ನೂರು ವರ್ಷದ ಏಕಾಂತ

Author : ಎ.ಎನ್. ಪ್ರಸನ್ನ

Pages 400

₹ 300.00




Year of Publication: 2015
Published by: ಐಬಿಎಚ್‌ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.

Synopsys

ವೃತ್ತಿಯಿಂದ ಪತ್ರಕರ್ತನಾಗಿದ್ದ ಗಾಬ್ರಿಯೆಲ್ ಮಾರ್ಕೆಜ್ ಪ್ರವೃತ್ತಿಯಿಂದ ಕತೆ-ಕಾದಂಬರಿಕಾರ. ವಾಸ್ತವಿಕತೆಯನ್ನು ಮಾಂತ್ರಿಕತೆಯೊಂದಿಗೆ ಬೆಸೆದ ಲೇಖಕ. ಅವನ ಕತೆ-ಕಾದಂಬರಿಗಳು ಅಪಾರ ಜನಮನ್ನಣೆಗೆ ಪಾತ್ರವಾಗಿವೆ. ನೊಬೆಲ್ ಸಾಹಿತ್ಯ ಪುರಸ್ಕಾರ ಗಳಿಸಿದ ಮಾರ್ಕೆಜ್ ನ ಕಾದಂಬರಿ ’ನೂರು ವರ್ಷದ ಏಕಾಂತ’ ಅತ್ಯಂತ ಮಹತ್ವವಾದದ್ದು. ಈ  ಕಾದಂಬರಿಯನ್ನು ಅನುವಾದಕ-ಕತೆಗಾರ ಎ.ಎನ್. ಪ್ರಸನ್ನ ಅವರು ಕನ್ನಡೀಕರಿಸಿದ್ದಾರೆ. ಇದು ಈ ಕಾದಂಬರಿಯ ಎರಡನೆಯ ಮುದ್ರಣ.

ಮನಮುಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯ ಲೋಕವೇ ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ. 'ನೂರು ವರ್ಷದ ಏಕಾಂತ' ಲ್ಯಾಟಿನ್ ಅಮೆರಿಕಾದ ಗುಡ್ಡದ ತಪ್ಪಲು ಪ್ರದೇಶದ ಹಳ್ಳಿಯಲ್ಲಿ ನಡೆಯುವ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳನ್ನು ಒಳಗೊಂಡ ಕಲ್ಪನೆಯ ಸಾರ ಈ ಕತೆಯಲ್ಲಿ ಒಡಮೂಡಿದೆ. ಮಾರ್ಕೆಜ್ ನ ಬರವಣಿಗೆಯ ಹೆಣಿಗೆಯು ರೂಢಿಗತ ಮಾದರಿಯ ಕಾಲಗತಿಯಲ್ಲಿ ಇರುವುದಿಲ್ಲ. ನಿತ್ಯ ಜೀವನದ ವಿವರಗಳನ್ನು  ಸೇರಿಸಿ ಕತೆ ಕಟ್ಟುವ ಕಾರಣಕ್ಕಾಗಿ, ಪ್ರಪಂಚ ಮಾರ್ಕೆಜ್ ಗೆ ಮಾರುಹೋಗಿದೆ. 'ಮಾಂತ್ರಿಕ ವಾಸ್ತವವಾದ'ದ ಬಗ್ಗೆ ಕುತೂಹಲ, ಆಸಕ್ತಿ ಮೂಡಲು ಕಾರಣವಾದದ್ದು, ಮಾರ್ಕೆಜ್ ನ ಬರವಣಿಗೆಗಳು. ಪದಗಳ ಸೊಗಸಾದ ಬಳಕೆಯಿಂದ ಕ್ಷುಲ್ಲಕ ಎನಿಸುವ ಘಟನೆಯನ್ನು ವೈಭವೀಕರಿಸುತ್ತಾನೆ. ಘನವಾದ- ಪವಿತ್ರವಾದ ಸಂಗತಿಯನ್ನು ಸಾಮಾನ್ಯವೆನ್ನಿಸುವ ಹಾಗೆ ಬರೆಯುತ್ತಾನೆ. ಅತಿ ಸಣ್ಣ ಘಟನೆ ಕೂಡ ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗುತ್ತದೆ ಎಂಬುದನ್ನು ಗಮನಿಸಬಹುದು. 

ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಅವರು ಕೃತಿಯನ್ನು ಕುರಿತು ‘ನಿರ್ದಿಷ್ಟ ಕಾಲ-ದೇಶಗಳ ತೆಕ್ಕೆಗೆ ಸಿಕ್ಕದೆ ತಪ್ಪಿಸಿಕೊಂಡು, ಸ್ವತಂತ್ರ ಅಸ್ತಿತ್ವವನ್ನು ಆವಾಹಿಸಿಕೊಂಡ ಲೋಕ ಅದು. ರಮ್ಯಾತಿರಮ್ಯ ದೃಷ್ಟಾಂತಗಳ ಹೆಣಿಗೆಯಲ್ಲಿ ತೆರೆದುಕೊಳ್ಳುವ 'ನೂರು ವರ್ಷದ ಏಕಾಂತ' , ಏಕಕಾಲಕ್ಕೆ ಆಪ್ಯಾಯಮಾನವೂ ಆಗುತ್ತೆ ....ನಮ್ಮ ಚರಿತ್ರೆಯನ್ನೇ ವಿಶಿಷ್ಟ ಗ್ರಹಿಕೆಯಲ್ಲಿ  ಹಿಡಿದಿಟ್ಟಂತೆ ಓದುಗನೊಳಕ್ಕೆ ಇಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರೆ, ಖ್ಯಾತ ಪತ್ರಕರ್ತ ನಾಗೇಶ್ ಹೆಗಡೆ ಅವರು ‘ಮಾಂತ್ರಿಕ ವಾಸ್ತವತೆಯ ಜಗತ್ತಿನಲ್ಲಿ ಸಮಯ ಎಂಬುದು ಮುಂದಕ್ಕೇ ಚಲಿಸುತ್ತದೆ ಎನ್ನುವಂತಿಲ್ಲ ಹಿಂದಕ್ಕೂ, ಮುಂದಕ್ಕೂ, ವೃತ್ತಾಕಾರ ದಲ್ಲೂ ಚಲಿಸಬಹುದು. ಅದರ ಅನುಭವ ಈ ಕಾದಂಬರಿಯ ಮೊದಲ ವಾಕ್ಯದಲ್ಲೇ ಗೊತ್ತಾಗುತ್ತದೆ. ಕಥಾನಕ ಮುಂದೆ ಸಾಗಿದಂತೆ ಅಲ್ಲಲ್ಲೇ ಸುತ್ತು ಹೊಡೆಯುತ್ತದೆ’  ಎನ್ನುತ್ತಾರೆ.

ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅವರು ‘ವಿವಿಧ ಪಾತ್ರಗಳು ಮತ್ತು ಅವುಗಳ ಸಂಬಂಧವನ್ನು ಒಟ್ಟಾರೆ ತನ್ನ ಆಶಯದ ಸಮರ್ಥ ಅಭಿವ್ಯಕ್ತಿಗಾಗಿ ವಾಸ್ತವತೆ ಮತ್ತು ಮಾಂತ್ರಿಕತೆಯನ್ನು ಒಂದರೊಡನೊಂದರ ಸಹಜ ಮಿಳಿತದೊಂದಿಗೆ ಪರಿಕಲ್ಪಿಸಿರುವುದು ತೀರ ಸರಿ ಎನ್ನಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎ.ಎನ್. ಪ್ರಸನ್ನ

ಎ. ಎನ್. ಪ್ರಸನ್ನ ಅವರು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ.ಪಿ.ಟಿ.ಸಿ.ಎಲ್.ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರು, ಸಾಹಿತ್ಯ, ನಾಟಕ ಮತ್ತು ದೃಶ್ಯ ಮಾಧ್ಯಮದಲ್ಲಿ ಆಸಕ್ತಿ. ಉಳಿದವರು (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ(ಬಿ. ಎಚ್.ಶ್ರೀಧರ ಪ್ರಶಸ್ತಿ), ಪ್ರತಿಫಲನ (ಮಾಸ್ತಿ ಕಥಾ ಪುರಸ್ಕಾರ) ಸೇರಿದಂತೆ ಐದು ಕಥಾ ಸಂಕಲನಗಳು ಮತ್ತು ಆಯ್ದ ಕಥೆಗಳ ಸಂಕಲನ ಪ್ರಕಟವಾಗಿವೆ. ನೂರು ವರ್ಷದ ಏಕಾಂತ (ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್‌ನ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟೂಡ್' ಕಾದಂಬರಿಯ ಅನುವಾದ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿ), ಮೂರನೆ ದಡ (ಪ್ರಪಂಚದ ಮಾಂತ್ರಿಕ ವಾಸ್ತವತೆಯ ಕಥೆಗಳು), ಒಂದಾನೊಂದು ...

READ MORE

Related Books