ಭಕ್ತರ ಪ್ರಾಣ ಮುಖ್ಯಪ್ರಾಣ

Author : ಪ್ರಕಾಶ್ ಕೆ. ನಾಡಿಗ್

Pages 260

₹ 150.00




Year of Publication: 2020
Published by: ಆಭಯ್ ರಾಘವಿ ಪ್ರಕಾಶನ
Address: # 103, 5ನೇ ಅಡ್ಡರಸ್ತೆ, ಸ್ನೇಹಕ್ಲಿನಿಕ್ ಹಿಂಭಾಗ, ಬೋವಿಪಾಳ್ಯ ಬಡಾವಣೆ ಹತ್ತಿರ ಬಾಲಾಜಿ ನಗರ, ಊರುಕೆರೆ, ತುಮಕೂರು-572106
Phone: 9845529789

Synopsys

ಲೇಖಕ ಪ್ರಕಾಶ ಕೆ. ನಾಡಿಗ್ ಅವರ ಕೃತಿ-ಭಕ್ತರ ಪ್ರಾಣ ಮುಖ್ಯ ಪ್ರಾಣ. ಆದರ್ಶ ಚಾರಿತ್ರ್ಯ ಜಿತೇಂದ್ರಿಯತ್ವ, ಶಾಸ್ತ್ರಪಟುತ್ವ, ವಾಕ್ ಪಟುತ್ವ,ಸದಾಚಾರ, ಸಂಪನ್ನತೆ,ಇವುಗಳ ಸಾಕಾರ ಮೂರ್ತಿ ಹನುಮಂತ ದೇವರು.ಚೈತನ್ಯದ ಚಿಲುಮೆ, ಆದಿಯ ಭಯಂಕರ, ಉತ್ತಮ ರಾಯಭಾರಿ, ವಿವೇಕದ ಗಣಿ, ಶರೀರಬಲ, ಬುದ್ದಿಬಲ, ಆಧ್ಯಾತ್ಮಬಲಗಳ ತ್ರಿವೇಣಿ ಸಂಗಮ, ತ್ರಿಕಾಲ ವಂದ್ಯನಾದ, ಸಹಸ್ರಾರು ಹಳ್ಳಿ, ಊರುಕೇರಿಗಳಲ್ಲಿ ನೆಲೆಸಿರುವ ಅಂಜನಾತನಯನಾದ ಹನುಮನ ಉಗಮ, ವಿಕಾಸ, ಜನ್ಮವ್ರುತ್ತಾಂತ, ವಿಶೇಷ ಹನುಮ ಕ್ಷೇತ್ರಗಳ ಮಹತ್ವ ಹಾಗೂ ಅಲ್ಲಿನ ವಿಶೇಷತೆ,ರಾಮಾಯಣ, ಮಹಾಭಾರತದಲ್ಲಿ ಹನುಮನ ಚಿತ್ರಣ, ಹರಿದಾಸರು, ಜಾನಪದರು ಹೇಗೆಲ್ಲ ಹನುಮನನ್ನು ಕೊಂಡಾಡಿದ್ದಾರೆ. ಹನುಮನಿಗೆ ಮಾಡುವ ಕೆಲವು ವಿಶೇಷ ಪೂಜೆಗಳ ವಿವರ, ದೇಶಾದ್ಯಂತ ಇರುವ ಹಲವು ವಿಶೇಷ ಭಂಗಿಯಲ್ಲಿರುವ ಹನುಮ ಮೂರ್ತಿಗಳ ದರ್ಶನದಿಂದ ಈ ಕೃತಿಯ ಹೆಚ್ಚುಗಾರಿಕೆ. 

 

About the Author

ಪ್ರಕಾಶ್ ಕೆ. ನಾಡಿಗ್
(23 September 1972)

ಲೇಖಕ ಪ್ರಕಾಶ್ ಕೆ. ನಾಡಿಗ್‌  ಅವರು ಮೂಲತಃ ಶಿವಮೊಗ್ಗದವರು. ತಂದೆ ಕೇಶವ ಮೂರ್ತಿ ನಾಡಿಗ್, ತಾಯಿ ಶಾಂತಾ ನಾಡಿಗ್. ಶಿವಮೊಗ್ಗದ ದೇಶಿಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೂ ಶಿಕ್ಷಣ ಪೂರೈಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ  ಸೂಕ್ಷ್ಮಾಣುಜೀವ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.  ತುಮಕೂರಿನ  ಔಷಧ  ತಯಾರಿಕಾ ಕಂಪನಿಯಲ್ಲಿ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರವೃತ್ತಿಯಲ್ಲಿ ಲೇಖಕರು, ಅಂಕಣಕಾರರು ಆಗಿದ್ದಾರೆ.  ಗುಬ್ಬಚ್ಚಿ ಸಂತತಿಯನ್ನು ಉಳಿಸಿ ಬೆಳೆಸಲು " ಗುಬ್ಬಚ್ಚಿ ಸಂಘ" ಸ್ಥಾಪಿಸಿ, ಮಕ್ಕಳಲ್ಲಿ ಪರಿಸರ ಹಾಗೂ ಪಕ್ಷಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಮಕ್ಕಳನ್ನು ಸೇರಿಸಿಕೊಂಡು ತುಮಕೂರಿನಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಕೃತಿಗಳು: ಗಣೇಶನ ಬೆಂಗ್ಳೂರ್ ಯಾತ್ರೆ, ಪುಟಾಣಿಗಳಿಗಾಗಿ ...

READ MORE

Reviews

“ಭಕ್ತರ ಪ್ರಾಣ ಮುಖ್ಯಪ್ರಾಣ”

ನನಗೆ ಸುಮಾರು 10 ವರ್ಷ ವಯಸ್ಸು ಅನ್ನಿಸುತ್ತದೆ, ಬೇಸಿಗೆ ರಜೆಯಲ್ಲಿ ನನ್ನ ತಂದೆ ತಾಯಿ ನನ್ನನ್ನು ಮತ್ತು ನನ್ನ ತಂಗಿಯನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದರು, ಹೋಗುವ ದಾರಿಯಲ್ಲಿ ಹನುಮ ದೇವಾಲಯಕ್ಕೆ ಭೇಟಿ ಕೊಟ್ಟು ಹೋಗಿದ್ದೆವು. ಆಗ ನನ್ನ ತಂದೆ ಈ ದೇವಾಲಯಕ್ಕೆ ಭೇಟಿ ಕೊಟ್ಟು ಹೋದರೆ ನಮ್ಮ ಪ್ರಯಾಣ ಸುರಕ್ಷಿತವಾಗಿರುತ್ತದೆ ಅಂದಿದ್ದರು. ಆಗ ಹನುಮ ನನ್ನ ಮನದಲ್ಲಿ ಅಭಯಹಸ್ತದ ಶಾಶ್ವತ ಮುದ್ರೆಯೊಂದನ್ನು ಒತ್ತಿದ್ದ. ಅಂದಿನಿಂದ ಇಂದಿನವರೆಗೂ ಹನುಮನ ತರ ತರಹ ಕಥೆಗಳನ್ನು ಕೇಳಿ ಬೆಳೆದ ನನ್ನಂತ ಅಸಂಖ್ಯಾ ಭಕ್ತರಿಗೆ ಈ ಪುಸ್ತಕ ಒಂದು ಚಂದ ಕೊಡುಗೆ.

ಅಂದಿಗೂ, ಇಂದಿಗೂ, ಮುಂದೆಂದಿಗೂ ಭಕ್ತರ ಮನದಲ್ಲಿ ಅಚ್ಚಳಿಯದೇ ಉಳಿಯುವ ಹೆಸರೆಂದರೆ ಭಕ್ತಾಗ್ರೇಸರ ಹನುಮಂತನದು. ವಿಶ್ವ ಕಂಡ ಹೋಲಿಕೆಯಲ್ಲದ ಮಹಾಪುರಷನೀತ. ಯುಗ ಯುಗಗಳಿಂದ ಆರಾಧ್ಯದೈವವಾಗಿರುವ ಇವನ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ.  ಇಂಥಹ ಹನುಮಂತನ ಬಗ್ಗೆ ಅನೇಕ ವಿಷಯಗಳನ್ನು ಕಲೆಹಾಕಿ “ಭಕ್ತರ ಪ್ರಾಣ ಮುಖ್ಯಪ್ರಾಣ” ಎಂಬ ಉತ್ತಮ ಕೃತಿಯನ್ನು ಅಧ್ಯಾತ್ಮ ಚಿಂತಕರು ಬರಹಗಾರರಾದ ಡಾ ಪ್ರಕಾಶ್ ಕೆ ನಾಡಿಗ್ ಅವರು ಓದುಗರಿಗೆ ನೀಡಿದ್ದಾರೆ. ಭಕ್ತರಿಗೆ ಗೊತ್ತಿಲ್ಲದ ಅನೇಕ ವಿಷಯಗಳನ್ನು ಈ ಕೃತಿಯಲ್ಲಿ ನೀಡಿರುವ ನಾಡಿಗ್‍ರವರು ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ರಾಮಾಯಣ ಮಹಾಕಾವ್ಯದ ಮಹಾಪಾತ್ರಗಳಲ್ಲಿ ಬಹು ಮುಖ್ಯ ಪಾತ್ರಗಳು ರಾಮ, ಸೀತೆ, ಲಕ್ಷ್ಮಣ, ರಾವಣ. ಇವರೆಲ್ಲರೂ ದೇವಾ ಅಥವಾ ರಾಕ್ಷಸ ಗುಣ ಹೊಂದಿದವರು, ಇವೆರಲ್ಲರನ್ನು ಅರ್ಥ ಮಾಡಿಕೊಳ್ಳಲು ಒಂದು ವಯಸ್ಸಿನ ಮಿತಿ ಇದೆ. ಆದರೆ ವಯಸ್ಸಿಗೂ ಮೀರಿ ಚಿಕ್ಕ ಮಕ್ಕಳಿಂದ ಹಿಡಿದು ತುಂಟ ಯುವಕರು ಸೇರಿ ವಯಸ್ಕರರವರೆಗೂ ಹತ್ತಿರವಾಗುವ ಏಕೈಕ ಮಹಾಪಾತ್ರ ಹನುಮ. ಹನುಮಂತನ ಪ್ರವೇಶದ ನಂತರ ರಾಮಾಯಣ ವೀರರಸ, ಭಕ್ತಿರಸ, ಹಾಸ್ಯರಸ ಮತ್ತು ಅದ್ಬುತರಸಗಳಿಂದ ಮನಸೂರೆಗೊಳ್ಳುತ್ತದೆ. ನಂತರ ನಡೆದ ಯುದ್ಧದಲ್ಲಿ ಹನುಮನ ಶೌರ್ಯ ಮತ್ತು ವೀರತನ ರಾಮನಿಗೆ ಗೆಲುವು ಪಡೆದುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹೀಗೆ ಹನುಮನ ಬಗ್ಗೆ ಹೇಳಬೇಕಂದರೆ ಸಂಪೂರ್ಣ ರಾಮಾಯಣವನ್ನು ಬರೆಯಬೇಕಾಗುತ್ತದೆ

ಇಲ್ಲಿ ಲೇಖಕರು ಗೊತ್ತಿರುವ ವಿಷಯಗಳನ್ನು ತಿರುಚಿ  ಹೇಳದೆ ಹನುಮ ಹೇಗೆ ನಮ್ಮ ಸಂಸ್ಕೃತಿಯಲ್ಲಿ, ಜನಪದ ಲೋಕದಲ್ಲಿ, ಹರಿದಾಸರ ಕೀರ್ತನೆಗಳಲ್ಲಿ ಬೆರೆತಿದ್ದಾನೆ ಎಂಬುದನ್ನು ತಿಳಿಸಿದ್ದಾರೆ. ಹಾಗಂತ ಇದೊಂದು ಕಠಿಣ ಕಗ್ಗವಲ್ಲ. ಒಬ್ಬ ಸಾಮಾನ್ಯ ಮನುಜ ಹನುಮನ ಬಗ್ಗೆ ತಿಳಿಯುವ ಆಸಕ್ತಿ ಇದ್ದವನೂ ಲೀಲಾಜಾಲವಾಗಿ ಓದಬಹುದಾದ ಸುಂದರ ಪುಸ್ತಕ.

ಹನುಮ ಭಕ್ತರಿಗೆ ಅತ್ಯಂತ ಉಪಯುಕ್ತವಾದ ಈ ಪುಸ್ತಕದಲ್ಲಿ ಹನುಮ ಕನ್ನಡದ ಕುವರ ಎಂದು ವಿವರಿಸಿರುವ ಲೇಖಕರು, ನಾಡಿನಾದ್ಯಂತ ಸುತ್ತಿದ್ದಾರೆ, ಹನುಮನ ಗುಡಿಗಳ ಹಿರಿಮೆ ಗರಿಮೆಗಳನ್ನು ಧಾಖಲಿಸಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಹನುಮನ ಜನನವಾಗಿದೆ ಎಂಬುದಕ್ಕೆ ಪುರಾಣಗಳಲ್ಲಿರುವ ಹಲವಾರು ಶ್ಲೋಕಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಹನುಮಂತನ ಬಗ್ಗೆ ಬಹುಜನರಿಗೆ ತಿಳಿಯದ ಕೆಲವು ವಿಷಯಗಳನ್ನು ಈ ಕೃತಿಯಲ್ಲಿ ಲೇಖಕರು ತಿಳಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ಹನುಮಂತನಿಗಿರುವ ಇತರ ಹೆಸರುಗಳು, ಹನುಮಂತನ ವಾಹನ, ಈತನಿಗೆ ಮಾಡುವ ವಿಶೇಷ ಹರಕೆಗಳು ಮುಂತಾದವು.

ರಾಮನ ದೇವಾಲಯಗಳು ಇಲ್ಲದ ಊರಿವೆ ಅದರೆ ಹನುಮನ ದೇವಾಲಯಗಳು ಇಲ್ಲದ ಊರಿಲ್ಲ ಎಂಬ ಮಾತಿನಂತೆ, ನಮ್ಮಲ್ಲೇ ಇರುವ ವಿಶೇಷ ಹನುಮ ದೇವಾಲಯಗಳ ಇತಿಹಾಸ, ಅದರ ಮಹಿಮೆ, ಆ ದೇವಾಲಯಗಳ ಹಿಂದೆ ಇರುವ ಸುಂದರ ಕಥೆಗಳು ಮತ್ತು ಜನರ ನಂಬಿಕೆಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯರ ರಾಜಗುರುಗಳಾಗಿದ್ದ ವ್ಯಾಸರಾಜರು ತಮ್ಮ ಅವಧಿಯಲ್ಲಿ 732 ಹನುಮ ದೇವಾಲಯಗಳನ್ನು ಪ್ರತಿಷ್ಠಾಪಿಸುತ್ತಾರೆ.. ಅವೆಲ್ಲ ದೇವಾಲಯಗಳ ಬಗ್ಗೆ ಆಳ ಅಧ್ಯಯನ ಮಾಡಿ ಅದರ ಸಾರವೂ ಸಹ ಈ ಪುಸ್ತಕದಲ್ಲಿ ಅಕ್ಷರ ರೂಪ ಕಂಡಿದೆ. ಆ ದೇವಾಲಯದ ಸ್ಥಾಪನೆ, ಹಿನ್ನಲೆ, ಕಾಲ, ಸ್ಥಳ ಮಹಿಮೆ ಮುಂತಾದ ವಿವರಗಳನ್ನು ನೀಡಿರುವುದು ಹನುಮ ಭಕ್ತರಿಗೆ ಉಪಯುಕ್ತವೆನಿಸುತ್ತದೆ. ಇನ್ನು ಈ ಪ್ರತಿದೇವಸ್ಥಾನಗಳ ಪರಿಚಯ ಲೇಖನಗಳಿಗೆ ಇಟ್ಟಿರುವ ತಲೆಬರಹಗಳು ಓದುಗರನ್ನು ಆಕರ್ಷಿಸುತ್ತದೆ. ಇನ್ನೂ ಅರ್ಜುನನ ಮೊಮ್ಮಗ ಜನಮೇಜಯನಿಗೆ ಇದ್ದ ನಾಗ ದೋಷವನ್ನು ಪರಿಹರಿಸಿಕೊಳ್ಳಲು ಕರ್ನಾಟಕವೂ ಸೇರಿ ಇತರೆ ರಾಜ್ಯಗಳಲ್ಲಿ ಪ್ರತಿಷ್ಠಾಪಿಸಿದ ಹನುಮ ದೇವಾಲಯಗಳ ಬಗ್ಗೆಯೂ ಈ ಪುಸ್ತಕ ಬೆಳಕು ಚೆಲ್ಲುತ್ತದೆ.

ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳಲ್ಲಿನ ಹನುಮಂತನ ಭೂಮಿಕೆಯ  ಬಗ್ಗೆ ಸರಳವಾಗಿ ವಿವರಿಸಿದ್ದಾರೆ, ಹರಿದಾಸರು ಹೇಗೆಲ್ಲಾ ಹನುಮಂತನನ್ನು ತಮ್ಮ ಕೀರ್ತನಗಳಲ್ಲಿ ಕೊಂಡಾಡಿದ್ದಾರೆ ಎಂಬುದನ್ನು ಚೆನ್ನಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೇ ನಮ್ಮ ಜನಪದರು ಹನುಮನನ್ನು ಕಂಡ ಬಗೆಯನ್ನು " ಜಾನಪದ ಸಾಹಿತ್ಯದಲ್ಲಿ ಹನುಮ" ಎಂಬ ಭಾಗದಲ್ಲಿ ವಿವರಿಸಿರುವುದು ಮೆಚ್ಚುವಂತಿದೆ. ಪುಸ್ತಕದ ಕೊನೆಯಲ್ಲಿ ಲೇಖಕರು ದೇಶಾದ್ಯಂತ ಇರುವ ವಿಶೇಷವಾದ ಭಂಗಿಯಲ್ಲಿರುವ ಅಪರೂಪದ ಹನುಮ ಮೂರ್ತಿಗಳ ದರ್ಶನವನ್ನು ಓದುಗರಿಗೆ ಮಾಡಿಸಿದ್ದಾರಲ್ಲದೇ ಪುಸ್ತಕದ ಕೊನೆಯಲ್ಲಿ ಹನುಮ ಭಕ್ತರಿಗೆ ಉಪಯೋಗವಾಗಲಿ ಎಂದು ದೇಶಾದ್ಯಂತ ಸಿಕ್ಕಿರುವ 229 ಶ್ರೀವ್ಯಾಸರಾಜರು ಪ್ರತಿಷ್ಠಾಪಿಸಿರುವ  ಹನುಮ ದೇಗುಲಗಳ ಪಟ್ಟಿ ನೀಡಿದ್ದಾರೆ.

ಒಟ್ಟಿನಲ್ಲಿ ಈ ಪುಸ್ತಕ ಹನುಮನ ಬಗ್ಗೆ ಸಿಗಬುಹುದಾದ ಅಪೂರ್ವ ವಿಶ್ವಕೋಶ. ಲೇಖಕರು ಮೂಲ ರಾಮಾಯಣವನ್ನು ಸೇರಿ ಹಲವು ಪ್ರಕಾರದ ರಾಮಾಯಣಗಳನ್ನು ಅಭ್ಯಸಿಸಿ ಹನುಮನ ಜೀವನಕ್ಕೆ ಸಂಬಂಧ ಪಟ್ಟ ಹಲವು ಪುಟ್ಟ ಪುಟ್ಟ ಲೇಖನಗಳನ್ನು ಓದುವುದು ರೋಮಾಂಚನ ಅನುಭವ ನೀಡುತ್ತದೆ ಉದಾಹರಣೆಗೆ ಹನುಮನ ಹುಟ್ಟು, ಹನುಮನ ಶಾಪ, ಹನುಮನ ಮದುವೆ, ಹನುಮನ ಪಾಂಡಿತ್ಯ, ಹನುಮನ ಸಂಗೀತ ಜ್ಞಾನ ಮತ್ತು ಮುಂತಾದವು.

ದೇವದತ್ತ ಪಟ್ನಾಯಕ್ ರವರು ಪೌರಾಣಿಕ ಕಥೆಗಳನ್ನು ಆಧಾರಸಿ ಇಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.. ಅವನ್ನು ಓದಿದ ನನಗೆ ಇಂತಹ ಪ್ರಯತ್ನ ಕನ್ನಡದಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು.. ಇದು ಕನ್ನಡದ  ಆ ರೀತಿಯ ಪುಸ್ತಕ ಸರಣಿಗೆ ಅಡಿಗಲ್ಲು. ನಮ್ಮ ಸ್ನೇಹಿತ ಮತ್ತು ಹಿತೈಷಿ ವರ್ಗಕ್ಕೆ ಕೊಡಬಹುದಾದ ಒಂದು ಸುಂದರ ಕೊಡುಗೆ ಈ ಪುಸ್ತಕ.

-ನಯಾಜ್ ರಿಯಾಜುಲ್ಲಾ, 

ಬೋಧಿವೃಕ್ಷ, ವಿಜಯಕರ್ನಾಟಕ (27 ಮಾರ್ಚ್ 2021)

Related Books