ಮಹಾದೇವಿಯಕ್ಕನ ಮತ್ತು ಅಕ್ಕಮ್ಮನ ಆಯ್ದ ವಚನಗಳ ವ್ಯಾಖ್ಯಾನ

Author : ಶಕುಂತಲಾ ಸಿದ್ಧರಾಮ ದುರಗಿ

Pages 104

₹ 60.00




Year of Publication: 2013
Published by: ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯಬೀದಿ, ಕಲಬುರಗಿ-585101
Phone: 9449825431

Synopsys

ಹಿರಿಯ ಲೇಖಕಿ ಡಾ.ಶಕುಂತಲಾ ದುರಗಿ ಅವರ ಕೃತಿ- 'ಮಹಾದೇವಿಯಕ್ಕ ಮತ್ತು ಅಕ್ಕಮ್ಮನ ಆಯ್ದ ವಚನಗಳ ವ್ಯಾಖ್ಯಾನ'. ಈ ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ, ಇದರಲ್ಲಿ ವಿಶ್ಲೇಷಣೆಗೆ ಆಯ್ಕೆ ಮಾಡಿಕೊಂಡಿರುವುದು ಮಹಿಳೆಯರ ವಚನಗಳನ್ನು ಮಾತ್ರ. 12ನೇ ಶತಮಾನದ ವಚನಕಾರ್ತಿಯರಾದ ಅಕ್ಕಮಹಾದೇವಿ ಮತ್ತು ಅಕ್ಕಮ್ಮನ ಆಯ್ದ ಕೆಲವಾರು ವಚನಗಳು ಅಧ್ಯಯನಕ್ಕೆ ಒಳಪಟ್ಟಿವೆ. ಪೂವಾರ್ಧದಲ್ಲಿ ಅಕ್ಕನ ವಚನಗಳು ಮತ್ತು ಉತ್ತರಾರ್ಧದಲ್ಲಿ ಅಕ್ಕಮ್ಮನ ವಚನಗಳ ಸಂಕ್ಷಿಪ್ತ ವ್ಯಾಖ್ಯಾನ ನೀಡಿರುತ್ತಾರೆ.

ಲೇಖಕಿಯೇ ಹೇಳುವಂತೆ, ಅಕ್ಕನ 434 ವಚನಗಳಲ್ಲಿ ಕೇವಲ 71 ಮಾತ್ರ ಆಯ್ಕೆ ಮಾಡಿ, ಮೂರು ವಿಭಾಗವಾಗಿ ವಿಂಗಡಿಸಿ ವ್ಯಾಖ್ಯಾನಿಲಾಗಿದೆ. 'ಮಧುರ ಭಕ್ತಿಯ ವಚನಗಳು', 'ಗುರು-ಶರಣರ ಸ್ತುತಿಪರ ವಚನಗಳು ಹಾಗೂ 'ಲೋಕಾನುಭವದ ವಚನಗಳು'. ಇದು ಅಧ್ಯಯನದ ಶಿಸ್ತನ್ನು ತೋರಿಸುತ್ತದೆ. ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚಿನ ವಿವರಣೆ ನೀಡಿದ್ದಾರೆ. ಸಮರ್ಪಕವಾದ ನೇರ ವಿಶ್ಲೇಷಣೆ ಮಾಡಿದ್ದಾರೆ. ಅಕ್ಕನ ವಚನಗಳಲ್ಲಿ ಲೌಕಿಕದ ನೀತಿ ಪಾಠ ಮತ್ತು ಅಲೌಕಿಕದ ಆಳ ಅಗಲ ಎರಡೂ ಅಂಶಗಳಿವೆ. ಅದರೊಂದಿಗೆ ವೈಜ್ಞಾನಿಕ ದೃಷ್ಟಿಕೋನವಿರುವುದು ವಿಶೇಷ. ಅಂತಹ ಎಲ್ಲಾ ಸೂಕ್ಷ್ಮತೆಗಳನ್ನೂ ಇಲ್ಲಿ ಲೇಖಕಿ ಗ್ರಹಿಸಿ, ಸರಳವಾಗಿ ಅಭಿವ್ಯಕ್ತಿಸಿದ್ದಾರೆ. 'ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು' ತಾಯಿ ಅಕ್ಕ ಹೀಗೆ ಹೇಳಿದ್ದು ಆ ಕ್ಷಣದ ಭಾವನಾತ್ಮಕ ಆವೇಶವೇ ಹೊರತು, ತನಗೆ ಸಂಬಂಧಿಸದ ಲೌಕಿಕ ಗಂಡರ ಕುರಿತು ತಿರಸ್ಕಾರವಿತ್ತೆಂದು ವಿಶೇಷ ಅರ್ಥ ಕಲ್ಪಿಸ ಬೇಕಾಗಿಲ್ಲ ಎಂದು ಡಾ.ಶಕುಂತಲಾ ದುರಗಿಯವರು ತಮ್ಮ ಪ್ರಾಮಾಣಿಕ ಅಭಿಪ್ರಾಯ ನೀಡಿದ್ದಾರೆ. ವಿವಾದವಾಗುವಂಥ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

'ಜಲದ ಮಂಟದ ಮೇಲೆ ಉರಿಯ ಚಪ್ಪರವನಿಕ್ಕಿ' ಇದು ಬೆಡಗಿನ ವಚನ. ಇದರಲ್ಲಿರುವ ಸತಿ ಪತಿ ಭಾವವನ್ನು ಉಲ್ಲೇಖ ಮಾಡುತ್ತ ವ್ಯಾಖ್ಯಾನಿಸಿದ್ದು, ಓದುಗ ತನಗೆ ತಿಳಿದಂತೆ ಹೆಚ್ಚಿನ ಹರವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಕ್ಕಮ್ಮನ ವಚನಗಳು ಆಚಾರ, ವ್ರತ, ಶೀಲ, ನೇಮ, ನಿಷ್ಠೆಗಳು ವಸ್ತುವಾಗಿರುವುದನ್ನು ಗುರುತಿಸುತ್ತೇವೆ. ಅವುಗಳ ವಿಭಿನ್ನ ಆಯಾಮಗಳನ್ನು ತನ್ನ ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ. ಅಂತಹ 34 ವಚನಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಉತ್ತರಾರ್ಧದ ವ್ಯಾಖ್ಯಾನಗಳಲ್ಲಿ ಮನುಷ್ಯ ಸಂಬಂಧಗಳು, ಆಹಾರ ಪದ್ಧತಿಗಳು, ಮಡಿ ಮೈಲಿಗೆಗಳು, ಪಂಚೇಂದ್ರಿಯಗಳು, ಗರ್ಭಧಾರಣೆ, ಡಾಂಭಿಕರು, ನಾನೆಂಬ ಅಹಂಭಾವ ಹೊಂದಿದವರು, ವೈವಾಹಿಕ ಸಂಬಂಧಗಳು, ಮುಂತಾದವುಗಳ ಸುತ್ತ ಅಕ್ಕಮ್ಮನ ವಚನಗಳಿವೆ. ಅವುಗಳ ಮೂಲ ದ್ರವ್ಯವಾದ ವ್ರತ, ಶೀಲ, ನೇಮಗಳನ್ನು ಗ್ರಹಿಸಿ, ಅಲ್ಲಿರುವ ವೈಜ್ಞಾನಿಕ ಕ್ರಮವನ್ನು ಗುರುತಿಸಿ ಲೇಖಕಿ ದುರಗಿಯವರು ವ್ಯಾಖ್ಯಾನಿಸಿದ್ದಾರೆ.

ಗ್ರಹಿಕೆಗೆ ಬಂದಷ್ಟನ್ನೇ ಪರಿಗಣಿಸುವುದಕ್ಕಿಂತ, ವಿಶಾಲವಾದ, ವಿಶೇಷವಾದ ದೃಷ್ಟಿಕೋನದ ನೆಲೆಯಲ್ಲಿ ಲೇಖಕಿ ವಿಶ್ಲೇಷಿಸಿದ್ದು ಕಂಡು ಬರುತ್ತದೆ. ಒಟ್ಟಾರೆ 105 ವಚನಗಳನ್ನು ವ್ಯಾಖ್ಯಾನಿಸಿ ಓದುಗರ ಕೈಗಿತ್ತಿದ್ದಾರೆ. ವಚನ ಸಾಹಿತ್ಯಾಧ್ಯಯನ ಮಾಡುವ ಆಸಕ್ತರಿಗೆ ಇದೊಂದು ಮಾರ್ಗಸೂಚಿಯಾಗಿದೆ. ವಚನಗಳನ್ನು ಹೇಗೆ ಓದಬೇಕು? ಅವುಗಳನ್ನು ಹೇಗೆ ಗ್ರಹಿಸಬೇಕು? ಅವುಗಳಲ್ಲಿರುವ ಸೂಕ್ಷ್ಮತೆಯ ಆಳಕ್ಕೆ ಹೇಗೆ ತಲುಪಬೇಕು? ಶರಣರ ನಿಜವಾದ ಆಶಯ ಏನಿತ್ತು? ನಮ್ಮನ್ನು ಕಾಡುವ ಇಂತಹ ಅನೇಕ ಪ್ರಶ್ನೆಗಳಿಗೆ ಈ ಕೃತಿ ಉತ್ತರವಾಗಬಲ್ಲದು.

About the Author

ಶಕುಂತಲಾ ಸಿದ್ಧರಾಮ ದುರಗಿ
(11 April 1943)

ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ  ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು.  ಕೃತಿಗಳು-ಪ್ರಶಸ್ತಿಗಳು:  ಮಗ್ಗಲು ಮನೆ ಅತಿಥಿ ...

READ MORE

Related Books