ಮಾತಿಗೆ ಏನು ಕಡಿಮೆ

Author : ಹರ್ಷಕುಮಾರ್‌ ಕುಗ್ವೆ

Pages 163

₹ 170.00




Year of Publication: 2018
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ ಕಂಟಿಕ್ಲಬ್ ಹತ್ತಿರ ವಿದ್ಯಾನಗರ ಶಿವಮೊಗ್ಗ-577203
Phone: 9449174662 /9448628511

Synopsys

ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ ಕೃತಿಯ ಕನ್ನಡಾನುವಾದ ‘ಮಾತಿಗೆ ಏನು ಕಡಿಮೆ’. ಪ್ರಜಾಪ್ರಭುತ್ವ, ಸಂಸ್ಕೃತಿ ಮತ್ತು ರಾಷ್ಟ್ರದ ಕುರಿತ ಚಿಂತನೆಯ ಕುರಿತಾದ ರವೀಶ್ ಕುಮಾರ್ ಅವರ ಬರಹವನ್ನು ಹರ್ಷಕುಮಾರ್ ಕುಗ್ವೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂದು ಮುಖ್ಯವಾಹಿನಿ ಮಾಧ್ಯಮಗಳಲ್ಲಿರಲಿ, ಸಾಮಾಜಿಕ ಮಾಧ್ಯಮಗಳಲ್ಲಿರಲಿ ದೇಶದ ಜನತೆಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸಲು ಲಭ್ಯ ಇರುವ ಅವಕಾಶವೆಷ್ಟು, ಅದು ದಿನೇದಿನೇ ಕ್ಷೀಣವಾಗುತ್ತಿರುವುದೇಕೆ ಎಂಬ ಕುರಿತು ರವೀಶ್ ತಮ್ಮ ಕೃತಿಯಲ್ಲಿ ಚಿಂತನೆ ನಡೆಸಿದ್ದಾರೆ. ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಬಂದೊದಗಿರುವ ಆತಂಕನಿಷೇಧಗಳ ಕುರಿತು, ಅಭಿವ್ಯಕ್ತಿಯ ಮೇಲಿನ ಸಾಂಸ್ಥಿಕ, ದೈಹಿಕ ಹಾಗೂ ಮಾನಸಿಕ ಹಿಂಸೆಯ ಭೀತಿಯ ಕುರಿತು ಹಾಗೆಯೇ ಈ ಆತಂಕ, ಬೆದರಿಕೆಗಳು ನಾಗರಿಕ ಸಂವಾದ, ಮಾತುಕತೆ, ಸೌಹಾರ್ದಮಯ ವಾತಾವರಣಗಳ ಜಾಗದಲ್ಲಿ ಅಸಹನೆ ಮತ್ತು ದ್ವೇಷವನ್ನು ಹೇಗೆಲ್ಲಾ ಸ್ಥಾಪಿಸಿವೆ ಎಂದು ಸಹ ಚರ್ಚಿಸಿದ್ದಾರೆ. ಇದರೊಂದಿಗೆ ಮಾಧ್ಯಮಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕ ಸಂಸ್ಥೆಗಳು ಒಟ್ಟಾಗಿ ಹೇಗೆ ನಮ್ಮನ್ನು ವಂಚಿಸತೊಡಗಿವೆ ಎಂದು ವಿವರಿಸಿದ್ದಾರೆ.

ಬಹಳ ಮುಖ್ಯವಾಗಿ ದೇಶದ ನಾಗರಿಕರಾಗಿ ನಾವೀಗ ಕಳೆದುಕೊಂಡಿರುವುದನ್ನು ಮತ್ತೆ ಗಳಿಸಿಕೊಂಡು, ಬೌದ್ಧಿಕವಾಗಿ ಒಂದು ಪುರೋಗಾಮಿಯಾದ, ಎಲ್ಲರನ್ನೂ ಒಳಗೊಳ್ಳುವಂತಹ ಮತ್ತು ನಿಜಾರ್ಥದಲ್ಲಿ ಪ್ರಜಾಸತ್ತಾತ್ಮಕವಾದ ರಾಷ್ಟ್ರವೊಂದನ್ನು ನಿರ್ಮಿಸುವ ಬಗೆ ಹೇಗೆಂದು ವಿಷದವಾಗಿ ಚರ್ಚಿಸಿದ್ದಾರೆ. 'ಮಾತಿಗೆ ಏನು ಕಡಿಮೆ?” ಕೃತಿಯು ಮಹತ್ತರವಾದ ಒಳನೋಟ, ತಿಳಿವು ಮತ್ತು ದೂರದೃಷ್ಟಿತ್ವದೊಂದಿಗೆ ದೇಶದ ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ಅತ್ಯವಶ್ಯವಾಗಿದ್ದ ಹಾಗೂ ಸಕಾಲಿಕವಾದ ವರದಿಯೊಂದನ್ನು ನಮ್ಮ ಮುಂದಿಡುತ್ತದೆ. ಪ್ರತಿಯೊಬ್ಬರೂ ಓದಿ ಆಳವಾಗಿ ಚಿಂತನೆ ನಡೆಸಬೇಕಾದ ಕೃತಿ ಇದಾಗಿದೆ.

About the Author

ಹರ್ಷಕುಮಾರ್‌ ಕುಗ್ವೆ
(15 July 1981)

ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಹರ್ಷಕುಮಾರ ಅವರು ಪತ್ರಕರ್ತ ಹಾಗೂ ಪರಿಸರ ಕಾರ್ಯಕರ್ತ.  ಕುವೆಂಪು ವಿಶ್ವವಿದ್ಯಾಲಯದಿಂದ ಬಿ.ಎ. ಪದವೀಧರರಾಗಿರುವ ಹರ್ಷ ಅವರು ನಂತರ ಕಾನೂನು ವ್ಯಾಸಂಗ ನಡೆಸಿದರು. ದ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಕೆಲ ಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಹರ್ಷ ಅವರು ಸದ್ಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರ ಕೃತಿಯನ್ನು  ’ಮಾತಿಗೆ ಏನು ಕಡಿಮೆ’ ಎಂದು ಕನ್ನಡೀಕರಿಸಿದ್ದಾರೆ. ಮಾಂಗ್‌ ಗಾರುಡಿ ಸಮುದಾಯದ ಬಗ್ಗೆ ಸಂಶೋಧನಾತ್ಮಕ ಸಮಾಜ ಶಾಸ್ತ್ರೀಯ ಗ್ರಂಥ ಪ್ರಕಟಿಸಿದ್ದಾರೆ. ...

READ MORE

Excerpt / E-Books

ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರ 'ಮಾತಿಗೆ ಏನು ಕಡಿಮೆ?' ಪುಸ್ತಕಕ್ಕೆ ಜಿ. ರಾಜಶೇಖರ ಅವರು ಬರೆದಿರುವ ಮುನ್ನುಡಿ ನಿಮ್ಮ ಓದಿಗೆ

ಹೆಳವನ ಹೆಗಲ ಮೇಲೆ

ಕುರುಡ ಕೂತಿದ್ದಾನೆ;

ದಾರಿ ಸಾಗುವುದೆಂತೊ ನೋಡಬೇಕು.

– ಗೋಪಾಲ ಕೃಷ್ಣ ಅಡಿಗ (ಭೂಮಿಗೀತ)

ಲೋಕವಿಖ್ಯಾತ ಮಕ್ಕಳ ಕತೆಗಾರ ಹ್ಯಾನ್ಸ್ ಕ್ರಿಶ್ಚ್ಚಿಯನ್ ಆ್ಯಂಡರ್ಸನ್ ಹೇಳಿದ ಒಂದು ಕತೆಯಲ್ಲಿ ಒಣ ಪ್ರತಿಷ್ಠೆಯ ಐಲು ದೊರೆಯೊಬ್ಬ, ತನ್ನ ಉಡುಪು ತೊಡಪು ಬಿಟ್ಟು ಬೇರೆ ಏನನ್ನೂ ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಅವನ ಬೇಜವಾಬ್ದಾರಿತನ ಮತ್ತು ದುರಾಡಳಿತದಿಂದ ಪ್ರಜೆಗಳು ಬೇಸತ್ತಿದ್ದರೂ ಭಯದಲ್ಲಿ ಅವನನ್ನು ಸಹಿಸಿಕೊಂಡಿದ್ದರು. ಹೀಗಿರುತ್ತ ಜಾಣ ದರ್ಜಿಯೊಬ್ಬ ಈ ಮೂರ್ಖ ದೊರೆಯನ್ನು ಯಾಮಾರಿಸಿ ಒಂದಿಷ್ಟು ಹಣ ಸಂಪಾದಿಸಲು ಉಪಾಯ ಮಾಡುತ್ತಾನೆ. ಲೋಕದಲ್ಲಿ ಇದುವರೆಗೂ ಯಾರೂ ಧರಿಸದಂತಹ ವಿಶೇಷವಾದ ಬಟ್ಟೆಯಲ್ಲಿ ಒಂದು ಪೋಷಾಕನ್ನು ದೊರೆಗೆ ಸಿದ್ಧ ಪಡಿಸಿಕೊಡುವುದಾಗಿ ದರ್ಜಿ ಮಾತು ಕೊಡುತ್ತಾನೆ; ತಾನು ಹೊಲಿದುಕೊಡುವ ಪೋಷಾಕಿನ ಬಟ್ಟೆ ಯಾವ ಬಗೆಯದ್ದು ಎಂದರೆ ಅದನ್ನು ಯಾರಾದರೂ ನೋಡಬಹುದು; ಆದರೆ ಅಯೋಗ್ಯರು ಮತ್ತು ಮೂರ್ಖರಿಗೆ ಮಾತ್ರ ಅದು ಸುತಾರಾಂ ಕಾಣಿಸುವಂತಹದ್ದಲ್ಲ; ಅಂತಹ ವಿಶೇಷ ಪೋಷಾಕು ಅದು. ದರ್ಜಿಯ ಬಣ್ಣದ ಮಾತುಗಳಿಗೆ ಮರುಳಾಗಿ ದೊರೆ, ದರ್ಜಿಗೆ ಹೊಸ ಪೋಷಾಕು ಹೊಲಿದುಕೊಡಲು ಆಜ್ಞಾಪಿಸುತ್ತಾನೆ. ಮುಂದೆ ಹಲವು ದಿನ, ಹೊಸ ಪೋಷಾಕು ಹೊಲಿಯುವುದರಲ್ಲಿ ಮಗ್ನನಾಗಿರುವವನಂತೆ ನಾಟಕವಾಡಿ, ನಂತರ ಸಿದ್ಧವಾದ ಆ ಪೋಷಾಕನ್ನು ದೊರೆಗೆ ತೊಡಿಸುವ ಹಾಗೆ ಕೂಡ ನಟಿಸುತ್ತಾನೆ. ದೊರೆಯ ಆಸ್ಥಾನಿಕರು ಮತ್ತು ನೌಕರರು ಸಹ ದೊರೆಯ ಈ ಹೊಸ ದಿರುಸನ್ನು ಮೆಚ್ಚಿಕೊಂಡವರಂತೆ ನಟಿಸುತ್ತಾರೆ. ‘ಹೊಸ ಬಟ್ಟೆ’ ಧರಿಸಿ ದೊರೆ ಊರಬೀದಿಗಳಲ್ಲಿ ಮೆರವಣಿಗೆ ಹೊರಟಾಗ, ಬೀದಿಗಳಲ್ಲಿ ನೆರೆದವರು ಕೂಡ ರಾಜನ ಪೋಷಾಕನ್ನು ಮೆಚ್ಚಿಕೊಂಡವರಂತೆ ವರ್ತಿಸುತ್ತಾರೆ. ಆದರೆ ಆ ಮೆರವಣಿಗೆಯನ್ನು ನೋಡುತ್ತಾ ನಿಂತಿದ್ದ ಜನಗಳ ನಡುವೆ ಇದ್ದ ಒಂದು ಮಗು ಮಾತ್ರ ‘ರಾಜ ಯಾಕೆ ಬೆತ್ತಲಾಗಿದ್ದಾನೆ?’ ಎಂದು ಉದ್ಗರಿಸುತ್ತದೆ. ಆಗ ಅಲ್ಲಿ ಸೇರಿದ್ದ ಜನರೆಲ್ಲ ಮಗುವಿನ ಮಾತಿಗೆ ತಮ್ಮದೂ ದನಿಗೂಡಿಸಿ, ದೊರೆಯ ವಿರುದ್ಧ ಬಂಡೇಳುತ್ತಾರೆ.

 

ಜನಪ್ರಿಯ ಟಿ.ವಿ. ಚಾನೆಲ್ NDTVಯ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ಬರಹಗಳ ಈ ಸಂಕಲನ, ಮೇಲೆ ಹೇಳಿದ ಕತೆಯನ್ನು ನೆನಪಿಸುತ್ತದೆ. ರವೀಶ್ ತನ್ನ ಕಾಲದೇಶದ ವಿದ್ಯಮಾನಗಳಿಗೆ ಸ್ಪಂದಿಸುವುದು ಒಂದು ಮುಗ್ಧ ಮಗುವಿನ ಥರಹ. ತಮ್ಮ ಬ್ಯಾಂಕ್ ಬ್ಯಾಲೆನ್ಸ್ ರಕ್ಷಿಸಿಕೊಳ್ಳಲು, ತಮ್ಮ ಹುದ್ದೆ ಉಳಿಸಿಕೊಳ್ಳಲು, ಸಾಮಾಜಿಕ ಪ್ರತಿಷ್ಠೆಯ ಏಣಿ ಹತ್ತಲು ಅಥವಾ ಕೇವಲ ತಮ್ಮ ಹೊಟ್ಟೆಗೆ ತುತ್ತು ಅನ್ನಕ್ಕಾಗಿ, ವಂದಿಮಾಗಧರೋ, ಭಟ್ಟಂಗಿಗಳೋ, ಆಸ್ಥಾನ ಕವಿಗಳೋ, ವಿದೂಷಕರೋ, ಏನಿಲ್ಲವಾದರೆ ಬರೇ ನಕಲಿಶಾಮರೋ ಆಗಲು ಸದಾ ಸಿದ್ಧರಾಗಿರುವವರ ನಡುವೆ, 'ಆಳುವವರು ಬೆತ್ತಲಾಗಿದ್ದಾರೆ’ ಎಂದು ಸಾರಿ ಹೇಳಲು, ನೇರಮಾತಿನ ಎಂಟೆದೆಯ, ಜೊತೆಗೆ ಮಗುವಿನ ಮುಗ್ಧತೆಯೂ ಇರುವ ರವೀಶ್ ಕುಮಾರ್ ರಂತಹವರೇ ಬೇಕು. ಅವರ ಪುಸ್ತಕಕ್ಕೆ 'ಮಾತಿಗೆ ಏನು ಕಡಿಮೆ?’ (The Free Voice) ಎಂಬ ಶೀರ್ಷಿಕೆಯ ಜೊತೆಗೆ ‘ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಮತ್ತು ಸಂಸ್ಕೃತಿ ಕುರಿತ ಚಿಂತನೆ’ ಎಂಬ ಉಪ ಶೀರ್ಷಿಕೆಯೂ ಇದೆ. ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಮತ್ತು ಸಂಸ್ಕೃತಿಗಳು ಒಂದಕ್ಕೊಂದು ನಿಕಟವಾಗಿ ಹೆಣೆದುಕೊಂಡಿದ್ದು ಅವನ್ನು ಬೇರ್ಪಡಿಸಿ ನೋಡಲಾಗದು ಎಂಬ ಗ್ರಹಿಕೆ ಈ ಶೀರ್ಷಿಕೆಯ ಹಿಂದೆ ಇದೆ. ಪ್ರಸ್ತುತ ಕೃತಿಯಲ್ಲಿ ರವೀಶ್ ಎಲ್ಲೂ, ಯಾವ ರಾಜಕೀಯ ಪಕ್ಷವನ್ನೂ ವಹಿಸಿಕೊಂಡು ಮಾತಾಡುವುದಿಲ್ಲ. ಹಾಗೆಂದು ಅವರ ಬರಹಗಳಲ್ಲಿ ಕಾಣುವ ಮಗುವಿನ ಮುಗ್ಧತೆ ರಾಜಕೀಯ ನಿರ್ಲಿಪ್ತತೆ ಖಂಡಿತ ಅಲ್ಲ. ರವೀಶ್ ಯಾವುದೇ ರಾಜಕೀಯ ಪಕ್ಷದ ಪರವಾಗಿ ವಾದ ಮಂಡಿಸದೆ ಇದ್ದರೂ, ದೇಶದ ರಾಜಕೀಯದಲ್ಲಿ ಯಾವ ಪ್ರವೃತ್ತಿಗಳನ್ನು ಎತ್ತಿ ಹಿಡಿಯಬೇಕು, ಯಾವುದಕ್ಕೆ ಪ್ರತಿರೋಧ ತೋರಿಸಬೇಕು ಎಂಬುದರ ಬಗ್ಗೆ ಅವರಿಗೆ ಖಚಿತತೆ ಇದೆ. ಈಗ ದೇಶವನ್ನು ಆಳುವ ಪಕ್ಷವಾಗಿರುವ ಬಿ.ಜೆ.ಪಿ, ಅದರ ತಾಯಿಬೇರಿನಂತಿರುವ ಆರ್.ಎಸ್.ಎಸ್. ಹಾಗೂ ಅದರ ಇತರ ಸಹಭಾಗಿ ಸಂಘಟನೆಗಳು, ದೇಶಾದ್ಯಂತ ಮುಸ್ಲಿಮರು, ಕ್ರೈಸ್ತರು, ಕಮ್ಯುನಿಸ್ಟರು, ದಲಿತರು ಮತ್ತು ತಮ್ಮ ಸಿದ್ಧಾಂತವನ್ನು ಒಲ್ಲದ ಹಿಂದುಗಳ ಮೇಲೆ ಕೂಡ ನಡೆಸುತ್ತಿರುವ ಹಿಂಸೆ, ಅಪಪ್ರಚಾರ ಮತ್ತು ದ್ವೇಷ ಸಾಧನೆಗಳ ವಿರುದ್ಧ ರವೀಶ್ ರಾಜಿ ಇಲ್ಲದ ಪ್ರತಿರೋಧದ ನಿಲುವು ತಳೆದಿದ್ದಾರೆ. ತಮಗೆ ಯಾವುದೇ ರಾಜಕೀಯ ನಿಲುವುಗಳಿಲ್ಲವಾದ್ದರಿಂದ ದೇಶದ ಜ್ವಲಂತ ಪ್ರಶ್ನೆಗಳೂ ತಮಗೆ ಮುಖ್ಯವಲ್ಲ ಎಂಬ ಪಲಾಯನವಾದಿ ಧೋರಣೆ ರವೀಶರ ಹತ್ತಿರ ಕೂಡ ಸುಳಿಯದು.

 

ದೇಶವನ್ನು ಈಗ ಆಳುತ್ತಿರುವವರು ಬೆತ್ತಲಾಗಿದ್ದಾರೆ ಎಂದಷ್ಟೇ ರವೀಶ್ ಹೇಳುತ್ತಿಲ್ಲ. ದೇಶದ ಪ್ರಧಾನಿ ಮತ್ತು ಆಳುವ ಪಕ್ಷದ ರಾಷ್ಟ್ರಾಧ್ಯಕ್ಷರ ಮೈ ರಕ್ತದಿಂದ ಮಲಿನಗೊಂಡಿದೆ; ದೇಶ ಹೆಣದ ವಾಸನೆಯಲ್ಲಿ ನಾರುತ್ತಿದೆ; ಎಂದು ಸಹ ಅವರು ಸೂಚ್ಯವಾಗಿ ಹೇಳುತ್ತಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಮೊದಲಿಗೇ ನಮಗೆ ಎದುರಾಗುವ ಸಾಲು, NDTV ಯಲ್ಲಿ ಅವರ ಪ್ರೈಮ್ ಟೈಮ್ ಪ್ರಸಾರದ ಕಾರ್ಯಕ್ರಮವೊಂದರಿಂದ ಎತ್ತಿಕೊಂಡದ್ದು. ಗುಜರಾತ್ ನ ಚಿಲ್ಲರೆ ಕ್ರಿಮಿನಲ್ ಹಾಗೂ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ನನ್ನು ನಕಲಿ ಎನ್ ಕೌಂಟರ್ ಮುಖಾಂತರ ಕೊಲೆ ಮಾಡಿದ್ದರ ಕುರಿತು ತನಿಖೆ ನಡೆಸುತ್ತಿದ್ದ ಸಿ.ಬಿ.ಐ. ನ್ಯಾಯಾಲಯದ ನ್ಯಾಯಾಧೀಶ ಬ್ರಜ್ ಗೋಪಾಲ್ ಹರಿಕಿಷನ್ ಲೋಯಾ ಅವರ ಅಸಹಜ ಸಾವಿನ ಬಗ್ಗೆ ರವೀಶ್ ಹೇಳುತ್ತಾರೆ, 'ಒಬ್ಬ ನ್ಯಾಯಾಧೀಶರು ಹಠಾತ್ತಾನೆ ತೀರಿಕೊಂಡಿದ್ದಾರೆ. ಮೃತ ನ್ಯಾಯಾಧೀಶರ ಮಗನಿಗಾಗಲೀ, ಪತ್ನಿಗಾಗಲೀ ಆ ಕುರಿತು ಉಸಿರೆತ್ತುವ ಧೈರ್ಯವೂ ಇಲ್ಲ. ದೇಶದ ಅತ್ಯುಚ್ಛ ನ್ಯಾಯಾಲಯದ ವರಿಷ್ಠ ನ್ಯಾಯಾಧೀಶ ಅವರಿಗೆ ಧೈರ್ಯ ಹೇಳಿ, ರಕ್ಷಣೆ ನೀಡುವ ಭರವಸೆ ಕೊಡಬೇಡವೆ? ಪ್ರಜೆಯೊಬ್ಬ ಈಗ ಇರುವ ಭಯದ ವಾತಾವರಣದಲ್ಲಿ ಬದುಕುವ ಸಂಕಲ್ಪ ಮತ್ತು ಧೈರ್ಯ ಕಳೆದುಕೊಂಡರೆ, ಮಾತಿನ ಮೂಲಕ ತನ್ನ ದುಗುಡ ಹೇಳಿಕೊಳ್ಳಲು ಸಹ ಹಿಂಜರಿದರೆ ಅಂತಹವರಿಗೆ ಧೈರ್ಯ ಹೇಳುವವರು ಯಾರು? ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ಉಳ್ಳವರು, ಅತ್ಯುಚ್ಛ ನ್ಯಾಯಾಲಯದ ವರಿಷ್ಠ ನ್ಯಾಯಾಧೀಶರು ಮತ್ತು ದೇಶದ ಪ್ರಧಾನ ಮಂತ್ರಿಗಳು ಆ ಭರವಸೆ ನೀಡದಿದ್ದರೆ, ಬೇರೆ ಯಾರು ಆ ಕೆಲಸ ಮಾಡಬಲ್ಲರು?’ ರವೀಶ್ ಅವರ ಈ ಮಾತುಗಳು ನಿಸ್ಸಂದೇಹವಾಗಿ ಆಳುವ ಸರಕಾರ ಹಾಗೂ ಪ್ರಭುತ್ವಗಳನ್ನು ಉದ್ದೇಶಿಸಿವೆ. ಹಾಗೆಯೇ ದೇಶದ ಪ್ರಜೆಗಳನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಂಡು ರವೀಶ್ ತಮ್ಮ ಮಾತುಗಳನ್ನು ಆಡಿದ್ದಾರೆ; ಎಲ್ಲಕ್ಕಿಂತ ಮಿಗಿಲಾಗಿ ರವೀಶ್, ತನಗೆ ತಾನೇ ಈ ಮಾತುಗಳನ್ನು ಹೇಳಿಕೊಂಡ ಹಾಗೆ ಇದೆ. ದೇಶದ ಪ್ರಸಕ್ತ ವಿದ್ಯಮಾನಗಳ ಕುರಿತ ಸತ್ಯವನ್ನು ಪ್ರಭುತ್ವಕ್ಕೂ ಪ್ರಜೆಗಳಿಗೂ ಹೇಳುವುದು ತನ್ನ ಆದ್ಯ ಕರ್ತವ್ಯ ಎಂದು ರವೀಶ್ ಭಾವಿಸಿದ್ದಾರೆ. ತಾನು ಸಹ ಈ ದೇಶದ ಓರ್ವ ಪ್ರಜೆಯಾಗಿರುವುದರಿಂದ ಈ ಸತ್ಯಗಳನ್ನು ಎದುರಿಸುವ ಜವಾಬ್ದಾರಿ ತನಗೂ ಇದೆ ಎಂಬ ತಿಳುವಳಿಕೆಯೂ ರವೀಶ್ ಅವರಿಗೆ ಇದೆ. ಮೃತ ನ್ಯಾಯಾಧೀಶ ಬೃಜ್ ಗೋಪಾಲ್ ಹರಿಕಿಷನ್ ಲೋಯಾ ಅವರ ಕುಟುಂಬ ಮಾತ್ರವಲ್ಲ, ಇಡೀ ದೇಶವೇ ಪ್ರಭುತ್ವದ ಭಯದಲ್ಲಿ ಬೇಯುತ್ತಿದೆ. ಸಮಷ್ಠಿ ಬದುಕಿನ ಸಮಸ್ತವನ್ನೂ ಆವರಿಸಿಕೊಳ್ಳುತ್ತಿರುವ ಈ ಭಯದಿಂದ ಮುಕ್ತರಾಗಿ ಹೊರಬರುವುದಕ್ಕೆ ಇರುವುದು ಒಂದೇ ಹಾದಿ; ಭಯವಿಲ್ಲದೆ, ಅಂಜದೆ, ಅಳುಕದೆ ದನಿ ಎತ್ತಿ ಮಾತಾಡುವುದು; ಮಾತಾಡುತ್ತಲೇ ಇರುವುದು. ತನ್ನ ಆ ಪ್ರೈಮ್ ಟೈಮ್ ಪ್ರಸಾರದ ಕಾರ್ಯಕ್ರಮದ ಬಗ್ಗೆ ರವೀಶ್ ಹೀಗೆ ಹೇಳುತ್ತಾರೆ, 'ಆ ದಿನ ನಾನು ಮಾತನಾಡಿದೆ; ಆ ಕ್ಷಣದಿಂದ ನಾನು ಸ್ವತಂತ್ರನಾದೆ. ನಿಮ್ಮನ್ನು ಆವರಿಸಿಕೊಂಡಿರುವ ಭಯದಿಂದ ಕಳಚಿಕೊಂಡು ಹೊರಬನ್ನಿ. ನಿಮ್ಮ ದುಃಖದುಮ್ಮಾನಗಳಿಗೆ ಮಾತುಕೊಡಿ. ಆಡಳಿತದ ವಿರುದ್ಧ ನಿಮ್ಮ ದೂರುಗಳನ್ನು ಗಟ್ಟಿ ದನಿಯಲ್ಲಿ ಘೋಷಿಸಿ. ಆಗ ಮಾತ್ರ ನೀವು ನಿಮ್ಮ ಸ್ವಾತಂತ್ರ್ಯವನ್ನು ಆಗಿಸಿಕೊಳ್ಳುತ್ತಿದ್ದೀರಿ, ಸ್ವಾತಂತ್ರ್ಯವನ್ನು ಸಾಧಿಸಿಕೊಳ್ಳುತ್ತಿದ್ದೀರಿ ಎಂದು ಅರ್ಥ’ ಪ್ರಸ್ತುತ ಪುಸ್ತಕದ ಮೊತ್ತ ಮೊದಲ ಪ್ರಬಂಧ 'ಭೀತಿ ಮೀರಿದ ಮಾತು’ ಇಡೀ ಪುಸ್ತಕದ ಸಂದೇಶವೂ ಹೌದು; ತಾತ್ಪರ್ಯವೂ ಹೌದು.

 

ದೇಶದ ಹಾಲಿ ಪ್ರಧಾನಿ, ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅನತಿ ಕಾಲದಲ್ಲೇ 2002ರ ಗುಜರಾತ್ ನರಹತ್ಯೆ ಸಂಭವಿಸಿತು. ಆ ರಾಜ್ಯದ ಗೋಧ್ರಾ ಎಂಬ ಊರಿನಲ್ಲಿ ನಡೆದ ಒಂದು ದುರ್ಘಟನೆಗೆ ರಾಜ್ಯದ ಇಡೀ ಮುಸ್ಲಿಂ ಸಮುದಾಯವನ್ನು ಸಾಮೂಹಿಕವಾಗಿ ಹೊಣೆಗಾರರು ಎಂಬಂತೆ, ಅವರನ್ನು ನಡೆಸಿಕೊಳ್ಳಲಾಯಿತು. ಅದು ಅಷ್ಟಕ್ಕೇ ನಿಲ್ಲಲಿಲ್ಲ. ಸರಕಾರದ ಸಮವಸ್ತ್ರದ ಸಿಬ್ಬಂದಿಯ ಬದಲಿಗೆ ರಾಜ್ಯದ ಸಾಮಾನ್ಯ ಜನರೇ ಊರು ಊರುಗಳಲ್ಲಿ ಒಟ್ಟಾಗಿ, ಅಸಹಾಯಕ ಮುಸ್ಲಿಮರ ಮನೆಗಳ ಒಳಗೆ ನುಗ್ಗಿ ಹಲ್ಲೆ ನಡೆಸಿದರು; ಗ್ಯಾಸ್ ಸಿಲಿಂಡರುಗಳನ್ನು ಸ್ಫೋಟಿಸಿ, ಅಂಗಡಿ, ಮುಂಗಟ್ಟುಗಳನ್ನು ಸುಟ್ಟು ಹಾಕಿದರು; ಕೈಗೆ ಸಿಕ್ಕವರನ್ನು ಮನೆಗಳಲ್ಲಿ ಸುಟ್ಟು ಕೊಂದರು; ಬೀದಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಚ್ಚಿ ಕೊಂದರು. ಕೈಯಲ್ಲಿ ಮತದಾರರ ಪಟ್ಟಿ ಹಿಡಿದುಕೊಂಡು ಮುಸ್ಲಿಮ್ ಪ್ರಜೆಗಳನ್ನೂ ಅವರ ಮನೆ ಮಳಿಗೆ, ಫ್ಯಾಕ್ಟರಿ, ಗೋಡೌನು, ಗ್ಯಾರೇಜುಗಳನ್ನೂ ಹುಡುಕಿ ಹುಡುಕಿ ನಾಶಪಡಿಸಿದರು. ಹಲವು ಊರುಗಳಲ್ಲಿ ಗಲಭೆಕೋರರ ಜೊತೆ ಪೋಲಿಸ್ ಸಿಬ್ಬಂದಿ ಸಹ ಶಾಮೀಲಾಯಿತು. ಹಿಂಸೆ ತಾನೇ ತಾನಾಗಿ ವಿಜೃಂಭಿಸಿತು; ಎಲ್ಲವೂ ಪೂರ್ವಯೋಜಿತವಾಗಿತ್ತು; ಮತ್ತು ರಾಜ್ಯದ ಅಂದಿನ ಮುಖ್ಯಮಂತ್ರಿಯವರ ಸಮ್ಮುಖದಲ್ಲೇ, ರಾಜ್ಯದ ರಾಜಧಾನಿಯಲ್ಲಿ ಅಕ್ಷರಶಃ ಅವರ ಕಣ್ಣೆದುರಿಗೇ ನಡೆಯಿತು. ಇಂತಹ ದುರ್ಭರ ಸನ್ನಿವೇಶದಲ್ಲಿ ರಾಜ್ಯದ ಪ್ರಜೆಗಳು ಮತ್ತು ಅವರ ಆಸ್ತಿಪಾಸ್ತಿಗೆ ರಕ್ಷಣೆ ನೀಡಲು ಸಂವಿಧಾನ ರೀತ್ಯಾ ಬದ್ಧರಾಗಿದ್ದ ಮುಖ್ಯಮಂತ್ರಿ ತನ್ನ ಕರ್ತವ್ಯವನ್ನು ನೆವಕ್ಕಾದರೂ ಪಾಲಿಸಲಿಲ್ಲ; ರಾಜ್ಯದ ಮುಖ್ಯಮಂತ್ರಿ ತನ್ನ ಸಂವೇದನ ಶೂನ್ಯ ತಟಸ್ಥ ಧೋರಣೆಯಿಂದಾಗಿ ಸಾವಿರಾರು ಅಮಾಯಕ ಪ್ರಜೆಗಳ ಸಾವಿಗೆ ನೇರವಾಗಿ ಕಾರಣರಾದರು.

 

ಇಷ್ಟೆಲ್ಲಾ ಆದ ಮೇಲೂ, ಗುಜರಾತ್ ನ ಮಾಜಿ ಮುಖ್ಯಮಂತ್ರಿಯವರ ಆಳ್ವಿಕೆಯ ಅವಧಿಯಲ್ಲಿ ನಡೆದ ಕೊಲೆ, ಅತ್ಯಾಚಾರ, ಲೂಟಿ, ಆಸ್ತಿಪಾಸ್ತಿ ನಾಶ ಮುಂತಾದ ಕರಾಳ ಘಟನೆಗಳ ಚರಿತ್ರೆ ಗೊತ್ತಿದ್ದೂ ಗೊತ್ತಿದ್ದೂ ನಮ್ಮ ಸಾಕುನಾಯಿ ಮಾಧ್ಯಮಗಳು (lapdog Media) ಸದರಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಮಂತ್ರಿಯವರ ದಕ್ಷ ಆಡಳಿತ ಮತ್ತು ಕಾರ್ಯಕ್ಷಮತೆಗಳನ್ನು ಹೊಗಳುತ್ತವೆ. ಅದಕ್ಕೆ ಬದಲಾಗಿ ‘ಅತ್ಯಾಚಾರಗಳ ಅತ್ಯುತ್ತಮ ಉಸ್ತುವಾರಿ’, ‘ಕೊಲೆಗಳ ಅತ್ಯುತ್ತಮ ಪ್ರಾಯೋಜಕ’ ಮತ್ತು ‘ಹಿಂದುತ್ವದ ಹೊಡಿಬಡಿ ಗುಂಪುಗಳ ದಕ್ಷ ಖಜಾಂಚಿ’, ‘ಮ್ಯಾನೇಜರ್’, ‘ಪ್ರಾಯೋಜಕ’ ಎಂದು ಮುಂತಾದ ನಾಮವಿಶೇಷಣಗಳಿಂದ ಪ್ರಧಾನಮಂತ್ರಿಗೆ ಮಾಧ್ಯಮಗಳು ಬಹುಪರಾಕ್ ಹೇಳಿದ್ದರೆ, ಅದು ಅವರ ವ್ಯಕ್ತಿತ್ವಕ್ಕೆ ಹೆಚ್ಚು ಒಪ್ಪುತ್ತಿತ್ತು. ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳುವ ಕಲೆಯನ್ನು ಕರಗತಮಾಡಿಕೊಂಡಿರುವ ಈ ನಟಸಾರ್ವಭೌಮ, 2017ರ ಗುಜರಾತ್ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ರಾಜ್ಯದ ಪಾಲನ್ ಪುರ ಎಂಬಲ್ಲಿ ನಡೆದ ಒಂದು ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಒಂದು ಹಸಿ ಹಸಿ ಸುಳ್ಳನ್ನು ನಾಟಕೀಯ ಶೈಲಿಯಲ್ಲಿ ತಕ್ಕ ಹಾವಭಾವಗಳೊಂದಿಗೆ ಹೇಳಿದರು ಮತ್ತು ಅಭಿನಯಿಸಿದರು. ಅವರ ಪ್ರಕಾರ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಅವರ ಮನೆಯಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗ, ಪಾಕಿಸ್ತಾನದ ವಿದೇಶಾಂಗ ಮಂತ್ರಿ, ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (ಹೇಳಿಕೇಳಿ ಒಬ್ಬ ಮುಸ್ಲಿಮ!) ರಹಸ್ಯವಾಗಿ ಸಭೆ ಸೇರಿದ್ದರು. ಅದರ ಮಾರನೆಯ ದಿನವೇ ಮಣಿಶಂಕರ ಅಯ್ಯರ್ ಪ್ರಧಾನ ಮಂತ್ರಿಗಳನ್ನು ‘ನೀಚ’ ಎಂದು ಕರೆದರು! ಇದೆಲ್ಲ ಚುನಾವಣೆಗಳ ಸಮಯದಲ್ಲೇ ಯಾಕೆ ನಡೆಯಬೇಕು? ಯಾಕೆ ಪಾಕಿಸ್ತಾನದ ಮಾಜಿ ವರಿಷ್ಠ ಸೇನಾಧಿಕಾರಿ ಅರ್ಷಾದ್ ರಫೀಕ್, ಗುಜರಾತ್ ನ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲರ ಹೆಸರನ್ನು ರಾಜ್ಯದ ಮುಖ್ಯಮಂತ್ರಿ ಪದವಿಗೆ ಸೂಚಿಸಬೇಕು?’ ಎಂದು ಪ್ರಧಾನಮಂತ್ರಿಯವರು ಕೇಳಿದರು. 2017ರ ಡಿಸೆಂಬರ್ 9ರಂದು ಪಾಲನ್ ಪುರದಲ್ಲಿ ತನ್ನ ಚುನಾವಣಾ ಭಾಷಣದ ನಡುವೆ ಪ್ರಧಾನ ಮಂತ್ರಿ ಹೇಳಿದ ಮಾತುಗಳಲ್ಲಿ ಮಣಿಶಂಕರ್ ಅವರ ನಿವಾಸದಲ್ಲಿ ಊಟಕ್ಕಾಗಿ ಕೆಲವು ಜನ ಒಟ್ಟು ಸೇರಿದ್ದರು ಎಂಬುದು ಮಾತ್ರ ಸತ್ಯ. ಆ ದಿನ ಪ್ರಧಾನಮಂತ್ರಿಗಳು ಹೇಳಿದ್ದರಲ್ಲಿ ಉಳಿದ ಅಷ್ಟೂ ಮಾತುಗಳು ಒಂದೋ ನೂರಕ್ಕೆ ನೂರು ಸುಳ್ಳು ಅಥವಾ ಅಂತಹ ಸುಳ್ಳಿಗಿಂತಲೂ ಹೆಚ್ಚು ಅವಾಂತರಕಾರಿಯಾದ ಅರ್ಧಸತ್ಯ. ಆ ಔತಣಕೂಟವೇನೂ ರಹಸ್ಯ ಸಭೆಯಾಗಿರಲಿಲ್ಲ. ಅದಕ್ಕೆ ಹಲವು ಪತ್ರಕರ್ತರನ್ನೂ ಆಹ್ವಾನಿಸಲಾಗಿತ್ತು. ಪ್ರಧಾನಮಂತ್ರಿ ಆರೋಪಿಸಿದಂತಹ ಯಾವ ಒಳಸಂಚೂ ಅಂದು ನಡೆದಿರಲಿಲ್ಲ. ಬಹುಶಃ ಗುಣಪಡಿಸಲಾಗದ ಸುಳ್ಳುಗಾರನಾಗಿರುವ ಕಾರಣಕ್ಕೇನೆ, ಪ್ರಧಾನಮಂತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಡೋಂಗಿ ಸುದ್ದಿಯನ್ನು ಸಾಂಕ್ರಾಮಿಕ ರೋಗದಂತೆ ಹರಡುವವರಿಗೆ ಹಾಗೂ ತಮ್ಮ ಅಪಪ್ರಚಾರದಿಂದ ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ‘ಟ್ರೋಲ್’ ಮಾಡುವ ದೇಶದ ಲಕ್ಷಾಂತರ ಸಾಮಾಜಿಕ ಮಾಧ್ಯಮ ವ್ಯಸನಿಗಳಿಗೆ, ಆರಾಧ್ಯ ಪುರುಷನೂ, ಸ್ಫೂರ್ತಿಯ ಸೆಲೆಯೂ ಆಗಿದ್ದಾರೆ. ಇಂತಹ ಡೋಂಗಿ ಮನುಷ್ಯನಿಂದ ದ್ವೇಷದ ಸನ್ನಿ ತಗಲಿಸಿಕೊಂಡವರು ಮತ್ತು ತಾವು ಎತ್ತಿ ಹಿಡಿಯುವ ಹಿಂದುತ್ವದ ರಾಜಕೀಯ ಸಿದ್ಧಾಂತಕ್ಕೋಸ್ಕರ, ನಮ್ಮ ಬೆನ್ನು ಹತ್ತಿ ಕೂತ ಬೇತಾಳಗಳು ಮುಂತಾದವರನೆಲ್ಲ ರವೀಶ್ ತನ್ನ ಈ ಪುಸ್ತಕದಲ್ಲಿ ಕರೆಯುವುದು ‘ಯಂತ್ರ ಮಾನವರು-ರೋಬೋ ಪಬ್ಲಿಕ್’ ಎಂದು. ಇವರನ್ನು ಸಾಮಾಜಿಕ ಮಾಧ್ಯಮದ ಸ್ನಾತಕರನ್ನಾಗಿ ರೂಪಿಸುವ ಶಿಕ್ಷಣ ಕೇಂದ್ರವೇ ‘ವಾಟ್ಸಪ್ ವಿಶ್ವವಿದ್ಯಾಲಯ’ (ರವೀಶ್ ರದ್ದೆ ನಾಮಕರಣ!) ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈಗ ಪ್ರತಿಯೊಬ್ಬನ ಮೊಬೈಲ್ ಫೋನ್ ನಲ್ಲೂ ಅಂತರ್ಗತವಾಗಿ ಇರುವ ವಾಟ್ಸಪ್ ಯೂನಿವರ್ಸಿಟಿಗಳ ಅಗತ್ಯವೇ ಇಲ್ಲ. ಕನ್ನಡದ ‘ಸಾಕು ನಾಯಿ’ ಪತ್ರಿಕೆಗಳೆ ಈ ತಥಾಕಥಿತ ವಾಟ್ಸಪ್ ವಿಶ್ವವಿದ್ಯಾಲಯಗಳ ಕೆಲಸವನ್ನು ನಿರ್ವಹಿಸುತ್ತಿವೆ. ಉದಾಹರಣೆಗೆ 2017ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್, ತಮ್ಮ ಮನೆ ಬಾಗಿಲಿನಲ್ಲೇ ಕೊಲೆಯಾದರು. ಸೂಕ್ಷ್ಮಜ್ಞರಿಗೆ ಗೌರಿ ಕೊಲೆ, ಈ ಮೊದಲೇ ನಡೆದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, ಕಮ್ಯುನಿಸ್ಟ್ ಮುಖಂಡ ಗೋವಿಂದ ಪನ್ಸಾರೆ, ಕರ್ನಾಟಕದ ಚಿಂತಕ ಎಂ.ಎಂ.ಕಲಬುರ್ಗಿ ಅವರುಗಳ ಹತ್ಯೆಯನ್ನು ನೆನಪಿಸಿತ್ತು. ಈ ನಾಲ್ಕು ಕೊಲೆಗಳ ಹಿಂದೆ ಒಂದು ಏಕಸೂತ್ರತೆ ಇದ್ದುದನ್ನು ಎಲ್ಲರೂ ಗಮನಿಸಿದ್ದರು; ಮತ್ತು ಈ ಕೊಲೆಗಳನ್ನು ಯಾವ ಶಕ್ತಿಗಳು ಪ್ರಾಯೋಜಿಸಿರಬಹುದು ಎಂಬುದರ ಬಗ್ಗೆ ಅವರೆಲ್ಲ ತಮ್ಮದೇ ಆದ ತೀರ್ಮಾನಗಳಿಗೆ ಬಂದಿದ್ದರು. ಆದರೆ ಕನ್ನಡದ ಸಾಕುನಾಯಿ ಪತ್ರಿಕೆಗಳು ಮಾತ್ರ ಗೌರಿ ಕೊಲೆಯ ಆರೋಪಿಗಳು ಯಾರು ಎಂಬ ಬಗ್ಗೆ ಆಧಾರರಹಿತ ಊಹಾಪೋಹಗಳನ್ನು ಬಿತ್ತರಿಸುತ್ತಲೇ ಹೋದವು; ಕೊಲೆಯ ಕುರಿತು ಅವು ಹೊಸೆದ ಕಟ್ಟುಕತೆಗಳು ‘ನಕ್ಸಲರು ಈ ಕೊಲೆಗೆ ಕಾರಣ’, ‘ಗೌರಿಯವರ ಜಮೀನಿನ ಕುರಿತ ವಿಚಾರದಿಂದಾಗಿ ನಡೆದ ಕೊಲೆ’- ಹೀಗೆ, ವೈವಿಧ್ಯಮಯವಾಗಿದ್ದವು; ರೋಚಕವೂ ಆಗಿದ್ದವು. ಆದರೆ ಗೌರಿಯವರ ಕೊಲೆಗೆ ಪ್ರೇರಣೆ ಒದಗಿಸಿದ್ದು ಹಿಂದುತ್ವದ ಸಿದ್ಧಾಂತ ಹಾಗೂ ಅದು ಒಂದು ಸುಸಂಘಟಿತ ಮತ್ತು ಪೂರ್ವಯೋಜಿತ ಕಾರ್ಯಾಚರಣೆ ಎಂಬ ವಿವರಗಳು ಅಧಿಕೃತ ಮೂಲಗಳಿಂದಲೇ ಪ್ರಕಟವಾದಾಗ, ಕನ್ನಡದ ಹೆಚ್ಚಿನ ದಿನಪತ್ರಿಕೆಗಳು ಅದನ್ನು ಒಂದೋ ಅಲಕ್ಷಿಸಿದವು, ಇಲ್ಲ ಮೂಲೆಗೆ ಸರಿಸಿದವು. ರವೀಶ್ ಕುಮಾರ್ ಅವರ ಪ್ರಸ್ತುತ ಸಂಕಲನದಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಹೊಡಿಬಡಿ ಗುಂಪೊಂದರಿಂದ ಹಲ್ಲೆಗೊಳಗಾದ 'ಕಾರವಾನ್’ ಪತ್ರಿಕೆಯ ಪತ್ರಕರ್ತ ಬಾಸಿತ್ ಮಾಲಿಕ್ ಹಾಗೂ ಸೆಪ್ಟೆಂಬರ್ ತಿಂಗಳ ಮೊದಲ ವಾರ ಕೊಲೆಯಾದ ಗೌರಿ ಲಂಕೇಶ್ ಅವರುಗಳಿಗೆ ಶೃದ್ಧಾಂಜಲಿಯ ಬರಹವಿದೆ. ಈ ಬರಹಕ್ಕೆ ಕೊಟ್ಟಿರುವ ಶೀರ್ಷಿಕೆ `ಭಯ ಹುಟ್ಟು ಹಾಕಲು ಒಂದು ರಾಷ್ಟ್ರೀಯ ಯೋಜನೆ’ ಅರ್ಥಪೂರ್ಣವಾಗಿದೆ-

 

ಬಾಸಿತ್ ಮಾಲಿಕ್ ಮತ್ತು ಗೌರಿ, ಇಬ್ಬರೂ ಪತ್ರಕರ್ತರು; ಇಬ್ಬರೂ ಹಿಂದುತ್ವವಾದಿಗಳ ಬೇಟೆಗೆ ಮಿಕವಾದರು. ಬಾಸಿತ್ ಮಾಲಿಕ್, ಅವರ ಹೆಸರೇ ಹೇಳುವಂತೆ ಓರ್ವ ಮುಸ್ಲಿಮನಾಗಿರುವುದರಿಂದ ಅವರೊಬ್ಬ ಪಾಕಿಸ್ತಾನಿ ಎಂದು ಆರೋಪಿಸಿ ಹಲ್ಲೆ ನಡೆಸಿ, ಆನಂತರ ದೊಂಬಿಕಾರರು ಅವರನ್ನು ಪೊಲೀಸರಿಗೆ ಒಪ್ಪಿಸಿದರು. ಬಾಸಿತ್ ಮಾಲಿಕ್ ಮುಸ್ಲಿಮರು ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದರೆ ಹಿಂದುತ್ವವನ್ನು ಒಲ್ಲದ ಶಾಶ್ವತ ಭಿನ್ನಮತೀಯಳು ಎಂಬ ಕಾರಣಕ್ಕೆ ಗೌರಿ ಅವರನ್ನು ಶಾಶ್ವತವಾಗಿ ಮುಗಿಸಿಬಿಡಲಾಯಿತು. ಹೀಗೆ ಪ್ರಜೆಗಳಲ್ಲಿ ಭಯವನ್ನು ಬಿತ್ತುವ ಹಿಂದುತ್ವದ ರಾಷ್ಟ್ರೀಯ ಯೋಜನೆ ಅಭೂತಪೂರ್ವವಾದ ಯಶಸ್ಸು ಸಾಧಿಸಿತು!

 

ಬಾಸಿತ್ ಮಾಲಿಕ್ ಮತ್ತು ಗೌರಿ ಲಂಕೇಶ್ ಅವರ ಹಾಗೆ ಸ್ವತಃ ರವೀಶ್ ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡುವ, ನೋಡಿದ್ದನ್ನೇ ಮತ್ತೊಮ್ಮೆ ಪರಾಂಬರಿಸಿ ನೋಡುವ ಪತ್ರಕರ್ತ. 2015ರ ಸೆಪ್ಟೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ದಾದ್ರಿಯ ಬಿಶಾಡಾ ಎಂಬ ಹಳ್ಳಿಯ ನಿವಾಸಿ ಮೊಹಮ್ಮದ್ ಅಖ್ಲಾಕ್ ತನ್ನ ಮನೆಯ ಫ್ರಿಜ್ ನಲ್ಲಿ ಅಕ್ರಮವಾಗಿ ಗೋಮಾಂಸ ಇರಿಸಿದ್ದರು ಎಂದು ಆರೋಪಿಸಿ, ಆ ಹಳ್ಳಿಯವರೇ ಒಟ್ಟಾಗಿ ಅವರನ್ನು ಹೊಡೆದು ಹೊಡೆದು ಕೊಂದಿದ್ದರು. ಅಖ್ಲಾಕ್ ಅವರ ತಾಯಿ ಮತ್ತು ಪತ್ನಿಯ ಕಣ್ಣೆದುರಿಗೇ ನಡೆದ ಈ ಗುಂಪು ದಾಳಿಯಲ್ಲಿ ಅಖ್ಲಾಕ್ ಅವರ ಸಹಾಯಕ್ಕೆ ಬಂದ ಅವರ ಮಗ ಸಹ ಗಂಭೀರವಾಗಿ ಗಾಯಗೊಂಡರು; ಅವರ ಮನೆ ಕೂಡ ಸಾಕಷ್ಟು ಹಾನಿಗೆ ಒಳಗಾಯಿತು. ರವೀಶ್ ಕುಮಾರ್ ಬಿಸಾಡಾ ಹಳ್ಳಿಗೆ ತೆರಳಿ, ಅಖ್ಲಾಕ್ ಅವರ ಜರ್ಜರಿತ ಮನೆಯನ್ನು ಕಣ್ಣಾರೆ ನೋಡಿದರು. ಆ ಮನೆಯ ಮೇಲೆ ನಡೆದ ಗುಂಪು ದಾಳಿ ಎಷ್ಟು ಭೀಕರವಾಗಿತ್ತು ಎಂದರೆ ಮನೆಯ ಬಾಗಿಲು, ಸಂಧಿಗಳಲ್ಲಿ (Hinges) ಬಿಟ್ಟುಕೊಳ್ಳುವ ಬದಲು ನಡುವಿನಲ್ಲೇ ಸೀಳಿಹೋಗಿತ್ತು! ರವೀಶ್ ಅದನ್ನು ಕೂಡ ಗಮನಿಸಿದ್ದರು.

 

ಪ್ರಸ್ತುತ ಸಂಕಲನದ ಎಲ್ಲ ಬರಹಗಳೂ ಆಸಕ್ತಿಯಿಂದ ಓದಿಸಿಕೊಳ್ಳುತ್ತವೆ. ಸಂಕಲನದಲ್ಲಿ ತನ್ನ ಶೀರ್ಷಿಕೆಯಿಂದಲೇ ನಮ್ಮ ಗಮನ ಸೆಳೆಯುವ ಬರಹ ಒಂದಿದೆ. ಅದು ‘ಹೊಡಿಬಡಿ ಗುಂಪು ನೆರೆದಲ್ಲೆಲ್ಲ ಹಿಟ್ಲರನ ಜರ್ಮನಿಯೇ’ ಎಂಬ ಬರಹ. 2017ರ ಜುಲೈ ತಿಂಗಳು ನಮ್ಮ ಪ್ರಧಾನಮಂತ್ರಿ ಇಸ್ರೇಲ್ಗೆ ಪ್ರವಾಸ ಹೋಗಿದ್ದರು. ಆ ಸಂದರ್ಭದಲ್ಲಿ ಅವರು ಇಸ್ರೇಲ್ ನ ಸುಪ್ರಸಿದ್ಧ ಸ್ಮಾರಕ, ‘ಯಾದ್ ವಶೇಮ್ ಹೊಲೊಕಾಸ್ಟ್’ (ಸಾಮೂಹಿಕ ನರಹತ್ಯೆ) ಮ್ಯೂಸಿಯಂಗೆ ಭೇಟಿ ಕೊಟ್ಟಿದ್ದರು. ಭಾರತದ ಹಾಲಿ ಪ್ರಧಾನಮಂತ್ರಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ಸಂಭವಿಸಿದ ಸಾಮೂಹಿಕ ನರಹತ್ಯೆಗೆ ಮೂಕ ಪ್ರೇಕ್ಷಕನಾಗಿದ್ದರು. ಅದು ಅವರದ್ದೇ ಪಕ್ಷದ ಉಸ್ತುವಾರಿಯಲ್ಲಿ ಆಯೋಜಿಸಲಾದ ನರಹತ್ಯೆ! ಯಾದ್ ವಶೇಮ್ ಮ್ಯೂಸಿಯಂಗೆ ಪ್ರಧಾನಮಂತ್ರಿಗಳು ಕೊಟ್ಟ ಭೇಟಿಯ ನಿರೂಪಣೆಯೊಂದಿಗೆ ಪ್ರಾರಂಭವಾಗುವ ರವೀಶ್ ಅವರ ಪ್ರಬಂಧ ನರಹತ್ಯೆಯಂತಹ ವಿದ್ಯಮಾನಗಳಿಗೆ ಪ್ರೇರಣೆ ನೀಡಬಲ್ಲ ಹಿಂಸಾಪ್ರವೃತ್ತಿ ಭಾರತದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವುದನ್ನು ಖೇದದಲ್ಲಿ ಗಮನಿಸುತ್ತದೆ. ಹಿಂಸೆ ಹೇಗೆ ದಿನನಿತ್ಯದ ಮಾಮೂಲು ಸಂಗತಿಯಾಗಿ ಜನ ಅದಕ್ಕೆ ಒಗ್ಗಿಕೊಂಡು ಬಿಡಬಹುದು ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ:

 

2017ರ ರಮ್ಜಾನ್ ಮಾಸಾಂತ್ಯದ ಒಂದು ದಿನ, ದೆಹಲಿಯಿಂದ ಹರ್ಯಾಣದತ್ತ ಸಾಗುತ್ತಿದ್ದ ರೈಲಿನ ಬೋಗಿಯೊಂದರಲ್ಲಿ ಮುಸ್ಲಿಮ್ ಹುಡುಗನೊಬ್ಬನನ್ನು, ಆ ಬೋಗಿಯಲ್ಲಿದ್ದ ಅವನ ಸಹಪ್ರಯಾಣಿಕರೇ ಕೊಂದು ಹಾಕಿದರು. ಹಣ್ಣು ಕತ್ತರಿಸುವ ಚಾಕುವಿನಲ್ಲಿ ಅವನನ್ನು ಆ ಪ್ರಯಾಣಿಕರು ಇರಿದು ಕೊಂದಿದ್ದರು. ಹಾಗೆ ಕೊಂದವರಿಗೆ ಆ ಹುಡುಗ ಯಾರು? ಅವನ ಹೆಸರೇನು? ಅವನು ಯಾವ ಊರಿನವನು? ಏನೂ ಗೊತ್ತಿರಲಿಲ್ಲ. ಆದರೆ ಆ ಹುಡುಗ ಮುಸ್ಲಿಂ ಎಂದು ಅವನು ಧರಿಸಿದ್ದ ಟೊಪ್ಪಿಗೆಯಿಂದ ಅವರಿಗೆ ಗೊತ್ತಾಯಿತು. ಭಾರತದ ಅನೇಕ ಊರುಗಳಲ್ಲಿ ಈಗ ಮುಸ್ಲಿಮರನ್ನು ದ್ವೇಷಿಸಲು, ಹಿಂಸಿಸಲು, ಯಾಕೆ, ಕೊಲ್ಲಲು ಸಹ ಅವರು ಮುಸ್ಲಿಮರು ಎಂಬ ಒಂದೇ ಕಾರಣ ಧಾರಾಳವಾಗಿ ಸಾಕು. ದೆಹಲಿ, ಹರ್ಯಾಣ, ಉತ್ತರ ಪ್ರದೇಶಗಳಷ್ಟು ದೂರ ಯಾಕೆ ಹೋಗಬೇಕು? ಕರ್ನಾಟಕದ ಕರಾವಳಿಯ ಹಲವು ಊರುಗಳಲ್ಲಿ ಈಗ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ ಕೋಮುದ್ವೇಷ ಮತ್ತು ಹಿಂಸೆ ದಿನನಿತ್ಯದ ಒಂದು ಕ್ಷುಲ್ಲಕ ಸಂಗತಿಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಹಿಂಸೆ ನಮಗೆ ಒಗ್ಗಿ ಬರದ, ನಾವು ಸಹಿಸಿಕೊಳ್ಳಲಾಗದ ಕೆಡುಕು ಎಂದು ಯಾರೂ ಸೋಗುಹಾಕುವಂತಿಲ್ಲ. ಪುರಾಣಗಳಲ್ಲಿ ಹಿಂಸೆ ಎಸಗುವವರು ಖಳನಾಯಕರು. ಆದರೆ ಈಗ ನಮ್ಮ ಊರುಗಳಲ್ಲಿ ಕೋಮುಹಿಂಸೆ ನಡೆಸುವವರು ನಮ್ಮ ಸಮಾಜಕ್ಕೆ ಹೊರಗಿನವರೂ ಅಲ್ಲ; ಪುರಾಣಗಳಲ್ಲಿ ಮಾತ್ರ ನಾವು ಕೇಳಿಬಲ್ಲ ಖಳನಾಯಕರೂ ಅಲ್ಲ. ಅವರು ಥೇಟು ನಮ್ಮ ನಿಮ್ಮ ಹಾಗೆಯೇ ಇರುವವರು; ಕಳೆದ ವರ್ಷ, ದೆಹಲಿಯಲ್ಲಿ ರಮ್ಜಾನ್ ಹಬ್ಬದ ಖರೀದಿ ಮುಗಿಸಿ, ರೈಲಿನಲ್ಲಿ ತನ್ನ ಮನೆಯ ಕಡೆ ಪ್ರಯಾಣಿಸುತ್ತಿದ್ದ ಆ ಹುಡುಗನನ್ನು- ಹಾಫಿಜ್ ಜುನೈದ್ ಖಾನ್, ಅವನ ಹೆಸರು; ಅವನನ್ನು ಕೊಂದವರು ಸಹ ರಾಕ್ಷಸ ಸದೃಶ ವ್ಯಕ್ತಿಗಳೇನಲ್ಲ. ಅವರೆಲ್ಲ ತೀರಾ ಸಾಮಾನ್ಯ ಜನಗಳು; ನಮ್ಮ ಹಾಗೆಯೇ, ಅಥವಾ ನಾವೇ. ಹಿಂದುತ್ವದ ಕೋಮು ಹಿಂಸೆ ತನ್ನೊಳಗೆ ಪ್ರಭುತ್ವ ಪ್ರೇರಿತ ಸೈದ್ಧಾಂತಿಕ ಹಿಂಸೆ ಮತ್ತು ಅದನ್ನು ಮೈಗೂಡಿಸಿಕೊಂಡ ನಾಗರಿಕ ಸಮಾಜದ ಹಿಂಸೆ ಎರಡನ್ನೂ ಮೇಳವಿಸಿಕೊಂಡಿದೆ. ರವೀಶ್ ತನ್ನ ಪ್ರಬಂಧದಲ್ಲಿ ನಾಝಿಗಳು ನಡೆಸಿದ ಯಹೂದಿ ನರಹತ್ಯೆಯನ್ನು ನೆನಪಿಸುವ ಯಾದ್ ವಶೇಮ್ ಮ್ಯೂಸಿಯಂಗೆ ಭಾರತದ ಪ್ರಧಾನಿ ಭೇಟಿ ಕೊಟ್ಟದ್ದನ್ನು ಪ್ರಸ್ತಾಪಿಸುತ್ತ, ಆ ಪ್ರಮಾಣದ ಜೀವಹಿಂಸೆ ಭಾರತದಲ್ಲೂ ಸಂಭವನೀಯ ಎಂದು ನಮ್ಮನ್ನು ಎಚ್ಚರಿಸುತ್ತಾರೆ. ‘ನೆನಪಿಸಿಕೊಳ್ಳುವುದು ಅರ್ಥಾತ್ ಮರೆವಿನ ವಿರುದ್ಧ ಸೆಣೆಸಾಡುವುದು ಕೂಡ ಅಧಿಕಾರದ ಎದುರು ಸಾಮಾನ್ಯನೊಬ್ಬ ತೋರಬಲ್ಲ ಪ್ರತಿರೋಧ’ –`The struggle of man against power is the struggle of memory against forgetting’ ಎಂಬ ಖ್ಯಾತ ಲೇಖಕ ಮಿಲನ್ ಕುಂದೇರ ಅವರ ಮಾತನ್ನು ರವೀಶ್ ಅವರ ಲೇಖನ ನೆನಪಿಸುತ್ತದೆ. ಆದರೆ ನಮ್ಮ ಕಣ್ಣೆದುರೇ ಸಂಭವಿಸುತ್ತಿರುವ ಹಿಂಸೆಯನ್ನು ನೋಡಲು ಮತ್ತು ಹಿಂದೆ ಆದ ಹಿಂಸೆಯನ್ನು ನೆನಪಿಸಿಕೊಳ್ಳಲು, ನಮ್ಮ ಅಂತಃಕರಣ ಜಾಗೃತವಾಗಿರಬೇಕು. ಪ್ರಸ್ತುತ ಸಂಕಲನದಲ್ಲಿ ಒಂದೆಡೆ ರವೀಶ್ ಹೇಳುತ್ತಾರೆ, `ನಮ್ಮೊಳಗೆ ಅಂತಃಕರಣ ಎಂಬುದೇ ಇಲ್ಲವಾದರೆ, ಹಿಂದು ಅಥವಾ ಬೌದ್ಧ ಅಥವಾ ಮುಸ್ಲಿಂ ಆಗಿರುವುದು ಎಂದರೆ ಏನು ಎಂಬುದು ನಮಗೆ ಅರ್ಥವೇ ಆಗುವುದಿಲ್ಲ’.

ರವೀಶ್ ಅವರ ಪ್ರಜಾಸತ್ತಾತ್ಮಕ ಆಶಯಗಳಿಗೆ ಅನುಗುಣವಾಗಿ ಅವರ ಈ ಕೃತಿಯ ಗದ್ಯ ಶೈಲಿಯೂ ಸರಳವಾಗಿದೆ; ಸುಲಲಿತವಾಗಿದೆ. ತನ್ನ ಟಿವಿ ಪ್ರಸಾರಗಳ ಹಾಗೆ, ಬರಹಗಳಲ್ಲಿ ಕೂಡ ರವೀಶ್ ಬಳಸುವ ಭಾಷೆ ಹಿಂದಿ. ಪ್ರಸ್ತುತ ಕೃತಿಯ ಬರಹಗಳು ಕೂಡ ಹಿಂದಿಯಲ್ಲಿದ್ದು ‘Free Voice, On Democracy Culture and the Nation’ ಎಂಬ ಶೀರ್ಷಿಕೆಯೊಡನೆ, ಇಂಗ್ಲಿಷ್ ನಲ್ಲಿ ಅನುವಾದಗೊಂಡು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಗೆಳೆಯ ಹರ್ಷಕುಮಾರ್ ಕುಗ್ವೆ ಈ ಪುಸ್ತಕದ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹರ್ಷ ಅವರ ಅನುವಾದವನ್ನು, ಅದರ ಮೂಲ ಯಾವುದು ಎಂಬ ಬಗ್ಗೆ ತಲೆಕೆಡಿಸಿಕೊಳ್ಳದೆ ಅದೇ ಒಂದು ಸ್ವತಂತ್ರ ಕೃತಿ ಎಂಬಂತೆ ಓದಬಹುದು; ಅವರ ಅನುವಾದ ಅಷ್ಟು ಸೊಗಸಾಗಿದೆ. ಹರ್ಷ ತನ್ನ ಅನುವಾದದಲ್ಲಿ ರವೀಶ್ ಅವರ ಸರಳವೂ, ಸುಭಗವೂ ಆದ ಗದ್ಯಶೈಲಿಯನ್ನು ಉಳಿಸಿಕೊಂಡಿರುವುದರ ಜೊತೆಗೆ ಮೂಲ ಲೇಖಕರ ವಸ್ತುನಿಷ್ಠತೆ, ಜೀವನಶ್ರದ್ಧೆ ಮತ್ತು ಕಳಕಳಿಗಳಿಗೂ ಕನ್ನಡದ ಮಾತು ನೀಡಿದ್ದಾರೆ. ರವೀಶ್ ಅವರ ಪ್ರಬಂಧ ಸಂಕಲನ ಮತ್ತು ಈ ಅನುವಾದ ಇವೆರಡೂ ತಿಳಿನೀರಿನ ಕೊಳದಷ್ಟು ಶುಭ್ರವೂ ಪಾರದರ್ಶಕವೂ ಆಗಿರುವುದರಿಂದ ಅದಕ್ಕೆ ಖಂಡಿತ ನನ್ನ ಈ ಮುನ್ನುಡಿಯ ಅಗತ್ಯವಿಲ್ಲ. ಅದಾಗ್ಯೂ ಮುನ್ನುಡಿಯ ನೆಪದಲ್ಲಿ ನನ್ನ ಕೆಲ ಮಾತುಗಳಿಗೆ ಅವಕಾಶ ಕಲ್ಪಿಸಿಕೊಟ್ಟ ಹರ್ಷ ಹಾಗೂ ಕೃತಿಯನ್ನು ಪ್ರಕಟಿಸುತ್ತಿರುವ ಅಹರ್ನಿಶಿ ಪ್ರಕಾಶನದ ಅಕ್ಷತಾ ಅವರಿಗೆ ನಾನು ಕೃತಜ್ಞ.

- ಜಿ. ರಾಜಶೇಖರ

Related Books