ಅಧಿಷ್ಠಾನ ಬಾಯಿಪಾಠ ಪುಸ್ತಕ

Author : ಜಿ.ಕೆ. ದೇವರಾಜಸ್ವಾಮಿ

Pages 266

₹ 650.00




Year of Publication: 2022
Published by: ಯುವಸಾಧನೆ
Address: #729, 'ಗ್ರೀನೀ' 23ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್, ರಾರಾಜೇಶ್ವರಿನಗರ, ಬೆಂಗಳೂರು-560098
Phone: 7975330868

Synopsys

ಈಚಿನ ವರ್ಷಗಳಲ್ಲಿ ಜಗತ್ತಿನ ಆದ್ಯಂತ ಚೆದುರಿಹೋಗಿರುವ ಭಾರತೀಯ ವಿದ್ಯಾಸಕ್ತರು ಹೊಸ ಹುರುಪಿನಿಂದ ತಮ್ಮ ಅಧ್ಯಯನಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಇವರ ಪೈಕಿ ಭಾರತೀಯರೇ ಹೆಚ್ಚಾಗಿರುವುದು ಸಹಜವೇ ಆದರೂ ಮಿಗಿಲಾದ ಸಂತೋಷವನ್ನು ನೀಡುವ ಸಂಗತಿ. ನಮ್ಮವರು ನಮ್ಮ ಸಂಸ್ಕೃತಿಯನ್ನು ಜ್ಞಾನಪೂರ್ವಕವಾಗಿ ಅನುಷ್ಠಿಸಿದಾಗ ಹೊಮ್ಮುವ ಕಾಂತಿ ಅನ್ಯಾದೃಶ. ಇದು ಮಿಕ್ಕ ಜಗತ್ತನ್ನು ಅರ್ಥಪೂರ್ಣವಾಗಿ ಬೆಳಗದಿರದು. ಈ ಜಾಡಿನ ಅಧ್ಯಯನಗಳಲ್ಲಿ ಭಾರತೀಯ ಜ್ಞಾನಪದ್ಧತಿಯ ಮೂಲ-ಚೂಲಗಳನ್ನು ಅನ್ವೇಷಿಸುವ ವಿದ್ಯಾಶಾಖೆ ಸಾಕಷ್ಟು ಆಸಕ್ತಿ ಕೆರಳಿಸಿದೆ. ಇದಕ್ಕೆ ಅಂಗವಾಗಿ ನಮ್ಮ ನೆಲದ ಕಲಿಕೆಯ ಪದ್ಧತಿಗಳ ಅರಿವು ಬೆಸೆದುಕೊಂಡಿದೆ. ಪ್ರಸ್ತುತ ಶ್ರೀ ಜಿ. ಕೆ. ದೇವರಾಜಸ್ವಾಮಿ ಅವರು ಸಂಪಾದಿಸಿಕೊಟ್ಟಿರುವ ‘ಅಧಿಷ್ಠಾನ’ ಎಂಬ ಕೃತಿ ಈ ವರ್ಗಕ್ಕೆ ಸೇರುತ್ತದೆ. ನಮ್ಮ ಕವಿ-ವಿದ್ವಾಂಸರ ಗ್ರಂಥಗಳಲ್ಲಿ ಬಾಲಪಾಠದ ಕ್ರಮ ಎಂಥದ್ದೆಂಬ ಚಿತ್ರಣ ನೇರವಾಗಿ ಸಿಗುವುದಿಲ್ಲ. ಅಷ್ಟೇಕೆ, ಸಾಮಾನ್ಯ ವಿದ್ಯಾಭ್ಯಾಸದ ತರಪೇತಿ ಎಂಥದ್ದೆಂಬ ವಿವರಗಳೂ ಗ್ರಂಥಗತವಾಗಿ ದಕ್ಕುವುದಿಲ್ಲ. ಇವನ್ನೆಲ್ಲ ಅನೇಕ ಮೂಲಗಳಿಂದ ಕಣಕಣವಾಗಿ ಸಂಗ್ರಹಿಸುವ ಕ್ಲೇಶ ಸಂಶೋಧಕರದು. ಸದ್ಯದ ಕೃತಿ ಇಂಥ ಒಂದು ಶ್ಲಾಘ್ಯ ಕಾರ್ಯವನ್ನು ಮಾಡಿದೆ. ನಮ್ಮ ಮೌಖಿಕಪರಂಪರೆಯ ಕಲಿಕೆಯೆಲ್ಲ ಶುಕಪಾಠವೆಂದು ಹಳಿಯುವುದು ಆಧುನಿಕತೆಯ ಗೀಳೇ ಆಗಿದೆ. ಇಂಥ ಬಾಯ್ದೆರೆಯ ಕಲಿಕೆಗೆ ಅದರದೇ ಆದ ಪ್ರಾಶಸ್ತ್ಯವಿರುವುದು ತೆಗೆದುಹಾಕುವಂಥ ಸಂಗತಿಯಲ್ಲ. ಜ್ಞಾಪಕಶಕ್ತಿ ಪ್ರಜ್ವಲಿಸುತ್ತಿರುವ ಎಳೆಯ ವಯಸ್ಸಿನಲ್ಲಿ ಜೀವನದುದ್ದಕ್ಕೂ ಬೇಕಾಗುವ ಪಾಠಗಳನ್ನು ಕಂಠಸ್ಥೀಕರಿಸಿಕೊಂಡರೆ ಉಂಟಾಗುವ ಲಾಭ ಅಷ್ಟಿಷ್ಟಲ್ಲ. ಇದು ನಿತ್ಯವ್ಯವಹಾರಕ್ಕೆ ಬೇಕಾಗುವ ಮಗ್ಗಿಯಿಂದ ಮೊದಲ್ಗೊಂಡು ತತ್ತ್ವಚಿಂತನೆಗೆ ಆವಶ್ಯಕವಾದ ವೇದ-ಭಗವದ್ಗೀತೆಗಳವರೆಗೆ ಎಲ್ಲ ಹಂತಗಳಿಗೂ ಅನ್ವಯಿಸುತ್ತದೆ. ಅಮರಕೋಶವನ್ನು ಬಾಯಿಪಾಠ ಮಾಡಿದರೆ ನಮ್ಮ ಶಬ್ದದಾರಿದ್ರ್ಯ ಶಾಶ್ವತವಾಗಿ ದೂರವಾಗುವುದು. ಇನ್ನು ಧಾತುರೂಪಗಳನ್ನು ಕಂಠಸ್ಥೀಕರಿಸಿಕೊಂಡರೆ ವಾಕ್ಯರಚನೆಗೆ ಎಲ್ಲಿಲ್ಲದ ಪುಷ್ಟಿ ಸಿಗುತ್ತದೆ. ಮಹಾಕವಿಗಳ ಸೂಕ್ತಿಗಳನ್ನು ನೂರು-ಸಾವಿರಗಳ ಸಂಖ್ಯೆಯಲ್ಲಿ ನಾಲಗೆಯ ಮೇಲೆ ನಿಲ್ಲಿಸಿಕೊಂಡರೆ ಅವು ಬಾಳಿನ ಹಾದಿಯ ಉದ್ದಕ್ಕೂ ನಮಗೆ ಅರಿವು-ನಲವುಗಳ ಪಾಥೇಯವಾಗಿ ಉಳಿಯುತ್ತವೆ. ಇದೇ ರೀತಿ ಭೌತಶಾಸ್ತ್ರ -ರಸಶಾಸ್ತ್ರಗಳ ಸಮೀಕರಣಗಳನ್ನೂ ವೈದ್ಯಶಾಸ್ತ್ರದ ರೋಗಲಕ್ಷಣ, ರೋಗನಿದಾನ ಮತ್ತು ಚಿಕಿತ್ಸಾಕ್ರಮಗಳನ್ನೂ ನೆನಪಿನಲ್ಲಿ ಉಳಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಕಾರಣದಿಂದಲೇ ಸಂಸ್ಕೃತದ ಶಾಸ್ತ್ರ ಕಾರರು ತಮ್ಮ ಹೆಚ್ಚಿನ ಗ್ರಂಥಗಳನ್ನು ಪದ್ಯದ ರೂಪದಲ್ಲಿ ನಿರ್ಮಿಸಿದರು: ‘ಕವನ ನೆನಪಿಗೆ ಸುಲಭ ಮಂಕುತಿಮ್ಮ. ಈ ಬಗೆಯ ಸೌಲಭ್ಯ-ಸ್ವಾರಸ್ಯಗಳನ್ನು ಮನಗಾಣದೆ ಕಂಠಪಾಠವನ್ನು ದೂಷಿಸುವುದು ಆತ್ಮಹತ್ಯಾಸದೃಶ. ಪದ್ಯರೂಪದ ಮಾಹಿತಿ ನೆನಪಿಗೆ ಸುಲಭವಲ್ಲದೆ ಹೇಳಿಕೊಳ್ಳಲೂ ಸೊಗಸು. ಇದು ಏಕಕಾಲದಲ್ಲಿ ಬೋಧ ಮೋದಗಳಿಗೆ ಒದಗಿಬರುತ್ತದೆ. ಹಿಂದೆಲ್ಲ ಮನೆಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ದೇವರ ದೀಪದ ಬೆಳಕಿನಲ್ಲಿ ಪ್ರಾಥಮಿಕ ಗಣಿತದ ಪಾಠಗಳು, ಅಳತೆಯ ಕೋಷ್ಠಕಗಳು, ಪಂಚಾಂಗ ದ ವಿವರಗಳು, ದೇವತಾಸ್ತೋತ್ರಗಳು, ಸೂಕ್ತಿ-ಸುಭಾಷಿತಗಳು, ಆಟದ ಹಾಡುಗಳೇ ಮೊದಲಾದುವು ಹಿರಿಯರ ಸಮ್ಮುಖದಲ್ಲಿ ಮಕ್ಕಳಿಗೆ ಹರಿದುಬರುತ್ತಿದ್ದುವು. ಅಂದಂದಿನ ಪಾಠವನ್ನು ಅಂದಂದೇ ಒಪ್ಪಿಸಬೇಕು; ಹಿಂದಿನ ಪಾಠಗಳನ್ನು ಮರುಕಳಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲದೆ ರಾತ್ರಿಯ ಊಟಕ್ಕೆ ಏಳುವಂತಿಲ್ಲ. ಇದು ಉಚ್ಚಾರಣಶುದ್ಧಿ ಮತ್ತು ಆಲೋಚನಸಿದ್ಧಿಗಳನ್ನು ಮಕ್ಕಳಿಗೆ ಒದಗಿಸುತ್ತಿದ್ದುದಲ್ಲದೆ ಮಿಕ್ಕ ಮಕ್ಕಳೊಡನೆ ಕಲಿಯುವ ಉತ್ಸಾಹ ಮತ್ತು ಸ್ಪರ್ಧೆಗಳ ಉಲ್ಲಾಸವನ್ನೂ ಮೈಗೂಡಿಸುತ್ತಿತ್ತು. ಇಂಥ ಎಲ್ಲ ವಿಷಯಗಳ ಆಕರಸಾಮಗ್ರಿ ‘ಅಧಿಷ್ಠಾನ’ದಲ್ಲಿದೆ. ಈ ಬಗೆಯ ಬಾಲಾಧ್ಯಯನದ ಪಾಠ್ಯಪುಸ್ತಕ ತಾಳಪತ್ರಗ್ರಂಥದ ರೂಪದಲ್ಲಿ ಉಳಿದುಬಂದಿರುವುದೊಂದು ವಿಶೇಷ. ಇದನ್ನು ಸಜ್ಜುಗೊಳಿಸಿದ ಸಂಪಾದಕರಿಗೆ ನಾವೆಲ್ಲ ಋಣಿಗಳು. ಸದ್ಯದ ಗ್ರಂಥದಲ್ಲಿ ಮೂಲದ ಹಸ್ತಪ್ರತಿಯ ಸ್ಫುಟವಾದ ಛಾಯಾಚಿತ್ರಗಳಿರುವುದು ಬಹಳ ಪ್ರಯೋಜಕವಾಗಿದೆ. ಈ ಮೂಲಕ ಪಾಶ್ಚಾತ್ತ್ಯ ಪದ್ಧತಿಯ ಅಳತೆಗಳಿಗಿಂತ ಮುನ್ನ ನಮ್ಮಲ್ಲಿದ್ದ ಮಾಪನಕ್ರಮ ಎಂಥದ್ದೆಂಬ ಸ್ವಾರಸ್ಯವೂ ನಮಗೆಟುಕುವಂತಾಗಿದೆ. ಇದಕ್ಕಾಗಿ ದೇವರಾಜಸ್ವಾಮಿ ಅವರು ತುಂಬ ಶ್ರಮವಹಿಸಿ ಆ ಕಾಲದ ಅಳತೆಯ ಪಾತ್ರೆಗಳು, ತೂಕದ ಬೊಟ್ಟುಗಳು, ಬೇರೆ ಬೇರೆ ಬೆಲೆಯ ನಾಣ್ಯಗಳೇ ಮುಂತಾದುವನ್ನು ಸಂಪಾದಿಸಿ ವ್ಯವಸ್ಥಿತವಾಗಿ ಮುದ್ರಿಸಿದ್ದಾರೆ. ಇದು ಸ್ವದೇಶೀಶಿಕ್ಷಣದ ಹಾದಿಯಲ್ಲಿ ಹಿರಿದೊಂದು ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ.

About the Author

ಜಿ.ಕೆ. ದೇವರಾಜಸ್ವಾಮಿ

ಜಿ.ಕೆ. ದೇವರಾಜಸ್ವಾಮಿ ಅವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ವಿಭಿನ್ನ ದೃಷ್ಠಿಕೋನದ ಮೂಲಕ ಹೊಸ ಆಯಾಮಗಳೊಂದಿಗೆ, ಹೊಸ ಹೊಸ ವಿಚಾರಗಳನ್ನು, ಅಜ್ಞಾತವಾಗಿರುವ ಸಂಗತಿಗಳನ್ನು ಹೊರತರುತ್ತಿದ್ದಾರೆ. ಸಾಹಿತ್ಯಸಂಸ್ಕೃತಿ ಮತ್ತು ಇತಿಹಾಸದ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. 'ಕಳಚುರಿ ಶಾಸನಗಳು' ಬೃಹತ್ ಶಾಸನ ಸಂಪಾದನಾ ಕೃತಿ, 'ಕನ್ನಡ ಲಿಪಿ ವಿಕಾಸ', 'ಅಧಿಷ್ಠಾನ-ಬಾಯಿಪಾಠ ಪುಸ್ತಕ' ಎಂಬ ಮಹತ್ವ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books