ರೈತರ ಆತ್ಮಹತ್ಯೆ ನಾಗರಿಕತೆಗೊಂದು ಕಳಂಕ

Author : ಅಲ್ಲಮ ಪ್ರಭು ಬೆಟ್ಟದೂರು

Pages 440

₹ 400.00




Published by: ಸಹಕಾರ ಪ್ರತಿಭಾ ಪ್ರಕಾಶನ, ತಿರುಗನ್ನಡ ಸಾಹಿತಿಗಳ ಸಹಕಾರ ಸಂಘ
Address: ಕೊಪ್ಪಳ

Synopsys

ರೈತರ ಆತ್ಮಹತ್ಯೆಗೆ ಕಾರಣ ಮತ್ತು ಪರಿಹಾರ ಕುರಿತ ಅಪರೂಪದ ಬರಹಗಳು, ತಜ್ಞರ ಅಭಿಪ್ರಾಯ ಹಾಗೂ ಕೃಷಿಕರ ಹಾಡು-ಪಾಡನ್ನು ಕಟ್ಟಿಕೊಡುವ ಕವನಗಳ ಗುಚ್ಛ ಇದು. 
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮತ್ತು ರೈತಪರ ಚಿಂತಕ ಬಸವರಾಜ ಬೆಳಕವಾಡಿ ಕೃತಿಯನ್ನು ಹೊರತಂದಿದ್ದಾರೆ. ಕೃಷಿ ಬಿಕ್ಕಟ್ಟುಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದ ಕಣ್ಣುತೆರೆಸುವ ಅವರ ನೆರವಿಗೂ ಒದಗಿ ಬರುತ್ತದೆ ಕೃತಿ. 

 ರೈತ ಸಂಕಷ್ಟದಲ್ಲಿದ್ದಾನೆ.ಸಾಲ ಮಾಡಿಕೊಂಡ ಆತ ಆತ್ಮಹತ್ಯೆಯ ದಾರಿ ಹಿಡಿದ್ದಾನೆ.  ಕೊಪ್ಪಳದ ಸಮಾನ ಮನಸ್ಕ ವಿಚಾರವಾದಿಗಳು ಸೇರಿ ಅಂದರೆ  ಸಾಹಿತಿಗಳು, ಕೃಷಿ ವಿಷಯ ತಜ್ಞರು, ಮನೋ ವಿಜ್ಞಾನಿಗಳು,  ತಜ್ಞ  ವೈದ್ಯರು ಹಾಗೂ ವಿಚಾರವಾದಿಗಳಿಂದ  ರೈತರ ಬದುಕನ್ನು ಹಸನುಗೊಳಿಸಲು ಅಗತ್ಯವಿರುವ ಮಾಹಿತಿಯುಳ್ಳ ಲೇಖನಗಳನ್ನು ಬರೆಸಿದ್ದು, ರೈತರ ಆತ್ಮ ಹತ್ಯೆಗೆ ಕಾರಣ, ಪರಿಹಾರಗಳು ಇರುವ ಲೇಖನಗಳು, ಕವನಗಳು ಇಲ್ಲಿವೆ. 

About the Author

ಅಲ್ಲಮ ಪ್ರಭು ಬೆಟ್ಟದೂರು
(30 June 1951)

ಅಲ್ಲಮ ಪ್ರಭು ಬೆಟ್ಟದೂರು ಅವರು 1951 ಜೂನ್‌ 30ರಂದು ಕೊಪ್ಪಳದಲ್ಲಿ ಜನಿಸಿದರು. ಗವಿ ಸಿದ್ದೇಶ್ವರ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಬಂಡಾಯ ಸಂಘಟನೆಯಲ್ಲಿ ಆಸಕ್ತಿಯಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಚಟುವಟಿಕೆಯಿಂದಿದ್ದಾರೆ. ಕವಿತೆ ಹಾಗೂ ಪ್ರಬಂಧ ರಚನೆ ಇವರ ಆಸಕ್ತಿ ವಲಯ. ಅಲ್ಲಮಪ್ರಭು ಅವರ ಪ್ರಮುಖ ಕೃತಿಗಳೆಂದರೆ ಕಟ್ಟಬಲ್ಲೆವು ನಾವು ಕೆಡಹಬಲ್ಲರು ಅವರು, ಇದು ನನ್ನ ಭಾರತ, ಕುದುರೆ ಮೋತಿ ಮತ್ತು ನಿಲುಗಿರಿ (ಕವನ ಸಂಕಲನಗಳು) ಮುಂತಾದವು.  ...

READ MORE

Reviews

ರೈತರ ಆತ್ಮಹತ್ಯೆ ಸಮಸ್ಯೆ: ಬೆಳಕು ಚೆಲ್ಲುವ ಕೃತಿ

ರೈತರ ಆತ್ಮಹತ್ಯೆ ನಡೆದ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗುವುದು ನಂತರ ಸಾರ್ವಜನಿಕರ ಸ್ಮೃತಿಯಿಂದ ಈ ವಿಷಯ ಮರೆಯಾಗುವುದು ಮಾಮೂಲು ಎನ್ನುವಂತಾಗಿದೆ. ಸರ್ಕಾರ ಈ ಹಿಂದೆ ನೇಮಿಸಿದ್ದ ಹಲವು ಸಮಿತಿಗಳ ವರದಿ, ಶಿಫಾರಸ್ಸು ದೂಳು ಹಿಡಿಯುತ್ತ ಕೂತಿದೆ.  ಹೀಗಿರುವಾಗ ರೈತರ ಆತ್ಮಹತ್ಯೆ ಕುರಿತು ಈವರೆಗೆ ಪ್ರಕಟವಾಗಿರುವ ಲೇಖನಗಳ ಸಮಗ್ರವಾದ ಕೃತಿಯೊಂದನ್ನು ಸಂಪಾದಿಸುವ ಸಾಹಸಕ್ಕೆ ಅಲ್ಲಮಪ್ರಭು ಬೆಟ್ಟದೂರು ಹಾಗೂ ಬಸವರಾಜ ಆಕಳವಾಡಿ ಮುಂದಾಗಿದ್ದಾರೆ.

ಈ ಕೃತಿಯು ರೈತರ ಆತ್ಮಹತ್ಯೆಯು 'ನಾಗರಿಕತೆಗೊಂದು ಕಳಂಕ' ಎಂಬ ಅರ್ಥಪೂರ್ಣ ಉಪ ಶೀರ್ಷಿಕೆಯನ್ನು ಹೊಂದಿದೆ. ನಾಡಿನ ವಿವಿಧ ಲೇಖಕರು ಬರೆದಿರುವ ೬೧ ಲೇಖನಗಳು, ೬೦ ಕವಿತೆಗಳು ಈ ಕೃತಿಯಲ್ಲಿವೆ. ಹಿರಿಯ ಕವಿ ಚೆನ್ನವೀರ ಕಣವಿ ಅವರು ೩೦ರ ದಶಕದಲ್ಲಿ ತಾವು ಕಂಡ ಗ್ರಾಮೀಣ ಬದುಕಿನ ಸುಂದರ ಚಿತ್ರಣವನ್ನು ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃಷಿ, ಗ್ರಾಮ ಬದುಕು ಸಣ ಎಷ್ಟು ಸರಳವಾಗಿತ್ತು, ಬರ ಬರುತ್ತ ಅದೆಷ್ಟು ಸಂಕೀರ್ಣವಾಯಿತು ಎಂಬ ಸೂಕ್ಷ್ಮ ಹೊಳಹು ಅವರ ಲೇಖನದಲ್ಲಿದೆ. ಡಾ.ಜಿ.ರಾಮಕೃಷ್ಣ ಅವರು ರೈತರ ಸಾಲ ಮನ್ನಾಕ್ಕೆ ಹಿಂದೇಟು ಹಾಕುವ ಸರ್ಕಾರಗಳು ಉದ್ಯಮಿಗಳಿಗೆ ದೊಡ್ಡ ಮೊತ್ತದ ರಿಯಾಯಿತಿ, ಸೌಲಭ್ಯ ನೀಡಲು ಉತ್ಸುಕತೆ ತೋರುವ ವಾಸ್ತವವನ್ನು ತೆರೆದಿಟ್ಟಿದ್ದಾರೆ.

ಕೃಷಿ ಕ್ಷೇತ್ರದ ಸುಧಾರಣೆಗೆ ಸಹಕಾರಿ ಕ್ಷೇತ್ರದ ಬಲವರ್ಧನೆ, ಮಧ್ಯವರ್ತಿಗಳ ಹಾವಳಿ ಇಲ್ಲದ ಮಾರುಕಟ್ಟೆ ಸೇರಿದಂತೆ ಹಲವು ಪರಿಹಾರಗಳನ್ನು ಕೂಡ ಅವರು ಸೂಚಿಸಿದ್ದಾರೆ. ಮಾನಸಿಕ ತಜ್ಞ ಡಾ. ಸಿ. ಆರ್‍. ಚಂದ್ರಶೇಖರ್‍ 2014 ನೆ ಸಾಲಿನಲ್ಲಿ 12,410 ರೈತರು ಆತ್ಮಹತ್ಯೆಗೆ ಶರಣಾದ ಅಂಕಿ ಅಂಶಗಳೊಂದಿಗೆ ಆತ್ಮಹತ್ಯೆ ಪ್ರವೃತ್ತಿಗೆ ಕಾರಣವಾಗುವ ಮನೋವೈಜ್ಞಾನಿಕ ಸಂಗತಿಗಳನ್ನು ತಮ್ಮ ಬರಹದಲ್ಲಿ ವಿಶ್ಲೇಷಿಸಿದ್ದಾರೆ. ರೈತ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯು, ಚಾಮರಸ ಮಾಲಿಪಾಟೀಲ್, ಗ್ರಾಮಗಳನ್ನು ಅವುಗಳ ಕೃಷಿ ಸ್ಥಿತಿ ಆಧರಿಸಿ ಸಂಘಟಿತರಾಗುವ ಅನಿವಾರ್ಯತೆಯ ಕುರಿತು ಬೆಳಕು ಚೆಲ್ಲಿದ್ದಾರೆ.

ಈ ಕೃತಿಯಲ್ಲಿನ ಹೆಚ್ಚಿನ ಲೇಖಕರು ಮುಕ್ತ ಆರ್ಥಿಕ ನೀತಿ ಹೇಗೆ ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ ಎಂಬುದನ್ನು ವಿಶ್ಲೇಷಿಸಿದ್ದಾರೆ. ರೈತರ ಸಾಲ ಮನ್ನಾ ಯೋಜನೆ ಬೇಕೆ, ಒಂದು ವೇಳೆ ಬೇಕಿದ್ದರೆ ಎಲ್ಲಿವರೆಗೆ ಎಂಬ ಪ್ರಶ್ನೆಗಳನ್ನು ಎತ್ತುವ ಬರಹಗಳೂ ಕೃತಿಯಲ್ಲಿವೆ. ಕೃಷಿಯ ವೆಚ್ಚ ಹೆಚ್ಚುತ್ತಿರುವುದು, ನೀರಿನ ನಿರ್ವಹಣೆಯಲ್ಲಿ ಸೋಲುತ್ತಿರುವುದು, ಪ್ರಾಕೃತಿಕ ವಿಕೋಪ, ಅಂತರ್ಜಲ ಬತ್ತುತ್ತಿರುವುದು, ರೈತರ ಬೆಳೆಗೆ ನಿಗದಿತ ಬೆಲೆ ಇಲ್ಲದಿರುವುದು, ಮಾರುಕಟ್ಟೆ ಅವ್ಯವಸ್ಥೆ, ಖಾಸಗಿ ಲೇವಾದೇವಿಗಾರರ ಉಪಟಳ ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಇಲ್ಲಿನ ಬರಹಗಳಲ್ಲಿ ಚರ್ಚೆಯಾಗಿವೆ. ವಿಮರ್ಶಕ ಡಿ.ಎಸ್.ನಾಗಭೂಷಣ ಅವರು ಸಂದರ್ಶನವೊಂದರಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ ಅವರಿಗೆ ಕೇಳಿರುವ ಪ್ರಶ್ನೆ ಮತ್ತು ಅವರು ನೀಡಿರುವ ಉತ್ತರ ಕುತೂಹಲಕಾರಿಯಾಗಿದೆ. ’ನಾನು ಗೊಬ್ಬರ, ಕೀಟನಾಶಕ, ಟಿಲ್ಲರ್, ಟ್ರಾಕ್ಟರ್ ಎಂದು ಹೋಗಲಿಲ್ಲ. ಅಧಿಕ ಇಳುವರಿಯ ಬೆನ್ನು ಈ ಹತ್ತಲಿಲ್ಲ. ನನಗೆ ಬೇಕಾದುದ್ದನ್ನೆಲ್ಲಾ ನಾನೇ ಬೆಳೆದು ಮಿಕ್ಕಿದ್ದನ್ನು ಮಾರಿ ಬದುಕುತ್ತಿದ್ದೇನೆ' ಎಂಬ ಶಾಮಣ್ಣ ಅವರ ಮಾತುಗಳು ರೈತ ಸರಳ ಮಾರ್ಗದಲ್ಲಿ ಕೃಷಿ ಕೈಗೊಂಡರೆ ಸಾಲದ ಸುಳಿಗೆ ಬೀಳಲಾರ ಎಂಬುದರ ಚಿತ್ರಣ ಕಟ್ಟಿಕೊಡುತ್ತದೆ. ಮುಂದುವರೆದು ಶಾಮಣ್ಣ ಅವರು ಮದುವೆ, ಮುಂಜಿ, ಹಬ್ಬ, ಜಾತ್ರೆ, ಹರಕೆ, ವಾಸ್ತು ಮೊದಲಾದವುಗಳಿಗೆ ರೈತರು ಹೆಚ್ಚಿನ ಹಣ ಖರ್ಚು ಮಾಡುವುದನ್ನು 'ತರಲೆ ತಾಪತ್ರಯ’ಗಳಿಗೆ ಸಿಕ್ಕಿ ಬೀಳುವುದು ಎಂದು ಹೇಳಿರುವುದು ಕೂಡ ಅರ್ಥವತ್ತಾಗಿದೆ.

ಆತ್ಮಹತ್ಯೆಯನ್ನು ಮಾಧ್ಯಮಗಳು ಅತಿರಂಜಿತವಾಗಿ ಬಿಂಬಿಸುವ ಅಪಾಯಗಳ ಕುರಿತ ಲೇಖನವೂ ಕೃತಿಯಲ್ಲಿದೆ. ಇಂತಹ ಒಂದು ಲೇಖನದಲ್ಲಿ ಆತ್ಮಹತ್ಯೆಯ ವಿಧಾನ ವಿವರಿಸಬಾರದು ಎಂದು ಹೇಳಲಾಗಿದೆ. ಆದರೆ ಕೃತಿಯ ಮತ್ತೊಂದು ಲೇಖನದಲ್ಲಿ ಓರ್ವ ರೈತ ಇಂತಹದ್ದೆ ಕೀಟನಾಶಕ ಬಳಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವಿವರಗಳಿವೆ. ಈ ರೀತಿಯ ವೈರುಧ್ಯಗಳನ್ನು ಸಂಪಾದಕರಾದವರು ಗಮನಿಸಬೇಕಿತ್ತು. ಆದರೂ, ರೈತರ ಆತ್ಮಹತ್ಯೆ ಸಹಜ ಎನ್ನುವಂತಾಗಿರುವ ಈ ದಿನಗಳಲ್ಲಿ ಈ ವಿಷಯದ ಮೇಲೆ ಗಂಭೀರವಾಗಿ ಚಿಂತಿಸಲು ಕೃತಿ ದಾರಿ ಮಾಡಿಕೊಡುವಂತಿದೆ.

-ಎಂ. ರಾಘವೇಂದ್ರ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜೂನ್ - 2019)

Related Books