ಭಕ್ತಸ್ಥಲ

Date: 07-01-2023

Location: ಬೆಂಗಳೂರು


ಭಕ್ತನಾಗುವುದು ಸುಲಭವಲ್ಲ. ಲಿಂಗಾಯತ ಧರ್ಮದಲ್ಲಿ ಭಕ್ತರೇ ಶ್ರೇಷ್ಠರಾಗಿದ್ದಾರೆ. ಭಕ್ತನಾದವನು ಷಟ್‍ಸ್ಥಲದ ಸಾಧನೆಯ ಮೂಲಕ ಶರಣನಾಗುತ್ತಾನೆ. ಆಗ ಶಿವನಿಗಿಂತ ಶಿವಶರಣನೇ ಅಧಿಕನಾಗಿ ಕಾಣ ಸುತ್ತಾನೆ. ಶರಣನಾಗಿ ಬೆಳೆದು ನಿಲ್ಲಲು ಭಕ್ತಸ್ಥಲವೇ ಪ್ರಥಮ ಮೆಟ್ಟಿಲಾಗಿದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಭಕ್ತಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಷಟ್‍ಸ್ಥಲಗಳಲ್ಲಿ ಭಕ್ತಸ್ಥಲ ಸಾಧಕನ ಪ್ರಾರಂಭದ ಹಂತವಾಗಿದೆ. ಪ್ರೀತಿ-ಲೌಕಿಕವಾದರೆ, ಭಕ್ತಿ ಆಧ್ಯಾತ್ಮಕ. ಎಲ್ಲವನ್ನೂ ಅರ್ಪಿಸಿಕೊಳ್ಳುವುದು ಹೇಗೆ ನಿಜವಾದ ಪ್ರೀತಿಯೊ, ಹಾಗೆ ತನ್ನನ್ನೇ ಪರಮಾತ್ಮನಿಗೆ ಅರ್ಪಿಸಿಕೊಂಡರೆ ಸಮರ್ಪಣಾ ಭಕ್ತಿಯಾಗುತ್ತದೆ. ದೇಶಕ್ಕೆ ಅರ್ಪಿಸಿಕೊಂಡರೆ ದೇಶಭಕ್ತಿಯಾಗುತ್ತದೆ. ದೇಶಕ್ಕಾಗಿ ಅರ್ಪಣೆ ಮಾಡಿಕೊಂಡವರನ್ನು ದೇಶಭಕ್ತರೆಂದು ಕರೆಯಲಾಗುತ್ತದೆ. ಮಹಾತ್ಮಗಾಂಧೀಜಿಯವರು ಅಂತಹ ದೇಶಭಕ್ತರು. ದೈವಭಕ್ತನಿಗಿಂತಲೂ ಮಹತ್ವ ದೇಶಭಕ್ತನಿಗಿದೆ. ಬಸವಣ್ಣ ಮೊದಲಾದ ಶರಣರು ದೈವಭಕ್ತರಾಗಿರುವುದರ ಜತೆಗೆ ದೇಶಭಕ್ತರೂ ಆಗಿದ್ದರು. ಭಕ್ತಸ್ಥಲದ ಮಾರ್ಗವೆದಂದರೆ ಸುಲಭವಾದುದ್ದಲ್ಲ. ಸ್ವಾರ್ಥ, ಸಣ್ಣತನ, ದುರಾಸೆ, ದುರಹಂಕಾರ ಇವೆಲ್ಲವನ್ನೂ ಬಿಟ್ಟು ಬಂದಾಗಲೇ ಭಕ್ತನಾಗಲು ಸಾಧ್ಯವಾಗುತ್ತದೆ. ಇಂತಹ ಭಕ್ತಸ್ಥಲದ ಬಗೆಗೆ ಅನೇಕ ಶರಣರು ತಮ್ಮ ವಚನಗಳ ಮೂಲಕ ಮಾತನಾಡಿದ್ದಾರೆ.

ಭಕ್ತನಾಗುವುದು ಸುಲಭವಲ್ಲ. ಲಿಂಗಾಯತ ಧರ್ಮದಲ್ಲಿ ಭಕ್ತರೇ ಶ್ರೇಷ್ಠರಾಗಿದ್ದಾರೆ. ಭಕ್ತನಾದವನು ಷಟ್‍ಸ್ಥಲದ ಸಾಧನೆಯ ಮೂಲಕ ಶರಣನಾಗುತ್ತಾನೆ. ಆಗ ಶಿವನಿಗಿಂತ ಶಿವಶರಣನೇ ಅಧಿಕನಾಗಿ ಕಾಣ ಸುತ್ತಾನೆ. ಶರಣನಾಗಿ ಬೆಳೆದು ನಿಲ್ಲಲು ಭಕ್ತಸ್ಥಲವೇ ಪ್ರಥಮ ಮೆಟ್ಟಿಲಾಗಿದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತೊರೆದು, ಸ್ವಾರ್ಥ-ದ್ವೇಷಗಳನ್ನು ಬಿಟ್ಟು ಸನ್ಮಾರ್ಗಗಳಲ್ಲಿ ನಡೆಯುವವನೇ ನಿಜವಾದ ಭಕ್ತನಾಗುತ್ತಾನೆ. ಕೇವಲ ಇಷ್ಟಲಿಂಗ ಹಾಕಿಕೊಂಡು, ವಿಭೂತಿ ಧರಿಸಿದಾಕ್ಷಣ ಭಕ್ತನಾಗುವುದಿಲ್ಲ. ಎಲ್ಲ ಅಹಂಭಾವ ತೊರೆದು, ವಿಷಯಗಳಿಂದ ದೂರ ಸರಿಯುವದೇ ಭಕ್ತನ ಪ್ರಥಮ ಸಾಧನೆಯಾಗಿದೆ. ಭಕ್ತಿಯೆಂಬುದು ಗರಗಸದಂತೆ, ಹೋಗುತ್ತ ಕೊಯ್ವುದು, ಬರುತ್ತ ಕೊಯ್ಯದು. ಆದುದರಿಂದ ಭಕ್ತಸ್ಥಲಕ್ಕೆ ಷಟ್‍ಸ್ಥಲಗಳಲ್ಲಿ ಮಹತ್ವದ ಸ್ಥಾನವಿದೆ.

‘ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ’ವೆಂದು ಹೇಳಿದ ಬಸವಣ್ಣನವರು, ಭಕ್ತರಾದವರು ಎಂದಿಗೂ ಯಾರನ್ನೂ ಬೇಡಬಾರದೆಂದು ಹೇಳಿದ್ದಾರೆ. ‘ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕೆಂದು ತಿಳಿಸಿರುವ ಅವರು ಮಾಡುವ ಭಕ್ತರಿಗೆ ಮನ ಹೀನವಾದರೆ ಅದೇ ಕಡೆ’ ಎಂದು ಹೇಳಿದ್ದಾರೆ.

“ಗಂಡ ಶಿವಲಿಂಗ ದೇವರಭಕ್ತ
ಹೆಂಡತಿ ಮಾರಿ ಮಸಣೆಯ ಭಕ್ತೆ
ಗಂಡಕೊಂಬುದು ಪಾದೋದಕ ಪ್ರಸಾದ
ಹೆಂಡತಿ-ಕೊಂಬುದು ಸುರೆ-ಮಾಂಸ
ಭಾಂಡ-ಭಾಜನ ಶುದ್ದವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮ ದೇವಾ”

-ಬಸವಣ್ಣ(ಸ.ವ.ಸಂ.1,ವ:104)

ಈ ವಚನದಲ್ಲಿ ಭಕ್ತನಿಗೆ ಸಂಬಂಧಿಸಿದಂತೆ ಬಸವಣ್ಣನವರು ಬಹುಮಹತ್ವದ ಮಾತುಗಳನ್ನಾಡಿದ್ದಾರೆ. ಕುಟುಂಬದ ಎಲ್ಲ ಸದಸ್ಯರೂ ಒಂದೇ ಸಿದ್ಧಾಂತವನ್ನು ಒಪ್ಪಿಕೊಂಡು ಆಚರಣೆ ಮಾಡಿದರೆ ಆ ಕುಟುಂಬದಲ್ಲಿ ಸಮನ್ವಯತೆ ಸೌಹಾರ್ದತೆ ಸಾಧ್ಯವಾಗುತ್ತದೆ. ಬಹುದೇವೋಪಾಸನೆಯ ಈ ದೇಶ ವ್ಯವಸ್ಥೆಯಲ್ಲಿ, ಕೇವಲ ಇಷ್ಟಲಿಂಗಕ್ಕೆ ಮಾತ್ರ ಬದ್ಧರಾಗಿರಬೇಕೆಂಬುದನ್ನು ಅನೇಕರು ಒಪ್ಪುವುದಿಲ್ಲ. ದೇವರು-ಧರ್ಮವೆಂಬುದು ವ್ಯಕ್ತಿಗತವಾದ ನಂಬಿಕೆಯಾದುದರಿಂದ, ದೇಶವಾಸಿಗಳೆಲ್ಲರೂ ಒಂದೇ ಸಿದ್ಧಾಂತವನ್ನು ನಂಬಬೇಕು., ಒಂದೇ ರೀತಿಯ ಆಚರಣೆಯನ್ನು ಆಚರಿಸಬೇಕೆಂದು ಒತ್ತಾಯಿಸುವುದು, ಪ್ರಜಾಪ್ರಭುತ್ವದ ಇಂದಿನ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಆ ಕಾಲದಲ್ಲಿಯೂ ಇದು ಸಾಧ್ಯವಾಗಿರಲಿಕ್ಕಿಲ್ಲ. ಅದನ್ನೇ ಬಸವಣ್ಣನವರು ಇಲ್ಲಿ ವಿವರಿಸಿದ್ದಾರೆ. ಗಂಡನ ದೇವರು ಬೇರೆ, ಹೆಂಡತಿಯ ದೇವರು ಬೇರೆ ಬೇರೆಯಾದಾಗ ಅವರಿಬ್ಬರ ಧಾರ್ಮಿಕಾಚರಣೆಗಳೂ ಬೇರೆ ಬೇರೆಯಾಗುತ್ತವೆ. ಹೀಗೆ ಒಂದೇ ಕುಟುಂಬದಲ್ಲಿ ಈ ರೀತಿಯ ವ್ಯತ್ಯಾಸವಾದಾಗ ಕುಟುಂಬ ಬಿರುಕು ಬಿಡುತ್ತದೆ. ಇದನ್ನೇ ಬಸವಣ್ಣನವರು “ಭಾಂಡ-ಭಾಜನ ಶುದ್ದವಿಲ್ಲದವರ ಭಕ್ತಿ” ಎಂದು ಕರೆದಿದ್ದಾರೆ. ಭಾಂಡವೆಂದರೆ ಅಡುಗೆ ಪಾತ್ರೆ, ಭಾಜನವೆಂದರೆ ಗುರಿ. ಗುರಿ ಬೇರೆಯಾದಾಗ ಅಡುಗೆ ಪಾತ್ರೆಗಳೂ ಬೇರೆ ಬೇರೆಯಾಗುತ್ತವೆ. ಹೀಗೆ ಭಕ್ತರಲ್ಲಿ ಭಿನ್ನತೆ ಕಾಣ ಸಿಕೊಂಡಾಗ ಅಲ್ಲಿ ಸಮನ್ವಯತೆ ಸಾಧ್ಯವಾಗುವುದಿಲ್ಲ. ಅದನ್ನೇ ಅವರು ಹೆಂಡದ ಮಡಿಕೆಯ ಹೊರಗೆ ತೊಳೆದಂತೆಂದು ಹೇಳಿದ್ದಾರೆ.

‘ಹುಸಿಯುಳ್ಳಾತ ಭಕ್ತನಲ್ಲ, ಆಸೆಯುಳ್ಳಾತ ಶರಣನಲ್ಲ’ ವೆಂದು ಹೇಳಿರುವ ಅಲ್ಲಮಪ್ರಭುಗಳು ‘ಭಕ್ತಿಯೆಂಬುದು ಯುಕ್ತಿಯೊಳಗು, ಪ್ರಸಾದವೆಂಬುದು ಓಗರದೊಳಗು’ ಆಗಬಾರದೆಂದು ತಿಳಿಸಿದ್ದಾರೆ. ಯುಕ್ತಿ-ಭಕ್ತಿಯಲ್ಲ, ಓಗರ-ಪ್ರಸಾದವಲ್ಲ. ಇದರಂತರಂಗವನ್ನು ಅರಿತು ನಡೆಯಬೇಕೆಂದು ಹೇಳಿದ್ದಾರೆ.

ಭಕ್ತ-ಜಂಗಮದ ಸಂಬಂಧವನ್ನು ವಿವರಿಸಿರುವ ಪ್ರಭು, ‘ಕಾಯಕ ಜೀವದ ಹೊಲಿಗೆಯ ಬಿಚ್ಚಿ ಬೀಸಾಡಿ, ತನ್ನನೆ ಅರ್ಪಿಸಿ ಇರಬಲ್ಲಾತ ಭಕ್ತ’ ಎಂದು ತಿಳಿಸಿದ್ದಾರೆ. ‘ಕೀರ್ತಿ ವಾರ್ತೆಗೆ ಮಾಡುವಾತ ಭಕ್ತನಲ್ಲ, ಪರರ ಬೋಧಿಸಿಕೊಂಡುಂಬಾತ ಜಂಗಮನಲ್ಲವೆಂದು’ ಹೇಳಿರುವ ಪ್ರಭು, ‘ತನ್ನ ಮರೆದು ಇದಿರ ಹರಿದು ಇರಬಲ್ಲಡೆ ಆತಭಕ್ತ’ ನೆಂದು ತಿಳಿಸಿದ್ದಾರೆ. ‘ಭಕ್ತಿಯೆಂಬ ಸಮಾಧಾನ ಬಸವಣ್ಣನಿಂದ ಎನಗಾಯಿತ್ತು’ ಎಂದು ಹೇಳಿರುವ ಅಲ್ಲಮಪ್ರಭುಗಳು ‘ಭಕ್ತನೆಂದರೆ ಬಸವಣ್ಣನೊಬ್ಬನೆ’ ಎಂದು ಹೇಳಿದ್ದಾರೆ. ಏನಾದರೂ ಆಗಬಹುದು ಆದರೆ ಭಕ್ತನಾಗುವುದು ಅಷ್ಟು ಸುಲಭವಲ್ಲವೆಂದು ಶರಣರು ತಿಳಿಸಿದ್ದಾರೆ.

“ಭಕ್ತ ಭಕ್ತನೆಂದೇನೊ? ಭವಿಗಳ ಮನೆಯಲ್ಲುಳ್ಳನ್ನಕ್ಕ ಭಕ್ತನೆ?
ಭಕ್ತ ಭಕ್ತನೆಂದೇನೊ? ಅನ್ಯದೈವ ಸುರೆಮಾಂಸವುಳ್ಳನ್ನಕ್ಕ ಭಕ್ತನೆ?
ಭಕ್ತ ಭಕ್ತನೆಂದೇನೊ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ?
ಭಕ್ತ ಭಕ್ತನೆಂದೇನೊ? ತನು ಮನ ಧನ ವಂಚನೆಯುಳ್ಳನಕ್ಕ ಭಕ್ತನೆ?
ಇವರೆಲ್ಲರೂ ಎದೆಯಲ್ಲಿ ಕಲ್ಲನಿರಿದುಕೊಂಡು
ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ”

-ಅಲ್ಲಮ ಪ್ರಭು(ಸ.ವ.ಸಂ.2,ವ:1418)

ಪ್ರಭುಗಳ ಈ ವಚನವನ್ನು ಗಮನಿಸಿದಾಗ ಭಕ್ತನಾಗುವುದು ಅಷ್ಟು ಸರಳವಾದುದಲ್ಲವೆದೆನಿಸುತ್ತದೆ. ತನು ಮನದಲ್ಲಿ ವಂಚನೆಯನ್ನಿಟ್ಟುಕೊಂಡು ಭಕ್ತನಾಗಲು ಸಾಧ್ಯವೇ ಇಲ್ಲವೆಂಬುದು ಶರಣರ ಸ್ಪಷ್ಟ ಸಂದೇಶವಾಗಿದೆ. ‘ಲಕ್ಷಕೊಬ್ಬ ಭಕ್ತ, ಕೋಟಿಗೊಬ್ಬ ಶರಣ’ ಎಂಬ ನಾಣ್ಣುಡಿ ಇದೇ ಕಾರಣಕ್ಕೆ ಜನಜನಿತವಾಗಿರಬೇಕೆನಿಸುತ್ತದೆ. ಭವಿತನವನ್ನು ಬಿಡುವದು, ಅನ್ಯದೈವದಿಂದ, ಗುಡಿಗುಂಡಾರಗಳಿಂದ ದೂರವಿರುವದು, ತೀರ್ಥಯಾತ್ರೆ ಮಾಡದೇ ಇರುವುದು, ಹರಕೆ ಹೊರದೇ ಇರುವುದು ಸಾಮಾನ್ಯ ಜನರಿಗೆ ಅಷ್ಟು ಸರಳವಲ್ಲ. ಈ ದೇಶದ ಜನಪದರು ಮೊದಲಿನಿಂದಲೂ ಬಹು ದೇವೋಪಾಸನೆಯನ್ನು ಮಾಡುತ್ತಾ ಬಂದಿರುವದರಿಂದ, ಒಮ್ಮಿಂದೊಮ್ಮೆಲೇ ಅವುಗಳನ್ನೆಲ್ಲ ತೊರೆದು ಬರುವದು ಸುಲಭವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿಯೂ ಕೂಡ ಶರಣರು ಜನಸಾಮಾನ್ಯರನ್ನು ಸಂಘಟಿಸಿ ಚಳುವಳಿ ಕಟ್ಟಿದ್ದು ಮೆಚ್ಚಬೇಕಾದ ಸಂಗತಿಯಾಗುತ್ತದೆ.

‘ಗುರುವಿನಲ್ಲಿ ತನು ವಂಚನೆ, ಲಿಂಗದಲ್ಲಿ ಮನ ವಂಚನೆ ಜಂಗಮದಲ್ಲಿ ಧನವಂಚನೆವುಳ್ಳನ್ನಕ್ಕ ಭಕ್ತನೆ?(ವ:43)’ಎಂದು ಪ್ರಶ್ನಿಸಿರುವ ಚೆನ್ನಬಸವಣ್ಣನವರು ಜಾತಿಸೂತಕ-ಜನನಸೂತಕಗಳನ್ನಿಟ್ಟುಕೊಂಡು ಭಕ್ತನಾಗಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ. ತನು-ಮನ-ಧನ ದಾಸೆಯೆಂಬುದು ಭಕ್ತನಾದವನಿಗಿರಬಾರದೆಂದು ಹೇಳಿದ ಅವರು, ಭಕ್ತನು ಪಂಚೇಂದ್ರಿಯಗಳ ಸುಖಕ್ಕೆ ಬಲಿಯಾಗಬಾರದೆಂದು ತಿಳಿಸಿದ್ದಾರೆ.

“ಭಕ್ತ ಶಾಂತನಾಗಿರಬೇಕು
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು
ಭೂತ ಹಿತವಹ ವಚನವ ನುಡಿಯಬೇಕು, ಜಂಗಮದಲ್ಲಿ ನಿಂದೆಯಿಲ್ಲದೆ
ಸಕಲ ಪ್ರಾಣ ಗಳ ತನ್ನಂತೆ ಭಾವಿಸೋದ ಮಾಡಬೇಕು
ತನು ಮನ ಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು”
-ಚೆನ್ನಬಸವಣ್ಣ(ಸ.ವ.ಸಂ.3,ವ:65)

ಈ ವಚನದಲ್ಲಿ ಚೆನ್ನಬಸವಣ್ಣನವರು ಭಕ್ತ ಹೇಗಿರಬೇಕೆಂಬುದನ್ನು ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಹೇಳಿದ್ದಾರೆ. ಸಕಲಜೀವಿಗಳಿಗೆ ಲೇಸಬುಸುವದೇ ಭಕ್ತನ ಪರಮ ಉದ್ದೇಶವಾಗಿರಬೇಕೆಂದು ಶರಣರು ತಿಳಿಸಿದ್ದಾರೆ. ಸಿದ್ಧರಾಮ ಶಿವಯೋಗಿಗಳು, ಭಕ್ತನಾದವನು ಮಾಂಸಾಹಾರವನ್ನೇ ಸೇವಿಸಲಿ, ಸಸ್ಯಾಹಾರವನ್ನೇ ಸೇವಿಸಲಿ ಕೊರಳಲ್ಲಿ ಲಿಂಗವಿದ್ದರೆ ಆತನೇ ಭಕ್ತನೆಂದು ಹೇಳಿದ್ದಾರೆ. ಅಲ್ಲಮಪ್ರಭುಗಳು ತಿಳಿಸಿರುವಂತೆ, ಇವರೂ ಕೂಡ ‘ಭಕ್ತಿ ರೂಪನು ಬಸವ, ನಿತ್ಯ ರೂಪನು ಬಸವ, ಬಸವಣ್ಣನೇ ನಿಜವಾದ ಭಕ್ರನೆಂದು’ ಹೇಳಿದ್ದಾರೆ. ತನು-ಮನ-ಧನ ಕೊಟ್ಟಾಕ್ಷಣ ಭಕ್ತನಾಗಲಾರ, ಮಾಡುವದರಿಂದ, ಕೊಡುವದರಿಂದ ಭಕ್ತನಾಗಲಾರನೆಂದು ತಿಳಿಸಿರುವ ಶಿವಯೋಗಿಗಳು ತನ್ನ ತಾನರಿತಾಗ, ಕಾಮ ಕ್ರೋಧಗಳನ್ನು ತೊರೆದಾಗ ಭಕ್ತನಾಗುತ್ತಾನೆಂದು ಹೇಳಿದ್ದಾರೆ.

“ಭಕ್ತನ ಮನ ಹೆಣ್ಣೆನೊಳಗಾದಡೆ, ವಿವಾಹವಾಗಿ ಕೊಡುವುದು
ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು
ಭಕ್ತನ ಮನ ಹೊನ್ನಿನೊಳಗಾದಡೆ, ಬಳಲಿ ದೊರಕಿಸುವುದು ನೋಡಾ
ಕಪಿಲಸಿದ್ಧ ಮಲ್ಲಿಕಾರ್ಜುನಾ”
-ಸಿದ್ದರಾಮ(ಸ.ವ.ಸಂ.4,ವ:612)

ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು ಮಹತ್ವದ ಮಾತುಗಳನ್ನಾಡಿದ್ದಾರೆ. ಹೆಣ್ಣು-ಮಣ್ಣು-ಹೊನ್ನು ಮಾಯೆಯೆಂದು ಭಾವಿಸಿದ ಜನಸಮುದಾಯಕ್ಕೆ ಈ ವಚನದ ಮೂಲಕ ಹೊಸ ಭರವಸೆ ನೀಡಿದ್ದಾರೆ. ಶರಣರು ದಾಂಪತ್ಯವನ್ನು ತೊರೆಯಲಿಲ್ಲ, ಸಂಸಾರಿಗಳಾಗಿದ್ದುಕೊಂಡೇ ಮಹತ್ವವಾದುದನ್ನು ಸಾಧಿಸಿದರು. ಭಕ್ತನ ಮನ ಹೆಣ್ಣನ್ನು ಬಯಸಿದರೆ, ವಿವಾಹವಾಗಿ ಕೂಡಬೇಕೇ ಹೊರತು, ಮನಸ್ಸಿಗೆ ಮೋಸಮಾಡಿ ಭಕ್ತನಾದ ನಂತರ ಪರಸತಿಯರ ಸಂಗವ ಮಾಡುವುದು ಅಪರಾಧವೆಂದು ಶರಣರು ತಿಳಿಸಿದ್ದಾರೆ. ಸಂಸಾರಕ್ಕೂ-ಭಕ್ತಿಗೂ ವಿರೋಧವಿಲ್ಲ. ‘ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದ ಶಿವಂಗೆ’ ಎಂದು ಶರಣರು ಸ್ಪಷ್ಟವಾಗಿ ಹೇಳಿದ್ದಾರೆ.

ಭಕ್ರನಾದ ಬಳಿಕ ಅನ್ಯದೈವಕ್ಕೆರಗಬಾರದು, ಮೌಢ್ಯಾಚಾರಗಳನ್ನಾಚರಿಸಬಾರದೆಂದು ಹೇಳಿರುವ ಅಂಬಿಗ ಚೌಡಯ್ಯನವರು ‘ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ, ಕೊರಳಿಗೆ ಕವಡಿಯ ಕಟ್ಟಿ ನಾಯಾಗಿ ಬೊಗಳುವುದು, ಅದಾವ ವಿಚಾರವಯ್ಯ?’ ಎಂದು ಪ್ರಶ್ನಿಸಿದ್ದಾರೆ. ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು, ಪರಸತಿ-ಪರನಿಂದೆ-ಪರÀಧನವ ಹಿಡಿಯದಿರಬೇಕೆಂದು ಹೇಳಿರುವ ಅವರು ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ ಪ್ರಸಾದವ ಮುಟ್ಟಬಾರದು, ಅಂಗ-ಲಿಂಗವು ಸಮರಸವಾಗಿರಬೇಕೆಂದು ತಿಳಿಸಿದ್ದಾರೆ.

ಭಕ್ತನಾದವನು ಹುಸಿಯ ನುಡಿಯಬಾರದು, ವ್ಯಸನಮಾಡಬಾರದು,ವಿಷಯಗಳಿಗೊಳಗಾಗಬಾರದೆಂದು ಹೇಳಿರುವ ಅಗ್ಛವಣ ಹಂಪಯ್ಯನವರು ಭಕ್ತನಾದವನು ಕೋಪ-ತಾಪಗಳಿಂದ ದೂರವಿರಬೇಕೆಂದು ತಿಳಿಸಿದ್ದಾರೆ. ಭಕ್ತನ ಪಥ, ಲೋಕಕ್ಕೆ ಹೊಸತು ಎಂದು ಭಕ್ತನ ಲಕ್ಷಣಗಳನ್ನು ವಿವರಿಸಿದ್ದಾರೆ. ಭಕ್ತನಿಗೆ ಸತ್ಯವೇ ನಿತ್ಯದ ಬೆಳಗೆಂದು ಹೇಳಿರುವ ಅರಿವಿನ ಮಾರಿತಂದೆಯವರು, ಭಕ್ತಸ್ಥಲ ಶ್ರೇಷ್ಠವಾದುದೆಂದು ತಿಳಿಸಿದ್ದಾರೆ.

‘ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂದರು. ಭಕ್ತರಿಗೆ ಕುಲಛಲಗಳುಂಟೆ?’ (1048)ಎಂದು ಪ್ರಶ್ನಿಸಿರುವ ಆದಯ್ಯನವರು ಭಕ್ತನಿಗೆ ಆಸೆ ಆಮಿಷಗಳಿರುವುದಿಲ್ಲವೆಂದು ತಿಳಿಸಿದ್ದಾರೆ. ಗುರುಲಿಂಗಜಂಗಮ ಒಂದೇಯೆಂದರಿಯದೇ ಮಾಡುವ ಭಕ್ತಿ ಅನಾಚಾರವೆಂದು ಉರಿಲಿಂಗಪೆದ್ದಿ ಹೇಳಿದ್ದಾರೆ. ವೇದವನೋದಿದಡೆ ವೇದಜ್ಞನಾಗಬಲ್ಲನೇ ಹೊರತು ಭಕ್ತನಾಗಲಾರ. ಶಾಸ್ತ್ರಗಳನೋದಿದಡೆ ಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲವೆಂದು ಸ್ಪಷ್ಟಪಡಿಸಿರುವ ಉರಿಲಿಂಗಪೆದ್ದಿಗಳು ಇವೆಲ್ಲ ಹೊಟ್ಟೆ ಹೊರೆಯುವ ಕಸುಬುಗಳೆಂದು ವಿಡಂಬಿಸಿದ್ದಾರೆ.

ಗುರು-ಲಿಂಗ-ಜಂಗಮದ ಸುಸಂಗದಿಂದ ಮಾಡುವುದೇ ಭಕ್ತಸ್ಥಲವೆಂದು ಡಕ್ಕೆಯ ಬೊಮ್ಮಣ್ಣ ಹೇಳಿದರೆ, ಭಕ್ತನ ಅಂಗತ್ರಯಗಳು ಬಂಗಾರದಂತೆಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ. ಭಕ್ತನ ಅಂಗತ್ರಯಗಳಲ್ಲಿ ನಡೆನುಡಿ ತಪ್ಪಿದರೆ ಪ್ರಾಯಶ್ಚಿತ್ತವುಂಟು, ಆದರೆ ಜಂಗಮದ ಅಂಗತ್ರಯಗಳಲ್ಲಿ ನಡೆನುಡಿ ತಪ್ಪಿದರೆ ಪ್ರಾಯಶ್ಚಿತ್ತವಿಲ್ಲವೆಂದು ಹೇಳಿದ್ದಾರೆ.

ಭಕ್ತನಾದಲ್ಲಿ ಪಂಕವ ಹೊದ್ದದ ವಾರಿಯಂತಿರಬೇಕು, ಜಲವ ಮುಟ್ಟದ ತೈಲದಂತಿರಬೇಕೆಂದು ಮೆರೆವಿಂಡಯ್ಯನವರು ತಿಳಿಸಿದ್ದಾರೆ. ಗುರುವು ಭಕ್ತನಂಗ, ಲಿಂಗವು ಮಹೇಶ್ವರನಂಗ, ಜಂಗಮವು ಪ್ರಸಾದಿಯ ಅಂಗವೆಂದು ಮೋಳಿಗೆಯ ಮಾರಯ್ಯನವರು ಹೇಳಿದ್ದಾರೆ. ಭಕ್ತನಿಗೆ ಗುರುವೇ ವಿಶ್ವಾಸವೆಂದು ಪ್ರಮಾಣ ಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕೆಂದು ಮೋಳಿಗೆಮಾರಯ್ಯ ತಮ್ಮ ಇನ್ನೊಂದು ವಚನದಲ್ಲಿ ಹೇಳಿದ್ದಾರೆ.

‘ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ, ಭಕ್ತರಿಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ’ ವೆಂದು ಹೇಳಿರುವ ಸಕಲೇಶ ಮಾದರಸರು, ಬಸವಣ್ಣನೇ ಭಕ್ತ, ಪ್ರಭುದೇವನೇ ಶರಣ, ಎಂದು ತಿಳಿಸಿದ್ದಾರೆ.

ಭಕ್ತಿಸ್ಥಲವೆಲ್ಲರಿಗೂ ಇಲ್ಲವೆಂದು ಹೇಳಿರುವ ಸೊಡ್ಡಳಬಾಚರಸರು, ಹಾಗದಾಸೆ-ಹಣದಾಸೆ-ಹೆಣ್ಣು-ಮಣ್ಣುಗಳ ಅಸೆಯಿರುವವರು ಭಕ್ತರಲ್ಲವೆಂದು ತಿಳಿಸಿದ್ದಾರೆ. ಭಕ್ತರಲ್ಲದವರೊಡನೆ ಆಡದಿರು, ದುರ್ಜನರ ಸಂಗವ ಮಾಡದಿರೆಂದು ಬುದ್ಧಿವಾದ ಹೇಳಿದ್ದಾರೆ.

ಭಕ್ತನಾದರೆ ಉಲುಹಡಗಿದ ವೃಕ್ಷದಂತಿರಬೇಕು, ಶಿಶುಕಂಡ ಕನಸಿನಂತಿರಬೇಕೆಂದು ಹೇಳಿರುವ ಹಡಪದಪ್ಪಣ್ಣನವರು; ಭಕ್ತನಾದರೆ ಮುಕ್ತಿ ಪಥಗಳಿಗೆ ನಿಲುಕದಂತಿರಬೇಕೆಂದು ತಿಳಿಸಿದ್ದಾರೆ. ‘ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ ಈ ಎರಡರ ಸಕೀಲ ಸಂಬಂಧವನರಿಯುವುದೇ’(ವ:997)ಆಧ್ಯಾತ್ಮವೆಂದು ತಿಳಿಸಿರುವ ಅವರು ಭಕ್ತ-ಭವಿ ಕುರಿತಂತೆ ಹೊಸ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ.

‘ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ, ಗುಣವಿಲ್ಲದ ನಂಟು ಮುಂದೇನಪ್ಪುದೊ?’ವ:(1159)ಎಂದು ಪ್ರಶ್ನಿಸಿರುವ ಹಾವಿನಹಾಳ ಕಲ್ಲಯ್ಯನವರು, ಗುರುಭಕ್ತ-ಆಚಾರಭಕ್ತ-ಪ್ರಸಾದಭಕ್ತ-ಲಿಂಗಭಕ್ತ ಯಾರಿದ್ದರೂ ಜಂಗಮವನಾರಾಧಿಸಬೇಕೆಂದು ಹೇಳಿದ್ದಾರೆ.

ಜಾಲಗಾರ ಜಲವನ್ನು ಹೊಕ್ಕು ಹಲವು ಜಲಚರಗಳನ್ನು ಕೊಂದು ನಲಿದಾಡುತ್ತಾನೆ, ಆದರೆ ತನ್ನಮನೆಯಲ್ಲಿ ಶಿಶು ಸತ್ತಡೆ ಅಳುತ್ತಾನೆ. ಚೆನ್ನಮಲ್ಲಿಕಾರ್ಜುನನ ಭಕ್ತನಾಗಿದ್ದುಕೊಂಡು ಜೀವಹಿಂಸೆ ಮಾಡಿದರೆ ಹೇಗೆಂದು ಅಕ್ಕಮಹಾದೇವಿ ಪ್ರಶ್ನಿಸಿದ್ದಾರೆ. ‘ಭಕ್ತಂಗೆ ಭಯವುಂಟೆ? ನಿತ್ಯಂಗೆ ಸಾವುಂಟೆ?’ ಎಂದು ಕೇಳಿರುವ ಅಕ್ಕಮ್ಮನವರು, ಸದ್ಭಕ್ತರಿಗೆ ಮಿಥ್ಯತಥ್ಯವೆಂಬುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

‘ಗರ್ವದಿಂದ ಮಾಡುವ ಭಕ್ತಿ ದ್ರವ್ಯದಕೇಡು, ಧೃಢವಿಲ್ಲದ ಭಕ್ತಿ, ಅಡಿ ಒಡೆದ ಕುಂಭದಲ್ಲಿ ಜಲವ ತುಂಬಿದಂತೆ’(ವ:716)ಎಂದು ಹೇಳಿರುವ ಆಯ್ದಕ್ಕಿಲಕ್ಕಮ್ಮ ಭಕ್ತನಿಗೆ ಸಂಭಂಧಿಸಿದಂತೆ ಮಹತ್ವದ ವಚನ ರಚಿಸಿದ್ದಾರೆ.

“ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಆಜಾತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ?
-ಆಯ್ದಕ್ಕಿ ಲಕ್ಕಮ್ಮ(ಸ.ವ.ಸಂ.5,ವ:710)

ಅರಸರಿಗೆ ರಾಜರಿಗೆ ಆಸೆಯಿರಬಹುದೇ ಹೊರತು ಶಿವಭಕ್ತರಾದವರಿಗೆ ಆಸೆ ದುರಾಸೆಗಳಿರಬಾರದೆಂದು ಹೇಳಿರುವ ಆಯ್ದಕ್ಕಿ ಲಕ್ಕಮ್ಮ ನಿಜವಾದ ಕಾಯಕವೇನೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ರೋಷವೆಂಬುದು ಯಮದೂತರಿಗಲ್ಲದೆ, ಭಕ್ತರಿಗಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

‘ಭಕ್ತಸ್ಥಲ ಶುಭಸೂಚನೆಯಾಯಿತು ಬಸವನಲ್ಲಿ ಎನಗೆ’ ಎಂದು ನಮ್ರತೆಯಿಂದ ತಿಳಿಸಿರುವ ನೀಲಾಂಬಿಕೆಯವರು, ಬಸವ ನಡೆದ ಭಕ್ತಿಸ್ಥಲದಲ್ಲಿ ನಡೆಯುವಾಸೆ ತಮಗೆಂದು ಹೇಳಿಕೊಂಡಿದ್ದಾರೆ.

ಹೀಗೆ ನಿಜಭಕ್ತಿಯನ್ನು ಕುರಿತು, ಭಕ್ತಸ್ಥಲವನ್ನು ಕುರಿತು ಅನೇಕ ವಚನಕಾರರ ವಚನಗಳಲ್ಲಿ ಹಲವು ಉಲ್ಲೇಖಗಳಿವೆ. ಭಕ್ತಿಯೆಂಬುದು ಸರಳವಲ್ಲ, ಭಕ್ತನಾದವನ ನಡೆ-ನುಡಿ ಸಾಮಾನ್ಯ ಜನರಿಗೆ ಅಷ್ಟೊಂದು ಸುಲಭವಲ್ಲವೆಂದು ತಿಳಿಸಿರುವ ಇವರು ಭಕ್ತನಾದಾಗಲೇ ಷಟ್‍ಸ್ಥಲಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ, ಲಿಂಗಾಯತ ಧರ್ಮವನ್ನು ಸ್ವೀಕರಿಸಿದಂತಾಗುತ್ತದೆಂದು ಸ್ಪಷ್ಟಪಡಿಸಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪಾರ್ಶ್ವೋತ್ತನಾಸನ, ಪರಿವೃತ್ತ ಜಾನುಶೀರ್ಷಾಸನ

30-11-2023 ಬೆಂಗಳೂರು

''ಒಂದು ಬದಿಗೆ ದೇಹವನ್ನು ತಿರುಗಿಸಿಟ್ಟು, ಮೇಲ್ಮುಖವಾಗಿ ಚಾಚಿಟ್ಟು ಅಭ್ಯಾಸ ನಡೆಯುವುದೇ `ಪಾರ್ಶ್ವೋತ್ತಾನಾಸನ&...

ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ

27-11-2023 ಬೆಂಗಳೂರು

''ಕನ್ನಡ ಪದಕೋಶದ ಬಗೆಗೆ ತುಸು ಪರಿಚಯವನ್ನು ಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಕನ್ನಡದ ಪದಕೋಶ ಎಶ್ಟು ದೊಡ್ಡದು? ...

ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ

24-11-2023 ಬೆಂಗಳೂರು

''ಸೋಜಿಗದ ಸಂಗತಿ ಎಂದರೆ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ತತ್ವಪದಗಳ ಮಹೋನ್ನತ ಕಾಲಘಟ್ಟವನ್ನು ಗುರುತಿ...