Date: 30-01-2023
Location: ಬೆಂಗಳೂರು
“ಜನನ-ಮರಣ ವಿರಹಿತನಾಗದನ್ನಕ್ಕ ಐಕ್ಯನೆಂತೆಂಬೆನಯ್ಯಾ’ ಎಂದು ಪ್ರಶ್ನಿಸಿರುವ ಬಸವಣ್ಣನವರು ಸರ್ವಾಂಗಗಳಲ್ಲಿರುವ ಹೊಲಸನ್ನು ತೊಳೆದುಕೊಂಡು ಒಳಗಿನ ಕಸವನ್ನು ತೆಗೆದು ಹಾಕಿದಾಗ ಮಾತ್ರ ಕೂಡಲಸಂಗಮದೇವನನ್ನು ಕೂಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ನಿಜವಾದ ಐಕ್ಯಸ್ಥಲವೆಂದು ಹೇಳಿದ್ದಾರೆ'' ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಐಕ್ಯಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...
ಷಟ್‍ಸ್ಥಲಗಳಲ್ಲಿ ಇದು ಕೊನೆಯ ಸ್ಥಲವಾಗಿದೆ. ಇಲ್ಲಿ ಐಕ್ಯವೆಂದರೆ ಆತ್ಮನು ಪರಮಾತ್ಮನಲ್ಲಿ ಲೀನವಾಗುವುದೆಂದರ್ಥ. ದ್ವೈತ ಭಾವವಳಿದು ಅದ್ವೈತಭಾವ ಮೂಡಿ ನರ ಹರನಾಗುವದೇ ಐಕ್ಯಸ್ಥಲದ ವಿಶಿಷ್ಟತೆಯಾಗಿದೆ. ಇಲ್ಲಿಯ ಸಾಧಕನಿಗೆ ಪೂಜೆ-ಧ್ಯಾನ-ಯೋಗಗಳೇ ಅಗತ್ಯ ಇರುವುದಿಲ್ಲ. ಜೀವನಾಗಿದ್ದವನು, ಶಿವನಾಗುವುದೇ ಐಕ್ಯಸ್ಥಲ. 13ನೇ ಶತಮಾನದಲ್ಲಿ ಹುಟ್ಟಿಕೊಂಡ ವೀರಶೈವ ಧರ್ಮಾಚರಣೆಗಳಲ್ಲಿ
ನಿಧನರಾದವರನ್ನು ಲಿಂಗೈಕ್ಯರಾದರೆಂದು ಕರೆಯಲಾಗುತ್ತದೆ. ಆದರೆ ಶರಣರು ಹೇಳಿದ ಐಕ್ಯಸ್ಥಲವು ಜೀವ-ದೇವನಾಗಿ ಬೆಳೆದ ಸಂಭ್ರಮದ ಸ್ಥಲವಾಗಿದೆ.
ಆತ್ಮ-ಪರಮಾತ್ಮನಾಗುವದೆಂದರೆ, ಅದು ನದಿಯಲ್ಲಿ ನದಿಬೆರೆತಂತೆ ನೈಸರ್ಗಿಕವಾದುದಾಗಿದೆ. ಅಂತರಂಗ-ಬಹಿರಂಗವೆಂಬ ಭೇದಗಳನ್ನು ಕಳೆದುಕೊಳ್ಳುವದಾಗಿದೆ. ಭಿನ್ನತೆ ದೂರವಾದಾಗ ಐಕ್ಯತೆ ಲಭಿಸುತ್ತದೆ. ಈ ಸ್ಥಲದಲ್ಲಿ ನಾನು ಎಂಬ ಅಹಂ ಪ್ರಜ್ಞೆ ಅಳಿದು ಹೋಗಿ ನಾವು ಎಂಬ ಹೃದಯವೈಶಾಲ್ಯತೆ ಕಾಣ ಸುತ್ತದೆ. ತಾನೇ-ಸಮಾಜವಾಗುವುದು ಲೌಕಿಕದ ಪರಿಭಾಷೆಯಾಗಿದೆ. ಸಕಲಜೀವಗಳಿಗೆ ಲೇಸನ್ನೇ ಬಯಸುವ ಉದಾರ ಮನಸ್ಸು ಇಲ್ಲಿ ಕಾಣ ಸಿಕೊಳ್ಳುತ್ತದೆ. ಇಲ್ಲಿ ಸಮರಸ ಭಕ್ತಿಯೇ ಸ್ಥಾಯಿಯಾಗಿದೆ.
‘ಜನನ-ಮರಣ ವಿರಹಿತನಾಗದನ್ನಕ್ಕ ಐಕ್ಯನೆಂತೆಂಬೆನಯ್ಯಾ’ ಎಂದು ಪ್ರಶ್ನಿಸಿರುವ ಬಸವಣ್ಣನವರು ಸರ್ವಾಂಗಗಳಲ್ಲಿರುವ ಹೊಲಸನ್ನು ತೊಳೆದುಕೊಂಡು ಒಳಗಿನ ಕಸವನ್ನು ತೆಗೆದು ಹಾಕಿದಾಗ ಮಾತ್ರ ಕೂಡಲಸಂಗಮದೇವನನ್ನು ಕೂಡಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ನಿಜವಾದ ಐಕ್ಯಸ್ಥಲವೆಂದು ಹೇಳಿದ್ದಾರೆ.
“ಕೈಯಲ್ಲಿ ಮುಟ್ಟಿದ ಪದಾರ್ಥ ಕೈಯೊಳಗೆ ಐಕ್ಯ
ಕಂಗಳು ತಾಗಿದ ಪದಾರ್ಥ ಕಂಗೊಳೈಕ್ಯ
ನಾಲಿಗೆ ತಾಗಿದ ಪದಾರ್ಥ ನಾಲಿಗೆದೊಳಗೈಕ್ಯ
ನೀಡುವ ಪರಿಚಾರಕರು ಬೇಸತ್ತರಲ್ಲದೆ,
ಆರೋಗಣೆಯ ಮಾಡುವ ದೇವನೆತ್ತಲೆಂದರಿಯನು
ಬ್ರಹ್ಮಾಂಡವನೊಡಲೊಳಗಡಗಿಸಿಕೊಂಡು ಬಂದ ದೇವಂಗೆ
ಆರೋಗಣೆಯ ಮಾಡಿಸಿಹಿನೆಂಬ ಅಹಂಕಾರದಲ್ಲಿ ಇದ್ದೆನಾಗಿ
ನಾನು ಕೆಟ್ಟ ಕೇಡನೇನೆಂಬೆನಯ್ಯಾ?..............”
-ಬಸವಣ್ಣ(ಸ.ವ.ಸಂ.1,1165)
ಈ ವಚನದಲ್ಲಿ ಬಸವಣ್ಣನವರು ಐಕ್ಯಸ್ಥಲದ ವೈವಿದ್ಯತೆಯನ್ನು ಗುರುತಿಸಿದ್ದಾರೆ. ಪಂಚೇಂದ್ರಿಯಗಳ ಮೂಲಕ ಕಾಣ ಸಿಕೊಳ್ಳುವ ಪದಾರ್ಥಗಳು ಪಂಚೇಂದ್ರಿಯಗಳಲ್ಲಿಯೇ ಐಕ್ಯವಾಗುವ ಸ್ಥಿತಿಯನ್ನು ತಿಳಿಸಿದ್ದಾರೆ. ಎರಡಿಲ್ಲದ ಐಕ್ಯಂಗೆ ಒಳಹೊರಗೆಂಬುದಿಲ್ಲವೆಂದು ಹೇಳಿರುವ ಅಲ್ಲಮಪ್ರಭುಗಳು, ‘ಲಿಂಗಾಂಗವೆರಡೂ ನಿಮ್ಮಲ್ಲಿ ಐಕ್ಯವಾದ ಪರಿಯೆಂತು ಹೇಳಾ ಸಂಗನಬಸವಣ್ಣ?’ ಎಂದು ಬಸವಣ್ಣನವರನ್ನು ಪ್ರಶ್ನಿಸಿದ್ದಾರೆ.
“ಹಸಿವು, ತೃಷೆ,ವಿಷಯ,ವ್ಯಸನ ಈ ನಾಲ್ಕು ಉಳ್ಳವರು
ಗುಹೇಶ್ವರಲಿಂಗದಲ್ಲಿ ಐಕ್ಯರೆಂತಪ್ಪರೊ?
ಅರಿದರಿದು ಆಚರಿಸಲರಿಯದ ಕಾರಣ ಲಿಂಗೈಕ್ಯರಲ್ಲಿ
ಅರಿದನಾದಡೆ ಹಸಿವ ಮೀರಿ ಉಂಬ, ತೃಷೆಯ ಮೀರಿ ಕೊಂಬ
ವಿಷತವನಾಳಿಗೊಂಬ, ವ್ಯಸನವ ದಾಂಟಿ ಭೋಗಿಸುವ
ಇದನರಿಯದಲೆ ಚರಿಸುವ ಕೀಟಕ ಮಾನವರ ಕಂಡು
ಎನ್ನಮನ ನಾಚಿತ್ತು ಗುಹೇಶ್ವರಾ”
-ಅಲ್ಲಮಪ್ರಭು(ಸ.ವ.ಸಂ.2,ವ:1622)
ಗುಹೇಶ್ವರಲಿಂಗದಲ್ಲಿ ಐಕ್ಯವಾಗಬೇಕಾದರೆ, ಹಸಿವು, ತೃಷೆ, ವಿಷಯ, ವ್ಯಸನಗಳನ್ನು ತೊರೆಯಬೇಕಾಗುತ್ತದೆಂದು ತಿಳಿಸಿರುವ ಪ್ರಭುಗಳು ಲಿಂಗೈಕ್ಯಸ್ಥಲ ಅಷ್ಟೊಂದು ಸುಲಭವಾದದ್ದಲ್ಲವೆಂದು ಹೇಳಿದ್ದಾರೆ. ಅರಿಯುವದು ಬೇರೆ, ಆಚರಿಸುವುದು ಬೇರೆ, ಅರಿದರಿದು ಆಚರಿಸಲರಿಯದ ಕಾರಣ ಅವರು ಲಿಂಗೈಕ್ಯರಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸಾಧಕನಾದವನು ಕರ್ಪುರದ ಗಿರಿಯನು ಉರಿತಾಗಿದಂತೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾಗುತ್ತಾನೆಂದು ಹೇಳಿರುವ ಚೆನ್ನಬಸವಣ್ಣನವರು, ಮಹಾಲಿಂಗೈಕ್ಯರ ನಿಲವನು ಅನುಮಾನಿಗಳೆತ್ತ ಬಲ್ಲರಯ್ಯಾ? ಎಂದು ಪ್ರಶ್ನಿಸಿದ್ದಾರೆ. ಆಕಾರ-ನಿರಾಕಾರಗಳೆಂಬ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯನೆಂದು ಹೇಳಿರುವ ಅವರು ‘ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ’ ವೆಂದು ತಿಳಿಸಿದ್ದಾರೆ.
“ಐಕ್ಯಂಗೆ ಆತ್ಮನೇ ಅಂಗ, ಆ ಅಂಗಕ್ಕೆ ಸದ್ಭಾವವೇ ಹಸ್ತ
ಆ ಹಸ್ತಕ್ಕೆ ಮಹಾಸಾದಾಖ್ಯ, ಆ ಸಾದಾಖ್ಯಕ್ಕೆ ಚಿಚ್ಛಕ್ತಿ
ಆ ಶಕ್ತಿಗೆ ಮಹಾಲಿಂಗ ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ
ಆ ಕಲೆಗೆ ಹೃದಯೇಂದ್ರಿಯವೆ ಮುಖ
ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು ಸಮರಸ ಭಕ್ತಿಯಿಂದರ್ಪಿಸಿ
ಆ ಸುಪರಿಣಾಮ ಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲಚೆನ್ನಸಂಗಾ, ನಿಮ್ಮ ಲಿಂಗೈಕ್ಯನು”
-ಚೆನ್ನಬಸವಣ್ಣ(ಸ.ವ.ಸಂ.3,ವ:1095)
ಮೊದಲು ದೇಹ ಅಂಗವಾಗಿರುತ್ತದೆ. ಐಕ್ಯಸ್ಥಿತಿ ತಲುಪಿದ ಮೇಲೆ ಆತ್ಮವೇ ಅಂಗವಾಗುತ್ತದೆ. ಲಿಂಗೈಕ್ಯನು ಸುಪರಿಣಾಮ ಪ್ರಸಾದವ ಭೋಗಿಸಿ ಸುಖಿಸುತ್ತಿಹನೆಂದು ಚೆನ್ನಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ. ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲವೆಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು, ಗುರುವಿನ ಕುರುಹ ಕಂಡು ಗುರುಸ್ವರೂಪನಾಗಿ ಪರಮಾತ್ಮನಲ್ಲಿ ಐಕ್ಯವ ಗಳಿಸಬೇಕೆಂದು ತಿಳಿಸಿದ್ದಾರೆ. ಐಕ್ಯಸ್ಥಲ ಹೊಂದಿದ ಸಾಧಕ ದಿವ್ಯಜ್ಞಾನಿಯಾಗುತ್ತಾನೆಂದು ಅವಸರದ ರೇಕಣ್ಣಗಳು ಹೇಳಿದರೆ, ಜೀವವಿದ್ದು ಜೀವವಿಲ್ಲ, ಜೀವ ಪರಮನಲ್ಲಿ ಐಕ್ಯವಾಯಿತೆಂದು ತಿಳಿಸಿರುವ ಆದಯ್ಯನವರು, ಶರಣರನ್ನು ‘ಉಂಡುಪವಾಸಿಗಳು, ಬಳಸಿಬ್ರಹ್ಮಚಾರಿಗಳು’ ಎಂದು ಕರೆದಿದ್ದಾರೆ.
“ಹುಸಿಯಿಲ್ಲದಿರ್ದಡೆ ಭಕ್ತನೆಂಬೆ!
ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ!
ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ!
ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ!
ಆಶೆಯಿಲ್ಲದಿರ್ದಡೆ ಶರಣನೆಂಬೆ
ಈ ಐವರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ”
-ಗಣೇಶ ಮಸಣಯ್ಯ(ಸ.ವ.ಸಂ.7,ವ:261)
ಷಟ್‍ಸ್ಥಲಗಳ ಸಾಧಕನಾಗಬೇಕಾದರೆ ಏನನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಗಜೇಶ ಮಸಣಯ್ಯನವರು ಈ ವಚನದ ಮೂಲಕ ವಿವರಿಸಿದ್ದಾರೆ. ಕಿರಣದೊಳಗಿನ ಸುರಂಗದಂತೆ, ಬೀಜದೊಳಗಿನ ವೃಷಕದಂತೆ, ಆತ್ಮನು ಪರಮಾತ್ಮನಲ್ಲಿ ಐಕ್ಯವಾಗಿದೆಯೆಂದು ಗುಪ್ತಮಂಚಣ್ಣನವರು ತಿಳಿಸಿದ್ದಾರೆ.
“ಚಿನ್ನದೊಳಗಣ ಬಣ್ಣದಂತೆ
ಬಣ್ಣನುಂಗಿದ ಬಂಗಾರದಂತೆ
ಅನ್ಯಭಿನ್ನವಿಲ್ಲದ ಲಿಂಗೈಕ್ಯವು
ಲಿಂಗ ಅಂಗವಾದಲ್ಲಿ, ಅಂಗ ಲಿಂಗವಾದಲ್ಲಿ
ಹಿಂಗದಭಾವ ಚಿನ್ನ ಬಣ್ಣದ ತೆರ
ಇದು ಪ್ರಾಣಲಿಂಗ ಯೋಗ, ಸ್ವಾನುಭಾವ ಸಮ್ಮತ
ಇದು ಅಂಗಲಿಂಗ ಯೋಗ, ಪ್ರಾಣಲಿಂಗ ಪ್ರಣವ
ಉಭಯನಾಶನ ಐಕ್ಯಲೇಪ
ನಾರಾಯಣಪ್ರಿಯ ರಾಮನಾಥಾ”
ಗುಪ್ತಮಂಚಣ್ಣ(ಸ.ವ.ಸಂ.7,ವ:333)
ಈ ವಚನದಲ್ಲಿ ಗುಪ್ತಮಂಚಣ್ಣನವರು ಯಾವ ವಸ್ತುನಿನಲ್ಲಿ ಯಾವುದು ಐಕ್ಯವಾಗಿದೆಯೆಂದು ತಿಳಿಸುತ್ತ ಉಭಯನಾಶವೇ ಐಕ್ಯಲೇಪವೆಂದು ಹೇಳಿದ್ದಾರೆ. ಸರ್ವಮಯವಾದ ಐಕ್ಯನಾಭಾವಿಗೆ ಅಂಡಪಿಂಡ-ಬ್ರಹ್ಮಾಂಡ, ಆಕಾಶ-ಆತ್ಮನೆಂದುಂಟೆ? ಎಂದು ಘಟ್ಟಿವಾಳಯ್ಯನವರು ಕೇಳಿದರೆ, ಐಕ್ಯಸ್ಥಲವು ವಿಶ್ವೇಶ್ವರಯ್ಯ ಲಿಂಗದ ಒಳಗಿನಾಟವೆಂದು ತುರುಗಾಹಿ ರಾಮಣ್ಣನವರು ತಿಳಿಸಿದ್ದಾರೆ. ಪೃಥ್ವಿ, ಅಪ್ಪು, ತೇಜ,ವಾಯು, ಆಕಾಶ ತತ್ವಗಳಿಂದ ಕ್ರಮವಾಗಿ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರುಸ್ಥಲಗಳು ಜೋಡಣೆಯಾಗಿವೆಯೆಂದು ದಾಸೋಹದ ಸಂಗಣ್ಣನವರು ಸ್ಪಷ್ಟಪಡಿಸಿದ್ದಾರೆ.
ತ್ರಿವಿಧಸ್ಥಲದಂತೆ ಇರುವದು, ಐಕ್ಯನ ಅರ್ಪಿತಸ್ಥಲಭೇದವೆಂದು ಪ್ರಸಾದಿಭೋಗಣ್ಣನವರು ತಿಳಿಸಿದ್ದಾರೆ. ಭಕ್ತ-ಬ್ರಹ್ಮತತ್ವವಾಗಿ, ಮಾಹೇಶ್ವರ-ವಿಷ್ಣುತತ್ವವಾಗಿ, ಪ್ರಸಾದಿ-ರುದ್ರತತ್ವವಾಗಿ, ಪ್ರಾಣಲಿಂಗಿ-ಈಶ್ವರತತ್ವವಾಗಿ, ಶರಣ-ಸದಾಶಿವತತ್ವವಾಗಿ ಐಕ್ಯ-ಮಹಾಭೇದತತ್ವವಾಗಿದೆಯೆಂದು ಪ್ರಸಾದಿಭೋಗಣ್ಣನವರು ತಮ್ಮ ಈ ವಚನದಲ್ಲಿ ಹೇಳಿದ್ದಾರೆ.
ಷಟ್‍ಸ್ಥಲಗಳು ವಿಶ್ವಾಸದಿಂದ ಮಾತ್ರ ಸಾಧ್ಯವಾಗಿವೆಯೆಂಬುದನ್ನರಿತ ಬಾಹೂರ ಬೊಮ್ಮಣ್ಣನವರು, ವಿಶ್ವಾಸವಿಲ್ಲದವರಿಗೆ ಯಾವಸ್ಥಲವೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಕಣ್ಣುಗಳ ಸೂತಕ ಹಿಂಗದೆ ಭಕ್ತನಾಗಲಾರÀ, ಕಾಯದ ಸೂತಕ ಹಿಂಗದೆ ಮಾಹೇಶ್ವರನಾಗಲಾರ, ಮನದ ಸೂತಕ ಹಿಂಗದೆ ಪ್ರಸಾದಿಯಾಗಲಾರ ಜ್ಞಾನದ ಸೂತಕ ಹಿಂಗದೆ ಪ್ರಾಣಲಿಂಗಿಯಾಗಲಾರ, ಭ್ರಾಂತು ಹಿಂಗದೆ ಶರಣನಾಗಲಾರ-ಐಕ್ಯನಾಗಲಾರನೆಂದು ಮನುಮುನಿ ಗುಮ್ಮಟದೇವರು ಹೇಳಿದ್ದಾರೆ. ಸಮರಸ ಸಂಗದಲ್ಲಿ ಲೀಯವಾದ ಸುಖವು, ಐಕ್ಯಸ್ಥಲದಲ್ಲಿ ಲೀಯವಾಗಿದೆಯೆಂದು ಮರುಳಶಂಕರ ದೇವರು ತಿಳಿಸಿದ್ದಾರೆ.
ಭಕ್ರ-ಮಹೇಶ್ವರ-ಪ್ರಸಾದಿ ಈ ಮೂರು ಭಕ್ರನಂಗವಾದರೆ, ಪ್ರಾಣಲಿಂಗಿ-ಶರಣ-ಐಕ್ಯ ಈ ಮೂರು ಜಂಗಮದಂಗವೆಂದು ಹೇಳಿರುವ ಮೋಳಿಗೆ ಮಾರಯ್ಯನವರು, ಐಕ್ಯನಾದಲ್ಲಿ ಪರಶಿವನೆಂಬ ಪ್ರಮಾಣು ನಷ್ಟವಾಗಿರಬೇಕೆಂದು ತಿಳಿಸಿದ್ದಾರೆ.
“ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು
ಆ ಅರಿವು ಐಕ್ಯವಾದಲ್ಲಿಯೆ ಗುರುವ ಭಾವಿಸಲಿಲ್ಲ
ಆ ಗುರು ಐಕ್ಯವಾದಲ್ಲಿಯೆ ಲಿಂಗವನರಿದುದು
ಆ ಲಿಂಗ ಐಕ್ಯವಾದಲ್ಲಿಯೆ ಜಂಗಮವ ಮರೆದುದು
ಆ ಜಂಗಮ ಐಕ್ಯವಾದಲ್ಲಿಯೆ ತ್ರಿವಿಧವ ಮರೆದುದು...........”
-ಮೋಳಿಗೆ ಮಾರಯ್ಯ(ಸ.ವ.ಸಂ.8,ವ:1854)
ಈ ವಚನದಲ್ಲಿ ಮೋಳಿಗೆಮಾರಯ್ಯನವರು, ಗುರು-ಲಿಂಗ, ಜಂಗಮರು ಐಕ್ಯರಾದಾಗ ಏನೇನಾಗುತ್ತದೆಂಬುದನ್ನು ವಿವಿರಿಸಿದ್ದಾರೆ. ಅರಿವು-ಮರೆವುಗಳು ಹೇಗೆ ತದ್ವಿರುದ್ಧವೊ ಹಾಗೆ ಭಕ್ತ-ಭವ ತದ್ವಿರುದ್ಧವಾಗಿವೆ. ಆದರೆ ಭವಿ ತನ್ನರಿವನ್ನು ಜಾಗೃತಗೊಳಿಸಿಕೊಂಡು ಭಕ್ತನಾಗಲು ಸಾಧ್ಯವಿದೆ, ಆ ಭಕ್ತ ಐಕ್ಯಸ್ಥಲ ತಲುಪಬಹುದೆಂಬುದನ್ನು ಇಲ್ಲಿ ಹೇಳಲಾಗಿದೆ.
ಭಕ್ತ-ಮಾಹೇಶ್ವರ-ಪ್ರಸಾದಿ ಇವು ಮೂರು ಭೃತ್ಯಭಾವ, ಪ್ರಾಣಲಿಂಗಿ-ಶರಣ-ಐಕ್ಯ ಇವು ಮೂರು ಕರ್ತಭಾವವೆಂದು ವಚನಭಂಡಾರಿ ಶಾಂತರಸರು ಹೇಳಿದರೆ, ಬಯಕೆವಂತರೆಲ್ಲ ಐಕ್ಯವಂತರಹರೆ? ಎಂದು ಸಕಲೇಶ ಮಾದರಸರು ಪ್ರಶ್ನಿಸಿದ್ದಾರೆ ಅಂಗ ಲಿಂಗವೆಂದರಿತಂಗೆ ಅಂಗದಲೆಐಕ್ಯ, ಕಂಗಳು ಲಿಂಗವೆಂದರಿದಾತಂಗೆ ಕಂಗಳಲೆ ಐಕ್ಯವೆಂದು ಸಂಗಮೇಶ್ವರ ಅಪ್ಪಣ್ಣನವರು ಹೇಳಿದರೆ, ಐಕ್ಯಸ್ಥಲವೆಲ್ಲರಿಗೂ ಇಲ್ಲವೆಂದು ಹಡಪದಪ್ಪಣ್ಣನವರು ತಿಳಿಸಿದ್ದಾರೆ.
‘ಎಲೆದೇವಾ ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ’ಎಂದು ಕೇಳಿಕೊಂಡಿರುವ ಅಕ್ಕಮಹಾದೇವಿ, ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ ಎಂದು ತಿಳಿಸಿದ್ದಾರೆ. ‘ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ’ ಎಂದು ತಿಳಿಸಿದ ನೀಲಮ್ಮನವರು, ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ ಎಂದು ಹೇಳಿದ್ದಾರೆ. ಐಕ್ಯಕ್ಕೆ ಮುಕ್ತಿ ಕ್ರೀಗೆ ಬಾಹ್ಯವೆಂದು ತಿಳಿಸಿದ ಮೋಳಿಗೆ ಮಹಾದೇವಿ ‘ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳವೆಂದು ತಿಳಿಸಿದ್ದಾರೆ.
ಅಂಗವ ಮರೆದವರಿಗೆ ಲಿಂಗದ ಹಂಗೇಕೊ? ಅರಿವ ಕಂಡವಂಗೆ ಕುರುಹಿನ ಹಂಗೇಕೊ?ತಾನು ತಾನಾದವಂಗೆ ಧ್ಯಾನದ ಹಂಗೇಕೊ?ಎಂದು ಪ್ರಶ್ನಿಸಿರುವ ಹಡಪದ ಲಿಂಗಮ್ಮನವರು; ‘ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೇ ಐಕ್ಯ ನೋಡಾ’ ಎಂದು ಹೇಳಿದ್ದಾರೆ.
ಹೀಗೆ ಅನೇಕ ವಚನಕಾರರು ಐಕ್ಯಸ್ಥಲದ ಬಗೆಗೆ ವಿವರಿಸಿದ್ದಾರೆ. ಷಟ್‍ಸ್ಥಲದಲ್ಲಿಯೇ ಕೊನೆಯದಾದ ಈ ಸ್ಥಲವು ಸಾಧಕನ ಕೊನೆಯ ಹಂತವಾಗಿದೆ. ಹೀಗಾಗಿ ಅನೇಕ ಶರಣರು ಈ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತೌಲನಿಕ ವಿವೇಚನೆ ಷಟ್‍ಸ್ಥಲಗಳನ್ನು ಕುರಿತು ಬಿಡಿಬಿಡಿಯಾಗಿ ವಿಶ್ಲೇಷಿಸಿರುವ ಶರಣರು, ಷಟ್‍ಸ್ಥಲದ ಪರಿಣಾಮವನ್ನು ಇಡಿಯಾಗಿಯೂ ಕಟ್ಟಿಕೊಟ್ಟಿದ್ದಾರೆ. ಭಕ್ತಸ್ಥಲದಿಂದ ಹಿಡಿದು ಐಕ್ಯಸ್ಥಲದವರೆಗೆ ಸಾಧಕನ ಸಾಧನೆ ಎಂತಹದೆಂಬುದನ್ನು ಹೇಳುತ್ತಲೇ, ಷಟ್‍ಸ್ಥಲದ ಮಹತ್ವವನ್ನು ತಿಳಿಸಿದ್ದಾರೆ.
ಮೆಲ್ಲಮೆಲ್ಲನೆ ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯನೆನಸಿಕೊಂಡು, ಷಟ್‍ಸ್ಥಲವನ್ನು ದಾಟಿ ನಿರವಯಸ್ಥಲವನೆಯ್ದ್ದುವೆನಯ್ಯಾ ಎಂದು ಬಸವಣ್ಣನವರು ಹೇಳಿದ್ದಾರೆ. ನಿರವಯಸ್ಥಲವೆಂಬ ಏಳನೇ ಸ್ಥಲವನ್ನು ಇದುವರೆಗೆ ಯಾರೂ ಹೇಳಿರಲಿಲ್ಲ. ಇಂತಹ ನಿರವಲಯ ಸ್ಥಲದ ಬಗೆಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. 16ನೇ ಶತಮಾನದಲ್ಲಿದ್ದ ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನದಲ್ಲಿಯೂ ಈ ಏಳನೇ ಸ್ಥಲದ ಬಗೆಗೆ ಪ್ರಸ್ತಾಪವಾಗಿದೆ. ತೋಂಟದ ಸಿದ್ಧಲಿಂಗ ಶಿವಯೋಗಿಗಳು ಬಸವಣ್ಣನವರಿಂದ ಪ್ರಭಾವಿತಗೊಂಡಿರುವ ವಚನಕಾರರಾಗಿದ್ದಾರೆ.
“ಭಕ್ತನೆಂತೆಂಬೆನಯ್ಯಾ? ಭವಿಯ ಸಂಗ ಬಿಡದನ್ನಕ್ಕ
ಮಾಹೇಶ್ವರನೆಂತೆಂಬೆನಯ್ಯಾ?ಪರಸ್ತ್ರೀ ಪರಧನದಾಸೆ ಬಿಡದನ್ನಕ್ಕ
ಪ್ರಸಾದಿಯಂತೆಂಬೆನಯ್ಯಾ? ಆದಿವ್ಯಾಧಿ ನಷ್ಟ್ಟವಾಗದನ್ನಕ್ಕ
ಪ್ರಾಣಲಿಂಗಿಯೆಂತೆಂಬೆನಯ್ಯ? ಪ್ರಾಣ ಸ್ವಸ್ಥಿರವಾಗದನ್ನಕ್ಕ
ಶರಣನೆಂತೆಂಬೆನಯ್ಯಾ? ಪಂಚೇಂದ್ರಿಯ ನಾಶವಾಗದನ್ನಕ್ಕ
ಐಕ್ಯನೆಂತೆಂಬೆನಯ್ಯಾ?ಜನನ ಮರಣ ವಿರಹಿತವಾಗದನ್ನಕ್ಕ”
-ಬಸವಣ್ಣ(ಸ.ವ.ಸಂ.1,ವ:510)
ಈ ವಚನದಲ್ಲಿ ಬಸವಣ್ಣನವರು, ಆರೂಸ್ಥಲಗಳಲ್ಲಿ ಸಾಧಕ ಪ್ರವೇಶಿಸಬೇಕಾದರೆ ಏನನ್ನು ಬಿಡಬೇಕು, ಹೇಗೆ ಸಾಧನೆ ಮಾಡಬೇಕೆಂಬುದನ್ನು ವಿವರಿಸಿದ್ದಾರೆ. ಭವಿಯ ಸಂಗಬಿಡದೆ, ಪರಸ್ತ್ರೀ-ಪರಧನದಾಸೆಯ ತೊರೆಯದೆ ಭಕ್ತಸ್ಥಲ ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.
ಭಕ್ತಸ್ಥಲದಲ್ಲಿ-ವಿಶ್ವಾಸ,ಮಾಹೇಶ್ವರಸ್ಥಲದಲ್ಲಿ-ನಿಷ್ಟೆ, ಪ್ರಸಾದಿಸ್ಥಲದಲ್ಲಿ-ಸಾವಧಾನ, ಪ್ರಾಣಲಿಂಗಿಸ್ಥಲದಲ್ಲಿ-ಸ್ವಾನುಭಾವ, ಶರಣಸ್ಥಲದಲ್ಲಿ-ಅರಿವು, ಐಕ್ಯಸ್ಥಲದಲ್ಲಿ-ನಿರ್ಭಾವ ಗುಣಗಳಿರುತ್ತವೆಂದು ಅಲ್ಲಮಪ್ರಭು ಹೇಳಿದ್ದಾರೆ. ‘ಕಾಗೆಯ ತಿಂದವನಲ್ಲದೆ ಭಕ್ತನಲ್ಲ, ಕೋಣನ ತಿಂದವನಲ್ಲದೆ ಭಕ್ತನಲ್ಲ’ ಎಂಬ ಅವರ ಇನ್ನೊಂದು ವಚನದಲ್ಲಿ ಷಟ್‍ಸ್ಥಲಗಳನ್ನು ಕುರಿತಾದ ಬೆಡಗಿನ ಭಾಷೆಯಿದೆ. ಕಾಗೆ-ಕೋಣ-ಕೋಡಗ-ನಾಯಿ ಈ ಮೊದಲಾದ ಪ್ರಾಣ ಗಳಲ್ಲಿ ಒಂದೊಂದು ರೀತಿಯ ಗುಣಸ್ವಭಾವಗಳಿವೆ. ಇದನ್ನು ತಿಳಿದುಕೊಂಡು ಪ್ರಾಣ ಗುಣವನ್ನೆಲ್ಲ ತೊರೆದು ಬಂದವನೇ ಷಟ್‍ಸ್ಥಲ ಸಾಧಕನಾಗುತ್ತಾನೆಂದು ಪ್ರಭು ತಿಳಿಸಿದ್ದಾರೆ. ‘ಅನುಭಾವವಿಲ್ಲದ ಷಟ್‍ಸ್ಥಲವು ಕಣ ್ಣಲ್ಲದ ಕುರುಡನಂತೆ’ ಎಂದು ಹೇಳಿರುವ ಪ್ರಭು, ಷಟ್‍ಸ್ಥಲ ಸಾಧಕ ಅನುಭಾವಿಯಾಗಿರಬೇಕೆಂದು ತಿಳಿಸಿದ್ದಾರೆ.
“ಸರ್ವಶೂನ್ಯ ಆದಿಅನಾದಿ ಭಕ್ತಸ್ಥಲ
ನಾದ ಬಿಂದು ಮಹೇಶ್ವರಸ್ಥಲ
ಕಳೆ ಬೆಳಗು ಪ್ರಸಾದಿಸ್ಥಲ
ಅರಿವುನಿರವಯವು ಪ್ರಾಣಲಿಂಗಿಸ್ಥಲ
ಜ್ಞಾನ ಸುಜ್ಞಾನ ಶರಣಸ್ಥಲ
ಭಾವವಿಲ್ಲದ ಬಯಲು ಅಗಮ್ಯದ ಐಕ್ಯಸ್ಥಲ.........”
-ಅಲ್ಲಮಪ್ರಭು(ಸ.ವ.ಸಂ.2,ವ:1582)
ಅಲ್ಲಮಪ್ರಭುಗಳು ಈ ವಚನದಲ್ಲಿ ಷಟ್‍ಸ್ಥಲಗಳ ವಿಶಿಷ್ಟತೆಯನ್ನು ಹೇಳಿದ್ದಾರೆ. ಬಯಲು ತತ್ವದಿಂದ ಪ್ರಾರಂಭವಾಗುವ ಇಲ್ಲಿಯ ಹೋಲಿಕೆಗಳು, ಮತ್ತೆ ಬಯಲು ತತ್ವದ ಮೂಲಕ ಮುಕ್ತಾಯಗೊಳ್ಳುತ್ತವೆ. ಒಂದೊಂದು ಸ್ಥಲವನ್ನು ದಾಟುತ್ತ ಒಂದೊಂದು ಮೆಟ್ಟಿಲನ್ನು ಏರುತ್ತ ಬೆಳೆದು ನಿಲ್ಲುವ ಇಲ್ಲಿಯ ಸಾಧಕನ ಪರಿ ಕುತೂಹಲಕಾರಿಯಾಗಿದೆ.
ಪೃಥ್ವಿಯಂತಹ ಭಕ್ತ, ಉದಕದಂತಹ ಮಾಹೇಶ್ವರ, ಅಗ್ನಿಯಂತಹ ಪ್ರಸಾದಿ, ವಾಯಿವಿನಂತಹ ಪ್ರಾಣಲಿಂಗಿ, ಆಕಾಶದಂತಹ ಶರಣ, ಎಂದು ಹೇಳಿರುವ ಚೆನ್ನಬಸವಣ್ಣನವರು ಪಂಚತತ್ವಗಳನ್ನು ಪಂಚಸ್ಥಲಗಳಲ್ಲಿ ಸಮನ್ವಯಗೊಳಿಸಿ ಹೇಳಿ ಕೊನೆಯದಾದ ಐಕ್ಯಸ್ಥಲವು ಪರಮಾತ್ಮ ಸ್ವರೂಪಿಯಾಗಿದೆಯೆಂದು ತಿಳಿಸಿದ್ದಾರೆ.
ಲಿಂಗಸ್ಥಲವನ್ನು ದಾಟಿದಾಗ ಭಕ್ತನಾಗುತ್ತಾನೆ, ಜಂಗಮಸ್ಥಲವನ್ನು ದಾಟಿದಾಗ ಶರಣನಾಗುತ್ತಾನೆ, ಗುರುಸ್ಥಲವನ್ನು ದಾಟಿದಾಗ ಐಕ್ಯನಾಗುತ್ತಾನೆಂದು ಹೇಳಿರುವ ಚೆನ್ನಬಸವಣ್ಣನವರು; ಭಕ್ತಿಯನ್ನರಿಯದೆ ಭಕ್ತರಾದೆವೆಂಬುವವರನ್ನು, ಭಾವಶುದ್ದವಿಲ್ಲದೆ ಮಾಹೇಶ್ವರರಾದೆವೆಂಬುವವರನ್ನು ವಿಡಂಬಿಸಿದ್ದಾರೆ.
“ಭಕ್ತನಾದರೆ ಕಿಂಕಿಲನಾಗಿರಬೇಕು
ಮಾಹೇಶ್ವರನಾದರೆ ಆದಿಅನಾದಿಯನರಿಯದಿರಬೇಕು
ಪ್ರಸಾದಿಯಾದರೆ ಒಡಲಗುಣವಿರಹಿತನಾಗಿರಬೇಕು
ಪ್ರಾಣಲಿಂಗಿಯಾದರೆ ಪ್ರಸಾದವಿಲ್ಲದಿರಬೇಕು
ಶರಣನಾದರೆ ನಿಸ್ಸಂಗಿಯಾಗಿರಬೇಕು
ಐಕ್ಯನಾದರೆ ಬಯಲು ಬಯಲಾಗಿರಬೇಕು”
-ಚೆನ್ನಬಸವಣ್ಣ(ಸ.ವ.ಸಂ.3,ವ:713)
ಷಟ್‍ಸ್ಥಲ ಸಾಧಕನಾಗಬೇಕಾದರೆ, ಏನಾಗಬೇಕು ಹೇಗಿರಬೇಕೆಂಬುದನ್ನು ಚೆನ್ನಬಸವಣ್ಣನವರು ಈ ವಚನದಲ್ಲಿ ವಿವಿರಿಸಿದ್ದಾರೆ. ಚೆನ್ನಬಸವಣ್ಣನವರಿಗೆ ಷಟ್‍ಸ್ಥಲ ಚಕ್ರವರ್ತಿಯೆಂದು ಕರೆಯುತ್ತಿದ್ದರು. ಬಸವಣ್ಣನವರ ಆಶಯದಂತೆ ಹೊಸ ಷಟ್‍ಸ್ಥಲಗಳನ್ನು ಕಟ್ಟಿಕೊಡುವಲ್ಲಿ ಇವರೂ ಪ್ರಮುಖ ಪಾತ್ರವಹಿಸಿದರು. ಹೀಗಾಗಿ ಷಟ್‍ಸ್ಥಲದ ವಿಷಯ ಬಂದಾಗ ಚೆನ್ನಬಸವಣ್ಣನವರನ್ನು ಸ್ಮರಿಸಲೇಬೇಕಾಗುತ್ತದೆ.
ಭಕ್ತಸ್ಥಲ ಬಸವಣ್ಣನಿಗಾಯಿತ್ತು, ಮಾಹೇಶ್ವರಸ್ಥಲ ಚೆನ್ನಬಸವಣ್ಣನಿಗಾಯಿತ್ತು, ಇವೆಲ್ಲ ಮೀರಿದ ಸ್ಥಲ ಅಲ್ಲಮಪ್ರಭುವಿಗಾಯಿತ್ತು. ಎಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು: ‘ಷಟ್‍ಸ್ಥಲವೆಂಬ ಷಣ್ಮುಖ ಮುದ್ರೆಯೊಳು ನವವಿಧ ಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ?’ ಎಂದು ಪ್ರಶ್ನಿಸಿದ್ದಾರೆ.
“ಭಕ್ತನಾದಡೇಕೆ ಭವದ ಬೇರು?
ಮಾಹೇಶ್ವರನಾದಡೇಕೆ ಪ್ರಳಯಕ್ಕೊಳಗಿಹ?
ಪ್ರಸಾದಿಯಾದಡೇಕೆ ಇಂದ್ರಿಯವೈದ ಅನಿಗ್ರಹಿಯಾಗಿಹ?
ಪ್ರಾಣಲಿಂಗಿಯಾದಡೇಕೆ ಉತ್ಪತ್ತಿ ಸ್ಥಿತಿ ಲಯಕ್ಕೊಳಗಾಗಿಹ?
ಶರಣನಾದಡೇಕೆ ಉಪಬೋಧೆಗೊಳಗಾಗಿಹ?
ಐಕ್ಯನಾದಡೇಕೆ ಇಹ-ಪರವನರಿದಿಹ?........”
-ಸಿದ್ಧರಾಮ(ಸ.ವ.ಸಂ.4,ವ:614)
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಸುವ ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು, ಷಟ್ ಸ್ಥಲವೆಂಬುದು ಅಭೇದ್ಯವೆಂದು ತಿಳಿಸಿದ್ದಾರೆ. ಷಟ್‍ಸ್ಥಲ ಸಾಧಕನಿಗೆ ಭವವಿಲ್ಲ, ಪ್ರಳಯವಿಲ್ಲವೆಂದು ಈ ವಚನ ಹೇಳುತ್ತದೆ. ಭಕ್ತಸ್ಥಲಕ್ಕೆ ವಿಶ್ವಾಸ, ಶ್ರದ್ದೆ, ಸನ್ಮಾರ್ಗ ಇರಬೇಕೆಂದು ಹೇಳಿರುವ ಅವಸರದ ರೇಕಣ್ಣನವರು, ಷಟ್‍ಸ್ಥಲಗಳನ್ನು ಬೇರೆ ಬೇರೆ ವಸ್ತುಗಳಿಗೆ ಹೋಲಿಸುವುದನ್ನು ವಿರೋಧಿಸಿದ್ದಾರೆ.
“ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು
ಪ್ರಸಾದಿಸ್ಥಲ ಜ್ಞಾನರೂಪು, ಮಾಹೇಶ್ವರಸ್ಥಲ ಆತ್ಮರೂಪು
ಶರಣಸ್ಥಲ ಜ್ಞೇಯರೂಪು, ಐಕ್ಯಸ್ಥಲ ಸರ್ವಮಯಜ್ಞಾನ ರೂಪು”
-ಅವಸರದ ರೇಕಣ್ಣ(ಸ.ವ.ಸಂ.6,ವ:658)
ಎಂದು ಹೇಳಿರುವ ರೇಕಣ್ಣನವರು ಆಗಮ-ಉಪನಿಷತ್ತುಗಳನ್ನು ಅಧ್ಯಯನ ಮಾಡಿದ್ದರೆಂಬುದು ಅವರ ವಚನಗಳಿಂದ ತಿಳಿದುಬರುತ್ತದೆ. ಜೀವ-ಆತ್ಮಗಳಿಗೆ ಸಂಬಂಧಿಸಿದ ಸಮಾಗವನ್ನಿಲ್ಲಿ ಕಾಣಬಹುದಾಗಿದೆ. ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲವೆಂದು ಹೇಳಿರುವ ಆದಯ್ಯನವರು ನಾಸ್ತಿಯೆಂಬ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದಾರೆ. ಆಚಾರಲಿಂಗವನ್ನು ಕಳೆದುಕೊಳ್ಳುವದಲ್ಲ, ಆಚಾರಲಿಂಗವನ್ನು ಗೆಲ್ಲುವದು ಎಂದರ್ಥೈಸಿಕೊಳ್ಳಬೇಕಾಗುತ್ತದೆ.
“ಬೀಜವೃಕ್ಷ ಯೋಗದಂತೆ ಭಕ್ತಸ್ಥಲ
ಜಲಮೌಕ್ತಿಕ ಯೋಗದಂತೆ ಮಹೇಶ್ವರಸ್ಥಲ
ಅನಲಕಾಷ್ಠ ಯೋಗದಂತೆ ಪ್ರಸಾದಿಸ್ಥಲ
ಕ್ರೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ
ಕರಕವಾರಿ ಯೋಗದಂತೆ ಶರಣಸ್ಥಲ
ಶಿಖಿಕರ್ಪುರ ಯೋಗದಂತೆ ಐಕ್ಯಸ್ಥಲ...........”
-ಆದಯ್ಯ(ಸ.ವ.ಸಂ.6,ವ:1039)
ಈ ವಚನದ ಪ್ರತಿಸಾಲಿನ ನಡುವೆ ‘ಯೋಗದಂತೆ’ ಎಂಬ ಪದ ಪುನರಾವರ್ತನೆಗೊಂಡಿದೆ. ಅಂದರೆ ಷಟ್‍ಸ್ಥಲದ ನಿಜಾಚರಣೆಯೇ ಶಿವಯೋಗವಾಗಿದೆ. ಹೀಗಾಗಿ ಪತಂಜಲಿಯ ಯೋಗಕ್ಕೂ, ಶರಣರು ಹೇಳಿರುವ ಶಿವಯೋಗಕ್ಕೂ ತುಂಬ ವ್ಯತ್ಯಾಸವಿದೆ.
ಅಚಾರಲಿಂಗಕರ್ಪಿತ ಭಕ್ತ, ಗುರುಲಿಂಗಕರ್ಪಿತ ಮಹೇಶ್ವರ, ಶಿವಲಿಂಗಕರ್ಪಿತ ಪ್ರಸಾದಿ, ಜಂಗಮಲಿಂಗಕರ್ಪಿತ, ಪ್ರಾಣಲಿಂಗಿ, ಪ್ರಸಾದಲಿಂಗಕರ್ಪಿತ ಶರಣ, ಮಹಾಲಿಂಗರ್ಪಿತ ಐಕ್ಯ ಎಂದು ವಿವರವಾಗಿ ತಿಳಿಸಿರುವ ಉರಿಲಿಂಗಪೆದ್ದಿಗಳು, ಯಾವ ಯಾವ ಸ್ಥಲ ಯಾರ್ಯಾರಿಗೆ ಸಾಧ್ಯವಾಯಿತ್ತೆಂಬುದನ್ನು ತಮ್ಮ ಇನ್ನೊಂದು ವಚನದಲ್ಲಿ ವಿವರಿಸಿದ್ದಾರೆ.
“ಭಕ್ತಸ್ಥಲ ಸಾಧ್ಯವಾಯಿತ್ತು ಸಂಗನಬಸವರಾಜ ದೇವರಿಗೆ
ಮಾಹೇಶ್ವರಸ್ಥಲ ಸಾಧ್ಯವಾಯಿತ್ತು ಮಡಿವಾಳ ಮಾಚಿತಂದೆಗಳಿಗೆ
ಪ್ರಸಾದಿಸ್ಥಲ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಗಳಿಗೆ
ಪ್ರಾಣಲಿಂಗಿಸ್ಥಲ ಸಾಧ್ಯವಾಯಿತ್ತು ಅನಿಮಿಷ ದೇವರಿಗೆ
ಶರಣಸ್ಥಲ ಸಾಧ್ಯವಾಯಿತ್ತು ಅಲ್ಲಮಪ್ರಭು ದೇವರಿಗೆ
ಐಕ್ಯಸ್ಥಲ ಸಾಧ್ಯವಾಯಿತ್ತು ಅಜಗಣ್ಣಗಳಿಗೆ..........”
-ಉರಿಲಿಂಗಪೆದ್ದಿ(ಸ.ವ.ಸಂ.6,ವ:1476)
ಈ ಅಂಕಣದ ಹಿಂದಿನ ಬರಹಗಳು:
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ
ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.