ಹಾಸ್ಯ ರಂಗೋಲಿ

Author : ಮಾಲತಿ ಮುದಕವಿ

Pages 264

₹ 250.00




Year of Publication: 2020
Published by: ಸಾಗರಿ ಪ್ರಕಾಶನ
Address: 275/F-6-1, ಮೊದಲನೇ ಮಹಡಿ, 4ನೇ ಅಡ್ಡರಸ್ತೆ, ಉತ್ತರಾಧಿಮಠ ರಸ್ತೆ, ಮೈಸೂರು. 

Synopsys

ಲೇಖಕಿ ಮಾಲತಿ ಮುದಕವಿ ಅವರ ಹಾಸ್ಯ ಬರೆಹಗಳ ಸಂಗ್ರಹ ಕೃತಿ-ಹಾಸ್ಯ ರಂಗೋಲಿ. ನಗೆಬರೆಗಳಲ್ಲಿ ಸ್ವಂತಿಕೆ ಇದೆ. ಹಾಸ್ಯ ಬರಿಸಲೆಂದೇ ಬರೆದ ಸಾಲುಗಳಲ್ಲ. ಸಹಜ ಘಟನೆ-ಸನ್ನಿವೇಶದ ಮೂಲಕ ಹಾಸ್ಯ ಹೇಗೆ ಉಕ್ಕಿಸಬಹುದು ಎಂಬುದಕ್ಕೆ ಇಲ್ಲಿಯ ಬರೆಹಗಳು ಕನ್ನಡಿ ಹಿಡಿಯುತ್ತವೆ. 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Reviews

ಸುಂದರ ಸಂದೇಶಗಳ ವಿನೋದಮಯ ಪ್ರತಿಪಾದನೆಗಳು

ರತಿರ್ಹಾಸಶ್ಚ ಶೋಕಶ್ಚ ಕ್ರೋಧೋತ್ಸಾಹಾ ಭಯಂ ತಥಾ ಜುಗುಪ್ಸಾ ವಿಸ್ಮಯಶ್ಚೇತಿ ಸ್ಥಾಯೀಭಾವಾಃ ಪ್ರಕೀರ್ತಿತಾಃ ಹೀಗೆ ಎಂಟು ಸ್ಥಾಯೀಭಾವಗಳಿಂದ ಎಂಟು ರಸಗಳು ಹುಟ್ಟುತ್ತವೆ. ಹಾಸದಿಂದ ಹಾಸ್ಯರಸೋತ್ಪತ್ತಿಯಾಗುತ್ತದೆಂದು ಭರತಮುನಿಯು ತನ್ನ ನಾಟ್ಯಶಾಸ್ತ್ರದಲ್ಲಿ ಪ್ರತಿಪಾದಿಸುತ್ತಾನೆ. ಮುಂದೆ ಬಂದ ಅಲಂಕಾರಿಕರು ಒಂಭತ್ತನೆಯದ್ದಾಗಿ ಶಾಂತರಸವನ್ನು ಸೇರಿಸಿದ್ದಾರೆ. ನಗೆಯ ಬಗೆಗಳು ಹಲವು.. ಮೆಲುನಗೆ, ಮುಗುಳನ್ನಗೆ, ಮುಗ್ಧನಗೆ, ಬಿಚ್ಚುನಗೆ, ಹುಚ್ಚುನಗೆ, ಹುಚ್ಚುಚ್ಚಾರ ನಗೆ, ದೇಶಾವರಿ ನಗೆ, ವ್ಯಂಗ್ಯನಗೆ, ಹೊಗೆಯ ನಗೆ, ಅಟ್ಟಹಾಸದ ನಗೆ ಎಂದು. ನಗೆಯೆಂಬುದು ಒಂದು ಸಾಂಸರ್ಗಿಕ ರೋಗದಂತೆ ಕೆಲಸ ಮಾಡುತ್ತದೆ. ಒಬ್ಬರು ನಗುತ್ತಿದ್ದರೆ ಕಾರಣ ಗೊತ್ತಿಲ್ಲದೆ ಇದ್ದರೂ ಇನ್ನೊಬ್ಬನೂ ನಗುತ್ತಾನೆ. ಅವರಿಬ್ಬರನ್ನು ಕಂಡು ಮತ್ತೊಬ್ಬ... ಅವರನ್ನು ಕಂಡು ಇನ್ನಷ್ಟು, ಮತ್ತಷ್ಟು ಜನರು ನಗೆಯ ರೋಗವನ್ನು ಹಚ್ಚಿಕೊಳ್ಳುತ್ತಾರೆ. ಹಾಸ್ಯವು ನಮ್ಮ ಜೀವನದ ವಿವಿಧ ರಂಗಗಳಲ್ಲಿ ಹಾಸುಹೊಕ್ಕಾಗಿದೆ. ಜೀವನದ ಜಂಜಡಗಳಿಂದ ಕುಸಿದ, ಬೇಸತ್ತ ಮನಕ್ಕೆ ಹಾಸ್ಯವೆಂಬುದು ಟಾನಿಕ್ಕಿನಂತೆ ಕೆಲಸ ಮಾಡುತ್ತದೆ. ಅದಕ್ಕೇ ಟಿ. ಪಿ. ಕೈಲಾಸಂ, "ರೋಗಿಗೆ ಪಥ್ಯವಿದ್ದಂತೆ ಜನಕ್ಕೆ ಹಾಸ್ಯ" ಎಂದು ಹೇಳುತ್ತಾರೆ. ಹಾಸ್ಯನಾಟಕ ಪ್ರದರ್ಶನಗಳು, ಹಾಸ್ಯ ಸಂಜೆ ಕಾರ್ಯಕ್ರಮಗಳು ಜನದಟ್ಟಣೆಯಿಂದ ತುಂಬಿದ್ದು, ಪ್ರೇಕ್ಷಕರು ಆ ಕಾರ್ಯಕ್ರಮಗಳಿಂದಾಗಿ ತಮ್ಮ ಬದುಕಿನ ಏಕತಾನತೆ ಹಾಗೂ ಒತ್ತಡದಿಂದ ಬಿಡುಗಡೆ ಹೊಂದಿ ಕೆಲಕಾಲವಾದರೂ ಹರ್ಷದಿಂದ ಕಾಲಕಳೆಯುವಂತಾಗಿದೆ. ನಗೆ ಮಾಸಪತ್ರಿಕೆಗಳು. ವ್ಯಂಗ್ಯಚಿತ್ರಗಳು ಕೂಡ ಜನಮನ್ನಣೆಯನ್ನು ಪಡೆಯುತ್ತಿವೆ. ಆರೋಗ್ಯ ವರ್ಧನೆಯ ಉದ್ದೇಶದಿಂದ ಸುಹಾಸ್ಯ ಪರಿವಾರಗಳು ದೇಶಾದ್ಯಂತ ಹುಟ್ಟಿಕೊಂಡಿದ್ದರೂ ಅಲ್ಲಿಯದು ಕೃತಕ ನಗೆ. ನಗೆ ಅಂತರಗಂಗೆಯಂತೆ ಅಂತರಾಳದಿಂದ ಚಿಮ್ಮಿ ಬಂದಾಗಲೇ ಅದಕ್ಕೊಂದು ಮೆರುಗು, ಸೊಗಸು, ಹೃದಯ ಹಗುರಾದ ಭಾವನೆ. ಹಾಸ್ಯವು ನಮ್ಮ ಅನುದಿನದ ವ್ಯವಹಾರಗಳಲ್ಲಲ್ಲದೆ ಕಥೆ, ಕಾದಂಬರಿ, ಕಾವ್ಯ, ಪ್ರಬಂಧ, ಹರಟೆ, ನಗೆಬರಹ, ನಾಟಕ, ಚುಟುಕು- ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕಂಡುಬರುತ್ತದೆ. ಹಳಗನ್ನಡ ಸಾಹಿತ್ಯದಲ್ಲಿ ಹಾಸ್ಯಕ್ಕೆ ಅಷ್ಟಾಗಿ ಸ್ಥಾನ ದೊರಕಿರದಿದ್ದರೂ ಆಧುನಿಕ ಸಾಹಿತ್ಯದಲ್ಲಿ ಹಾಸ್ಯದ ಫಸಲು ಚೆನ್ನಾಗಿಯೇ ಕಂಡು ಬರುತ್ತಿದೆ. ಹಾಸ್ಯಲೇಖಕರ ಸಂಖ್ಯೆ ಪುಷ್ಕಳವಾಗಿದ್ದರೂ ಹಾಸ್ಯ ಲೇಖಕಿಯರ ಸಂಖ್ಯೆ ವಿರಳವೆಂದೇ ಹೇಳಬಹುದು. ಟಿ. ಸುನಂದಮ್ಮ ಪ್ರಥಮ ಹಾಸ್ಯ ಬರಹಗಾರ್ತಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಹಾಗೆಯೇ ಲೀಲಾ ಮಿರ್ಲೆ, ನುಗ್ಗೆಹಳ್ಳಿ ಪಂಕಜಾ ಮುಂತಾದವರು ಕೂಡ ಹಾಸ್ಯ ಲೇಖಕಿಯರಾಗಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಕಳೆದ ಕಾಲು ಶತಮಾನದಲ್ಲಿ ಈ ಕ್ಷೇತ್ರದಲ್ಲಿ ವಿಶೇಷ ಒಲವು ತೋರಿ ಹೆಸರುವಾಸಿಯಾದ ಮಹಿಳೆಯರಲ್ಲಿ ಭುವನೇಶ್ವರಿ ಹೆಗಡೆ, ಡಾ. ಗುರುದೇವಿ ಹುಲಿಯಪ್ಪನವರಮಠ, ಮಾಲತಿ ಮುದಕವಿ, ನಳಿನಿ ಭೀಮಪ್ಪ ಮೊದಲಾದವರು ಗಮನ ಸೆಳೆಯುತ್ತಾರೆ. ಎರಡು ಸಣ್ಣ ಕಥಾ ಸಂಕಲನಗಳನ್ನು ಪ್ರಕಟಗೊಳಿಸಿದ ಬೆನ್ನಿನಲ್ಲೇ ಮೂರನೇ ಹೊತ್ತಿಗೆಯಾಗಿ ಪ್ರಪ್ರಥಮವಾಗಿ ಒಂದು ಹಾಸ್ಯ ಸಂಕಲನವನ್ನು ಸ್ನೇಹಿತೆ ಮಾಲತಿ ಮುದಕವಿ ಹೊರತರುತ್ತಿದ್ದಾರೆ. ಧಾರವಾಡದಲ್ಲಿಯೇ ಹುಟ್ಟಿ ಬೆಳೆದು ಎಮ್. ಎ. ಶಿಕ್ಷಣವನ್ನು ಪೂರೈಸಿದ ಇವರು ಮದುವೆಯ ನಂತರ ವಿಜಯಪುರದ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 20-25 ವರ್ಷಗಳಿಂದ ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವ ಗಾದೆಯಂತೆ ಮಾಲತಿಯವರು ಕೈಯಾಡಿಸದ ಕ್ಷೇತ್ರವಿಲ್ಲ ಎಂದರೆ ತಪ್ಪಾಗದು. ಕಥ, ಕವನ, ಹಾಸ್ಯ, ಅನುವಾದ, ಚುಟುಕು ಹೀಗೆ ಹಲವಾರು. ಆದಾಗ್ಯೂ ಹಾಸ್ಯ ಅವರ ಅಚ್ಚುಮೆಚ್ಚಿನ ಕ್ಷೇತ್ರ. ಅವರ ಲೇಖನಗಳು ಪ್ರಕಟಗೊಳ್ಳದ ತಿಂಗಳುಗಳೇ ಇಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಇದಲ್ಲದೆ, 'ಫೇಸ್‍ಬುಕ್' ನಂಥ ಜಾಲತಾಣಗಳ ಓದುಗರಿಗೂ ಅವರು ತಮ್ಮ ಕಥೆ, ಕವನಗಳ ರುಚಿ ತೋರಿಸಿದ್ದಾರೆ. ಸಮಯೋಚಿತ ನಗೆಚಟಾಕಿಗಳನ್ನು ಹಾರಿಸುತ್ತ ಸುತ್ತಲಿನವರನ್ನು ಹಸನ್ಮುಖಿಯಾಗಿರಿಸುವ ಕಲೆ ಅವರಿಗೆ ಚೆನ್ನಾಗಿ ಸಿದ್ಧಿಸಿದೆ. ಕೆಲವಾರು ವರ್ಷಗಳಿಂದ ಕೂಡಿಟ್ಟಿರುವ ತಮ್ಮ ಆಯ್ದ ಹಾಸ್ಯ ಬರಹಗಳನ್ನು ಈಗ ಪುಸ್ತಕ ರೂಪದಲ್ಲಿ ಹೊರತರುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಈ ಕೃತಿಯಲ್ಲಿ ಸುಮಾರು ಇಪ್ಪತ್ತುನಾಲ್ಕು ಹಾಸ್ಯ ಲೇಖನಗಳಿದ್ದು ಎಲ್ಲವೂ ಓದುಗರ ಮನಸ್ಸನ್ನು ಮುದಗೊಳಿಸುತ್ತವೆ. ದಿನನಿತ್ಯದ ಆಗುಹೋಗುಗಳನ್ನು ಹಾಸ್ಯದ ಕಣ್ಣಿನಿಂದ ನೋಡುವ ಕಲೆ ಮಾಲತಿಯವರಿಗೆ ಕರಗತವಾಗಿದೆ. ಅದು ಮುಂಜಾನೆಯ ವಾಯುವಿಹಾರವೋ, ಮೊಬೈಲ್ ಫೋನೋ, ರಾಜಕೀಯವೇ, ಜಾಹಿರಾತೋ, ಡಯಟ್ಟೋ ಏನೂ ಆಗಿರಬಹುದು. ಎಡವಟ್ಟಿನ ಅಥವಾ ಪೇಚಿನ ಪ್ರಸಂಗಗಳನ್ನು ವಿನೋದಮಯವಾಗಿ ಕಾಣುವ ಹಾಗೂ ಒಕ್ಕಣಿಸುವ ಅವರ ರೀತಿ ಖುಶಿ ಕೊಡುತ್ತದೆ. ಸಂಕಲನದಲ್ಲಿ ವೈವಿಧ್ಯಮಯ ವಿಷಯಗಳು ಸಮಾವೇಶಗೊಂಡಿವೆ. ಹಾಸ್ಯದಿಂಧ ಸಮಾಜದ ಓರೆ ಕೋರೆಗಳನ್ನು ತಿದ್ದುವ, ಮಾನವ ಸ್ವಭಾವಕ್ಕೆ ಕನ್ನಡಿ ಹಿಡಿದು ತಾವೂ ನಕ್ಕು ಪರರನ್ನೂ ನಗಿಸುವ ಸಹಜಧರ್ಮ ಅವರದು. ಲಘು ವಿಡಂಬನೆಯ ಕೆಲ ಲೇಖನಗಳು ಕೃತಿಯಲ್ಲಿದ್ದರೂ ಇವರದು ಯಾರನ್ನೂ ಚುಚ್ಚದ, ಕಚ್ಚದ, ಎಲ್ಲರೂ ಮೆಚ್ಚುವ ತಿಳಿ ಹಾಸ್ಯದ ಬರವಣಿಗೆ. ನೀರಸ ಸಂಗತಿಗಳಲ್ಲೂ ರಸ-ಸರಸ ಕಾಣುವ ಕಣ್ಣು, ಘಟನೆಗಳನ್ನು ತುಸು ತಿರುಚಿ ನೋಡುವ ತುಂಟ ಮನಸ್ಸು! ರಾಜಾ ಸತ್ಯವ್ರತನ ಕಥೆಯಲ್ಲಿ, ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ ಎಂಬ ಸುಂದರ ಸಂದೇಶವನ್ನು ವಿನೋದಮಯವಾಗಿ ಪ್ರತಿಪಾದಿಸುತ್ತದೆ. 'ನನ್ನವಳ ಸ್ಮಾರ್ಟ್ ಫೋನ್' ದಲ್ಲಿ, ಹೆಂಡತಿ ಕಾಡಿ ಬೇಡಿ ಗಂಡನಿಂದ ಸ್ಮಾರ್ಟ್ ಫೋನ್ ಕೊಡಿಸಿಕೊಳ್ಲುತ್ತಾಳೆ. ಆಕೆ ತನ್ನ ಮಗಳೊಂದಿಗೆ ನಡೆಸುವ ಸಂಭಾಷಣೆಯ ಸ್ಯಾಂಪಲ್... "ಆರತಿ, ಇವತ್ತ ನಾ ಹಾಕಿದ ಹೂವೀಳ್ಯದ ಫೋಟೋ ನೊಡೀಯೇನು?" "ಹೂಂ.. ಭಾರೀ ಛಂದ ಆಗೇದವಾ ಅಲಂಕಾರಾ.. ನಿಂಗ ಟೈಂ ಯಾವಾಗ ಸಿಕ್ತು ಇಷ್ಟೆಲ್ಲಾ ಮಾಡಲಿಕ್ಕೆ?" "ಅಯ್ಯ, ನನಗೆಲ್ಲದವಾ ಟೈಮೂ? ಇದು ನಿಮ್ಮ ಕಾಕೂನ ಮನೀಯೊಳಗ ತಗದದ್ದು.. ನಾ ಆರತಿ ಹಿಡಕೊಂಡು ಫೋಟೋಕ್ಕ ಪೋಜು ಕೊಟ್ಟೇನಿ ಅಷ್ಟ.." ಇನ್ನೊಂದು ಪ್ರಸಂಗ.. "ನಿನ್ನೆ ನೀ ಹಂಸಾ ಮಾಲ್‍ಕ ಹೋಗಿದ್ದೆಲಾ, ಏನ ತೊಗೊಂಡೀ?" "ಅಲ್ಲೇ... ಎರಡು ಕರ್ಚೀಫೂ, ಮೂವತ್ತ ಸೆಲ್ಫೀ..." ಇಂಥ ವಿನೋದ, ವಿಡಂಬನೆಗಳು ಈ ಕೃತಿಯಲ್ಲಿ ಸಾಕಷ್ಟಿವೆ. ಸೇಠ್ ಲಕ್ಷ್ಮೀಪತಿ ಎಂಬ ಜಿಪುಣ ಬಡ್ಡಿ ವ್ಯವಹಾರದಲ್ಲಿ ಅತ್ಯಂತ ಚತುರ. ಅವನನ್ನು ಯಮರಾಜನ ದೂತರು ಚತುರತೆಯಿಂದಲೇ ಮಣ್ಣು ಮುಕ್ಕಿಸಿದ ವಿನೋದಮಯ ಕಥೆ 'ಸೇಠ್ ಲಕ್ಷ್ಮೀಪತಿಯ ಬಡ್ಡಿ ವ್ಯವಹಾರ' ದಲ್ಲಿದೆ. ರಜೆಯನ್ನು ಹಾಕಿ ಒಂದಿಷ್ಟು ನಿರಾಳವಾಗುವ ಗೃಹಿಣಿಗೆ ನಿರಾಳತೆ ಎನ್ನುವುದು ಮರೀಚಿಕೆ... ಅವಳಿಗೆ ಆಫೀಸಿನ ಜವಾಬ್ದಾರಿಯೊಂದಿಗೆ ಮನೆಯ ಜವಾಬ್ದಾರಿಯೂ ಅನಿವಾರ್ಯ ಎನ್ನುವ ನಿತ್ಯಸತ್ಯ 'ರಜೆಯ ಮಜಾ' ದಲ್ಲಿ ನೊಡುತ್ತೇವೆ. 'ಗ್ರಹಣ ಅದನ್ರೀ' ದಲ್ಲಿ ಜ್ಯೋತಿಷಿಗಳ ಢೋಂಗೀತನವನ್ನು ಚೆನ್ನಾಗಿ ಲೇವಡಿ ಮಾಡಿದ್ದಾರೆ. ಕೆಲ ಬರಹಗಳಲ್ಲಿ 'ತನ್ನಿರವಿಂಗೆ ತಾನೇ ನಗೆ' ಎಂಬಂತೆ ತಮ್ಮನ್ನು ತಾವೇ ಗೇಲಿ ಮಾಡಿಕೊಂಡು ನಗೆಯ ಹೊನಲು ಹರಿಸಿದ್ದಾರೆ. ಹೆಂಡತಿಯ ಕಣ್ಣಿನಿಂದ ಗಂಡನನ್ನು ನೋಡುವುದು ಸಹಜ. ಆದರೆ ಕೆಲವೊಮ್ಮೆ ಗಂಡನಾಗಿ ಆತನ ದೃಷ್ಟಿಯಲ್ಲಿ ಹೆಂಡತಿಯನ್ನು ಅಳೆದಿದ್ದಾರೆ. ಲೇಖನದಲ್ಲಿಯ ಸಂಭಾಷಣೆಗಳು ವಾಚಕರಿಗೆ ಆಯಾ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಮಾಡುತ್ತವಲ್ಲದೆ ಇವರು ಒಬ್ಬ ಯಶಸ್ವಿ ನಾಟಕರಚನಾಕಾರ್ತಿಯೂ ಆಗಬಲ್ಲರೆಂಬ ಸೂಚನೆಯನ್ನು ನೀಡುತ್ತವೆ. ನಗೆಯ ಮಹತ್ವವನ್ನು ಸಾರುವ ಲೇಖನಗಳೂ ಈ ಕೃತಿಯಲ್ಲಿವೆ. ಒಟ್ಟಿನಲ್ಲಿ ವ್ಯವಹಾರ ಲೋಕದ ವೈವಿಧ್ಯಮಯ ಘಟನಾವಳಿಗಳನ್ನು ಹಾಸ್ಯದ ಕುಂಚದಲ್ಲಿ ಅದ್ದಿ ಚಿತ್ರಿಸಿದ್ದಾರೆ. ಧಾರವಾಡ ಮಣ್ಣಿನ ಘಮಲು ಪುಸ್ತಕದ ತುಂಬ ಪಸರಿಸಿ ಒಂದು ಬಗೆಯ ಆಪ್ತತೆಯನ್ನು ನೀಡುತ್ತದೆ. ಗೆಳತಿ ಮಾಲತಿ ಮುದಕವಿಯವರಿಗೆ ಕನ್ನಡ ಸಾಹಿತ್ಯದ ಹಾಸ್ಯ ಪ್ರಕಾರದ ಬರವಣಿಗೆಯಲ್ಲಿ ಮನ್ನಣೆಯ ಸ್ಥಾನವಿದೆ. ಸದಭಿರುಚಿಯ ಈ 'ಹಾಸ್ಯ ರಂಗೋಲಿ' ಹಾಸ್ಯ ಸಂಕಲನವನ್ನು ಓದುಗರು ಆಸ್ವಾದಿಸುವುದರಲ್ಲಿ ಸಂಶಯವಿಲ್ಲ. ಅವರು ಈ ನಿಟ್ಟಿನಲ್ಲಿ ಇನ್ನಿಷ್ಟು ಹಾಸ್ಯ ಕೃತಿಗಳನ್ನು ಕೊಟ್ಟು ಹಾಸ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂಬ ಶುಭಕಾಮನೆಗಳು.

-ಶೈಲಾ ಛಬ್ಬಿ ಧಾರವಾಡ (ಮುನ್ನುಡಿ)

Related Books