ಶರಣಸ್ಥಲ

Date: 13-02-2023

Location: ಬೆಂಗಳೂರು


“ಬಸವಣ್ಣನವರು ಶರಣಸ್ಥಲವನ್ನು ಕುರಿತು ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ, ಉಣ್ಣುವ ಬಟ್ಟಲು ಕಂಚಿನಿಂದ ಮಾಡಿರುತ್ತದೆ, ನೋಡುವ ದರ್ಪಣವನ್ನೂ ಕಂಚಿನಿಂದ ಮಾಡಿರುತ್ತದೆ. ಆದರೆ ಉಣ್ಣುವ ಬಟ್ಟಲಿನಲ್ಲಿ ಮುಖ ಕಾಣ ಸುವುದಿಲ್ಲ, ದರ್ಪಣದಲ್ಲಿ ಮುಖ ಕಾಣ ಸುತ್ತದೆ. ಇವೆರಡಕ್ಕೂ ಕಂಚೇ ಮೂಲ ಕಾರಣವಾದರೂ, ಉಪಯೋಗದಲ್ಲಿ ಬೇರೆ ಬೇರೆಯಾಗಿವೆ,” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಶರಣಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಶರಣಸ್ಥಲವು ಪಂಚಾಚಾರಗಳಲ್ಲಿ ಐದನೇ ಸ್ಥಲವಾಗಿದೆ. ಭಕ್ತನ ಕೊನೆಯ ಹಂತದ ಸಾಧನೆಯಾದಾಗ ಶರಣಸ್ಥಲ ಕಾಣ ಸಿಕೊಳ್ಳುತ್ತದೆ. ಭಕ್ತ-ಮಹೇಶಸ್ಥಲಗಳು ತ್ಯಾಗಾಂಗದಲ್ಲಿದ್ದರೆ, ಪ್ರಸಾದಿ-ಪ್ರಾಣಲಿಂಗಿಸ್ಥಲಗಳು ಭೋಗಾಂಗದಲ್ಲಿರುತ್ತವೆ. ಶರಣ ಮತ್ತು ಐಕ್ಯಸ್ಥಲಗಳು ಯೋಗಾಂಗದಲ್ಲಿರುತ್ತವೆ. ಪಾರಮೇಶ್ವರಾಗಮದ ಆರನೇ ಪಟಲದಲ್ಲಿ ಶರಣಸ್ಥಲದ ಬಗೆಗೆ ಪ್ರಸ್ತಾಪಿಸಲಾಗಿದೆ. ಆದರೆ ಅಲ್ಲಿಯ ಶರಣಸ್ಥಲಕ್ಕೂ, ಬಸವಾದಿ ಶರಣರು ಹೇಳಿರುವ ಶರಣಸ್ಥಲಕ್ಕೂ ತುಂಬ ವ್ಯತ್ಯಾಸವಿದೆ. ಶಿವನಿತ್ಯತ್ತ್ವದಿಂದ ನಿಶ್ಚಿಂತನೂ, ಶಿವನಾರಾಧಕನೂ ಅದವನಿಗೆ ಅಲ್ಲಿ ಶರಣನೆಂದು ಕರೆದರೆ, ಭಕ್ರನಾದವನು ಇಷ್ಟಲಿಂಗದ ಸಾಧನೆಯ ಮೂಲಕ ತನ್ನ ಆತ್ಮನನ್ನೇ ಪರಮಾತ್ಮನನ್ನಾಗಿ ರೂಪಿಸಿಕೊಳ್ಳುವುದು ಬಸವಾದಿ ಶರಣರು ಹೇಳಿರುವ ಶರಣಸ್ಥಲವಾಗಿದೆ. ಆನಂದಭಕ್ತಿಯಲ್ಲಿ ಲೀನವಾದವನೇ ಶರಣನಾಗುತ್ತಾನೆ. ಅರಿವು, ಆಚಾರಗಳ ಸಮಾಗಮವನ್ನೇ ಶರಣಸ್ಥಲವೆಂದು ಕರೆಯಲಾಗುತ್ತದೆ. ಶರಣನಾದವ ದಾಕ್ಷಿಣ್ಯಪರನಲ್ಲ, ಆತ ನ್ಯಾಯನಿಷ್ಠುರಿಯೆಂದು ಬಸವಣ್ಣನವರು ಶರಣನ ಲಕ್ಷಣವನ್ನು ಹೇಳಿದ್ದಾರೆ.

ಸಾಧನೆಯ ಉತ್ತುಂಗ ಸ್ಥಿತಿಗೆ ತಲುಪಿದ ಶರಣನು, ನಾನು-ನೀನು ಎಂಬ ಭೇದವನ್ನು ಕಳೆದುಕೊಂಡು ತಾನೇ ತಾನಾಗಿ ತನ್ಮಯತೆಯಿಂದಿರುತ್ತಾನೆ. ಆಗ ಆತ್ಮನ ಲಕ್ಷಣಗಳು ಕರಗಿ ಹೋಗಿ ಪರಮಾತ್ಮನ ಲಕ್ಷಣಗಳು ಗೋಚರವಾಗುತ್ತವೆ. ಮರೆವಿನಿಂದ ದೂರವಾಗಿ ಅರಿವಿನ ಕಡೆ ಶರಣನ ನಡೆಯಿರುವುದರಿಂದ ‘ಅರಿದೊಡೆ ಶರಣ, ಮರೆದೊಡೆ ಮಾನವ’ ಎಂದು ವಚನಕಾರರು ತಿಳಿಸಿದ್ದಾರೆ. ಶರಣಸತಿ-ಲಿಂಗಪತಿ ಭಾವ ಇಲ್ಲಿ ಬೆಳೆದುನಿಂತು, ಶರಣನು ನಡೆದಾಡುವ ದೇವರೇ ಆಗಿದ್ದಾನೆ.

ಬಸವಣ್ಣನವರು ಶರಣಸ್ಥಲವನ್ನು ಕುರಿತು ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ, ಉಣ್ಣುವ ಬಟ್ಟಲು ಕಂಚಿನಿಂದ ಮಾಡಿರುತ್ತದೆ, ನೋಡುವ ದರ್ಪಣವನ್ನೂ ಕಂಚಿನಿಂದ ಮಾಡಿರುತ್ತದೆ. ಆದರೆ ಉಣ್ಣುವ ಬಟ್ಟಲಿನಲ್ಲಿ ಮುಖ ಕಾಣ ಸುವುದಿಲ್ಲ, ದರ್ಪಣದಲ್ಲಿ ಮುಖ ಕಾಣ ಸುತ್ತದೆ. ಇವೆರಡಕ್ಕೂ ಕಂಚೇ ಮೂಲ ಕಾರಣವಾದರೂ, ಉಪಯೋಗದಲ್ಲಿ ಬೇರೆ ಬೇರೆಯಾಗಿವೆ. ಅದೇರೀತಿ ಭಕ್ತನು ಸಾಧನೆಯ ಮೂಲಕ ಶರಣನಾಗಿ ಬೆಳೆದು ನಿಂತಾಗ ದರ್ಪಣದಂತೆ ಆಗುತ್ತಾನೆ. ಇದ್ದುದನ್ನು ಇದ್ದಂತೆಯೇ ತೋರಿಸುವ ಪಾರದರ್ಶಕ ಗುಣವುಳ್ಳವನಾಗುತ್ತಾನೆ.

‘ಬಯಲು ರೂಪ ಮಾಡಬಲ್ಲಾತನೆ ಶರಣನು’ ಎಂದು ಹೇಳಿರುವ ಬಸವಣ್ಣನವರು; ‘ಲೋಕದಿಚ್ಛೆಯ ನಡೆವವನಲ್ಲ, ಲೋಕದಿಚ್ಛೆಯ ನುಡಿವವನಲ್ಲ, ಲೋಕವಿರಹಿತ ಶರಣ’ ಎಂದು ತಿಳಿಸಿದ್ದಾರೆ.

“ಶರಣ ನಿದ್ರೆಗೈದಡೆ ಜಪ ಕಾಣ ರೊ
ಶರಣ ಕುಳಿತಡೆ ಶಿವರಾತ್ರಿ ಕಾಣ ರೊ
ಶರಣ ನಡೆದುದೆ ಪಾವನ ಕಾಣ ರೊ
ಶರಣ ನುಡಿದುದೆ ಶಿವತತ್ವ ಕಾಣ ರೊ
ಕೂಡಲಸಂಗನ ಶರಣನ
ಕಾಯವೇ ಕೈಲಾಸ ಕಾಣ ರೊ”
-ಬಸವಣ್ಣ(ಸ.ವ.ಸಂ.1,ವ:873)

ಈ ವಚನದಲ್ಲಿ ಬಸವಣ್ಣನವರು ಶರಣನ ವ್ಯಕ್ತಿತ್ವ ಎಂತಹದೆಂಬುವುದನ್ನು ಕಣ ್ಣಗೆ ಕಟ್ಟುವಂತೆ ಚಿತ್ರಿಸಿದ್ದಾರೆ.’ಶರಣನಿದ್ರೆ ಮಾಡಿದರೆ ಜಪ, ಎದ್ದು ಕುಳಿತರೆ ಶಿವರಾತ್ರಿ’ ಎಂಬ ಮಾತು ಸಣ್ಣದಲ್ಲ. ಶರಣನ ಕಾಯವೇ ಕೈಲಾಸವೆಂದು ಹೇಳಿರುವುದು ಅದ್ಭುತವಾದುದಾಗಿದೆ. ಬಸವಾದಿ ಶರಣರು ಬರುವದಕ್ಕಿಂತ ಮೊದಲು ಯಾವ ಆಗಮ-ಪುರಾಣಗಳೂ ಶರಣನ ವ್ಯಕ್ತಿತ್ವವನ್ನು ಈ ರೀತಿಯಾಗಿ ಕಟ್ಟಿಕೊಟ್ಟಿಲ್ಲ. ಆದುದರಿಂದ ಬಸವಾದಿ ಶರಣರು ಹೇಳಿರುವಂತಹ ಷಟ್‍ಸ್ಥಲಗಳು ತುಂಬ ವಿಶಿಷ್ಟವಾಗಿವೆ.

‘ಆದಿಲಿಂಗ ಅನಾದಿ ಶರಣನೆಂಬ ಭೇದವ ವಿವರಿಸಿ ತೋರಿದನಯ್ಯಾ ಬಸವಣ್ಣನು’-ಎಂದು ಹೇಳಿರುವ ಅಲ್ಲಮ್ಮಪ್ರಭುಗಳು ‘ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ ಗುಹೇಶ್ವರ ನಿಮ್ಮ ಶರಣನು’ ಎಂದು ತಿಳಿಸಿದ್ದಾರೆ.

“ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ನಾಲಿಗೆ
ಬೀಸುವ ಗಾಳಿಗೆ ಮೈಯೆಲ್ಲ ಮುಖ
ಗುಹೇಶ್ವರಾ ನಿಮ್ಮ ಶರಣಂಗೆ
ಸರ್ವಾಂಗವೆಲ್ಲ ಲಿಂಗ!”
-ಅಲ್ಲಮಪ್ರಭು(ಸ.ವ,ಸಂ.2,ವ:1616)

 

ಈ ವಚನದಲ್ಲಿ ಅಲ್ಲಮಪ್ರಭುಗಳು ಕೆಲವು ಉದಾಹರಣೆಗಳ ಮುಖಾಂತರ ಶರಣನ ಲಕ್ಷಣವನ್ನು ಹೇಳಿದ್ದಾರೆ. ಭಕ್ತನಿಗೆ ಕೊರಳಲ್ಲಿರುವ ಇಷ್ಟಲಿಂಗ ಮಾತ್ರಲಿಂಗವಾದರೆ, ಶರಣನಿಗೆ ಮೈಯೆಲ್ಲಾ ಲಿಂಗವೆಂದು ಹೇಳಿದ್ದಾರೆ. ಈ ಮಾತನ್ನವರು ಹರಿವ ನದಿ, ಉರಿವ ಕಿಚ್ಚು, ಬೀಸುವ ಗಾಳಿಯ ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ಲಿಂಗದ ಮೂಲಕವೇ ಶರಣನು ನಡೆವನು, ನುಡಿವನು. ಆದುದರಿಂದ ಶರಣ ಸರ್ವಾಂಗಲಿಂಗಿ ಎಂದು ಹೇಳಿರುವ ಚೆನ್ನಬಸವಣ್ಣನವರು ಪ್ರಭುಗಳ ಮಾತನ್ನೇ ಅನುಮೋದಿಸಿದ್ದಾರೆ. ಶರಣನಿಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ ಆತ ನಿಜೈಕ್ಯದ ಕಡೆ ನಡೆದಿದ್ದಾನೆಂದು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ದೇಹವು ಬೇಕೆಂದು ಬಯಸಿದಾಗ, ವೈರಾಗ್ಯವು ಬೇಡವೆಂದು ಹೇಳುತ್ತದೆ. ಬೇಕು-ಬೇಡೆಂಬ ಈ ಎರಡನ್ನು ಅತಿಗಳೆದು ಭೋಗಿಸಬಲ್ಲಡೆ ಆತನೇ ಶರಣನೆಂದು ತಿಳಿಸಿರುವ ಚೆನ್ನಬಸವಣ್ಣನವರು ಸರ್ವಸಂಗ ಪರಿತ್ಯಾಗ ಮಾಡಿದವನೇ ನಿಜವಾದ ಶರಣನೆಂದು ಹೇಳಿದ್ದಾರೆ, ಅಂದರೆ ಶರಣನಾಗುವುದು ಎಲ್ಲರಿಂದಲೂ ಸಾಧ್ಯವಾಗದೆಂದು ಇದರಿಂದ ತಿಳಿದು ಬರುತ್ತದೆ.

“ಶರಣಂಗೆ ಆಕಾಶವೆ ಅಂಗ, ಆ ಅಂಗಕ್ಕೆ ಸುಜ್ಞಾನವೆ ಹಸ್ತ
ಆ ಹಸ್ತಕ್ಕೆ ಶಿವಸಾದಾಖ್ಯ, ಆ ಸಾದಾಖ್ಯಕ್ಕೆ ಪರಶಕ್ತಿ
ಆ ಶಕ್ತಿಗೆ ಪ್ರಸಾದವೆ ಲಿಂಗ, ಆ ಲಿಂಗಕ್ಕೆ ಶಾಂತ್ಯತೀತವೆ ಕಳೆ
ಆ ಕಳೆಗೆ ಶ್ರೋತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುಶಬ್ದ ದ್ರವ್ಯಂಗಳನು
ರೂಪು, ರುಚಿ, ತೃಪ್ತಿಯನರಿದು ಆನಂದಭಕ್ತಿಯಿಂದರ್ಪಿಸಿ
ಆ ಸುಶಬ್ದ ಪ್ರಸಾದವ ಭೋಗಿಸಿ ಸುಖಿಸುತ್ತಿಹನು
ಕೂಡಲ ಚೆನ್ನಸಂಗಾ ನಿಮ್ಮ ಶರಣ”
-ಚೆನ್ನಬಸವಣ್ಣ(ಸ.ವ.ಸಂ.3,ವ:1647)

ಈ ವಚನದಲ್ಲಿ ಚೆನ್ನಬಸವಣ್ಣನವರು ಶರಣನ ಗುಣ ಲಕ್ಷಣಗಳನ್ನು ವಿವರಿಸಿದ್ದಾರೆ. ಇತರರಿಗೆ ತಮ್ಮ ದೇಹ ಅಂಗವಾದರೆ, ಶರಣನಿಗೆ ಆಕಾಶವೇ ಅಂಗವಾಗಿದೆಯೆಂದು ತಿಳಿಸಿದ್ದಾರೆ. ಆಕಾಶದ ಪ್ರಸ್ರಾಪದ ಮೂಲಕ ಚೆನ್ನಬಸವಣ್ಣನವರು ಇಲ್ಲಿ ಬಯಲುತತ್ವವನ್ನು ಹೇಳಿದ್ದಾರೆ.

ಶರಣನ ನಡೆ ಸಾಮಾನ್ಯವಾದುದ್ದಲ್ಲ, ಆತ ನುಡಿದ ವಾಕ್ಯವೇ ಮೋಕ್ಷ ಪ್ರದಾಯಕವೆಂದು ಹೇಳಿರುವ ಸಿದ್ಧರಾಮ ಶಿವಯೋಗಿಗಳು, ಶರಣರಾದ ಮಾದಾರಚೆನ್ನಯ್ಯ, ಡೋಹರಕಕ್ಕಯ್ಯನವರ ನಡೆಯನ್ನು ಯಾವ ವೇದ-ಆಗಮಗಳಲ್ಲಿಯೂ ಹೇಳಿಲ್ಲವೆಂದು ತಿಳಿಸಿದ್ದಾರೆ. ಶರಣಸ್ಥಲ ನೋಡುವಡೆ ಸುಲಭವೆಂದೆನಿಸಿದರೂ ಶರಣನಾಗುವದು ಅಷ್ಟು ಸುಲಭವಲ್ಲವೆಂದು ಹೇಳಿದ್ದಾರೆ. ಶರಣನ ದೇಹವೆಲ್ಲ ಪಂಚಾಕ್ಷರಮಯವಾಗಿದೆಯೆಂದು ತಿಳಿಸಿರುವ ಶಿವಯೋಗಿಗಳು ಶರಣನೇ ಶಿವತತ್ವವಾಗಿ ನಿಂತಿದ್ದಾನೆಂದು ಹೇಳಿದ್ದಾರೆ.

“ಶರಣನ ನೋಟ ಭವದ ಕಾಟ ನೋಡಯ್ಯಾ
ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ
ಶರಣನ ದೇಹ ಶಿವದೇಹ ನೋಡಯ್ಯಾ
ಶರಣನ ಪಾದುಕೆ ಎಮ್ಮ ಕಪಿಲಸಿದ್ದ ಮಲ್ಲಿಕಾರ್ಜುನನ
ಚಮ್ಮಾವುಗೆ ನೋಡಾ ಮಡಿವಾಳ ಮಾಚಣ್ಣಾ.”
-ಸಿದ್ಧರಾಮ(ಸ.ವ.ಸಂ.4,ವ:1403)

ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು ಶರಣರ ಚಲನವಲನಗಳನ್ನು ಕುರಿತು ವಿವರಿಸಿದ್ದಾರೆ. ಶರಣನ ದೃಷ್ಟಿ ಶಿವದೃಷ್ಟಿ, ಶರಣನ ದೇಹ ಶಿವದೇಹವೆಂದು ತಿಳಿಸಿರುವ ಶಿವಯೋಗಿಗಳು ಶರಣನ ಪಾದುಕೆ ಕಪಿಲಸಿದ್ಧ ಮಲ್ಲಿಕಾರ್ಜುನನ ಚಮ್ಮಾವುಗೆ ಎಂದು ಹೇಳಿರುವುದು ತುಂಬ ಪರಿಣಾಮಕಾರಿಯಾಗಿದೆ.

ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾಧೀನವೆಂದು ಹೇಳಿರುವ ಆದಯ್ಯನವರು, ಶರಣರು ನಿ:ಗರ್ವಿಗಳಾಗಿ ಲಿಂಗಸುಖಿಗಳೆಂದು ತಿಳಿಸಿದ್ದಾರೆ.

“ಅಸಮಾನಾಢ್ಯರಪ್ರತಿಮ ಸ್ವತಂತ್ರ ಸ್ವಲೀಲರಲಪ್ಪ ಶರಣರೆಂತಿಪ್ಪರಯ್ಯಾ
ಕಡವರವ ನುಂಗಿದ ಪೊಡವಿಯಂತೆ, ರತ್ನವ ನುಂಗಿದ ರತ್ನಾಕರನಂತೆ
ಬೆಳಗ ನುಂಗಿದ ಬಯಲಂತೆ, ಬಣ್ಣವನುಂಗಿದ ಚಿನ್ನದಂತೆ
ತೈಲವ ನುಂಗಿದ ತಿಲದಂತೆ, ಪ್ರಭೆಯ ನುಂಗಿದ ಪಾಷಾಣದಂತೆ
ವೃಕ್ಷವ ನುಂಗಿದ ಬೀಜದಂತೆ, ಪ್ರತಿಬಿಂಬವ ನುಂಗಿದ ದರ್ಪಣ ದಂತಿಪ್ಪರಯ್ಯಾ
ಸೌರಾಸ್ಟ್ರರ ಸೋಮೇಶ್ವರಾ, ನಿಮ್ಮ ಶರಣರಲ್ಲಿ ನೀವಿಹ ಭೇದವ

ನೀವೇ ಬಲ್ಲಿರಿ ಆನೆತ್ತ ಬಲ್ಲೆನಯ್ಯಾ”

-ಆದಯ್ಯ(ಸ.ವ.ಸಂ.6,ವ:811)

ಆದಯ್ಯನವರು ಈ ವಚನದಲ್ಲಿ ಶರಣಸ್ಥಲ ಕುರಿತು ನೀಡಿರುವ ಹೋಲಿಕೆಗಳು ತುಂಬ ಕಾವ್ಯಾತ್ಮಕವಾಗಿವೆ ಮತ್ತು ಅಷ್ಟೇ ಅರ್ಥಪೂರ್ಣವಾಗಿÀವೆ. ಶರಣನು ಬೆಳಗ ನುಂಗಿದ ಬಯಲಂತಿದ್ದಾನೆಂದು ಹೇಳಿರುವ ಮಾತು ಅದ್ಭುತವಾದುದಾಗಿದೆ. ಆದಯ್ಯನವರೂ ಕೂಡ ಇಲ್ಲಿ ಬಯಲು ತತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕಮಲ ಪಂಕದಲಿ ವರ್ತಿಸಿದಂತೆ ವರ್ತಿಸುತಿಪ್ಪರು ನಿಮ್ಮ ಶರಣರು ಎಂದು ಹೇಳಿರುವ ಉರಿಲಿಂಗ ಪೆದ್ದಿಗಳು, ಶಿವಶರಣನಿಗೆ ಶಿವಧ್ಯಾನವಲ್ಲದೆ ಮತ್ತೊಂದು ಧ್ಯಾನವಿಲ್ಲವಯ್ಯಾ ಎಂದು ತಿಳಿಸಿದ್ದಾರೆ. ಅವರು ತಮ್ಮ ಇನ್ನೊಂದು ವಚನದಲ್ಲಿ ಶರಣಸತಿ-ಲಿಂಗಪತಿ ತತ್ವವನ್ನು ಹೇಳುತ್ತ, ಸತ್ಯ-ಛಲ-ಭಾಷೆಯಿಂದ ಶರಣ ಸತಿಯಾಗಿದ್ದಾನೆ. ಅಂತಹ ಶರಣನಿಗೆ ಲಿಂಗವೇ ಪತಿಯಾಗಿದೆಯೆಂದು ವಿವರಿಸಿದ್ದಾರೆ.

ಶರಣನಾದಡೆ ಅಷ್ಟಾವಧಾನವ ತಿಳಿಯಬೇಕೆಂದು ಹೇಳಿರುವ ಮಡಿವಾಳಯ್ಯನವರು, ನಿಜವಾದ ಶರಣ ಹೇಗಿರುತ್ತಾನೆಂದು ಈ ವಚನದಲ್ಲಿ ತಿಳಿಸಿದ್ದಾರೆ.

“ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ
ನೀವು ಶರಣರಾದ ಭೇದವ ಹೇಳಿರಣ್ಣ
ಅರಿಯದಿರ್ದಡೆ ಕೇಳಿರಣ್ಣ ಶರಣತ್ವದ ಭೇದಾಭೇದವ
ತನುವಿನಾಕಾಂಕ್ಷೆಯ ಸುಟ್ಟುರುಹಿ, ಮನದ ಲಜ್ಜೆಯ ಮರೆದು
ಭಾವದ ಭ್ರಮೆಯ ಹೊಟ್ಟುಮಾಡಿ ತೂರಿ, ಸದ್ಭಕ್ತಿ ನಿಜನೈಷ್ಠೆಯ ತಿಳಿದು
ಸತಿಸುತರಿಗೆ ಸದಾಚಾರದ ಸನ್ಮಾರ್ಗವ ತೋರಿ
ಗುರುಲಿಂಗ ಜಂಗಮವೆ ಮನೆದೈವ, ಮನದೈವ, ಕುಲದೈವವೆಂದು ಭಾವಿಸಿ
ನಿರ್ವಂಚಕತ್ವದಿಂದ ಅರಿದಾಚರಿಸಬಲ್ಲಾತನೆ
ಅಚ್ಚಶರಣ ನೋಡಾ, ಕಲಿದೇವರದೇವ.”

ಮಡಿವಾಳ ಮಾಚಿದೇವ(ಸ.ವ.ಸಂ.8,ವ:647)

ಮಡಿವಾಳ ಮಾಚಯ್ಯನವರು ಇಲ್ಲಿ ಶರಣತ್ವವೆಂದರೇನೆಂಬುದನ್ನು ವಿವರಿಸಿದ್ದಾರೆ. ತನುವಿನ ಇಚ್ಛೆಯನ್ನು ಸುಟ್ಟು, ಮನಸ್ಸಿನ ಆಸೆಯನ್ನು ಮರೆಯುವುದು ಅಷ್ಟು ಸರಳವಾದದ್ದಲ್ಲ, ಆದರೆ ಶರಣನಾಗಬೇಕಾದರೆ ಇದನ್ನು ಮಾಡಲೇ ಬೇಕಾಗುತ್ತದೆಂದು ಮಾಚಿದೇವರು ಇಲ್ಲಿ ತಿಳಿಸಿದ್ದಾರೆ. ನಾವು ಶರಣರು, ನೀವು ಶರಣರು ಎಂದು ಹೇಳುವವರೇ ಹೆಚ್ಚಾಗಿದ್ದಾರೆ ಹೊರತು ನಿಜವಾದ ಶರಣ ಸಿಗುವದು ದುರ್ಲಭವೆಂದು ವಚನಕಾರರು ಹೇಳಿದ್ದಾರೆ.

ಶರಣರ ಮನ ನೋಯಿಸಿದರೆ, ಹರಜನ್ಮವಳಿದು ನರಜನ್ಮಕ್ಕೆ ಬರಬೇಕಾಗುತ್ತದೆಂದು ತಿಳಿಸಿರುವ ಅಕ್ಕಮಹಾದೇವಿ, ಶಿವಶರಣರ ಮನೆಯಂಗಳವೇ ವಾರಣಾಸಿಯೆಂದು ಹೇಳಿದ್ದಾರೆ.

“ಕಾಮದ ಹಂಗಿಗನಲ್ಲ ಶರಣ
ಮೋಹದ ಇಚ್ಛೆಯವನಲ್ಲ ಶರಣ
ಉಭಯದ ಸಂಗವನಲ್ಲ ಶರಣ
ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ.........”

-ನೀಲಮ್ಮ(ಸ.ವ.ಸಂ.5,ವ:939)

ನೀಲಮ್ಮನವರ ಈ ವಚನದಲ್ಲಿ ಶರಣನ ತಾತ್ವಿಕ ನಿಲುವಿದೆ. ಶರಣ ಕಾಮವನ್ನು ಗೆದ್ದಿದ್ದಾನೆ, ಕ್ರೋಧವನ್ನು ಕಳೆದುಕೊಂಡಿದ್ದಾನೆ, ಮೋಹವನ್ನು ಮರೆತಿದ್ದಾನೆಂದು ಹೇಳುತ್ತ ಶರಣನ ಮಹಿಮೆಯನ್ನು ಈ ವಚನದಲ್ಲಿ ವಿವರಿಸಲಾಗಿದೆ. ಇನ್ನೊಬ್ಬ ವಚನಕಾರ್ತಿ ಮುಕ್ತಾಯಕ್ಕನವರು ತಮ್ಮ ವಚನದಲ್ಲಿ ಶರಣನ ಮಹಿಮೆಯನ್ನು ಹೀಗೆ ಹೇಳಿದ್ದಾರೆ.

“ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣದು
ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ
ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ
ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ?
ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ
ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ
ನಮೋನಮೋ ಎನುತಿರ್ದೆನು”

-ಮುಕ್ತಾಯಕ್ಕ(ಸ.ವ.ಸಂ.5,ವ:1101)

ಈ ವಚನದಲ್ಲಿ ಬಂದಿರುವ ಉಪಮೆಗಳು ತುಂಬ ಅರ್ಥಪೂರ್ಣವಾಗಿವೆ. ಒಂದೊಂದು ಹೋಲಿಕೆಯ ಹಿಂದೆ ಒಂದೊಂದು ಅರ್ಥವಡಗಿದೆ. ಮುಕ್ತಾಯಕ್ಕನ ಅಣ್ಣ ಅಜಗಣ್ಣ ದೊಡ್ಡ ಶರಣನಾಗಿದ್ದ, ಹೀಗಾಗಿ ಈ ವಚನಕಾರ್ತಿ ಶರಣನ ನಿಜನಿಲುವನ್ನು ಈ ವಚನದಲ್ಲಿ ವಿವರಿಸಿದ್ದಾರೆ. ಹೀಗೆ ಅನೇಕ ವಚನಕಾರರು ತಮ್ಮದೇ ಅನುಭವದ ಹಿನ್ನಲೆಯಲ್ಲಿ ಶರಣತತ್ವವನ್ನು ವಿಸ್ತರಿಸಿದ್ದಾರೆ.

- ಬಸವರಾಜ ಸಬರದ

ಈ ಅಂಕಣದ ಹಿಂದಿನ ಬರಹಗಳು:
ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...