ಅನುಪಮ ಸಾಧಕರು

Author : ಸುರೇಶ ಗುದಗನವರ

Pages 224

₹ 230.00




Year of Publication: 2021
Published by: ಭಾವಸಿಂಚನಾ ಪ್ರಕಾಶನ
Address: ವಾರ್ಡ ನಂ.13, ಆಂಜನೆಯ ದೇವಸ್ಥಾನದ ಹಿಂಭಾಗ, ಮಹಾವೀರ ನಗರ, ಕುಣಿಗಲ್-572130 ಜಿ : ತುಮಕೂರ
Phone: 9036402083

Synopsys

ಅನುಪಮ ಸಾಧಕರು-ಲೇಖಕ ಸುರೇಶ ಗುದಗನವರ ಅವರು ಬರೆದ ಕೃತಿ. ದಮನಿತ ಮಹಿಳಾ ಸಾಧಕಿಯರನ್ನು ಪರಿಚಯಿಸಲಾಗಿದೆ. ಮಹಿಳಾ ಸಬಲೀಕರಣ ಹಾಗೂ ಪೂರಕವಾದ ಅಂಶಗಳನ್ನು, ಜೀವನದಲ್ಲಿ ಸಾಧನೆ ಮಾಡಿದ ಅರವತ್ತು ಮಹಿಳಾ  ಸಾಧಕರ ಪರಿಶ್ರಮವನ್ನು ಕಟ್ಟಿಕೊಟ್ಟಿದ್ದಾರೆ. ಅನೇಕ ಮಹಿಳಾ ಸಾಧಕರ ಗುಚ್ಚ ಎಂದೇ ಹೇಳಬಹುದು. ಕೈಯಿಲ್ಲದ, ಕಾಲು ಇಲ್ಲದ, ಅಂಧರು ಸಾಧನೆ ಮಾಡಿರುವ ಲೇಖನಗಳು ಸ್ಫೂರ್ತಿ ನೀಡುತ್ತವೆ. ಈ ಕೃತಿಯು ಸಾಧಕರಿಗೆ ಧನ್ಯತೆಯ ಭಾವವನ್ನು, ಏನನ್ನಾದರೂ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷಿಗಳಿಗೆ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. 

ಜನಸಾಮಾನ್ಯರು ಹೀರೋ ಆಗುವ ಸಾಧ್ಯತೆ ಇದೆಯೇ ? ಅಂತಹ ಸಾಧನೆ ಮಾಡಲು ನಾವು ನೀವು ಏನು ಮಾಡಬೇಕು ? ಇದಕ್ಕೆ ಸರಳ ಉತ್ತರವೆಂದರೆ, ಜೀವನದಲ್ಲಿ ಸಾಧನೆ ಮಾಡಿದವರ ಜೀವನ ಚರಿತ್ರೆ, ಪರಿಚಯ ಓದಿ ಮನನ ಮಾಡಿಕೊಳ್ಳುವದು. ಜೀವನದಲ್ಲಿ ಸಾಧನೆ ಮಾಡಿದ ಸಾಧಕರ ಪರಿಶ್ರಮವನ್ನು ಕಿರಿದಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕ ಸುರೇಶ ಗುದಗನವರ, ತಮ್ಮ ಅನುಪಮ ಸಾಧಕರು ಪುಸ್ತಕದಲ್ಲಿ. ಈ ಕೃತಿಯಲ್ಲಿ ಒಟ್ಟು 60 ಲೇಖನಗಳಿದ್ದು ಪ್ರತಿಯೊಂದು ಲೇಖನಗಳಲ್ಲೂ ಒಬ್ಬೊಬ್ಬ ವ್ಯಕ್ತಿಯ ಜೀವನ ಕಥೆಗಳಾಗಿ ಕೆಲವು ಮನೋಜ್ಞವಾಗಿವೆ. ಇದನ್ನು ಅನೇಕ ಸಾಧಕರ ಗುಚ್ಛವೆಂದೇ ಹೇಳಬಹುದು.

            ಅಮೇರಿಕಾದ ಕೈಗಳಿಲ್ಲದ ಪೈಲೆಟ್‌ ಜೆಸ್ಸಿಕಾ, ಮಹಾರಾಷ್ಟ್ರದ ಅನಾಥರ ಮಾತೆ ಸಿಂಧೂತಾಯಿ, ತರಕಾರಿ ಮಾರಿ ಆಸ್ಪತ್ರೆ ನಿರ್ಮಿಸಿದ ಸುಭಾಷಿಣಿ ಮಿಸ್ತ್ರಿ, ರುದ್ರ ಭೂಮಿ ಕಾಯುವ ಕಾಯಕದ ಗಟ್ಟಿಗಿತ್ತಿ ಪ್ರವೀಣಾ ಸೋಲೋಮನ್‌, ಬಡತನದಿಂದ ಬೆಂದು ಐ.ಎ.ಎಸ್‌. ಅಧಿಕಾರಿಯಾದ ಇಲ್ಮಾ ಅಫ್ರೋಜ್‌, ಅಂಧರ ಬಾಳಿಗೆ ಬೆಳಕಾದ ತುಳಸಮ್ಮ ಕೆಲೂರ, ಶಾಂತಿಧೂತೆ ಸಿರಿಯಾದ ನಾದಿಯಾ ಮುರಾದ್‌, ವರದಕ್ಷಿಣೆ ಶೋಷಿತ ಛಲದಲ್ಲಿ ಐ.ಎ.ಎಸ್.‌ ಅಧಿಕಾರಿಯಾದ ರಾಜಸ್ತಾನದ ಉಮ್ಮಾಳ ಖೇರ್‌, ಅಂಗವಿಕಲತೆ ಮೆಟ್ಟಿ ನಿಂತ ನೂರ ಜಲೀಲಾ, ಪಾದಗಳನ್ನೇ ಕೈಗಳಾಗಿಸಿಕೊಂಡ ಬೆಳ್ತಂಗಡಿಯ ಸಬೀತಾ ಮೋನಿಸ್‌, ಅಂತರ್ಜಾಲ ಬೋಧನೆಯ ಜ್ಯೋತಿ ಬೀಳಗಿ, ಅಗ್ನಿಶಾಮಕ ದಳದ ಅಧಿಕಾರಿ ಹರ್ಷಿಣಿ ಕನ್ಹೇಕರ್‌, ಬುಡಕಟ್ಟು ಸಮುದಾಯದ ಐ.ಎ.ಎಸ್.‌ ಅಧಿಕಾರಿ ಶ್ರೀಧನ್ಯಾ, ಚಹಾ ವ್ಯಾಪಾರಿ ಮಗಳು ಛಲದಿಂದ ವಾಯುಪಡೆಯ ಪೈಲೆಟ್‌ ಆದ ಅಂಚಲ್‌ ಗಂಗವಾಲ್‌, ಮಂಗಳಮುಖಿಯಾರಾದ ಬೆಂಕಿಯಲ್ಲಿ ಬೆಂದ ಮಂಜಮ್ಮ ಜೋಗತಿ, ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ ಚಲವಾದಿ, ಬ್ರಹ್ಮಕುಮಾರಿ ಸಹೋದರಿ ಶಿವಾನಿ, ಮಹಿಳಾ ವೇದೋಪಾಸಕಿ ಪಿ.ಭ್ರಮರಾಂಭ, ರಂಗಭೂಮಿ ಕಲಾವಿದೆ ಮಾಲತಿ ಶ್ರೀ, ಮಹಿಳಾ ಉದ್ಯಮಿ ಅಶ್ವಿನಿ ಸರದೇಶಪಾಂಡೆ, ಕೃಷಿ ಸಾಧಕಿ ಲಕ್ಷ್ಮೀ ಲೋಕೂರ, ಯುವ ಉದ್ಯಮಿ ಅಪೂರ್ವ ಬಜಾಜ್‌, ಪ್ಯಾಡ್‌ ವುಮನ್‌ ಭಾರತಿ ಗುಡ್ಲಾನೂರ, ಮಕ್ಕಳ ಹೋರಾಟಗಾರ್ತಿ ಮಂಜುಳಾ ಮುನವಳ್ಳಿ, ಸಾಮಾಜಿಕ ಕಾ‍ರ್ಯಕರ್ತೆ ನವ್ಯಶ್ರೀ, ನೈಸರ್ಗಿಕ ಸಾಬೂನ ತಯಾರಕಿ ಅಪರ್ಣಾರಾವ್‌, ಕಾದಂಬರಿಗಾರ್ತಿ ಪಾವರ್ತಿ ಪಿಟಗಿ ಮುಂತಾದವರು ಸಾಧನೆ ಮಾಡಿರುವ ಲೇಖನಗಳು ಸ್ಪೂರ್ತಿ ನೀಡುತ್ತವೆ.

  ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಕುರಿತು ‘ಈ ಕೃತಿಯು ವಿದೇಶಿ ಕವಿ ಜೆಫ್ರಿ ಚಾಸರ್‌ ಅವರ ದಿ ಕ್ಯಾಂಟರ್ಬರಿ ಟೇಲ್ಸ್‌ ಕೃತಿಯ ವ್ಯಕ್ತಿ ಪರಿಚಯಗಳನ್ನು ಹೋಲುವಂತಿದ್ದು, ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಲೇಖಕರು ಸಮಾಜದ ಧ್ವನಿಯಾಗಿ ತೋರ್ಪಡಿಸಿರುವ ಆಸಕ್ತಿಯ ಆಳಗಲಕ್ಕೆ ಕನ್ನಡಿಯಾಗಿದೆʼ ಎಂದು ಪ್ರಶಂಸಿಸಿದ್ದರೆ ಬೆನ್ನುಡಿ ಬರೆದ ಕವಿ ಸತೀಶ ಕುಲಕರ್ಣಿ ಅವರು ‘ದಮನಿತ ಮಹಿಳಾ ಸಾಧಕಿಯರ ದಾಖಲೆಯ ಪುಸ್ತಕ, ಒಂದರ್ಥದಲ್ಲಿ ಮಹಿಳಾ ಕೇಂದ್ರಿತ ಚಿತ್ರಗಳಿವೆʼ ಎಂಬುವುದು ಕೃತಿಗೆ ಗೌರವದ ಮಾತುಗಳಾಗಿವೆ’ ಎಂದು ಶ್ಲಾಘಿಸಿದ್ದಾರೆ. 

About the Author

ಸುರೇಶ ಗುದಗನವರ
(15 July 1961)

ಪ್ರೊ. ಸುರೇಶ ಗುದಗನವರ ಅವರು ಬೆಳಗಾವಿ ಜಿಲ್ಲೆಯ ಚುಂಚನೂರ ಗ್ರಾಮದವರು. ರಾಮದುರ್ಗದ ವಿ.ಬಿ.ಎಸ್. ಎಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿ ನಿವೃತ್ತರಾಗಿದ್ದಾರೆ. ಅನುಪಮ ಕಲಾ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಪ್ರದೇಶದಲ್ಲಿ ಭರತನಾಟ್ಯದ ಅಭಿರುಚಿ ಬೆಳೆಸಲು ಹಂಬಲಿಸಿದವರು. ಕರ್ನಾಟಕ ಸರ್ಕಾರದ ಪದವಿಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ. ಪಠ್ಯಪುಸ್ತಕ ರಚನಾ ಮಂಡಳಿಯ ಸದಸ್ಯರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷರಾಗಿ, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ, ಡಿ.ಎಸ್. ಕರ್ಕಿ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿದ್ದು, ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುಪಮ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.  ಕೃತಿಗಳು:  ಅನುಪಮ ಸಾಧಕರು (60 ಮಹಿಳೆಯರ ಸಾಧನೆಯ ಚಿತ್ರಣ), ಸಂಖ್ಯಾಶಾಸ್ತ್ರ ...

READ MORE

Reviews

ವಿಮರ್ಶೆ :

ಬೆಳಗಾವಿ ಜಿಲ್ಲೆಯ ರಾಮದುರ್ಗದ ಶ್ರೀ ಸುರೇಶ ಗುದಗನವರ ಪ್ರವರ್ಧಮಾನಕ್ಕೆ ಬರುತ್ತಿರುವ ಉತ್ತಮ ಬರಹಗಾರರು. ವಿವಿಧ ಪತ್ರಿಕೆಗಳಿಗೆ ಅಂಕಣ ಲೇಖನಗಳನ್ನು ಬರೆಯುವದು ಅವರ ಮುಖ್ಯ ಹವ್ಯಾಸ. ಸಮಾಜಸೇವೆ, ಸಂಗೀತ ನೃತ್ಯ ಕಲೆಗೆ ಉತ್ತೇಜನ ನೀಡುವದು ಅವರ ಅಭಿರುಚಿ. ಪ್ರಸ್ತುತ ಕೃತಿ ಅರವತ್ತು ಮಹಿಳಾ ಸಾಧಕಿಯರ ಸಾಧನೆಯನ್ನು ಪರಿಚಯಿಸುವ ಒಂದು ವಿಶಿಷ್ಟ ಪ್ರಯತ್ನ, ಮೊದಲ ನೋಟದಲ್ಲೇ ಪುಸ್ತಕದ ಸುಂದರ ವಿನ್ಯಾಸ, ಮುದ್ರಣ ಲಕ್ಷ್ಯ ಸೆಳೆಯುತ್ತದೆ. ಇಲ್ಲಿ ಗುದಗನವರ ಕೇವಲ ಮಹಿಳೆಯರನ್ನಷ್ಟೇ ಆಯ್ಕೆ ಮಾಡಿಕೊಂಡು ಜಿಲ್ಲೆ-ರಾಜ್ಯ-ರಾಷ್ಟ್ರ-ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯಿಂದ ಗುರುತಿಸಲ್ಪಟ್ಟಿರುವ ಸಾಧಕಿಯರ ಬಗ್ಗೆ ಬರೆದಿದ್ದಾರೆ. ಇದೊಂದು ಪ್ರಶಂಸನೀಯವಾದ ಕೆಲಸ.

ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ, ತರಕಾರಿ ಮಾರಿ ಆಸ್ಪತ್ರೆ ಕಟ್ಟಿಸಿದ ಸುಭಾಷಿಣಿ ಮಿಸ್ತ್ರಿ, ಗುಡಿಸಿಲಿನಿಂದ ಐ.ಎ.ಎಸ್. ಅಧಿಕಾರಿ ಸ್ಥಾನಕ್ಕೆ ಹೋದ ಇಲ್ಮಾ ಅಪ್ರೋಜ್‌, ಅಂಧ ಮಕ್ಕಳ ಪೋಷಕಿ ತುಳಸಮ್ಮ, ಕೈಗಳಿಲ್ಲದೇ ಪೈಲಟ್‌ ಆದ ಜೆಸ್ಸಿಕಾ ಕಾಕ್ಸ್‌, ಏಡ್ಸ್‌ ಮಕ್ಕಳ ಮಾತೆ ತಬಸ್ಸುಮ್‌, ಪರಿಸರ ಕಾಳಜಿ ತುಳಸಿಗೌಡ, ಮಹಿಳಾ ವೇದೋಪಾಸಕಿ ಮಾಹೇಶ್ವರಿ, ಬೀಜಗಳ ಮಾತೆ ರಹೀಬಾಯಿ ಪೋಷರೆ ಇಂತಹ ಅದಮ್ಯ ಚೇತನಗಳು, ಬೆಳೆದುನಿಂತ ಸಾಹಸಮಯ ಬದುಕಿನ ಚಿತ್ರಣ ಇಲ್ಲಿದೆ. ವಿಕಲಾಂಗರು, ಮಂಗಳಮುಖಿಯರು, ಅನಕ್ಷರಸ್ಥ ಆದಿವಾಸಿ ಬುಡಕಟ್ಟು ಜನಾಂಗದವರು, ಪರಿಸರ ರಕ್ಷಕಿಯರು ಅವರವರ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಿಜಕ್ಕೂ ಎಲ್ಲರಿಗೆ ಮಾದರಿಯಾಗಿದೆ ಮತ್ತು ಸ್ಪೂರ್ತಿ ಒದಗಿಸುವಂತಹದಾಗಿದೆ. ಎಲ್ಲ ನಾಗರೀಕ ಅನುಕೂಲತೆಗಳೂ ಇದ್ದರೂ ಬದುಕಿನಲ್ಲಿ ಏನನ್ನೂ ಸಾಧಿಸಲಾಗದೇ ಕೈಚೆಲ್ಲಿ ಕುಳಿತ ನಿರಾಶಾವಾದಿಗಳಿಗೆ ಪ್ರೇರಣೆ ಒದಗಿಸಬಲ್ಲಂತಹ ಸಾಧಕಿಯರಿವರು. ಹಳ್ಳಿಗಾಡಿನಲ್ಲಿ ಜನಿಸಿ, ಕಡುಬಡತನದಲ್ಲಿ ಅಕ್ಷರ ಜ್ಞಾನ ಪಡೆಯಲಾಗದಿದ್ದರೂ ಜೀವನದಲ್ಲಿ ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲದಿಂದ ಅಸಾಧಾರಣ ಆತ್ಮಬಲವೊಂದನ್ನೇ ಆಧಾರವಾಗಿರಿಸಿಕೊಂಡು ಮೇಲೆದ್ದು ಬಂದು ರಾಷ್ಟ್ರೀಯ ಪದ್ಮ ಪ್ರಶಸ್ತಿಯಂತಹ ಗೌರವಗಳನ್ನೆಲ್ಲ ಪಡೆದವರ ಸಂಕ್ಷಿಪ್ತ ಪರಿಚಯವನ್ನು ನೀಡುವ ಮೂಲಕ ಪ್ರೊ. ಗುದಗನವರ ಸಮಾಜೋಪಯೋಗಿ ಕಾರ್ಯವನ್ನು ಮಾಡಿ ಅಭಿನಂದನಾರ್ಹರೆನಿಸಿದ್ದಾರೆ.

ಕೈಕಾಲುಗಳಿಲ್ಲದಿದ್ದರೂ ಅದರಿಂದ ಹತಾಶಾರಾಗದೆ ಪೈಲಟ್‌ ಹುದ್ದೆಗೇರಿದವರು, ಚಹಾ ಮಾರಿ, ಕೂಲಿನಾಲಿ ಮಾಡಿ ಐ. ಎ. ಎಸ್‌. ಅಧಿಕಾರಿಯಾದವರು. ದೃಷ್ಟಿಹೀನರಿಗೆ ತಾವೇ ಕಣ್ಣಾಗಿ ಅವರು ಬದುಕು ಕಟ್ಟಿಕೊಳ್ಳುವಂತೆ ಮಾಡಿದವರು, ಬಡತನದಿಂದ ಉಪ್ಪಿನಕಾಯಿ ಮಾರಾಟ ಮಾಡುತ್ತ ಐದು ಕಾರಖಾನೆಗಳ ಒಡತಿಯಾದವರು- ಇಂಥವರ ಬದುಕಿನ ಹೋರಾಟದ ಕತೆ ಓದಿದರೆ ಅಚ್ಚರಿಯಾಗವದರೊಡನೆ ಆತ್ಮ ವಿಶ್ವಾಸವೊಂದಿದ್ದರೆ ಏನೂ ಸಾಧಿಸಬಹುದೆಂಬುದನ್ನು ತಮ್ಮ ಬದುಕಿನಿಂದಲೇ ತೋರಿಸಿಕೊಟ್ಟ ಈ ಸಾಧಕಿಯರ ಬಗ್ಗೆ ಅಪಾರ ಮೆಚ್ಚುಗೆಯುಂಟಾಗುತ್ತದೆ. ಸಿಂಧೂತಾಯಿ ಸಪ್ಕಾಲರಂಥವರ ಜೀವನ ಕಥೆ ಓದುತ್ತಿದ್ದರೆ ಕಣ್ಣು ಮನಸ್ಸು ತೇವವಾಗುತ್ತದೆ. ಈ ಬಗೆಯ ಕೃತಿ ಹೊರತಂದ ಗುದಗನವರ ಅವರಲ್ಲಿ ಇರುವ ಸಾಮಾಜಿಕ ಕಾಳಜಿಯನ್ನು ನಾವು ಪ್ರಶಂಸಿಸಲೇಬೇಕಾಗುತ್ತದೆ. ಇದು ಶಾಲೆ ಕಾಲೇಜುಗಳಲ್ಲಿ ಪಠ್ಯಪುಸ್ತಕವಾಗಲೂ ಯೋಗ್ಯವಾದ ಕೃತಿಯೆನಿಸಿದೆ. ಮಕ್ಕಳು ಇಂತಹ ಸಾಧಕರ ಜೀವನವನ್ನು ಮಾದರಿಯಾಗಿರಿಸಿಕೊಂಡು ಅಸಾಧಾರಣ ಸಾಧನೆಯನ್ನು ಮಾಡಲು ಅವಕಾಶವಾಗುತ್ತದೆ. ಮತ್ತೊಮ್ಮೆ ಲೇಖಕರನ್ನು ಅಭಿನಂದಿಸುತ್ತ ಅವರಿಂದ ಇಂತಹ ಇನ್ನಷ್ಟು ಉಪಯುಕ್ತ ಕೃತಿರತ್ನಗಳು ಹೊರಬರಲಿ ಎಂದು ಆಶಿಸುತ್ತೇನೆ.

-ಎಲ್‌. ಎಸ್‌. ಶಾಸ್ತ್ರಿ, ಸಾಹಿತಿಗಳು, ಬೆಳಗಾವಿ

(ಜೂನ್‌ 6, 2021ರ ಲೋಕದರ್ಶನ ದಿನಪತ್ರಿಕೆಯಲ್ಲಿ ಪ್ರಕಟಿತ)

Related Books