ಸ್ವಪ್ನಲಿಪಿ

Author : ಚಿದಾನಂದ ಸಾಲಿ

Pages 62

₹ 100.00




Year of Publication: 2018
Published by: ಕೇಂದ್ರ ಸಾಹಿತ್ಯ ಅಕಾಡೆಮಿ
Address: ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರಾದೇಶಿಕ ಕಛೇರಿ,  ಸೆಂಟ್ರಲ್‌ ಕಾಲೇಜು ಆವರಣ, ಅರಮನೆ ರಸ್ತೆ, ಬೆಂಗಳೂರು
Phone: 08022245152

Synopsys

ಪೆನುಮರ್ತಿ ವಿಶ್ವನಾಥ ಶಾಸ್ತಿಅವರು  'ಆಂದ್ರ ಪ್ರಭ' ದೈನಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಜಂತಾ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾದ ಇವರು ರಚಿಸದ್ದು ನಲವತ್ತು ಪದ್ಯಗಳು. ಇವರ ಕವಿತೆಯ ವಸ್ತುಗಳಾದ ಸಾವು, ಭಯ, ಭೀಕರತೆ, ಉದ್ವಿಗ್ನತೆ, ಅಸಹಾಯಕತೆ, ಗಾಯ, ರಕ್ತ ಇವೆಲ್ಲವೂ ಕಾವ್ಯದುದ್ದಕ್ಕೂ ಕಾಣಿಸುವಂತದ್ದು. ಇಂತಹ ಕವಿತೆಯ ವಸ್ತುಗಳನ್ನು ಕನ್ನಡದ ಮನಸ್ಸುಗಳಿಗೆ ತಮ್ಮ ಅನುವಾದದ ಮೂಲಕ ಕೊಟ್ಟವರು ಚಿದಾನಂದ ಸಾಲಿಯವರು.ಅಜಂತಾ ಅವರ ಇಪ್ಪತ್ತೊಂಭತ್ತು ಪದ್ಯಗಳನ್ನು  ಅನುವಾದಿಸಿ ತಂದಿರುವ ಇವರು  ಸ್ವಪ್ನಲಿಪಿ ಕವನ ಸಂಕಲನದ ಮೂಲಕ  ಹೊರತಂದಿದ್ದಾರೆ.

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Reviews

ಕಾವ್ಯದ ನಿಗೂಢ ಚಿತ್ರಲಿಪಿ-ಸ್ವಪ್ನಲಿಪಿ-ಪ್ರಜಾವಾಣಿ

ಪ್ರತಿಮೆಗಳ ಕಾವ್ಯರೂಪ

ನಮ್ಮ ವಾರಿಗೆಯ ಬರಹಗಾರರಲ್ಲೇ ತಮ್ಮ ವಿಶಿಷ್ಟತೆ ಮತ್ತು ವಿಫುಲ ಬರವಣಿಗೆಗೆ ಹೆಸರಾದವರು ಚಿದಾನಂದ ಸಾಲಿ. ಕತೆ, ಕವಿತೆ, ನಾಟಕ, ಪ್ರಬಂಧ, ಸಂದರ್ಶನ, ಕಾದಂಬರಿ, ಮಕ್ಕಳ ಸಾಹಿತ್ಯ. . . ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಬರೆಯುವ ಚಿದಾನಂದ ಸಾಲಿ ಪ್ರಮುಖ ಸೃಜನಶೀಲ  ಬರಹಗಾರರಷ್ಟೇ ಅಲ್ಲ, ಅನುವಾದಕರೂ ಸಹ!

ತಮ್ಮ ಅನುವಾದಗಳಿಗೆ ಭಾಷಾಂತರ ಸಾಹಿತ್ಯ ಅಕಾಡೆಮಿ( ಕುವೆಂಪು ಭಾಷಾ ಭಾರತಿ)ಯಿಂದ ಎರಡು ಬಾರಿ ಪುರಸ್ಕೃತರಾದ ಚಿದಾನಂದ ಸಾಲಿ ಅನುವಾದಿಸಿರುವ  'ಅಜಂತ' ಎಂಬ ಕಾವ್ಯನಾಮದಿಂದಲೇ ಪರಿಚಿತರಾಗಿದ್ದ ಖ್ಯಾತ ಕವಿ ಪೆನುಮರ್ತಿ ವಿಶ್ವನಾಥ ಶಾಸ್ತ್ರಿಯವರ 'ಸ್ವಪ್ನಲಿಪಿ' ಒಂದು ವಿಶಿಷ್ಟ ಸಂಕಲನ. ಅಜಂತಾರ ಈ ಮಾತುಗಳಲ್ಲಿ ಅವರ ಕಾವ್ಯದ ಮ್ಯಾನಿಫೆಸ್ಟೋ ಇದೆ. 

"ನನ್ನ ಕಾವ್ಯದಲ್ಲಿ ಪೂರ್ವ ನಿರ್ದೇಶಿತ ಭಾವಗಳಿಗೆ ಅತೀತವಾದ, ವಿಲಕ್ಷಣವಾದ, ನಿರಂಕುಶವಾದ ತಡೆ ರಹಿತ ಧ್ವನಿಯೊಂದು ಕೇಳಿಸುತ್ತದೆ". ಕವಿಯ ಬದುಕಿನ ಕಾಲದಲ್ಲಿ ನಲವತ್ತೈದು ವರ್ಷಗಳಲ್ಲಿ ಬರೆದ ಅಜಮಾಸು ನಲವತ್ತು ಕವಿತೆಗಳಲ್ಲಿ ಆಯ್ದ ಕೇವಲ ಇಪ್ಪತ್ತೊಂಭತ್ತು ಕವಿತೆಗಳ ಈ ಸಂಕಲನ ಮೊದಲು ಪ್ರಕಟವಾಗಿದ್ದು 1992ರಲ್ಲಿ. 

ಸಂಕಲನದ ಮೊದಲ ಕವಿತೆ 'ಎಲ್ಲ ಒಂದೇ ಶಬ್ದ'ವೇ ಅನುರಣಿಸುವಂತೆ 

'ಎಲ್ಲ ಒಂದೇ ಶಬ್ದ

ಒಂದೇ ಕದಲಿಕೆ

ಒಂದೇ ಒಗಟು

ಶರೀರವ ಜಯಿಸಿದ ಒಂದು ಜೀವನದ ತಟ್ಟತಳದಲ್ಲಿ…'

'ಎಲ್ಲ ಒಂದು ಚಿತ್ ಕಲೆ' ಎನ್ನುವ ಕವಿ ಮುಂದೆ 'ಆಗ್ನಿಸ್ಪರ್ಶ'ದಲ್ಲಿ ದಿಗ್ಮೂಢಗೊಳಿಸುವಂತೆ 'ನಿರಾಶೆ, ನಿಟ್ಡುಸಿರು, ನಿದ್ರಾರಣ್ಯಗಳು ನಿಷಿದ್ಧ'

ಎನ್ನುತ್ತಲೇ

' ಆಧುನಿಕ ಮಾನವ ಅಗ್ನಿ ನೇತ್ರನಲ್ಲವೆ

ಕೊಲೆಯಾದವನೂ ಅವನೇ ಕೊಲೆಗಾರನೂ ಅವನೇ

ಕ್ಷಣ ಕ್ಷಣ ಭೀಭತ್ಸಗಳ ನನ್ನ ಅಲಂಕಾರ

ಕೆಂಪು ದೀಪಗಳೇ ಜೀವನ ಸಾಮಗ್ರಿ' ಎನ್ನುತ್ತಾರೆ!

 

'ಎಲ್ಲೂ ಯಾರೂ ಇಲ್ಲ. ಎಲ್ಲ ಮನೆ ಸೇರಿಕೊಂಡಿದ್ದಾರೆ' ಎಂಬ ಭಾವವನ್ನೇ ಪುನರುಕ್ತಿಯ ಮೂಲಕ ಮನವರಿಸುವ ಬಿಡಿ ಬಿಡಿ ಪ್ರತಿಮೆಗಳ ರೂಕ್ಷತೆಯ ಕವಿತೆ "ಸುಷುಪ್ತಿ" ಯಲ್ಲಿ ಕನಸೆಂಬುದು ರಮ್ಯವಾಗಿಲ್ಲ. ಅದು ನಾಳಿನ ಕಲ್ಪನೆಯಲ್ಲ, ನಿನ್ನೆಯ ನೆನಪುಗಳ ನವಿರು ಮೊತ್ತವಲ್ಲ. ವಾಸ್ತವದ ವಿಭ್ರಾಂತ ಸ್ಥಿತಿಯಲ್ಲಿ 'ಕೊಲೆಗಾರನಿಗೂ ಕೊಲೆಯಾದವನಿಗೂ ಈಗ ಅಂಥ ಅಂತರವಿಲ್ಲ'!!! 'ಕತ್ತಲ ಅನಾಥಾಶ್ರಮದಲ್ಲಿ ಎಲ್ಲ ತಲೆಮರಸಿಕೊಂಡಿದ್ದಾರೆ' ಎಂಬಲ್ಲಿ ಕಲಸಿ ಹೋದ ಚಹರೆಗಳ ನಿರ್ವಿಣ್ಣತೆ ಇದೆ. ಆಶೆಗಳಿಲ್ಲದ, ಅಸೂಯೆಗಳಿಲ್ಲದ, ನಿರಾಶೆಗಳಿಲ್ಲದ, ದ್ವೇಷಗಳಿಲ್ಲದ, ಹತಾಶ ಸ್ಥಿತಿಗಳಿಲ್ಲದ, ಕಷ್ಟಗಳು ಕಣ್ಣೀರೂ ಇಲ್ಲದ ಆ ಕನಸು ಮತ್ತೆ ಹೇಗೆ ಇರಬಹುದು!!!?

"ಎಲ್ಲೆಡೆಯೂ ಒಂದೇ ಒಂದು ನಿಶ್ಯಬ್ದ

ಒಂದೇ ಒಂದು ಹೃದಯ ಸ್ಪಂದನ" ಎಂದು ಪರಿಸಮಾಪ್ತಿಯಾಗುವ ಈ ಸುಷುಪ್ತಿ ಎಂಬ ನಿದ್ರಾ ವಾಸ್ತವ ಓದುಗನ ಅನುಭವಕ್ಕ ಬಂದು ಕಂಪನವೊಂದು ತರಂಗ ಮೂಡಿಸುತ್ತದೆ.

 

"ರೋಡುಗಳಿಗೆ ನಮಸ್ಕಾರ" ಎಂಬ ವಿಶಿಷ್ಟ ಲಕ್ಷಣದ ಕವಿತೆಯಲ್ಲಿ 'ಸ್ವಪ್ನಖಚಿತವಾದ ನನ್ನ ಶರೀರವ ರಸ್ತೆಗಳಿಗೇ ಅರ್ಪಿಸಿದ್ದೇನೆ' ಎನ್ನುತ್ತಾರೆ ಕವಿ! 'ಕತ್ತಲ ವಿಷವ ಆಸ್ವಾದಿಸುತ್ತಿರುವ ಬೀದಿ ಮಹರ್ಷಿ ನನ್ನ ಕಾವ್ಯ ನಾಯಕ' ಎಂದೆನ್ನುವ ಕವಿ ದಶಕಗಳ ಹಿಂದೆಯೇ ಕಂಪ್ಯೂಟರ್ ಚಿತ್ರಗಳ ಬಗ್ಗೆ ಕವಿತೆ ಬರೆಯುತ್ತಾರೆ!!

 

ಬದುಕು, ಸಾವು, ಕನಸು, ನಿದ್ರೆ, ಸುಷುಪ್ತಿ, ಮಂಪರು, ವಾಸ್ತವ, ವಿಭ್ರಾಂತಿ, ರಸ್ತೆ, ಕಂಪ್ಯೂಟರ್, ಮಹರ್ಷಿ, ಕೊಲೆಗಾರ. . . . ಹೀಗೆ ಪಟ್ಟಿ ಮಾಡಲೂ ಸಿಗದಷ್ಟು ಬಿಡಿ ಪ್ರತಿಮೆಗಳ ಈ ವಿಶಿಷ್ಟ ಕಾವ್ಯವನ್ನು ಅರ್ಥೈಸಲು ಸಾಧ್ಯವಾಗದು. ಕಾವ್ಯ ಆಸ್ವಾದನೆಯಷ್ಟೇ. ಹಾಗಾದಾಗ ಮಾತ್ರ ಅಜಂತಾರ ಕಾವ್ಯ ನಮ್ಮದೂ ಆಗಬಹುದು. ಆದರೆ ಕನ್ನಡ ಕಾವ್ಯವನ್ನು ವಿಂಗಡಿಸಿ ಓದಿ, ವಿಶ್ಲೇಷಿಸಿರುವ ನಮಗೆ ನವೋದಯ ನವ್ಯ ಬಂಡಾಯ ಎಂಬ ಯಾವ ಲಕ್ಷ್ಮಣ ಗಳಿಗೂ ದಕ್ಕದ ಈ ಪ್ರತಿಮಾ ದಟ್ಟಾರಣ್ಯ ಅರಿವೂ ಆಗುವುದು ಕಷ್ಟಸಾಧ್ಯ. ಅಂತಹ ಒಂದು ವಿಶಿಷ್ಟ ಕಾವ್ಯ ಸಾಧ್ಯತೆಯನ್ನು ಕನ್ನಡಕ್ಕೆ ತರುವುದೂ ಸಾಧ್ಯವಾದ ಕಷ್ಟ!! ಈ ಎಲ್ಲಾ ಕಾರಣಕ್ಕಾಗಿ ಅನುವಾದಕರಾದ ಚಿದಾನಂದ ಸಾಲಿ, ಪ್ರಕಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಅಜಂತಾರಷ್ಟೇ ಅಭಿನಂದನೀಯರು.

-ಡಾ. ಆನಂದ್ ಋಗ್ವೇದಿ 22 ಡಿಸೆಂಬರ್‌ 2019

ಕೃಪೆ: ಸಂಯುಕ್ತ ಕರ್ನಾಟಕ

Related Books