ನಾನು ಕಸ್ತೂರ್‌

Author : ಎಚ್.ಎಸ್. ಅನುಪಮಾ

Pages 211

₹ 250.00




Year of Publication: 2019
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹಾಸ್ಟೆಲ್‌, ಗದಗ- 582101

Synopsys

ಗಾಂಧಿಯೊಂದಿಗೆ ಸುಮಾರು 62 ವರ್ಷಗಳ ಕಾಲ ಸಂಸಾರ ನಡೆಸಿದ ಕಸ್ತೂರ ಬಾ ಅವರ ಬದುಕು ಹೇಗಿತ್ತು, ಸ್ವಾತಂತ್ಯ್ರ ಹೋರಾಟದಲ್ಲಿ ಅವರ ಭಾಗವಹಿಸುವಿಕೆ ಹೇಗಿತ್ತು ಮುಂತಾದ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.  ಗಾಂಧೀ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಮಸುಕಾಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ. ಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಇಂತಹ ಹಲವಾರು ವಿಷಯಗಳ ಕುರಿತು ಈ ಕೃತಿಯಲ್ಲಿ ಲೇಖಕಿ ಬರೆದಿದ್ದಾರೆ. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Reviews

ಈ ಕೃತಿಯು ಕಸ್ತೂರ ಬಾ ಜೀವನ ಚಿತ್ರಣವನ್ನು ಸಮಗ್ರವಾಗಿ ತೆರೆದಿಟ್ಟಿದೆ. ಗಾಂಧಿಗೆ 150 ತುಂಬಿದಂತೆ ಕಸ್ತೂರಬಾಗೂ ಈಗ 150ನೇ ವರ್ಷ. ಈ ವೇಳೆಯಲ್ಲಿ ಅವರ ಸಂಪೂರ್ಣ ಬದುಕಿನ ಚಿತ್ರಣವನ್ನು ಕಟ್ಟಿಕೊಡಲು ಲೇಖಕಿ, ಗುಜರಾತಿನ ಪೋರಬಂದರ ಮತ್ತು ಸಬರಮತಿಗೂ ಖುದ್ದು ಭೇಟಿ ಕೊಟ್ಟು ಅಮೂಲ್ಯ ಮಾಹಿತಿಗಳನ್ನು ಮತ್ತು ಅಪರೂಪದ ಛಾಯಾಚಿತ್ರಗಳನ್ನು ಕಲೆಹಾಕಿ, ಕೃತಿಯಾಗಿಸಿ ಓದುಗರ ಕೈಗೆ ಇಟ್ಟಿದ್ದಾರೆ. ಜತೆಗೆ ಮಹಾತ್ಮ ಗಾಂಧಿಯವರ ‘ನನ್ನ ಸತ್ಯಶೋಧನೆಯ ಕಥೆ’ ಆತ್ಮಕಥೆಯೂ ಸೇರಿದಂತೆ ಹಲವು ಕೃತಿಗಳನ್ನು ಆಕರವಾಗಿಟ್ಟುಕೊಂಡು ಕಸ್ತೂರಬಾ ಬದುಕಿನ ಚಿತ್ರಣವನ್ನು ಅಕ್ಷರವಾಗಿಸಿದ್ದಾರೆ. ಇದರಲ್ಲಿ ಇಪ್ಪತ್ತೆರಡು ಅಧ್ಯಾಯಗಳಿವೆ. ದೇಶದ ಸಾಮಾಜಿಕ– ರಾಜಕೀಯ ಜೀವನದ ಸ್ಥಿತ್ಯಂತರಗಳ ಜೊತೆಗೇ ವೈಯಕ್ತಿಕ ಬದುಕಿನ ತಿರುವುಗಳನ್ನೂ ಕಂಡ ಒಂದು ಹೆಣ್ಣಿನ ಜೀವನಕಥೆಯಂತೆ ಕಸ್ತೂರಬಾ ಅವರ ಜೀವನಗಾಥೆ ಓದುಗರ ಮನಕ್ಕೆ ಇಳಿಯುತ್ತದೆ.  ಬರವಣಿಗೆಯ ಶೈಲಿಯಿಂದಾಗಿ ಒಂದು ಕಾದಂಬರಿಯನ್ನು ಓದಿದ ಅನುಭೂತಿಯೂ ಓದುಗನಿಗೆ ದಕ್ಕುತ್ತದೆ. ಗಾಂಧಿ ಮತ್ತು ಕಸ್ತೂರಬಾ ಅವರ ಬದುಕು ಒಟ್ಟೊಟ್ಟಿಗೆ ಹೆಣೆದುಕೊಂಡಿದ್ದು, ಕಸ್ತೂರಬಾ ಅವರನ್ನು ಗಾಂಧಿಯನ್ನು ಬಿಟ್ಟು ಓದಲು ಸಾಧ್ಯವಾಗದು. ಹಾಗಾಗಿ ಈ ಇಬ್ಬರ ಜೀವನದರ್ಶನವೂ ಈ ಕೃತಿಯಲ್ಲಿ ಲಭಿಸುತ್ತದೆ.

15 ಡಿಸೆಂಬರ್‌ 2019

ಕೃಪೆ : ಪ್ರಜಾವಾಣಿ

ಬಾಪು ನೆಲದಲ್ಲಿ ಎಚ್.ಎಸ್. ಅನುಪಮಾ

 

ಕಸ್ತೂರಬಾ ಬಾಯಲ್ಲಿ ಗಾಂಧಿ ಕಥೆ ಹೇಳಿಸಿದಾಗ...

ಇದು ಮಹಾತ್ಮ ಗಾಂಧಿಯವರ 150ನೇ ಹುಟ್ಟುಹಬ್ಬದ ವರ್ಷ. ಅವರ ಪತ್ನಿ ಕಸ್ತೂರ ಬಾ ಕೂಡ ಅವರದ್ದೇ ವಯಸ್ಸಿನವರಾದ್ದರಿಂದ (ಹಾಗೆ ನೋಡಿದರೆ ಗಾಂಧಿ ಬಾ ಅವರಿಗಿಂತ ಆರು ತಿಂಗಳು ಕಿರಿಯರು) ಇದು ಅವರ 150ನೇ ಹುಟ್ಟುಹಬ್ಬದ ವರ್ಷ ಕೂಡ ಹೌದುಆದರ ಆಚರಣೆಯ ಅಂಗವಾಗಿ ಅವರನ್ನು ಕುರಿತು ಎಂದು ಹೇಳಲಾಗುವ ಹಲವು ಪುಸ್ತಕಗಳು ಹೊರಬರುತ್ತಿವೆ. ಅಂತಹ ಪುಸ್ತಕಗಳಲ್ಲಿ ಇದೂ ಒಂದು.

ಗಾಂಧಿ ಅವರ ಪ್ರಯತ್ನಗಳ ಹೊರತಾಗಿಯೂ ಅನಕ್ಷರಸ್ಥೆಯಾಗಿಯೇ ಉಳಿಯ ಬಯಸಿದ ಕಸ್ತೂರಬಾ ಬಗ್ಗೆ ನಮಗೆ ಅಷ್ಟಿಷ್ಟು ತಿಳಿದಿರುವುದೆಲ್ಲ ಗಾಂಧಿ ಮತ್ತು ಅವರ ಸಹಚರರ ಬರಹಗಳ ಮೂಲಕವೇ. ಹಾಗಾಗಿ ಬಾ ಬಗ್ಗೆ ಹೇಗೆ ಬರೆಯ ಹೊರಟರೂ ಅದರಲ್ಲಿ ಗಾಂಧಿಯೇ ಕೇಂದ್ರವಾಗಿಬಿಡುತ್ತಾರೆ. ಅನುಪಮಾ ಅವರ ಈ ಪುಸ್ತಕವೂ ಇದಕ್ಕೆ ಹೊರತಾಗಿಲ್ಲ. ಆದರೆ ಈ ಪುಸ್ತಕ ಗಾಂಧಿ ಕಥೆಯನ್ನು ಬಾ ಅವರ ಬಾಯಲ್ಲಿ ಹೇಳಿಸುವ ಮೂಲಕ ಪರೋಕ್ಷವಾಗಿ ಬಾ ಅವರ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಒಂದು ಪ್ರಯತ್ನ ಮಾಡುತ್ತದೆ. ಈ ಪ್ರಯತ್ನದಲ್ಲಿ ಅದು ತನ್ನ ಮಿತಿಯನ್ನು ಮೀರಲು ಹೋಗಿ ಎಡವುತ್ತದೆ ಎಂಬುದನ್ನೂ ಇಲ್ಲಿ ಹೇಳಿ ಬಿಡಬೇಕು.

ಕಸ್ತೂರಬಾ ಬಾಯಲ್ಲಿ ಗಾಂಧಿ ಕತೆ ಹೇಳಿಸಿದರೆ ಅದೇನೂ ತಪ್ಪಲ್ಲ. ಯಾರ ಬಾಯಲ್ಲೇ ಹೇಳಿಸಿದರೂ ಅದು ಒಳ್ಳೆಯದೇ. ಅದನ್ನು ನಮ್ಮ ಮಧ್ಯಮ ವರ್ಗದ ಕನ್ನಡದ ವಿಶಿಷ್ಟ ಸೊಗಡಿನ ಸು-ಲಲಿತ ಭಾಷಾ ಶೈಲಿಯಲ್ಲಿ, ತಾಯಿ ಮಗಳಿಗೆ ಕಥೆ ಹೇಳುವ ತಂತ್ರವನ್ನು ಬಳಸಿ ಆತ್ಮೀಯವಾಗಿ ಹೇಳುವ ಮೂಲಕ ಈ ಕೃತಿ ಅದನ್ನು ಸಾಧಿಸಿದೆ. ಲೇಖಕಿ ಬಾ ಅವರು ಹುಟ್ಟಿ ಬೆಳೆದು ಬಾಳಿದ ಪೋರ್‌ಬಂದರ್, ರಾಜಕೋಟೆಗಳಿಗೆ ಹೋಗಿ ಸಂಗ್ರಹಿಸಿದ ಮಾಹಿತಿಯಿಂದ ಕಳೆಗಟ್ಟಿರುವ ಪೀಠಿಕೆ, ಅಧ್ಯಾಯಗಳ ವಿಂಗಡಣೆ ಮತ್ತು ಅವುಗಳಿಗೆ ನೀಡಲಾಗಿರುವ ಶೀರ್ಷಿಕೆಗಳು ಲೇಖಕಿ ಗಾಂಧಿ ದಂಪತಿ ಕುರಿತು ಪ್ರೀತಿಯಿಂದಲೇ ಬರೆಯ ಹೊರಟಿರುವುದನ್ನು ಸೂಚಿಸುತ್ತದೆ. ಆದರೆ ಕೆಲವೆಡೆ ನಿರೂಪಣೆ ಸಂಭಾಷಣೆಗಳ ರೂಪದಲ್ಲಿ ಅತಿ ನಾಟಕೀಯತೆಯನ್ನೂ ಸೃಷ್ಟಿಸಲು ಹೋಗಿ ಗೊಂದಲವನ್ನೂ ಮಾಡಿಕೊಳ್ಳಲಾಗಿದೆ. ಉದಾ: ಗಾಂಧಿ ಕಸ್ತೂರಬಾ ಅವರನ್ನು ತಮ್ಮ ಬ್ರಹ್ಮಚರ್ಯ ಪ್ರತಿಜ್ಞೆಯೊಂದಿಗೆ ಸಹಕರಿಸಲು 'ಕೈಮುಗಿದು' (!) ಕೇಳಿಕೊಳ್ಳುವಾಗ ಮುಂದೆ ಬಾ ತ್ಯಜಿಸಬೇಕಾಗಿ ಬರುವ ಉಪ್ಪು, ಬೇಳೆಗಳ ಪ್ರಸ್ತಾಪ ಈಗಲೇ ಬಂದುನಬಿಡುತ್ತದೆ. ಹಾಗೇ ಇನ್ನೊಂದು ಮಾತು: ಈ ಪುಸ್ತಕದಲ್ಲಿ ಸೂಚಿಸಲಾಗಿವಂತೆ ಗಾಂಧಿ ಕಾಮವನ್ನು ಶತ್ರು ಎಂದು ಪರಿಗಣಿಸಿರಲಿಲ್ಲ ಮತ್ತು ಎಲ್ಲರಿಗೂ ಬ್ರಹ್ಮಚರ್ಯ ಬೋಧನೆ ಮಾಡಲಿಲ್ಲ

ಅದಿರಲಿ, ಈ ಮೊದಲೇ ಹೇಳಿದಂತೆ ತಾನು ಅಳವಡಿಸಿಕೊಂಡಿರುವ ತಂತ್ರದ ಮಿತಿಯನ್ನು ಮೀರಲು ಇಡೀ ಪುಸ್ತಕದಲ್ಲಿ ಮಾಡಲಾಗದ ಬಾ ಅವರ ಸ್ವತಂತ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು 'ಮಹಾತ್ಮ' ಎಂಬ ಅಧ್ಯಾಯದಲ್ಲಿ 'ಆವರೆಗಿನ ಬರವಣಿಗೆಯ ಓಘಕ್ಕೆ ವ್ಯತಿರಿಕ್ತವಾಗಿ ಮಾಡಲು ಹೋಗಿ, ಈ ತಂತ್ರದ ಉದ್ದೇಶದ ಬಗ್ಗೆಯೇ ಸಂಶಯ ಮೂಡುವಂತಾಗುತ್ತದೆ. ಉದಾ: ಹರಿಲಾಲ್ ಮತ್ತು ಅಂಬೇಡ್ಕರ್ ವಿಷಯ ಬಂದಾಗ (ಜಿನ್ನಾ ಏಕಿಲ್ಲ? ಎಂಬ ಪ್ರಶ್ನೆಯೂ ಇದೆ!) ಸಮಕಾಲೀನ ರಾಜಕಾರಣಕ್ಕೆ ಹಿತವೆನಿಸುವ ('ಪೊಲಿಟಿಕಲಿ ಕರೆಕ್ಟ್) ಅಭಿಪ್ರಾಯಗಳನ್ನು ಬಾ ಅವರ ಬಾಯಲ್ಲಿ ಹೇಳಿಸುವ ಮೂಲಕ ಸಣ್ಣ ರಾಜಕೀಯದ ಪ್ರಯತ್ನವೂ ಇಲ್ಲಿ ನಡೆದಂತೆ ತೋರುತ್ತದೆ. ಇದರ ಮುಂದುವರೆದ ಭಾಗವಾಗಿಯೇ ಅವರ ಬಾಯಿಂದ ಗಾಂಧಿ ಏನು ಮಾಡಿದರೂ ಅವುಗಳ ನಡುವೆ 'ನಾನು' ಎಂಬುದು ಕೇಂದ್ರದಲ್ಲಿರುತ್ತಿತ್ತು ಎಂದು ಹೇಳಿಸುತ್ತಾ ಅದರ ವಿವರಣೆಗಾಗಿ ತನ್ನ ವೀರ್ಯನಾಶವಾದರೆ ದೇಶವೇ ನಾಶವಾದಂತೆ ಎಂದು ಗಾಂಧಿ ವರ್ತಿಸುತ್ತಿದ್ದರೆಂದು ಬಾ ಅವರ ಬಾಯಲ್ಲಿ ಹೇಳಿಸುವುದು ಗಾಂಧಿ ಮತ್ತು ಬಾ ಇಬ್ಬರಿಗೂ ಮಾಡುವ ಅಪಚಾರವಾಗುತ್ತದೆ. ಇದು ಗಾಂಧಿ ತನ್ನಲ್ಲಿ ಲೈಂಗಿಕತೆಯ ಪಸೆ ಪೂರ್ಣ ಆರುವವರೆಗೂ ತಾನು ಜಗತ್ತಿನೊಂದಿಗೆ ಪರಿಣಾಮಕಾರಿಯಾಗಿ ಸಂವಾದಿಸಲಾರೆ ಎಂಬ ತನ್ನ ವ್ಯಕ್ತಿತ್ವದ ಪರಿಶುದ್ಧತೆಯನ್ನು ಕುರಿತು ತಳಮಳದ ಪ್ರತೀಕವಾಗಿತ್ತೇ ಹೊರತು ಸ್ವಕೇಂದ್ರಿತ ಲೋಕ ಚಿಂತನೆಯಲ್ಲ.

ಗಾಂಧಿಯನ್ನು ಅರ್ಥ ಮಾಡಿಕೊಳ್ಳುವ ಇಂತಹ ದೋಷಗಳಿಂದಾಗಿ ಈ ಪುಸ್ತಕ ಒಟ್ಟು ಪರಿಣಾಮದಲ್ಲಿ ಬಾ ಹೇಳಿದ ಗಾಂಧಿ ಕಥೆಯಾಗಿ ಪರಿಣಮಿಸದೆ. ಲೇಖಕಿಯ ಕಣ್ಣಿನ ಗಾಂಧಿ ಕಥೆಯಾಗಿ ಮೂಡಿದೆ. ಈಗಾಗಲೇ ಇಂಗ್ಲಿಷ್‌ನಲ್ಲಿ ಬಂದಿರುವ  'ದ ಸೀಕ್ರೆಟ್ ಡೈರಿ ಆಫ್ ಕಸ್ತೂರಬಾ' ಮತ್ತು 'ಕಸ್ತೂರ ಬಾ: ಎ ಬಯೋ ಫಿಕ್ಷನ್ ಕಸ್ತೂರಬಾ: ಎ ಸೈಲೆಂಟ್ ಸಫರರ್ ಮುಂತಾದ ಕಲ್ಪಿತ ಮತ್ತು ಗಾಂಧಿ ಕುರಿತು ಷರಾ ಬರೆಯುವ ಶೈಲಿಯ ಕೃತಿಗಳು ಇಂತಹ ವಿವಾದವನ್ನೇ ಎಬ್ಬಿಸಿವೆ. ಕಸ್ತೂರಬಾ ಅವರ ಮುಖವಾಡ ಧರಿಸಿಕೊಂಡ' ಇಂದಿನ ಸ್ತ್ರೀವಾದಿಗಳು ಮತ್ತು ಗಾಂಧಿ ವಿಮರ್ಶೆಯ ಹೆಸರಿನ ಟೀಕಕಾರರು ತಮ್ಮ ಕಾರ್ಯಕ್ರಮ'ವನ್ನು ಪ್ರಚುರಪಡಿಸುವ ಪ್ರಯತ್ನ ಇವುಗಳಲ್ಲಿ ಕಂಡಿದೆ. ಆದರೆ ಅನುಪಮಾ ಅವರ ಈ ಕನ್ನಡ ಪುಸ್ತಕ ಈ ಪುಸ್ತಕಗಳಂತೆ ಕಲ್ಪಿತ ಪುಸ್ತಕವೆಂದೂ ಹೇಳಿಕೊಳ್ಳಲಾಗದಷ್ಟು ಚರಿತ್ರೆಯ ವಿವರಗಳಿಗೆ ಬದ್ಧವಾಗಿದ್ದು, ಈ ಅರೆ ಬದ್ಧತೆಯೇ ಇವರ ಸಮಸ್ಯೆಯಾಗಿದೆ.

- ಡಿಎಸ್ಸೆನ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜನವರಿ 2020)

 

Related Books