
‘ಅನುಭವ-ಅಭಿವ್ಯಕ್ತಿ ಮತ್ತು ಚಿಂತನ’ ಎಂಬುದು ಸಾಹಿತಿ ಶಾಂತಾ ಪಸ್ತಾಪುರ ಅವರ ಲಲಿತ ಪ್ರಬಂಧಗಳ ಸಂಕಲನ. ಒಟ್ಟು 16 ವಸ್ತುವೈವಿಧ್ಯತೆಯ ಪ್ರಬಂಧಗಳಿದ್ದು, ಕೊನೆಯದಾಗಿ ಸುಮಾರು 12 ಹಬ್ಬಗಳ ವೈಶಿಷ್ಟ್ಯವನ್ನು, ಅವುಗಳ ಸ್ವೀಕಾರದ ಮನೋಧರ್ಮ ವನ್ನು ಪ್ರಬಂಧಗಳ ಮಾದರಿಯಲ್ಲಿ ರಚಿಸಿದ್ದು, ಓದುಗರನ್ನು ಸೆಳೆಯುವಂತಿವೆ.
ಮ್ಮ ಅನುಭವಗಳನ್ನು ಕಥನ ಕೌಶಲ ಬಳಸಿ ಹೇಳುತ್ತಾ ಹೋಗುವುದು ಇವರ ಪ್ರಬಂಧಗಳ ಶೈಲಿ. ಆಯ್ಕೆ ಮಾಡಿರುವ ವಿಷಯ ವಸ್ತುಗಳು ಗಂಭೀರವಾಗಿಲ್ಲ. ತೀರಾ ಸರಳ ಹಾಗೂ ಸಾಮಾನ್ಯವಾಗಿದ್ದು, ಓದುಗರಲ್ಲಿ ಒಳನೋಟವನ್ನು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುತ್ತವೆ. ಯಾಂತ್ರಿಕ ಬದುಕಿನಲ್ಲಿ ಮನುಷ್ಯತ್ವ ಕಳೆದು ಹೋಗುತ್ತಿರುವುದರ ಬಗ್ಗೆ ಲೇಖಕಿ ಕಳವಳ ವ್ಯಕ್ತಪಡಿಸುವುದು ಪ್ರತಿ ಓದುಗರ ಅನುಭವವೂ ಆಗುವಷ್ಟರ ಮಟ್ಟಿಗೆ ‘ಕಲ್ಲರಳಿ ಒರಳಾಗಿ’ ಪ್ರಬಂಧವು ಪರಿಣಾಮಕಾರಿಯಾಗಿದೆ. ಮೊಮ್ಮಗಳ ಜೊತೆ ವಿಶ್ವವೇ ನನ್ನನ್ನು ನೋಡಿತು ಎಂಬ ಪ್ರಬಂಧವು ಲೇಖಕಿಯ ಅಮೆರಿಕಾ ಪ್ರವಾಸವನ್ನು ಬಣ್ಣಿಸುತ್ತದೆ. ಪಾಪ-ಕರ್ಮ ಹೀಗೆ ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವಂತಿರುವ ಪ್ರಬಂಧ ‘ದೊಡ್ಡಮ್ಮ’ ಅಲೌಕಕ ವಸ್ತವಿನದ್ದಾದರೆ, ಜಡೆಯ ಗಮ್ಮತ್ತು’ ಪ್ರಬಂಧವು ತಾಯಿ-ಮಗಳ ಸಂಭಾಷಣೆ ಮೂಲಕವೇ ಲಘು ಧಾಟಿಯಲ್ಲಿ ಜಡೆಯ ಪುರಾಣವು ಬಿಚ್ಚಿಕೊಳ್ಳುತ್ತದೆ. ನಮ್ಮ ಕಲಬುರ್ಗಿ ಆಗ -ಈಗ ಎಂಬ ಬರಹವು ಕಾಲದ ಓಟದೊಂದಿಗೆ ಸಾಗಬೇಕಾದ ಅನಿವಾರ್ಯತೆಯನ್ನು ಸಮರ್ಥಿಸಿಕೊಳ್ಳುತ್ತದೆ.
ಕೃತಿಗೆ ಮುನ್ನುಡಿ ಬರೆದ ಕಾವ್ಯಶ್ರೀ ಮಹಾಗಾಂವಕರ್ (ಸಿಕಾ) ಅವರು ‘ಸಾಹಿತ್ಯ ಪ್ರಕಾರಗಳ ಗೋಜಿಗೆ ಹೋಗದೇ ತಮಗನ್ನಿಸಿದ್ದನ್ನು ಬರೆಯುತ್ತಾ, ಹಾಡುತ್ತಾ, ಜೀವನ ಪ್ರೀತಿ ಕಾಪಾಡಿಕೊಂಡ ಸಹೃದಯಿ ಶಾಂತಾ ಪಸ್ತಾಪುರ ಅವರು, ದೇಶ ಸುತ್ತುತ್ತಾ, ಕೋಶ ಓದುತ್ತಾ, ಅನುಭವದ ವಿಸ್ತೀರ್ಣ ಹೆಚ್ಚಿಸಿಕೊಂಡಿರುವುದು ಸಂತಸ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.