ಚಿಣ್ಣರ ಲೋಕದ ಬಣ್ಣದ ಹಾಡು

Author : ಸಿ.ಎಂ.ಗೋವಿಂದರೆಡ್ಡಿ

Pages 168

₹ 100.00




Year of Publication: 2012
Published by: ಅನನ್ಯ ಪ್ರಕಾಶನ, ಮಾಲೂರು
Address: ANANYA PRAKASHANA 5th Main, 2nd Cross, R.S.Post Office, Adarshanagar, Malur-563 160, Kolar Dist. Ph : 9448587027

Synopsys

ನುಡಿವ ಬೆಡಗಿನ ಮಾಯೆ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಈಗಾಗಲೇ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವವರು. ಒಂಬತ್ತಕ್ಕೂ ಮಿಕ್ಕ ಮಕ್ಕಳ ಕವನ ಸಂಕಲನಗಳನ್ನು ಹೊರತರುವುದರ ಮೂಲಕ, ಪಠ್ಯಪುಸ್ತಕಗಳಲ್ಲಿ ತಮ್ಮ ಕವಿತೆಗಳನ್ನು ಸೇರ್ಪಡೆಗೊಳಿಸುವುದರ ಮೂಲಕ, ನಾಡಿನ ಮಕ್ಕಳಿಗೆ ಇವರು ಚಿರಪರಿಚಿತರಾದವರು. ತಮ್ಮ ಮಕ್ಕಳ ಕೃತಿಗಳಿಗಾಗಿ ಹಲವು ಪ್ರಶಸ್ತಿಗಳನ್ನು ಇವರು ಪಡೆಯುವುದರ ಜೊತೆಗೆ ‘ಪ್ರಜಾವಾಣ’ ಪತ್ರಿಕೆ ಏರ್ಪಡಿಸಿದ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಆರು ಬಾರಿ ಬಹುಮಾನಗಳನ್ನು ಪಡೆದು ಒಂದು ದಾಖಲೆಯನ್ನು ಸೃಷ್ಟಿ ಮಾಡಿದವರು. ಇದೀಗ ಅವರ ಇನ್ನೊಂದು ಮಕ್ಕಳ ಕವಿತೆಗಳ ಸಂಕಲನ ‘ಚಿಣ್ಣರ ಲೋಕದ ಬಣ್ಣದ ಹಾಡು’ ಹೊರಬರುತ್ತಿದೆ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

ಬೇಂದ್ರೆ ಬೇಂದ್ರೆ ಅಂದ್ರೆ ಬೇಂದ್ರೆ ನಮ್ಮ ರಾಮಚಂದ್ರ ಬೇಂದ್ರೆ ಅಂಬಿಕಾತನಯದತ್ತ ದತ್ತಾತ್ರೇಯ ಬೇಂದ್ರೆ ಧಾರವಾಡದಲ್ಲಿ ಹುಟ್ಟಿ ಕಾವ್ಯ ದೀಕ್ಷೆ ತಳೆದರು ಗೆಳೆಯರ ಗುಂಪನ್ನು ಕಟ್ಟಿ ಕಾವ್ಯವನ್ನು ಬೆಳೆದರು ನಾಡು ನುಡಿಯ ಸೇವೆ ಮಾಡಿ ಹಾಡಿ ಹೃದಯ ಮಿಡಿದರು ಚಿಗರಿಗಂಗಳ ಚೆಲುವಿ ಭೂಮಿ ಜೀವದೊಡವೆ, ನುಡಿದರು ಸಖೀಗೀತ ಮೇಘದೂತ ನಮ್ಮ ಎದೆಗೆ ತಂದರು ಅದಕು ಇದಕು ಒಲವೇ ಬದುಕು ಎಂದು ಕವಿಯು ಅಂದರು ನಾಕುತಂತಿಯನ್ನು ಮಿಡಿಸಿ ನಾಕವನ್ನು ಸೆಳೆದರು ಶಾಂತಿಮಂತ್ರವನ್ನು ನುಡಿಸಿ ಭ್ರಾಂತಿಯನ್ನು ಕಳೆದರು ದತ್ತಾತ್ರೇಯ ಬೇಂದ್ರೆ ಅಂದ್ರೆ ನಮಗೆ ಪಂಚಪ್ರಾಣವು ಎದೆಯ ಮಿಡಿವ ಗಾನ, ಕಾವ್ಯ ಬದುಕಿಗೊಂದು ತ್ರಾಣವು ***

Reviews

ಈ ಕೃತಿಯ ಕುರಿತು ನಾಲ್ಕು ಮಾತುಗಳನ್ನು ಬರೆಯುವುದು ಸಂತಸದ ವಿಷಯ ಎಂದು ನಾನು ಭಾವಿಸಿದ್ದೇನೆ. ಮಕ್ಕಳಿಗಾಗಿ ಬರೆಯುವುದು ಅಂದರೆ ಸುಲಭದ ಕೆಲಸವಲ್ಲ. ಮಕ್ಕಳ ಪ್ರಪಂಚವೇ ಬೇರೆಯಾಗಿರುತ್ತದೆ. ಅವರು ಯೋಚಿಸುವ ಕ್ರಮ, ಚಿಂತಿಸುವ ರೀತಿ, ಸುತ್ತಲಿನ ಪ್ರಪಂಚವನ್ನು ಗ್ರಹಿಸುವ ವಿಧಾನ ಭಿನ್ನವಾಗಿರುತ್ತದೆ. ಇಂತಹ ಮಕ್ಕಳಿಗೆ ಏನನ್ನಾದರೂ ಹೇಳಬೇಕು ಅನ್ನುವುದಾದರೆ ಅದಕ್ಕೆ ವಿಶೇಷವಾದ ಸಿಧ್ದತೆ, ತಯಾರಿ ಬೇಕು. ನಮ್ಮ ಹಿರಿಯ ಕವಿಗಳಾದ ಕುವೆಂಪು, ರಾಜರತ್ನಂ, ಹೊಯಿಸಳ ಮೊದಲಾದವರು ಇದನ್ನು ಅರಿತವರೇ ಆಗಿದ್ದರಿಂದ ಅವರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾದ ಕೆಲಸವನ್ನು ಮಾಡಿದರು. ಆದರೆ ಇಂತಹ ಒಂದು ಮನೋಭಾವ ಇಂದಿನ ಲೇಖಕರಲ್ಲಿ ಇಲ್ಲವಾಗಿರುವುದರಿಂದ ಇವರು ಮಕ್ಕಳ ಸಾಹಿತ್ಯ ರಚನೆಯಲ್ಲಿ ಹಿಂದುಳಿದಿದ್ದಾರೆ. ಆದರೂ ಪಳಕಳ ಸೀತಾರಾಮ ಭಟ್ಟ, ಕಂಚಾಣಿ ಶರಣಪ್ಪ, ಲಕ್ಷ್ಮೀನಾರಾಯಣ ಭಟ್ಟ, ತಿರುಮಲೇಶ, ಆನಂದ ಪಾಟೀಲ ಮೊದಲಾದವರು ಈ ಕೆಲಸವನ್ನು ಮುಂದುವರೆಸಿದ್ದಾರೆ. ಇವರ ಸಾಲಿಗೆ ಗೋವಿಂದರೆಡ್ಡಿ ಕೂಡ ಕೆಲಸ ಮಾಡುತ್ತಿರುವುದು ಸಂತಸದ ವಿಷಯ. ‘ಚಿಣ್ಣರ ಲೋಕದ ಬಣ್ಣದ ಹಾಡು’ ಹೆಸರೇ ಹೇಳುವ ಹಾಗೆ ಮಕ್ಕಳ ಪ್ರಪಂಚದ ಒಂದು ಬೆಳಕಿಂಡಿ. ಮಕ್ಕಳಿಗೆ ಯಾವುದು ಇಷ್ಟ, ಯಾವುದು ಪ್ರಿಯ ಅನ್ನುವುದನ್ನು ಲೇಖಕರು ಗ್ರಹಿಸಿ ಆ ಎಲ್ಲ ವಸ್ತುಗಳಿಗೆ ಕವನದ ಉಡುಗೆ ತೊಡಿಸಿ ಮಕ್ಕಳ ಮುಂದೆ ಇರಿಸುವ ಪ್ರಯತ್ನ ಮಾಡಿದ್ದಾರೆ.ಇಲ್ಲಿಯ ‘ನಮ್ಮನು ಸುಮ್ಮನೆ ಬಿಟ್ಟುಬಿಡಿ’ ಅನ್ನುವ ಕವಿತೆ ನಮ್ಮ iಕ್ಕಳ ಸ್ವಾತಂತ್ರ್ಯ ಮನೋಭಾವವನ್ನು ತೆರೆದಿಡುತ್ತದೆ. ಹಿರಿಯರೆಲ್ಲ ತಮತಮಗೆ ಇಷ್ಟವಾದ ಕೆಲಸಗಳಲ್ಲಿ ತೊಡಗಿಕೊಂಡು ಮಾಡುವ ಕೆಲಸಗಳನ್ನು ಒಂದು ಕಿಲಾಡಿ ಮಗು ಪಟ್ಟಿ ಮಾಡಿ ನಮ್ಮ ಮುಂದೆ ಇಡುತ್ತದೆ. ಅಪ್ಪ ಅಮ್ಮ ಬೆಳದಿಂಗಳಿನ ಸೊಬಗನ್ನು ಸವಿಯುವುದು ಮಾಲತಿ ಅಕ್ಕ ಮೇಕಪ್ ಮಾಡಿ ಕೊಳ್ಳುವುದು, ಪಮ್ಮಿ ಆಂಟಿ ಜಾನಿ ಅಂಕಲ್ ಅಪ್ಪಿ ಮುದ್ದಾಡುವುದು, ರಸ್ತೆಯ ಮೇಲೆ ನೂರಾರು ವಾಹನಗಳು ಓಡಿಯಾಡುವುದು, ಹೀಗೆ ಇಡೀ ಜಗತ್ತು ತನ್ನದೇ ಆದ ಕ್ರಿಯೆಯಲ್ಲಿ ಮುಳುಗಿರುವಾಗ ಮಕ್ಕಳು ಮಾತ್ರ ಕೂರು ಅಂದರೆ ಕೂತಿರಬೇಕು ನಿಲ್ಲು ಎಂದರೆ ನಿಂತಿರಬೇಕು ತಿನ್ನು ಅಂದರೆ ತಿನ್ನಲೇಬೇಕು ಮಲಗು ಅಂದರೆ ಮಲಗಿರಬೇಕು ದಿನವೂ ಹೀಗೆ ಅಂತಾರೆ ನಮ್ಮ ತಲೆಯನು ತಿಂತಾರೆ ಇದು ಮಗುವಿನ ಚಿಂತೆ. ಅಂತೆಯೇ ಮನೆಯಲ್ಲಿರುವ ಅಜ್ಜ ಕೂಡ ಮಗುವಿಗೆ ಬೇಕಾದವನೆ. ಏಕೆಂದರೆ ಬೇರಾರೂ ನೀಡದ ಸಾಂತ್ವನವನ್ನು ಅಜ್ಜ ಮಗುವಿಗೆ ನೀಡುತ್ತಾನೆ. ಈ ಕಾರಣದಿಂದಲೇ ಮಗು ಅಜ್ಜ ಅಜ್ಜ ಮೀಸೆಯ ಅಜ್ಜ ಎಲ್ಲಿಗೆ ಹೊರಟಿರುವೆ ? ನಿನ್ನನು ಬಿಟ್ಟು ನಾನಿರಲಾರೆ ನಾನೂ ಜೊತೆ ಬರುವೆ ಅನ್ನುತ್ತದೆ. ಅಂತೆಯೇ ಗಣಪ, ಗುಬ್ಬಿ, ಕನ್ನಡ ಭಾಷೆ, ಮರದ ಗುಣ, ಕಂಬಳ, ಇತ್ಯಾದಿ ಕುರಿತು ರೆಡ್ಡಿಯವರು ಸ್ವಾರಸ್ಯವಾಗಿ ಬರೆಯುತ್ತಾರೆ. ಸಾಮಾನ್ಯವಾಗಿ ಕೊಡಲಿ ಹಿಡಿದ ಮರಕಟುಕನೋರ್ವ ಬಂದು ಮರ ಕಡಿಯುವುದನ್ನ ನಾವು ಕಂಡಿದ್ದೇವೆ. ಆದರೆ ಇಲ್ಲಿಯ ‘ಮರದ ಗುಣ’ ಕವಿತೆಂiiಲ್ಲಿ ಮರ ಕಡಿಯಲೆಂದು ಬಂದ ಓರ್ವ ಅದರ ನೆರಳಿನಲ್ಲಿ ಕೂತು ಅದು ನೀಡುವ ತಂಪನ್ನು ಅನುಭವಿಸಿ ಅದನ್ನು ಕಡಿಯದೇ ಹೋಗುವ ಚಿತ್ರಣ ಸುಂದರವಾಗಿ ಬಂದಿದೆ. ಈ ಕವಿತೆ ಮಕ್ಕಳನ್ನ ಭಿನ್ನವಾದ ರೀತಿಯಲ್ಲಿ ವಿಚಾರ ಮಾಡಲು ಹಚ್ಚುತ್ತದೆ. ಇಲ್ಲಿಯ ಕವಿತೆಗಳಲ್ಲಿ ಕನ್ನಡದ ಪ್ರಖ್ಯಾತ ಕವಿಗಳಾದ ಮುದ್ದಣ ಮತ್ತು ಬೇಂದ್ರೆಯವರನ್ನ ಮಕ್ಕಳಿಗೆ ಪರಿಚಯ ಮಾಡಿ ಕೊಡುವ ಒಂದು ಪ್ರಯತ್ನವನ್ನು ಗೋವಿಂದರೆಡ್ಡಿಯವರು ಮಾಡಿದ್ದಾರೆ. ಮುದ್ದಣ “ಹೊಸಗನ್ನಡ ಕಾವ್ಯದ ಮುಂಗೋಳಿಯಾಗಿ ನಾಡಿನೆಲ್ಲೆಡೆಯಲ್ಲಿ ಬೆಳಗು ಮೂಡಿಸಿದರೆ” ಬೇಂದ್ರೆ “ನಾಕು ತಂತಿಯನ್ನ ಮಿಡಿಸಿ ನಾಕವನ್ನು ಸೆಳೆದರು, ಶಾಂತಿ ಮಂತ್ರವನ್ನ ನುಡಿಸಿ ಭ್ರಾಂತಿಯನ್ನು ಕಳೆದರು”ಅನ್ನುತ್ತಾರೆ ಕವಿ. ಇದರ ಜೊತೆಗೆ ಚಿರಪರಿಚಿತವಾದ ಕೆಲ ಕತೆಗಳನ್ನು ಪದ್ಯದ ರೂಪದಲ್ಲಿ ಹೇಳುವ ಯತ್ನ ಮಾಡಿದ್ದಾರೆ. ಜೊತೆಗೆ ಪುರಂದರ ದಾಸ, ವೀರಸನ್ಯಾಸಿ ವಿವೇಕಾನಂದರ ಕತೆಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಿದ್ದಾರೆ. ಈ ಸಂಕಲನದ ಮತ್ತೊಂದು ಕಾರ್ಯವೆಂದರೆ ಕುವೆಂಪು ಬರೆದ ‘ಜಲಗಾರ’ ನಾಟಕವನ್ನು ಸರಳ ರೀತಿಯಲ್ಲಿ ಮಕ್ಕಳಿಗೆ ತಿಳಿಸಿಕೊಡುವ ಒಂದು ಪ್ರಯತ್ನ. ಕನ್ನಡ ನಾಡಿನ ಮಕ್ಕಳೆ ಕೇಳಿ ಸುಂದರ ಮನದಲಿ ಶ್ರದ್ಧೆಯ ತಾಳಿ ಕನ್ನಡ ಮಾತೆಯ ಹೆಮ್ಮೆಯ ಕಂದ ರಸಋಷಿ ಕುವೆಂಪು ಲೇಖನಿಯಿಂದ ಮೂಡಿ ಬಂದ ಜಲಗಾರನ ಕತೆಯನ್ನು ಅವರು ಹೇಳುತ್ತ ಸಾಗುತ್ತಾರೆ. ಹಂತ ಹಂತವಾಗಿ ನಾಟಕದ ಕತೆ ಇಲ್ಲಿ ತೆರೆದುಕೊಳ್ಳುತ್ತದೆ. ಬೆಳಕು ಹರಿದಾಗ ಊರಿನ ರಸ್ತೆಗಳನ್ನು ಶುಚಿಗೊಳಿಸುವ ಓರ್ವ ಜಲಗಾರ, ಹಣ್ಣು ಕಾಯಿ ಹಿಡಿದ ಓರ್ವ ರೈತ ದೇಗುಲಕ್ಕೆ ಹೋಗುವುದನ್ನ ನೋಡಿ ಅಚ್ಚರಿಪಡುತ್ತಾನೆ. ಅವನೊಡನೆ ಮಾತಿಗೆ ಇಳಿದಾಗ ಊರಿನಲ್ಲಿ ಜಾತ್ರೆ ನಡೆಯಲಿರುವುದು ಅವನ ಗಮನಕ್ಕೆ ಬರುತ್ತದೆ. ಈ ಜಾತ್ರೆಗೆ ಹೋಗದೆ ತನ್ನ ಕೆಲಸನು ಜಲಗಾರ ಮುಂದುವರೆಸುತ್ತಾನೆ. ಮುಂದೆ ಬಹಳ ಜನರ ಭೇಟಿ ಆಗುತ್ತದೆ ಜಲಗಾರನಿಗೆ. ಆದರೆ ಈತ ತನ್ನ ಕೆಲಸ ಬಿಡುವುದಿಲ್ಲ. ಅದನ್ನೇ ದೇವರ ಸೇವೆ ಎಂಬಂತೆ ಮಾಡುತ್ತಾನೆ. ಕೊನೆಯಲ್ಲಿ ಶಿವನೇ ಖುದ್ದು ಈತನನ್ನು ಭೇಟಿಯಾಗಲು ಬರುತ್ತಾನೆ. ಶಿವನೊಳಗೊಂದಾಗುತ ಜಲಗಾರ ಶಿವನೇ ತಾನಾದ ಕಾಯಕತತ್ವವ ವಿಶ್ವಕೆ ಸಾರಿ ಲೋಕದ ಬೆಳಕಾದ ಅನ್ನುವಲ್ಲಿಗೆ ಪದ್ಯ ಮುಗಿಯುತ್ತದೆ. ಮಹಾಕವಿ ನಾಟಕದ ಮೂಲಕ ಸಾರಿದ ಸತ್ಯವನ್ನು ಇಲ್ಲಿ ಮಕ್ಕಳ ಪದ್ಯದ ಮೂಲಕ ಹೇಳಿದ್ದಾರೆ ರೆಡ್ಡಿಯವರು. ಈ ಸಂಕಲನಕ್ಕೆ ಹೆಸರನ್ನಿರಿಸಿರುವ ‘ಚಿಣ್ಣರಲೋP’ ತುಸು ದೀರ್ಘವಾದ ಒಂದು ಕವಿತೆ. ಸುಮಾರು ಐವತ್ತು ಪುಟಗಳ ಈ ಕವಿತೆ ಮಕ್ಕಳಿಗೆ ಫ್ಯಾಂಟಸಿ ಲೋಕದ ಪರಿಚಯ ಮಾಡಿಕೊಡುತ್ತದೆ. ಅಲ್ಲಲ್ಲಿ ‘ಗಲೀವರನ ಪ್ರವಾಸ’ವನ್ನು ನೆನಪಿಗೆ ತರುವ ಈ ಕವಿತೆ ಮಕ್ಕಳಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ. ಊರೊಳಗಿನ ಕಿರು ಗುಡಿಸಲಿನಲ್ಲಿ ಹಸಿವಿನ ನೆಲೆಮನೆ ಬಡತನದಲ್ಲಿ ಬದುಕುತಲಿದ್ದ ದಂಪತಿಗಳಿಗೆ ಹಸಿವೇ ಹಾಸಿಗೆಯಾಗಿದ್ದವರಿಗೆ ಇದ್ದನು ಒಬ್ಬನು ಸುಕುಮಾರ ವಿದ್ಯೆಯು ಅವನಿಗೆ ಬಲು ದೂರ ಈ ಸುಕುಮಾರನ ಕತೆಯನ್ನು ಲೇಖಕರು ಸ್ವಾರಸ್ಯವಾಗಿ ಹೇಳುತ್ತಾರೆ. ಗೋವಿಂದರೆಡ್ಡಿಯವರು ಮಕ್ಕಳ ಮನಸ್ಸಿಗೆ ಹಿಡಿಸುವಂತೆ ಬರೆಯಬಲ್ಲರು. ಅವರ ಸರಳವಾದ ಭಾಷೆ, ಲಯ, ಚಿಕ್ಕ ಚಿಕ್ಕ ವಾಕ್ಯಗಳು, ಕಿವಿಗೆ ಇಂಪಾಗಿ ಕೇಳಿಸುವ ಲಾಸ್ಯ ಇವರ ಕವಿತೆಗಳ ವಿಶೇಷತೆ. ರೆಡ್ಡಿಯವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಈ ಮೂಲಕ ಹಾರೈಸುತ್ತೇನೆ. ೦೯-೦೭-೨೦೧೨ -ಡಾ. ನಾ. ಡಿಸೋಜ ಸಾಗರ-೫೭೭ ೪೦೧

Related Books