ಮಾಯಾಕನ್ನಡಿ

Author : ಎಸ್.ಎಫ್‌. ಯೋಗಪ್ಪನವರ

Pages 156

₹ 200.00




Year of Publication: 2015
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 08394-228567 /9480728393

Synopsys

’ಸದಾ ಕುಡಿದಿರು ಏನನ್ನಾದರೂ; ವೈನ್‌, ಕಾವ್ಯ, ಋಜುತ್ವ...’  ಎಂದವನು ಫ್ರೆಂಚ್‌ ನವ್ಯಕವಿ ಚಾರ್ಲ್ಸ್‌ ಬೋದಿಲೇರ್. ಅವನು ಕನ್ನಡಕ್ಕೆ ಅಡಿಯಿಟ್ಟಿದ್ದು ಪಿ. ಲಂಕೇಶ್‌ ಅವರ ’ಪಾಪದ ಹೂಗಳು’ ಕೃತಿಯ ಮೂಲಕ.  ಲಂಕೇಶ್‌ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಎಸ್‌. ಎಫ್. ಯೋಗಪ್ಪನವರ್ ಸುಮಾರು ನಾಲ್ಕು ದಶಕಗಳ ಬಳಿಕ ಬೋದಿಲೇರನ ಮತ್ತಷ್ಟು ಕವಿತೆಗಳ ಗುಚ್ಛವನ್ನು ಹಿಡಿದು ನಿಂತಿದ್ದಾರೆ. ಅದೇ ’ಮಾಯಾಕನ್ನಡಿ’. ಇಲ್ಲಿ ಒಟ್ಟು ಐವತ್ತು ಗದ್ಯ ಕವಿತೆಗಳಿವೆ. ’ಪಾಪದ ಹೂಗಳು’ ಕೃತಿಗೆ ರೇಖಾಚಿತ್ರ ಬಿಡಿಸುವ ಮೂಲಕ ಆ ಕೃತಿಯನ್ನು ಅನನ್ಯವಾಗಿಸಿದ್ದ ಟಿ.ಎಫ್‌. ಹಾದಿಮನಿ ಇಲ್ಲಿಯೂ ರೇಖೆಗಳ ಮೂಲಕ ಸೊಗಸಾದ ಆಟವಾಡಿದ್ದಾರೆ. 

ಕೃತಿ ಕುರಿತು ಪತ್ರಕರ್ತ ಬಸವರಾಜ್ ಅವರು ತಮ್ಮ ಬ್ಲಾಗ್‌ನಲ್ಲಿ ’ಕೇವಲ 46 ವರ್ಷಗಳಷ್ಟೇ ಬದುಕಿದ್ದ ಬೋದಿಲೇರ್‌, ಇದ್ದಷ್ಟು ದಿನವೂ ಸಂಘರ್ಷಕ್ಕೆ ಒಡ್ಡಿಕೊಂಡು ಬದುಕಿದ್ದ. ಆ ಕಾಲಕ್ಕೇ ವಿಕ್ಷಿಪ್ತವೆನ್ನಿಸಿದ ತನ್ನ ಬರಹಗಳಿಂದ ಸಮಕಾಲೀನ ಸಮಾಜದ ನೈತಿಕ ಪ್ರಜ್ಞೆಗೆ ಸವಾಲಾಗಿದ್ದ. ನಶ್ವರ ವಸ್ತುಗಳನ್ನು ನಿರ್ಲಕ್ಷಿಸುತ್ತಲೇ ನಿಸರ್ಗವನ್ನು ಆಸಕ್ತಿಯಿಂದ ಅವಲೋಕಿಸುತ್ತಿದ್ದ. ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೆ ಇರುವ ಲೇಖಕ ಲೇಖಕನೇ ಅಲ್ಲ; ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೇ ಕಾಲಕ್ಕೆ ಎರಡು ಮುಖಗಳು ಗೋಚರಿಸುತ್ತವೆ- ಒಂದು ದೇವರು, ಮತ್ತೊಂದು ದೆವ್ವ ಎಂದಿದ್ದ.

ಇಂತಹ ಬೋದಿಲೇರ್‌ನನ್ನು ಕನ್ನಡಕ್ಕಿಳಿಸಿದ ಲಂಕೇಶರು, ಇದು ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ. ಅವನ ನರಕ ನೋಡಿಯಾದರೂ ನಮ್ಮ ಓದುಗರು ಎಚ್ಚರಗೊಳ್ಳಲಿ ಎಂಬುದು ನನ್ನಾಸೆ ಎಂದು ’ಪಾಪದ ಹೂವುಗಳ’ನ್ನು ಅನುವಾದಿಸಿದ್ದರು. ಫ್ರೆಂಚಿನ ಪಾಪದ ಹೂಗಳನ್ನು ಲಂಕೇಶರು ಕನ್ನಡಕ್ಕೆ ಕರೆತಂದ 40 ವರ್ಷಗಳ ನಂತರ, ಬೋದಿಲೇರ್‌ನ ಗದ್ಯರೂಪದ ಐವತ್ತು ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೆ ಕರೆತಂದಿದ್ದಾರೆ, ಲಂಕೇಶರ ಆಪ್ತ ಬಳಗದವರಲ್ಲೊಬ್ಬರಾದ ಹೊಸ ತಲೆಮಾರಿನ ವಿಶಿಷ್ಟ ಬರಹಗಾರ ಎಸ್‌.ಎಫ್‌. ಯೋಗಪ್ಪನವರ್‌’ ಎಂದು ಉಲ್ಲೇಖಿಸಿದ್ದಾರೆ.

ಬೋಧಕ ಸಾಹಿತ್ಯಪ್ರೇಮಿ ವಾಸುದೇವ ಶೆಟ್ಟಿ ಅವರು ’ ಈತನನ್ನು ಕನ್ನಡಕ್ಕೆ ಸಮರ್ಥವಾಗಿ ಯೋಗಪ್ಪನವರ್ ತಂದಿದ್ದಾರೆ. ಅವರ ಅನುವಾದ ಕೃತಿಯನ್ನು ಕನ್ನಡದ್ದೇ ಎಂಬಷ್ಟು ಸಹಜವಾಗಿ ಓದುವುದಕ್ಕೆ ಸಾಧ್ಯಮಾಡಿದೆ. ಅನುವಾದಿಸಲು ಅವರು ಎಲ್ಲಿಯೂ ತಿಣುಕಾಡಿದ್ದು ಕಾಣಿಸುವುದಿಲ್ಲ. ಅದಕ್ಕಾಗಿ ಬೋದಿಲೇರನ ಅನುಯಾಯಿಗಳ ಅಭಿನಂದನೆಗೆ ಅವರು ಪಾತ್ರರು’ ಎಂದು ತಮ್ಮ ಬರಹವೊಂದರಲ್ಲಿ ಶ್ಲಾಘಿಸಿದ್ದಾರೆ. 

About the Author

ಎಸ್.ಎಫ್‌. ಯೋಗಪ್ಪನವರ

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಬೇಲೂರು ಗ್ರಾಮದವರಾದ ಯೋಗಪ್ಪನವರ್ ಕೆ.ಎ.ಎಸ್. ಅಧಿಕಾರಿಯಾಗಿ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ', 'ಪ್ರೀತಿ ಎಂಬುದು ಚಂದ್ರನ ದಯೆ', 'ಶೋಧ' ಎಂಬ ಕಾದಂಬರಿಗಳನ್ನು, 'ಆರಾಮ ಕುರ್ಚಿ ಮತ್ತು ಇತರ ಕತೆಗಳು', 'ಮೂಟೇಶನ್' ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 'ಮಾಯಾ ಕನ್ನಡಿ-ಚಾರ್ಲ್ಸ್ ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು', ಜೆ.ಡಿ. ಸಾಲಿಂಜರ್‌ನ ಕಾದಂಬರಿ 'ಹದಿಹರೆಯದ ಒಬ್ಬಂಟಿ ಪಯಣ' ಅವರ ಅನುವಾದಿತ ಪುಸ್ತಕಗಳು. ...

READ MORE

Related Books