ಲೇಖಕಿ ತೇಜಸ್ವಿನಿ ಹೆಗ್ಗಡೆ ಅವರ ಕಾದಂಬರಿ-ಹೊರಳು ದಾರಿ. ಸಾಹಿತಿ ಡಾ. ಶ್ರೀಧರ ಬಳಗಾರ ಅವರು ಕೃತಿಗೆ ಮುನ್ನುಡಿ ಬರೆದು ‘ಹಸ್ರಕೊಪ್ಪದ ಪ್ರಕೃತಿಯ ಸಾನಿಧ್ಯದಲ್ಲಿ ಹುಟ್ಟುವ ʼ ಹೊರಳುದಾರಿʼ ಕಥಾ ಹಂದರ, ತನ್ನ ಪುಟ್ಟ ಬೊಗಸೆಯಲ್ಲಿ ಬೃಹತ್ ಮೋಡವನ್ನು ಹಿಡಿಯುವ ಹಠದ ಕಾದಂಬರಿಯಾಗಿದೆ. ಮೂರು ಮನೆತನಗಳ ಮೂರು ತಲೆಮಾರುಗಳ ಮನುಷ್ಯ ಸಂಬಂಧವನ್ನು ಅಜ್ಜಿ ಮನೆಯ ನೆಪದಲ್ಲಿ ಒಡಲೊಳಗೆ ತುಂಬಿಕೊಳ್ಳಲು ಬರುವ ಪಾತ್ರ ಇಲ್ಲಿ ಹಲವಾರು ಸಂಗತಿಗಳನ್ನು ಹೊತ್ತ ಜೀವಂತಿಕೆಯ ರೂವಾರಿಯಂತಿದೆ. ಖುಷಿಯೊಂದಿಗೆ ವಿಷಾದದ ಅಪಸ್ವರಗಳು ಬೆರೆತಿರುವ ಪ್ರತಿಮಾಳ ಬಾಲ್ಯದ ನೆನಪುಗಳು ಉದಾತ್ತ ಹಾಗೂ ದುಷ್ಟ ಸಂಗತಿಗಳ ಸಂಕೇತವಾಗಿ ಕಾಡುತ್ತವೆ. ಒಂದು ಸಣ್ಣ ಪ್ರಸಂಗ ಅಮಾಯಕಳ ದುರಂತಕ್ಕೆ ಕಾರಣವಾಗಿ ಅದೊಂದು ಘೋರ ಪಾಪ ಪ್ರಜ್ಞೆಯಾಗಿ ಇಡೀ ಮನೆತನವನ್ನೇ ಸುತ್ತಿಕೊಂಡು ನೈತಿಕ ಸಂಕಟದಲ್ಲಿ ತೊಳಲಾಡುತ್ತಿರುವ ಜೀವಿಗಳು ಕರುಣೆಗೆ ಪಾತ್ರರಾಗುವ ಕಥೆಯನ್ನು ಒಳಗೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ತೇಜಸ್ವಿನಿ ಹೆಗ್ಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿಗಳು. ತಂದೆ ಡಾ. ಜಿ.ಎನ್. ಭಟ್, ತಾಯಿ ಜಯಲಕ್ಷಿ ಭಟ್. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು. ಕೃತಿಗಳು: ಚಿಗುರು (ಕವನ ಸಂಕಲನ), ಹಂಸಯಾನ ಕಾದಂಬರಿ- 2017), ಪ್ರಶಸ್ತಿ-ಪುರಸ್ಕಾರಗಳು: ಆಳ್ಳ್ವಾಸ್ ನುಡಿಸಿರಿಯ ಗೌರವಧನ ಪುರಸ್ಕಾರಕ್ಕೆ ಆಯ್ಕೆ, 2018 ರಲ್ಲಿ ಹಂಸಯಾನ ಕಾದಂಬರಿಗೆ ʼಮಾಸ್ತಿ ಪುರಸ್ಕಾರ’, ಲಭಿಸಿದೆ. ...
READ MORE