ಒಂದಿಷ್ಟು ನನ್ನದು

Author : ಬಿ.ಟಿ.ಬೆಳಗಟ್ಟ

Pages 168

₹ 120.00




Year of Publication: 2019
Published by: ಕೆಳಗಳಮನೆ ಬೋಸಯ್ಯ ಪುಸ್ತಕಮಾಲೆ
Address: ಕೆಳಗಳಮನೆ ಬೋಸಯ್ಯ ಪುಸ್ತಕಮಾಲೆ ದಾವಣಗೆರೆ

Synopsys

ಸಾಹಿತಿ ಬಿ. ಟಿ ಬೆಳಗಟ್ಟಅವರ ಆತ್ಮಕಥೆ ’ಒಂದಿಷ್ಟು ನನ್ನದು..’ ಲೇಖಕರ ಬಾಲ್ಯ ಕಥನವೂ ಆದ ಈ ಕೃತಿ ಅನೇಕ ಕಥಾಸಂಕಲನಗಳನ್ನೂ ಒಳಗೊಂಡಿದೆ. ಬಿ.ಟಿ.ಬೆಳಗಟ್ಟಅವರು ಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳನ್ನು ಸಂಗ್ರಹಿಸಿ, ತಲಾ 10 ಕಥೆಗಳಂತೆ ನಾಲ್ಕು ಸಂಪುಟ ಹೊರತಂದಿದ್ದಾರೆ. ’ಒಂದಿಷ್ಟು ನನ್ನದ” ಎಂಬ ಆತ್ಮಕಥೆಯ ಮೂಲಕ ದಲಿತ ಬಾಲಕನೊಬ್ಬ ಎದುರಿಸುವ ನೋವು, ಅಪಮಾನ, ಶೋಷಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. 

About the Author

ಬಿ.ಟಿ.ಬೆಳಗಟ್ಟ

.ಲೇಖಕ ಬಿ.ಟಿ.ಬೆಳಗಟ್ಟ ಅವರು  ...

READ MORE

Reviews

ಸರಳ ಸುಂದರ ದಲಿತ ಬಾಲ್ಯ ಕಾಲ ಕಥನ

ಕನ್ನಡದಲ್ಲಿ ಹಲವು ಅನುವಾದಗಳೂ ಸೇರಿದಂತೆ ಸಾಕಷ್ಟು ದಲಿತ ಆತ್ಮಕತೆಗಳು ಬಂದಿವೆ. ಆದರೆ ಬಿ.ಟಿ. ಬೆಳಗಟ್ಟ ಎಂಬ ನಾಮಾಂಕಿತದೊಂದಿಗೆ ಬರೆದಿರುವ ಬಿ.ಟಿ ಒಂದಿಷ್ಟು ನನ್ನದು. ತಿಪ್ಪೇಸ್ವಾಮಿಯವರ ಒಂದಿಷ್ಟು ನನ್ನದು...' ಪುಸ್ತಕ ಈ ಎಲ್ಲ ಆತ್ಮಕತೆಗಳಿಗಿಂತ ಭಿನ್ನವಾಗಿದೆ. ನಮ್ಮ ಸಿದ್ದಲಿಂಗಯ್ಯ ಅವರ 'ಊರುಕೇರಿ' ಮತ್ತು ಮರಾಠಿಯಿಂದ ಬಂದ ನರೇಂದ್ರ ಜಾಧವ್, ಅವರ ತಂದೆ ಮತ್ತು ಮಗಳ ಆತ್ಮವೃತ್ತಾಂತಗಳನ್ನೊಳಗೊಂಡ 'ಬಹಿಷ್ಕೃತ'ಗಳ ಹೊರತಾಗಿ ಬಹಳಷ್ಟು ದಲಿತ ಆತ್ಮಕತೆಗಳು ದಲಿತತ್ವದ ಅವಮಾನ- ಸ ಸಂಕಷಗಳ ನಿರೂಪಣೆಯ ಮಧ್ಯೆಯೇ ಲೇಖಕರ ವೈಯಕ್ತಿಕ ಬದುಕಿನ ಕಥೆಗಳನ್ನು ಹೇಳುತ್ತವೆ. ಆದರೆ ಈ ಪುಸ್ತಕ ಆ ಅವಮಾನ-ಸಂಕಟಗಳನ್ನು ಹೇಳಿಯೂ ಹೇಳದಂತಹ ತನ್ನದೇ ಗ್ರಾಮ ಮುಗ್ಧತೆಯೊಂದಿಗೆ ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಆ ಎಂಬ ಕುಗ್ರಾಮವೊಂದರ ಮ್ಯಾಸ ಮಾದಿಗರ ಕುಟುಂಬವೊಂದರ ಸಾಧನೆಯ ಹಾದಿಯನ್ನು ಬಿಚ್ಚಿಡುತ್ತದೆ. ವಿಶೇಷವೆಂದರೆ ಈ ಪುಸ್ತಕ ಅಂಬೇಡ್ಕರ್ ಸೇರಿದಂತೆ ಯಾರ, ಯಾವ ಸೈದ್ಧಾಂತಿಕ ಸ್ಫೂರ್ತಿ ಇಲ್ಲದೆ ಕೇವಲ ಬದುಕನ್ನು ಕುರಿತ ಪ್ರೀತಿಯಿಂದ, ಚೆನ್ನಾಗಿ ಬದುಕಬೇಕೆಂಬ ಛಲದಿಂದ ಮಾತ್ರ ಬದುಕು ಕಟ್ಟಿಕೊಂಡ ಓದು ಭಾರವಿಲ್ಲದ ಸರಳ ಸುಂದರ ಕಥೆಯಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.

ಈ ಪುಸ್ತಕದಲ್ಲಿ ಲೇಖಕರು ತಮ್ಮ ಕತೆಯನ್ನು ತಮ್ಮ ಶಾಲಾ ವಿದ್ಯಾಭ್ಯಾಸ ಮುಗಿಸುವವರೆಗೆ ಮಾತ್ರ ನಿರೂಪಿಸಿರುವರಾದರೂ, ಅದಷ್ಟೇ ಒಂದು ಸಾಧನೆಯ ಸಮಗ್ರತೆಯೊಂದಿಗೆ ನಮ್ಮನ್ನು ಸೆಳೆಯಲು ಕಾರಣ. ಅವರು ತಮ್ಮ ಹಟ್ಟಿ, ಹಳ್ಳಿ, ಪ್ರೌಢಶಾಲಾ ಶಿಕ್ಷಣಕ್ಕಾಗಿ ಹೋದ ಚಿತ್ರದುರ್ಗ ನಗರ ಅದರಲ್ಲಿನ ತಮ್ಮ ಶಾಲೆ ಮತ್ತು ಹಾಸ್ಟೆಲ್‌ನ ಬದುಕನ್ನು-ಅಂದಿನ ದಲಿತ ರಾಜಕಾರಣಿಗಳ ಕುತೂಹಲಕಾರಿ ಚಿತ್ರಣಗಳೂ ಸೇರಿದಂತೆ- ತಿಪ್ಪೇಸ್ವಾಮಿಯವರ ಇಡೀ ಬಾಲ್ಯ ನಮ್ಮ ಕಣ್ಮುಂದೆ ಹಾದುಹೋಗುವಂತೆ ಜೀವಂತವಾಗಿ ನಿರೂಪಿಸಿರುವುದು.

ಚರ್ಮ ಹದ ಮಾಡಿ ಮಾರುವ, ಚಪ್ಪಲಿ ರಿಪೇರಿ ಮಾಡುವ ಮತ್ತು ಮಳೆ ಇದ್ದರೆ ತಮ್ಮ ಅರ್ಧ ಎಕರೆ ಕಲ್ಲುಭೂಮಿಯಲ್ಲಿ ಜೋಳ, ನವಣೆ, ಸಜ್ಜೆಗಳನ್ನು ಬೆಳೆಯುವ ಕಡುಬಡ ಕುಟುಂಬವೊಂದರಲ್ಲಿ ಹುಟ್ಟಿ ತಮ್ಮ ಗುಡಿಸಿಲು ಮತ್ತು ಹಳ್ಳಿಯ ಬ್ರಾಹ್ಮಣರೂ ಸೇರಿದಂತೆ ವಿವಿಧ ಜಾತಿಗಳ ಗುಡಿಸಲು ಮತ್ತು ಮನೆಗಳಲ್ಲಿ ಸಿಗುವ ಚಂದಮಾಮ, ರಾಮಾಯಣ ಮಹಾಭಾರತ ಮುಂತಾದ ಪುರಾಣ ಪುಣ್ಯ ಕಥೆಗಳು, ಅವರ ಕಾಲದ (ಒಂದು ಪೋಲಿ ಕಾದಂಬರಿಯೂ ಸೇರಿದಂತೆ) ಆಧುನಿಕ ಕಥೆಕಾದಂಬರಿಗಳೆಲ್ಲವನ್ನೂ ಮುಕ್ಕಿ ಓದುತ್ತಾ ತನ್ನ ಭಾವಲೋಕವನ್ನು ವಿಸ್ತರಿಸಿಕೊಳ್ಳುವ ಬಾಲಕ ತಿಪ್ಪೇಸ್ವಾಮಿ ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ತನ್ನ ಹಟ್ಟಿಯಲ್ಲಿನ ಉಗಾದಿ ಜೂಜಾಟದ ಮಧ್ಯೆ 'ಸಂಪಾದಿಸಿದ' ಹಣದಿಂದ ಚಿತ್ರದುರ್ಗಕ್ಕೆ ಹೋಗಿ 'ವಚನ ಭಾರತ'ವನ್ನು ಕೊಂಡು ಓದುವ ಹುಚ್ಚು ಹತ್ತಿಸಿಕೊಂಡವನು. ಜೊತೆಗೆ ಚಿತ್ರ ಬಿಡಿಸುವ, ಸಿನಿಮಾ, ನಾಟಕಗಳ ಹಾಡು ಹೇಳುವ ಹವ್ಯಾಸ. ಹಾಗಾಗಿಯೇ ಈ ಹುಡುಗ ಪ್ರೌಢಶಾಲೆಯಲ್ಲಿ ಸವರ್ಣೀಯ ಜಾತಿಗಳ ಮೇಷ್ಟ ಮೆಚ್ಚುಗೆಗೂ ಪಾತ್ರವಾಗಿ ಶಾಲೆಯ ವಾರ್ಷಿಕ ಪತ್ರಿಕೆಯ ಸಹ ಸಂಪಾದಕನೂ ಆಗಿಬಿಡುವನು!

ಈ ಹುಡುಗನನ್ನು ಅವರ ತಂದೆ-ತಾಯಿ-ದೊಡ್ಡಪ್ಪ-ದೊಡ್ಡಮ್ಮಂದಿರು ಕಡು ಬಡತನದಲ್ಲೇ ಪ್ರೀತಿಯಿಂದ ಪ್ರೋತ್ಸಾಹಿಸಿದ, ಇದಕ್ಕಾಗಿ ತಂದೆ ಬೋಸಯ್ಯ ಹಳ್ಳಿಯ ರೆಡ್ಡಿ ಸಾಹುಕಾರರ ಕುಟುಂಬಗಳ ಈರ್ಷ್ಯೆ-ನಿಂದನೆ-ಮೆಚ್ಚುಗೆಗಳ ನಡುವೆ ತಿಳಿ ಮನಸ್ಸಿನಿಂದಲೇ ಸಹಾಯಕ್ಕೆ ಕೈಯೊಡ್ಡಬೇಕಾದ ಪ್ರಸಂಗಗಳು ಇಲ್ಲಿ ಯಾವುದೇ ಕಹಿ ಇಲ್ಲದೆ ವರ್ಣಿಸಲ್ಪಟ್ಟು ಅಸ್ಪಶ್ಯ ಕುಟುಂಬವೊಂದು ಹೀಗೂ ತನ್ನ ಪಾಡಿಗೆ ತಾನು ಸಾರ್ಥಕ ಬದುಕು ಕಟ್ಟಿಕೊಳ್ಳುವ ಕಥೆ ಇಂದಿನ ದಲಿತ ಸಾಹಿತ್ಯ ಕೃತಿಗಳ ಗಲಭೆ-ಗದ್ದಲಗಳ ನಡುವೆ ತನ್ನದೇ ಆದ್ರ್ರ ಚೆಲುವಿನೊಂದಿಗೆ ಗಮನ ಸೆಳೆಯುತ್ತದೆ. ಬೋಸಯ್ಯನವರ ಆರು ಜನ ಗಂಡು ಮಕ್ಕಳಲ್ಲಿ ಇಬ್ಬರು ಕಾಲೇಜು ಅಧ್ಯಾಪಕರು, ಇಬ್ಬರು ವೈದ್ಯರು, ಮತ್ತಿಬ್ಬರು-ತಿಪ್ಪೇಸ್ವಾಮಿಯವರೂ ಸೇರಿದಂತೆ - ಇಂಜಿನಿಯರುಗಳಾದರು ಎಂದರೆ ನೀವು ನಂಬುತ್ತೀರಾ?

-ಡಿಎಸ್ಸೆನ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜುಲೈ- 2019)

 

Related Books