಹೇಳಿ ಕೊನೆಯದಾದ ಐಕ್ಯಸ್ಥಲವು ಪರಮಾತ್ಮ ಸ್ವರೂಪಿಯಾಗಿದೆಯೆಂದು ತಿಳಿಸಿದ್ದಾರೆ.

ಲಿಂಗಸ್ಥಲವನ್ನು ದಾಟಿದಾಗ ಭಕ್ತನಾಗುತ್ತಾನೆ, ಜಂಗಮಸ್ಥಲವನ್ನು ದಾಟಿದಾಗ ಶರಣನಾಗುತ್ತಾನೆ, ಗುರುಸ್ಥಲವನ್ನು ದಾಟಿದಾಗ ಐಕ್ಯನಾಗುತ್ತಾನೆಂದು ಹೇಳಿರುವ ಚೆನ್ನಬಸವಣ್ಣನವರು; ಭಕ್ತಿಯನ್ನರಿಯದೆ ಭಕ್ತರಾದೆವೆಂಬುವವರನ್ನು, ಭಾವಶುದ್ದವಿಲ್ಲದೆ ಮಾಹೇಶ್ವರರಾದೆವೆಂಬುವವರನ್ನು ವಿಡಂಬಿಸಿದ್ದಾರೆ.

“ಭಕ್ತನಾದರೆ ಕಿಂಕಿಲನಾಗಿರಬೇಕು
ಮಾಹೇಶ್ವರನಾದರೆ ಆದಿಅನಾದಿಯನರಿಯದಿರಬೇಕು
ಪ್ರಸಾದಿಯಾದರೆ ಒಡಲಗುಣವಿರಹಿತನಾಗಿರಬೇಕು
ಪ್ರಾಣಲಿಂಗಿಯಾದರೆ ಪ್ರಸಾದವಿಲ್ಲದಿರಬೇಕು
ಶರಣನಾದರೆ ನಿಸ್ಸಂಗಿಯಾಗಿರಬೇಕು
ಐಕ್ಯನಾದರೆ ಬಯಲು ಬಯಲಾಗಿರಬೇಕು”
-ಚೆನ್ನಬಸವಣ್ಣ(ಸ.ವ.ಸಂ.3,ವ:713)

ಷಟ್‍ಸ್ಥಲ ಸಾಧಕನಾಗಬೇಕಾದರೆ, ಏನಾಗಬೇಕು ಹೇಗಿರಬೇಕೆಂಬುದನ್ನು ಚೆನ್ನಬಸವಣ್ಣನವರು ಈ ವಚನದಲ್ಲಿ ವಿವಿರಿಸಿದ್ದಾರೆ. ಚೆನ್ನಬಸವಣ್ಣನವರಿಗೆ ಷಟ್‍ಸ್ಥಲ ಚಕ್ರವರ್ತಿಯೆಂದು ಕರೆಯುತ್ತಿದ್ದರು. ಬಸವಣ್ಣನವರ ಆಶಯದಂತೆ ಹೊಸ ಷಟ್‍ಸ್ಥಲಗಳನ್ನು ಕಟ್ಟಿಕೊಡುವಲ್ಲಿ ಇವರೂ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಷಟ್‍ಸ್ಥಲದ ವಿಷಯ ಬಂದಾಗ ಚೆನ್ನಬಸವಣ್ಣನವರನ್ನು ಸ್ಮರಿಸಲೇಬೇಕಾಗುತ್ತದೆ.

ಭಕ್ತಸ್ಥಲ ಬಸವಣ್ಣನಿಗಾಯಿತ್ತು, ಮಾಹೇಶ್ವರಸ್ಥಲ ಚೆನ್ನಬಸವಣ್ಣನಿಗಾಯಿತ್ತು, ಇವೆಲ್ಲ ಮೀರಿದ ಸ್ಥಲ ಅಲ್ಲಮಪ್ರಭುವಿಗಾಯಿತ್ತು. ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು: ‘ಷಟ್‍ಸ್ಥಲವೆಂಬ ಷಣ್ಮುಖ ಮುದ್ರೆಯೊಳು ನವವಿಧ ಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ?’ ಎಂದು ಪ್ರಶ್ನಿಸಿದ್ದಾರೆ.

“ಭಕ್ತನಾದಡೇಕೆ ಭವದ ಬೇರು?
ಮಾಹೇಶ್ವರನಾದಡೇಕೆ ಪ್ರಳಯಕ್ಕೊಳಗಿಹ?
ಪ್ರಸಾದಿಯಾದಡೇಕೆ ಇಂದ್ರಿಯವೈದ ಅನಿಗ್ರಹಿಯಾಗಿಹ?
ಪ್ರಾಣಲಿಂಗಿಯಾದಡೇಕೆ ಉತ್ಪತ್ತಿ ಸ್ಥಿತಿ ಲಯಕ್ಕೊಳಗಾಗಿಹ?
ಶರಣನಾದಡೇಕೆ ಉಪಬೋಧೆಗೊಳಗಾಗಿಹ?
ಐಕ್ಯನಾದಡೇಕೆ ಇಹ-ಪರವನರಿದಿಹ?........”
-ಸಿದ್ಧರಾಮ(ಸ.ವ.ಸಂ.4,ವ:614)

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಸುವ ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು, ಷಟ್ ಸ್ಥಲವೆಂಬುದು ಅಭೇದ್ಯವೆಂದು ತಿಳಿಸಿದ್ದಾರೆ. ಷಟ್‍ಸ್ಥಲ ಸಾಧಕನಿಗೆ ಭವವಿಲ್ಲ, ಪ್ರಳಯವಿಲ್ಲವೆಂದು ಈ ವಚನ ಹೇಳುತ್ತದೆ. ಭಕ್ತಸ್ಥಲಕ್ಕೆ ವಿಶ್ವಾಸ, ಶ್ರದ್ದೆ, ಸನ್ಮಾರ್ಗ ಇರಬೇಕೆಂದು ಹೇಳಿರುವ ಅವಸರದ ರೇಕಣ್ಣನವರು, ಷಟ್‍ಸ್ಥಲಗಳನ್ನು ಬೇರೆ ಬೇರೆ ವಸ್ತುಗಳಿಗೆ ಹೋಲಿಸುವುದನ್ನು ವಿರೋಧಿಸಿದ್ದಾರೆ.

“ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು
ಪ್ರಸಾದಿಸ್ಥಲ ಜ್ಞಾನರೂಪು, ಮಾಹೇಶ್ವರಸ್ಥಲ ಆತ್ಮರೂಪು
ಶರಣಸ್ಥಲ ಜ್ಞೇಯರೂಪು, ಐಕ್ಯಸ್ಥಲ ಸರ್ವಮಯಜ್ಞಾನ ರೂಪು”
-ಅವಸರದ ರೇಕಣ್ಣ(ಸ.ವ.ಸಂ.6,ವ:658)

ಎಂದು ಹೇಳಿರುವ ರೇಕಣ್ಣನವರು ಆಗಮ-ಉಪನಿಷತ್ತುಗಳನ್ನು ಅಧ್ಯಯನ ಮಾಡಿದ್ದರೆಂಬುದು ಅವರ ವಚನಗಳಿಂದ ತಿಳಿದುಬರುತ್ತದೆ. ಜೀವ-ಆತ್ಮಗಳಿಗೆ ಸಂಬಂಧಿಸಿದ ಸಮಾಗವನ್ನಿಲ್ಲಿ ಕಾಣಬಹುದಾಗಿದೆ. ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲವೆಂದು ಹೇಳಿರುವ ಆದಯ್ಯನವರು ನಾಸ್ತಿಯೆಂಬ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದಾರೆ. ಆಚಾರಲಿಂಗವನ್ನು ಕಳೆದುಕೊಳ್ಳುವದಲ್ಲ, ಆಚಾರಲಿಂಗವನ್ನು ಗೆಲ್ಲುವದು ಎಂದರ್ಥೈಸಿಕೊಳ್ಳಬೇಕಾಗುತ್ತದೆ.

“ಬೀಜವೃಕ್ಷ ಯೋಗದಂತೆ ಭಕ್ತಸ್ಥಲ
ಜಲಮೌಕ್ತಿಕ ಯೋಗದಂತೆ ಮಹೇಶ್ವರಸ್ಥಲ
ಅನಲಕಾಷ್ಠ ಯೋಗದಂತೆ ಪ್ರಸಾದಿಸ್ಥಲ
ಕ್ರೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ
ಕರಕವಾರಿ ಯೋಗದಂತೆ ಶರಣಸ್ಥಲ
ಶಿಖಿಕರ್ಪುರ ಯೋಗದಂತೆ ಐಕ್ಯಸ್ಥಲ....”
-ಆದಯ್ಯ(ಸ.ವ.ಸಂ.6,ವ:1039)

ಈ ವಚನದ ಪ್ರತಿಸಾಲಿನ ನಡುವೆ ‘ಯೋಗದಂತೆ’ ಎಂಬ ಪದ ಪುನರಾವರ್ತನೆಗೊಂಡಿದೆ. ಅಂದರೆ ಷಟ್‍ಸ್ಥಲದ ನಿಜಾಚರಣೆಯೇ ಶಿವಯೋಗವಾಗಿದೆ. ಹೀಗಾಗಿ ಪತಂಜಲಿಯ ಯೋಗಕ್ಕೂ, ಶರಣರು ಹೇಳಿರುವ ಶಿವಯೋಗಕ್ಕೂ ತುಂಬ ವ್ಯತ್ಯಾಸವಿದೆ. ಅಚಾರಲಿಂಗಕರ್ಪಿತ ಭಕ್ತ, ಗುರುಲಿಂಗಕರ್ಪಿತ ಮಹೇಶ್ವರ, ಶಿವಲಿಂಗಕರ್ಪಿತ ಪ್ರಸಾದಿ, ಜಂಗಮಲಿಂಗಕರ್ಪಿತ, ಪ್ರಾಣಲಿಂಗಿ, ಪ್ರಸಾದಲಿಂಗಕರ್ಪಿತ ಶರಣ, ಮಹಾಲಿಂಗರ್ಪಿತ ಐಕ್ಯ ಎಂದು ವಿವರವಾಗಿ ತಿಳಿಸಿರುವ ಉರಿಲಿಂಗಪೆದ್ದಿಗಳು, ಯಾವ ಯಾವ ಸ್ಥಲ ಯಾರ್ಯಾರಿಗೆ ಸಾಧ್ಯವಾಯಿತ್ತೆಂಬುದನ್ನು ತಮ್ಮ ಇನ್ನೊಂದು ವಚನದಲ್ಲಿ ವಿವರಿಸಿದ್ದಾರೆ.

“ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜ ದೇವರಿಗೆ
ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳ ಮಾಚಿತಂದೆಗಳಿಗೆ
ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ
ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನಿಮಿಷ ದೇವರಿಗೆ
ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭು ದೇವರಿಗೆ
ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ..........”
-ಉರಿಲಿಂಗಪೆದ್ದಿ(ಸ.ವ.ಸಂ.6,ವ:1476)

ಉರಿಲಿಂಗಪೆದ್ದಿಗಳು ಬಸವಾದಿ ಶರಣರ ನಂತರ ಬಂದ ಶರಣರಾಗಿದ್ದಾರೆ. ಇವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ನಂದರಾಜನ ಪ್ರಸ್ತಾಪವಿರುವುದರಿಂದ, ನಂದರಾಜನು ಬಸವಾದಿ ಶರಣರ ಅನಂತರದವನೆಂದು ತಿಳಿದು ಬರುತ್ತದೆ. ಉರಿಲಿಂಗಪೆದ್ದಿ ಸಂಸ್ಕøತವನ್ನು ತನ್ನ ಗುರು ಉರಿಲಿಂಗದೇವರಿಂದ ಚೆನ್ನಾಗಿ ಕಲಿತಿದ್ದರು. ಹೀಗಾಗಿ ಇವರ ವಚನಗಳಲ್ಲಿ ಸಂಸ್ಕøತ ಪದಗಳು ಹೇರಳವಾಗಿವೆ. ಬಸವಾದಿ ಶರಣರ ನಂತರ ಎಷ್ಟೋ ವರ್ಷಗಳವರೆಗೆ ಬದುಕಿದ್ದ ಇಂತಹ ವಚನಕಾರರು ಶರಣರನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರು. ಅಂತೆಯೇ ಈ ವಚನದಲ್ಲಿ ಉರಿಲಿಂಗಪೆದ್ದಿಗಳು ಒಂದೊಂದು ಸ್ಥಲಕ್ಕೆ ಒಬ್ಬೊಬ್ಬ ಶರಣನ ಹೆಸರನ್ನು ಆರಿಸಿಕೊಂಡಿರುವುದು ತುಂಬ ಸೂಕ್ತವಾದುದಾಗಿದೆ.

ಉರಿಲಿಂಗಪೆದ್ದಿಗಳು ತಿಳಿಸಿದಂತೆ, ಕಿನ್ನರಿ ಬ್ರಹ್ಮಯ್ಯಗಳೂ ಕೂಡ ‘ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು ಮಾತ್ರ’ ಎಂದು ಹೇಳಿದ್ದಾರೆ. ‘ಭಕ್ತಸ್ಥಲ ಬಸವಣ್ಣಗಾಯಿತ್ತು, ಮಹೇಶ್ವರಸ್ಥಲ ಮಡಿವಾಳಯ್ಯಂಗಳಿಗಾಯಿತ್ತು, ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು, ಪ್ರಾಣಲಿಂಗಸ್ಥಲ ಚಂದಯ್ಯಂಗಾಯಿತ್ತು, ಶರಣಸ್ಥಲ ಘಟ್ಟಿವಾಳಯ್ಯಂಗಾಯಿತ್ತು, ಐಕ್ಯಸ್ಥಲ ಅಜಗಣ್ಣಂಗಾಯಿತ್ತೆಂದು’ ಡಕ್ಕೆಯ ಬೊಮ್ಮಣ್ಣನವರು ಹೇಳಿದ್ದಾರೆ. ಪೃಥ್ವಿ, ಅಪ್, ತೇಜು, ವಾಯು, ಆಕಾಶ ಈ ಪಂಚಭೂತಗಳು, ಷಟ್‍ಸ್ಥಲಗಳಿಗೆ ಹೇಗೆ ಮಾಯೆಯಾಗಿವೆಯೆಂಬುದನ್ನು ಇವರು ತಮ್ಮ ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ಅನೇಕ ವಚನಕಾರರು ಷಟ್‍ಸ್ಥಲದ ಬಗೆಗೆ ಹೇಳುವಾಗ ಪಂಚಭೂತಗಳನ್ನು ಪ್ರಸ್ತಾಪಿಸಿದ್ದಾರೆ.

“ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು
ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು,
ಶರಣಸ್ಥಲವೆರಡು, ಐಕ್ಯಸ್ಥಲ ಒಂದು ಭಕ್ತಂಗೆ ಮೂರು ಗೊತ್ತು,
ಮಾಹೇಶ್ವರಂಗೆ ನಾಲ್ಕು ಗೊತ್ತು
ಪ್ರಸಾದಿಗೆ ಐದುಗೊತ್ತು, ಪ್ರಾಣಲಿಂಗಿಗೆ ಆರುಗೊತ್ತು,
ಶರಣಂಗೆ ಎರಡುಗೊತ್ತು, ಐಕ್ಯಂಗೆ ಗೊತ್ತಾಗಿ
ಸಂಬಂಧಿಸಿ ಷಟ್‍ಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕಾರು
ಹೊರೆಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚಲಿಸುವಲ್ಲಿ
ನೂರೊಂದು ಸ್ಥಲಗಳಲ್ಲಿ ಆರೋಪಿಸಿ ನಿಂದುದು......”
- ದಾಸೋಹದ ಸಂಗಣ್ಣ(ಸ.ವ.ಸಂ..6,ವ:1138

ಈ ವಚನದಲ್ಲಿ ದಾಸೋಹದ ಸಂಗಣ್ಣನವರು ಷಟ್‍ಸ್ಥಲಗಳ ಮೂಲಕ ನೂರೊಂದು ಸ್ಥಲಗಳನ್ನು ಗುರುತಿಸಿದ್ದಾರೆ. 15ನೇ ಶತಮಾನದಲ್ಲಿ ಬಂದ ನೂರೊಂದು ವಿರತ್ತರು ಈ ನೊರೊಂದು ಸ್ಥಲಗಳಲ್ಲಿ ಪ್ರಾಮುಖ್ಯತೆ ನೀಡಿದರು. ಭಕ್ತ-ಬ್ರಹ್ಮತತ್ವ, ಮಾಹೇಶ್ವರ-ವಿಷ್ಣುತತ್ವ, ಪ್ರಸಾದಿ-ರುದ್ರತತ್ವ, ಪ್ರಾಣಲಿಂಗಿ-ಈಶ್ವರತತ್ವ, ಶರಣ-ಸದಾಶಿವತತ್ವ, ಐಕ್ಯ-ಮಹಾಭೇದ ತತ್ವವೆಂದು ತಿಳಿಸಿರುವ ಪ್ರಸಾದಿ ಭೋಗಣ್ಣನವರು ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲವೆಂದು ಹೇಳಿದ್ದಾರೆ. ಭೋಗಣ್ಣನವರು ಹೇಳಿರುವ ಬ್ರಹ್ಮ-ವಿಷ್ಣು-ರುದ್ರ-ಈಶ್ವರ ಇವು ಇಲ್ಲಿ ತತ್ವಗಳಾಗಿ ಬಂದಿವೆಯೇ ಹೊರತು ಅವತಾರಗಳಾಗಿ ದೇವರುಗಳಾಗಿ ಬಂದಿಲ್ಲವೆಂಬುದನ್ನು ಗಮನಿಸಬೇಕು.

“ಭಕ್ತಸ್ಥಲ ವರ್ತುಳ ರೂಪಾಗಿಹುದು,
ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು,
ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು,
ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು
ಶರಣಸ್ಥಲ ಪಂಚಸೂತ್ರ ಪ್ರಕಾರವ ಕೂಡಿಕೊಂಡು
ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮ ಶೂನ್ಯವಾಗಿಹುದು”
-ಪ್ರಸಾದಿ ಭೋಗಣ್ಣ(ಸ.ವ.ಸಂ.8,ವ:76)

ಈ ವಚನದಲ್ಲಿ ಪ್ರಸಾದಿಭೋಗಣ್ಣನವರು ಷಟ್‍ಸ್ಥಲಗಳ ರೂಪ-ಸ್ವರೂಪದ ಬಗ್ಗೆ ಮಾತನಾಡಿದ್ದಾರೆ. ‘ಷಡುಚಕ್ರವಲಯದೊಳಗೆ ನಾನಾಡುವೆ ಬಹುರೂಪ’ ಎಂದು ತನ್ನ ವೃತ್ತಿಪ್ರತಿಮೆಯ ಮೂಲಕ ಷಟ್ ಸ್ಥಲಗಳನ್ನು ಪರಾಮರ್ಶಿಸಿದ ಬಹುರೂ ಚೌಡಯ್ಯನವರು ಇಲ್ಲಿ ಶರಣಸತಿ-ಲಿಂಗಪತಿಗಳೆಂಬವೆ ಪ್ರಾಣ ವಾಗಿವೆಯೆಂದು ತಿಳಿಸಿದ್ದಾರೆ. ಆಸೆಯ ಬಿಟ್ಟವನೇ ಭಕ್ತ, ವೇಷವ ಬಿಟ್ಟವನೇ ಮಾಹೇಶ್ವರ, ಭವಪಾಶವ ಬಿಟ್ಟವನೇ ಪ್ರಸಾದಿ, ಭಾವ ಘಟಿಸಿದಡೆ ಪ್ರಾಣಲಿಂಗಿ, ಬಯಕೆನಿಂತಡೆ ಶರಣ, ಅರಿವು ಶೂನ್ಯವಾದಡೆ ಐಕ್ಯ ಎಂದು ಬಾಚಿ ಕಾಯಕದ ಬಸವಣ್ಣನವರು ಷಟ್‍ಸ್ಥಲದ ಲಕ್ಷಣಗಳನ್ನು ಹೇಳಿದ್ದಾರೆ.

ವಿಶ್ವಾಸವಿಲ್ಲದವನಿಗೆ ಷಟ್‍ಸ್ಥಲಗಳಿಲ್ಲವೆಂದು ಸ್ಪಷ್ಟಪಡಿಸಿರುವ ಬಾಹೂರ ಬೊಮ್ಮಣ್ಣನವರು, ಭಕ್ತ-ಮಾಹೇಶ್ವರ-ಪ್ರಸಾದಿಸ್ಥಲಗಳು ಗುರು-ಲಿಂಗ-ಜಂಗಮ ರೂಪವಾಗಿವೆಯೆಂದು ತಿಳಿಸಿದ್ದಾರೆ. ಬಸವಣ್ಣನ ಪ್ರಸಾದವ ಕೊಂಡ ಕಾರಣ ತನಗೆ ಭಕ್ತಿಸಾಧ್ಯವಾಯಿತೆಂದು ಹೇಳಿರುವ ಬಿಬ್ಬಿಬಾಚಯ್ಯನವರು ಚೆನ್ನಬಸವಣ್ಣನ ಪ್ರಸಾದದಿಂದ ಜ್ಞಾನ, ಪ್ರಭುದೇವರ ಪ್ರಸಾದದಿಂದ ವೈರಾಗ್ಯ, ಸಾಧ್ಯವಾಯಿತೆಂದು ಹೇಳಿದ್ದಾರೆ.

‘ಪೃಥ್ವಿಯ ಗುಣವುಳ್ಳಡೆ ಭಕ್ತ, ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ’ ಎಂದು ತಿಳಿಸಿರುವ ಮಡಿವಾಳ ಮಾಚಿದೇವರು, ಸತ್ಯಸದಾಚಾರ ಸದ್ಭಕ್ತನಾದಡೆ ಘೋಡಶ ಭಕ್ತಿಯ ತಿಳಿಯಬೇಕೆಂದು ಹೇಳಿದ್ದಾರೆ. ಇಷ್ಟಲಿಂಗ-ಭಾವಲಿಂಗ-ಪ್ರಾಣಲಿಂಗಗಳ ಅಂಗಗಳು, ಭಕ್ತ-ಮಾಹೇಶ್ವರ-ಪ್ರಸಾದಿ ಸ್ಥಲಗಳಿಗೆ ಅಂಗಗಳಾಗಿವೆಯೆಂದು ತಿಳಿಸಿರುವ ಮೋಳಿಗೆಮಾರಯ್ಯನವರು; ಅಂಗಭವಿ-ಭಕ್ತನನ್ನು, ಮನಭವಿ-ಮಾಹೇಶ್ವರನನ್ನು. ರುಚಿಭವಿ-ಪ್ರಸಾದಿಯನ್ನು ಕಾಡತ್ತಲಿವೆಯೆಂದು ಹೇಳಿದ್ದಾರೆ. ಷಟ್‍ಸ್ಥಲಗಳ ಅಂಗಗಳಾಗಿ ಷಟ್‍ವೈರಿಗಳು ಕಾಡುತ್ತಿವೆಯೆಂದು ತಿಳಿಸಿರುವ ಅವರು; ಷಟ್‍ಸ್ಥಲ ಸಾಧಕನು, ಪಂಚಭೂತಗಳಿಗೆ ಪೂರಕನಾಗಿರಬೇಕೆಂದು ಹೇಳಿದ್ದಾರೆ.

ಈ ಷಟ್‍ಸ್ಥಲಗಳು ಕ್ರಮವಾಗಿ ಬ್ರಹ್ಮ, ವಿಷ್ಟು, ರುದ್ರ, ಈಶ್ವರ, ಸದಾಶಿವ ರೂಪಗಳನ್ನು ಹೇಗೆ ನಾಶಪಡಿಸುತ್ತವೆಯೆಂದು ಹೇಳಿರುವ ಮೋಳಿಗೆಮಾರಯ್ಯನವರು ಕಿವಿಯ ಮುಚ್ಚಿ ಕಣ ್ಣನಲ್ಲಿ ಕೇಳಿದಾಗ ಭಕ್ತಸ್ಥಲ, ಕಣ್ಣಮುಚ್ಚಿ ಕರ್ಣದಲ್ಲಿ ನೋಡಿದಾಗ ಮಾಹೇಶ್ವರಸ್ಥಲ ಕಾಣ ಸುತ್ತವೆಯೆಂದು ತಿಳಿಸಿದ್ದಾರೆ.

“ಮಣ್ಣು ನೀರಿನಂತೆ ಆದಾಗಲೆ ಭಕ್ತಸ್ಥಲ
ಬಂಗಾರ ಬಣ್ಣ ಆದಂತೆ ಮಾಹೇಶ್ವರಸ್ಥಲ
ಅನಲ ಅನಿಲನಂತಾದಾಗ ಅದೇ ಪ್ರಸಾದಿಸ್ಥಲ
ಪ್ರತಿಜ್ಯೋತಿ ಪ್ರಮಾಣ ಸಿದಾಗ ಪ್ರಾಣಲಿಂಗಿಸ್ಥಲ
ಸುಮ್ಮಾನ ತಲೆದೋರದಿದ್ದಾಗ ಶರಣಸ್ಥಲ
ಸಾಕಾರವಳಿದು ನಿರಾಕಾರ ಉಳಿದಲ್ಲಿ ಐಕ್ಯಸ್ಥಲ”
-ಮೋಳಿಗೆ ಮಾರಯ್ಯ(ಸ.ವ.ಸಂ.8,ವ:2033)

ಮೋಳಿಗೆ ಮಾರಯ್ಯನವರು ಈ ವಚನದಲ್ಲಿ ಏನೇನಾದರೆ ಯಾವ್ಯಾವ ಸ್ಥಲಗಳು ಕಾಣ ಸಿಕೊಳ್ಳುತ್ತವೆಂದು ಹೇಳುತ್ತ ಕಾರ್ಯಕಾರಣ ಸಂಬಂಧ ಕುರಿತು ಚರ್ಚಿಸಿದ್ದಾರೆ. ಬಂಗಾರ ಬಣ್ಣ ಆದಂತೆ ಮಾಹೇಶ್ವರಸ್ಥಲವೆಂಬ ನುಡಿ ತುಂಬ ಕಾವ್ಯಾತ್ಮಕವಾಗಿದೆ. ‘ಷಟ್‍ಸ್ಥಲವ ಸೂರೆಗೊಂಡವರು ಚೆನ್ನಬಸವಣ್ಣನವರು’ ಎಂದು ಸಂಗಮೇಶ್ವರ ಅಪ್ಪಣ್ಣನವರು ಹೇಳಿದರೆ, ‘ಷಟ್‍ಸ್ಥಲದ ಆದಿಕುಳವು ಯಾರಿಗೂ ಅಳವಡದು’ ಎಂದು ಹಾವಿನಹಾಳ ಕಲ್ಲಯ್ಯನವರು ತಿಳಿಸಿದ್ದಾರೆ. ‘ಭಾಗ್ಯವುಳ್ಳಾತಂಗೆ ಭಕ್ತಿಸ್ಥಲ, ಮಕ್ಕಳುಳ್ಳಾತಂಗೆ ಮಾಹೇಶ್ವರಸ್ಥಲ’ ವೆಂದು ಹೇಳಿರುವ ಹಡಪದಪ್ಪಣ್ಣನವರು ಷಟ್‍ಸ್ಥಲಗಳ ಬಗೆಗೆ ತಮ್ಮ ವಚನದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಭಕ್ತನಾದರೆ ಮುಕ್ತಿ ಪಥವನ್ನು ಮೀರಿರಬೇಕು, ಮಾಹೇಶ್ವರನಾದರೆ ಮನದಲ್ಲಿ ಮನ್ಮಥನಿಲ್ಲದಂತಿರಬೇಕು, ಪ್ರಸಾದಿಯಾದರೆ ತನ್ನ ಪ್ರಾಣವೆ ಅಗ್ನಿ ಸ್ವರೂಪವಾಗಿರಬೇಕು, ಪ್ರಾಣಲಿಂಗಿಯಾದರೆ ಪ್ರಾಣವ ನಿಲ್ಲಿಸಿ ಲಿಂಗ ಪ್ರಾಣ ಯಾಗಿರಬೇಕು, ಶರಣನಾದರೆ ತನ್ನ ಮರಣಬಾಧೆಯ ಗೆದ್ದಿರಬೇಕು, ಐಕ್ಯನಾದರೆ ಅನ್ನಪಾನಾದಿಚ್ಛೆಗೆ ಇಲ್ಲದಿರಬೇಕೆಂದು ವಿವರಿಸುವ ಹಡಪದಪ್ಪಣ್ಣನವರು ಷಟ್‍ಸ್ಥಲಗಳ ಬಗ್ಗೆ ಸ್ಪಷ್ಟಚಿತ್ರಣ ನೀಡಿದ್ದಾರೆ. ಭಕ್ತನಾದಡೆ ತನುಮನ ಧನದಾಸೆ ಅಳಿದಿರಬೇಕು, ಮಾಹೇಶ್ವರನಾದರೆ ಪರಧನದಾಸೆಯ ಬಿಡಬೇಕೆಂದು ಹೇಳಿರುವ ಸೊಡ್ಡಳಬಾಚರಸರು ಎಲ್ಲರಿಗೂ ಷಟ್‍ಸ್ಥಲ ಸಿಗುವುದು ಸುಲಭವಲ್ಲವೆಂದು ತಿಳಿಸಿದ್ದಾರೆ.

‘ಸರ್ವಜೀವಕ್ಕೆ ದಯಾಪರನಾಗಿಪ್ಪುದು ಭಕ್ತಸ್ಥಲ, ಗುರು-ಲಿಂಗ ಜಂಗಮರ ಹೆರೆಹಿಂಗಿ ಚತುರ್ವಿಧವನೊಳಕೊಂಡಿರುವುದು ಶರಣಸ್ಥಲ, ಆ ಐದನೂ ಅವಗವಿಸಿ ನಿಂದುದು ಐಕ್ಯಸ್ಥಲ’ವೆಂದು ಶಿವಲೆಂಕ ಮಂಚಣ್ಣನವರು ತಮ್ಮ ವಚನದಲ್ಲಿ ವಿವರಿಸಿದ್ದಾರೆ. ಬಸವಣ್ಣನಭಕ್ತಿ, ಚೆನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಟೆ, ಅಜಗಣ್ಣನ ಐಕ್ಯಸ್ಥಲ ತನಗಾಯಿತ್ತೆಂದು ಹೇಳಿರುವ ಅಕ್ಕಮಹಾದೇವಿ ಷಟ್‍ಸ್ಥಲಗಳ ಗುಣವಿಶೇಷತೆ ಕುರಿತು ಚರ್ಚಿಸಿದ್ದಾರೆ.

“ತನ್ನಲ್ಲಿ ಸಕಲ ಪ್ರಾಣ ಗಳ ಆತ್ಮಚೇತನವ ಕಂಡು
ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ,
ತನಗೆ ಬಂದ ಅಪವಾದ ನಿಂದೆಗೆ ಎದೆಗುಂದದೆ
ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ
ಅನಾದಿ ಬೋಧ ಶಕ್ತಿಯನು
ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ
ಸ್ವತಂತ್ರಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ
ಅಲುಪ್ತಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ
ಅನಂತಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ...........”
-ಅಕ್ಕಮಹಾದೇವಿ(ಸ.ವ.ಸಂ.5,ವ:209)

ಈ ವಚನದಲ್ಲಿ ಅಕ್ಕಮಹಾದೇವಿ ಯಾವ್ಯಾವ ಸ್ಥಲದಲ್ಲಿ ಏನನ್ನು ಪಡೆಯಬೇಕೆಂಬುದನ್ನು ವಿವರಿಸಿದ್ದಾರೆ. ‘ಭಕ್ತರಿಗೆ ಬಯಕೆ ಉಂಟೆ? ನಿತ್ಯಂಗೆ ಸಾವುಂಟೆ?’ ಎಂದು ಅಕ್ಕಮ್ಮ ಪ್ರಶ್ನಿಸಿದರೆ, ‘ಭಕ್ತಿಸ್ಥಲವನಳಿದು ಬಟ್ಟಬಯಲ ಕೂಡಿ ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು’ ಎಂದು ನೀಲಮ್ಮ ತಿಳಿಸಿದ್ದಾರೆ. ‘ಆರುಸ್ಥಲದಲ್ಲಿ ನಿಂದವರಿಗೆ ಬೇರೊಂದು ಬ್ರಹ್ಮದ ಮಾತೇಕೆ?’ ಎಂದು ಅಮುಗೆರಾಯಮ್ಮ ಪ್ರಶ್ನಿಸಿದರೆ, ‘ಜಂಗಮವನರಿದಲ್ಲಿ ಷಟ್‍ಸ್ಥಲ ಸಂಬಂಧವಾಯಿತು’ಎಂದು ಮೋಳಿಗೆಯ ಮಹಾದೇವಿ ಹೇಳಿದ್ದಾರೆ. ‘ನಿರವಲಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ’ ಎಂದು ಅಮುಗೆರಾಯಮ್ಮ ತಿಳಿಸಿದರೆ; ‘ಭಕ್ತಗೆ-ವಿಶ್ವಾಸ, ಮಾಹೇಶ್ವರರಿಗೆ-ನಿಷ್ಟೆ, ಪ್ರಸಾದಿಗೆ-ಅಯೋಚಿತ, ಪ್ರಾಣಲಿಂಗಿಗೆ-ಅರ್ಪಿತಭೇದ, ಶರಣಂಗೆ-ದೃಷ್ಟದಲ್ಲಿ ಬಿಡುಗಡೆ, ಐಕ್ಯಂಗೆ-ಕುರುಹುಗೊಂಬುವ ಮುನ್ನವೇ ನಿರಾಳ’ ಎಂದು ಮೋಳಿಗೆಮಹಾದೇವಿ ವಿವರಿಸಿದ್ದಾರೆ.

ಹೀಗೆ ಷಟ್‍ಸ್ಥಲಗಳನ್ನು ಕುರಿತು, ಅವುಗಳ ಗುಣಲಕ್ಷಣಗಳನ್ನು ಕುರಿತು ಕೆಲವು ವಚನಕಾರರು ಹೇಳಿದರೆ, ಷಟ್‍ಸ್ಥಲಗಳ ಮಹತ್ವವನ್ನು ಕುರಿತು ಹಲವು ವಚನಕಾರರು ತಿಳಿಸಿದ್ದಾರೆ. ಷಟ್‍ಸ್ಥಲಗಳು ಸಾಮಾನ್ಯಸಾಧಕನಿಗೆ ಸಾಧ್ಯವಿಲ್ಲವೆಂದು ಕೆಲವರು ಹೇಳಿದರೆ, ಅವು ಸಾಧಕನಿಗೆ ಪೂರಕವಾಗಿವೆಯೆಂದು ಹಲವರು ತಿಳಿಸಿದ್ದಾರೆ. 12ನೇ ಶತಮಾನದ ಶರಣರು ಷಟ್‍ಸ್ಥಲ ಕುರಿತು ಹೊಸ ಚರ್ಚೆ ಆರಂಭಿಸಿದ್ದಾರೆ.

12ನೇ ಶತಮಾನದ ಶರಣರು ಷಟ್‍ಸ್ಥಲಗಳ ಬಗೆಗೆ ಪ್ರಾರಂಭಿಸಿದ ಈ ಹೊಸ ಚರ್ಚೆಯನ್ನರಿಯದವರು ಹಿಂದಿದ್ದ ಷಟ್‍ಸ್ಥಲಗಳಿಗೂ, ಶರಣರು ಹೇಳಿರುವ ಷಟ್‍ಸ್ಥಲಗಳಿಗೂ, ಅಂತರವನ್ನು ಕಾಣದಾಗಿದ್ದಾರೆ. ವಚನಗಳ ಸರಿಯಾದ ಓದು ಸೂಕ್ಷ್ಮದೃಷ್ಟಿಯಿದ್ದರೆ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಭಕ್ತ-ಶರಣನ ಹಂತ ತಲುಪಿದಾಗ ಆತ್ಮ ಪರಮಾತ್ಮನಾಗುತ್ತಾನೆ. ಅದೇ ಐಕ್ಯಸ್ಥಲವಾಗಿದೆ. ಭಕ್ತ-ಮಾಹೇಶ್ವರ-ಪ್ರಸಾದಿ ಇವು ಮೊದಲ ಹಂತದ ಸಾಧನೆಗಳಾದರೆ, ಪ್ರಾಣಲಿಂಗಿ-ಶರಣ-ಐಕ್ಯ ಇವು ಎರಡನೇ ಹಂತದ ಸಾಧನೆಗಳಾಗಿವೆಯೆಂದು ಕಲಕೇತಯ್ಯ ಮೊದಲಾದ ವಚನಕಾರರು ತಿಳಿಸಿದ್ದಾರೆ. ಭಕ್ತನಾದವ ಸುಚಿತ್ತದಿಂದಿರಬೇಕು, ಮಾಹೇಶ್ವರನಾದವ ಸುಬುದ್ಧಿಯಿಂದಿರಬೇಕು, ಪ್ರಸಾದಿ ಸ್ಥಲದಲ್ಲಿ ಅಹಂಕಾರ ಅಳಿದಿರಬೇಕು. ಪ್ರಾಣಲಿಂಗಿಯಾದಾಗ ವಿಶಾಲ ಮನಸ್ಸುಳ್ಳವನಾಗಿರಬೇಕು, ಶರಣಸ್ಥಲದಲ್ಲಿ ಸಕಲ ಜ್ಞಾನವ ಹೊಂದಿರಬೇಕು. ಐಕ್ಯಸ್ಥಲದಲ್ಲಿ ಸದ್ಭಾವ ಮೂಡಿ ದ್ವೈತವಳಿದು ಅದ್ವೈತ ಏರ್ಪಟ್ಟು ಬಯಲುತತ್ವ ಕಾಣಬೇಕೆಂದು ಶರಣರು ತಿಳಿಸಿದ್ದಾರೆ. ಷಟ್‍ಸ್ಥಲಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ, ಅವುಗಳು ಸಾಮಾಜಿಕವಾಗಿಯೂ ಬಹುಮುಖ್ಯವಾಗಿವೆ. ಷಟ್‍ಸ್ಥಲ ಸಾಧಕ ನಿಜವಾದ ಸಮಾಜವಾದಿಯಾಗುತ್ತಾನೆ, ತಾನೇ ಸಮಾಜವಾಗುತ್ತಾನೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ

ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣರ ದೇವಾಲಯಗಳು
ಪ್ರಾಣಲಿಂಗಿಸ್ಥಲ
ಶರಣಸ್ಥಲ
ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಅಷ್ಟಾವರಣಗಳ ತೌಲನಿಕ ವಿವೇಚನೆ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವರು
ಶರಣರ ಧರ್ಮ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...