ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು

Date: 06-02-2023

Location: ಬೆಂಗಳೂರು


''ಭಕ್ತ-ಬ್ರಹ್ಮತತ್ವ, ಮಾಹೇಶ್ವರ-ವಿಷ್ಣುತತ್ವ, ಪ್ರಸಾದಿ-ರುದ್ರತತ್ವ, ಪ್ರಾಣಲಿಂಗಿ-ಈಶ್ವರತತ್ವ, ಶರಣ-ಸದಾಶಿವತತ್ವ, ಐಕ್ಯ-ಮಹಾಭೇದ ತತ್ವವೆಂದು ತಿಳಿಸಿರುವ ಪ್ರಸಾದಿ ಭೋಗಣ್ಣನವರು ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲವೆಂದು ಹೇಳಿದ್ದಾರೆ'' ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಐಕ್ಯಸ್ಥಲ’ ವಿಚಾರದ ಕುರಿತು ಚರ್ಚಿಸಿದ್ದಾರೆ...

ಉರಿಲಿಂಗಪೆದ್ದಿಗಳು ತಿಳಿಸಿದಂತೆ, ಕಿನ್ನರಿ ಬ್ರಹ್ಮಯ್ಯಗಳೂ ಕೂಡ ‘ಭಕ್ತಿಸ್ಥಲದಲ್ಲಿ ಬಯಲಾದವರು ಬಸವಣ್ಣನವರು ಮಾತ್ರ’ ಎಂದು ಹೇಳಿದ್ದಾರೆ. ‘ಭಕ್ತಸ್ಥಲ ಬಸವಣ್ಣಗಾಯಿತ್ತು, ಮಹೇಶ್ವರಸ್ಥಲ ಮಡಿವಾಳಯ್ಯಂಗಳಿಗಾಯಿತ್ತು, ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು, ಪ್ರಾಣಲಿಂಗಸ್ಥಲ ಚಂದಯ್ಯಂಗಾಯಿತ್ತು,

ಶರಣಸ್ಥಲ ಘಟ್ಟಿವಾಳಯ್ಯಂಗಾಯಿತ್ತು, ಐಕ್ಯಸ್ಥಲ ಅಜಗಣ್ಣಂಗಾಯಿತ್ತೆಂದು’ ಡಕ್ಕೆಯ ಬೊಮ್ಮಣ್ಣನವರು ಹೇಳಿದ್ದಾರೆ. ಪೃಥ್ವಿ, ಅಪ್, ತೇಜು, ವಾಯು, ಆಕಾಶ ಈ ಪಂಚಭೂತಗಳು, ಷಟ್‍ಸ್ಥಲಗಳಿಗೆ ಹೇಗೆ ಮಾಯೆಯಾಗಿವೆಯೆಂಬುದನ್ನು ಇವರು ತಮ್ಮ ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ಅನೇಕ ವಚನಕಾರರು ಷಟ್‍ಸ್ಥಲದ ಬಗೆಗೆ ಹೇಳುವಾಗ ಪಂಚಭೂತಗಳನ್ನು ಪ್ರಸ್ತಾಪಿಸಿದ್ದಾರೆ.

“ಭಕ್ತಿಸ್ಥಲ ಮೂರು, ಮಾಹೇಶ್ವರಸ್ಥಲ ನಾಲ್ಕು
ಪ್ರಸಾದಿಸ್ಥಲ ಐದು, ಪ್ರಾಣಲಿಂಗಿಸ್ಥಲ ಆರು,
ಶರಣಸ್ಥಲವೆರಡು, ಐಕ್ಯಸ್ಥಲ ಒಂದು ಭಕ್ತಂಗೆ ಮೂರು ಗೊತ್ತು,
ಮಾಹೇಶ್ವರಂಗೆ ನಾಲ್ಕು ಗೊತ್ತು
ಪ್ರಸಾದಿಗೆ ಐದುಗೊತ್ತು, ಪ್ರಾಣಲಿಂಗಿಗೆ ಆರುಗೊತ್ತು,
ಶರಣಂಗೆ ಎರಡುಗೊತ್ತು, ಐಕ್ಯಂಗೆ ಗೊತ್ತಾಗಿ
ಸಂಬಂಧಿಸಿ ಷಟ್‍ಸ್ಥಲ ರೂಪಾದಲ್ಲಿ ಒಂದು ಸ್ಥಲಕ್ಕಾರು
ಹೊರೆಹೊರೆಯಾಗಿ ಮಿಶ್ರವಾಗಿ ಸ್ಥಲಂಗಳು ಚಲಿಸುವಲ್ಲಿ
ನೂರೊಂದು ಸ್ಥಲಗಳಲ್ಲಿ ಆರೋಪಿಸಿ ನಿಂದುದು...............”

- ದಾಸೋಹದ ಸಂಗಣ್ಣ(ಸ.ವ.ಸಂ..6,ವ:1138)

ಈ ವಚನದಲ್ಲಿ ದಾಸೋಹದ ಸಂಗಣ್ಣನವರು ಷಟ್‍ಸ್ಥಲಗಳ ಮೂಲಕ ನೂರೊಂದು ಸ್ಥಲಗಳನ್ನು ಗುರುತಿಸಿದ್ದಾರೆ. 15ನೇ ಶತಮಾನದಲ್ಲಿ ಬಂದ ನೂರೊಂದು ವಿರತ್ತರು ಈ ನೊರೊಂದು ಸ್ಥಲಗಳಲ್ಲಿ ಪ್ರಾಮುಖ್ಯತೆ ನೀಡಿದರು.

ಭಕ್ತ-ಬ್ರಹ್ಮತತ್ವ, ಮಾಹೇಶ್ವರ-ವಿಷ್ಣುತತ್ವ, ಪ್ರಸಾದಿ-ರುದ್ರತತ್ವ, ಪ್ರಾಣಲಿಂಗಿ-ಈಶ್ವರತತ್ವ, ಶರಣ-ಸದಾಶಿವತತ್ವ, ಐಕ್ಯ-ಮಹಾಭೇದ ತತ್ವವೆಂದು ತಿಳಿಸಿರುವ ಪ್ರಸಾದಿ ಭೋಗಣ್ಣನವರು ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲವೆಂದು ಹೇಳಿದ್ದಾರೆ. ಭೋಗಣ್ಣನವರು ಹೇಳಿರುವ ಬ್ರಹ್ಮ-ವಿಷ್ಣು-ರುದ್ರ-ಈಶ್ವರ ಇವು ಇಲ್ಲಿ ತತ್ವಗಳಾಗಿ ಬಂದಿವೆಯೇ ಹೊರತು ಅವತಾರಗಳಾಗಿ ದೇವರುಗಳಾಗಿ ಬಂದಿಲ್ಲವೆಂಬುದನ್ನು ಗಮನಿಸಬೇಕು.

“ಭಕ್ತಸ್ಥಲ ವರ್ತುಳ ರೂಪಾಗಿಹುದು,
ಮಾಹೇಶ್ವರಸ್ಥಲ ಖಂಡಿಕಾವರಣವಾಗಿಹುದು,
ಪ್ರಸಾದಿಸ್ಥಲ ತ್ರಿರೇಖೆಯಾಗಿಹುದು,
ಪ್ರಾಣಲಿಂಗಿಸ್ಥಲ ಶಕ್ತಿನಾಭಿಸ್ವರೂಪವಾಗಿಹುದು
ಶರಣಸ್ಥಲ ಪಂಚಸೂತ್ರ ಪ್ರಕಾರವ ಕೂಡಿಕೊಂಡು
ಐಕ್ಯಸ್ಥಲ ದಿಗ್ವಳಯಂಗಳಿಲ್ಲದೆ ಭೇದನಾಮ ಶೂನ್ಯವಾಗಿಹುದು”
-ಪ್ರಸಾದಿ ಭೋಗಣ್ಣ(ಸ.ವ.ಸಂ.8,ವ:76)

ಈ ವಚನದಲ್ಲಿ ಪ್ರಸಾದಿಭೋಗಣ್ಣನವರು ಷಟ್‍ಸ್ಥಲಗಳ ರೂಪ-ಸ್ವರೂಪದ ಬಗ್ಗೆ ಮಾತನಾಡಿದ್ದಾರೆ. ‘ಷಡುಚಕ್ರವಲಯದೊಳಗೆ ನಾನಾಡುವೆ ಬಹುರೂಪ’ ಎಂದು ತನ್ನ ವೃತ್ತಿಪ್ರತಿಮೆಯ ಮೂಲಕ ಷಟ್ ಸ್ಥಲಗಳನ್ನು ಪರಾಮರ್ಶಿಸಿದ ಬಹುರೂ ಚೌಡಯ್ಯನವರು ಇಲ್ಲಿ ಶರಣಸತಿ-ಲಿಂಗಪತಿಗಳೆಂಬವೆ ಪ್ರಾಣ ವಾಗಿವೆಯೆಂದು ತಿಳಿಸಿದ್ದಾರೆ. ಆಸೆಯ ಬಿಟ್ಟವನೇ ಭಕ್ತ, ವೇಷವ ಬಿಟ್ಟವನೇ ಮಾಹೇಶ್ವರ, ಭವಪಾಶವ ಬಿಟ್ಟವನೇ ಪ್ರಸಾದಿ, ಭಾವ ಘಟಿಸಿದಡೆ ಪ್ರಾಣಲಿಂಗಿ, ಬಯಕೆನಿಂತಡೆ ಶರಣ, ಅರಿವು ಶೂನ್ಯವಾದಡೆ ಐಕ್ಯ ಎಂದು ಬಾಚಿ ಕಾಯಕದ ಬಸವಣ್ಣನವರು ಷಟ್‍ಸ್ಥಲದ ಲಕ್ಷಣಗಳನ್ನು ಹೇಳಿದ್ದಾರೆ.

ವಿಶ್ವಾಸವಿಲ್ಲದವನಿಗೆ ಷಟ್‍ಸ್ಥಲಗಳಿಲ್ಲವೆಂದು ಸ್ಪಷ್ಟಪಡಿಸಿರುವ ಬಾಹೂರ ಬೊಮ್ಮಣ್ಣನವರು, ಭಕ್ತ-ಮಾಹೇಶ್ವರ-ಪ್ರಸಾದಿಸ್ಥಲಗಳು ಗುರು-ಲಿಂಗ-ಜಂಗಮ ರೂಪವಾಗಿವೆಯೆಂದು ತಿಳಿಸಿದ್ದಾರೆ. ಬಸವಣ್ಣನ ಪ್ರಸಾದವ ಕೊಂಡ ಕಾರಣ ತನಗೆ ಭಕ್ತಿಸಾಧ್ಯವಾಯಿತೆಂದು ಹೇಳಿರುವ ಬಿಬ್ಬಿಬಾಚಯ್ಯನವರು ಚೆನ್ನಬಸವಣ್ಣನ ಪ್ರಸಾದದಿಂದ ಜ್ಞಾನ, ಪ್ರಭುದೇವರ ಪ್ರಸಾದದಿಂದ ವೈರಾಗ್ಯ, ಸಾಧ್ಯವಾಯಿತೆಂದು ಹೇಳಿದ್ದಾರೆ.

‘ಪೃಥ್ವಿಯ ಗುಣವುಳ್ಳಡೆ ಭಕ್ತ, ಅಪ್ಪುವಿನ ಗುಣವುಳ್ಳಡೆ ಮಾಹೇಶ್ವರ’ ಎಂದು ತಿಳಿಸಿರುವ ಮಡಿವಾಳ ಮಾಚಿದೇವರು, ಸತ್ಯಸದಾಚಾರ ಸದ್ಭಕ್ತನಾದಡೆ ಘೋಡಶ ಭಕ್ತಿಯ ತಿಳಿಯಬೇಕೆಂದು ಹೇಳಿದ್ದಾರೆ. ಇಷ್ಟಲಿಂಗ-ಭಾವಲಿಂಗ-ಪ್ರಾಣಲಿಂಗಗಳ ಅಂಗಗಳು, ಭಕ್ತ-ಮಾಹೇಶ್ವರ-ಪ್ರಸಾದಿ ಸ್ಥಲಗಳಿಗೆ ಅಂಗಗಳಾಗಿವೆಯೆಂದು ತಿಳಿಸಿರುವ ಮೋಳಿಗೆಮಾರಯ್ಯನವರು; ಅಂಗಭವಿ-ಭಕ್ತನನ್ನು, ಮನಭವಿ-ಮಾಹೇಶ್ವರನನ್ನು. ರುಚಿಭವಿ-ಪ್ರಸಾದಿಯನ್ನು ಕಾಡತ್ತಲಿವೆಯೆಂದು ಹೇಳಿದ್ದಾರೆ. ಷಟ್‍ಸ್ಥಲಗಳ ಅಂಗಗಳಾಗಿ ಷಟ್‍ವೈರಿಗಳು ಕಾಡುತ್ತಿವೆಯೆಂದು ತಿಳಿಸಿರುವ ಅವರು; ಷಟ್‍ಸ್ಥಲ ಸಾಧಕನು, ಪಂಚಭೂತಗಳಿಗೆ ಪೂರಕನಾಗಿರಬೇಕೆಂದು ಹೇಳಿದ್ದಾರೆ.

ಈ ಷಟ್‍ಸ್ಥಲಗಳು ಕ್ರಮವಾಗಿ ಬ್ರಹ್ಮ, ವಿಷ್ಟು, ರುದ್ರ, ಈಶ್ವರ, ಸದಾಶಿವ ರೂಪಗಳನ್ನು ಹೇಗೆ ನಾಶಪಡಿಸುತ್ತವೆಯೆಂದು ಹೇಳಿರುವ ಮೋಳಿಗೆಮಾರಯ್ಯನವರು ಕಿವಿಯ ಮುಚ್ಚಿ ಕಣ ್ಣನಲ್ಲಿ ಕೇಳಿದಾಗ ಭಕ್ತಸ್ಥಲ, ಕಣ್ಣಮುಚ್ಚಿ ಕರ್ಣದಲ್ಲಿ ನೋಡಿದಾಗ ಮಾಹೇಶ್ವರಸ್ಥಲ ಕಾಣ ಸುತ್ತವೆಯೆಂದು ತಿಳಿಸಿದ್ದಾರೆ.

“ಮಣ್ಣು ನೀರಿನಂತೆ ಆದಾಗಲೆ ಭಕ್ತಸ್ಥಲ
ಬಂಗಾರ ಬಣ್ಣ ಆದಂತೆ ಮಾಹೇಶ್ವರಸ್ಥಲ
ಅನಲ ಅನಿಲನಂತಾದಾಗ ಅದೇ ಪ್ರಸಾದಿಸ್ಥಲ
ಪ್ರತಿಜ್ಯೋತಿ ಪ್ರಮಾಣ ಸಿದಾಗ ಪ್ರಾಣಲಿಂಗಿಸ್ಥಲ
ಸುಮ್ಮಾನ ತಲೆದೋರದಿದ್ದಾಗ ಶರಣಸ್ಥಲ
-ಮೋಳಿಗೆ ಮಾರಯ್ಯ(ಸ.ವ.ಸಂ.8,ವ:2033)

ಮೋಳಿಗೆ ಮಾರಯ್ಯನವರು ಈ ವಚನದಲ್ಲಿ ಏನೇನಾದರೆ ಯಾವ್ಯಾವ ಸ್ಥಲಗಳು ಕಾಣ ಸಿಕೊಳ್ಳುತ್ತವೆಂದು ಹೇಳುತ್ತ ಕಾರ್ಯಕಾರಣ ಸಂಬಂಧ ಕುರಿತು ಚರ್ಚಿಸಿದ್ದಾರೆ. ಬಂಗಾರ ಬಣ್ಣ ಆದಂತೆ ಮಾಹೇಶ್ವರಸ್ಥಲವೆಂಬ ನುಡಿ ತುಂಬ ಕಾವ್ಯಾತ್ಮಕವಾಗಿದೆ.

‘ಷಟ್‍ಸ್ಥಲವ ಸೂರೆಗೊಂಡವರು ಚೆನ್ನಬಸವಣ್ಣನವರು’ ಎಂದು ಸಂಗಮೇಶ್ವರ ಅಪ್ಪಣ್ಣನವರು ಹೇಳಿದರೆ, ‘ಷಟ್‍ಸ್ಥಲದ ಆದಿಕುಳವು ಯಾರಿಗೂ ಅಳವಡದು’ ಎಂದು ಹಾವಿನಹಾಳ ಕಲ್ಲಯ್ಯನವರು ತಿಳಿಸಿದ್ದಾರೆ. ‘ಭಾಗ್ಯವುಳ್ಳಾತಂಗೆ ಭಕ್ತಿಸ್ಥಲ, ಮಕ್ಕಳುಳ್ಳಾತಂಗೆ ಮಾಹೇಶ್ವರಸ್ಥಲ’ ವೆಂದು ಹೇಳಿರುವ ಹಡಪದಪ್ಪಣ್ಣನವರು ಷಟ್‍ಸ್ಥಲಗಳ ಬಗೆಗೆ ತಮ್ಮ ವಚನದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಭಕ್ತನಾದರೆ ಮುಕ್ತಿ ಪಥವನ್ನು ಮೀರಿರಬೇಕು, ಮಾಹೇಶ್ವರನಾದರೆ ಮನದಲ್ಲಿ ಮನ್ಮಥನಿಲ್ಲದಂತಿರಬೇಕು, ಪ್ರಸಾದಿಯಾದರೆ ತನ್ನ ಪ್ರಾಣವೆ ಅಗ್ನಿ ಸ್ವರೂಪವಾಗಿರಬೇಕು, ಪ್ರಾಣಲಿಂಗಿಯಾದರೆ ಪ್ರಾಣವ ನಿಲ್ಲಿಸಿ ಲಿಂಗ ಪ್ರಾಣ ಯಾಗಿರಬೇಕು, ಶರಣನಾದರೆ ತನ್ನ ಮರಣಬಾಧೆಯ ಗೆದ್ದಿರಬೇಕು, ಐಕ್ಯನಾದರೆ ಅನ್ನಪಾನಾದಿಚ್ಛೆಗೆ ಇಲ್ಲದಿರಬೇಕೆಂದು ವಿವರಿಸುವ ಹಡಪದಪ್ಪಣ್ಣನವರು ಷಟ್‍ಸ್ಥಲಗಳ ಬಗ್ಗೆ ಸ್ಪಷ್ಟಚಿತ್ರಣ ನೀಡಿದ್ದಾರೆ.

ಭಕ್ತನಾದಡೆ ತನುಮನ ಧನದಾಸೆ ಅಳಿದಿರಬೇಕು, ಮಾಹೇಶ್ವರನಾದರೆ ಪರಧನದಾಸೆಯ ಬಿಡಬೇಕೆಂದು ಹೇಳಿರುವ ಸೊಡ್ಡಳಬಾಚರಸರು ಎಲ್ಲರಿಗೂ ಷಟ್‍ಸ್ಥಲ ಸಿಗುವುದು ಸುಲಭವಲ್ಲವೆಂದು ತಿಳಿಸಿದ್ದಾರೆ.

‘ಸರ್ವಜೀವಕ್ಕೆ ದಯಾಪರನಾಗಿಪ್ಪುದು ಭಕ್ತಸ್ಥಲ, ಗುರು-ಲಿಂಗ ಜಂಗಮರ ಹೆರೆಹಿಂಗಿ ಚತುರ್ವಿಧವನೊಳಕೊಂಡಿರುವುದು ಶರಣಸ್ಥಲ, ಆ ಐದನೂ ಅವಗವಿಸಿ ನಿಂದುದು ಐಕ್ಯಸ್ಥಲ’ವೆಂದು ಶಿವಲೆಂಕ ಮಂಚಣ್ಣನವರು ತಮ್ಮ ವಚನದಲ್ಲಿ ವಿವರಿಸಿದ್ದಾರೆ.

ಬಸವಣ್ಣನಭಕ್ತಿ, ಚೆನ್ನಬಸವಣ್ಣನ ಜ್ಞಾನ, ಮಡಿವಾಳಯ್ಯನ ನಿಷ್ಟೆ, ಅಜಗಣ್ಣನ ಐಕ್ಯಸ್ಥಲ ತನಗಾಯಿತ್ತೆಂದು ಹೇಳಿರುವ ಅಕ್ಕಮಹಾದೇವಿ ಷಟ್‍ಸ್ಥಲಗಳ ಗುಣವಿಶೇಷತೆ ಕುರಿತು ಚರ್ಚಿಸಿದ್ದಾರೆ.

“ತನ್ನಲ್ಲಿ ಸಕಲ ಪ್ರಾಣ ಗಳ ಆತ್ಮಚೇತನವ ಕಂಡು
ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ,
ತನಗೆ ಬಂದ ಅಪವಾದ ನಿಂದೆಗೆ ಎದೆಗುಂದದೆ
ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ
ಅನಾದಿ ಬೋಧ ಶಕ್ತಿಯನು
ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ
ಸ್ವತಂತ್ರಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ
ಅಲುಪ್ತಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ
ಅನಂತಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ...........”
-ಅಕ್ಕಮಹಾದೇವಿ(ಸ.ವ.ಸಂ.5,ವ:209)

ಈ ವಚನದಲ್ಲಿ ಅಕ್ಕಮಹಾದೇವಿ ಯಾವ್ಯಾವ ಸ್ಥಲದಲ್ಲಿ ಏನನ್ನು ಪಡೆಯಬೇಕೆಂಬುದನ್ನು ವಿವರಿಸಿದ್ದಾರೆ. ‘ಭಕ್ತರಿಗೆ ಬಯಕೆ ಉಂಟೆ? ನಿತ್ಯಂಗೆ ಸಾವುಂಟೆ?’ ಎಂದು ಅಕ್ಕಮ್ಮ ಪ್ರಶ್ನಿಸಿದರೆ, ‘ಭಕ್ತಿಸ್ಥಲವನಳಿದು ಬಟ್ಟಬಯಲ ಕೂಡಿ ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು’ ಎಂದು ನೀಲಮ್ಮ ತಿಳಿಸಿದ್ದಾರೆ. ‘ಆರುಸ್ಥಲದಲ್ಲಿ ನಿಂದವರಿಗೆ ಬೇರೊಂದು ಬ್ರಹ್ಮದ ಮಾತೇಕೆ?’ ಎಂದು ಅಮುಗೆರಾಯಮ್ಮ ಪ್ರಶ್ನಿಸಿದರೆ, ‘ಜಂಗಮವನರಿದಲ್ಲಿ ಷಟ್‍ಸ್ಥಲ ಸಂಬಂಧವಾಯಿತು’ಎಂದು ಮೋಳಿಗೆಯ ಮಹಾದೇವಿ ಹೇಳಿದ್ದಾರೆ. ‘ನಿರವಲಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ’ ಎಂದು ಅಮುಗೆರಾಯಮ್ಮ ತಿಳಿಸಿದರೆ; ‘ಭಕ್ತಗೆ-ವಿಶ್ವಾಸ, ಮಾಹೇಶ್ವರರಿಗೆ-ನಿಷ್ಟೆ, ಪ್ರಸಾದಿಗೆ-ಅಯೋಚಿತ,

ಪ್ರಾಣಲಿಂಗಿಗೆ-ಅರ್ಪಿತಭೇದ, ಶರಣಂಗೆ-ದೃಷ್ಟದಲ್ಲಿ ಬಿಡುಗಡೆ, ಐಕ್ಯಂಗೆ-ಕುರುಹುಗೊಂಬುವ ಮುನ್ನವೇ ನಿರಾಳ’ ಎಂದು ಮೋಳಿಗೆಮಹಾದೇವಿ ವಿವರಿಸಿದ್ದಾರೆ. ಹೀಗೆ ಷಟ್‍ಸ್ಥಲಗಳನ್ನು ಕುರಿತು, ಅವುಗಳ ಗುಣಲಕ್ಷಣಗಳನ್ನು ಕುರಿತು ಕೆಲವು ವಚನಕಾರರು ಹೇಳಿದರೆ, ಷಟ್‍ಸ್ಥಲಗಳ ಮಹತ್ವವನ್ನು ಕುರಿತು ಹಲವು ವಚನಕಾರರು ತಿಳಿಸಿದ್ದಾರೆ. ಷಟ್‍ಸ್ಥಲಗಳು ಸಾಮಾನ್ಯಸಾಧಕನಿಗೆ ಸಾಧ್ಯವಿಲ್ಲವೆಂದು ಕೆಲವರು ಹೇಳಿದರೆ, ಅವು ಸಾಧಕನಿಗೆ ಪೂರಕವಾಗಿವೆಯೆಂದು ಹಲವರು ತಿಳಿಸಿದ್ದಾರೆ. 12ನೇ ಶತಮಾನದ ಶರಣರು ಷಟ್‍ಸ್ಥಲ ಕುರಿತು ಹೊಸ ಚರ್ಚೆ ಆರಂಭಿಸಿದ್ದಾರೆ.

12ನೇ ಶತಮಾನದ ಶರಣರು ಷಟ್‍ಸ್ಥಲಗಳ ಬಗೆಗೆ ಪ್ರಾರಂಭಿಸಿದ ಈ ಹೊಸ ಚರ್ಚೆಯನ್ನರಿಯದವರು ಹಿಂದಿದ್ದ ಷಟ್‍ಸ್ಥಲಗಳಿಗೂ, ಶರಣರು ಹೇಳಿರುವ ಷಟ್‍ಸ್ಥಲಗಳಿಗೂ, ಅಂತರವನ್ನು ಕಾಣದಾಗಿದ್ದಾರೆ. ವಚನಗಳ ಸರಿಯಾದ ಓದು ಸೂಕ್ಷ್ಮದೃಷ್ಟಿಯಿದ್ದರೆ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಭಕ್ತ-ಶರಣನ ಹಂತ ತಲುಪಿದಾಗ ಆತ್ಮ ಪರಮಾತ್ಮನಾಗುತ್ತಾನೆ. ಅದೇ ಐಕ್ಯಸ್ಥಲವಾಗಿದೆ. ಭಕ್ತ-ಮಾಹೇಶ್ವರ-ಪ್ರಸಾದಿ ಇವು ಮೊದಲ ಹಂತದ ಸಾಧನೆಗಳಾದರೆ, ಪ್ರಾಣಲಿಂಗಿ-ಶರಣ-ಐಕ್ಯ ಇವು ಎರಡನೇ ಹಂತದ ಸಾಧನೆಗಳಾಗಿವೆಯೆಂದು ಕಲಕೇತಯ್ಯ ಮೊದಲಾದ ವಚನಕಾರರು ತಿಳಿಸಿದ್ದಾರೆ. ಭಕ್ತನಾದವ ಸುಚಿತ್ತದಿಂದಿರಬೇಕು, ಮಾಹೇಶ್ವರನಾದವ ಸುಬುದ್ಧಿಯಿಂದಿರಬೇಕು, ಪ್ರಸಾದಿ ಸ್ಥಲದಲ್ಲಿ ಅಹಂಕಾರ ಅಳಿದಿರಬೇಕು. ಪ್ರಾಣಲಿಂಗಿಯಾದಾಗ ವಿಶಾಲ ಮನಸ್ಸುಳ್ಳವನಾಗಿರಬೇಕು, ಶರಣಸ್ಥಲದಲ್ಲಿ ಸಕಲ ಜ್ಞಾನವ ಹೊಂದಿರಬೇಕು. ಐಕ್ಯಸ್ಥಲದಲ್ಲಿ ಸದ್ಭಾವ ಮೂಡಿ ದ್ವೈತವಳಿದು ಅದ್ವೈತ ಏರ್ಪಟ್ಟು ಬಯಲುತತ್ವ ಕಾಣಬೇಕೆಂದು ಶರಣರು ತಿಳಿಸಿದ್ದಾರೆ. ಷಟ್‍ಸ್ಥಲಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ, ಅವುಗಳು ಸಾಮಾಜಿಕವಾಗಿಯೂ ಬಹುಮುಖ್ಯವಾಗಿವೆ. ಷಟ್‍ಸ್ಥಲ ಸಾಧಕ ನಿಜವಾದ ಸಮಾಜವಾದಿಯಾಗುತ್ತಾನೆ, ತಾನೇ ಸಮಾಜವಾಗುತ್ತಾನೆ.

ಈ ಅಂಕಣದ ಹಿಂದಿನ ಬರಹಗಳು:
ಗಣಾಚಾರ
ಐಕ್ಯಸ್ಥಲ
ಪ್ರಸಾದಿಸ್ಥಲ
ಮಹೇಶ್ವರಸ್ಥಲ
ಭಕ್ತಸ್ಥಲ
ಷಟ್‍ಸ್ಥಲಗಳು
ಭೃತ್ಯಾಚಾರ
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...