ಇದುವೇ ಜೀವನ

Author : ಮಾಲತಿ ಮುದಕವಿ

Pages 188

₹ 200.00




Year of Publication: 2023
Published by: ಶ್ರೀಚೂಡ ಪ್ರಕಾಶನ
Address: 275/ಎಫ್, 6-1, 4ನೇ ವೆಸ್ಟ್ ಕ್ರಾಸ್, ಉತ್ತರಾಧಿಮಠ ರಸ್ತೆ, ಮೈಸೂರು- 570004
Phone: 9740129274

Synopsys

ಕನ್ನಡ ಗದ್ಯಸಾಹಿತ್ಯದಲ್ಲಿ ಕಥೆ, ಕಾದಂಬರಿ, ಹರಟೆ, ಪ್ರವಾಸಸಾಹಿತ್ಯ ಇವುಗಳನ್ನು ಧಾರಾಳವಾಗಿ ನೋಡಬಹುದು. ಆದರೆ ವೈಚಾರಿಕ ಲೇಖನಗಳು ಕಡಿಮೆ ಎಂದೇ ಹೇಳಬಹುದು. ಮಾಲತಿ ಮುದಕವಿಯವರ 'ಇದುವೇ ಜೀವನ' ಪ್ರಬಂಧ ಸಂಕಲನವು ಈ ಕೊರತೆಯನ್ನು ತುಂಬುವತ್ತ ದೊಡ್ಡ ಹೆಜ್ಜೆಯನ್ನಿಟ್ಟಿದೆ. ವೈಚಾರಿಕ ಲೇಖನಗಳು ಸಹಸಾ ಒಣ ಲೇಖನಗಳಾಗಿರುವ ಸಾಧ್ಯತೆಯೇ ಹೆಚ್ಚು. ಆದರೆ ಈ ಸಂಕಲನದಲ್ಲಿಯ ಲೇಖನಗಳು ಆಪ್ತಲೇಖನಗಳಾಗಿವೆ. ಮಾಲತಿಯವರು ಅನೇಕ ವರ್ಷಗಳಿಂದ ಸೃಜನಶೀಲ ಸಾಹಿತ್ಯರಚನೆಯಲ್ಲಿ ತೊಡಗಿಕೊಂಡಿರುವದರಿಂದ, ಅವರ ಈ ಲೇಖನಗಳೂ ಸಹ ಆಪ್ತ ಹಾಗು ಆರ್ದ್ರ ಲೇಖನಗಳಾಗಿರುವುದು ಸಹಜವಷ್ಟೆ.

ಮಾಲತಿಯವರ ಲೇಖನಗಳ ಹರಹು ವಿಸ್ತಾರವಾದದ್ದು. ದ್ವಾಪರಯುಗದ 'ಯಕ್ಷಪ್ರಶ್ನೆ' ಯಿಂದ ಪ್ರಾರಂಭಿಸಿ, ಕಲಿಯುಗದ ಅಂದರೆ ಈಗಿನ ಅತ್ಯಾಧುನಿಕ ಯುಗದ ಸಮಸ್ಯೆಗಳ ವರೆಗೆ, ಮಾಲತಿಯವರ ವಿಶ್ಲೇಷಣೆ ನಿಶಿತವಾಗಿ, ನಿಖರವಾಗಿ ಸಾಗುತ್ತದೆ. ಯಕ್ಷಪ್ರಶ್ನೆಗಳಿಗೆ ಧರ್ಮರಾಜನು ಕೊಟ್ಟ ಉತ್ತರಗಳನ್ನೇ ಇಲ್ಲಿ ಉದ್ಧರಿಸಿದ್ದರೂ, ಅವುಗಳಿಗೆ ಲೇಖಕಿ ಕೊಡುವ ನಿರೂಪಣೆ ಆಧುನಿಕ ಕಾಲದ ವಾಸ್ತವತೆಯನ್ನು ಆಧರಿಸಿರುವಂತಹದಾಗಿದೆ. ಆಧುನಿಕ ಯುಗದ ಅನೇಕ ಸಮಸ್ಯೆಗಳನ್ನು ಮಾಲತಿಯವರು ಪ್ರಸ್ತಾಪಿಸಿದ್ದು, ಅವುಗಳಿಗೆ ಅವರು ಕಂಡುಕೊಳ್ಳುವ ಪರಿಹಾರಗಳು ವಾಸ್ತವ ಹಾಗು ನ್ಯಾಯಸಮ್ಮತ ರೀತಿಯಲ್ಲಿವೆ. ನಮ್ಮ ಈಗಿನ ಜೀವನದಲ್ಲಿಯೂ ಅನೇಕ ಯಕ್ಷಪ್ರಶ್ನೆಗಳಿದ್ದು ಮಾಲತಿಯವರು ಆ ಪ್ರಶ್ನೆಗಳಿಗೂ ಉತ್ತರ ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಉದಾಹರಣೆಗೆ, 'ಹಿರಿಯ ಹಾಗು ಕಿರಿಯ ತಲೆಮಾರುಗಳಲ್ಲಿಯ ಹೊಂದಾಣಿಕೆಯ ಸಾಧ್ಯತೆ' ಎನ್ನುವ ಲೇಖನವನ್ನು ನೋಡಿದರೆ, ಈ ಲೇಖನದಲ್ಲಿ ಮಾಲತಿಯವರು ಹಿರಿಯ ಜೀವಿಗಳ ಸಮಸ್ಯೆಗಳನ್ನು ಚಿತ್ರಿಸಿದಷ್ಟೇ ಸಹಜವಾಗಿ, ಕಿರಿಯರ ಆಸೆ, ಆಕಾಂಕ್ಷೆಗಳು, ಆಧುನಿಕ ಪರಿಸರದ ಒತ್ತಡಗಳ ಬಗೆಗೂ ವಿವರಿಸಿದ್ದಾರೆ. ಲೇಖಕಿ ಮಾಲತಿಯವರು ಕನ್ನಡದ ಹಳೆಯ ಸಾಹಿತ್ಯದ ಆಳವಾದ ಅಧ್ಯಯನವನ್ನು ಮಾಡಿರುವುದು ಅವರ ಕೆಲ ಲೇಖನಗಳನ್ನು ಓದಿದರೆ ಗೊತ್ತಾಗುತ್ತದೆ. ಇಲ್ಲಿಯ ಲೇಖನಗಳಲ್ಲಿ ಶರಣರ ವಚನಗಳ ಬಗೆಗೇ ಒಂದು ಲೇಖನವಿದೆ. ಸರ್ವಜ್ಞನ ತ್ರಿಪದಿಗಳನ್ನಂತೂ ಅವರು ಮೇಲಿಂದ ಮೇಲೆ ಉದ್ಧರಿಸುತ್ತಾರೆ. ಅಲ್ಲದೆ ಅವರು ಆಧುನಿಕ ಸಾಹಿತ್ಯವನ್ನೂ ಸಾದ್ಯಂತವಾಗಿ ನೋಡಿದವರೇ ಆಗಿದ್ದಾರೆ. ತಮ್ಮ 'ಕನ್ನಡ ಕಥಾಲೋಕವನ್ನು ಸಮೃದ್ಧವಾಗಿಸಿದ ಕಥೆಗಾರ್ತಿಯರು' ಎನ್ನುವ ಲೇಖನದಲ್ಲಿ, ಮಹಿಳೆಯರು ಆಧುನಿಕ ಶಿಕ್ಷಣದ ಜೊತೆಗೆ, ಆಧುನಿಕ ಅಭಿವ್ಯಕ್ತಿಗೂ ತೆರೆದುಕೊಂಡಿದ್ದರ ಪರಿಣಾಮವಾಗಿ, ತಮ್ಮ ಬರಹದ ಧಾಟಿ ಹಾಗು ಧೋರಣಿಯನ್ನು ಬದಲಿಸಿಕೊಳ್ಳಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ವಿವರಿಸಿದ್ದಾರೆ.

ಈ ಕಾಲದ ಕನ್ನಡದ ಮೊಟ್ಟಮೊದಲ ಲೇಖಕಿಯಿಂದ ಪ್ರಾರಂಭಿಸಿ, ಇತ್ತೀಚಿನ ಲೇಖಕಿಯರ ವರೆಗೆ ಈ ಪ್ರಬಂಧದಲ್ಲಿ ಮಾಲತಿಯವರು ಉಲ್ಲೇಖಿಸಿದ್ದಾರೆ. ಈ ಎಲ್ಲ ಲೇಖಕಿಯರ ಕಥಾನಕ, ವೈಯಕ್ತಿಕ ಹಾಗು ಸಾಮಾಜಿಕ ಮನೋಧರ್ಮ, ನಿರೂಪಣಾ ವಿಧಾನ ಇವುಗಳನ್ನು ವಿವರವಾಗಿ ನಿರೂಪಿಸಿದ ಈ ಲೇಖನವು ಮಹಾಪ್ರಬಂಧ ಒಂದರ ಮುನ್ನೋಟದಂತಿದೆ ಎಂದು ಹೇಳಿದರೆ ಸಮಂಜಸವಾದೀತು! ಆಧುನಿಕ ಮನೋವಿಜ್ಞಾನದ ಆಳವಾದ ತಿಳಿವಳಿಕೆ ಇರುವ ಮಾಲತಿಯವರ ಲೇಖನಗಳು ಮನೋವಿಶ್ಲೇಷಕ ಲೇಖನಗಳೂ ಆಗಿವೆ. ಕಿರಿಯರಿಗೆ ಒಳ್ಳೆಯ ಸಂಸ್ಕಾರವನ್ನು ಹೇಗೆ ಕೊಡಬೇಕು, ಹಿರಿಯರೊಡನೆ ನಮ್ಮ ವರ್ತನೆ ಹೇಗಿರಬೇಕು, ನಮ್ಮ ಸಾಮಾಜಿಕ ಸಂಬಂಧ ಹೇಗಿರಬೇಕು ಎನ್ನುವುದರ ವಿಶ್ಲೇಷಣಾತ್ಮಕ ಲೇಖನಗಳು ಇಲ್ಲಿವೆ. ಈ ಸಂಕಲನದ ಮೊದಲ ಲೇಖನವು ದ್ವಾಪರ ಯುಗದ ಯಕ್ಷಪ್ರಶ್ನೆಯೊಡನೆ ಪ್ರಾರಂಭವಾಗುತ್ತದೆ. ಇಲ್ಲಿಯ ಕೊನೆಯ ಲೇಖನವು ಆಧುನಿಕ ಯುಗದ ಯಕ್ಷಪ್ರಶ್ನೆಯಿಂದ ಕೊನೆಗೊಳ್ಳುತ್ತದೆ. ಈ ಯುಗದ ಅತ್ಯಂತ ವಿಷಾದದ ಸಮಸ್ಯೆ ಎಂದರೆ ಆತ್ಮಹತ್ಯೆ. ಮಾಲತಿಯವರು ಈ ಸಮಸ್ಯೆಯ ವೈದ್ಯಕೀಯ ಹಾಗು ಮಾನಸಿಕ ಕಾರಣಗಳನ್ನು ವಿಶ್ಲೇಷಿದ್ದಾರೆ. ಇಂತಹ ಲೇಖನಗಳು ಆಂಗ್ಲ ಭಾಷೆಯಲ್ಲಿ ಬಂದಿರಬಹುದು. ಕನ್ನಡದಲ್ಲಿ ಇಷ್ಟು ವಿಸ್ತಾರವಾದ ಲೇಖನ ಬಂದಿಲ್ಲವೆಂದೇ ನನ್ನ ಅನಿಸಿಕೆ. ಆತ್ಮಹತ್ಯೆಯ ಕಾರಣಗಳು, ಅವುಗಳ ನಿವಾರಣೆಗಾಗಿ ಮಾಡಬಹುದಾದ ಪರಿಹಾರ, ನೆರವು ನೀಡಬಹುದಾದ ಸಂಘಟನೆಗಳು ಮೊದಲಾದ ವಿವರಗಳು ಇಲ್ಲಿರುವದರಿಂದ ಈ ಲೇಖನವು ತುಮ್ಬ ಉಪಯುಕ್ತವಾಗಿದೆ. ಇಲ್ಲಿರುವ ಹದಿನಾರು ಲೇಖನಗಳು 'ಇದುವೇ ಜೀವನ' ಎನ್ನುವ ನಮ್ಮೆಲ್ಲರ ಜೀವನದ ಕೆಲೈಡೋಸ್ಕೋಪ ದರ್ಶನವಾಗಿವೆ.

ಓದುಗರಿಗೆ ಇವು ಜ್ಞಾನವನ್ನು ಹಾಗು ರಂಜನೆಯನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಇದೇ ಸಾಹಿತ್ಯದ ಸಾರ್ಥಕತೆಯಾಗಿದೆ! ಮಾಲತಿಯವರಿಂದ ಸೃಜನಶೀಲ ಸಾಹಿತ್ಯದ ಜೊತೆಜೊತೆಗೆ, ಇನ್ನಷ್ಟು ಇಂತಹ ಲೇಖನಗಳು ಬರಲಿ ಎಂದು ಹಾರೈಸುತ್ತೇನೆ. ಒಳ್ಳೆಯ ಓದಿಗೆ ಹಾತೊರೆಯುವ ನನಗೆ ಇದು ನನ್ನ ಸ್ವಾರ್ಥದ ಕೋರಿಕೆಯೇ ಆಗಿದೆ ಎನ್ನುವುದು ಸಹಜಸತ್ಯ!

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books