ಡಾ. ಬಿ.ಆರ್‌. ಅಂಬೇಡ್ಕರ್‌- ವರ್ತಮಾನದೊಂದಿಗೆ ಮುಖಾಮುಖಿ

Author : ಬಿ. ಯು. ಸುಮಾ

Pages 192

₹ 150.00




Year of Publication: 2015
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಅಂಬೇಡ್ಕರ್‌ ವಿಚಾರಧಾರೆಗಳ ಮೂಸೆಯಲ್ಲಿ ಪ್ರಸ್ತುತ ಸಮಾಜ ಹೇಗಿದೆ ಎಂಬುದನ್ನು ಅರಿಯುವ ಯತ್ನ ಡಾ.ಬಿ.ಯು. ಸುಮಾ ಅವರು ಬರೆದಿರುವ ’ಡಾ. ಬಿ. ಆರ್. ಅಂಬೇಡ್ಕರ್‌-ವರ್ತಮಾನದೊಂದಿಗೆ ಮುಖಾಮುಖಿ'. ಕೃತಿಯ ಮೊದಲ ಅಧ್ಯಾಯದಲ್ಲಿ ಅಂಬೇಡ್ಕರ್‌ ಅವರ ಬದುಕು ಬರಹಗಳನ್ನು ಪ್ರಸ್ತಾಪಿಸಲಾಗಿದೆ. ಎರಡನೇ ಅಧ್ಯಾಯ ಅಂಬೇಡ್ಕರ್‌ ಅಸ್ಪೃಶ್ಯತೆಯನ್ನು ಅನುಭವಿಸಿದುದರ ಕುರಿತಾದದ್ದು. ಧರ್ಮ, ರಾಷ್ಟ್ರೀಯತೆ, ಜಾತಿ ಇತ್ಯಾದಿ ಸಂಗತಿಗಳಿಗೆ ಅವರ ಸ್ಪಂದನೆ ಹೇಗಿತ್ತು ಎಂಬುದನ್ನು ಮೂರನೇ ಅಧ್ಯಾಯ ಸೂಚಿಸುತ್ತದೆ. ಅವರ ಲೇಖನ- ಭಾಷಣಗಳ ಸಾರವೂ ಕೃತಿಯಲ್ಲಿದೆ. ಕಟ್ಟಕಡೆಗೆ ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಮುಖಾಮುಖಿಯಾಗಿ ನಿಲ್ಲಿಸಿ ವಿಶ್ಲೇಷಣೆ ನಡೆಸಲಾಗಿದೆ. 

’ಭಾರತೀಯ ಸಮಾಜ ಸವಾಲುಗಳು ಇನ್ನೂ ಜಾತಿಯ ತಳಹದಿಯ ಮೇಲೆಯೇ ನಿಂತಿದೆ. ಆಧುನಿಕತೆ, ಈ ಭಾರತದ ಜಾತೀಯತೆಯನ್ನು ಒರೆಸಿಹಾಕುವುದರಲ್ಲಿ ಯಶಸ್ವಿಯಾಗಿಲ್ಲ. ಬದಲಿಗೆ ಜಾತಿ ಬೇರೆ ಬೇರೆ ವೇಷಗಳಲ್ಲಿ ಮತ್ತೆ ನಮ್ಮ ಮನೆಯಂಗಳದಲ್ಲಿ ವಕ್ಕರಿಸಿಕೊಂಡಿದೆ. ಈ ಸವಾಲನ್ನು ಮತ್ತೆ ಅಂಬೇಡ್ಕರ್‌ ಅವರ ವಿಚಾರಗಳ ಮೂಲಕವೇ ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಭಾರತ ನಿಂತಿದೆ’ ಎಂಬುದನ್ನು ಕೃತಿ ಸಾರಿ ಹೇಳುತ್ತದೆ. 

About the Author

ಬಿ. ಯು. ಸುಮಾ
(07 November 1967)

ಬೆಂಗಳೂರಿನಲ್ಲಿ 1967ರ ನವೆಂಬರ್ 7 ರಂದು ಜನಿಸಿದ ಸುಮಾ ಅವರು ಮೂಲತಃ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಭೂಪಸಂದ್ರದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (1990 ಕನ್ನಡ ಎಂ.ಎ.) ಪಡೆದು, 1992 ರಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಕಣ ಇಲಾಖೆಗೆ ಉಪನ್ಯಾಸಕರಾಗಿ ನೇಮಕ ಹೊಂದಿದರು. 2007ರಲ್ಲಿ 'ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಪ್ರಭುತ್ವ : 1600-1900' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2008ರಲ್ಲಿ ಇವರು ಸಂಪಾದಿಸಿದ 'ಡಾ.ಬಿ.ಆರ್.ಅಂಬೇಡ್ಕರ್ -ವರ್ತಮಾನದೊಂದಿಗೆ ...

READ MORE

Excerpt / E-Books

ಭಾರತ ಒಂದು ವಿಚಿತ್ರ ದೇಶ. ಇಲ್ಲಿಯ ರಾಷ್ಟ್ರೀಯವಾದಿಗಳು ಮತ್ತು ದೇಶಭಕ್ತರೂ ಕೂಡಾ ವಿಚಿತ್ರವಾದ ಜನ. ಭಾರತದ ರಾಷ್ಟ್ರೀಯವಾದಿ ಮತ್ತು ದೇಶಭಕ್ತ ತನ್ನ ದೇಶಬಂಧುವೊಬ್ಬ ಮನುಷ್ಯನೇ ಅಲ್ಲವೆಂಬಂತೆ ಪರಿಗಣಿಸಲ್ಪಡುವುದನ್ನು ತೆರೆದ ಕಣ್ಣುಗಳಿಂದ ನೋಡಿದರೂ ಅವನ ಮಾನವೀಯತೆ ಅದರ ವಿರುದ್ದ ದನಿಯೆತ್ತುವುದಿಲ್ಲ. ಸಾವಿರಾರು ಪುರುಷರು ಮತ್ತು ಮಹಿಳೆಯರಿಗೆ ಮಾನವ ಹಕ್ಕುಗಳನ್ನು ಅಕಾರಣವಾಗಿ ನಿರಾಕರಿಸಲಾಗಿದೆ. ಆದರೆ ಇದು ಅವರ ನಾಗರಿಕ ಪ್ರಜ್ಞೆಯನ್ನು ಎಚ್ಚರಿಸಿ ಅವರಿಗೆ ಸಹಾಯ ಮಾಡುವಂತೆ ಪ್ರೇರೇಪಿಸುವುದಿಲ್ಲ. ಇಡೀ ಸಮುದಾಯಕ್ಕೆ ಸಮುದಾಯವನ್ನೇ ಸಾರ್ವಜನಿಕ ಸೇವೆಯಿಂದ ಹೊರಗಿಟ್ಟಿರುವುದನ್ನು ನೋಡುತ್ತಾನೆ, ಆದರೆ ಅದು ಅವನ ನ್ಯಾಯಪ್ರಜ್ಞೆಯನ್ನು ಎಚ್ಚರಿಸುವುದಿಲ್ಲ. ಮನುಷ್ಯ ಮತ್ತು ಸಮಾಜವನ್ನು ಬಾಧಿಸುತ್ತಿರುವ ನೂರಾರು ದುಷ್ಟತನಗಳು ಅವನ ಸಂವೇದನೆಗೆ ದಕ್ಕುತ್ತವೆ. ಆದರೆ ಅವು ಅವನನ್ನು ಹತಾಶೆಯಿಂದ ಅಸ್ವಸ್ಥಗೊಳಿಸುವುದಿಲ್ಲ. ಈ ದೇಶಭಕ್ತನ ಒಂದೇ ಬೇಡಿಕೆ ಎಂದರೆ ಅಧಿಕಾರ, ಅಧಿಕಾರ ಮತ್ತು ತನ್ನ ಜನರಿಗೆ ಇನ್ನೂ ಹೆಚ್ಚಿನ ಅಧಿಕಾರ. ನಾನು ಇಂಥ ದೇಶಭಕ್ತ ವರ್ಗಕ್ಕೆ ಸೇರಿದವನಲ್ಲವೆಂದು ಹೇಳಿಕೊಳ್ಳಲು ಹೆಮ್ಮೆಯಿದೆ. ಯಾರು ಪ್ರಜಾಪ್ರಭುತ್ವ ಪರ ನಿಲುವುಗಳನ್ನು ತೆಗೆದುಕೊಳ್ಳುತ್ತಾರೋ, ಏಕಾಧಿಪತ್ಯದ ಎಲ್ಲ ರೂಪ, ಲಕ್ಷಣಗಳನ್ನು ಮುರಿಯಬಯಸುತ್ತಾರೋ ಅಂಥ ದೇಶಭಕ್ತರ ಗುಂಪಿಗೆ ನಾನು ಸೇರಿದ್ದೇನೆ. ನಮ್ಮ ಗುರಿ ವಾಸ್ತವದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ, ಜೀವನದ ಎಲ್ಲ ಸ್ತರಗಳಲ್ಲಿ ಒಬ್ಬ ಮನುಷ್ಯ ಒಂದೇ ಮೌಲ್ಯ ಎನ್ನುವುದನ್ನು ಅರಿತು ಹಾಗೆಯೇ ಬದುಕುವುದು. ಇದನ್ನು ಸಾಧಿಸಲು ಸರ್ವರಿಗೂ ಸೂಕ್ತ ಪ್ರಾತಿನಿಧ್ಯವಿರುವ ಸರ್ಕಾರ ರಚಿಸುವುದು ಒಂದು ದಾರಿ. ಅದಕ್ಕಾಗಿಯೇ ಶೋಷಿತ ವರ್ಗಗಳು ಈ ಬೇಡಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಹಾಗೂ ಅದನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಾರೆ. ನಿಮ್ಮ ಸಹಾಯ ಯಾವಾಗಲೂ ನಮಗಿದೆ ಎಂದು ನೀವು ಹೇಳಬಹುದು, ಆದರೆ ನಮಗೆ ಬೇಕಾಗಿರುವುದು ಸ್ಪಷ್ಟವಾದ, ನೇರವಾದ, ಖಚಿತವಾದ ಕ್ರಿಯಾಯೋಜನೆ. ನೀವು ಅವಶ್ಯಕತೆಗಿಂತ ಹೆಚ್ಚು ಆತಂಕಗೊಂಡಿರುವೆನೆಂದು ಹೇಳಿ ಈ ವಿಷಯವನ್ನೇ ನಿರ್ಲಕ್ಷಿಸಬಹುದು. ನನ್ನ ಉತ್ತರ ಇಷ್ಟೇ: ಅತಿ ಆತ್ಮವಿಶ್ವಾಸದ ಭರವಸೆಯಿಂದ ನಾಶವಾಗುವುದಕ್ಕಿಂತ ಅತಿ ಆತಂಕದ ಊಹೆಗಳಿಗಾಗಿ ನಿರ್ಲಕ್ಷಿಸಲ್ಪಡುವುದು ಒಳ್ಳೆಯದು.'

ಡಾ. ಬಿ. ಆರ್. ಅಂಬೇಡ್ಕರ್ (ಲಂಡನ್ನಿನ ಪ್ರಥಮ ದುಂಡು ಮೇಜಿನ ಪರಿಷತ್ತು 12-11-1930ರಿಂದ 19-01-1931)

*

ನನಗೆ ಮಾತೃಭೂಮಿಯಿದೆ ಎನ್ನುತ್ತೀರಿ. ಆದರೆ ಮತ್ತೆಮತ್ತೆ ಹೇಳುತ್ತೇನೆ, ನನಗೆ ಮಾತೃಭೂಮಿಯಿಲ್ಲ. ನಮ್ಮನ್ನು ಬೆಕ್ಕು ನಾಯಿಗಳಿಗಿಂತ ಕೀಳಾಗಿ ಕಾಣುವ, ಕುಡಿಯಲು ನೀರು ಕೊಡದ ಈ ನೆಲವನ್ನು ಹೇಗೆ ನನ್ನ ತಾಯಿನೆಲವೆಂದು ಕರೆಯಲಿ? ಈ ಧರ್ಮವನ್ನು ಹೇಗೆ ನನ್ನ ಧರ್ಮವೆಂದು ಕರೆಯಲಿ? ಆತ್ಮಗೌರವವಿರುವ ಯಾವುದೇ ಅಸ್ಪಶ್ಯನೂ ಈ ನೆಲದ ಬಗ್ಗೆ ಹೆಮ್ಮೆ ಪಡಲಾರ. ನಮಗೆ ಈ ನೆಲ ತೋರಿದ ಅನ್ಯಾಯ, ನೀಡಿದ ಕಷ್ಟ ಎಷ್ಟೆಂದರೆ ಗೊತ್ತಿದ್ದೂ ಗೊತ್ತಿಲ್ಲದೆಯೋ ನಾವು ಈ ನೆಲಕ್ಕೆ ಆವಿಧೇಯರಾದರೆ ಅದರ ಜವಾಬ್ದಾರಿ ತಾಯಿನೆಲದ್ದೇ ಆಗಿರುತ್ತದೆ. ನನ್ನನ್ನು ದ್ರೋಹಿಯೆಂದು ಕರೆದರೆ ಬೇಸರವಿಲ್ಲ. ನನ್ನ ದ್ರೋಹದ ಜವಾಬ್ದಾರಿ ದ್ರೋಹಿಯೆಂದು ಕರೆದ ನೆಲದ ಮೇಲೆಯೇ ಇದೆ.

Related Books