ಪರ್ದಾ & ಪಾಲಿಗಮಿ

Author : ದಾದಾಪೀರ್‌ ಜೈಮನ್‌

Pages 424

₹ 380.00




Year of Publication: 2021
Published by: ಛಂದ ಪುಸ್ತಕ
Address: ವಸುಧೇಂದ್ರ, ಐ004 ಮಂತ್ರಿ ಪ್ಯಾರಾಡೈಸ್ ರಸ್ತೆ. ಬನ್ನೇರುಘಟ್ಟ ರಸ್ತೆ, ಬೆಂಗಳೂರು-560076

Synopsys

ಬೆಂಗಳೂರಿನ ಇಕ್ಬಾಲುನ್ನಿಸಾ ಹುಸೇನ್ ಅವರು (ಇಂಗ್ಲಿಷಿನಲ್ಲಿ ಮೊದಲ ಬಾರಿಗೆ ಕಾದಂಬರಿ ಬರೆದ ಭಾರತದ ಮೊದಲ ಮುಸ್ಲಿಂ ಮಹಿಳೆ ಎಬ ಖ್ಯಾತಿ) 1944ರಲ್ಲಿ ಬರೆದ ‘ಪರ್ದಾ & ಪಾಲಿಗಮಿ’ ಶೀರ್ಷಿಕೆಯ ಇಂಗ್ಲಿಷ್ ಕಾದಂಬರಿಯನ್ನು ಲೇಖಕ ದಾದಾಪೀರ್ ಜೈಮನ್ ಅವರು ಅದೇ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಣ್ಣನ್ನು ಬುರ್ಕಾ (ಪರ್ದಾ) ದಲ್ಲಿಟ್ಟು ಅವಲೆಂದೂ ಹೊರ ಜಗತ್ತಿಗೆ ಸ್ವತಂತ್ರವಾಗಿ ತೆರೆದುಕೊಳ್ಳದಂತೆ ಮಾಡಿರುವ ಸಮಾಜದ ಸ್ವಾರ್ಥಪರತೆಯನ್ನು ಹಾಗೂ ಬಹುಸ್ರೀಯರನ್ನು ಮದುವೆಯಾಗುವ ಪದ್ಧತಿಯನ್ನು ವಿಜೃಂಭಿಸುವ ವರ್ತನೆಯ ಹಿಂದಿರುವ ಹೆಣ್ಣುಗಳ ಶೋಷಣೆ, ಪುರುಷರ ಲೈಂಗಿಕ ತೃಷೆಯ ಪರಾಕಾಷ್ಟೆಯನ್ನು ಈ ಕಾದಂಬರಿ ಮುಕ್ತವಾಗಿ ವಿವರಿಸುತ್ತದೆ. ಮುಸ್ಲಿಂ ಕುಟುಂಬವನ್ನು ಕೇಂದ್ರವಾಗಿಸಿ ಬರೆದ ಕಾದಂಬರಿಯು ಮಾನವೀಯ ನೆಲೆಯಲ್ಲಿ ಓದುಗರ ಸಾಮಾಜಿಕ ಪ್ರಜ್ಞಾವಲಯವನ್ನು ವಿಸ್ತರಿಸುತ್ತದೆ.

ಖ್ಯಾತ ಸಾಹಿತಿ-ವಿಮರ್ಶಕ ಡಾ. ಸಿ.ಎನ್. ರಾಮಚಂದ್ರನ್ ಕೃತಿಗೆ ಮುನ್ನುಡಿ ಬರೆದು ‘‘ಪರ್ದಾ ಮತ್ತು ಬಹುಪತ್ನಿತ್ವ: ಭಾರತೀಯ ಮುಸ್ಲಿಂ ಕುಟುಂಬವೊಂದರಲ್ಲಿ ಬದುಕು’) ಎಂಬ ಕಾದಂಬರಿ. ಇತ್ತೀಚೆಗೆ ಸಾಹಿತ್ಯ ಅಕಾಡೆಮಿ ಮತ್ತು ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಈ ಕಾದಂಬರಿಯನ್ನು ಮರು ಮುದ್ರಿಸಿವೆ. ಅಂದಿನ ಮುಸ್ಲಿಂ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿದ್ದ ಶೋಷಣೆಯನ್ನು ಹಾಗೂ ಪ್ರಬಲವಾಗಿದ್ದ ಪುರುಷ-ಕೇಂದ್ರಿತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿರುವ ಈ ಕಾದಂಬರಿಯನ್ನು ಬರೆದುದಕ್ಕಾಗಿ ಇಕ್ಬಾಲುನ್ನೀಸಾ ಮುಸ್ಲಿಂ ಸಮಾಜದ ಅನೇಕ ಪ್ರತಿಷ್ಠಿತ ವ್ಯಕ್ತಿಗಳ ಅವಕೃಪೆಗೆ ಪಾತ್ರರಾದರು; ಒಮ್ಮೆ ಕೆಲವು ವ್ಯಕ್ತಿಗಳು ಒಂದುಗೂಡಿ ಇವರನ್ನು ಜೀವಂತವಾಗಿ ಸುಡಬೇಕೆಂದೂ ಸಂಚು ಹೂಡಿದ್ದರು ಎಂದು ಹೇಳಲಾಗುತ್ತದೆ. ಆದರೆ, ಇವರ ಪತಿ ಸಯ್ಯದ್ ಅಹಮದ್ ಹುಸೇನ್ ಗಟ್ಟಿಯಾಗಿ ಇವರ ರಕ್ಷಣೆಗೆ ನಿಂತುದರಿಂದ ಮತ್ತು ಇವರ ಇಚ್ಛಾಶಕ್ತಿ ಪ್ರಬಲವಾಗಿದ್ದುದರಿಂದ ಇಕ್ಬಾಲುನ್ನೀಸಾ ಯಾವ ಬಗೆಯ ವಿರೋಧವನ್ನೂ ನಿರ್ಭೀತರಾಗಿ ಎದುರಿಸಲು ಸಾಧ್ಯವಾಯಿತು. “ಪರ್ದಾ ಮತ್ತು ಬಹುಪತ್ನಿತ್ವ” ಕಾದಂಬರಿಯು ಭಾರತದ (ನಿರ್ದಿಷ್ಟವಾಗಿ ಯಾವ ನಗರದಲ್ಲಿ ಎಂದು ಕಾದಂಬರಿ ಹೇಳುವುದಿಲ್ಲ) ಒಂದು ನಗರದಲ್ಲಿರುವ ಮುಸ್ಲಿಂ ಕುಟುಂಬವೊಂದರ ಮೂರು ತಲೆಮಾರುಗಳ ಆಗುಹೋಗುಗಳನ್ನು ದಾಖಲಿಸುತ್ತದೆ. ಕಾದಂಬರಿಯು ದೊಡ್ಡ ಜಮೀನ್ದಾರ ಮತ್ತು ಕುಟುಂಬದ ಯಜಮಾನನಾದ ಉಮರ್ ಎಂಬುವವನಿಂದ ಪ್ರಾರಂಭವಾಗುತ್ತದೆ. ಅವನು ಕ್ಯಾನ್ಸರ್ ರೋಗದಿಂದ ಅಕಾಲ ಮರಣಕ್ಕೆ ತುತ್ತಾದ ನಂತರ ಅವನ ಮಗ ಕಬೀರ್ ತನ್ನ 16ನೆಯ ವಯಸ್ಸಿನಲ್ಲಿಯೇ ಮನೆಯ ಯಜಮಾನನಾಗುತ್ತಾನೆ. ಕಾದಂಬರಿಯ ಕೇಂದ್ರ ಪಾತ್ರ ಕಬೀರ್. ಅವನು ಒಂದಾದ ನಂತರ ಒಂದು ನಾಲ್ಕು ಯುವತಿಯರನ್ನು ಮದುವೆಯಾಗುತ್ತಾನೆ. ಕಬೀರನ  ವಿಧವೆ ತಾಯಿ ಜುಹ್ರಾ, ಕಬೀರ್‍ನ ಮೊದಲ ಪತ್ನಿ ನಾಝ್ನಿ, ಎರಡನೆಯ ಪತ್ನಿ ಮುನೀರಾ, ಮೂರನೆಯವಳಾದ ಮಕ್ಬೂಲ್ ಮತ್ತು ನಾಲ್ಕನೆಯ ನೂರ್‍ಜಹಾನ್, ಅವರ ಮಕ್ಕಳು ಇವರೆಲ್ಲರೂ ಒಟ್ಟು ಕುಟುಂಬದಲ್ಲಿ ಬದುಕು ಸಾಗಿಸುತ್ತಿರುತ್ತಾರೆ. ಕಬೀರ್ ಮತ್ತು ಅವನ ತಾಯಿ ಜುಹ್ರಾ ವಿಧಿವಶರಾದ ನಂತರ ಕಬೀರ್‍ನ ಹಿರಿಯ ಮಗ ಅಕ್ರಮ್ ಮನೆಯ ಯಜಮಾನನಾಗುತ್ತಾನೆ ಮತ್ತು ಜುಹ್ರಾ ನಡೆಸುತ್ತಿದ್ದ ಅಧಿಕಾರ ಸ್ಥಾನವನ್ನು ನಾಝ್ನಿ (ಕಬೀರ್‍ನ ಮೊದಲ ಪತ್ನಿ) ಪಡೆಯುತ್ತಾಳೆ. ಉಮರ್, ಕಬೀರ್ ಮತ್ತು ಅಕ್ರಮ್ ಈ ಮೂವರು ಯಜಮಾನರ ಕಾಲದಲ್ಲಿ ಆ ಕುಟುಂಬದಲ್ಲಿ ನಡೆದ ಶುಭಾಶುಭ ಘಟನೆಗಳು, ಒಟ್ಟಾರೆಯಾಗಿ ಕುಟುಂಬದ ಯಜಮಾನಿಕೆ ಪುರುಷನಲ್ಲಿದ್ದು ಮನೆಯೊಳಗಿನ ಅಧಿಕಾರಕ್ಕಾಗಿ ಮೊದಲು ಜುಹ್ರಾ ಹಾಗೂ ನಂತರ ನಾಝ್ನಿ ಮಾಡುವ ಕುತಂತ್ರಗಳು, ಗಂಡನ ಹತ್ತಿರ ಬರುವುದಕ್ಕೆ ಕಬೀರ್‍ನ ನಾಲ್ಕೂ ಪತ್ನಿಯರು ನಡೆಸುವ ಸ್ಪರ್ಧೆಗಳು ಹಾಗೂ ಕುಟಿಲೋಪಾಯಗಳು ಇವುಗಳನ್ನು, ವಿಶ್ವಾಸನೀಯ ರೀತಿಯಲ್ಲಿ ಕಾದಂಬರಿ ಬಯಲು ಮಾಡುತ್ತದೆ ಎಂದು ಪ್ರಶಂಸಿಸಿದ್ದಾರೆ. 

About the Author

ದಾದಾಪೀರ್‌ ಜೈಮನ್‌

ಕವಿ, ಕತೆಗಾರ ಸೇರಿದಂತೆ ಮುಂತಾದ ಅನೇಕ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ದಾದಾಪೀರ್‌ ಜೈಮನ್‌. ಅವರ ಹಲವಾರು ಕವಿತೆಗಳು ಪ್ರಜಾವಾಣಿ ಮುಂತಾದ ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅವರ ‘ಜಾಲಗಾರ’ ಕತೆಗೆ ಸಂಗಾತ ಕತಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಹಾಗೂ ಮುಂತಾದ ರಾಜ್ಯ ಮಟ್ಟದ ಕತಾ ಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಓದು-ಬರೆಹದಲ್ಲಿ ಸಕ್ರಿಯರು. ...

READ MORE

Related Books