ಶ್ರೀಮದ್ಭಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೋಗ

Author : ಡಿ.ವಿ. ಗುಂಡಪ್ಪ (ಡಿ.ವಿ.ಜಿ.)

Pages 640

₹ 600.00




Year of Publication: 2018
Published by: ಸಾಹಿತ್ಯ ಪ್ರಕಾಶನ,

Synopsys

ಮಂಕುತಿಮ್ಮನ ಕಗ್ಗದ ಮೂಲಕ ಮನೆಮಾತಾದ ಕವಿ ಡಿ.ವಿ. ಗುಂಡಪ್ಪ ಅವರು ಸಾರ್ವಜನಿಕ ಬದುಕು-ಬರವಣಿಗೆಯಲ್ಲಿ ಪ್ರಾಮಾಣಿಕತೆ ಮೆರೆದವರು. ಗೋಖಲೆ ಅವರ ಹೆಸರಿನಲ್ಲಿ ಸಾರ್ವಜನಿಕ ಟ್ರಸ್ಟ್‌ ಆರಂಭಿಸಿದ್ದ ಡಿ.ವಿ.ಜಿ ಅವರು ಪತ್ರಕರ್ತ ಹಾಗೂ ಚಿಂತಕರಾಗಿದ್ದರು. ಭಗವದ್ಗೀತೆಯ ವ್ಯಾಖ್ಯಾನವನ್ನು ’ಜೀವನ ಧರ್ಮ ಯೋಗ’ ಕೃತಿಯಲ್ಲಿ ಗುಂಡಪ್ಪನವರು ಮಾಡಿದ್ದಾರೆ. ಭಗವದ್ಗೀತೆಯ ತಾತ್ಪರ್ಯವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಅವರು ಗೀತೆಗೊಂದು ತಮ್ಮದೇ ಚೌಕಟ್ಟು ನಿರ್ಮಿಸಿದ್ದಾರೆ.  ಗೀತೆಯ ಕುರಿತ ಕನ್ನಡದಲ್ಲಿ ಪ್ರಕಟವಾದ ಪ್ರಮುಖವಾದ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಸೇರುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಈ ಕೃತಿ ಪಾತ್ರವಾಗಿತ್ತು.

About the Author

ಡಿ.ವಿ. ಗುಂಡಪ್ಪ (ಡಿ.ವಿ.ಜಿ.)
(17 March 1887 - 07 October 1975)

ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...

READ MORE

Awards & Recognitions

Reviews

ಭಗವದ್ಗೀತಾ ತಾತ್ಪರ್ಯ

ಪೂಜ್ಯರಾದ ದಿವಂಗತ ಡಿ. ವಿ. ಜಿ. ಯವರ ’ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ' ಎಂಬುದೊಂದು ಗಾತ್ರದಲ್ಲೂ ಗುಣದಲ್ಲೂ ಬೃಹದ್ಧ್ರಂಥ. ಗೀತೆಯ ಮೂಲಶ್ಲೋಕಗಳ ಜತೆಗೆ ಅವರ ಉಪನ್ಯಾಸಗಳ ಸಾರಾಂಶವುಳ್ಳ ಕಂದಗಳೂ ಪ್ರತಿ ಅಧ್ಯಾಯದ ಕೊನೆಯಲ್ಲಿ ಬರುತ್ತವೆ. 

ಬಹುಶ್ರುತರೂ ವಿಫುಲಾನುಭವಿಗಳೂ ಆದ ಪೂಜ್ಯ ಡಿ. ವಿ. ಜಿ.ಯವರು ಶ್ರೀಮದ್ ಭಗವದ್ಗೀತೆಯ ಮೇಲೆ ಹಾಯಿಸಿರುವ ದೃಷ್ಟಿ ಅನೇಕ ವಿಧದಲ್ಲಿ ನವೀನವಾಗಿದೆ. ಹೀಗೆಂದ ಮಾತ್ರಕ್ಕೆ ಅವರು ಸಂಪ್ರದಾಯವನ್ನೂ ಪರಂಪರೆಯನ್ನೂ ಬಿಟ್ಟು ತಮ್ಮದೇ ಸ್ವತಂತ್ರವಾದ ವ್ಯಾಖ್ಯೆಗಳನ್ನು ಗೀತಾವಾಕ್ಯಗಳಿಗೆ ಕೊಡಹೊರಟಿದ್ದಾರೆ ಎಂದು ಅರ್ಥಮಾಡಲಾಗದು. ಸಂಪ್ರದಾಯಾರ್ಥಗಳನ್ನು ಬಿಡದೆ ಅವುಗಳ ಬೆಂಬದಿಯಲ್ಲೇ ಗೀತೋಪದೇಶವನ್ನು ಆಧುನಿಕ ಜಗತ್ತಿಗೆ ಹೊಂದಿಸಿಕೊಳುವ ಸಾರ್ಥಕವಾದ ಪ್ರಯೋಗ ಇಲ್ಲಿ ನಡೆದಿದೆ.

ಗೀತೆಯನ್ನು ಬರಿ ಮೋಕ್ಷಶಾಸ್ತ್ರವೆಂದು ಪರಿಗಣಿಸಿ ಅದರ ಉಪದೇಶವನ್ನು ಆ ಚತುರ್ಥ ಪುರುಷಾರ್ಥಕ್ಕೆ ಹಂಬಲಿಸುವ ವಿರಕ್ತರಿಗೆ ಮಾತ್ರ ಸೀಮಿತಗೊಳಿಸುವುದು ಡಿ. ವಿ. ಜಿ. ಯವರಿಗೆ ಸಮ್ಮತವಲ್ಲ.

ಅವರ ಮಾತಿನಲ್ಲೇ ಹೇಳಬೇಕಾದರೆ: “ಗೀತೆ ಎಷ್ಟು ಮಟ್ಟಿಗೆ ಮೋಕ್ಷ ಶಾಸ್ತ್ರವೋ ಅಷ್ಟು ಮಟ್ಟಿಗೆ ಧರ್ಮಶಾಸ್ತ್ರವೂ ಹೌದು. “ಧರ್ಮವಿಲ್ಲದ ಮೋಕ್ಷವಿಲ್ಲ. ವಿಚಾರ ಮಾಡಿದರೆ, ಮೋಕ್ಷಕ್ಕಾಗಿ ತಲ್ಲಣಿಸಬೇಕಾದ್ದೇ ಇಲ್ಲ. ಧರ್ಮವಿದ್ದ ಕಡೆ ಮೋಕ್ಷ ತಾನಾಗಿ ಒಂದುಗೂಡಿ ಬರುತ್ತದೆ. ಆದುದರಿಂದ ಧರ್ಮ ವಿಚಾರದ ಮೇಲೆ ಹೆಚ್ಚು ಗಮನವಿಟ್ಟು ಗೀತೆಯನ್ನು ಅನುಸರಿಸೋಣ' ಈ ಗೀತೆಯಲ್ಲಿರುವ ಎಲ್ಲ ಉಪದೇಶಗಳೂ ಎಲ್ಲರಿಗೂ” ಅಲ್ಲ ಎನ್ನುತ್ತಾರೆ ಡಿ ವಿ ಜಿ. “ಪ್ರತಿಯೊಬ್ಬ ಜೀವಿಗೂ, ಅವನ ಜೀವನ ಪರಿಶೋಧನೆಗೂ ಅವನ ಅಧ್ಯಾತ್ಮ ಪ್ರಗತಿಗೂ ಸಾಧಕವಾಗುವ ಉಪದೇಶ ಯಾವುದುಂಟೋ ಅದೇ ಅವನಿಗೆ ಶ್ರೇಷ್ಠ.” ಗೀತೆಯಲ್ಲಿ ಅವರವರ ಯೋಗ್ಯತೆಗೆ ತಕ್ಕಂತೆ ಮತ್ತು ಉಪಯೋಗಕ್ಕೆ ಬರುವಷ್ಟು ಉತ್ಸಾರಕ ಧರ್ಮ ಮಾರ್ಗಗಳು ಉಕ್ತವಾಗಿವೆ. ಆದರೆ ಈ ಗ್ರಂಥವನ್ನು ವ್ಯಾಸಂಗ ಮಾಡುವವರಿಗೆ ಕೆಲವು ಗುಣಗಳಿರಬೇಕೆನ್ನುತ್ತಾರೆ ಡಿ. ವಿ. ಜಿ.

“ಯಾರು ಲೋಕ ಜೀವನದ ಕಷ್ಟಗಳನ್ನೂ ಇಕ್ಕಟ್ಟುಗಳನ್ನೂ ಬಿಕ್ಕಟ್ಟುಗಳನ್ನೂ ಅನುಭವದಿಂದ ಕಂಡು, ಭೋಗ ಲಾಭಗಳಲ್ಲಿ ಆಸೆಯನ್ನು ಮಿತ ಪಡಿಸಿಕೊಳ್ಳಬಲ್ಲವನಾಗಿ ಸಕಲ ಜನಾನುಭೂತಿಯುಳ್ಳವನಾಗಿ, ಜೀವನದಲ್ಲಿ ಹೇಗೆ ನಡೆದುಕೊಂಡರೆ ಜನ್ಮ ಸಾರ್ಥಕವಾದೀತು ಎಂಬುದನ್ನು ತಿಳಿದು ಕೊಳ್ಳಲು ತೀವ್ರ ಕುತೂಹಲವುಳ್ಳವನಾಗಿರುತ್ತಾನೆ, ಆತ ಗೀತೆಯ ವ್ಯಾಸಂಗಕ್ಕೆ ತಕ್ಕೆ ಅಧಿಕಾರಿ. ಆಶಾಪರಿಮಿತಿ, ಸಂಯಮ, ತತ್ತ್ವ ಜ್ಞಾನೇಚ್ಛೆ ಇದು ಗೀತಾ ವ್ಯಾಸಂಗಿಗೆ ಇರಬೇಕಾದ ಅಂತರಂಗದ ಸ್ಥಿತಿ."

ಈ ಗ್ರಂಥದಲ್ಲಿ ಬಹು ಸ್ವಾರಸ್ಯವಾದ ಅಂಶ ಈ ಕರ್ಮ-ಧರ್ಮ ಜಿಜ್ಞಾಸೆ. ತಮ್ಮ ಅಪೂರ್ವ ಜ್ಞಾನ ಸಂಪತ್ತನ್ನೆಲ್ಲ ಡಿ. ವಿ. ಜಿ. ಯವರು ಈ ಜಿಜ್ಞಾಸೆಗೆ ಧಾರೆ ಎರೆದಿದ್ದಾರೆ. ಇದನ್ನು ರೂಪಿಸುವ ಮಾತುಗಳು ಸೂತ್ರ ಪ್ರಾಯವಾದರೂ ಸುಂದರವಾಗಿವೆ. ಅರ್ಥಗರ್ಭಿತವಾದರೂ ಸರಳವೂ ವಿಶದವೂ ಆಗಿವೆ. ಅವರ ಅಭಿಪ್ರಾಯದ ಪ್ರಕಾರ ''ಜೀವನಕ್ಕೂ, ಜಗತ್ತಿಗೂ ಸಂಬಂಧ ತಪ್ಪಿದ್ದಲ್ಲ -ಹಾಗಿರುವಾಗ (೧) ಜೀವಿಯ ನೈಜಗುಣಗಳು ಜಗತ್‌ ಸಂಪರ್ಕದಿಂದ ಕೆಡದೆ ಉತ್ತಮ ಪಡುತ್ತ ಜಗತ್ತಿಗೆ ಉಪಕಾರವಾಗುವಂತೆಯೂ ಜಗತ್ತು ಜೀವ ಸಂಪರ್ಕದಿಂದ ಕೆಡದೆ ಉತ್ತಮ ಪಡುತ್ತಾ ಜೀವಿಗೆ ಉಪಕಾರವಾಗುವಂತೆ, ಯಾವ ಯಾವ ಚರ್ಯೆಗಳ ಕಾರ್ಯಗಳೂ ನಿಯಮಗಳೂ ನೀತಿಗಳೂ ಮನುಷ್ಯನಿಗೆ ಮುಕ್ತವಾಗುತ್ತವೆಯೋ ಅವುಗಳ ಒಟ್ಟೇ ಧರ್ಮ." ಎಂದರೆ, ಸಮಷ್ಟಿಯ ಹಿತಕ್ಕೆ ಧಕ್ಕೆ ಬಾರದಂತೆ ನಡೆಸುವ ವ್ಯಕ್ತಿ ವಿಕಾಸ ಕ್ರಿಯೆಯೇ ಧಾರ್ಮಿಕ ಕ್ರಿಯೆ. ಧರ್ಮದ ಜೀವಾಳವೇ ಜೀವೋತ್ಕರ್ಷದಲ್ಲಿದೆ. ಪ್ರಯೋಗದಲ್ಲಿ ಧರ್ಮವು ಮುಖ್ಯವಾಗಿ ಮೂರು ವಿಧವಾಗಿದೆ : ೧) ನೈಜ (೨) ನ್ಯಾಯ (೩) ಮೈತ್ರಿ. ಮನುಷ್ಯ ಯಾವ ತನ್ನ ಗುಣದಿಂದ ಅಥವಾ ಬಲದಿಂದ ಇತರರ ಪ್ರಯೋಜನಕ್ಕೆ ಒದಗಬಹುದೊ ಆ ಗುಣಬಲ ವಿಶೇಷ ಅವನ ಧರ್ಮ. ಹೀಗೆ ನೈಜದ ಪರಿಪಾಲನ ಧರ್ಮ. ಒಂದು ವಸ್ತುವಿನ ಅಥವಾ ಪ್ರಾಣಿಯ ನೈಜಾಭಿವ್ಯಕ್ತಿಯಿಂದ ಇನ್ನೊಂದು ನೈಜಕ್ಕೆ ಹಾನಿಯಾಗದಂತೆ ಒಂದು ಸಮೂಹದ ನಾನಾ ವ್ಯಕ್ತಿಗಳ ನೈಜವಿಕಾಸಗಳನ್ನು ಹದ್ದಿನಲ್ಲಿರಿಸುವ ವ್ಯವಸ್ಥೆಯೇ ನ್ಯಾಯ. ಅನ್ಯೋನ್ಯ ಅಬಾಧಾ ವಿಧಿಯೇ ನ್ಯಾಯ. ಜಸ್ಟಿಸ್ “ಆದು ಧರ್ಮ. ವ್ಯಕ್ತಿಯು ತನ್ನ ಎಲ್ಲರಿಗೂ ಪ್ರಯೋಜನವಾಗುವಂತೆ ಸ್ವಜೀವನವನ್ನು ವಿಸ್ತಾರಪಡಿಸುವುದು, ಅದೇ ಆತ್ಮ ವಿಕಾಸ. ಅದಕ್ಕೆ ಸಾಧಕವಾದದ್ದು ಲೋಕಸ್ನೇಹ. ಅದೇ ಗೀತೆಯಲ್ಲಿ ಹೇಳಿರುವ ಆತ್ಮೌಪಮ್ಯ. ಅದು ಧರ್ಮ. ಪರಮಾತ್ಮ ಸಾಕ್ಷಿಕವಾದ ವರ್ತನೆ ಧರ್ಮ. ವಿಚಾರಪರರೆಲ್ಲರೂ ಗಾಢವಾಗಿ ಆಲೋಚಿಸಬೇಕಾದ ಹೃದ್ಯವಾಕ್ಯಗಳಿವು. 'ಪರಮಾತ್ಮನಿಗೆ ತನ್ನಲ್ಲರ ಕರ್ತೃತ್ವ ಭೋಕ್ತೃತ್ವ ಸಮರ್ಪಣೆಯ ಕರ್ಮ ಯೋಗ. ಈ ಕರ್ಮಫಲ ತ್ಯಾಗದಲ್ಲಿ ನಾಲ್ಕಂಶಗಳಿವೆ, ಕರ್ತವ್ಯ ವಿವೇಕ, ಫಲಾಫಲ ಸಮತ್ವ, ಕೃಷ್ಣಾರ್ಪಣಬುದ್ದಿ, ಪ್ರಸಾದ ಸ್ವೀಕಾರ. ಸುಖ ಸಮಯದಲ್ಲಿ ಭಗವಂತನನ್ನು ಸ್ಮರಿಸಿ ಅದು ಆತನ ಪ್ರಸಾದವೆಂದುಕೊಳ್ಳುವುದೂ, ದುಃಖದಲ್ಲಿ ಭಗವಂತನನ್ನು ಸ್ಮರಿಸಿ ಅದು ಆತ ವಿಧಿಸಿದ ಜೀವ ಶೋಧನೆ ಎಂದು ಕೊಳ್ಳುವುದೂ ಫಲತ್ಯಾಗದ ಸಾರಾಂಶ ಎನ್ನುತ್ತಾರೆ ಡಿ. ವಿ. ಜಿ. ಅವರ ದೃಷ್ಟಿಯಲ್ಲಿ ಗೀತೆ ಜಗತ್ತು ತುಚ್ಛವೆಂದು ಬೋಧಿಸುವುದಿಲ್ಲ; ಅದು ಬ್ರಹ್ಮನಿರ್ಮಿತಿ ನಮ್ಮ ಪೂಜೆಗೆ ಯೋಗ್ಯ. ಗೀತೆಯ ಆಶಯ ಈಶಾವಾಸೋಪನಿಷತ್ತಿನ ಆಶಯ : ಕರ್ತವ್ಯ ಕಾರ್ಯಗಳನ್ನು ಮಾಡಿಕೊಂಡು ನೂರಾರು ವರ್ಷ ಬದುಕು, “ಭಗವಂತನ ಮಹಿಮೆಯನ್ನು ಅಂಗೀಕರಿಸಿ ಸ್ವಾಹಂಕಾರವನ್ನು ವರ್ಜಿಸುವುದೇ ತಪಸ್ಸು, ಆತ್ಮ ಸಂಯಮವೇ ತಪಸ್ಸು, ಜಗಚ್ಛಕ್ತಿಗಳನ್ನು ಉಪಯೋಗಿಸಿಕೊಂಡು ಲೋಕ ಕಾರ್ಯಗಳನ್ನು ನಡೆಸುವುದೇ ಯಜ್ಞ, ಕಾರ್ಯ ಫಲಿತಾಂಶವನ್ನು ತನ್ನೊಬ್ಬನ ಊಟಕ್ಕಾಗಿ ಇರಿಸಿಕೊಳ್ಳದೆ ಸುತ್ತಣವರಿಗೆ ಹಂಚಿ ಅವರ ಸಂತೋಷದಲ್ಲಿ ತಾನೂ ಸಂತೋಷಪಡುವುದೇ ದಾನ. ಹೀಗೆ ತಪೋಯಜ್ಞದಾನ ರೂಪವಾದ ಲೋಕಜೀವನವನ್ನು ನಡೆಸುವವನು ಮೋಕ್ಷಕ್ಕಾಗಿ ಚಿಂತೆ ಪಡಬೇಕಾಗಿಲ್ಲ ಎನ್ನುತ್ತಾರೆ ಪೂಜ್ಯರು.

ಇದೊಂದು ಅಪೂರ್ವವಾದ ಪುಸ್ತಕ. ಆಧುನಿಕ ಭಾರತಿಯ ಜಿಜ್ಞಾಸು ತರುಣರು ಅವಶ್ಯವಾಗಿ ಓದಿ ಅನುಶೀಲನ ಮಾಡಬೇಕಾದಂಥದು.

-ಪು. ತಿ. ನರಸಿಂಹಾಚಾರ್

ಶ್ರೀ ಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (ತತ್ವಧರ್ಮ)

ಮೊದಲನೆಯ ಆವೃತ್ತಿ 1966 

ಎರಡನೆಯ ಪರಿಷ್ಕೃತ ಆವೃತ್ತಿ 1971 ಕಾವ್ಯಾಲಯ ಜಯನಗರ ಮೈಸೂರು 570014 

ಡೆಮ್ಮಿ ಅಷ್ಟ 768 ಪುಟಗಳು, ಬೆಲೆ ರೂ. 20-00, 24-00 36-00

ಕೃಪೆ: ಗ್ರಂಥಲೋಕ, ಜನೆವರಿ 1981

 

 

Related Books