ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು

Author : ಎನ್‌. ಬೋರಲಿಂಗಯ್ಯ

Pages 334

₹ 200.00




Year of Publication: 2005
Published by: ದಾರಿದೀಪ ಪ್ರಕಾಶನ
Address: ದಾರಿದೀಪ ಸಂಶೋಧನಾ ಕೇಂದ್ರ ಬೋಗಾದಿ ಬಡಾವಣೆ ಮೈಸೂರು- 570026

Synopsys

‘ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು’ ಎನ್‌. ಬೋರಲಿಂಗಯ್ಯ ಅವರ ರಚನೆಯ ಪ್ರಬಂಧ ಸಂಕಲನವಾಗಿದೆ. ಈ ಸಂಕಲನದ ಪ್ರಬಂಧಗಳು ಕಳೆದ ನಾಲ್ಕು ದಶಕಗಳ ಚಿಂತನೆ ಹಾಗೂ ಸಾಮಾಜಿಕ ಚಳವಳಿಗಳ ಜೊತೆಗಿನ ಆಳವಾದ ನಿಷ್ಠೆ ಮತ್ತು ಒಡನಾಟಗಳ ಫಲ. ಇಲ್ಲಿನ ಒಳನೋಟಗಳ ಪ್ರಾಮುಖ್ಯತೆ ಸಮಕಾಲೀನ ನವ್ಯ ಹಾಗೂ ದಲಿತ ಬಂಡಾಯ ಸಿದ್ಧ ಮಾದರಿಗಳಿಗಿಂತ ಹೊರಗುಳಿದು, ಅವುಗಳಿಗಿಂತ ಭಿನ್ನವಾಗಿ, ಸಾಹಿತ್ಯ ಸಂವೇದನೆ ಮತ್ತು ಕಲಾ ಸೃಷ್ಟಿಗಳ ಬಗ್ಗೆ ನಂಬಿಕೆಯನ್ನು ಉಳಿಸಿಕೊಂಡೇ ತನ್ನ ಕಾಲದ ಮಹತ್ವಪೂರ್ಣ ಚರ್ಚೆ- ಪ್ರಶ್ನೆಗಳಿಗೆ ಸ್ಪಂದಿಸಿರುವುದು ಕಾಣುತ್ತದೆ. ನಾನಿಲ್ಲಿ ಪ್ರಸ್ತಾಪಿಸಿರುವ ನಿಷ್ಠೆ ವಿಭಿನ್ನ ರೂಪ -ಪ್ರಮಾಣಗಳಲ್ಲಿ ಎಲ್ಲ ಬರಹಗಾರರಲ್ಲಿ ಕಂಡು ಬಂದರೂ ನಮ್ಮ ಗಮನ ಮುಖ್ಯವಾಗಿ ಪ್ರತಿಯೊಬ್ಬ ಚಿಂತಕ-ಬರಹಗಾರ-ವಿಮರ್ಶಕ ಸ್ಪಂದಿಸುವ ವಿಧಾನದ ಬಗ್ಗೆ ಇರಬೇಕಾಗಿದೆ. ಈ ಕೃತಿಯು ನಾಲ್ಕು ದಶಕದ ಬರಹಗಳನ್ನು ಒಳಗೊಂಡಿರುವುದರಿಂದ ಇಲ್ಲಿನ ವಸ್ತುವಿನಲ್ಲಿಯೂ ವೈವಿಧ್ಯತೆಯಿದೆ. ಸಾಹಿತ್ಯ ವಿಮರ್ಶೆಯ ಪರಿಕಲ್ಪನೆಗಳ ಬಗ್ಗೆ ಚಿಂತನೆಗಳು, ಕಾವ್ಯ, ನಾಟಕ, ಸಣ್ಣ ಕಥೆ ಹಾಗೂ ಕಾದಂಬರಿಗಳ ಮೇಲೆ ಪ್ರಾಯೋಗಿಕ ವಿಮರ್ಶೆ ಇತ್ಯಾದಿಗಳಿದ್ದರೂ ಈ ಪ್ರಬಂಧಗಳ ಮುಖ್ಯ ಗಮನ ವಿಮರ್ಶೆಯ ವಿಮರ್ಶೆ. ಅದರಲ್ಲೂ ಕನ್ನಡ ಸಾಂಸ್ಕೃತಿಕ ಬದುಕಿನ ಮುಖ್ಯ ಘಟ್ಟಗಳಲ್ಲಿ ಒಂದಾದ ಕುವೆಂಪು ಸಾಹಿತ್ಯ ಸೃಷ್ಟಿ ಮತ್ತು ಅದರ ಮೇಲೆ ನವ್ಯ ವಿಮರ್ಶಕರ ಬರಹಗಳು- ಈ ಮುಖಾಮುಖಿ ಬೋರಲಿಂಗಯ್ಯನವರ ವಿಮರ್ಶೆಯನ್ನು ಆಳವಾಗಿ ಪ್ರಭಾವಿಸಿರುವ ಘಟನೆ. ಹಾಗಾಗಿ ಈ ಸಂಕಲನದ ಶೀರ್ಷಿಕೆ ಸೂಚಿಸುವಂತೆ ಕುವೆಂಪು polarizing figure ಆಗಿ ಹೊರಹೊಮ್ಮುತ್ತಾರೆ. ಕನ್ನಡದ ಸಂದರ್ಭದಲ್ಲಿ ಆಧುನಿಕ ಹಾಗೂ ಆಧುನಿಕ ಪೂರ್ವಗಳೆರಡೂ ಸೇರಿದಂತೆ -ಹಲವಾರು ಸಾಂಸ್ಕೃತಿಕ ಸವಾಲುಗಳನ್ನು ಎದುರಿಸಿದ ಬರಹಗಾರ - ಎಂಬ ಕಾರಣಕ್ಕೆ ಕುವೆಂಪು ಅವರ ಬಗ್ಗೆ ಬೋರಲಿಂಗಯ್ಯನವರಿಗೆ ಮೆಚ್ಚಿಗೆ, ಅದಕ್ಕಿಂತ ಮಿಗಿಲಾಗಿ ಕುವೆಂಪು ಅವರಲ್ಲಿ ಕಾಣುತ್ತಿರುವ ಕಲಾಸೃಷ್ಟಿ ಹಾಗೂ ಜೀವನ ದೃಷ್ಟಿಗಳ ಸಂಗಮ ಈ ಪ್ರಬಂಧಗಳ ಹಾಗೂ ಬೋರಲಿಂಗಯ್ಯನವರ approachನ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಬಂಧಗಳು ಅವುಗಳ ಒಟ್ಟಾರೆ ಚಿಂತನೆ, ಒಳನೋಟ ಹಾಗೂ ವಿಧಾನ (method) ಗಳ ಕಾರಣದಿಂದ ಮುಖ್ಯವೆನಿಸಿದರೂ, ಇವುಗಳೆಲ್ಲ ಒಂದೆಡೆ ಸೇರಿರುವುದು ಕನ್ನಡ ಸಂಸ್ಕೃತಿ ಮೀಮಾಂಸೆಯಲ್ಲಿ ಆಸಕ್ತರಾದವರಿಗೆಲ್ಲ ಉಪಯುಕ್ತ. ಸಂಸ್ಕೃತಿಯ ಭೂತ – ವರ್ತಮಾನ - ಭವಿಷ್ಯಗಳ ಚರ್ಚೆಯಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಕನ್ನಡದಲ್ಲಿ ನಡೆದ ಚಿಂತನೆ ಹಾಗೂ ಅದಕ್ಕೆ ಪ್ರತಿಕ್ರಿಯೆಗಳೆರಡೂ ಇಲ್ಲಿ ಪ್ರತಿಬಿಂಬಿತವಾಗಿವೆ. ಇಲ್ಲಿನ ಹಲವಾರು ಅಂಶಗಳ ಬಗ್ಗೆ ನಾವು ಚರ್ಚಿಸಬಹುದಾದರೂ, ಕಳೆದ ಅರ್ಧ ಶತಮಾನದ ಕನ್ನಡ ಸಂದರ್ಭದ ಚರ್ಚೆಗಳನ್ನು ವಿಶ್ಲೇಷಿಸಲು ಇದು ಒಳ್ಳೆಯ ಅವಕಾಶವಾದರೂ, ನಾನಿಲ್ಲಿ ಮೂರು ಅಂಶಗಳ ಬಗ್ಗೆ ಕೆಲವು ಟಿಪ್ಪಣಿಗಳನ್ನು ದಾಖಲಿಸುತ್ತೇನೆ. ವಿಮರ್ಶೆ, ಕಲಾಸೃಷ್ಟಿಗೆ ಸಂಬಂಧಿಸಿದ ಅನಿಸಿಕೆಗಳು, ಕುವೆಂಪು ಸಾಹಿತ್ಯ ಹಾಗೂ ನವ್ಯ ವಿಮರ್ಶೆ- ಈ ಮೂರು themeಗಳು ಬಹುಶಃ ಈ ಸಂಕಲನದಲ್ಲಿ ಚರ್ಚಿತವಾಗಿರುವ ಮುಖ್ಯ ಪ್ರಶ್ನೆಗಳನ್ನು ಒಳಗೊಳ್ಳುತ್ತವೆ.

About the Author

ಎನ್‌. ಬೋರಲಿಂಗಯ್ಯ

ಎನ್‌. ಬೋರಲಿಂಗಯ್ಯ ಅವರು ಹಿರಿಯ ವಿಮರ್ಶಕ ಮತ್ತು ಕಾದಂಬರಿಕಾರಾಗಿದ್ದಾರೆ. ಕನ್ನಡ ಪ್ರಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದ ಅವರು ತಮ್ಮದೇ ಆದ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.  ಕೃತಿಗಳು : ಕನ್ನಡ ಸಾಹಿತ್ಯ ಸಂದರ್ಭ ಮತ್ತು ಕುವೆಂಪು, ವಚನ ಕಟ್ಟಿದ ಅಲ್ಲಮ, ನೈಮಿತ್ತಿಕ, ಕಡಿವಾಣ ...

READ MORE

Related Books