ಷಟ್‍ಸ್ಥಲಗಳು

Date: 03-01-2023

Location: ಬೆಂಗಳೂರು


“13ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವೀರಶೈವವು, ಶೈವ ಸಿದ್ಧಾಂತದಿಂದ ಸಂಪೂರ್ಣವಾಗಿ ಬಿಡಿಸಿಕೊಂಡಿಲ್ಲವೆಂಬುದನ್ನು ಈ ವಚನದಲ್ಲಿ ನೋಡಬಹುದಾಗಿದೆ. ಹೀಗೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಷಟ್‍ಸ್ಥಲಗಳಿಗೂ, ಶೈವ-ವೀರಶೈವ ಧರ್ಮಗಳಲ್ಲಿ ಉಲ್ಲೇಖಗೊಂಡಿರುವ ಷಟ್ ಸ್ಥಲಗಳಿಗೂ ತುಂಬ ವ್ಯತ್ಯಾಸವಿದೆ. ಇವು ಒಂದಕ್ಕೊಂದು ವಿರುದ್ಧವಾದವುಗಳಾಗಿವೆ. ಇದನ್ನು ಗಮನಿಸಿದ ಅಂಬಿಗರ ಚೌಡಯ್ಯನಂತಹ ವಚನಕಾರರು ವೀರಶೈವವನ್ನು ಕುರಿತು ವಿಡಂಬಿಸಿದ್ದಾರೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಷಟ್‍ಸ್ಥಲಗಳು’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಬಸವಾದಿ ಶರಣರು ಬರುವದಕ್ಕಿಂತ ಮೊದಲೇ ಷಟ್‍ಸ್ಥಲಗಳ ಆಚರಣೆಗಳಿದ್ದವೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆಗಮಗಳಲ್ಲಿ ಕೆಲವು ಉಲ್ಲೇಖಗಳಿವೆ. ಷಟ್ ಎಂದರೆ ಆರು, ಸ್ಥಲವೆಂದರೆ ಹಂತ ಎಂದರ್ಥೈಸಿಕೊಳ್ಳಬೇಕು. ಪರಬ್ರಹ್ಮತತ್ವಕ್ಕೆ “ಸ್ಥಲ”ವೆಂದು ಕರೆಯಲಾಗಿದೆ. ಸ್ಥಿತಿ ಮತ್ತು ಲಯಗಳನ್ನು ಸೂಚಿಸುವ ಪದವೇ ಸ್ಥಲವಾಗಿದೆಯೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಆತ್ಮ-ಪರಮಾತ್ಮನಾಗಲು ಆತ್ಮಸಾಧನೆ ಅಗತ್ಯವಾದುದು. ಆತ್ಮಸಾಧನೆಯ ಆರು ಹಂತಗಳಾಗಿ ಲಿಂಗಾಯತ ಧರ್ಮದಲ್ಲಿ ಷಟ್‍ಸ್ಥಲಗಳು ಕಾಣ ಸಿಕೊಂಡಿವೆ. ಪಾರಮೇಶ್ವರಾಗಮದಲ್ಲಿ ಬರುವ ಈ ಶ್ಲೋಕವನ್ನು ಗಮನಿಸಬಹುದಾಗಿದೆ.

“ಶಿವಭಕ್ತಿ ವಿಹೀನಾಯ ದುರಾಚಾರ ರತಾಯ ಚ
ನಾಸ್ರಿಕಾಯ ನ ದುಷ್ಟಾಯ ವಕ್ತವ್ಯ: ಷಟ್ಸಲ್ಥ ಕ್ರಮ://

ಪಾರಮೇಶ್ವರಾಗಮ(ಪಟಲರ್:,ಶ್ಲೋಕ.4)

ಪಾರಮೇಶ್ವರಾಗಮದಲ್ಲಿ ಬಂದಿರುವ ಷಟ್‍ಸ್ಥಲದ ಪರಿಕಲ್ಪನೆ ಬೇರೆಯಾಗಿದೆ. ಶರಣರ ಷಟ್‍ಸ್ಥಲದ ಪರಿಕಲ್ಪನೆ ಬೇರೆಯಾಗಿದೆ. ಈ ಷಟ್‍ಸ್ಥಲ ಸಿದ್ದಾಂತವನ್ನು ಶಿವಭಕ್ತಿ ಇಲ್ಲದವರಿಗೆ, ನಾಸ್ತಿಕರಿಗೆ, ದುರಾಚಾರಿಗಳಿಗೆ ಬೋಧಿಸಬಾರದೆಂದು ಆಗಮಗಳಲ್ಲಿ ಹೇಳಲಾಗಿದೆ. ಆದರೆ ಶರಣರಲ್ಲಿ ಷಟ್‍ಸ್ಥಲಾಚರಣೆಗೆ ಎಲ್ಲ ಜಾತಿ-ಜನಾಂಗದವರಿಗೂ ಅವಕಾಶವಿದೆ. ಶರಣರು ಬರುವದಕ್ಕಿಂತ ಮೊದಲಿದ್ದ ಷಟ್‍ಸ್ಥಲಗಳ ಆರ್ಥ ಬೇರೆಯಾಗಿದೆ. ಶರಣರು ಕಟ್ಟಿದ ಲಿಂಗಾಯತ ಧರ್ಮದಲ್ಲಿ ಬರುವ ಷಟ್‍ಸ್ಥಲಗಳ ಅರ್ಥ ಬೇರೆಯಾಗಿದೆ.

ಹೀಗಾಗಿ ಷಟ್‍ಸ್ಥಲ ಪದವು ಪ್ರಾಚೀನವಾಗಿದ್ದರೂ, ಅದೊಂದು ವೈಜ್ಞಾನಿಕ ಆಚರಣೆಯಾಗಿ ಬೆಳೆದದ್ದು 12 ನೇ ಶತಮಾನದಲ್ಲಿ ಶರಣರ ಕಾಲಕ್ಕೆಂಬುದನ್ನು ಮರೆಯಬಾರದು. ಲಿಂಗಾಯತ ಧರ್ಮದಲ್ಲಿ ಷಟ್‍ಸ್ಥಲಗಳೇ ಆತ್ಮವಾಗಿವೆ. ಈ ಧರ್ಮದಲ್ಲಿ ಷಟ್‍ಸ್ಥಲಕ್ಕೆ ಮಹತ್ವದ ಸ್ಥಾನವಿದೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಇವೇ ಷಟ್‍ಸ್ಥಲಗಳಾಗಿವೆ.

ಶರಣರು ಬರುವದಕ್ಕಿಂತ ಮೊದಲು ಅಂದರೆ ಬಸವ ಪೂರ್ವಯುಗದಲ್ಲಿ ಹಾಗೂ 12ನೇ ಶತಮಾನದ ನಂತರ ಬಸವೋತ್ತರ ಯುಗದಲ್ಲಿ ಬರುವ ಷಟ್‍ಸ್ಥಲಗಳ ಪರಿಕಲ್ಪನೆಗಳು ಭಿನ್ನವಾಗಿವೆ. ಬಸವ ಪೂರ್ವ ಯುಗದಲ್ಲಿ ಈ ಸ್ಥಲಗಳಿಗೆ ವೈಜ್ಞಾನಿಕ ನೆಲೆಗಟ್ಟಿರಲಿಲ್ಲ. ಅಲ್ಲಲ್ಲಿ ಇವುಗಳ ಉಲ್ಲೇಖವಿದೆಯೇ ಹೊರತು, ಇವುಗಳ ಸರಿಯಾದ ಉದ್ದೇಶ, ಮತ್ತು ಸಮರ್ಪಕವಾದ ಆಚರಣೆ ಇರಲಿಲ್ಲ. ಇನ್ನು ಬಸವೋತ್ತರ ಯುಗದಲ್ಲಿ 13ನೇ ಶತಮಾನದ “ಸಿದ್ಧಾಂತ ಶಿಖಾಮಣ ” ಕೃತಿಯಲ್ಲಿ ಷಟ್‍ಸ್ಥಲಗಳ ಉಲ್ಲೇಖವಿದೆ. ಆದರೆ ಅವುಗಳಿಗೂ ಬಸವಾದಿ ಶರಣರು ಹೇಳಿದ ಷಟ್‍ಸ್ಥಲಗಳಿಗೂ ಸಂಬಂಧವೇ ಇಲ್ಲದಂತಾಗಿದೆ. ಶೈವಧರ್ಮದಲ್ಲಿದ್ದ ಷಟ್‍ಸ್ಥಲಗಳು ಹೇಗಿವೆಯೆಂಬುದನ್ನು ತೋಂಟದ ಸಿದ್ದಲಿಂಗ ಶಿವಯೋಗಿಯ ವಚನದಲ್ಲಿ ಕಾಣಬಹುದಾಗಿದೆ.

“ಆದಿಶೈವ, ಮಹಾಶೈವ, ಅನುಶೈವ, ಅಂತರಶೈವ
ಅಂತ್ಯಶೈವ, ಪ್ರವರಶೈವವೆಂಬ ಈ ಆರು ಶೈವದ ನೀತಿಯಲ್ಲ,
ಇಂತಿವೆಲ್ಲವೂ ಉತ್ಪತ್ತಿ ಸ್ಥಿತಿ-ಲಯಗಳಿಗೆ ಕರ್ತ
ಶುದ್ಧ-ವಿಶೇಷ-ನಿರ್ವಾಣವೆಂಬ ವೀರಶೈವ ಮೂರು ತೆರನಾಗಿಪ್ಪುದು
ಆ ಮೂರು ತಾನೆ ಆರು ತೆರನಾಗಿ ತೋರಿತ್ತದೆಂತೆಂದಡೆ
ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗ, ಶರಣ, ಐಕ್ಯ,-ಎಂದು”
ತೋಂಟದ ಸಿದ್ದಲಿಂಗಶಿವಯೋಗಿ(ಸ.ವ.ಸಂ.11,ವರ್:)

ಆರು ಪ್ರಕಾರದ ಶೈವರಿದ್ದರೆಂದು ತೋಂಟದ ಸಿದ್ದಲಿಂಗ ಶಿವಯೋಗಿ ಈ ವಚನದಲ್ಲಿ ತಿಳಿಸಿದ್ದಾರೆ. ಈ ಆರು ಪ್ರಕಾರದ ಶೈವರ ಹೆಸರುಗಳೇ ಭಕ್ತ, ಮಹೇಶ್ವರ, ಪ್ರಸಾದಿ, ಪಾಣಲಿಂಗಿ, ಶರಣ, ಐಕ್ಯ ಎಂಬವುಗಳಾಗಿವೆ. ಆದುದರಿಂದ ಇವು ಷಟ್‍ಸ್ಥಲ ಸಿದ್ದಾಂತಗಳಾಗಿರದೆ, ಶೈವ ಪಂಗಡಗಳ ಆರು ಹೆಸರುಗಳಾಗಿದ್ದುವೆಂಬುದು ಬಹುಮುಖ್ಯ ವಿಚಾರವಾಗುತ್ತದೆ. ಶೈವಧರ್ಮದ ಈ ಆರು ಹೆಸರುಗಳೇ ಮುಂದೆ 15ನೇ ಶತಮಾನದಲ್ಲಿ ಮುಂದುವರೆದ್ದನ್ನು ಗಮನಿಸಬಹುದಾಗಿದೆ. ಪ್ರಥಮ ಶೂನ್ಯ ಸಂಪಾದನೆಯನ್ನು ರಚಿಸಿರುವ ಸಂಕಲನಕಾರನ ಹೆಸರು ಶಿವಗಣಪ್ರಸಾದಿ ಎಂಬುದಾಗಿದೆ. ಪ್ರಸಾದಿಯೆಂಬುದು ಇಲ್ಲಿ ಒಬ್ಬ ವ್ಯಕ್ತಿಯ ಹೆಸರಾಗಿದೆಯೇ ಹೊರತು ಅದು ಷಟ್‍ಸ್ಥಲ ಸಿದ್ದಾಂತವಾಗಿಲ್ಲ. ಹೀಗಾಗಿ ಶೈವ ಧರ್ಮದಲ್ಲಿ ಕಾಣ ಸಿಕೊಂಡಿರುವ ಈ ಹೆಸರುಗಳು ಸಿದ್ಧಾಂತಗಳಾಗಿರದೆ, ಶೈವ ಪಂಥಗಳ ಬೇರೆ ಬೇರೆ ಹೆಸರುಗಳಾಗಿವೆ. ಮುಂದೆ 15ನೇ ಶತಮಾನದಲ್ಲಿ ಇದೇ ಸಂಪ್ರದಾಯ ಮುಂದುವರೆದದ್ದನ್ನು ಕಾಣಬಹುದಾಗಿದೆ. ಈ ಆರು ಪಂಗಡದ ವೀರಶೈವರಿಗೆ ಷಟ್‍ಸ್ಥಲದ ವೀರಶೈವರೆಂದು ಕರೆಯುತ್ತಿದ್ದರೆಂದು ಈ ವಚನಕಾರ ತನ್ನ ವಚನದ ಕೊನೆಯಲ್ಲಿ ತಿಳಿಸಿದ್ದಾರೆ. ಶೈವ ಮತ್ತು ವೀರಶೈವ ಧರ್ಮಗಳು ಈ ವಿಷಯದಲ್ಲಿ ಒಂದೇ ಸಂಪ್ರದಾಯಕ್ಕೆ ಸೇರಿದ್ದನ್ನು ಗಮನಿಸಬಹುದಾಗಿದೆ. ಬಸವಾದಿ ಶರಣರ ನಂತರ ಬದುಕಿದ್ದ ಅರಿವಿನ ಮಾರಿತಂದೆಯಂತಹ ವಚನಕಾರರು ಇದರ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ.

“ವೀರಶೈವ ಗುರುವಾಗಿ ಶುದ್ಧಶೈವಕ್ಕೆ ಹೊರಗಾಗಬೇಕು
ಶುದ್ಧಶೈವ ಗುರುವಾಗಿ ಮಾರ್ಗಶೈವಕ್ಕೆ ಹೊರಗಾಗಬೇಕು
ಮಾರ್ಗಶೈವ ಗುರುವಾಗಿ ಪೂರ್ವಶೈವಕ್ಕೆ ಹೊರಗಾಗಬೇಕು”
-ಅರಿವಿನ ಮಾರಿತಂದೆ(ಸ.ವ.ಸಂ.6,ವ:390)

13ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ವೀರಶೈವವು, ಶೈವ ಸಿದ್ಧಾಂತದಿಂದ ಸಂಪೂರ್ಣವಾಗಿ ಬಿಡಿಸಿಕೊಂಡಿಲ್ಲವೆಂಬುದನ್ನು ಈ ವಚನದಲ್ಲಿ ನೋಡಬಹುದಾಗಿದೆ. ಹೀಗೆ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಷಟ್‍ಸ್ಥಲಗಳಿಗೂ, ಶೈವ-ವೀರಶೈವ ಧರ್ಮಗಳಲ್ಲಿ ಉಲ್ಲೇಖಗೊಂಡಿರುವ ಷಟ್ ಸ್ಥಲಗಳಿಗೂ ತುಂಬ ವ್ಯತ್ಯಾಸವಿದೆ. ಇವು ಒಂದಕ್ಕೊಂದು ವಿರುದ್ಧವಾದವುಗಳಾಗಿವೆ. ಇದನ್ನು ಗಮನಿಸಿದ ಅಂಬಿಗರ ಚೌಡಯ್ಯನಂತಹ ವಚನಕಾರರು ವೀರಶೈವವನ್ನು ಕುರಿತು ವಿಡಂಬಿಸಿದ್ದಾರೆ

“..............ಶಾಸ್ತ್ರದಲ್ಲಿ ಸಂಪನ್ನನೆಂದು
ಕ್ರಿಯೆಯಲ್ಲಿ ವೀರಶೈವನೆಂದು, ನಿರಾಭಾರಿಯೆಂದು
ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು
ಮಾನ್ಯವ ಸಂಪಾದಿಸಿಕೊಂಡು, ಅಶನಕ್ಕಾಶ್ರಯವಾಗಿ
ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ
ಸರ್ವವೂ ಎನಗೆಬೇಕೆಂದು, ತಮೋಗುಣದಿಂದ ದ್ರವ್ಯವ ಕೂಡಿಸಿ
ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, ಕೌಪೀನವ ಕಟ್ಟಿ
ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು
ಇಂತಪ್ಪ ವಿರಕ್ತರ ಪೂಜೆಯ ಮಾಡುವದಕ್ಕಿಂತ
ಕರೇನಾಯಿಯ ತಂದು ಪೂಜೆ ಮಾಡುವುದು ಲೇಸು ಕಂಡಯ್ಯಾ
-ಅಂಬಿಗರ ಚೌಡಯ್ಯ(ಸ.ವ.ಸಂ.6,ವ:126)

ಅರಿವಿನ ಮಾರಿತಂದೆ ಮತ್ತು ಅಂಬಿಗರ ಚೌಡಯ್ಯನವರಂತಹ ಇನ್ನೂ ಅನೇಕ ವಚನಕಾರರು 13ನೇ ಶತಮಾನದಲ್ಲಿಯೂ ಬದುಕಿದ್ದರು. ಬಸವಣ್ಣನ ನಂತರ ಕಲ್ಯಾಣದಲ್ಲಿ ನಡೆದ ಬದಲಾವಣೆಗಳನ್ನು ಈ ಶರಣರು ಕಂಡಿದ್ದಾರೆ. ಹೀಗಾಗಿ ವಿರಕ್ತರನ್ನು, ಅವರ ಡಾಂಭಿಕತನವನ್ನು ಅವರು ಕಟ್ಟಿದ ಮಠ-ಮಾನ್ಯಗಳನ್ನು ಕುರಿತು ವಿಡಂಬನೆ ಮಾಡಿದ್ದಾರೆ. ಅಮುಗೆರಾಯಮ್ಮ-ಸತ್ಯಕ್ಕನಂತಹ ಅನೇಕ ವಚನಕಾರ್ತಿಯರು ಬಸವಣ್ಣನವರು ಕಾಲವಾದ ನಂತರವೇ ಬಂದರು. ಹೀಗಾಗಿ ಅವರು ನಂತರದಲ್ಲಾದ ಬದಲಾವಣೆಗಳನ್ನು ಗಮನಿಸಿ ಕಟುವಾಗಿ ವಿಡಂಬಿಸಿದ್ದಾರೆ. ಬಸವಣ್ಣನವರ ಕಾಲಕ್ಕೆ ಮಠಗಳಿರಲಿಲ್ಲ, ಮಹಾಮನೆಗಳಿದ್ದವು. ಬಸವಕ್ರಾಂತಿಯ ನಂತರ ಎಲ್ಲವೂ ತದ್ವಿರುದ್ಧವಾದವು. ನೂರೊಂದು ವಿರಕ್ತ ಮಠಗಳು ಹುಟ್ಟಿಕೊಂಡವು. ಕಾಯಕದ ಸ್ಥಾನದಲ್ಲಿ ಪೂಜೆ ಬಂದಿತು. ಕಾಯಕ ಸಂಸ್ಕøತಿ ಹೊರಟು ಹೋಗಿ ಪೂಜೆಯ ಸಂಸ್ಕøತಿ ಬೆಳೆದು ನಿಂತಿತು. ಬಸವಣ್ಣನವರ ಕಾಲಕ್ಕೆ ಕಾಯಕವೇ ಪೂಜೆಯಾಗಿತ್ತು. ಮುಂದೆ 13ನೇ ಶತಮಾನದಲ್ಲಿ ಪೂಜೆಯೇ ಕಾಯಕವಾಯಿತು.

“ಸರ್ವಾಗಮ, ಶ್ರುತಿ, ಸ್ಮøತಿ, ಪುರಾಣ, ಪಾಠಕನಾದಡೇನು?
ಸರ್ವಮಂತ್ರ ತಂತ್ರ ಸಿದ್ಧಿಮರ್ಮವರಿತಡೇನು?
ನಿತ್ಯ ಪಾದೋದಕÀ ಪ್ರಸಾದ ಸೇವನೆಯಿಲ್ಲ
ಇದೇತರ ವೀರಶೈವ ವ್ರತ, ಇದೇತರ ಜನ್ಮ ಸಾಫಲ್ಯ,
ಅಮುಗೇಶ್ವರ ಲಿಂಗವೆ?”
-ಅಮುಗೆ ರಾಯಮ್ಮ(ಸ.ವ.ಸಂ5, ವ:699)

ಶರಣರ ಕ್ರಾಂತಿಯ ನಂತರ ಬದುಕುಳಿದಿದ್ದ ಅನೇಕ ವಚನಕಾರರು ವೀರಶೈವ ಧರ್ಮದ ಸಾಂಪ್ರದಾಯಿಕ ಗುಣವನ್ನು ವಿರೋಧಿಸಿದ್ದಾರೆ. ಲಿಂಗಾಯತಧರ್ಮದಲ್ಲಿದ್ದ ಷಟ್‍ಸ್ಥಲಗಳ ನಿಜವಾದ ಅರ್ಥ ಸಾಧ್ಯತೆಗಳು ಹೊರಟು ಹೋದವು. ಬಸವಣ್ಣನ ನಂತರ ಹುಟ್ಟಿಕೊಂಡ ವೀರಶೈವವು, ಶೈವಮಾರ್ಗವನ್ನೇ ಅನುಸರಿಸಿತು. ಇದನ್ನು ಕಂಡು ದು:ಖಪಟ್ಟ ಅಳಿದುಳಿದ ಶರಣರು ತಮಗಾದ ಕೆಲವು ಸಂಕಟಗಳನ್ನು ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಹೀಗಾಗಿ ಬಸವಣ್ಣನವರ ನಂತರದ ವಚನಕಾರರ ವಚನಗಳಲ್ಲಿ ಈ ವೀರಶೈವ ಪದ ಕಾಣ ಸಿಕೊಂಡಿದೆಯೇ ಹೊರತು ದಾಸಿಮಯ್ಯ-ಬಸವಣ್ಣ-ಅಲ್ಲಮ-ಚೆನ್ನಬಸವಣ್ಣ ಈ ಮೊದಲಾದ ಹಿರಿಯ ವಚನಕಾರರ ಮೂಲ ವಚನಗಳಲ್ಲಿ ವೀರಶೈವ ಪದ ಬಳಕೆಯಾಗಿಲ್ಲ.

ಬಸವಕ್ರಾಂತಿಯ ನಂತರ ಹುಟ್ಟಿಕೊಂಡ ವೀರಶೈವ ಧರ್ಮವು ಬಸವಾದಿ ಶರಣರ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿತು. ಜಂಗಮ ಪುರೋಹಿತಶಾಹಿಯ ಕೈಗೊಂಬೆಯಾಗಿ ಬೆಳೆದ ಈ ಧರ್ಮವು ಅಷ್ಟಾವರಣ, ಷಟ್‍ಸ್ಥಲ, ಪಂಚಾಚಾರದಂತಹ ಸಿದ್ಧಾಂತಗಳ ಮೂಲ ಉದ್ದೇಶವನ್ನೇ ಮರೆತು ಬಿಟ್ಟಿತು. ಬಸವಪೂರ್ವ ಯುಗದ ಪರಿಸ್ಥಿತಿ ಒಂದು ರೀತಿಯ ಭಯಾನಕ ವಾತಾವರಣವನ್ನು ಹೊಂದಿದ್ದರೆ, ಬಸವೋತ್ತರ ಯುಗದ ಪರಿಸ್ಥಿತಿ ಮತ್ತೊಂದು ರೀತಿಯ ಅಪಾಯಕ್ಕೆ ಸಿಲುಕಿಕೊಂಡಿತು. ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಷಟ್‍ಸ್ಥಲಗಳನ್ನು ಅಧ್ಯಯನ ಮಾಡಬೇಕಾಗಿದೆ.

- ಬಸವರಾಜ ಸಬರದ

ಈ ಅಂಕಣದ ಹಿಂದಿನ ಬರಹಗಳು:
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...