
‘ಹರಿವಿಲಾಸ’ ಕೃತಿಯು ಕೆ.ಆರ್. ಶೇಷಗಿರಿ ಹಾಗೂ ಮೈಲಹಳ್ಳಿ ರೇವಣ್ಣ ಅವರ ಸಂಪಾದಿತ ಕೃತಿಯಾಗಿದೆ. ಕೃಷ್ಣಚರಿತೆಯನ್ನು ಹರಿವಂಶಪುರಾಣ, ಬ್ರಹ್ಮಪುರಾಣ, ವಿಷ್ಣು ಪುರಾಣ, ಬ್ರಹ್ಮ ವೈವರ್ತಪುರಾಣ ಹಾಗೂ ಭಾಗವತಗಳಲ್ಲಿ ವಿವರಿಸಿದೆ. ಸಂಸ್ಕೃತ ಕಾವ್ಯಗಳಲ್ಲಿರುವಂತೆ ಕನ್ನಡ ಕೃತಿಗಳಲ್ಲಿ ಕೃಷ್ಣನ ವಿಚಾರ ಕಂಡುಬರುತ್ತವೆ. ಅನೇಕ ವಿದ್ವಾಂಸರು ಪುರಾಣಗಳಲ್ಲಿ ವಿಷ್ಣು ಪುರಾಣವೇ ಪ್ರಾಚೀನವೆಂದು ಅಭಿಪ್ರಾಯಪಡುತ್ತಾರೆ. 'ಪುರಾಣಗಳು ನಮ್ಮ ಪರಂಪರಾಗತವಾದ ಭವ್ಯಪರಂಪರೆಯ ಐತಿಹಾಸಿಕ-ಆಧ್ಯಾತ್ಮಿಕ ಆದಿಭೌತಿಕಾದಿ ವಿಷಯಗಳನ್ನು ಕೂಲಂಕಷವಾಗಿ ಅರಿಯಲು ಸಾಮಗ್ರಿಗಳನ್ನು ಒದಗಿಸಿವೆ ಎಂದರೆ ಅತಿಶಯೋಕ್ತಿಯಾಗಲಾರದು. ವಿಷ್ಣು ಪುರಾಣವು ಸಾತ್ವಿಕ ಪುರಾಣಗಳಲ್ಲಿ ಅಗ್ರಗಣ್ಯ'' ಈ ಪುರಾಣ ರಚಿತವಾದ ಕಾಲವನ್ನು ಕ್ರಿ.ಶ. 200 ರಿಂದ 400ರ ಒಳಗೆ ಆಗಿರಬೇಕೆಂದು ವಿದ್ವಾಂಸರ ಅಭಿಪ್ರಾಯವಾಗಿದೆ. ರಚಿತವಾದ ಕಾಲದ ಬಗ್ಗೆ ಏನೇ ವಿವಾದಗಳಿರಲಿ 'ವಾಯು - ಬ್ರಹ್ಮ ಮತ್ಯಾದಿ ಪುರಾಣಗಳಂತೆ, ಕಾಲನಿರ್ಣಾಯಕ ಸಾಮಗ್ರಿಗಳು ಅಲಭ್ಯವಾದರೂ ಭಾಷೆ, ಸಾಮಾಜಿಕ, ಚಾರಿತ್ರಿಕ ಹಿನ್ನಲೆ ಮುಂತಾದವು ಗಳಿಂದ ಈ ವಿಷ್ಣು ಪುರಾಣವು ಇತರ ಪುರಾಣಗಳಿಗಿಂತ ಪ್ರಾಚೀನವೆನ್ನಲಡ್ಡಿಯಿಲ್ಲ'' ವಿಷ್ಣುಪುರಾಣದಲ್ಲಿ ಕೃಷ್ಣನ ಕಥೆ ವೇಗವಾಗಿ ಸಾಗಿದರೆ ಭಾಗವತದಲ್ಲಿ ಕೃಷ್ಣನ ಪಾರಮ್ಯ ವನ್ನು ಪಸರಿಸುವುದೇ ಮುಖ್ಯ ಧೈಯವಾದುದರಿಂದ ಮಂದಗತಿಯಲ್ಲಿದ್ದರೂ ರಮ್ಯವಾಗಿ ಓದುಗರನ್ನು ಆಕರ್ಷಿಸುತ್ತದೆ. 'ಭಾಗವತ ಪುರಾಣ ತಿಲಕ ! ಅದರಲ್ಲಿ ಭಗವಂತನ ದಿವ್ಯ ಚರಿತೆಯ ವರ್ಣನೆ ಇದೆ. ಅದನ್ನು ಕೇಳುವುದು. ಓದುವುದು ಮೋಕ್ಷಕ್ಕೆ ಸಾಧನಗಳು. ಅದು ವೇದವೆಂಬ ಕಲ್ಪವೃಕ್ಷದ ಹಣ್ಣು ! ಶುಕಮಹರ್ಷಿಯ ಮಾತಿನಲ್ಲಿ ಹರಿದು ಬಂದ ಅಮೃತ ಭಾಗವತ, ಅಂಥ ರಸವತ್ತಾದ ಗ್ರಂಥ ಸ್ವರ್ಗ, ಕೈಲಾಸ, ವೈಕುಂಠ ಸತ್ಯಲೋಕ ಗಳಲ್ಲಿಯೂ ಸಿಕ್ಕುವುದಿಲ್ಲವಂತೆ !......... ಭಾಗವತವನ್ನು ಮೊದಲು ಭಗವಂತನಾದ ನಾರಾಯಣನೇ ಬ್ರಹ್ಮನಿಗೆ ಪ್ರೀತಿಯಿಂದ ಹೇಳಿದನು. ಅದನ್ನು ಬ್ರಹ್ಮನು ತನ್ನ ಪ್ರೀತಿಯ ಮಾನಸ ಪುತ್ರನಾದ ನಾರದನಿಗೆ ಉಪದೇಶಿಸಿದನು. ನಾರದನು ಅದನ್ನು ವ್ಯಾಸಮಹರ್ಷಿಗೆ ಹೇಳಿದನು. ವ್ಯಾಸನು ಈ ಪುಣ್ಯ ಕಥೆಯನ್ನು ಪರಮ ಭಾಗವತನಾದ ಶುಕನಿಗೆ ಹೇಳಿದನು ಎನ್ನುವ ವಿಚಾರಗಳು ಇಲ್ಲಿವೆ.
©2025 Book Brahma Private Limited.