ಕೃಷ್ಣ ಕಥನ

Author : ಟಿ.ಪಿ. ಅಶೋಕ

Pages 96

₹ 80.00




Year of Publication: 2020
Published by: ಅಭಿನವ ಪ್ರಕಾಶನ
Address: 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಕೃಷ್ಣ ಕಥನ’ ಶ್ರೀಕೃಷ್ಣ ಆಲನಹಳ್ಳಿ ಸಮಗ್ರ ಸಾಹಿತ್ಯ ಅಧ್ಯಯನ ಕೃತಿಯನ್ನು ಲೇಖಕ ಟಿ.ಪಿ. ಅಶೋಕ ರಚಿಸಿದ್ದಾರೆ. ಶ್ರೀ ಕೃಷ್ಣ ಆಲನಹಳ್ಳಿ ಅವರು ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ವರ್ಣರಂಜಿತ ವ್ಯಕ್ತಿ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಸಾಹಿತ್ಯದಿಂದ ಹೇಗೋ ತಮ್ಮ ಪ್ರೀತಿ, ಜಗಳ, ಹರಟೆಗಳಿಂದಲೂ ಅವರು ಜನಪ್ರಿಯರಾಗಿದ್ದರು. ಅವರು ನವ್ಯಸಾಹಿತ್ಯ ಚಳವಳಿ ಬಿರುಸಾಗಿದ್ದ ಕಾಲದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರೂ, ಕ್ರಮೇಣ ನವ್ಯದ ಪ್ರಭಾವದಿಂದ ಬಿಡಿಸಿಕೊಂಡು ತಮ್ಮದೇ ದನಿಯನ್ನು ಕಂಡುಕೊಂಡರು. ಅವರಿಗೆ ಎಲ್ಲ ಪೀಳಿಗೆಯ, ಮನೋಧರ್ಮದ ಸಾಹಿತಿಗಳು ಮತ್ತು ರಾಜಕಾರಣಿಗಳ ಒಡನಾಟವಿತ್ತು. ಅಡಿಗ-ಅನಂತಮೂರ್ತಿಯವರ ಹಾಗೆ ಕುವೆಂಪು ರಾವಬಹಾದ್ದೂರ್-ಪು.ತಿ.ನ. ಅವರ ಸಾಹಿತ್ಯದ ಬಗ್ಗೆಯೂ ಅಪಾರ ಆಸಕ್ತಿ ಇತ್ತು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧವಾದ ಲೇಖನವೊಂದನ್ನು ಅವರು ಪ್ರಕಟಿಸಿದ್ದರು. ಗ್ರಾಮಾಯಣ ಸಮೀಕ್ಷೆ ಎಂಬ ಲೇಖನಗಳ ಸಂಗ್ರಹವನ್ನು ಸಂಪಾದಿಸಿದ್ದರು. ಕೆಲಕಾಲ ಅವರು ಸಮೀಕ್ಷಕ ಎನ್ನುವ ಪತ್ರಿಕೆಯನ್ನೂ ನಡೆಸುತ್ತಿದ್ದರು. ವಯಸ್ಕ ಶಿಕ್ಷಣ ಸಮಿತಿ ಪ್ರಕಟಿಸುತ್ತಿದ್ದ ‘ಪುಸ್ತಕ ಪ್ರಪಂಚ’ ಎನ್ನುವ ಪತ್ರಿಕೆಯ ಸಂಪಾದಕರಾಗಿ ಅವರು ಆಲ್ಬರ್ಟ್ ಕಾಮು, ದಾಸ್ತೋವೆಸ್ಕಿ, ಚಿನುಅ ಅಚೆಬೆ ಮುಂತಾದ ಧೀಮಂತ ಲೇಖಕರನ್ನು ಕುರಿತಂತೆ ವಿಶೇಷ ಸಂಪುಟಗಳನ್ನು ಹೊರತಂದಿದ್ದರು. ಸಾಹಿತ್ಯ ಮತ್ತು ತತ್ವಶಾಸ್ತ್ರದ ಗಂಭೀರ ವಿದ್ಯಾರ್ಥಿಯಾಗಿದ್ದ ಶ್ರೀ ಕೃಷ್ಣ ಆಲನಹಳ್ಳಿ ತಮ್ಮ ಬರವಣಿಗೆಯ ಬಗ್ಗೆ ಅಪಾರ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಯಾವ ಒಂದು ವೈಚಾರಿಕ ಇಲ್ಲವೆ ರಾಜಕೀಯ ಸಿದ್ಧಾಂತಕ್ಕೆ ತಮ್ಮನ್ನು ಕೊಟ್ಟುಕೊಳ್ಳದೆ ಎಲ್ಲದರ ಬಗ್ಗೆ ಮುಕ್ತದೃಷ್ಟಿಯನ್ನು ಇಟ್ಟುಕೊಂಡಿದ್ದರು. ಬಹಿರಂಗದಲ್ಲಿ ತುಂಬ ಲವಲವಿಕೆಯ ತುಂಟತನದ, ವ್ಯಾಮೋಹಿಯ ಇಮೇಜನ್ನು ಹೊಂದಿದ್ದರೂ, ಅಂತರಂಗದ ಪಿಸುನುಡಿಗಳಿಗೆ ಅವರು ಕಿವುಡರಾಗಿರಲಿಲ್ಲ. ಅಂತಹ ಕೃಷ್ಣ ಆಲನಹಳ್ಳಿ ಅವರ ಸಮಗ್ರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿ ಇದು.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Reviews

ಕಾದಂಬರಿ, ಕಥೆ ಮತ್ತು ಕವನಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಶ್ರೀ ಕೃಷ್ಣ ಆಲನಹಳ್ಳಿ ಯವರ ಸಾಹಿತ್ಯ ಅಧ್ಯಯನವನ್ನು ಈ ಪುಸ್ತಕದಲ್ಲಿ ಮಾಡಿಕೊಟ್ಟಿದ್ದಾರೆ, ಹಿರಿಯ ವಿಮರ್ಶಕ ಟಿ.ಪಿ.ಅಶೋಕ, 'ಶ್ರೀ ಕೃಷ್ಣ ಆಲನಹಳ್ಳಿ ಅವರು ಆಧುನಿಕ ಕನ್ನಡ ಸಾಹಿತ್ಯದ ಅತ್ಯಂತ ವರ್ಣರಂಜಿತ ವ್ಯಕ್ತಿ ಮತ್ತು ಸಾಹಿತಿಗಳಲ್ಲಿ ಒಬ್ಬರು. ತಮ್ಮ ಸಾಹಿತ್ಯದಿಂದ ಹೇಗೋ ತಮ್ಮ ಪ್ರೀತಿ, ಜಗಳ, ಹರಟೆಗಳಿಂ ದಲೂ ಅವರು ಜನಪ್ರಿಯರಾಗಿದ್ದರು. ಅವರು ನವ್ಯ ಸಾಹಿತ್ಯ ಚಳುವಳಿ ಬಿರುಸಾಗಿದ್ದ ಕಾಲದಲ್ಲಿ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರೂ ಕ್ರಮೇಣ ನವ್ಯದ ಪ್ರಭಾವದಿಂದ ಬಿಡಿಸಿಕೊಂಡು ತಮ್ಮದೇ ದನಿಯನ್ನು ಕಂಡುಕೊಂಡರು. ಅವರಿಗೆ ಎಲ್ಲ ಪೀಳಿಗೆಯ, ಮನೋಧರ್ಮದ ಸಾಹಿತಿಗಳು ಮತ್ತು ರಾಜಕಾರಣಿಗಳ ಒಡನಾಟವಿತ್ತು. ಅಡಿಗಅನಂತಮೂರ್ತಿಯವರ ಹಾಗೆ ಕುವೆಂಪು -ಅವರ ಬಹದೂರ್-ಪು.ತಿ.ನ ಅವರುಗಳ ಸಾಹಿತ್ಯದ ಬಗ್ಗೆಯೂ ಅಪಾರವಾದ ಆಸಕ್ತಿ ಇತ್ತು. 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಕುರಿತು ತುಂಬ ಚಿಕ್ಕ ವಯಸ್ಸಿನಲ್ಲಿಯೇ ಪ್ರಬುದ್ಧವಾದ ಲೇಖನವೊಂದನ್ನು ಅವರು ಪ್ರಕಟಿಸಿದ್ದರು.

ಕೃಪೆ : ವಿಶ್ವವಾಣಿ (2020 ಮಾರ್ಚಿ 22)

...........

ಟಿ.ಪಿ ಅಶೋಕ


ಅವರ ಪುಸ್ತಕಗಳ ಬಗೆಗಿನ ವಿಮರ್ಶೆ - ಹೊಸ ಮನುಷ್ಯ

ಕನ್ನಡದ ಹಿರಿಯ ವಿಮರ್ಶಕರಾದ ಟಿ.ಪಿ. ಅಶೋಕರವರ ಕೃಷ್ಣ ಕಥನ ಹಾಗೂ ದೇವನೂರು ಕಥನ ಕೃತಿಗಳು ಅಶೋಕರವರ ಸಹಜ ಸಾಹಿತ್ಯ ಪ್ರೀತಿ ಮತ್ತು ಗಂಭೀರ ಅಧ್ಯಯನದ ಉದಾಹರಣೆಗಳಾಗಿವೆ. ಕನ್ನಡ ಬರಹಗಳ ಎರಡು ಮಾದರಿಗಳಾದ ಕೃಷ್ಣ ಕಥನ ಭಾಷಣ ಮಾದರಿ ಹಾಗೂ ಪ್ರಬಂಧ ದೇವನೂರು ಕಥನ ಮಾದರಿಗಳ ಮಿತಿಗಳನ್ನು ಈ ಕೃತಿಗಳು ಮೀರಿವೆ. ಭಾಷಣ ಮಾದರಿ ಬರಹಗಳ ಅತಿ ಭಾವುಕತೆ, ರೆಟರಿಕ್ ಮೂಲಕವೇ ಎಲ್ಲವನ್ನೂ ಸಾಬೀತುಗೊಳಿಸಬಹುದೆಂಬ ನಂಬಿಕೆ, ವಾಚಾಳಿತನ ಈ ಕೃತಿಗಳಲಿಲ್ಲ. ಹಾಗೇ ಪ್ರಬಂಧ ಮಾದರಿ ಬರಹಗಳ ಪಾಂಡಿತ್ಯದ ಪ್ರದರ್ಶನ, ಪ್ರಸಿದ್ಧ ವಿಮರ್ಶಕರ ಬರಹಗಳ ಅನವಶ್ಯಕ ಉಲ್ಲೇಖ, ಅನವಶ್ಯಕವಾಗಿ ಪಾರಿಭಾಷಿಕ ಪದಗಳ ಬಳಕೆ ಇಲ್ಲಿ ಕಾಣುವುದಿಲ್ಲ. 

ಕೃಷ್ಣ ಕಥನವನ್ನು ಅಶೋಕರವರು ಶ್ರೀ ಕೃಷ್ಣ ಆಲನಹಳ್ಳಿಯವರ ಸಮಗ್ರ ಸಾಹಿತ್ಯ ಆಧ್ಯಯನ ಎಂದು ಹೇಳಿದ್ದಾರೆ. ಆದರೆ ಇದು ಕೇವಲ ಪರಿಚಯಾತ್ಮಕ ಪುಸ್ತಕವಲ್ಲ. ಕೃಷ್ಣ ಅವರ ಕೃತಿಗಳ ಬಗ್ಗೆ ಮಾತಾಡುವಾಗಲೇ ಅಶೋಕರವರು ಕಾದಂಬರಿ ಅನ್ನುವ ಪ್ರಕಾರ ಹಾಗೂ ಕನ್ನಡದಲ್ಲಿ ಕಾದಂಬರಿ ಅನ್ನುವ ಪ್ರಕಾರ ರೂಪುಗೊಂಡ ಪ್ರಕ್ರಿಯೆಯ ಬಗ್ಗೆ ಬಹಳ ಪಾಂಡಿತ್ಯಪೂರ್ಣವಾದ ಹಾಗೂ ಒಳನೋಟಗಳನ್ನು ಹೊಂದಿರುವ ಮಾತುಗಳನ್ನು ಆಡುತ್ತಾರೆ. ಮಾಡಿದ್ದುಣ್ಣೋ ಮಹರಾಯದಿಂದ ಕುಸುಮಬಾಲೆಯವರೆಗೆ ಕನ್ನಡ ಕಥನ ಸಾಹಿತ್ಯ ಬೆಳೆದುಬಂದ ರೀತಿಯ ಬಗ್ಗೆ ಅಶೋಕರವರು ಹೇಳಿರುವುದು ಕನ್ನಡ ಕಾದಂಬರಿಗಳ ಸಂಕ್ಷಿಪ್ತ ಇತಿಹಾಸವೂ, ಹಾಗೂ ಈ ದೀರ್ಘ ಇತಿಹಾಸದಲ್ಲಿ ಕಂಡುಬರುವ ವಿನ್ಯಾಸಗಳನ್ನು ವ್ಯಕ್ತಗೊಳಿಸುವ ಪ್ರಯತ್ನವೂ ಆಗಿದೆ. ಕೃಷ್ಣ ಅವರ ಸಾಹಿತ್ಯವನ್ನು ಅಶೋಕರವರು ನೋಡುವುದು ಈ ರೀತಿಯ ವಿನ್ಯಾಸದ ಭಾಗವಾಗಿ, “ಪ್ರಾಚೀನ-ನವೀನಗಳ ಸ್ನೇಹ ಸಮರಗಳ ದ್ವಂದ್ವ ವಿನ್ಯಾಸ” ಹೇಗೆ ಕಾನೂರು ಹೆಗ್ಗಡತಿ, ಮರಳಿ ಮಣ್ಣಿಗೆ ಹಾಗೂ ಕೃಷ್ಣ ಅವರ ಕಾದಂಬರಿಗಳಲ್ಲಿ ಮುಖ್ಯವಾಗಿದೆ ಅನ್ನುವುದನ್ನು ತೋರಿಸಿಕೊಡುತ್ತಾರೆ. ಕೃಷ್ಣ ಅವರ ಕಥನ ಸಾಹಿತ್ಯದಲ್ಲಿನ ವಿನ್ಯಾಸಗಳ ಬಗ್ಗೆಯೂ ಅಶೋಕರವರು ಹೇಳುತ್ತಾರೆ. ಉದಾಹರಣೆಗೆ, ಆಧುನೀಕರಣದ ಪ್ರಕ್ರಿಯೆಗೆ ಸ್ಪಂದಿಸುವ ರೀತಿ ಕೃಷ್ಣ ಅವರ ಕಾದಂಬರಿಗಳಲ್ಲಿ ಬೆಳೆಯುವ ಬಗೆಗೆ, ಆಧುನಿಕತೆಯ ಪ್ರಶ್ನೆಗಳನ್ನು ಕೃಷ್ಣ ದ್ವಂದ್ವ ನೆಲೆಯಿಂದಲೇ ನೋಡುತ್ತಾರೆ ಅನ್ನುವುದು, ಅವರ ಕಾದಂಬರಿಗಳ ಭೌತಿಕ ಲೋಕ ವಿಸ್ತಾರವಾಗುವ ಪ್ರಕ್ರಿಯೆ, ಹಾಗೂ “ವಾಸ್ತವತೆ ನವ್ಯತೆಗಳ ಕಿರು ಇಕ್ಕಟ್ಟಾದ ದಾರಿಯಲ್ಲಿ” ಪ್ರಾರಂಭ ಮಾಡುವ ಕೃಷ್ಣ ರಸ್ತೆಗೆ ಇಳಿದು ಕೊನೆಗೆ ವಾಸ್ತವತೆಯ ಹೆದ್ದಾರಿಗೆ ಬರುವ ಬಗ್ಗೆ ಹೇಳಿರುವುದನ್ನು ಗಮನಿಸಬಹುದು. ಆದರೆ ಈ ಸಮಗ್ರ ಅಧ್ಯಯನದ ಹಿರಿಮೆ ಇರುವುದು ಅದು ಕೃಷ್ಣ ಅವರ ಕಾದಂಬರಿಗಳು ಹೇಗೆ “ಒಂದನ್ನು ಮುಟ್ಟಿದರೆ ಇನ್ನೊಂದೂ ಮಿಡಿಯುವ” ಕನ್ನಡ ಕಾದಂಬರಿ ಜೀವಜಾಲದ ಭಾಗವಾಗಿದೆ ಎಂದು ತೋರಿಸುವಲ್ಲಿ. ಅಶೋಕರವರು ತೋರಿಸಿಕೊಡುವಂತೆ ಹೋಟೆಲ್ ಅನ್ನುವ ಪ್ರತಿಮೆ ಹೇಗೆ ಮರಳಿ ಮಣ್ಣಿಗೆ-ಭುಜಂಗಯ್ಯನ ದಶಾವತಾರ-ಒಡಲಾಳ ಇವುಗಳಲ್ಲಿ ಬಳಕೆಯಾಗಿದೆ ಅನ್ನುವುದು ಕನ್ನಡ ಕಾದಂಬರಿ ಲೋಕದ ಸಾತತ್ಯಕ್ಕೆ ಒಂದು ಉದಾಹರಣೆ. ಅಶೋಕರವರು ಕೊನೆಯಲ್ಲಿ ಹೇಳುವ “ದೇವನೂರು ಮಹದೇವ, ಕುಂ. ವೀರಭದ್ರಪ್ಪ, ಬಿ.ಚಂದ್ರೇಗೌಡ ಮೊದಲಾದ ಲೇಖಕರ ಹಿಂದೆ ಕೃಷ್ಣ ಖಂಡಿತವಾಗಿ ಇದ್ದಾರೆ” ಅನ್ನುವುದನ್ನು ಈ ಅಧ್ಯಯನ ಸಾಧಿಸಿ ತೋರಿಸಿದೆ. ಇನ್ನು ಅಶೋಕರವರು ಕೃಷ್ಣರವರ ಕತೆಗಳಲ್ಲಿ ಇರುವ ವಿನ್ಯಾಸಗಳ ಬಗ್ಗೆ ಹಾಗೂ ಕವಿತೆಗಳ ಬಗ್ಗೆ ಬರೆದಿರುವುದು ಒಂದು ಸೇರ್ಪಡೆಯಾಗಿದೆಯೇ ಹೊರತು ಕಾದಂಬರಿಗಳ ಬಗ್ಗೆ ಬರೆದಿರುವುದರ ಮುಂದುವರಿಕೆಯಾಗಿಲ್ಲ. ಅದಕ್ಕೆ ಕೃಷ್ಣರವರ ಕತೆಗಳು ಹಾಗೂ ಕವಿತೆಗಳ ಸಂಖ್ಯೆ ಹಾಗೂ ಸ್ವಭಾವಗಳೇ ಕಾರಣವಾಗಿರಬಹುದು. ದೇವನೂರು ಕಥನದಲ್ಲೂ ಅಶೋಕರವರು ದೇವನೂರರ ಬರವಣಿಗೆಗಳಲ್ಲಿ ಇರುವ ಪರಸ್ಪರ ಸಾವಯವ ಸಂಬಂಧ ಹಾಗೂ ಆ ಬರಹಗಳು ಕನ್ನಡದ ಇತರ ಸಾಹಿತ್ಯ ಕೃತಿಗಳ ಜೊತೆಗೆ ಹೊಂದಿರುವ ಸಂಬಂಧಗಳಲ್ಲಿ ಆಸಕ್ತನಾಗಿದ್ದೇನೆಂದು ಹೇಳುತ್ತಾರೆ. ಇಲ್ಲಿಯೂ ದೇವನೂರರ ಎಲ್ಲಾ ಬರಹಗಳಲ್ಲಿ ಇರುವ ವಿನ್ಯಾಸಗಳನ್ನು ಹಾಗೂ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಚಟುವಟಿಕೆಗಳ ಹಿಂದಿರುವ ವಿನ್ಯಾಸಗಳ ಮುಂದುವರಿಕೆಯಾಗಿ ದೇವನೂರರ ಬರಹಗಳು, ಭಾಷಣಗಳು ಹಾಗೂ ಇತರ ಸಾಮಾಜಿಕ ಕೆಲಸಗಳನ್ನು ನೋಡಲು ಪ್ರಯತ್ನ ಪಡುತ್ತಾರೆ. ಅಶೋಕರವರು ಕೃಷ್ಣ ಕಥನದಲ್ಲಿ ತೋರಿಸಿಕೊಟ್ಟಿರುವಂತೆ ಕಥಾನಾಯಕರುಗಳಲ್ಲಿನ ಪ್ರಜ್ಞೆ ಮತ್ತು ಪರಿಸರದ ವಿಘಟನೆ ಟಿ.ಪಿ. ಅಶೋಕ ಅವರ ನಾಲ್ಕು ಕಿರು ಅಧ್ಯಯನಗಳು ಹಾಗೂ ಆಧುನಿಕತೆ-ಸಾಂಪ್ರದಾಯಿಕತೆಗಳ ಘರ್ಷಣೆ ಕನ್ನಡ ಕಾದಂಬರಿ ಜೀವಜಾಲದ ಮುಖ್ಯ ತಂತು. ಇವು ದೇವನೂರರ ಸಾಹಿತ್ಯದಲ್ಲಿ ಹಾಗೂ ಅವರ ಒಟ್ಟಾರೆ ಚಟುವಟಿಕೆಗಳಲ್ಲಿ ಹೇಗೆ ಮುಂದುವರೆದಿವೆ ಅನ್ನುವುದನ್ನು ಹೇಳುತ್ತಾರೆ. ಆಧುನಿಕತೆ ತರುವ ಬದಲಾವಣೆಗಳನ್ನು ಬಯಸುವ ಲೇಖಕ ತನ್ನ ಜನಾಂಗದ ನಂಬಿಕೆ, ಆಚರಣೆ,  ಸಂಸ್ಕೃತಿಗಳನ್ನು ಹೇಗೆ ನೋಡುತ್ತಾರೆ ಅನ್ನುವುದರ ಬಗ್ಗೆ ಅಶೋಕರವರು ಹೇಳುವುದು ಆಸಕ್ತಿದಾಯಕವಾಗಿದೆ. ಆದರೆ ಕೃಷ್ಣ ಅವರ ಬಗೆಗಿನ ಅಧ್ಯಯನಕ್ಕೆ ಹೋಲಿಸಿದರೆ ದೇವನೂರು ಅವರ ಬಗ್ಗೆ ಬರೆದಿರುವುದು ಹೆಚ್ಚು ಪರಿಚಯಾತ್ಮಕ ಮತ್ತು ವಿವರಣಾತ್ಮಕವಾಗಿದೆ. ಇಲ್ಲಿ ದೇವನೂರು ಅವರ ಬರಹಗಳಿಂದ ಹಾಗೂ ಅವರ ಬಗ್ಗೆ ಬೇರೆಯವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದಿರುವ ಲೇಖನಗಳ ಉಲ್ಲೇಖಗಳ ಗಾತ್ರ ಹಾಗೂ ಸಂಖ್ಯೆ ಜಾಸ್ತಿಯಾಗಿದೆ. (ಕೃಷ್ಣ ಅವರ ಬಗ್ಗೆ ಬಂದಿರುವ ಅಧ್ಯಯನಗಳ ಸಂಖ್ಯೆ ಕಡಿಮೆ ಅನ್ನುವುದು ನಿಜ: ಆದರೆ ದೇವನೂರು ಕಥನದಲ್ಲಿ ಚದುರಿದಂತಿರುವ ವಿವರಗಳನ್ನು ಒಂದು 'ಥೀಸಿಸ್' ಮೂಲಕ ಬೆಳೆಸಲಾಗಿಲ್ಲ.)

ದೇವನೂರು ಅವರ ಸಾಹಿತ್ಯದ ಬಗ್ಗೆ ಬಂದಿರುವ ಟೀಕೆಗಳ ಬಗ್ಗೆ ಇನ್ನೂ ಹೆಚ್ಚಿನ ಪರಿಚಯ ಮಾಡಿಸಬಹುದಾಗಿತ್ತು  ಹಾಗೂ ಕೇವಲ ಉಲ್ಲೇಖಿಸುವುದರ ಬದಲು ಪುನರ್ ಪರಿಶೀಲಿಸಬಹುದಾಗಿತ್ತು. ದೇವನೂರು ಮಹದೇವ ಅವರ ಸಾಹಿತ್ಯದ ಅನುಸಂಧಾನಕ್ಕೆ ಅರ್ಥಪೂರ್ಣ ಪ್ರವೇಶವನ್ನು ಈ ಅಧ್ಯಯನ ನೀಡುತ್ತದೆ

(ಕೃಪೆ: ಪುಸ್ರಕಾವಲೋಕನ, ಬರಹ: ಬಿ. ವಿ ರಾಮ‌ ಪ್ರಸಾದ್)

 

Related Books