ಚಿಣ್ಣರ ಸರ್ಕಸ್‍-ಮಕ್ಕಳ ಕವನಗಳು

Author : ಲಿಂಗರಾಜ ರಾಮಾಪೂರ

Pages 72

₹ 60.00
Year of Publication: 2020
Published by: ಚಿಲಿಪಿಲಿ ಪ್ರಕಾಶನ
Address: ಸಾಬಳೆ ಬಿಲ್ಡಿಂಗ್, 2ನೇ ಅಂತಸ್ತು, ಸುಭಾಸ ರೋಡ್, ಧಾರವಾಡ-01
Phone: 9448022950

Synopsys

ತುಂಟ ಮಕ್ಕಳನ್ನು ಒಂದೆಡೆ ಹಿಡಿದು ಅವರನ್ನು ಕಾರ್ಯೋನ್ಮುಖರನ್ನಾಗಿ ಮಾಡುವುದು ದೊಡ್ಡವರಿಗೆ ಒಂದು ಸರ್ಕಸ್ಸೇ ಸರಿ ಎನ್ನುವ ಕವಿ ರಾಮಾಪೂರ ಅವರು ಸಂಕಲನದ ಆರಂಭದಲ್ಲಿಯೇ ಇರುವ ಶೀರ್ಷಿಕೆಯ ಕವಿತೆಯಲ್ಲಿ ಸರ್ಕಸ್‍ನಲ್ಲಿ ನಡೆಯುವ ಅನೇಕ ಕೌತುಕಗಳನ್ನು ತೋರಿಸುತ್ತ ತಮ್ಮ ಕವಿತೆಗಳತ್ತ ಮಕ್ಕಳ ಗಮನ ಸೆಳೆದುಕೊಳ್ಳುತ್ತಾರೆ. ಪರಿಸರ, ವಿಜ್ಞಾನ, ದೇಶಭಕ್ತಿ ಮೊದಲಾದ ವಿಭಿನ್ನ ವಿಷಯವಸ್ತುವನ್ನೊಳಗೊಂಡಂತೆ ಹರಡಿಕೊಂಡಿರುವ ಕವಿತೆಗಳಲ್ಲಿ ಹಲವು ಕಥನ ಕವಿತೆಗಳೂ ಇದ್ದು ಮಕ್ಕಳಿಗೆ ಇಷ್ಟವಾಗುತ್ತವೆ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Reviews

ಪ್ರವೇಶಕ್ಕೆ ಮುನ್ನುಡಿಯಾಗಿ....

 ಡಾ.ಲಿಂಗರಾಜ ರಾಮಾಪೂರ ಅವರು ವಿದ್ಯಾರ್ಥಿಸ್ನೇಹಿ ಶಿಕ್ಷಕರಾಗಿ ಯಶಸ್ವಿಯಾದುದಲ್ಲದೇ; ಮಕ್ಕಳ ಕವಿಯಾಗಿ, ನಾಟಕಕಾರ, ಕತೆಗಾರ, ಕಾದಂಬರಿಕಾರ ವಿಜ್ಞಾನ ಬರಹಗಾರರಾಗಿ ಮಕ್ಕಳ ಸಾಹಿತ್ಯಲೋಕದಲ್ಲಿ ಸಕ್ರಿಯರಾಗಿದ್ದಾರೆ. ಧಾರವಾಡದ ನಮ್ಮ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕøತಿಕ ಬಳಗದ ಆಪ್ತ ಒಡನಾಡಿ. ಮಕ್ಕಳಲ್ಲಿ ಸದಾ ವೈಜ್ಞಾನಿಕ ವೈಚಾರಿಕ ಮನೋಭಾವ ಬೆಳೆಸುವಲ್ಲಿನ ಇವರ ಪ್ರಯೋಗಶೀಲ ನಡೆ, ಪರಿಸರ ಸ್ನೇಹಿ ಮನೋಭಾವ, ಸೃಜನಶೀಲ ಪ್ರವೃತ್ತಿಯು ಶಿಕ್ಷಕ ವೃತ್ತಿಗೆ ಪೂರಕ ಮತ್ತು ಪ್ರೇರಕವಾಗಿದೆ. ಹಾಗಾಗಿಯೇ ಇವರು ಮಕ್ಕಳ ಮೆಚ್ಚಿನ ಶಿಕ್ಷಕರಾಗಿ ಜನ ಮನ್ನಣೆ ಪಡೆದಿದ್ದಾರೆ.

      ತರಗತಿಯಲ್ಲಿ ಮಕ್ಕಳೊಟ್ಟಿಗೆ ಇಂಗ್ಲಿಷ್ ಕಲಿಕಾ ಚಟುವಟಿಕೆಗಳ ಮಾಡಿಸುತ್ತ; ನಂತರ ಇವುಗಳನ್ನೇ ಬರಹಕ್ಕಿಳಿಸಿಆಡುತ್ತಾ ಇಂಗ್ಲಿಷ್ ಕಲಿಕೃತಿ ಪ್ರಕಟಿಸುವ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ  ಇವರು, ನಂತರದಲ್ಲಿ ಇಂಗ್ಲಿಷ್ ಪಜಲ್ಸ್, ಹಂಡ್ರೆಡ್ ರೈಮ್ಸ್ಚಿಲಿಪಿಲಿ ಇಂಗ್ಲಿಷ್ ಡಿಕ್ಸನರಿ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮುಂದೆ ನಾಟಕದತ್ತ ಯುಟರ್ನ್ ತೆಗೆದುಕೊಂಡ ಇವರು ಮಕ್ಕಳಿಗಾಗಿಹುಗ್ಗಿ ಅಂದ್ರ ಹಿಂಗೈತಿ’, ‘ಮಕ್ಕಳ ಸಾಹಸ ಮತ್ತು ಇತರ ನಾಟಕಗಳು’, ‘ಭೂಮಿ ಮಾರಾಟಕ್ಕಿಲ್ಲ’,  ‘ನಿಸರ್ಗ ನ್ಯಾಯಮೊದಲಾದ ಪರಿಸರ ನಾಟಕಗಳನ್ನು ಬರೆದರು. ಪ್ರಯೋಗಶೀಲ ಗುಣದ ಲೇಖಕ ಲಿಂಗರಾಜ ಅವರು ಮಕ್ಕಳ ಕಥಾಲೋಕ ಪ್ರವೇಶಿಸಿ; ‘ದೊಡ್ಡವರು ಚಿಕ್ಕವರಿದ್ದಾಗ’ ‘ವೈಜ್ಞಾನಿಕ ಕಥೆಗಳು’ ‘ಯಶೋಗಾಥೆಪ್ರಕಟಗೊಂಡಿದ್ದು; ‘ಗುಬ್ಬಿಗೊಂದು ಮನೆಯ ಮಾಡಿ’-ಮಕ್ಕಳ ಕಾದಂಬರಿ ಕೂಡ ಪ್ರಕಟವಾಗಿದೆ. ‘ವಿಜ್ಞಾನದಲೆಯ ಬೆಳಕು’ ‘ಅಗಸ್ತ್ಯದಿಂದ ನಾಸಾದವರೆಗೆ’, ‘ವಿಜ್ಞಾನ ಪರಿಷತ್ತಿನಿಂದ ನಾಸಾದವರೆಗೆವಿಜ್ಞಾನದಲೆದಾಟ’, ‘ಅನುದಿನವೂ ವಿಜ್ಞಾನಮಯಮೊದಲಾದ ವಿಜ್ಞಾನ ಬರಹ ಕೃತಿಗಳು ಪ್ರಕಟಗೊಂಡಿವೆ. ‘ಶಿಕ್ಷಕನ ನೋಟದಲ್ಲಿ ಅಮೆರಿಕಾಇದು ಇವರ ಪ್ರವಾಸ ಕಥನ. ಇವಲ್ಲದೇ ವೈಜ್ಞಾನಿಕ ಹಿನ್ನೆಲೆಯನೂರೆಂಟು ಪ್ರಶ್ನೆಗಳು’, ‘ಜಗತ್ತಿಗೆ ಬೆಳಕು ನೀಡಿದ ವಿಜ್ಞಾನಿಗಳು’, ‘ಜನರೆಡೆಗೆ ವಿಜ್ಞಾನಮೊದಲಾಗಿ ಹಲವು ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಇವೆಲ್ಲದರ ಜೊತೆಗೆಚಿರಸ್ಮರಣೆವಿಜ್ಞಾನಮಯಿಎಂಬ ಎರಡು ಕವನ ಸಂಕಲನಗಳೂ ಪ್ರಕಟಗೊಂಡಿದ್ದು ಇದೀಗ  ‘ಚಿಣ್ಣರ ಸರ್ಕಸ್ಬಂದಿದೆ.

    ತುಂಟ ಮಕ್ಕಳನ್ನು ಒಂದೆಡೆ ಹಿಡಿದು ಅವರನ್ನು ಕಾರ್ಯೋನ್ಮುಖರನ್ನಾಗಿ ಮಾಡುವುದು ದೊಡ್ಡವರಿಗೆ ಒಂದು ಸರ್ಕಸ್ಸೇ ಸರಿ ಎನ್ನುವ ಕವಿ ರಾಮಾಪೂರ ಅವರು ಸಂಕಲನದ ಆರಂಭದಲ್ಲಿಯೇ ಇರುವ ಶೀರ್ಷಿಕೆಯ ಕವಿತೆಯಲ್ಲಿ ಸರ್ಕಸ್ನಲ್ಲಿ ನಡೆಯುವ ಅನೇಕ ಕೌತುಕಗಳನ್ನು ತೋರಿಸುತ್ತ ತಮ್ಮ ಕವಿತೆಗಳತ್ತ ಮಕ್ಕಳ ಗಮನ ಸೆಳೆದುಕೊಳ್ಳುತ್ತಾರೆ. ಪರಿಸರ, ವಿಜ್ಞಾನ, ದೇಶಭಕ್ತಿ ಮೊದಲಾದ ವಿಭಿನ್ನ ವಿಷಯವಸ್ತುವನ್ನೊಳಗೊಂಡಂತೆ ಹರಡಿಕೊಂಡಿರುವ ಕವಿತೆಗಳಲ್ಲಿ ಹಲವು ಕಥನ ಕವಿತೆಗಳೂ ಇದ್ದು ಮಕ್ಕಳಿಗೆ ಇಷ್ಟವಾಗುತ್ತವೆ.

 -------------------------

   ಬೆಳಕಿನ ಪಾಠವಾಗಿರುವಬೆಳಕುಕವಿತೆಯಲ್ಲಿ ಸೂರ್ಯಗ್ರಹಣದ ಕುರಿತು ಪ್ರಸ್ತಾಪಿಸುತ್ತ; ಗ್ರಹಣವೊಂದು ಪೀಡೆಯಲ್ಲ, ಕಂಟಕವಲ್ಲ ರೋಮಾಂಚನ ಉಂಟುಮಾಡುವ ನೆರಳು ಬೆಳಕಿನಾಟ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಬೆಳಕಿನ ಬಗ್ಗೆ ಹೇಳುತ್ತಲೇ ಜೀವನದ ಸಿದ್ಧಾಂತವನ್ನು ನಿರೂಪಿಸುತ್ತಾರೆ.

               ಜೀವನವಿರಲಿ ಪಾರದರ್ಶಕದಂತೆ

                ಗಾಜಿನಾಚೆಯ ನೋಟದಂತೆ

                ಸರಿಸು ಅಪಾರದರ್ಶಕ ತೆರೆಯ

                ಕಪ್ಪು ಹಲಗೆಯ ಮಾಯೆಯ

 ಅಪಾರದರ್ಶಕ ತೆರೆ ಇದ್ದರೆ ಪರಸ್ಪರರು ಕಾಣರು. ಜೀವನ  ಪಾರದರ್ಶಕವಾಗಿದ್ದಷ್ಟೂ ಪರಸ್ಪರರಲ್ಲಿ ನಂಬಿಕೆ ವಿಶ್ವಾಸಗಳು ನೆಲೆಗೊಳ್ಳುತ್ತವೆ. ಹಾಗಾಗಿ ಕಪ್ಪು ಹಲಗೆಯ ಮಾಯೆಯ ತೆರೆ ಸರಿಸು ಎನ್ನುತ್ತಾರೆ. ಇಲ್ಲಿ ಈ ಕವಿತೆಯ ಮೂಲಕ ಶಿಕ್ಷಕನಿಗೂ ಒಂದು ಕಿವಿಮಾತಿರುವಂತಿದೆ. ಕಪ್ಪು ಹಲಗೆಕಲಿಕೆ ಮತ್ತು ಬೋಧನಾಪ್ರಕ್ರಿಯೆಯಲ್ಲಿ ಒಂದು ಮಹತ್ವದ ಸಾಧನವಾದರೂ ಇದೇ ಅಂತಿಮವಲ್ಲ ಕಲಿಕಾ ಪ್ರಕ್ರಿಯೆ ಗಾಜಿನಾಚೆಯ ನೋಟದಂತೆ ಪ್ರಯೋಗಶೀಲರಾಗಿರಬೇಕು, ಇದಕ್ಕಾಗಿ ಕಪ್ಪುಹಲಗೆಯೊಂದನ್ನೇ ನಂಬಿರುವ ಬೋಧಕರಿಗೆ, ಮಾಯೆಯಾಗಿ ಆವರಿಸಿ ಕೊಂಡಿರುವ ಕಪ್ಪು ಹಲಗೆಯನ್ನು ಪಕ್ಕಕ್ಕೆ ಸರಿಸಬೇಕೆಂದು ಸೂಚಿಸಿದಂತಿದೆ.

ಸದಾ ದುಡಿಮೆಯಲ್ಲಿದ್ದು, ಸೈನಿಕರಂತೆ ಸಾಲುಗಟ್ಟಿ ಶಿಸ್ತಿನಲಿ ಸಾಗುವ ಇರುವೆಗಳನ್ನು ಕುರಿತು ಬರೆಯುತ್ತಶಿಸ್ತಲಿ ನೀನೆ ಮಿಗಿಲು, ಕಡಿದರೆ ಅಯ್ಯೋ ಗೋಳುಎನ್ನುತ್ತ; ತಂಟೆಗೆ ಬಂದರೆ ಕಚ್ಚುವ ಇರುವೆಗಳು ಜಗಕೆಲ್ಲ ಮಾದರಿ ಎನ್ನುತ್ತಾರೆ.

 ದೇಹವನೆಂದು ಬೆಳೆಸಲ್ಲ

 ಆಲಸಿತನವು ನಿನಗಿಲ್ಲ

 ನಿನ್ನಯ ನೀತಿ ನಮಗೆಲ್ಲ

 ನೀನೆ ಮಾದರಿ ಜಗಕೆಲ್ಲ

ಎಂದು ನಿರಂತರ ದುಡಿಮೆ ಹಾಗೂ ದುಡಿಮೆಯಲ್ಲಿ ಶಿಸ್ತು ಇರಬೇಕೆಂಬುದನ್ನು ಸೂಕ್ಷ್ಮವಾಗಿ ಹೇಳುತ್ತಾರೆ.

       “ಬನ್ನಿ ಬನ್ನಿ ಸಾಹಸ ಯಾತ್ರೆಗೆ, ಬೆಟ್ಟ ಗುಡ್ಡಗಳ ಸುತ್ತಿ, ಕಾಡು ಕಣಿವೆಗಳ ಅಲೆದು ಸಾಹಸ ಮಾಡೋಣಎನ್ನುವ ಕವಿ ಮಕ್ಕಳನ್ನು ಹುರುದುಂಬಿಸಿ ಕಾಡಿನ ಪಯಣಕ್ಕೆ ಕರೆದೊಯ್ಯುತ್ತಾರೆ. ಕಾಡಿನ ಬಗ್ಗೆ ಭಯ ಬೇಡ. ಅದೊಂದು ಪ್ರಾಕೃತಿಕ ಸುಂದರ ತಾಣ ಎಂದರುಹುತ್ತಲೇ ಗಿಡದಲ್ಲಿ  ಭೂತ ಪ್ರೇತಗಳಿವೆ ಎಂದೆಲ್ಲ ಮಕ್ಕಳಲ್ಲಿ ಹುಟ್ಟಿಸಿರುವ ಭಯವನ್ನು ಹೋಗಲಾಡಿಸಿಭೂತ ಪ್ರೇತಗಳಿಲ್ಲ, ಇದು ನಮ್ಮ ಭ್ರಮೆ ಎಲ್ಲಾ, ಮಾನವನೇ ಭೂತ, ಮಾನವನೇ ದೇವಎನ್ನುವ ಮೂಲಕ ದೆವ್ವ ಮತ್ತು ದೇವರು ಮಾನವನ ಭಾವಕ್ಕೆ ಸಂಬಂಧಿಸಿದ ಕಲ್ಪಿತ ಪಾತ್ರಗಳು ಎನ್ನುವ ಮೂಲಕ ಮಕ್ಕಳನ್ನು ಚಿಂತನೆಗೆ ಹಚ್ಚುತ್ತಾರೆ

ಹುಡುಗಿಯ ಉಪಾಯ’, ‘ಪೆದ್ದ ಕೋಣ’, ‘ಉಪಕಾರ ತೃಪ್ತಿ’, ‘ನರಿಯ ಉಪಾಯ’, ‘ಜಾಣ ಕಾಗೆ’ ಮೊದಲಾದ ಕಥನ ಕವಿತೆಗಳೆಲ್ಲವೂ ಬಹುತೇಕ ಛಂದೋಬದ್ಧ ರಚನೆಗಳಾಗಿವೆ. ಉಪಕಾರ ತೃಪ್ತಿ ಕವಿತೆಯನ್ನು ನೋಡುವುದಾದರೆ ಈ ಕವಿತೆಯಲ್ಲಿ ನಾಲ್ಕು ಚರಣಗಳಿದ್ದರೂ ಷಟ್ಪದಿಯ ಮೂರು ಚರಣಗಳಿಗೆ ಸಮನಾಗಿವೆ. ಮೊದಲೆರಡು ಚರಣಗಳು ಸಮವಿದ್ದು ಮೂರು ಮೂರು ಮಾತ್ರೆಯ ನಾಲ್ಕು ಗಣಗಳನ್ನೊಳಗೊಂಡಿದ್ದು ಮೂರು ಮತ್ತು ನಾಲ್ಕನೇ ಚರಣಗಳನ್ನು ಒಂದೇ ಚರಣವಾಗಿಸಿದಲ್ಲಿ ಮೂರು ಮಾತ್ರೆಯ ಆರು ಚರಣಗಳು ಮೇಲೊಂದು ಗುರು ಇದೆ. ಹೀಗಾಗಿ ಇದು ಭೋಗ ಷಟ್ಪದಿ.

 ಜೇನು ಹುಳುವು ಹಾರಿ ಬಂದು

 ನೀರು ಕುಡಿಯಲೆಂದು ಕೊಂಡು

  ಕೆರೆಯ ಬಳಿಗೆ ಬಂದು ಅಲ್ಲಿ ಬಿದ್ದುಬಿಟ್ಟಿತು

  ರೆಂಬೆಯಲ್ಲಿ ಪಕ್ಷಿಯೊಂದು

 ಇದನು ಕಂಡು ಬೇಗ ಅಲ್ಲಿ

 ಎಲೆಯನೊಂದ ಕಿತ್ತು ಬೀಸಿ ಎಸೆದು ಬಿಟ್ಟಿತು

 ಹಾಗೆಯೇ ಕಥನಗೀತಗಳಲ್ಲದೆ ಬೇರೆ ಕೆಲವು ಕವಿತೆಗಳೂ ಸಹ ಛಂದೋಬದ್ಧವಾಗಿದ್ದು ಗೇಯತೆಯನ್ನು ಮೈಗೂಡಿಸಿಕೊಂಡಿವೆ. ಇದಕ್ಕೆ ಉದಾಹರಣೆಯಾಗಿಚಿಣ್ಣರ ಶಾಲೆ’, ‘ಗುರು ನಮನಗಮನಿಸಬಹುದು.

 ಅಂದದ ಊರಿನ ಚೆಂದದ ಶಾಲೆ

   ನಮ್ಮಯ ಶಿಕ್ಷಣ ದೇಗುಲವು

 ಚಿಣ್ಣರ ಚೆಲುವಿನ ಚೆಂದದ ಶಾಲೆ

ಹೆಮ್ಮೆಯ ಬದುಕಿಗೆ ನಂದನವು

 ನಾಲ್ಕು ಚರಣಗಳಿಂದÀ ಕಟ್ಟಿದ ನುಡಿಗೊಂಚಲಲ್ಲಿ ಮೊದಲ ಮತ್ತು ಮೂರನೆಯ ಚರಣ ಸಮನಾಗಿದ್ದು; ಎರಡು ಮತ್ತು ಮೂರನೆ ಚರಣಗಳು ಸಮನಾಗಿವೆ.

    ಮಕ್ಕಳು ದೇವರಿಗೂ ಮಿಗಿಲು ಎನ್ನುವ ಕವಿ ಸೇವೆಯಲ್ಲಿ ಸಾವನ್ನಪ್ಪಿದ ಶ್ರವಣ, ಪಿತನೊಡನೆ ಸೆಣಸಿ ಗೆದ್ದ ಲವಕುಶ, ಅಚಲಭಕ್ತಿಯ ಆದರ್ಶ ಧ್ರುವ, ಶ್ರೇಷ್ಠದಾನ ಪ್ರತಿಪಾದಕ ನಚಿಕೇತಹೀಗೆ ಹಲವು ಸಾಧಕ ಮಕ್ಕಳ ಮಾದರಿಗಳನ್ನು ತೆರೆದಿಡುತ್ತ ಆದರ್ಶರಾಗಿ ಬಾಳಿ ಬೆಳೆಗಲು ಪ್ರೇರಣೆ ನೀಡುತ್ತಾರೆ.

     ಖಾಸಗಿ ಶಾಲೆಗೆ ಹೋಗುವ ಬಹುತೇಕ ಮಕ್ಕಳು ಆಟೊ, ಮಿನಿಕ್ಯಾಬ್, ಮಿನಿ ಬಸ್ಸಿನಲ್ಲಿ ಹೋಗುವುದು ಸ್ವಾಭಾವಿಕ. ಏಕೆಂದರೆ ಊರ ಹೊರವಲಯದಲ್ಲೇ ಈ ಶಾಲೆಗಳಿರುವುದು. ಸರಕಾರಿ ಶಾಲೆಗಳು ಪಕ್ಕದಲ್ಲೇ ಇದ್ದರೂ ಮಕ್ಕಳನ್ನು ರೆಡಿ ಮಾಡಿ ಈ ರೀತಿ ಕಳಿಸಿದರೇ ಸಮಾಧಾನ. ಕೆಲವೊಮ್ಮೆ ಪಾಲಕರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆಈ ಸಂಕಲನದಲ್ಲಿರುವಅಟೋ ಮಾಮಾಕವಿತೆ ಆಟೋದಲ್ಲಿ ಕುಳಿತು ಶಾಲೆಗೆ ಹೋಗುವ ಅದ್ವಾನವನ್ನು ತುಂಬಾ ಸರಳವಾಗಿ ತೆಗೆದುಕೊಂಡಂತೆ ನಿರೂಪಿತವಾಗಿದ್ದು ಚಿತ್ರಣ ಕಟ್ಟಿಕೊಡುತ್ತದೆ.

 ಹೊರಗೆ ಹಾರ್ನ ಶಬ್ದ ಆಯ್ತು

ಬರ್ ಅಂತ ಸೌಂಡು ಬಂತು

   ಬಂದೇ ಬಿಟ್ಟ ಅಟೋ ಮಾಮಾ

ಹೊರಟೇ ಬಿಟ್ವಿ ಸ್ಕೂಲಿಗೆ

 ಒಬ್ಬರ ಮೇಲೆ ಒಬ್ರು ಕೂತು

ಪಾಟೀ ಚೀಲ ಜೋತು ಬಿಟ್ಟು

 ಊಟದ ಗಂಟು ಕೈಯಾಗ ಹಿಡಿದು

 ಹೊರಟೇ ಬಿಟ್ವಿ ಸ್ಕೂಲಿಗೆ

 ಎಂದು ಮಕ್ಕಳು ಅಟೋದಲ್ಲಿ ಕುಳಿತು ಹೋಗುತ್ತಿರುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಕವಿ ಲಿಂಗರಾಜ ಅವರು ತುಂಬಿ ತುಳುಕುತ್ತಿರುವ ಅಟೋವನ್ನು ವೇಗವಾಗಿ ಓಡಿಸುತ್ತಿರುವ ಚಾಲಕ ಹಂಪ್ ಹಾರಿಸಿದಾಗ ಮಕ್ಕಳ ತೆಲೆಗಳು ಆಚೀಚೆ ಹೊಡೆದುಕೊಳ್ಳುತ್ತವೆ. ಆಗ ಮಕ್ಕಳು:

 ಅಟೋ ಮಾಮ ಅಟೋ ಮಾಮ

ನಿಧಾನವೇ ಪ್ರಧಾನ ಅಲ್ವಾ

 ನುಗ್ಗಬೇಡ ಎಲ್ಲಿಂದೆಲ್ಲಿ

ಬಂದೇ ಬಿಟ್ವಿ ಸ್ಕೂಲಿಗೆ

 ಅಂತ ಎಚ್ಚರಿಕೆ ಕೊಡುತ್ತಾರೆ. ನಿಜಕ್ಕೂ ಮಕ್ಕಳ ಈ ಅಳಲನ್ನು ಸೂಕ್ಷ್ಮ ಸಂವೇದನೆಯೊಂದಿಗೆ ಅರ್ಥಮಾಡಿಕೊಳ್ಳಬೇಕು.

     ಕವಿ ಡಾ. ಲಿಂಗರಾಜ ರಾಮಾಪೂರ ಅವರು ಹಳೆಯ ಹಾಡಿನ ರಿದಂಗೆ ಕೆಲವು ಹೊಸ ಹಾಡುಗಳನ್ನೂ ರಚಿಸಿದ್ದಾರೆ. ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ....... ಟ್ಯೂನ್ಗೆಭಾರತದ ಮಕ್ಕಳೆಲ್ಲ ಒಂದಾಗಿ ಬನ್ನಿ, ತಾಯ್ನಾಡ ಚರಣಗಳಿಗೆ ಜಯಘೋಷ ತನ್ನಿಎಂದು ಹಾಡಿದ್ದಾರೆ. ಈ ಮೂಲಕ ನವಭಾರತ ಕಟ್ಟಲು ಕರೆ ನೀಡಿದ್ದಾರೆ.

 ಹೀಗೆ ಗುಬ್ಬಿಗಳೆಲ್ಲಿ?, ಬಾ ನವಿಲೆ, , ನಿನಗಿದೋ ಉತ್ತರ ಬೇಕೆ!, ಓ ಮನುಜ, ಯಾವುದು ಮೊದಲು?, ಮ್ಯಾಗ್ನೇಸ್, ಬಾಲು ಹಿಡಿ, ಗಾಳಿಪಟ ಮೊದಲಾದ ಕವಿತೆಗಳು ವಿಭಿನ್ನ ವಿಷಯವಸ್ತು ವೈವಿಧ್ಯತೆಯಿಂದ ಕೂಡಿದ್ದು ಗಮನ ಸೆಳೆಯುತ್ತವೆ.

      ಭುವಿಗೆ ಏನೋ ಶಕ್ತಿ ಇದೆ ತನ್ನೆಡೆಗೆ ಸೆಳೆಯುತ್ತದೆ ಎನ್ನುವನ್ಯೂಟನ್’; ‘ನನ್ನಡಿಯ ನೆರಳಿನಲಿ, ನಾ ಬಿಟ್ಟ ಫಲ ತಿಂದು, ನಾ ಕೊಟ್ಟ ಉಸಿರಿನಲಿ, ನೀ ಪಡೆದ ಬಲದಿಂದ, ನನ್ನನ್ನೇ ಕೊಯ್ದು ಸುಖ ಪಡೆಯುವೆಯಾ? ಎಂದು ಪ್ರಶ್ನಿಸುವಮರದ ನೋವು’; ಮನೆಯೊಳಗೆ ಅಜ್ಜಿ ಇದ್ದರೆ ಮನೆ ನಂದಾ ದೀಪವು, ಅಜ್ಜಿ ಇಲ್ಲದ ಮನೆ ಇದ್ದರೆ ಬೆಳೆಕಾಣದ ಹೊಲವು ಎನ್ನುತ ಅಜ್ಜಿಯ ಮಹತ್ವವನ್ನು ಸಾರುವಮನೆಯೊಳಗಿದ್ದರೆ ಅಜ್ಜಿಕವಿತೆ; ಏಸು ಈಶ ಅಲ್ಲಾ ಎಲ್ಲಾ ಒಂದೇ ಎಂದು ಸಾರುತ್ತ, ಭಿನ್ನ ಭೇದ ಮರೆತು ನಾವು ಹೊನ್ನ ಕಳಶ ತೊಡಿಸಲುಓಡಿ ಬನ್ನಿ ಮಕ್ಕಳೇಕವಿತೆ; ಕಾಡು ಪ್ರಾಣಿಗಳೇಕೆ ನಾಡಿಗೆ ಬಂದವು ಎಂದು ಕೇಳುತ್ತ ಪರಿಸರ ಉಳಿವಿನ ಜಾಗೃತಿ ಮಾಡುವಓ ಮನುಜ’; ಗುಡುಗು ಮೊದಲೋ ಮಿಂಚು ಮೊದಲೋ, ಶಬ್ದ ಮೊದಲೋ ಬೆಳಕು ಮೊದಲೋ ಹೇಳೋ ಜಾಣಯಾವುದು ಮೊದಲು?’ ಎಂದು ಹಲವು ಕೌತುಕಗಳನ್ನು ಪ್ರಶ್ನಿಸಿ ತಿಳಿವ ಹಂಬಲದ ಕವಿತೆ; ಮ್ಯಾಗ್ನೇಸ್ ಹೆಸರೇ ಮ್ಯಾಗ್ನೆಟ್ ಆದ ಕತೆ ಹೇಳುವ ಕವಿತೆ; ಹತ್ತಿಯ ದಾರದ ಸೂತ್ರವ ಕಟ್ಟಿ, ಕೈಯಲಿ ದಾರವ ಇರಬಿಟ್ಟೆ, ಆಗಸ ಬಯಲಿಗೆ ಕಣ್ಗಳನಿಟ್ಟೆ, ಪಟವನು ಮೇಲಕೆ ಹಾರಿಸಿಬಿಟ್ಟೆ ಎಂದು ಮಕ್ಕಳ ಸಂತಸ ಮುಗಿಲು ಮುಟ್ಟುವಂತೆ ಖುಷಿಕೊಡುವಗಾಳಿಪಟಹೀಗೆ ಇಲ್ಲಿನ ಹಲವು ಕವಿತೆಗಳು ಮಕ್ಕಳಿಗೆ ಇಷ್ಟವಾಗುತ್ತವೆ ಮಾತ್ರವಲ್ಲ ಆಲೋಚನೆಗೆ, ತರ್ಕಕ್ಕೆ ತೆರೆದುಕೊಳ್ಳುವಂತೆ ಮಾಡುತ್ತವೆ. ‘ಏನು ಏಕೆ ಹಿಂಗೇಕೆ? ನಿನಗಿದೋ ಉತ್ತರ ಬೇಕೆಎಂದು ಪ್ರಶ್ನಿಸುತ್ತಲೇ ಪ್ರಶ್ನೆಗಳು ಕವಿತೆಯಾಗುವ ಪರಿಯನ್ನು ಸರಳವಾಗಿ ತೋರಿದ್ದಾರೆ. ಮಕ್ಕಳ ಕುತೂಹಲ ಕೆರಳಿಸದೇ ಅರಳಿಸಿ ವೈಜ್ಞಾನಿಕ ಮನೋಭಾದೊಂದಿಗೆ ಪರಿಸರ ಸ್ನೇಹಿಯಾಗಿ ಬೆಳೆಯುವಂತೆ ಪ್ರೇರೇಪಿಸುವ ಕವಿತೆಗಳಿಂದಾಗಿ ಈ ಸಂಕಲನ ಮಕ್ಕಳಿಗೆ ಇಷ್ವಾಗುತ್ತದೆ. ಇಷ್ಟವಾಗಲಿ ಎಂದೇ ಕವಿ ಮಿತ್ರ ಡಾ.ಲಿಂಗರಾಜ ರಾಮಾಪೂರ ಅವರಿಗೆ ಹಾರೈಸುವೆ.

 -ಡಾ. ನಿಂಗು ಸೊಲಗಿ,  ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು, ಮುಂಡರಗಿ.

Related Books