
‘ಶ್ರೀ ಮಾತಾ ವೈಷ್ಣೋ ದೇವಿ’ ಕೆ. ವಿ. ಲಕ್ಷ್ಮಣ ಅವರ ಪ್ರವಾಸ ಕಥನವಾಗಿದೆ. ಕೆ. ವಿ. ಲಕ್ಷ್ಮಣ ಮೂರ್ತಿ ಅವರು ಕಾರ್ಯನಿಮಿತ್ತ ಭಾರತವನ್ನು ಸುತ್ತಿದ್ದು, ಈ ಕೃತಿ ಅದಕ್ಕೆ ಬಹುದೊಡ್ಡ ನಿದರ್ಶನವಾಗಿದೆ. ಅವರು ವಿಸ್ತಾರವಾದ ನೆಲ ಕಂಡಿದ್ದಾರೆ; ವಿಶಾಲ ಜಲಧಿ ನೋಡಿದ್ದಾರೆ. ಸಸ್ಯ ಸಂಪದದ ಸೌಂದರ್ಯವನ್ನು ಅನುಭವಿಸಿದ್ದಾರೆ. ಪ್ರಾಣಿ ಜಗತ್ತನ್ನೂ ಒಳಹೊಕ್ಕು ಬಂದಿದ್ದಾರೆ. ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತದ ಪರಿಪರಿಯನ್ನು ಚೆನ್ನಾಗಿಯೇ ಅನುಭವಿಸಿದ್ದಾರೆ. ಈ ಗ್ರಂಥ ಅದಕ್ಕೆ ರುಜುವಾತಾಗಿದೆ! ಶ್ರೀ ಮಾತಾ ವೈಷ್ಟೋ ದೇವಿ ಯಾತ್ರೆಯ ದರ್ಶನ ಇಲ್ಲಿನ ಕೇಂದ್ರ ಬಿಂದು! 2016ರ ಆಗಸ್ಟ್‌ನಲ್ಲಿ ಅವರ ಪ್ರವಾಸ; ವೈಷ್ಟೋ ದೇವಿಗೆ ಮುನ್ನ, ಮಹಾರಾಷ್ಟ್ರದ ಮೋರ್‌ಗಾಂವ್‌ನಲ್ಲಿರುವ ಶ್ರೀ ಮಯೂರೇಶ್ವರ ದರ್ಶನ ಮಾಡುತ್ತಾರೆ. ಆನಂತರ ಸಿದ್ಧಟಿಕ್‌ನಲ್ಲಿ ಶ್ರೀ ಸಿದ್ದಿ ವಿನಾಯಕನನ್ನು ಕಂಡು ಪ್ರಣಾಮ ಸಲ್ಲಿಸಿರುತ್ತಾರೆ. ಮಹಾತ್ಮ ಫುಲೆ ಕೃಷಿ ವಿದ್ಯಾಪೀಠದ ಪ್ರಸ್ತಾವೂ ಇಲ್ಲಿದೆ. ಚಿಲಿಪಿಲಿಗಳ ಅಲಾರಾಂ ಎಂಬ ಪದವನ್ನು ಅಲ್ಲಿ ಬಳಸಿದ್ದಾರೆ. ಈ ಪ್ರವಾಸ ಲೇಖಕ- ರಿಗೆ ಪ್ರಯಾಸವಾಗಿ ಕಂಡಿಲ್ಲ. ಅದು “ಬಯಸದೇ ಬಂದ ಭಾಗ್ಯ" ಎಂದೇ ಪರಿಭಾವಿಸುತ್ತಾರೆ. ಮುಂದೆ ಲೇಖಕರು ಶುಭಕೀರ್ತಿ ವೈಷ್ಟೋ ದೇವಿ ಯಾತ್ರಾ ಗ್ರೂಪ್ ರಾಹುರಿಯ ಉದ್ಘಾಟನೆಯ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರವಾಸ ಮುಂದುವರೆದ ಹಾಗೆ-ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಮುಖಾಂತರ ಬೇಲಾಪುರ ರೈಲು ನಿಲ್ದಾಣಕ್ಕೆ ಹೋಗುತ್ತಾರೆ. ಇಲ್ಲೆಲ್ಲಾ ಬಣ್ಣನೆಗಳಲ್ಲಿ ಚಲನೆ ಇದೆ. ಕ್ರಿಯಾಶೀಲ ಬರಹ ಇದೆ. ಬೇಸರ ತರಿಸುವುದಿಲ್ಲ! ಹೀಗೆ ಈ ಪ್ರವಾಸ ಕಥನ ಎಲ್ಲರೂ ಓದ ಬಹುದಾದ ಕೃತಿಯಾಗಿದೆ.
©2025 Book Brahma Private Limited.