ಗೋವಿಂದ ಗೀತೆ

Author : ಸಿ.ಎಂ.ಗೋವಿಂದರೆಡ್ಡಿ

Pages 220

₹ 230.00




Year of Publication: 2020
Published by: ಮಹಿಮಾ ಪ್ರಕಾಶನ ಮೈಸೂರು
Address: MAHIMA PRAKASHANA, No.1393/2, C.H-31, 6th Cross, Krishnamurthypuram, Mysuru-570004,
Phone: 9448759815

Synopsys

ಪದಕೋಶ ಮತ್ತು ಪದಮೈತ್ರಿ - ಇವೆರಡೂ ಬೇರೆ ಬೇರೆ! ಪದಕೋಶವನ್ನು ಸಂಗ್ರಹ ಮಾಡುವವರು ಪಂಡಿತರು! ಪದಮೈತ್ರಿ ಸೃಷ್ಟಿ ಮಾಡುವವರು ಕವಿಗಳು! ಪಾಂಡಿತ್ಯ ಸಂಗ್ರಹ ಮತ್ತು ಪ್ರತಿಭಾ ಸೃಷ್ಟಿ ಎಂದೂ ಒಂದಲ್ಲ! ಕಾವ್ಯ ಜಗತ್ತು ಪದಮೈತ್ರಿಯ ಮೂಲಕವೇ ಜೀವಿಸುವುದು. ನಟಿ, ಲತೆ, ಕಟಿ, ಪವನ, ಜಟಿ, ಫಣಿ, ಫುಲ್ಲಕುಸುಮ.... ಮುಂತಾದ ಶಬ್ದಗಳು ಪದಕೋಶದಲ್ಲಿ ಸಿಗುತ್ತವೆ. ಆದರೆ ಇವುಗಳ ಪದಮೈತ್ರಿ ಕಾವ್ಯದಲ್ಲಿ ಮಾತ್ರ ಲಭ್ಯ “ಫುಲ್ಲಕುಸುಮ ಫಣಾಜಟಿ ಪವನಲೀಲಾ ಲೋಲಾಕಟಿ ಕುಣಿಯುತಿಹಳದೋ ಲತಾನಟಿ”... (ಕುವೆಂಪು) ಇದನ್ನು ಇಲ್ಲಿ ಹೇಳಲು ಕಾರಣವೇನೆಂದರೆ, ಕಾವ್ಯಜಗತ್ತಿನ ಏಕಮೇವ- ಅದ್ವಿತೀಯವಾದ ಪದಮೈತ್ರಿಯನ್ನು ಯಾವ ಶಾಸ್ತ್ರವೂ ಬಳಸುವುದಿಲ್ಲ! ಅದರಲ್ಲೂ ತತ್ವಜಿಜ್ಞಾಸೆಯೇ ಪ್ರಧಾನವಾದ ದರ್ಶನಶಾಸ್ತ್ರವು (Phಥಿಟosoಠಿhಥಿ) ಪದಮೈತ್ರಿಯತ್ತ ಕಣ್ಣೆತ್ತಿಯೂ ನೋಡದು! ತತ್ವ ಮತ್ತು ಕಾವ್ಯದ ಪುರಾತನ ಜಗಳವು ಬಗೆಹರಿಯದ ಕಗ್ಗಂಟು! ತತ್ವವಿದರು ಕವಿ, ಕಲಾವಿದರನ್ನು ತಮ್ಮ ಆದರ್ಶರಾಜ್ಯದಿಂದ ಹೊರದಬ್ಬಿರುವುದುಂಟು ಮತ್ತು ಕಾವ್ಯಾಲಾಪವನ್ನು ವರ್ಜನೆ ಮಾಡಲು ಅಪ್ಪಣೆ ಕೊಟ್ಟಿರುವುದೂ ಉಂಟು! ಭಾರತದೇಶವು ಅನೇಕ ವೈಚಿತ್ರ್ಯಗಳನ್ನೂ ರಹಸ್ಯಗಳನ್ನೂ ಪ್ರತಿಭಾ ವಿಲಾಸಗಳನ್ನೊಳಗೊಂಡಿರುವ ಮಾಯಾಬಜಾರ್ ಇದ್ದಂತೆ! ಇಲ್ಲಿ ಕೃಷ್ಣನ ಅಂತರಂಗದಲ್ಲಿ ಶಕುನಿಯನ್ನು ಮನಗಾಣಬಹುದು. ಕೃಷ್ಣ ಮತ್ತು ಶಕುನಿ ಮೇಳನ ಅತ್ಯಂತ ವಿಚಿತ್ರ! ಅಂತೆಯೇ ಕಾವ್ಯ ಮತ್ತು ತತ್ವದ ಮೇಳನ ಕೂಡಾ ಅತ್ಯಂತ ವಿಚಿತ್ರ! ಇದೇ ನಮ್ಮ ದೇಶದ ಭಗವದ್ಗೀತೆಯ ವೈಶಿಷ್ಟ್ಯವಾಗಿದೆ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

೧ ಮೊದಲನೆಯ ಅಧ್ಯಾಯ ಅರ್ಜುನ ವಿಷಾದಯೋಗ ಧೃತರಾಷ್ಟ್ರ ಉವಾಚ : ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ | ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ || ೧ ಧೃತರಾಷ್ಟ್ರ ಕೇಳಿದ : ಧರ್ಮಕ್ಷೇತ್ರವೆಂದೆನಿಸಿದಂತಹ ಕುರುಕ್ಷೇತ್ರದಲಿ ನಮ್ಮವರು ಪಾಂಡವರೊಂದಿಗೆ ಯುದ್ಧಕೆ ನಿಂತು, ಈಗ ಅಲ್ಲೇನು ಮಾಡಿದರು? ಕುರುಕ್ಷೇತ್ರವು ಹಿಂದಿನಿಂದಲೂ ತಪಃಕ್ಷೇತ್ರವಾಗಿ, ಧರ್ಮಕ್ಷೇತ್ರವಾಗಿ ಪ್ರಖ್ಯಾತಿಯನ್ನು ಹೊಂದಿದ್ದಿತು. ಕುರುಕ್ಷೇತ್ರವು ಎಪ್ಪತ್ತು ಮೈಲಿ ಉದ್ದ ಮತ್ತು ಮೂವತ್ತು ಮೈಲಿ ಅಗಲವಿರುವ ವಿಶಾಲ ಪ್ರದೇಶ. ಸ್ವಾಯಂಭುವ ಮನುವಿನ ಕಾಲದಲ್ಲಿ ಇದಕ್ಕೆ ಬ್ರಹ್ಮಾವರ್ತವೆಂಬ ಹೆಸರಿತ್ತು. ಹಿಂದೆ ಪರಶುರಾಮನು ಸುತ್ತಲೂ ಐದು ಸರೋವರಗಳಿಂದ ಕೂಡಿದ ಸ್ಯಮಂತಪಂಚಕ ಎಂಬ ಆ ಪ್ರದೇಶವನ್ನು ಧರ್ಮಕ್ಷೇತ್ರವಾಗಿಸಿದ್ದನು. ತದನಂತರ ಋಷಿ-ಮುನಿಗಳು ತಪಸ್ಸು ಮಾಡಲು ಆ ಧರ್ಮಕ್ಷೇತ್ರವನ್ನು ಆರಿಸಿಕೊಂಡಿದ್ದರು. ಆದರೆ ಇದೀಗ ಇಂತಹ ಪವಿತ್ರ ಕ್ಷೇತ್ರವನ್ನು ದಾಯಾದಿಗಳಾದ ಕುರು-ಪಾಂಡವರು ಪರಸ್ಪರ ಯುದ್ಧ ಮಾಡುವುದಕ್ಕಾಗಿ ಆರಿಸಿಕೊಂಡಿದ್ದಾರೆ. ‘ಧರ್ಮಕ್ಷೇತ್ರವೆನಿಸಿದ ಕುರುಕ್ಷೇತ್ರದಲ್ಲಿ ಕುರುಪಾಂಡವರು ಯುದ್ಧಕ್ಕೆ ನಿಂತರಲ್ಲ, ಈಗ ಅಲ್ಲೇನು ನಡೆಯುತ್ತಿದೆಯೆಂಬುದನ್ನು ಹೇಳು’ ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳುತ್ತಾನೆ. ಯುದ್ಧದ ಬಗ್ಗೆ ಧೃತರಾಷ್ಟ್ರನಿಗೆ ಕುತೂಹಲವಿದೆ. ತನ್ನ ಮಗನಾದ ದುರ್ಯೋಧನನಿಂದ ಪಾಂಡವರು ಸಾಕಷ್ಟು ಸಂಕಟಗಳನ್ನು ಅನುಭವಿಸಿದ್ದಾರೆಂಬುದು ಅವನಿಗೆ ಗೊತ್ತಿದೆಯಾದರೂ ಅವನಿಗೆ ಮಗನ ಮೇಲೆ ಕುರುಡು ಪ್ರೀತಿ. ಈ ಯುದ್ಧದಲ್ಲಿ ಯಾರು ಸತ್ತರೂ ಅವನಿಗೆ ಸಂಕಟವೇ. ಅದೂ ಅಲ್ಲದೆ ಧರ್ಮಕ್ಷೇತ್ರವನ್ನು ಯುದ್ಧಮಾಡಲು ಆರಿಸಿಕೊಂಡಿರುವುದು ಸರಿಯಲ್ಲವೆಂಬ ವಿಷಾದದ ಭಾವನೆ ಧೃತರಾಷ್ಟ್ರನಲ್ಲಿರುವಂತೆಯೂ ಕಾಣುತ್ತದೆ. ಸಂಜಯ ಉವಾಚ : ದೃಷ್ಟ್ವಾತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ | ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ || ೨ ಪಶ್ಚೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್ | ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ || ೩ ಸಂಜಯ ಹೇಳಿದ : ರಾಜನೇ ಕೇಳು! ವ್ಯೂಹಾಕಾರದಿ ರಚಿಸಿದ ಪಾಂಡವಸೇನೆಯನು ಕಂಡು ಸುಯೋಧನ ಅಚ್ಚರಿಗೊಂಡು, ಗುರು ದ್ರೋಣರಿಗೆ ಹೇಳಿದನು- ‘ಗುರುವೇ! ನೋಡದೊ, ನಿನ್ನಯ ಶಿಷ್ಯನು ದ್ರುಪದಸುತ ಧೃಷ್ಟದ್ಯುಮ್ನ ಪಾಂಡವ ಸೇನೆಯ ವ್ಯೂಹಾಕಾರದಿ ನಿಲ್ಲಿಸಿರುವ ಆ ಬಗೆಯನ್ನ.. ಧೃತರಾಷ್ಟ್ರನ ಕುತೂಹಲದ ಪ್ರಶ್ನೆಗೆ ಸಂಜಯನ ಪ್ರತಿಕ್ರಿಯೆ ಇದು. ಯುದ್ಧಕ್ಕೆ ಸಿದ್ಧವಾಗಿರುವ ಸೇನೆಯ ವ್ಯೂಹಗಳು ಯುದ್ಧದಲ್ಲಿ ಬಹಳ ಮಹತ್ವ ಪಡೆಯುತ್ತವೆ. ದುರ್ಯೋಧನನಿಗೆ ಪಾಂಡವಸೇನೆಯ ವ್ಯೂಹ ಮತ್ತು ಸೈನ್ಯವನ್ನು ಕಂಡು ಅಚ್ಚರಿ ಮತ್ತು ತಾತ್ಸಾರಗಳು ಒಟ್ಟಿಗೇ ಉಂಟಾದವು. ಕಾಡು ಮೇಡುಗಳಲ್ಲಿ ಅಲೆದುಕೊಂಡಿದ್ದರೂ ಇಷ್ಟೊಂದು ಸೈನ್ಯವನ್ನು ಹೇಗೆ ಜಮಾಯಿಸಿದರೆಂಬ ಅಚ್ಚರಿ ಮತ್ತು ತಮ್ಮ ಸೈನ್ಯಕ್ಕಿಂತ ಕಡಿಮೆಯಿರುವ ಅವರ ಸೈನ್ಯದ ಬಗ್ಗೆ ತಾತ್ಸಾರ. ದುರ್ಯೋಧನನು, ಪಾಂಡವ ಸೇನಾಧಿಪತಿಯಾಗಿರುವ ಧೃಷ್ಟದ್ಯುಮ್ನನ ಹೆಸರನ್ನು ಮೊದಲು ಹೇಳುತ್ತಾನೆ. ದೃಷ್ಟದ್ಯುಮ್ನನೂ ಒಂದು ಕಾಲದಲ್ಲಿ ದ್ರೋಣನಲ್ಲಿ ವಿದ್ಯೆ ಕಲಿತವನೇ. ದ್ರೋಣನ ಮೆಚ್ಚಿನ ಶಿಷ್ಯನಾದ ಅರ್ಜುನನೂ ಈಗ ಅದೇ ಪಕ್ಷದಲ್ಲಿದ್ದಾನೆ. ಅವರ ಮೇಲೆ ಮೃದು ಧೋರಣೆ ತೋರದಿರಲಿ ಮತ್ತು ದ್ರೋಣರ ನಿಷ್ಠೆ ತಮ್ಮ ಪಕ್ಷದ ಪರವಾಗಿಯೇ ಇರಲೆಂದಿರಬಹುದು. ಹಿಂದಿನ ಕಾಲದಲ್ಲಿ ಯುದ್ಧದ ನಿಯಮಗಳನ್ನು ಕ್ರೀಡೆಯ ನಿಯಮಗಳಂತೆ ಪಾಲಿಸಲಾಗುತ್ತಿತ್ತು. ಇದನ್ನೇ ಧರ್ಮಯುದ್ಧ ಎಂದು ಕರೆಯುತ್ತಿದ್ದರು. ಈ ನಿಯಮಗಳನ್ನು ಮೀರಿದರೆ ಅವರನ್ನು ತಿರಸ್ಕಾರದಿಂದ ನೋಡಲಾಗುತ್ತಿತ್ತು. ವೀರರಿಗೆ ಇದಕ್ಕಿಂತಲೂ ಅಪಮಾನ ಬೇರೆ ಇರಲಿಲ್ಲ. ಯುದ್ಧದಲ್ಲಿ ಮರಣಿಸಿದವರು ನೇರವಾಗಿ ಸ್ವರ್ಗಕ್ಕೆ ಹೋಗುವರೆಂಬ ನಂಬಿಕೆಯನ್ನು ಯೋಧರಲ್ಲಿ ಬಿತ್ತಲಾಗುತ್ತಿತ್ತು! ಆದ್ದರಿಂದ ಅವರು ತಮ್ಮ ಶಕ್ತ್ಯನುಸಾರ ಹೋರಾಡಿ ವೀರಮರಣವನ್ನಪ್ಪುತ್ತಿದ್ದರು. ದುರ್ಯೋಧನನಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯವೂ, ಪಾಂಡವರಲ್ಲ್ಲಿ ಏಳು ಅಕ್ಷೋಹಿಣಿ ಸೈನ್ಯವೂ ಜಮಾವಣೆಯಾಗಿತ್ತು. ಅಂದರೆ ಒಟ್ಟು ಹದಿನೆಂಟು. ಯುದ್ಧ ನಡೆಯುವುದೂ ಹದಿನೆಂಟು ದಿನಗಳು. ಮಹಾಭಾರತಕ್ಕೂ ಹದಿನೆಂಟಕ್ಕೂ ವಿಚಿತ್ರ ನಂಟು. ಒಂದು ಅಕ್ಷೋಹಿಣಿ ಸೈನ್ಯವೆಂದರೆ ೨೧,೮೭೦ ರಥಗಳು, ೨೧,೮೭೦ ಆನೆಗಳು, ೬೫,೬೧೦ ಕುದುರೆಗಳು ಮತ್ತು ೧,೦೯,೩೫೦ ಕಾಲಾಳುಗಳು. (ಇಲ್ಲ್ಲಿ ಬಿಡಿ ಅಂಕಿಗಳನ್ನು ಕೂಡಿದರೆ ೧೮ ಬರುವುದು ವಿಶೇಷ. ಉದಾ: ೨+೧+೮+೭+೦=೧೮. ಉಳಿದವೂ ಹೀಗೆಯೇ) ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ | ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ || ೪ ಧೃಷ್ಟಕೇತುಶ್ಚೇಕಿತಾನಃ ಕಾಶೀರಾಜಶ್ಚ ವೀರ್ಯವಾನ್ | ಪುರುಜಿತ್ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ || ೫ ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ | ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾಃ || ೬ ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ | ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರವೀಮಿ ತೇ || ೭ ಭೀಮಾರ್ಜುನರಿಗೆ ಸಮಾನರೆನಿಸಿದ ಮಹಾಶೂರರೆಂಬುವರಿವರು ವೀರ ಯುಯುಧಾನ, ವಿರಾಟ, ದ್ರುಪದ ಎನ್ನುವಂಥ ಮಹಾರಥರು ಧೃಷ್ಟಕೇತು, ಚೇಕಿತಾನ, ಕಾಶೀರಾಜರು ವೀರರೆನಿಸಿಕೊಂಡವರು ಪುರುಜಿತ್, ಕುಂತೀಭೋಜ, ಶೈಭ್ಯರು ಶ್ರೇಷ್ಠರಾದ ನರಪುಂಗವರು ವೀರ್ಯವಂತ ವಿಕ್ರಾಂತ ವೀರರು ಉತ್ತಮೌಜಸ, ಯುಧಾಮನ್ಯು ಇಂತಹ ಮಹಾರಥರೊಡನಿರುವವನು ಸುಭದ್ರಾತನಯ ಅಭಿಮನ್ಯು ಪಾಂಡವರೈವರ ದ್ರೌಪದಿಪುತ್ರರು ನಿಂತಿರುವರು ಮುಂಚೂಣಿಯಲಿ ಬ್ರಾಹ್ಮಣೋತ್ತಮರೆ! ನಮ್ಮ ಪಕ್ಷದಲಿ ಇರುವವರನು, ನೀವೂ ಕೇಳಿ! ಯುದ್ಧದಲ್ಲಿ ಹೋರಾಡುವಾಗ ಶತ್ರುಪಕ್ಷದ ಬಲಾಬಲಗಳ ಅರಿವು ಇರಬೇಕಾದುದು ಬಹಳ ಮುಖ್ಯ. ಅದರ ಆಧಾರದ ಮೇಲೆಯೇ ಯುದ್ಧದ ವ್ಯೂಹ ಮತ್ತು ತಂತ್ರಗಳನ್ನು ಹೆಣೆಯಲಾಗುತ್ತದೆ. ದುರ್ಯೋಧನನು, ನೆರೆದಿರುವ ಶತ್ರುಸೈನ್ಯವನ್ನು ವೀಕ್ಷಿಸಿ, ಗುರುಗಳಾದ ದ್ರೋಣರ ಬಳಿ ಬಂದು, ಪಾಂಡವಪಕ್ಷದಲ್ಲಿನ ಕೆಲವು ವೀರರ ಹೆಸರುಗಳನ್ನು ಹೇಳುವನು. ಯುಯುಧಾನ(ಸಾತ್ಯಕಿ), ವಿರಾಟ, ದ್ರುಪದ, ಧೃಷ್ಟಕೇತು (ಶಿಶುಪಾಲನ ಮಗ), ಚೇಕಿತಾನ, ಕಾಶಿರಾಜ, ಪುರುಜಿತ್ ಕುಂತಿಭೋಜ, ಶೈಭ್ಯನೆಂಬ ಪ್ರಖ್ಯಾತ ವೀರರಲ್ಲದೆ ವಿಕ್ರಾಂತ ವೀರನಾದ ಉತ್ತಮೌಜಸ್, ಅಭಿಮನ್ಯು ಹಾಗೂ ದ್ರೌಪದಿಯ ಐವರು ಪುತ್ರರನ್ನೂ (ಪ್ರತಿವಿಂಧ್ಯ, ಶ್ರುತಸೋಮ, ಶ್ರುತಕೀರ್ತಿ, ಶತಾನೀಕ, ಶುಕ್ರವರ್ಮ) ಹೆಸರಿಸುತ್ತಾನೆ. ಮೇಲೆ ಹೆಸರಿಸಿದವರೆಲ್ಲರೂ ವೀರಾಧಿವೀರರೇ. ಇವರು ಭೀಮಾರ್ಜುನರ ಶೌರ್ಯ, ಪರಾಕ್ರಮಗಳಿಗೆ ಸಮಾನರಲ್ಲದಿದ್ದರೂ ಯುದ್ಧದಲ್ಲಿ ಯಾರನ್ನೂ ಉಪೇಕ್ಷಿಸಬಾರದೆಂಬುದು ದುರ್ಯೋಧನನ ಎಚ್ಚರಿಕೆ. ಪಾಂಡವಪಕ್ಷದ ಪ್ರಮುಖ ವೀರರನ್ನು ಹೆಸರಿಸಿದ ಬಳಿಕ ಕೌರವಪಕ್ಷದ ಕೆಲವು ವೀರರ ಹೆಸರುಗಳನ್ನೂ ಹೇಳುವನು. ಅವರೆಲ್ಲ ದ್ರೋಣನಿಗೆ ಗೊತ್ತಿರುವವರಾಗಿದ್ದರೂ, ಅವರ ಹೆಸರುಗಳನ್ನು ನೆನಪಿಸಿ, ತಮ್ಮ ಕಡೆಯ ವೀರರು ಪಾಂಡವರಿಗಿಂತ ಕಡಿಮೆಯೇನಿಲ್ಲವೆಂಬ ಭಾವನೆಯನ್ನು ದ್ರೋಣರಲ್ಲಿ ಮೂಡಿಸಿ, ಅವರ ಆತ್ಮವಿಶ್ವಾಸ ಹೆಚ್ಚಾಗಲೆಂಬ ಉದ್ದೇಶದಿಂದ ಹೀಗೆ ಹೇಳಿದನೆನಿಸುತ್ತದೆ. ದುರ್ಯೋಧನ ಮಾತಿನಲ್ಲಿ ಚತುರನಾಗಿದ್ದ ಮತ್ತು ಬಹಳ ಬುದ್ಧಿವಂತನಾಗಿದ್ದ. ಆದರೆ ಚಾಡಿಕೋರರ ಮಾತು ಕೇಳುತ್ತಿದ್ದುದು ಅವನಲ್ಲಿದ್ದ ದೌರ್ಬಲ್ಯ. ಅದರಲ್ಲೂ ಶಕುನಿಯ ಮಾತುಗಳನ್ನು ಹೆಚ್ಚು ಕೇಳುತ್ತಿದ್ದ. ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯಃ | ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿರ್ಜಯದ್ರಥಃ || ೮ ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ | ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ || ೯ ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ | ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ || ೧೦ ಅಯನೇಷು ಚ ಸರ್ವೇಷು ಯಥಾಭಾಗಮವಸ್ಥಿತಾಃ | ಭೀಷ್ಮಮೇವಾಭಿರಕ್ಷಂತು ಭವಂತಃ ಸರ್ವ ಏವ ಹಿ || ೧೧ ನೀವೂ ಭೀಷ್ಮಪಿತಾಮಹರಲ್ಲದೆ ವೀರ ಕರ್ಣ, ಕೃಪ, ಅಶ್ವತ್ಥಾಮ ಸೋಮದತ್ತನ ಸುತ ಭೂರಿಶ್ರವಸ್ಸು, ಜಯದ್ರಥರರಿಹ ಸಂಗ್ರಾಮ ಅನೇಕ ವೀರರು ಯುದ್ಧಮುಖದಲ್ಲಿ ಜೀವ ಬಿಡಲೆಂದು ನನಗಾಗಿ ಬಗೆ ಬಗೆ ಶಸ್ತ್ರಾಸ್ತ್ರಗಳಲಿ ನಿಪುಣರು, ಯುದ್ಧವಿಶಾರದರಾಗಿ ಭೀಷ್ಮಾಚಾರ್ಯರ ಮುಖಂಡತ್ವದಲಿ ಸೈನ್ಯವಿರುವುದಪರಿಮಿತವು ಆದರೆ, ಭೀಮನ ರಕ್ಷಣೆಯಲ್ಲಿನ ಶತ್ರುಸೈನ್ಯವಿದೆ ಪರಿಮಿತವು ನೀವೆಲ್ಲರೂ ಸೇನಾವ್ಯೂಹದ ಮಹಾದ್ವಾರದಲಿ ಕಾಪಿಡಿದು ಭೀಷ್ಮಸೇನಾನಿ ರಕ್ಷಣೆ ಮಾಡಿರಿ ಶತ್ರುಸೈನ್ಯವನು ಸದೆಬಡಿದು! ದುರ್ಯೋಧನನು ಮೊದಲಿಗೆ ‘ನೀವೂ’ ಎಂದು ದ್ರೋಣರ ಹೆಸರನ್ನೇ ಹೇಳುತ್ತಾನೆ. ಮಾತಿನ ಕಲೆಯನ್ನು ಬಹಳ ಚೆನ್ನಾಗಿ ರೂಢಿಸಿಕೊಂಡಿದ್ದ ದುರ್ಯೋಧನ ಎದುರಲ್ಲಿರುವವರನ್ನು ಹೊಗಳಿ ತನ್ನವರಂತೆ ಮಾಡಿಕೊಳ್ಳುವಲ್ಲಿ ಪ್ರವೀಣನಾಗಿದ್ದ. ಅವನು ತನ್ನ ಪಕ್ಷದಲ್ಲಿ ಕರ್ಣ, ಕೃಪ, ಅಶ್ವತ್ಥಾಮ, ಭೂರಿಶ್ರವಸ್ಸು, ಜಯದ್ರಥ ಮುಂತಾದ ವೀರರಿಂದ ಕೂಡಿದ ಅಪರಿಮಿತ ಸೈನ್ಯವಿದೆ ಎನ್ನುತ್ತಾನೆ. ಆದ್ದರಿಂದ ಗೆಲುವು ತನ್ನದೇ ಎಂಬ ಅತಿಯಾದ ಆತ್ಮವಿಶ್ವಾಸ ಅವನಲ್ಲಿ ತುಂಬಿ ತುಳುಕುತ್ತಿತ್ತು. ಆದರೂ ದುರ್ಯೋಧನನ ಮನಸ್ಸಿನಲ್ಲಿ ಸ್ವಲ್ಪ ಅಳುಕಿತ್ತೆನಿಸುತ್ತದೆ. ತನ್ನ ಕಡೆ ಶಸ್ತ್ರಾಸ್ತ್ರ ನಿಪುಣರಾದ ವೀರರಿದ್ದರೂ ಶತ್ರುಸೈನ್ಯವನ್ನು ಕಡೆಗಣಿಸುವಂತಿಲ್ಲ. ಅತಿಯಾದ ಆತ್ಮವಿಶ್ವಾಸವೂ ಅಪಾಯಕಾರಿ ಎಂಬ ಅರಿವು ಕೂಡ ಅವನಿಗಿದೆ. ಅಲ್ಲದೆ ಪಾಂಡವಸೇನೆಯ ಸೇನಾಧಿಪತಿ ಧೃಷ್ಟದ್ಯುಮ್ನನಾದರೂ ಸೇನೆಯು ವೈರಿಯಾದ ಭೀಮನ ರಕ್ಷಣೆಯಲ್ಲಿದೆಯೆಂದೇ ಅವನು ಭಾವಿಸುತ್ತಾನೆ. ದುರ್ಯೋಧನನು ಹಿರಿಯನಾದ ಭೀಷ್ಮನನ್ನು ಸೇನಾಧಿಪತಿಯನ್ನಾಗಿ ಮಾಡಿದ್ದು ಕೂಡ ಉದ್ದೇಶಪೂರ್ವಕವಾಗಿ ಅನ್ನಿಸುತ್ತದೆ. ಏಕೆಂದರೆ, ಭೀಷ್ಮನು ಪಾಂಡವರನ್ನು ಹೆಗಲ ಮೇಲೆ ಎತ್ತಿ ಆಡಿಸಿ ಸಲುಹಿದವನಾದ್ದರಿಂದ ಅವರು, ತಮ್ಮ ತಾತನ ಮೇಲೆ ಸಂಪೂರ್ಣ ಸಾಮರ್ಥ್ಯದಿಂದ ಯುದ್ಧಮಾಡಲಾರರೆಂದೇ ಅವನು ಭಾವಿಸಿದ್ದನೆನಿಸುತ್ತದೆ. ಅಲ್ಲದೆ ಭೀಷ್ಮನು ಕುರುವಂಶದಲ್ಲಿಯೇ ಹಿರಿಯನಾದವನು ಕುರುವಂಶವನ್ನು ಕಟ್ಟಿ ಬೆಳೆಸಿದವನು. ಇಂತಹ ಭೀಷ್ಮನನ್ನು ಕಾಪಾಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಆದ್ದರಿಂದ ದ್ರೋಣರಿಗೆ, ಕುರುಕುಲ ಪಿತಾಮಹನಾದ ಭೀಷ್ಮನನ್ನು, ನೀವೆಲ್ಲ ಕಾವಲಿದ್ದು ರಕ್ಷಿಸಬೇಕು ಎಂದು ಹೇಳುವನು. ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ | ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ || ೧೨ ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ | ಸಹಸೈವಾಭ್ಯಹನ್ಯಂತ ಸ ಶಬ್ದಸ್ತುಮುಲೋಭವತ್ || ೧೩ ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಮಿತೌ | ಮಾಧವಃ ಪಾಂಡವಶ್ಚೈವ ದಿವ್ಯೌ ಶಂಖೌ ಪ್ರದದ್ಮತುಃ ೧೪ ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ | ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ || ೧೫ ಕುರುಕುಲತಿಲಕನು ಪ್ರತಾಪಶಾಲಿಯು ಹಿರಿಯನು ಭೀಷ್ಮಪಿತಾಮಹನು ಸಿಂಹನಾದವನು ಮಾಡುತ ರಣದಲಿ ಸಮರಶಂಖವನ್ನೂದಿದನು ಶಂಖ-ಭೇರಿಗಳು ಒಡನೆ ಮೊಳಗಿದವು ಡೋಲು, ಮೃದಂಗ, ಗೋಮುಖವು ಒಂದೇ ಬಾರಿಗೆ ವಾದ್ಯವು ಮೊಳಗಲು, ರಣಧ್ವನಿ ಅಲ್ಲಿ ಭಯಂಕರವು ಬಳಿಕ ಬಿಳಿಯ ಅಶ್ವಗಳನು ಹೂಡಿದ ಮಹಾರಥದಿ ಕೃಷ್ಣಾರ್ಜುನರು ರಣದನಿ ಎಲ್ಲೆಡೆ ಮೊಳಗುವ ತೆರದಲಿ ತಮ್ಮ ಶಂಖಗಳನೂದಿದರು ಕೃಷ್ಣನು ಊದಿದ ಪಾಂಚಜನ್ಯವನು, ಪಾರ್ಥನೋ ದೇವದತ್ತವನು ವೃಕೋದರ ಭೀಮ ಪೌಂಡ್ರಕವೆನ್ನುವ ಮಹಾಶಂಖವನ್ನೂದಿದನು ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ರಾಜ ಅಥವಾ ಮಹಾವೀರರೆನಿಸಿಕೊಂಡವರು ತಮ್ಮದೇ ಆದಂತಹ ಧ್ವಜ ಮತ್ತು ಶಂಖವನ್ನು ಹೊಂದಿರುತ್ತಿದ್ದರು. ಆಯಾ ವೀರರು ಬರುತ್ತಿದ್ದಂತೆ ದೂರದಿಂದಲೇ ಧ್ವಜವನ್ನು ಗುರುತಿಸಿ, ಇಂಥವರೇ ಬರುತ್ತಿದ್ದಾರೆಂದು ಗುರುತಿಸುತ್ತಿದ್ದರು. ಹಾಗೆಯೇ ಶಂಖವೂ ಕೂಡ ಪ್ರತಿಯೊಬ್ಬರಿಗೂ ಭಿನ್ನವಾಗಿರುತ್ತಿತ್ತು. ಧರ್ಮಯುದ್ಧವೆಂದ ಮೇಲೆ ಎಲ್ಲವೂ ನಿಯಮದಂತೆ ನಡೆಯಬೇಕಾಗುವುದು. ಅದಕ್ಕೊಂದು ಬದ್ಧತೆಯಿರುತ್ತದೆ. ಆಗೆಲ್ಲ ಯುದ್ಧದ ಪ್ರಾರಂಭ ಸೂಚಕವಾಗಿ ಶಂಖವನ್ನು ಮೊಳಗಿಸುವುದು ಪದ್ಧತಿ. ಅದರಂತೆ ಸೇನಾಧಿಪತಿಯಾದ ಭೀಷ್ಮನು, ತಮ್ಮ ಪಕ್ಷ ಯುದ್ಧಕ್ಕೆ ಸಿದ್ಧವಿರುವುದಾಗಿ ಸಿಂಹನಾದವನ್ನು ಮಾಡಿ ಸಮರಶಂಖವನ್ನು ಊದಿದನು. ಅವನ ಕಡೆಯ ವೀರರೂ ಶಂಖಗಳನ್ನು ಊದಿದರು. ಶಂಖ, ಭೇರಿ, ಡೋಲು, ಮೃದಂಗ, ಗೋಮುಖ ಮುಂತಾದ ವಾದ್ಯಗಳ ಧ್ವನಿ-ಪ್ರತಿಧ್ವನಿಗಳಿಂದ ಇಡೀ ರಣರಂಗ ಭಯಂಕರವಾಗಿತ್ತು. ಈ ಧ್ವನಿಯೇ ಸೈನಿಕರಲ್ಲಿ ಯುದ್ಧೋತ್ಸಾಹವನ್ನು ಉಂಟುಮಾಡುವಂತಿರುತ್ತದೆ; ಹೋರಾಡುವ ಹುಮ್ಮಸ್ಸನ್ನು ಮೂಡಿಸುತ್ತದೆ. ಆಗ ಬಂಧ-ಸಂಬಂಧಗಳು ದೂರ ಸರಿಯುತ್ತವೆ. ಸೈನಿಕರೂ ವೀರಾವೇಶದಿಂದ ಯುದ್ಧದಲ್ಲಿ ಹೋರಾಡುತ್ತಾರೆ. ಕುರುಕ್ಷೇತ್ರ ಯುದ್ಧದ ಈ ಸಂದರ್ಭದಲ್ಲಿ ಶ್ವೇತಾಶ್ವಗಳನ್ನು ಹೂಡಿದ್ದ ರಥದಲ್ಲಿದ್ದ ಕೃಷ್ಣಾರ್ಜುನರೂ ಕೌರವರ ಶಂಖಧ್ವನಿಗೆ ಪ್ರತಿಯಾಗಿ ತಮ್ಮ ಶಂಖಗಳನ್ನೂದಿದರು. ಕೃಷ್ಣನು ಪಾಂಚಜನ್ಯವೆಂಬ ಶಂಖವನ್ನು ಊದಿದರೆ ಅರ್ಜುನನು ದೇವದತ್ತ ಎಂಬ ಶಂಖವನ್ನೂದಿದನು. ವೃಕೋದರನೆನಿಸಿದ ಭೀಮನು ಪೌಂಡ್ರಕವೆಂಬ ಮಹಾಶಂಖವನ್ನು ಊದಿದನು. ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ | ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ || ೧೬ ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ | ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ || ೧೭ ದ್ರುಪದೋ ದ್ರೌಪದೇಯಾಶ್ಚ ಸರ್ವಶಃ ಪೃಥಿವೀಪತೇ | ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ || ೧೮ ಸ ಘೋಷೋ ದಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ | ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯನ್ || ೧೯ ಅನಂತವಿಜಯವ ಧರ್ಮನು ಊದಿದ, ನಕುಲನು ಸುಘೋಷ ಶಂಖವನು ಸಹದೇವನು ಮಣಿಪುಷ್ಪಕವೆನ್ನುವ ಶಂಖವನ್ನು ತಾನೂದಿದನು ಧನುರ್ಧರನಾದ ಕಾಶೀರಾಜನು, ಧೃಷ್ಟದ್ಯುಮ್ನ ಮಹಾರಥನು ಶಿಖಂಡಿ, ವಿರಾಟ, ಸಾತ್ಯಕಿ, ದ್ರುಪದ, ವೀರ ಅಭಿಮನ್ಯುವೂ ತಾನು ದ್ರೌಪದಿಪುತ್ರರು ಉಪಪಾಂಡವರು, ತೋರಿಸಿ ಯುದ್ಧೋತ್ಸಾಹವನು ಯುದ್ಧಕೆ ತಾವೂ ಸಿದ್ಧವೆಂಬುದನು ಎಲ್ಲೆಡೆ ಸಾರಲು ಸುದ್ದಿಯನು ಮಹಾಬಾಹುಗಳೆನಿಸಿದ ಎಲ್ಲರು ಒಟ್ಟಿಗೆ ಊದಲು ಶಂಖವನು ಶಂಖಗಳ ಧ್ವನಿಯು ಎಲ್ಲೆಡೆ ವ್ಯಾಪಿಸಿ ಬಡಿಯಿತು ಕೌರವರೆದೆಯನ್ನು! ಶ್ರೀಕೃಷ್ಣ, ಭೀಮಾರ್ಜುನರು ತಮ್ಮ ಶಂಖಗಳನ್ನೂದುತ್ತಿದ್ದಂತೆ ಯುಧಿಷ್ಠಿರನು ಅನಂತವಿಜಯವೆಂಬ ಶಂಖವನ್ನು ಊದಿದನು. ಧರ್ಮನ ಜೊತೆಗೆ ನಕುಲನು ಸುಘೋಷವೆಂಬ ಶಂಖವನ್ನೂ, ಸಹದೇವನು ಮಣಿಪುಷ್ಪಕವೆಂಬ ಶಂಖವನ್ನೂದಿ ಯುದ್ಧೋತ್ಸಾಹವನ್ನು ಮೂಡಿಸಿದರು. ಉಳಿದ ಪಾಂಡವರ ಕಡೆಯ ವೀರರಾದ ಧೃಷ್ಟದ್ಯುಮ್ನ, ಕಾಶೀರಾಜ, ಶಿಖಂಡಿ, ವಿರಾಟ, ಸಾತ್ಯಕಿ, ದ್ರುಪದ, ಅಭಿಮನ್ಯು ತಮ್ಮ ತಮ್ಮ ಶಂಖಗಳನ್ನೂದಿದರು. ಐವರು ದ್ರೌಪದೀಪುತ್ರರೂ ತಮ್ಮ ತಮ್ಮ ಶಂಖಗಳನ್ನೂದಿದರು. ಈ ವೀರರೆಲ್ಲರ ಶಂಖಗಳ ಧ್ವನಿಯು ಭೂಮ್ಯಾಕಾಶಗಳನ್ನು ವ್ಯಾಪಿಸಿ ಕೌರವರ ಎದೆಯನ್ನು ಗಡಗಡನೆ ನಡುಗುವಂತೆ ಮಾಡಿತು. ಕೌರವರ ಕಡೆಯ ವೀರರೂ ಶಂಖಧ್ವನಿಗಳನ್ನು ಮಾಡಿದರಾದರೂ, ಪಾಂಡವರ ಕಡೆಯ ವೀರರ ಶಂಖಧ್ವನಿಗಳನ್ನು ಕೇಳಿ ಹೆದರಿದರೆಂದರೆ ನೈತಿಕವಾಗಿ ಅವರಿಗೆ ವಿಶ್ವಾಸವಿರಲಿಲ್ಲವೆಂದು ಕಾಣುತ್ತದೆ. ಕೌರವರ ದುರಾಡಳಿತ ಮತ್ತು ಪಾಂಡವರ ಸಹನೆ, ಒಳ್ಳೆಯತನಗಳು ಅವರಿಗೆ ಗೊತ್ತಿದ್ದದ್ದೇ. ಇದೆಲ್ಲದರ ಕಾರಣದಿಂದ ಅವರಲ್ಲಿ ತಮ್ಮದು ಅಧರ್ಮ ಪಕ್ಷ ಎಂಬ ಅಳುಕೂ ಇದ್ದಿರಬಹುದು. ಧರ್ಮವೋ ಅಧರ್ಮವೋ ತಮ್ಮ ನಾಡಿನ ದೊರೆಯ ಪರವಾಗಿ ಹೋರಾಡುವುದು ಅವರಿಗೆ ಅನಿವಾರ್ಯವಾಗಿತ್ತು. ಅಲ್ಲಿ ಯುದ್ಧಕ್ಕೆ ಬಂದಿದ್ದವರೆಲ್ಲರೂ ಸ್ವಇಚ್ಛೆಯಿಂದ ಯುದ್ಧಕ್ಕೆ ಬಂದಿದ್ದವರೇನಲ್ಲ. ಕೆಲವರು ಆಳುವ ವರ್ಗದ ಬಲವಂತದಿಂದಲೋ, ಸ್ವರ್ಗದ ಆಸೆಯಿಂದಲೋ ಬಂದವರಾಗಿದ್ದರು. ನಿಜವಾದ ರಾಜಭಕ್ತಿ ಇದ್ದರೆ ತಾನೆ ಆತ್ಮವಿಶ್ವಾಸ ತುಂಬಿ ತುಳುಕುವುದು. ಇತರರ ಬಲವಂತಕ್ಕೆ ಬಂದವರಿಗೆಲ್ಲ ಯುದ್ಧೋತ್ಸಾಹ ಎಲ್ಲಿಂದ ಬರಬೇಕು? ಅಥ ವ್ಯವಸ್ಥಿತಾನ್ ದೃಷ್ಟ್ವಾ ಧಾರ್ತರಾಷ್ಟ್ರಾನ್ ಕಪಿಧ್ವಜಃ | ಪ್ರವೃತ್ತೇ ಶಸ್ತ್ರಸಂಪಾತೇ ಧನುರುದ್ಯಮ್ಯ ಪಾಂಡವಃ || ೨೦ ಹೃಷೀಕೇಶಂ ತದಾ ವಾಕ್ಯಮಿದಮಾಹ ಮಹೀಪತೇ | ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯಮೇಽಚ್ಯುತ || ೨೧ ಯಾವದೇತಾನ್ ನಿರೀಕ್ಷೇಽಹಂ ಯೋದ್ಧುಕಾಮಾನವಸ್ಥಿತಾನ್ | ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ||೨೨ ಯೋತ್ಸ್ಯಮಾನವೇಕ್ಷೇಹಂ ಯ ಏತೇತ್ರ ಸಮಾಗತಾಃ ಧಾರ್ತರಾಷ್ಟ್ರಸ್ಯ ದುರ್ಬುದ್ಧೇಯುದ್ಧೇ ಪ್ರಿಯಚಿಕೀರ್ಷವಃ || ೨೩ ಆಗ ಯುದ್ಧಕ್ಕೆ ಸಿದ್ಧವಾಗಿರುವ ಕೌರವಸೇನೆಯ ಕಡೆ ನೋಡಿ ಕಪಿಧ್ವಜನಾದ ಅರ್ಜುನ, ತಾನು ಶಸ್ತ್ರಪ್ರಯೋಗಕೆ ಮನಮಾಡಿ ಕೃಷ್ಣನ ಕೇಳಿದ-“ಎಲೈ ಅಚ್ಯುತ! ಯುದ್ಧಮುಖದಿ ಇರುವವರಾರು? ಶತ್ರುಸೈನ್ಯದಲಿ ನಮ್ಮನ್ನೆದುರಿಸಿ ನಿಲ್ಲಲು ಬಂದವರ್ಯಾರ್ಯಾರು? ರಥವನು ಎರಡೂ ಸೈನ್ಯದ ಮಧ್ಯದಿ ನಿಲ್ಲಿಸು, ನೋಡುವೆ ಅವರನ್ನು ದುಷ್ಟನಾದ ದುರ್ಯೋಧನ ಪಕ್ಷದಿ ಕಾದಲು ಬಂದಿರುವವರನ್ನು” ಕೃಷ್ಣನು ಕೂಡಲೆ ರಥವನು ಎರಡೂ ಸೈನ್ಯದ ಮಧ್ಯದಿ ನಿಲಿಸಿದನು ಅರ್ಜುನ ತಾನು ಕುತೂಹಲದಿಂದ ಎಲ್ಲರ ದಿಟ್ಟಿಸಿ ನೋಡಿದನು! ಯುದ್ಧಕ್ಕೆ ಸಿದ್ಧವಿರುವ ಸೂಚನೆಯಾಗಿ ಎರಡೂ ಪಕ್ಷಗಳಲ್ಲಿನ ವೀರರು ತಮ್ಮ ತಮ್ಮ ಶಂಖಗಳನ್ನು ಊದಿ ಸೂಚನೆ ಕೊಟ್ಟಾಯಿತು. ಆದರೆ, ಯುದ್ಧದ ನಿಯಮಗಳ ಪ್ರಕಾರ ಯುದ್ಧವನ್ನು ಪ್ರಾರಂಭಿಸಲು ಉಭಯ ಸೇನೆಗಳ ದಂಡನಾಯಕರು ಒಪ್ಪಿಗೆ ಸೂಚಿಸಬೇಕು. ಅವರು ಕೈಬೀಸಿದ ತಕ್ಷಣ ಹೋರಾಟಕ್ಕೆ ಮುನ್ನುಗ್ಗಬೇಕು. ಯುದ್ಧ ಇನ್ನೇನು ಶುರುವಾಗಬೇಕೆನ್ನುವಾಗ, ಅರ್ಜುನನಲ್ಲಿ ವಿಚಿತ್ರವಾದ ಬಯಕೆಯೊಂದು ಮೂಡುತ್ತದೆ. ಅವನಿಗೆ ತಮ್ಮ ವಿರುದ್ಧ ಹೋರಾಡಲು ಬಂದಿರುವ ವೀರರು ಯಾರೆಂಬುದನ್ನು ನೋಡುವ ಕುತೂಹಲ. ಅದೂ ಅಲ್ಲದೆ ದುಷ್ಟನಾದ ದುರ್ಯೋಧನನಿಗೆ ಯುದ್ಧದಲ್ಲಿ ಸಹಾಯ ಮಾಡಲು ಬಂದಿರುವವರನ್ನು ನೋಡಬೇಕೆಂದೂ, ರಥವನ್ನು ಎರಡೂ ಸೈನ್ಯದ ಮಧ್ಯೆ ನಿಲ್ಲಿಸಬೇಕೆಂದೂ, ತನ್ನ ಸಾರಥಿಯಾಗಿದ್ದ ಶ್ರೀಕೃಷ್ಣನನ್ನು ಕೇಳಿಕೊಂಡನು. ಅರ್ಜುನನ ಈ ವಿಚಿತ್ರವಾದ ಕೋರಿಕೆಯನ್ನು ಕೇಳಿ ಕೃಷ್ಣನಿಗೆ ಆಶ್ಚರ್ಯವಾದರೂ ಅರ್ಜುನನ ಕೋರಿಕೆಯನ್ನು ನೆರವೇರಿಸುವುದಕ್ಕಾಗಿ ರಥವನ್ನು ಎರಡೂ ಸೈನ್ಯದ ಮಧ್ಯೆ ತಂದು ನಿಲ್ಲಿಸಿದನು. ಯುದ್ಧವನ್ನು ಶುರುಮಾಡದೆ ಹೀಗೆ ಎರಡೂ ಸೈನ್ಯದ ಮಧ್ಯಕ್ಕೆ ಬಂದು ನಿಂತ ಕೃಷ್ಣಾರ್ಜುನರ ರಥವನ್ನು ನೋಡಿ ಎರಡೂ ಪಕ್ಷಗಳಲ್ಲಿದ್ದವರಿಗೆ ಬಹಳ ಆಶ್ಚರ್ಯವಾಗುತ್ತದೆ. ತಮ್ಮ ಯುದ್ಧೋತ್ಸಾಹವನ್ನು ಕ್ಷಣಕಾಲ ಅದುಮಿಟ್ಟುಕೊಂಡು ಯಾರೂ ತುಟಿ ಪಿಟಕ್ಕೆನ್ನದೆ ಕುತೂಹಲದಿಂದ ಸುಮ್ಮನೆ ನೋಡುತ್ತಿರುತ್ತಾರೆ. ಅರ್ಜುನನು ಕೂಡ ದುಷ್ಟನಾದ ದುರ್ಯೋಧನನ ಪಕ್ಷದಲ್ಲಿ ತಮ್ಮನ್ನೆದುರಿಸಿ ನಿಂತು ಹೋರಾಡಲು ಬಂದಿರುವ ವೀರಾಧಿವೀರರನ್ನು ಕುತೂಹಲದಿಂದ ದಿಟ್ಟಿಸಿ ನೋಡುತ್ತಿದ್ದಂತೆ ಅವನ ಮನಸ್ಸು ವಿಚಲಿತವಾಗುತ್ತದೆ. ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ | ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ || ೨೪ ಭೀಷ್ಮದ್ರೋಣ ಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ | ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ || ೨೫ ತತ್ರಾಪಶ್ಯತ್ ಸ್ಥಿತಾನ್ ಪಾರ್ಥ ಪಿತೃನಥ ಪಿತಾಮಹಾನ್ | ಆಚಾರ್ಯನ್ಮಾತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ ೨೬ ಶೃಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ | ತಾನ್ ಸಮೀಕ್ಷ್ಯ ಸ ಕೌಂತೇಯಃ ಸರ್ವಾನ್ ಬಂಧೂನವಸ್ಥಿತಾನ್ || ೨೭ ಸಂಜಯ ಹೇಳಿದ-“ದೊರೆಯೇ! ಕೇಳು, ಗುಡಾಕೇಶನ ಕೋರಿಕೆಗೆ ಹೃಷೀಕೇಶ ರಥ ತಂದು ನಿಲಿಸಿದನು, ಸೈನ್ಯದ ಮಧ್ಯದಿ, ಚೆಲ್ಲಿ ನಗೆ ಭೀಷ್ಮರು, ದ್ರೋಣರು, ವೀರರೆಲ್ಲರೂ ಎದುರಲಿ ಕಾಣುವ ತೆರದಲ್ಲಿ ರಥವನು ನಿಲ್ಲಿಸಿ ಹೇಳಿದ-‘ಪಾರ್ಥಾ! ನೋಡು ಕುರುಗಳನು’ ಎನುತಲ್ಲಿ ಹಿರಿಯರು ಗುರುಗಳು ಗೆಳೆಯರು ಮಕ್ಕಳು ಬಂಧು-ಬಾಂಧವರು ರಣದಲ್ಲಿ ಎದುರುಬದುರು ಕಾದಾಡಲು ಆಯುಧ ಹಿಡಿದು ನಿಂತುಕೊಂಡಿರಲಲ್ಲಿ ಎರಡೂ ಸೈನ್ಯದೊಳಿದ್ದವರನ್ನು ಕಂಡು ಅರ್ಜುನನು ಬೆರಗಾದ ಸ್ವಜನರನ್ನು ಕಂಡೊಡನೆಯೆ ಅವನು, ಅಪಾರ ಚಿಂತೆಗೆ ಒಳಗಾದ! ಸಂಜಯನು ಶ್ರೀಕೃಷ್ಣನನ್ನು ಹೃಷೀಕೇಶ (ಇಂದ್ರಿಯಗಳ ಒಡೆಯ) ಎಂತಲೂ ಅರ್ಜುನನನ್ನು ಗುಡಾಕೇಶ (ನಿದ್ದೆಯನ್ನು ಗೆದ್ದಿರುವ ವೀರ) ಎಂತಲೂ ಕರೆಯುತ್ತಾನೆ. ನಿದ್ದೆಯನ್ನು ಗೆದ್ದವನೆಂದರೆ ನಿದ್ದೆ ಮಾಡುವುದಿಲ್ಲವೆಂದು ಅರ್ಥವಲ್ಲ. ಅಗತ್ಯಕ್ಕೆ ತಕ್ಕಷ್ಟು ನಿದ್ದೆ ಮಾಡುವವನು ಮತ್ತು ಅಗತ್ಯವಾದಾಗ ಕೂಡಲೆ ನಿದ್ದೆಯಿಂದ ಎಚ್ಚೆತ್ತುಕೊಳ್ಳುವವನು, ಚುರುಕುಮತಿ ಎಂದರ್ಥ. ಅರ್ಜುನನ ಕೋರಿಕೆ ಮೇರೆಗೆ ಕೃಷ್ಣನು ರಥವನ್ನು ಎರಡೂ ಸೈನ್ಯದ ಮಧ್ಯೆ ತಂದು ನಿಲ್ಲಿಸಲು, ಯುದ್ಧದಲ್ಲಿ ಹೋರಾಡಲು ಬಂದಿದ್ದ ಹಿರಿಯರು, ಗುರುಗಳು, ಗೆಳೆಯರು, ಬಂಧು-ಬಾಂಧವರು, ಅವರ ಮಕ್ಕಳು ಇವರನ್ನೆಲ್ಲ ಕಂಡ ಅರ್ಜುನ ಬೆರಗಾಗಿ, ಎರಡೂ ಸೈನ್ಯಗಳಲ್ಲಿದ್ದ ಸ್ವಜನರನ್ನು ಕಂಡು, ಇವರನ್ನೆಲ್ಲ ತಾನು ಕೊಲ್ಲಬೇಕೆ? ಎಂದು ಅಪಾರ ಚಿಂತೆಗೆ ಒಳಗಾದ. ಈ ಮಾತುಗಳು ಮಾನವೀಯ ದೃಷ್ಟಿಯಲ್ಲಿ ಉತ್ತಮವಾದುವೇನೋ ಸರಿ. ಆದರೆ, ಯುದ್ಧದ ಇಂತಹ ವಿಷಮ ಪರಿಸ್ಥಿತಿಯಲ್ಲಿ ಕ್ಷತ್ರಿಯನಾದ ಅರ್ಜುನನಲ್ಲಿ ಇಂತಹ ಭಾವನೆ ಸುಳಿಯಬಾರದಿತ್ತೇನೋ! ಅದೇಕೋ ಏನೋ ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿದ್ದ ಅಲ್ಲಿದ್ದವರ ಮೇಲಿನ ವ್ಯಾಮೋಹವೆಲ್ಲ ಮೇಲೆದ್ದು ಬಂದು ಅವನನ್ನು ಕಂಗೆಡಿಸಿದವು. ಯುದ್ಧ ಮಾಡಲೆಂದೇ ಬಂದಿರುವಂತಹ, ಕ್ಷಾತ್ರಧರ್ಮವನ್ನು ಎತ್ತಿಹಿಡಿದು, ಯುದ್ಧದಲ್ಲಿ ಶತ್ರುಸೈನ್ಯವನ್ನು ಚೆಂಡಾಡಬೇಕೆಂಬ ಕ್ಷತ್ರಿಯ ಭಾವಗಳು ಅವನಿಂದ ಮರೆಯಾದವು. ಅವನೀಗ ಕ್ಷತ್ರಿಯನಾಗಿ ಯೋಚಿಸದೆ ಮಾನವತೆಯುಳ್ಳ ಮನುಷ್ಯನಾಗಿ ಯೋಚಿಸುತ್ತಾನೆ. ಅವನಲ್ಲಿದ್ದ ಮಾನವೀಯ ಭಾವನೆಗಳು ಹೊರಬಂದು ಅವನನ್ನು ಅಪಾರವಾದ ಚಿಂತೆಯ ಮಡುವಿನಲ್ಲಿ ಮುಳುಗುವಂತೆ ಮಾಡಿದವು. ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ | ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ || ೨೮ ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ | ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ || ೨೯ ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ | ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ || ೩೦ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ | ನ ಚ ಶ್ರೇಯೋಽನುಪಶ್ಯಾಮಿ ಹತ್ವಾ ಸ್ವಜನಮಾಹವೇ || ೩೧ ಅರ್ಜುನ ವಿಷಾದದಿಂದಲಿ ಕೇಳಿದ-“ಕೃಷ್ಣಾ! ಮನ ಹಿಂಜರಿಯುತಿದೆ ಬಂಧು-ಬಾಂಧವರ ಸ್ವಜನರ ಕಂಡು, ನನ್ನ ಶರೀರವು ಸೊರಗುತಿದೆ ಬಾಯಿ ಒಣಗುತಿದೆ, ದೇಹ ನಡುಗುತಿದೆ, ದೇಹದ ಚರ್ಮವು ಸುಡುತಲಿದೆ ಗಾಂಡೀವವು ಕೈಯಿಂದ ಜಾರುತಿದೆ, ದಿಕ್ಕುತೋಚದಂತಾಗುತಿದೆ ಕೇಶವ! ನಿಲ್ಲಲು ಆಗದಾಗುತಿದೆ, ಮನಸ್ಸು ಭ್ರಮೆಯಲಿ ಸುತ್ತುತಿದೆ ಅಪಶಕುನಗಳೇ ಎಲ್ಲೆಡೆ ಕಾಣುತ ಮನಕೆ ಮಬ್ಬು ಆವರಿಸುತಿದೆ ಯುದ್ಧದಿ ಸ್ವಜನರ ಕೊಂದರೆ ನನಗೆ, ಯಾವ ಶ್ರೇಯಸ್ಸು ದೊರಕುವುದು? ರಾಜ್ಯಭೋಗಗಳ ಅನುಭವಿಸಿದರೆ ಏನು ಪ್ರಯೋಜನವಾಗುವುದು? ಅರ್ಜುನನೀಗ ಯುದ್ಧಕ್ಕೆ ನಿಂತಿರುವ ಕ್ಷತ್ರಿಯನಾಗಿಯಲ್ಲದೆ, ಮಾನವೀಯ ಗುಣವುಳ್ಳ ಸಾಮಾನ್ಯ ಮನುಷ್ಯನಾಗಿ ಯೋಚಿಸುತ್ತಿದ್ದಾನೆ. ಆದ್ದರಿಂದಲೇ ಸ್ವಜನರನ್ನು ನೋಡುತ್ತಿದ್ದಂತೆ ವಿಷಾದದಿಂದ ಅವನ ದೇಹ-ಮನಸ್ಸುಗಳು ಹತೋಟಿ ತಪ್ಪಿದವು. ಬಂಧು-ಬಾಂಧವರನ್ನು, ಸ್ವಜನರನ್ನು ಕಂಡು, ಬಾಯಿ ಒಣಗಿ, ದೇಹ ನಡುಗಿ ಕೈಯಿಂದ ಗಾಂಡೀವವು ಜಾರತೊಡಗಿ ದಿಕ್ಕುತೋಚದಂತಾದ. ಅವನ ಮನಸ್ಸು ಭ್ರಮೆಯಲ್ಲಿ ಮುಳುಗಿ, ಅವನಿಗೆ ಯುದ್ಧ ಮಾಡುವುದೇ ಬೇಡವೆನಿಸಿಬಿಡುತ್ತದೆ. ಯುದ್ಧದ ಉತ್ಸಾಹವನ್ನು ಕುಗ್ಗಿಸಿದ ಸ್ವಜನ ವ್ಯಾಮೋಹ, ಅರ್ಜುನನನ್ನು ಇನ್ನಿಲ್ಲದಂತೆ ಕಾಡತೊಡಗುತ್ತದೆ. ಈ ರೀತಿ ಸ್ವಜನರನ್ನು ಕೊಲ್ಲುವುದರಿಂದ ಏನು ತಾನೆ ಉಪಯೋಗವಾಗುತ್ತದೆ? ಇವರನ್ನೆಲ್ಲ ಕೊಂದು ಅನುಭವಿಸುವಂತಹ ರಾಜ್ಯಭೋಗಗಳಿಂದ ಪ್ರಯೋಜನವೇನು? ಎಂದು ವಿಷಾದದಿಂದ ಶ್ರೀಕೃಷ್ಣನನ್ನು ಪ್ರಶ್ನಿಸುವನು ಮತ್ತು ತನ್ನ ಮನಸ್ಸಿನಲ್ಲುಂಟಾಗಿರುವ ತಲ್ಲಣವನ್ನು ಹೇಳಿಕೊಳ್ಳುವನು. ಈ ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲೂ ರಾಕ್ಷಸೀ ಗುಣಗಳು, ಮಾನವೀಯ ಗುಣಗಳು, ದೈವೀ ಗುಣಗಳು ಇದ್ದೇ ಇರುತ್ತವೆ. ಸುಪ್ತ ಮನಸ್ಸಿನಲ್ಲಿ ಅಡಗಿರುವ ಈ ಗುಣಗಳು ಹೊರಬರಬೇಕಷ್ಟೆ. ಯುದ್ಧದ ನಿರರ್ಥಕತೆಯನ್ನು ಅರಿತುಕೊಂಡಿರುವವರಲ್ಲಿ ಮಾತ್ರ ಇಂತಹ ಮಾನವೀಯ ಗುಣಗಳು ಹೊರಹೊಮ್ಮುತ್ತವೆ. ಆದರೆ, ಶತ್ರುಗಳೊಂದಿಗೆ ಯುದ್ಧಮಾಡಲೆಂದೇ ಬಂದಿರುವ, ಅದಕ್ಕಾಗಿ ಅಪಾರ ಶ್ರಮವಹಿಸಿ, ವಿವಿಧ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು, ಯುದ್ಧ ಮಾಡುವುದನ್ನೇ ತನ್ನ ಧರ್ಮವನ್ನಾಗಿಸಿಕೊಂಡಿರುವ ಅರ್ಜುನನಲ್ಲಿ ಇಂತಹ ಭಾವಗಳು ಹೊರಹೊಮ್ಮಿದ್ದು ಅಚ್ಚರಿಯೇ ಸರಿ! ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ | ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗ್ಯೇರ್ಜೀವಿತೇನ ವಾ || ೩೨ ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ | ತ ಇಮೇಽವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾಧನಾನಿ ಚ || ೩೩ ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ | ಮಾತುಲಾಃ ಶ್ವಶುರಾಃ ಪೌತ್ರಾ ಶ್ಯಾಲಾಃ ಸಂಬಂಧಿನಸ್ತಥಾ || ೩೪ ಏತಾನ್ನ ಹಂತುಮಿಚ್ಛಾಮಿ ಘ್ನತೋಽಪಿ ಮಧುಸೂದನ | ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ || ೩೫ ಗೋವಿಂದಾ! ಜಯ ಬೇಡವಾಗುತಿದೆ, ರಾಜ್ಯಸುಖವು ಬೇಡೆನ್ನುತಿದೆ ರಾಜ್ಯಸುಖದಿಂದ ಏನು ಪ್ರಯೋಜನ? ಎಂದು ನನ್ನ ಮನ ಕೇಳುತಿದೆ ಯಾರಿಗಾಗಿ ಈ ರಾಜ್ಯಭೋಗ, ಸುಖ ಬೇಕೆನಿಸುವುದೊ ಅವರುಗಳೇ ತನುಮನಧನಗಳ ತ್ಯಾಗವ ಮಾಡಿ ಯುದ್ಧಕೆ ನಿಂತಿರುವುದು ಸುಳ್ಳೆ? ಗುರುಗಳು, ಹಿರಿಯರು, ನೆಂಟರು, ಇಷ್ಟರು ಎಲ್ಲರು ಇರುವರು ಕಣದಲ್ಲಿ ಸೋದರಮಾವರು, ಭಾವಮೈದುನರು, ಮಕ್ಕಳು ಮರಿಗಳು ಎದುರಲ್ಲಿ ಮಧುಸೂದನ! ಅವರೆನ್ನನು ಕೊಲ್ಲಲಿ, ಅವರನು ನಾ ಕೊಲ್ಲುವುದಿಲ್ಲ ಮೂರುಲೋಕಗಳ ರಾಜ್ಯ ಸಿಕ್ಕರೂ ಕೊಲ್ಲುವ ಇಚ್ಛೆಯು ಎನಗಿಲ! ಶತ್ರುಸೈನ್ಯದಲ್ಲಿದ್ದ ಗುರು-ಹಿರಿಯರನ್ನು, ಬಂಧು-ಬಳಗವನ್ನು ಕಂಡ ಅರ್ಜುನನು ಮಹಾದುಃಖದಿಂದ, ಈ ಗೆಲುವೂ ಬೇಡ, ರಾಜ್ಯವೂ ಬೇಡ, ರಾಜ್ಯಸುಖವೂ ಬೇಡ, ಸ್ವಜನರನ್ನು ಕೊಂದು ಸುಖಭೋಗಗಳನ್ನು ಅನುಭವಿಸುವುದರಿಂದ ಪ್ರಯೋಜನವೇನು? ಯಾರಿಗಾಗಿ, ಯಾರ ಸುಖ-ಸಂತೋಷಕ್ಕಾಗಿ ತಾನು ಹೋರಾಡಿ ಗೆಲುವು ಪಡೆಯಬೇಕೆಂದಿದ್ದನೋ ಅವರೇ ಎದುರು ನಿಂತಿದ್ದಾರೆ. ಈಗ ಈ ಯುದ್ಧದಲ್ಲಿ ಹೋರಾಡಿ, ಜಯಿಸಿ ಯಾರೆದುರು ತನ್ನ ವೈಭೋಗವನ್ನು ತೋರಿಸಿಕೊಳ್ಳಬೇಕಾಗಿರುವುದೋ ಅವರ ಕೊಂದುಹಾಕಿದರೆ ಮತ್ತೆ ಯಾರಿಗೆ ತನ್ನ ಸಾಧನೆಯನ್ನು ತೋರಿಸಿಕೊಳ್ಳುವುದು? ಕೊಲ್ಲುವುದರಿಂದ ತನಗೆ ಯಾವ ಶ್ರೇಯಸ್ಸು ದೊರೆಯುವುದು? ಎಂದು ಅರ್ಜುನನು ಯೋಚಿಸುತ್ತಾನೆ. ಇದು ಅವನಲ್ಲಿರುವ ಉದಾತ್ತ ಮಾನವೀಯ ಗುಣ. ಆದ್ದರಿಂದಲೇ ಅವನು ಕೌರವರು ನನ್ನನ್ನು ಕೊಂದರೆ ಕೊಲ್ಲಲಿ, ನಾನು ಮಾತ್ರ ಅವರನ್ನು ಕೊಲ್ಲುವುದಿಲ್ಲ. ಮೂರುಲೋಕಗಳ ಸುಖಭೋಗಗಳು ದೊರೆಯುತ್ತವೆಂದರೂ ತಾನು ಈ ಪಾಪಕಾರ್ಯವನ್ನು ಮಾಡಕೂಡದೆಂದು ನಿರ್ಧರಿಸುತ್ತಾನೆ. ರಾಜ್ಯ, ಸುಖ, ಭೋಗಗಳನ್ನು ಅನುಭವಿಸಬೇಕಾದರೆ ಸುತ್ತಮುತ್ತಲೂ ನೆಂಟರಿಷ್ಟರು, ಪ್ರಜೆಗಳು ಇವರೆಲ್ಲ ಇರಬೇಕು. ಅವರಿಗೆ ತಮ್ಮ ವೈಭೋಗವನ್ನು ತೋರಿಸಿಕೊಂಡು ಸುಖಪಡಬೇಕು. ಅದಿಲ್ಲದೆ ಹಾಳೂರಿಗೆ ರಾಜನಾದರೆ ಏನು ಪ್ರಯೋಜನ? ಅರ್ಜುನನ ವಾದಸರಣಿ ಇಷ್ಟವಾಗುತ್ತದೆ. ಅವನ ಆಲೋಚನೆ ಸರಿ. ಆದರೆ, ಅವನಿಗೆ ಕೀರ್ತಿ ಬೇಡವೆ?ಅರ್ಜುನನಲ್ಲಿ ಕೀರ್ತಿಯ ಹಸಿವು ಇದೆಯಾದರೂ ಅದನ್ನು ಈ ರೀತಿಯಾಗಿ ತಣಿಸಲು ಅವನ ಮನ ಹಿಂಜರಿಯುತ್ತದೆ. ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತೀಃ sಸ್ಯಾಜ್ಜನಾರ್ದನ | ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ || ೩೬ ತಸ್ಮಾನ್ನಾರ್ಹಾ ವಯಂ ಹಂತುಂ ಧಾರ್ತರಾಷ್ಟ್ರಾನ್ ಸ್ವಬಾಂಧವಾನ್ | ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ || ೩೭ ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ | ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ || ೩೮ ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ | ಕುಲಕ್ಷಯಕೃತಂ ದೋಷಂ ಪ್ರಪಶ್ಯಧ್ಭಿರ್ಜನಾರ್ದನ || ೩೯ ಹೇ! ಜನಾರ್ದನ! ಕೌರವಸೇನೆಯ ಮಂದಿಯ ಕೊಂದರೆ ಸುಖವೇನು? ಮನೆಗೆ ಬೆಂಕಿಯಿಟ್ಟವರ ಕೊಂದರೂ, ಪಾಪ ನಮಗೆ ಬರದಿರದೇನು? ಆದಕಾರಣ, ಕೇಳು ಮಾಧವ! ಸ್ವಜನರ ಕೊಲುವುದು ಹಿತವಿಲ್ಲ ಬಂಧುಜನರು ಆ ಕೌರವರನ್ನು ಕೊಂದರೆ ಸುಖ ದೊರೆಯುವುದಿಲ್ಲ ಜನಾರ್ದನ! ಅತಿಯಾಸೆಯ ಮಾಯೆಗೆ ಸಿಲುಕಿದ ಅವಿವೇಕಿಗಳವರು ಕುಲಕ್ಷಯ, ಮಿತ್ರದ್ರೋಹದ ದೋಷವ ಅರಿಯಲಾಗದಿರುವಂಥವರು ಕುಲದ ನಾಶದಿಂದಾಗುವ ಕೇಡನು ಬಲ್ಲ ನಾವು, ಆ ಪಾಪವನು ಅರಿತು ಮಾಡದೆ, ಹಿಂದಕೆ ಸರಿಯುವ ಭಾವನೆ ಸರಿಯಾಗಿರದೇನು? ಅರ್ಜುನ ತನ್ನ ವಾದವನ್ನು ಮುಂದುವರೆಸಿ ಹೇಳಿದ-“ಹೇ! ಜನಾರ್ದನ! ಕೌರವರು ನಮ್ಮ ಮನೆಗೆ ಬೆಂಕಿಯಿಟ್ಟಿರಬಹುದು. (ಅಂದು ಪಾಂಡವರು ತಾಯಿಯ ಸಮೇತ ವಾರಣಾವತದ ಅರಗಿನ ಮನೆಯಲ್ಲಿದ್ದಾಗ, ಕೌರವರು ಸಂಚು ಹೂಡಿ ಮನೆಗೆ ಬೆಂಕಿಯಿಟ್ಟು ಅವರನ್ನೆಲ್ಲ ಕೊಲ್ಲಲೆಳಸಿದ್ದರು. ಆದರೆ ದೈವವಶಾತ್ ಅವರು ಅಲ್ಲಿಂದ ಪಾರಾಗಿ ತಲೆಮರೆಸಿಕೊಂಡು ಕಾಡು-ಮೇಡುಗಳಲ್ಲಿ ಅಲೆದು, ಕಡೆಗೆ ಭಿಕ್ಷೆ ಬೇಡಿ ಬದುಕಿದ್ದರು) ಆದರೂ ಅವರನ್ನು ಕೊಂದರೆ ಪಾಪ ಬರುವುದಿಲ್ಲವೆ? ಅದರಿಂದ ಸಿಗುವ ಸುಖವಾದರೂ ಎಂತಹುದು? ಅವರು ತಪ್ಪು ಮಾಡಿದ್ದಾರೆಂದು ನಾವೂ ತಪ್ಪು ಮಾಡುವುದು ಸರಿಯೆ? ಆಸೆ ಮನುಷ್ಯನನ್ನು ಅಧೋಗತಿಗೆ ತಳ್ಳುತ್ತದೆ. ಅವರು ಕೇವಲ ಆಸೆಪಡಲಿಲ್ಲ. ದುರಹಂಕಾರದಿಂದ ಅವಿವೇಕಿಗಳಾಗಿ ವರ್ತಿಸಿದ್ದಾರೆ; ದ್ರೋಹಿಗಳಾಗಿದ್ದಾರೆ. ಆದರೂ ಅವರನ್ನು ಕೊಲ್ಲಲು ಮನಸ್ಸು ಬರುತ್ತಿಲ್ಲ. ಏಕೆಂದರೆ, ಅವರನ್ನು ಕೊಲ್ಲುವುದರಿಂದ ಕುಲಕ್ಷಯವಾಗುತ್ತದೆ. ನನ್ನಿಂದ ಕುಲನಾಶವಾಗುವುದು ನನಗಿಷ್ಟವಿಲ್ಲ. ಆದ್ದರಿಂದ ಸ್ವಜನರನ್ನು ನಾಶ ಮಾಡಿ ಕುಲನಾಶಕ್ಕೆ ಕೈಹಾಕದೆ ಯುದ್ಧದಿಂದ ಹಿಂದೆ ಸರಿಯಬೇಕೆಂದಿದ್ದೇನೆ. ಇದು ತಪ್ಪೇ?” ಎಂದು ಆರ್ದ್ರನಾಗಿ ಶ್ರೀಕೃಷ್ಣನನ್ನು ಪ್ರಶ್ನಿಸುತ್ತಾನೆ. ಅರ್ಜುನನ ವಾದ ಸರಿಯೆನಿಸುತ್ತದೆ. ಆಸೆಗೆ ಪಕ್ಕಾದ ಮನುಷ್ಯ, ತನ್ನ ಆಸೆಗಳ ಈಡೇರಿಕೆಗಾಗಿ, ಅಪಮಾರ್ಗವನ್ನು ಹಿಡಿಯುತ್ತಾನೆ. ಅಂತಹ ತಪ್ಪು ಮಾಡಿರುವ ಕೌರವರಂತೆ ತಾವೂ ನಡೆದುಕೊಂಡರೆ, ಅವರಿಗೂ ತಮಗೂ ವ್ಯತ್ಯಾಸವೇನಿದೆ? ಅಂದುಕೊಳ್ಳುತ್ತಾನೆ ಅರ್ಜುನ. ಇಂತಹ ಉತ್ತಮ ಭಾವನೆಗಳನ್ನು ಉಳಿಸಿಕೊಳ್ಳಲು ಅವನು ಯುದ್ಧದಿಂದ ವಿಮುಖನಾಗಲು ನಿರ್ಧರಿಸಿದ್ದಾನೆ. ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾ ಸನಾತನಾಃ | ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋಽಭಿಭವತ್ಯುತ || ೪೦ ಅಧರ್ಮಾಭಿಭವಾತ್ ಕೃಷ್ಣ ಪ್ರದುಷ್ಯಂತಿ ಕುಲಸ್ತ್ರೀಯಃ | ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ || ೪೧ ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ | ಪತಂತಿ ಪಿತರೋ ಹ್ಯೇಷಾಂ ಲುಪ್ತಪಿಂಡೋದಕಕ್ರಿಯಾಃ || ೪೨ ದೋಷ್ಯೆರೇತ್ಯೆಃ ಕುಲಘ್ನಾನಾಂ ವರ್ಣಸಂಕರಕಾರಕೈಃ | ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ || ೪೩ ಕುಲಕ್ಷಯದಿಂದ ನಾಶವಾಗುವುದು ಉಳಿಸಿಕೊಂಡಿರುವ ಕುಲಧರ್ಮ ಕುಲವನು ಅಧರ್ಮ ವ್ಯಾಪಿಸಿಕೊಳ್ಳದೆ ಬಿಡುವುದೆ? ಇದು ಯಾತರ ಕರ್ಮ? ಕೃಷ್ಣಾ! ಅಧರ್ಮ ವ್ಯಾಪಿಸಿಕೊಂಡರೆ ಕೆಡದಿರುವರೆ ಕುಲನಾರಿಯರು? ವೃಷ್ಣಿ ಕುಲೋದ್ಭವ! ಸ್ತ್ರೀಯರು ಕೆಟ್ಟರೆ ವರ್ಣಸಂಕರಕೆ ಕಾರಣರು ಕುಲದ ನಾಶವನು ಮಾಡಿದ ಮಂದಿಗೆ ರೌರವ ನರಕವು ದೊರಕುವುದು ಶ್ರಾದ್ಧ ತರ್ಪಣಗಳಿಲ್ಲದೆ ಪಿತೃಗಳು ಕೆಳಗೆ ಬೀಳುವರು ಸತ್ಯವಿದು ವರ್ಣಸಂಕರಕೆ ಕಾರಣವಾಗುವ ಕುಲನಾಶಕ ದೋಷಗಳಿಂದ ಜಾತಿಧರ್ಮ, ಕುಲಧರ್ಮಗಳೆಲ್ಲವು ನಾಶವಾಗುವುವು ಅದರಿಂದ! ಅರ್ಜುನನು ಯುದ್ಧದಿಂದ ಹಿಂದೆ ಸರಿಯಲು ನಿರ್ಧರಿಸಿ, ಯುದ್ಧದಿಂದಾಗುವ ಅನಾಹುತಗಳನ್ನು ಕೃಷ್ಣನ ಮುಂದಿಡಲು ಪ್ರಯತ್ನಿಸುತ್ತಾನೆ. ಇವೆಲ್ಲ ಕೃಷ್ಣನಿಗೆ ಗೊತ್ತಿಲ್ಲದ ಸಂಗತಿಗಳೇನಲ್ಲ. ಆದರೂ ಅರ್ಜುನ ತನ್ನ ಸಂದೇಹಗಳನ್ನು ಅವನ ಮುಂದಿಡುತ್ತಾನೆ. ಯುದ್ಧ ಮಾಡುವವನಿಗೆ ಯುದ್ಧದ ಪರಿಣಾಮಗಳ ಬಗ್ಗೆಯೂ ಗೊತ್ತಿರಬೇಕು. ಅರ್ಜುನನು ತನ್ನ ಮಾತುಗಳನ್ನು ಮುಂದುವರೆಸಿ, “ಯುದ್ಧ ನಡೆದು, ಒಂದು ವೇಳೆ ಕುಲನಾಶವನ್ನು ಮಾಡಿದ್ದಾದರೆ, ಎಲ್ಲೆಡೆ ಅಧರ್ಮ ವ್ಯಾಪಿಸಿಕೊಳ್ಳುವುದಿಲ್ಲವೆ? ಯುದ್ಧದಲ್ಲಿ ಪುರುಷರು ನಾಶವಾದರೆ ಅವರ ಸ್ತ್ರೀಯರ ಗತಿಯೇನು? ಹೆತ್ತವರ ಗತಿಯೇನು? ಅವರ ಮಕ್ಕಳು ಅನಾಥರಾಗುವುದಿಲ್ಲವೆ? ಸತ್ತವರ ಅಪರಕರ್ಮಗಳನ್ನು ನೆರವೇರಿಸುವವರು ಯಾರು? ಒಂದು ವೇಳೆ, ಪತಿಗಳ ಮರಣದ ನಂತರ ಕುಲನಾರಿಯರು ಕೆಟ್ಟರೆ ವರ್ಣಸಂಕರಕ್ಕೆ ಕಾರಣವಾಗುವುದಿಲ್ಲವೆ? ಇಷ್ಟೆಲ್ಲ ಪಾಪಗಳಿಗೆ ನಾನು ಬಾಧ್ಯನಾಗುತ್ತೇನೆ. ಆದ್ದರಿಂದ ಕುಲಕ್ಷಯವಾಗದಂತೆ ನೋಡಿಕೊಂಡರೆ ಒಳ್ಳೆಯದಲ್ಲವೆ?” ಎನ್ನುವನು. ಅರ್ಜುನನ ಯೋಚನಾಲಹರಿ ಮೆಚ್ಚುವಂಥದು. ವರ್ಣಾಶ್ರಮ ಪದ್ಧತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಕಾಲದಲ್ಲಿ ಅವನು ಈ ರೀತಿಯಾಗಿ ಯೋಚಿಸಿರುವುದು ನಿಜಕ್ಕೂ ಅಚ್ಚರಿಯುಂಟುಮಾಡುತ್ತದೆ. ವರ್ಣಸಂಕರವನ್ನು ಮಹಾಪಾಪ ಎಂದು ಪರಿಗಣಿಸುತ್ತಿದ್ದ ಕಾಲವದು. ಹೆಣ್ಣಿಗಾಗುವ ಅನ್ಯಾಯವನ್ನು ಕುರಿತು ಯೋಚಿಸುವ ಅವನ ಸ್ತ್ರೀಪರ ಚಿಂತನೆಯನ್ನು ಮೆಚ್ಚಲೇಬೇಕು. ಆ ಕ್ಷಣದಲ್ಲಿ ಅವನು ಕೌರವರಿಂದ ತಮಗಾದ ಅನ್ಯಾಯವನ್ನು ಮರೆತಿದ್ದಾನೆ. ಅಲ್ಲದೆ, ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆಯಾಗುವುದು ಸರಿಯಲ್ಲವೆಂಬ ಭಾವನೆಯೂ ಅವನಲ್ಲಿದೆ. ಉತ್ಸನ್ನ ಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ | ನರಕೇ ನಿಯತಂ ವಾಸೋ ಭವತೀತ್ಯನುಶುಶ್ರುಮ || ೪೪ ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ | ಯದ್ರಾಜ್ಯಸುಖಲೋಭೇನ ಹಂತುಂ ಸೃಜನಮದ್ಯತಾಃ || ೪೫ ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಯಃ | ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ || ೪೬ ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ | ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ || ೪೭ ಜನಾರ್ದನ! ಕುಲಧರ್ಮಗಳನ್ನು ನಾಶಮಾಡಿದಂತಹ ಜನರು ನರಕವಾಸಿಗಳಾಗುವರೆಂದು ತಿಳಿದಂತಹ ಜನ ಹೇಳುವರು ಅಯ್ಯೋ! ರಾಜ್ಯದ ಸುಖಲೋಭದಲಿ ಸ್ವಜನರ ಕೊಲ್ಲಲು ಮುಂದಾಗಿ ಮಹಾಪಾಪವನು ಮಾಡುತಲಿರುವೆವು, ಅರಿಯದೆ ನಾವುಗಳೊಂದಾಗಿ ಶಸ್ತ್ರವನ್ನು ತ್ಯಜಿಸುವೆ ನಾನಿಂದು ಪ್ರತೀಕಾರವನು ಹೊರದೂಡಿ ಶಸ್ತ್ರಪಾಣಿಗಳು ಕೌರವರೆನ್ನನು ಕೊಂದರೆ ಕೊಲ್ಲಲಿ, ಗುರಿಮಾಡಿ” ಹೇಳಿದ ಅರ್ಜುನ ಬಿಲ್ಲು-ಬಾಣಗಳ ಪಕ್ಕಕ್ಕಿಟ್ಟನು ರಥದಲ್ಲಿ ಯುದ್ಧವನ್ನು ಮಾಡೆನು ಎಂದೆನ್ನುತ ಕುಳಿತುಬಿಟ್ಟ ಋಜುಪಥದಲ್ಲಿ! ಅರ್ಜುನನ ಯೋಚನಾಲಹರಿ ಹೀಗೆಯೇ ಮುಂದುವರೆಯುತ್ತದೆ. ಕುಲನಾಶಕ್ಕೆ ಕಾರಣವಾಗುವುದರಿಂದ ತನಗೆ ರೌರವ ನರಕ ಪ್ರಾಪ್ತವಾಗುತ್ತದೆಂದೂ ಇದರಿಂದ ಇಹ-ಪರದಲ್ಲಿ ಯಾರಿಗೂ ಸುಖವಿಲ್ಲವೆಂದು ಅವನಿಗೆ ಅರಿವಾಗಿದೆ. ಆಗಿನ ಕಾಲದಲ್ಲಿ ಯುದ್ಧಮಾಡುತ್ತಿದ್ದವರೆಲ್ಲ ಪುರುಷರೇ. ಹಾಗಾಗಿ ಯುದ್ಧದಲ್ಲಿ ಸಾಯುತ್ತಿದ್ದವರೂ ಪುರುಷರೇ. ಅವರೇ ಅವರ ಕುಟುಂಬಗಳಿಗೆ ಆಧಾರಸ್ತಂಭಗಳು. ಅವರನ್ನು ಕೊಂದರೆ, ಅವರನ್ನೇ ಆಶ್ರಯಿಸಿರುವ ಮಂದಿ ಅನಾಥರಾಗುತ್ತಾರೆ. ಅನಾಥರಾದವರ ಶಾಪ, ಕೊಂದವರಿಗೆ ತಟ್ಟುವುದಿಲ್ಲವೆ? ರಾಜ್ಯಸುಖಕ್ಕೆ, ರಾಜ್ಯಭೋಗಕ್ಕೆ ಆಸೆಪಟ್ಟು ನಾವು ಅರಿಯದೆ ಮಹಾಪಾಪವನ್ನು ಮಾಡುತ್ತಿದ್ದೇವೆ. ಇಂತಹ ಅಕಾರ್ಯ ನಮ್ಮಿಂದಾಗುವುದು ಬೇಡ. ಆದ್ದರಿಂದ ನಾನು ಪ್ರತೀಕಾರವನ್ನು ಮರೆತು ಶಸ್ತ್ರತ್ಯಾಗ ಮಾಡುತ್ತಿದ್ದೇನೆ. ಶಸ್ತ್ರಪಾಣಿಗಳಾದ ಕೌರವರು ನನ್ನನ್ನು ಕೊಂದರೂ ಕೊಲ್ಲಲಿ. ನಾನು ಮಾತ್ರ ಯುದ್ಧಮಾಡುವುದಿಲ್ಲ ಎಂದು ಬಿಲ್ಲು-ಬಾಣಗಳನ್ನು ಪಕ್ಕಕ್ಕಿಟ್ಟು ಸುಮ್ಮನೆ ರಥದಲ್ಲಿ ಕುಳಿತನು. ಅರ್ಜುನನೀಗ ಕರುಣೆಯ ಸಾಕಾರಮೂರ್ತಿಯಾಗಿದ್ದಾನೆ. ಅವನಿಗೆ ದಿಕ್ಕೇತೋಚದಂತಾಗಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ. ಪ್ರಾರಂಭದಲ್ಲಿ ಯುದ್ಧಕ್ಕೆ ಸಿದ್ಧನಾಗಿ ಬಂದಿದ್ದ ಅರ್ಜುನ ಅದೆಷ್ಟು ಉತ್ಸಾಹದಿಂದ ರಥವನ್ನು ಎರಡೂ ಸೈನ್ಯದ ಮಧ್ಯೆ ನಿಲ್ಲಿಸುವಂತೆ ಕೃಷ್ಣನನ್ನು ಕೇಳಿಕೊಂಡಿದ್ದ. ಆದರೆ ಅಲ್ಲಿದ್ದವರನ್ನು ನೋಡಿ, ತನ್ನ ಕರ್ತವ್ಯವನ್ನು ಮರೆತು ಯುದ್ಧದಿಂದ ವಿಮುಖನಾಗುತ್ತಿದ್ದಾನೆ. ಮಾನವೀಯ ದೃಷ್ಟಿಯಿಂದ ನೋಡಿದರೆ ಅರ್ಜುನ ಇಷ್ಟವಾಗುತ್ತಾನೆ. ಆದರೆ, ಯುದ್ಧವೀರನಾದ, ಯುದ್ಧ ಮಾಡುವುದನ್ನೇ ತನ್ನ ಧರ್ಮವಾಗಿಸಿಕೊಂಡಿರುವವನಿಗೆ ಇದು ಶೋಭೆಯಲ್ಲ. ಅಲ್ಲದೆ ಪಾಂಡವರು ಬಾಲ್ಯದಿಂದಲೂ ಕೌರವರಿಂದ ನಾನಾ ವಿಧವಾಗಿ ಹಿಂಸಿಸಲ್ಪಟ್ಟು, ಅನೇಕ ಬಗೆಯ ಕಿರುಕುಳಗಳಿಗೆ ಒಳಗಾದಂಥವರು. ಕಾಟ ಕೊಟ್ಟವರನ್ನು ನಾಶಮಾಡಲೆಂದೇ ಎಷ್ಟೋ ಶ್ರಮಪಟ್ಟು ಶಸ್ತ್ರಾಸ್ತ್ರಗಳನ್ನೆಲ್ಲ ಗಳಿಸಿ, ಸಾಕಷ್ಟು ಪೂರ್ವಸಿದ್ಧತೆಯಿಂದಲೇ ಬಂದಂಥವನು ಅರ್ಜುನ. ಕಳಿಂಗ ಯುದ್ಧದಲ್ಲಿ ಅಶೋಕನಿಗೆ ಯುದ್ಧದ ನಂತರ ಜ್ಞಾನೋದಯವಾದರೆ, ಅರ್ಜುನನಿಗೆ ಯುದ್ಧ ಮಾಡುವ ಮೊದಲೇ ಜ್ಞಾನೋದಯವಾದಂತಿದೆ. ಇದು ಅರ್ಜುನನಲ್ಲಿ ಸುಪ್ತವಾಗಿ ಅಡಗಿರುವ ಮಾನವೀಯ ಗುಣದ ಅನಾವರಣ! ಅರ್ಜುನನ ಮಾನವೀಯಗುಣ ಇಷ್ಟವಾದರೂ, ಒಬ್ಬ ಕ್ಷತ್ರಿಯನಾದವನಿಗೆ ಇದು ಶೋಭೆ ತರದು. ಯುದ್ಧಕ್ಕೆಂದು ಬಂದ ಮೇಲೆ ವೀರಾವೇಶದಿಂದ ಹೋರಾಡಿ ಶತ್ರುಸೈನಿಕರನ್ನು ಕೊಲ್ಲುವುದೋ, ಅಥವಾ ಪ್ರಾಣತ್ಯಾಗ ಮಾಡುವುದೋ ವೀರನ ಕರ್ತವ್ಯವಲ್ಲವೆ? ಒಂದು ವೇಳೆ ಅರ್ಜುನ ಯುದ್ಧಮಾಡಲಿಲ್ಲವೆಂದಿಟ್ಟುಕೊಳ್ಳಿ. ಕೌರವರೇನಾದರೂ ಬುದ್ಧಿ ತಂದುಕೊಂಡು ಸನ್ಮಾರ್ಗದಲ್ಲಿ ನಡೆಯುವರೆ? ಆಗ ಅವರು ತಾವು ಮಾಡಿದ್ದೇ ಸರಿಯೆಂಬ ಭಾವನೆಯಿಂದ ಇನ್ನಷ್ಟು ಅರಾಜಕತೆಯನ್ನು ಸೃಷ್ಟಿಸುವುದಿಲ್ಲವೆ? ಇದರಿಂದ ಪ್ರಜೆಗಳು ನೆಮ್ಮದಿಯಾಗಿ ಬದುಕಲು ಸಾಧ್ಯವೆ? ಇಂತಹ ಪರಿಸ್ಥಿತಿಯಲ್ಲಿ ಯುದ್ಧದ ಸೂತ್ರಧಾರನಾದ ಶ್ರೀಕೃಷ್ಣನ ಪಾತ್ರವೇನು? ಅವನು ಇದನ್ನು ಹೇಗೆ ನಿಭಾಯಿಸುತ್ತಾನೆ? ಶ್ರೀಕೃಷ್ಣನು ಇದನ್ನು ಅರ್ಜುನನ ಹೃದಯದೌರ್ಬಲ್ಯವೆಂದು ತಿಳಿಯುತ್ತಾನೆ. ಈ ದೌರ್ಬಲ್ಯಕ್ಕೆ ಸರಿಯಾದ ಮದ್ದನ್ನು ಅರೆಯಬೇಕಿದೆ. ಅದನ್ನು ಅವನಿಗೆ ಉಣಿಸಬೇಕಿದೆ. ಯುದ್ಧಮಾಡುವುದಿಲ್ಲ ಎಂದವನನ್ನು ಯುದ್ಧಮಾಡುವಂತೆ ಪ್ರೇರೇಪಿಸಲು ತನ್ನ ಬೋಧನೆಯೆಂಬ ಸಂಜೀವಿನಿಯನ್ನು ನೀಡಬೇಕಾಗಿದೆ. ಇಲ್ಲಿಂದ ಮುಂದೆ ಶ್ರೀಕೃಷ್ಣ ಅದೇ ಕಾರ್ಯದಲ್ಲಿ ನಿರತನಾಗುತ್ತಾನೆ. ಅವನಿಗೆ ರಣರಂಗದಲ್ಲಿಯೇ ಭಗವಂತನು ತತ್ವಗಳನ್ನು ಬೋಧಿಸಲು ಪ್ರಾರಂಭಿಸುತ್ತಾನೆ.

Reviews

ಲೋಹಿಯಾ ಅವರ ಈ ನುಡಿಗಳನ್ನು ನೋಡಿ : “ಭಗವದ್ಗೀತೆಯಂಥ ಜಗತ್ತಿನ ಮಹಾಗೀತವನ್ನೇ ಹಾಡಿದ ಕೃಷ್ಣ ಯಾರಿಗೆ ಅಪರಿಚಿತ? ತತ್ವವನ್ನು ಸಂಗೀತವಾಗಿಸಿದ, ಚಿಂತನವನ್ನು ಕಥೆ ಮಾಡದೆ, ಕಾವ್ಯ ಮಾಡದೆ, ನೇರ ಹಾಡಿದ ಜಗತ್ತಿನ ಏಕೈಕ ದೇಶ ಇದು”...ಕಾವ್ಯ ಮತ್ತು ತತ್ವಗಳ ಮೇಳನದ ಬಗ್ಗೆ ಲೋಹಿಯಾ ನುಡಿಗಳು ಅತ್ಯಂತ ಗಮನಾರ್ಹ! ಪದಕೋಶದ ಅರ್ಥವ್ಯಾಪ್ತಿಯು ನಿರ್ದಿಷ್ಟ ಮತ್ತು ಖಚಿತ! ಪದಮೈತ್ರಿಯ ಅರ್ಥವ್ಯಾಪ್ತಿಯು ಸಂದಿಗ್ಧ ಮತ್ತು ಬಹುಳಾರ್ಥಗರ್ಭಿತ! ಭಗವದ್ಗೀತೆಯ ಪದಮೈತ್ರಿಗೆ ಬಹುರೂಪಾತ್ಮಕ ವ್ಯಾಖ್ಯಾನಗಳು ಬರುವುದಕ್ಕೆ ಈ ಸಂದಿಗ್ಧ ಮತ್ತು ಬಹುಳಾರ್ಥಗರ್ಭಿತ ಮಾರ್ಗವೇ ಕಾರಣವಾಗಿದೆ. ಭಗವದ್ಗೀತೆಯ ಶ್ಲೋಕವನ್ನು ಹಿಡಿದು ನಾವು ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ನೆಲೆಗಳಲ್ಲಿ ವಿವರಣೆ ಕೊಡಬಹುದು. ಭಗವದ್ಗೀತೆಯು ಯಜ್ಞಪರವೇ ಅಥವಾ ಯಜ್ಞವಿರೋಧಿಯೇ? ಅರ್ಜುನ! ಆಲಿಸು ದ್ರವ್ಯಯಜ್ಞಕೂ ಜ್ಞಾನಯಜ್ಞ ಶ್ರೇಯಸ್ಕರವು ಎಲ್ಲ ಕರ್ಮಗಳು ಜ್ಞಾನದಲ್ಲಿಯೇ ಪರ್ಯವಸಾನ ಹೊಂದುವುವು! (೪-೩೩) ಧರ್ಮದಿಂದಲಿ ಕೂಡಿರುವಂತಹ ಈ ಸಂವಾದವನರಿವವರು ಜ್ಞಾನಯಜ್ಞದ ಮೂಲಕ ನನ್ನನೇ ಮನದಿ ಭಜಿಸುವರು! (೧೮-೭೦) -ಗೋವಿಂದ ಗೀತೆಯ ಸಾಲುಗಳು ಮೇಲ್ಕಂಡ ಭಗವದ್ಗೀತೆಯ ಸಾಲುಗಳನ್ನು ಮನನ ಮಾಡಿದರೆ, ವೈದಿಕಾಚರಣೆಯ ಹೋಮ ಹವನಾದಿ ಕರ್ಮಕಾಂಡಗಳು (=ದ್ರವ್ಯಯಜ್ಞ) ಕಳಚಿದ ಪೊರೆಯಾಗುತ್ತವೆ. ‘ಭಗವದ್ಗೀತೆ’ಗೆ ಸಂವಾದ ಜ್ಞಾನಯಜ್ಞವೆಂಬ ಪರ್ಯಾಯ ಶೀರ್ಷಿಕೆಯೂ ಇದೆ. ತನ್ನನ್ನು ತಾನು ಸುಟ್ಟುಕೊಂಡು ಬೂದಿಯಿಂದ ಮರುಹುಟ್ಟು ಪಡೆಯುವ ಫೀನಿಕ್ಸ್ ಪಕ್ಷಿಯಂತೆ, ಭಗವದ್ಗೀತೆಯು ತನ್ನನ್ನು ತಾನು ನಿರಸನಗೊಳಿಸಿಕೊಂಡು ದ್ರವ್ಯಯಜ್ಞದಿಂದ ಜ್ಞಾನಯಜ್ಞದೆಡೆಗೆ ತುಡಿಯುವ ಆಶಯವನ್ನು ಹೊಂದಿದೆ. “ಶ್ರುತಿಗಳ ಭಿನ್ನಾಭಿಪ್ರಾಯವು ಜೀವಿಯ ಬುದ್ಧಿಜಲವನು ಕದಡುವುವು ನಿಶ್ಚಲ ಮನದಲಿ ನಿಂತದ್ದಾದರೆ ಯೋಗಮಾರ್ಗ ಕೈಹಿಡಿಯುವುವು” (೨-೫೩) ವೇದವಾದಗಳಿಂದ ಜಡ್ಡುಗಟ್ಟಿದ ಬುದ್ಧಿ ಆತ್ಮದಲ್ಲಿ ನೆಲೆ ನಿಂತ ಮೇಲೆಯೇ ಪರಮಾರ್ಥಜ್ಞಾನವು ಪ್ರಾಪ್ತಿಯಾಗುವುದು ಎಂಬ ಗೀತಾಚಾರ್ಯನ ಎಚ್ಚರಿಕೆಯ ವಾಣಿಯನ್ನು ಯಾರೂ ಮರೆಯಬಾರದು. ನಾಲ್ಕು ವರ್ಣಗಳು ಜನ್ಮಜಾತವೇ? ಸ್ವಭಾವಜಾತವೇ? ವರ್ಣಾಶ್ರಮ ಪದ್ಧತಿ ಮತ್ತು ಜಾತಿಪದ್ಧತಿಗಳ ನಡುವಣ ಜನ್ಯ-ಜನಕ ಸಂಬಂಧವನ್ನು ಪ್ರತಿಪಾದಿಸುವವರು ಭಗವದ್ಗೀತೆಯನ್ನು ವರ್ಣಾಶ್ರಮ ಪದ್ಧತಿಯ ಗ್ರಂಥವೆಂದು ಹೇಳುವುದುಂಟು! ಇದು ಕೂಡಾ ಪದಮೈತ್ರಿಯನ್ನು ಮನಸೇಚ್ಛೆಯಾಗಿ ಅರ್ಥೈಸಿದ್ದರ ಫಲ! ಅರ್ಜುನ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಕರ್ಮವಿಭಾಗಗಳು ಅವರವರ ಭಾವಕ್ಕನುಗುಣವಾದ ಸ್ವಭಾವಸಂಭವ ಗುಣಂಗಳು! (೧೮-೪೧) ಗುಣಕರ್ಮಭೇದವ ಆಧರಿಸಿ ನಾಲ್ಕು ವರ್ಣಗಳ ನಾನು ಸೃಷ್ಟಿಸಿದೆ ಕರ್ತೃಕಾರಕನು ನಾನಾಗಿದ್ದರೂ ಅಕರ್ತೃ ಅವಿಕಾರಿ ಸತ್ಯವಿದೆ! (೪-೧೩) ಭಗವದ್ಗೀತೆಯ ೧೮ನೇ ಅಧ್ಯಾಯದ ೪೨, ೪೩, ೪೪ನೇ ಶ್ಲೋಕಗಳಲ್ಲಿ ‘ಸ್ವಭಾವಜಂ’ ಎಂಬ ಮಾತುಗಳನ್ನು ಮತ್ತೆ ಮತ್ತೆ ಬಳಸಲಾಗಿದೆ. ‘ಸ್ವಭಾವಜಂ’ ಎಂಬ ಕೃಷ್ಣನ ಶುದ್ಧಚಿಂತನವನ್ನು ಮುಂದಿನ ವಿದ್ವಾಂಸರು ‘ಹುಟ್ಟಿನಿಂದ’ ಎಂಬ ತಾತ್ಪರ್ಯಕ್ಕೆ ತಿರುಚಿದ್ದು, ಶ್ಲೋಕವಿರುದ್ಧ ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ. ಭಗವದ್ಗೀತೆ ‘ಸ್ವಭಾವಜಾತ’ವನ್ನು ಹೇಳಿದರೆ, ವ್ಯಾಖ್ಯಾನಗಳು ‘ಜನ್ಮಜಾತ’ವನ್ನು ಆರೋಪಿಸಿವೆ. ಇದಕ್ಕೆ ಭಗವದ್ಗೀತೆಯಾಗಲಿ ಗೀತಾಚಾರ್ಯನಾಗಲಿ ಹೊಣೆಯಲ್ಲ! ನಾಲ್ಕು ವರ್ಣಗಳು / ಗುಣತ್ರಯಗಳು ಸ್ಥಾವರವೆ? ಜಂಗಮವೆ? ನಾಲ್ಕು ವರ್ಣಗಳು ಗುಣಕರ್ಮ ವಿಭಾಗವಾದ್ದರಿಂದ ಇದನ್ನು ಜಲಬಂಧ ವಿಭಾಗದಂತೆ (=ವಾಟರ್ಟೈಟ್ ಕಂಪಾರ್ಟ್ಮೆಂಟ್) ಪರಿಗಣಿಸಬಾರದು. ಆದರೆ ಮುಂದೆ ಸಾಮಾಜಿಕವಾಗಿ ಏರ್ಪಟ್ಟ ಜಾತಿಪದ್ಧತಿಯ ಹುಟ್ಟು ಮತ್ತು ಬೆಳವಣಿಗೆಯಿಂದಾಗಿ, ಕ್ರಮೇಣ ಜಾತಿಸ್ಥಾವರಗಳು ನೆಲೆಗೊಂಡವು. ಜನಸಮುದಾಯಗಳ ನಡುವೆ ಒಡೆದು ಆಳುವ ನೀತಿಯನ್ನು ಭಗವದ್ಗೀತೆಯಲ್ಲಿ ಕಾಣಲಾರೆವು. ನಿತ್ಯಮೋಕ್ಷರು-ನಿತ್ಯಸಂಸಾರಿಗಳು-ನಿತ್ಯನಾರಕಿಗಳು ಎಂಬ ಸ್ಥಾವರ ತತ್ವ ಪ್ರತಿಪಾದನೆಯು ಭಗವದ್ಗೀತೆಯಲ್ಲಿ ಇಲ್ಲ! ಪಾರ್ಥಾ! ಆಲಿಸು! ಸ್ತ್ರೀಯರು, ವೈಶ್ಯರು, ಶೂದ್ರರು ಯಾರೇ ಆಗಿರಲಿ ನನಗೆ ಶರಣಾಗಿ ಬಂದರೆ ಅವರಿಗೆ ಪರಮಗತಿಯು ದೊರೆಯುವುದಿಲ್ಲಿ! (೯-೩೨) ಸ್ತ್ರೀಯರಿಗೆ ಮೋಕ್ಷನಿರಾಕರಣೆ ಮಾಡಿರುವ ಮತ ಧರ್ಮಗಳಿಗೂ ಗೀತಾಚಾರ್ಯನಿಗೂ ಇರುವ ವ್ಯತ್ಯಾಸವನ್ನಿಲ್ಲಿ ಮನಗಾಣಬೇಕು. ಗುಣತ್ರಯಗಳಾದ ಸತ್ವ-ರಜ-ತಮೋಗುಣಗಳನ್ನು ಕೂಡಾ ಗೀತಾಚಾರ್ಯನು ಸ್ಥಾವರವಾಗಿ ನಿರೂಪಿಸದೆ ಜಂಗಮವಾಗಿ ನಿರೂಪಿಸಿದ್ದಾನೆ. ಸಾತ್ವಿಕ-ರಾಜಸಿಕ-ತಾಮಸಿಕ ಗುಣಗಳು ಅಂತರ್ಸಂಬಂಧಿಯಾದವು. ಇವು ಮೂರೂ ಒಬ್ಬರಲ್ಲೇ ಪ್ರಕಟಗೊಳ್ಳಬಹುದು. ತಾಮಸಿಯು ಸಾತ್ವಿಕವೂ, ರಾಜಸಿಕರು ತಾಮಸಿಗಳೂ, ಸಾತ್ವಿಕರು ರಾಜಸಿಕರೂ ಆಗಬಹುದು. ಇದಕ್ಕೆ ನಮ್ಮ ಪ್ರತ್ಯಕ್ಷ ಜೀವನವೇ ನಿದರ್ಶನ! ಭಗವದ್ಗೀತೆ ೧೭ ಮತ್ತು ೧೮ನೆಯ ಅಧ್ಯಾಯಗಳಲ್ಲಿ ಗುಣತ್ರಯಗಳನ್ನು ವಿಸ್ತಾರವಾಗಿಯೂ ವೈವಿಧ್ಯಮಯವಾಗಿಯೂ ನಿರೂಪಿಸಿದೆ: ಸಾತ್ವಿಕರು ದೇವದೇವತೆಯರನ್ನು, ರಾಜಸರು ಯಕ್ಷ-ರಾಕ್ಷಸರನು ತಾಮಸರು ಬಿಡದೆ ಪೂಜೆಮಾಡುವರು ಭೂತ, ಪ್ರೇತ, ಪಿಶಾಚವನು! (೧೭-೪) ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನದಲ್ಲಿ ಕುವೆಂಪು ಹೇಳಿರುವಂತೆ, “ದೇವರನ್ನು ಪೂಜಿಸಿದರೆ ದೇವರಾಗುತ್ತೇವೆ, ದೆವ್ವಗಳನ್ನು ಪೂಜಿಸಿದರೆ ದೆವ್ವಗಳಾಗುತ್ತೇವೆ” ಎಂಬ ನುಡಿಗಳನ್ನಿಲ್ಲಿ ಸ್ಮರಿಸಬಹುದು. ಇದನ್ನೇ ಶಿವರಾಮ ಕಾರಂತರು ‘ನಮ್ಮ ಅಳತೆಯನ್ನು ಮೀರಲಾರದ ದೇವರು’ ಎಂದು ನಿರೂಪಿಸಿದ್ದಾರೆ. ದೇವರ ವಿಷಯದಲ್ಲಿ ಗೀತಾಚಾರ್ಯ, ಕುವೆಂಪು, ಕಾರಂತರ ನಿಲುವು ಒಂದೇ ಆಗಿದೆ. ಭಗವದ್ಗೀತೆಯನ್ನು ಅರಿತುಕೊಳ್ಳಲು ಮುಕ್ತ ಮನಸ್ಸು ಇರಬೇಕು! ಭಗವದ್ಗೀತೆಯಲ್ಲಿ ಉಭಯ ವೈರುಧ್ಯಗಳು, ಪೌರ್ವಾಪರ್ಯ ವಿರುದ್ಧ್ಯಗಳು ಇಲ್ಲವೆಂದಲ್ಲ! ನಮ್ಮ ದೇಶದಲ್ಲಿ ಅಕ್ಷರಗಳಿಗೆ ಏರ್ಪಟ್ಟಿರುವ ಪ್ರಕ್ಷಿಪ್ತಗಳ ರಾಜಕಾರಣವನ್ನು ಗಮನಿಸಿದರೆ, ಇದಕ್ಕೆ ಉತ್ತರ ಲಭ್ಯ! ಗೀತಾಚಾರ್ಯನು ಬಯಸುವ ಶ್ರೋತೃ ಸಹೃದಯರ ಸ್ವರೂಪವಿದು : “ತಪೋಶೀಲರಾಗಿಲ್ಲದ ಮಂದಿಗೆ ಭಕ್ತಿಭಾವಗಳು ಇರದವಗೆ ಹೇಳಬಾರದಿದನೆಂದಿಗು ನನ್ನಲಿ ಅಸೂಯೆ, ದ್ವೇಷವು ಇರುವವರಿಗೆ” (೧೮-೬೭) ತತ್ವಜ್ಞಾನ ಮತ್ತು ತತ್ವವಿಚಾರಗಳು ಮಕ್ಕಳಿಗೆ ಅಪಥ್ಯ! ಆದರೆ ಭವಿಷ್ಯದ ಆಶಯವಾಗಿ ತತ್ವವು ಅತ್ಯಗತ್ಯ! ಗೆಳೆಯ ಗೋವಿಂದರೆಡ್ಡಿಯವರು [ನಯಾಗರಾ ಜಲಪಾತಕ್ಕೆ ಹಗ್ಗ ಕಟ್ಟಿ ಅದರ ಮೇಲೆ ನಡೆಯುವ ದುಸ್ಸಾಹಸಿಯಂತೆ] ಮಕ್ಕಳಿಗಾಗಿ ಸರಳ ಭಗವದ್ಗೀತೆಯನ್ನು ಕೊಡುವ ಸಾಹಸ ಮಾಡಿದ್ದಾರೆ. ಸಂಸ್ಕೃತ ಪಠ್ಯ ಮತ್ತು ಪ್ರಗಲ್ಭ ವ್ಯಾಖ್ಯಾನಗಳ ಜಾಲಸಹಿತವಾದ ಭಗವದ್ಗೀತೆಯನ್ನು ಕನ್ನಡಲಿಪಿಯ ಸಂಸ್ಕೃತ ಪಠ್ಯ + ಸರಳರೂಪದ ಕನ್ನಡ ಪಠ್ಯ + ಸುಸ್ಪಷ್ಟ ವಿಚಾರಸರಣಿಯ ತ್ರಿವೇಣಿ ಸಂಗಮ ಎಂಬಂತೆ ಕೊಟ್ಟಿದ್ದಾರೆ. ಇದಕ್ಕಾಗಿ ಗೆಳೆಯ ಗೋವಿಂದರೆಡ್ಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು! ೨೮-೦೫-೨೦೨೦ -ಡಾ.ವಿ.ಚಂದ್ರಶೇಖರ ನಂಗಲಿ

Related Books