ಅವರಿವರು

Author : ಬಸವರಾಜು ಮೇಗಲಕೇರಿ

Pages 244

₹ 200.00




Year of Publication: 2019
Published by: ರೂಪ ಪ್ರಕಾಶನ
Address: -2406, 2407/ಕೆ-1ನೇ ಕ್ರಾಸ್, ಹೊಸಬಂಡಿಕೇರಿ, ಕೆ.ಆರ್‍. ಮೊಹಲ್ಲಾ, ಮೈಸೂರು-570004
Phone: 9342274331

Synopsys

ಲೇಖಕ ಬಸವರಾಜು ಮೇಗಲಕೇರಿ ಅವರು ಬರೆದ ಕೃತಿ-ಅವರಿವರು. ಈ ಕೃತಿಯಲ್ಲಿ 45 ವ್ಯಕ್ತಿಗಳ ಪರಿಚಯಾತ್ಮಕ ಟಿಪ್ಪಣಿಗಳಿವೆ. ಸಿನಿಮಾ ನಟರಾದ ಎಂ.ಜಿ.ರಾಮಚಂದ್ರನ್, ಎನ್.ಟಿ.ರಾಮಾರಾವ್, ನರಸಿಂಹರಾಜು, ನಜೀರ್‌ಸಾಬ್‌, ಕರುಣಾನಿಧಿ, ವಾಟಾಳ್‌ ನಾಗರಾಜ್‌, ಹಳ್ಳಿಹಕ್ಕಿ ಅನಸೂಯಮ್ಮ, ಸೈಲೆಂಟ್‌ ಫೈಟರ್‌ ಅಂಬ್ರೋಸ್‌, ಸುದ್ದಿ ಸುದ್ದಿಯ ಪ್ರಕಾಶ್‌ ರೈ, ಚಿತ್ರ ನಿರ್ದೇಶಕ ಹೃಷಿಕೇಶ ಮುಖರ್ಜಿ, ಸೇರಿದಂತೆ ಇತರೆ ನಟ-ಕಲಾವಿದ-ರಾಜಕಾರಣಿಗಳು, ಜನಪ್ರತಿನಿಧಿಗಳು, ಸಾಮಾನ್ಯ- ಅಸಾಮಾನ್ಯರ ವ್ಯಕ್ತಿಚಿತ್ರಣಗಳನ್ನು ಈ ಕೃತಿ ಒಳಗೊಂಡಿದೆ. 

About the Author

ಬಸವರಾಜು ಮೇಗಲಕೇರಿ

ಬಸವರಾಜು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ (1964). ಚನ್ನರಾಯಪಟ್ಟಣದಲ್ಲಿಯೇ ಪದವಿ ವ್ಯಾಸಂಗ. 1985ರಲ್ಲಿ `ಲಂಕೇಶ್ ಪತ್ರಿಕೆ ಸೇರ್ಪಡೆ. 1990ರಿಂದ 2000 ವರೆಗೆ, ಪತ್ರಿಕೆಯಲ್ಲಿ ಪತ್ರಕರ್ತನಾಗಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಣೆ. `ಅಗ್ನಿ ವಾರಪತ್ರಿಕೆಯಲ್ಲಿ 2001ರಿಂದ 2007ರ ವರೆಗೆ 6 ವರ್ಷಗಳ ಕಾಲ ಸಹಸಂಪಾದಕನಾಗಿ; 2007ರ ಫೆಬ್ರವರಿಯಿಂದ ಸೆಪ್ಟೆಂಬರ್ವರೆಗೆ, 8 ತಿಂಗಳ ಕಾಲ ಸಂಪಾದಕನಾಗಿ ಕಾರ್ಯ ನಿರ್ವಹಣೆ. 2007 ರಿಂದ 2009ರ ವರೆಗೆ, ಎರಡು ವರ್ಷಗಳ ಕಾಲ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿ ಕಾರ್ಯ ನಿರ್ವಹಣೆ. ಕನ್ನಡದ ಸಾಂಸ್ಕೃತಿಕ ವೆಬ್ ತಾಣ ಕೆಂಡಸಂಪಿಗೆ ಡಾಟ್ ಕಾಂ-ನಲ್ಲಿ 2009ರಿಂದ 2012ರ ...

READ MORE

Reviews

ವ್ಯಕ್ತಿತ್ವಗಳನ್ನು ನಿಕಷಕ್ಕೆ ಒಡ್ಡುವ ಚಿತ್ರಗಳು

“ಲಂಕೇಶ್ ಪತ್ರಿಕೆ'ಯಿಂದ ಆರಂಭಿಸಿ, ನಂತರ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಬಸವರಾಜು ಷಷಣ ಮೇಗಲಕೇರಿ ೨೦೧೪ರಿಂದ 'ವಾರ್ತಾಭಾರತಿ” ದೈನಿಕದಲ್ಲಿ ಬೆಂಗಳೂರು ಸ್ಥಾನಿಕ ಸಂಪಾದಕರಾಗಿದ್ದು, ಅವರು ವಿವಿಧ ಪತ್ರಿಕೆ, ವೆಬ್ ತಾಣಗಳಿಗೆ ಬರೆದಿರುವ ವ್ಯಕ್ತಿ ಚಿತ್ರಗಳ ಸಂಕಲನ ಇದಾಗಿದೆ. ಇಲ್ಲಿರುವ ಬಹುತೇಕ ಬರಹಗಳು “ವಾರ್ತಾಭಾರತಿ'ಗೆ ಬರೆದೆ ಅಂಕಣ ಬರಹಗಳಾಗಿವೆ. ರಾಜಕಾರಣಿ, ಕಲಾವಿದರು, ಚಿತ್ರ ನಟರು, ಕ್ರಿಕೆಟಿಗರು, ಹೋರಾಟಗಾರರಲ್ಲದೆ ಜನ ಸಾಮಾನ್ಯರ ಬಗ್ಗೆಯೂ ಇಲ್ಲಿ ಲೇಖನಗಳಿವೆ.

ಸಾಮಾನ್ಯವಾಗಿ ಪತ್ರಿಕಾ ಅಂಕಣಗಳ ಬರಹಕ್ಕೆ ಹಲವು ಮಿತಿಗಳಿರುತ್ತವೆ. ಇಂತಿಷ್ಟೆ ಪದಗಳಲ್ಲಿ ಹೇಳಬೇಕಾದದ್ದನ್ನೆಲ್ಲಾ ಅಭಿವ್ಯಕ್ತಿಸಬೇಕಾದ ಸವಾಲು ಇರುತ್ತದೆ. ಇದರಿಂದಾಗಿ ವ್ಯಕ್ತಿ ಚಿತ್ರಣ ಕಟ್ಟಿಕೊಡುವ ಸಂದರ್ಭದಲ್ಲಿ ಕೆಲಬಾರು ಯಾರ ಬಗ್ಗೆ ಬರೆಯಲಾಗಿರುತ್ತದೆಯೋ ಅವರಿಗೆ ಸಂಪೂರ್ಣ ನ್ಯಾಯ ದಕ್ಕದೆ ಹೋಗಿರುವುದು ಉಂಟು. ಆದರೆ ಬಸವರಾಜು ಅವರು ತಮ್ಮ ಕೃತಿಯ ಬಹುತೇಕ ಬರಹಗಳಲ್ಲಿ ಈ ಮಿತಿಯ ಚೌಕಟ್ಟಿನಲ್ಲಿಯೇ ಸಮಗ್ರವಾಗಿ ವ್ಯಕ್ತಿಯ ಆ ಚಿತ್ರಣ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ಸಂಕಲನದಲ್ಲಿ ೪೫ ವ್ಯಕ್ತಿಗಳ ಸಚಿತ್ರ ಚಿತ್ರಣವಿದೆ. ರಾಜಕಾರಣಿಗಳಾದ ವಾಟಾಳ್ ನಾಗರಾಜ್, ಜಿಗ್ನೆಶ್ ಮೆವಾನಿ, ಅಮಿತ್ ಷಾ, ಅಶೋಕ್ ಖೇಣಿ, ಎಂ.ವಿ.ರಾಜಶೇಖರನ್, ನಜೀರ್ ಸಾಬ್, ರಮೇಶ್ ಕುಮಾರ್, ಚಿತ್ರ ನಟರಾದ ಉಪೇಂದ್ರ, ರಜನೀಕಾಂತ್, ಪ್ರಕಾಶ್ ರೈ, ಸಂಜಯ್ ದತ್, ಜಯಮಾಲ, ಅನುಪಮಬೇರ್, ಬರ್ಮಾದ ಹೋರಾಟಗಾರ್ತಿ ಸೂಕಿ, ರೈತ ಸಂಘದ ಅನುಸೂಯಮ್ಮ, ದೇಸಿ ಚಿಂತಕ ಪ್ರಸನ್ನ, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಹಲವರ ವ್ಯಕ್ತಿ ಚಿತ್ರಣ ದಾಖಲಾಗಿವೆ.

ಓರ್ವ ವ್ಯಕ್ತಿಯ ಚಿತ್ರಣ ಕಟ್ಟಿಕೊಡುವುದು ಎಂದರೆ ಅದು ಕೇವಲ ವ್ಯಕ್ತಿಯ ಕುರಿತ ಚಿತ್ರ ಮಾತ್ರ ಆಗಿರುವುದಿಲ್ಲ, ಬದಲಾಗಿ ಆಯಾ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಗಳ, ವಿದ್ಯಮಾನಗಳ ಚಿತ್ರಣ ಕೂಡ ಅದು ಆಗಿರುತ್ತದೆ. ವ್ಯಕ್ತಿಯ ಕುರಿತು ಹೇಳುತ್ತಲೆ ಆಯಾ ಕಾಲದ ವಿದ್ಯಮಾನಗಳಿಗೆ ಬರಹ ಸ್ಪಂದಿಸಿದಾಗ ಅದರ ಮೌಲ್ಯ ವರ್ಧಿಸುತ್ತದೆ. ಜೊತೆಗೆ ಬರಹ ತನ್ನ ಸಕಾಲಿಕತೆಯನ್ನು ಉಳಿಸಿಕೊಳ್ಳುತ್ತದೆ. ಇಂತಹ ಗುಣ ಇರುವ ಬರಹಕ್ಕೆ ಅಪ್ಪಟ ಉದಾಹರಣೆ ಎಂದರೆ ಸೂಕಿ ಕುರಿತು ಇರುವ ಲೇಖನ, ಬಸವರಾಜು ಅವರು ಸೂಕಿಯ ಹೋರಾಟಗಳನ್ನು ವಿವರಿಸುತ್ತಲೆ ಆಕೆಯ ಸಂಕಟಗಳನ್ನು ವಿಶ್ಲೇಷಿಸುತ್ತ ಒಟ್ಟಾರೆಯಾಗಿ ಮಯನ್ಮಾರ್‌ನ ರಾಜಕೀಯ ಚರಿತ್ರೆಯನ್ನೆ ನಿರೂಪಿಸುತ್ತ ಅದನ್ನು ಜಗತ್ತಿನ ರಾಜಕಾರಣದ ಜೊತೆಗೆ ? ಅನುಸಂಧಾನ ಮಾಡುವುದು ಆ ಬರಹದ ವಿಶೇಷತೆಯಾಗಿದೆ.

ಲೇಖಕರು ತಮ್ಮ ಬರಹಕ್ಕೆ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿಗಳು ಯಾರು ಎಂಬುದನ್ನು ಗಮನಿಸಿದರೆ ಅವರ ಬರವಣಿಗೆಯ 'ಮನೋಧರ್ಮ' ಸ್ಪಷ್ಟಗೊಳ್ಳುತ್ತದೆ. ಬಹುತೇಕ ಬರಹಗಳಲ್ಲಿ ವ್ಯಕ್ತಿಯ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ಬೆಳೆದು ಬಂದ ಬಗೆಗಳನ್ನು ವಿವರಿಸುತ್ತಲೆ ಅವರ ಸಾಧನೆಗಳ ಜೊತೆಗೆ ವೈಫಲ್ಯ, ದೌರ್ಬಲ್ಯಗಳನ್ನು ಕೂಡ ವಿಶ್ಲೇಷಿಸಲಾಗಿದೆ. ಹೀಗಾಗಿ ವ್ಯಕ್ತಿ ಚಿತ್ರಣ ಎನ್ನುವುದು ವ್ಯಕ್ತಿತ್ವವನ್ನು ನಿಷ್ಟುರ “ನಿಕಷಕ್ಕೆ ಒಳಪಡಿಸುವ ಛಾತಿಯನ್ನು ಲೇಖಕರು ತೋರಿದ್ದಾರೆ.

ಕೆಲವು ಬರಹಗಳಲ್ಲಿ ಬಸವರಾಜು ಕಟ್ಟಿಕೊಟ್ಟಿರುವ ವಿವರಗಳು ಬೆರಗು ಹುಟ್ಟಿಸುವಂತಿದೆ. ಉದಾಹರಣೆಗೆ ಕಲಾವಿದ, ನಿರ್ದೇಶಕ ಟಿ.ಎಸ್.ರಂಗಾ ಅವರ ಕುರಿತ ಬರಹದಲ್ಲಿ ಪ್ರಪಂಚದ ಪ್ರಸಿದ್ಧ ಸಿನೆಮಾ ನಿರ್ದೇಶಕರ ಬಗ್ಗೆ ರಂಗಾ ಅವರು ನೀಡುತ್ತಿದ್ದ ವಿವರಣೆಯನ್ನು ದಾಖಲಿಸಿರುವ ಪರಿ ಅನನ್ಯವಾಗಿದೆ. ಹಾಗೇ, ಪ್ರಸಿದ್ದರಲ್ಲದವರ ಕುರಿತು ಬಸವರಾಜು ದಾಖಲಿಸಿರುವ ವ್ಯಕ್ತಿ ಚಿತ್ರಣ ಕುತೂಹಲಕಾರಿಯಾಗಿದ್ದು ಆಪ್ತವೆನಿಸುತ್ತದೆ. ಬೈಕ್‌ನ ಟಯರ್‌ಗೆ ಪಂಕ್ಚರ್ ಹಾಕುವ ರಾಮಣ್ಣ ಹೇಳಿದ 'ಬಿಸಿಲು, ಮಳೆಗೆ ಮೈಕೊಟ್ಟು ನೋಡಬೇಕು. ಅವುಗಳ ಜೊತೆಗೆ ಬದುಕಬೇಕು' ಎಂಬ ಮಾತನ್ನು ಯು.ಆರ್.ಅನಂತಮೂರ್ತಿ ಅವರ ಬರಹದ ಜೊತೆ ಹೋಲಿಸಿ ನೋಡಲು ಲೇಖಕರಿಗೆ ಸಾಧ್ಯವಾಗಿರುವುದು ವಿಸ್ಮಯವೆನಿಸುತ್ತದೆ.

ಸರಳವಾದ ಭಾಷೆಯಲ್ಲಿ ಬರವಣಿಗೆ ಇರುವುದರಿಂದ ಒಂದೇ ಗುಕ್ಕಿನಲ್ಲಿ ಕೃತಿಯನ್ನು ಓದಬಹುದು. ಅಷ್ಟರಮಟ್ಟಿಗೆ ಓದಿಸಿಕೊಂಡು ಹೋಗುವ ಗುಣ ಕೃತಿಗೆ ಇದೆ. ಸ್ವತಃ ಪತ್ರಕರ್ತರಾಗಿದ್ದರೂ ಮಾಧ್ಯಮದ ನಿಲುವುಗಳ ಬಗ್ಗೆ ಬಸವರಾಜು ತಮ್ಮ ಬರಹಗಳಲ್ಲಿ ಕಟುವಾದ ವಿಮರ್ಶೆ ಮಾಡಿದ್ದಾರೆ. ಕ್ರಿಕೆಟಿಗ ರವಿಶಾಸ್ತ್ರಿ ಕುರಿತ ಬರಹದಲ್ಲಿ ೧೯೮೩ರ ವಿಶ್ವಕಪ್‌ನಲ್ಲಿ ಗಮನ ಸೆಳೆಯುವಂತಹ ಆಟವಾಡಿ ಕಾರನ್ನು ಬಹುಮಾನವಾಗಿ ಗಳಿಸಿದ್ದರು ಎಂಬ ಉಲ್ಲೇಖವಿದೆ. ವಾಸ್ತವದಲ್ಲಿ ರವಿಶಾಸ್ತ್ರಿಗೆ ಆ ಸಾಧನೆ ಮಾಡಿದ್ದು ಆನಂತರದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕ್ರಿಕೆಟಗರನ್ನು ಕುರಿತ ಲೇಖನದಲ್ಲಿ ಇಂತಹ ತಪ್ಪುಗಳು ನುಸುಳದಂತೆ ಎಚ್ಚರ ವಹಿಸಬೇಕಿತ್ತು.

ರಾಜಕಾರಣ, ಪತ್ರಿಕೋದ್ಯಮ, ಕಲೆ, ಕ್ರೀಡೆಯಲ್ಲಿ ಆಸಕ್ತಿ ಇರುವವರ ಸಂಗ್ರಹದಲ್ಲಿ ಇರಬೇಕಾದ ಕೃತಿ ಇದಾಗಿದೆ. ವ್ಯಕ್ತಿ ಚಿತ್ರ ದಾಖಲಿಸುವಾಗ ಅಗತ್ಯಕ್ಕಿಂತ ಹೆಚ್ಚಾಗಿಯೆ ನುಸುಳುವ 'ನಾನು' ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಬದಿಗಿಟ್ಟಿರುವುದು ಲೇಖಕರ ಸಂವೇದನಾಶೀಲತೆ, ಸೂಕ್ಷ್ಮತೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.

-ಎಂ.ರಾಘವೇಂದ್ರ

ಕೃಪೆ: ಹೊಸ ಮನುಷ್ಯ ಸೆಪ್ಟೆಂಬರ್‌ 2020

Related Books